ನಮ್ಮ ಊರಿನಲ್ಲಿಯೇ ಓದಿ ಅಮೆರಿಕದ ಐವಿ ಲೀಗ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದುಕೊಂಡಿದ್ದ ಶಾಣೆ ಹುಡುಗನೊಬ್ಬ ಒಂದು ದಿನ ನಮ್ಮ ಮನೆಗೆ ಬಂದು ಧಾರವಾಡ ಫೇಡೆ ಕೊಟ್ಟ.

ಅವನು ಸ್ಟ್ಯಾನ್‌ಫರ್ಡ್ ವಿವಿಯಲ್ಲಿ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿಗೆ ಸೇರುವವನಿದ್ದ. ಅವನ ಅಣ್ಣ ಈಗಾಗಲೇ ಅಮೆರಿಕದಲ್ಲಿ ಇದ್ದು, ಕಾರ್ನೆಲ್ ವಿವಿಯಲ್ಲಿ ಓದಿ ಅಲ್ಲಿಯೇ ಸೆಟಿಲ್ ಆಗಿ, ದೊಡ್ಡ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹಿಗ್ಗಿನಿಂದ ಹೇಳಿದ. ತಮ್ಮ ಕುಟುಂಬದವರಲ್ಲಿ ಅನೇಕರು ಅಮೆರಿಕ-ಯೂರೋಪಿನಲ್ಲಿ ಇದ್ದಾರೆಂದೂ, ತಾನಾದ್ರೂ ಅಲ್ಲಿಯೇ ಓದಿ, ಅಲ್ಲಿಯೇ ಕೆಲಸ ಹುಡುಕಿ, ಅಲ್ಲೇ ಸೆಟಲ್ ಆಗುವುದಾಗಿ ಹೇಳಿದ. “ಈ ದರಿದ್ರ ದೇಶಕ್ಕ ಯಾ ನನ್ ಮಗಾ ವಾಪಸ್ ಬರತಾನ?” ಅಂತ ಸಕಲ ಮಾನವಕುಲದ ಏಕೈಕ ಪ್ರತಿನಿಧಿಯಂತೆ ಉದ್ಘಾರ ತೆಗೆದ.

ಆವಾಗ ನನ್ನ ಹೆಂಡತಿ “ಹಂಗ ಆಗಲೆಪ್ಪಾ, ಆದರ ನೀ ಲಗ್ನ ಆಗಲಿಕ್ಕೆರ ಇಲ್ಲಿಗೆ ಬರುತ್ತೀಯೋ ಇಲ್ಲೋ?” ಅಂತ ಕೇಳಿದಳು. “ಅಯ್ಯೋ ಆಂಟಿ, ಅದ ಕ್ಯಾಂಪಸ್‌ದೊಳಗ ಯಾರರ ಭಾರತೀಯ ಮೂಲದ ಹುಡುಗಿ ಸಿಕ್ಕರೆ ಸಾಕು, ಅಲ್ಲೇ ವಾಲಗ ಉದಸೋರು ನಾವು. ನಮಗೇನು ಅವರು ಸಂಸ್ಕಾರವಂತರು ಇದ್ದರು ಸಾಕು. ಕನ್ಯಾ ಚಂದ ಇರಬೇಕು ಅಂತ ಏನೂ ಇಲ್ಲ” ಅಂತ ಹೇಳಿಬಿಟ್ಟ. ನಾನು “ಇವನ ಸಂಸ್ಕಾರ ನೋಡಿದರ ಇವನಿಗೆ ಯಾರು ಹೆಣ್ಣು ಕೊಟ್ಟಾರಪ್ಪಾ” ಅಂತ ಅಂದುಕೊಂಡೆ.

ಆಗ ನಾನು “ಹಂಗ ಯಾಕ್ ಅಂತಿಯೋ ಮಾರಾಯ? ಈ ದೇಶ ನಿನಗ ಏನು ಕೆಟ್ಟ ಮಾಡೆದ?” ಅಂತಂದೆ. “ನಂಗ ಏನು ಕೆಟ್ಟದು ಮಾಡಿಲ್ಲ ಸರ್, ಆದರ ಇದು ತನ್ನ ಕಾಲಮ್ಯಾಲೆ ತಾನು ಕಲ್ಲು ಹಾಕ್ಕೋಳಲಿಕ್ಕೆ ಹೋಂಟೆತೆಲ್ಲಾ? ಅದನ್ನ ಯಾವಾ ಹೇಳಬೇಕು?” ಅಂದ. “ಹಂಗ ನೋಡಿದರ ನಮ್ಮನ್ನ ಯಾರೂ ಏನು ಕೆಟ್ಟ ಮಾಡಲಿಕ್ಕೆ ಸಾಧ್ಯ ಇಲ್ಲ ಬಿಡ್ರಿ. ನಾವೆಲ್ಲಾ ಮೆರಿಟ್ ಸ್ಟೂಡೆಂಟ್ಸ್. ಬ್ಯಾರೆಯವರ ಹಾಂಗ್ ಅಲ್ಲ” ಅಂತ ಘನಘೋರ ಆತ್ಮವಿಶ್ವಾಸದಿಂದ ಹೂಂಕರಿಸಿದ.

“ಅಲ್ಲೋ ಮಾರಾಯ ಈ ಬ್ಯಾರೆದವರು ಅಂದ್ರ ಯಾರು?” ಅಂತ ಕೇಳಿದೆ. ಅವನಂಥವರು ಕೊಡುವ ಉತ್ತರ ನನಗೆ ಚೆನ್ನಾಗಿ ಗೊತ್ತಿದ್ದರೂ ಕೂಡ ನಾನು ಕೇಳಿದೆ. “ಅದೇ ಈ ಕೋಟಾದವರು, ಅಠರಾ ಪರ್‌ಸೆಂಟ್‌ನವರು” ಅಂದ. ಅಲ್ಲಿಗೆ ಆ ಸುಂದರ ಸಂಜೆಯ ಸವಿ ಮುಗಿದು ಹೋಯಿತು. ಈ ಮಹಾಜಿರಂಗದೊಳು ಧಾರವಾಡ ಫೇಡೆ ಬಂದಾಗಲೇ ಇಂತಹ ಕಹಿ ಸುದ್ದಿಗಳೂ ಬಂದೆ ಬರುತ್ತವೆ ಎನ್ನುವ ಮುನ್ಸೂಚನೆ ನನಗೆ ಇತ್ತು. ಎಂದಿನಂತೆ ‘ಸೂಳ್ಪಡೆಯಲಪ್ಪುದು ಕಾಣಾ’ ಎನ್ನುವ ರೀತಿಯಲ್ಲಿ ನನ್ನ ತಯಾರಿಯಲ್ಲಿ ನಾನು ಇದ್ದೆ.

ಅವನ ಮುಂದಿನ ಡಯಲಾಗುಗಳು ಯಾವುವು ಅಂತ ನನಗೆ ಗೊತ್ತಿತ್ತು. “ಈ ಮೀಸಲಾತಿಯಿಂದಲೆ ಬುದ್ಧಿವಂತ ಹುಡುಗರೆಲ್ಲಾ ಭರತ ಭೂಮಿ ಬಿಟ್ಟು ಹೋಗುತ್ತಿರುವುದು”, “ಮೀಸಲಾತಿ ಇರೋದಕ್ಕ, ಜಾತಿ ವ್ಯವಸ್ಥೆ ಮುಂದುವರೆದಿರುವುದು”, “ಈ ಕೋಟಾ ಸಿಸ್ಟಂ ಬಿಟ್ಟು ನೋಡಲಿ, ಎರಡು ವರ್ಷದಲ್ಲಿ ಇಂಡಿಯಾ ಉದ್ಧಾರ ಆಗತದ”, “ಇಡೀ ಜಗತ್ತಿನ ಒಳಗ ಬ್ಯಾರೆ ಯಾವುದರ ದೇಶದಾಗ ಇಂತಹ ಸುಡಗಾಡು ಪದ್ಧತಿ ಅದ ಏನು?”, “ಅಲ್ಲಾರೀ, 90 ಪರ್‌ಸೆಂಟ್‌ನವರು 35 ಪರ್‌ಸೆಂಟ್‌ನವರ ಸಂಗತೆ ಸ್ಪರ್ಧೆ ಮಾಡೋ ಪರಿಸ್ಥಿತಿ ಈ ವಿಶ್ವದಾಗ ಯಾವುದರ ದೇಶದೊಳಗ ಅದ ಏನು ಹೇಳ್ರಿ?” ಹೀಗೆ.

ಇಷ್ಟೊಂದು ಕಾರ್ಮೋಡಗಳ ನಡುವೆ ಒಂದು ಬೆಳ್ಳಿಬಾಣ ಬಿಡೋಣ ಅಂತ ಹೇಳಿ ನಾನು “ಹೋಗಲಿ ಬಿಡಪಾ, ಈ ದೇಶದ ಸುದ್ದಿ ಅತಲಾಗ ಇರಲಿ, ನಿನ್ನ ಭಾವೀ ಕರ್ಮಭೂಮಿ ಅಮೆರಿಕದ ಬಗ್ಗೆ ಮಾತು ಅಡೋಣ” ಅಂತ ಹೇಳಿದೆ. ಆವಾಗ ಅವನ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಆಗಿ ಅವನಿಗೆ ಭಯಂಕರ ಖುಷಿ ಆಯಿತು. ಯಾವುದೋ ಪೂರ್ವಸೂರಿಗಳ ಪುಣ್ಯದಿಂದ ತಾನು ಪವಿತ್ರ ಭೂಮಿಗೆ ತೆರಳುತ್ತಿದ್ದೇನೆ ಅನ್ನುವ ಥರ ಅವನು ಮಾತಾಡಲು ಶುರು ಮಾಡಿದ. “ನೋಡ್ರಿ ಸರ್, ನಾವು ವರ್ಷದೊಳಗ ಯಾವತ್ತೋ ಒಂದು, ಯಾರದರ ಹುಟ್ಟಿದ ದಿವಸನೋ, ಅಥವಾ ಯಾರದ್ರ ಪಾರ್ಟಿ ಒಳಗೊ ಪೀಜಾ ತಿಂದರ ಭಾಳ ದೊಡ್ಡದು ಆತು. ಅಂಥಾದು ಅಲ್ಲೇ ಪ್ರತಿ ದಿವಸ ಪೀಜಾ ತಿನ್ನತಾರ. ಅವರ ಎಷ್ಟು ಪುಣ್ಯ ಮಾಡಿರಬೇಕು” ಅಂದ. ಅಲ್ಲೇ ರೋಡು ಹೆಂಗ ಅದಾವು ಅಂದ್ರ ಬಸ್ಸಿನಾಗ ಹೋಗುವಾಗ ಗ್ಲಾಸ್‌ನಾಗಿನ ನೀರು ತುಳುಕಾಡೊದಿಲ್ಲಾ. ಅಷ್ಟು ಸ್ಮೂತ್ ಅದಾವು. ಟ್ರಾಫಿಕ್ ಇಲ್ಲ, ಪೊಲ್ಯುಶನ್ ಇಲ್ಲ, ಎಲ್ಲಾಕ್ಕಿಂತ ಮುಖ್ಯ ಪಾಪ್ಯುಲೇಶನ್ ಕಮ್ಮಿ, ಸ್ವಚ್ಛ ಗಾಳಿ, ಸ್ವಚ್ಛ ನೀರು, ದೊಡ್ಡ ದೊಡ್ಡ ಮಾಲು, ದೊಡ್ಡ ದೊಡ್ಡ ಮಲ್ಟಿಪ್ಲೆಕ್ಸ್, ಫುಲ್ ಮಜಾ ಅಂತಂದ. ಅಲ್ಲೋ, ನೀ ಇನ್ನೂ ಅಮೆರಿಕಕ್ಕ ಹೋಗಿಲ್ಲ, ಹೌದಇಲ್ಲೋ, ಅಂತ ಅಂದೆ. ಹೌದು ಸರ್. ಮುಂದಿನ ವಾರ ಇಲ್ಲಿಂದ ಬಿಡತೆನಿ ಅಂದ. ಮತ್ತ ಇದೆಲ್ಲಾ ನಿನಗ ಹೆಂಗ ಗೊತ್ತಾತು? ಅಂತ ಕೇಳಿದರ. ಅಯ್ಯೊ ಸರ್, ಇಷ್ಟು ತಿಳಕೊಳಲಿಕ್ಕೆ ಅಲ್ಲಿಗೆ ಯಾಕ್ ಹೋಗಬೇಕು? ಗೂಗಲ್ ಅದ ಅಲ್ಲಾ, ಅಷ್ಟಾಗಿಯೂ ನನ್ನ ಕಸಿನ್‌ಗಳು ಎಲ್ಲಾ ಹೇಳತಾರ, ಏನು ದೇಶಾ, ಏನು ಜನಾ, ಏನು ಮಾತು, ಗಂಧರ್ವರ ನಾಡು, ನೋಡ್ರಿ ಅಂತ ತನ್ನ ಸಂಕೀರ್ತನೆ ಮುಂದುವರೆಸಿದ.

ತನ್ನ ಜೀವನ ಪೂರ್ತಿ ಮೀಸಲಾತಿ ವಿರುದ್ಧ ಬುಸುಗುಟ್ಟಿದ ಅವನು ಒಂದು ಬಾರಿಯಾದರೂ ಡೊನೇಶನ್ ವಿರುದ್ಧ ಮಾತಾಡಿದ್ದು ನನಗೆ ನೆನಪು ಇಲ್ಲ. ಅವನನ್ನು ಸಣ್ಣವನಿದ್ದಾಗಿನಿಂದ ನೋಡಿದ ನನಗೆ ಇದು ಗೊತ್ತಿತ್ತು. ಅದನ್ನು ಕೇಳಿದರೆ “ಅದಕ್ಕೂ ಇದಕ್ಕೂ ಏನು ಸಂಬಂಧ ಸರ್, ಏನೆನರ ಮಾತಡತಿರಲ್ಲ” ಅಂತ ಅಂದುಬಿಡ್ತಾನೆ ಅಂತ ನನಗೆ ಗೊತ್ತು.

ಕೊನೆಗೆ “ಅಲ್ಲಪ್ಪಾ, ನಿನ್ನ ಕಸಿನ್‌ಗ ಆತು, ನಿಮ್ಮ ಅಣ್ಣಗ ಆತು, ನಿನಗ ಆತು, ಅಲ್ಲಿ ಅಡ್ಮಿಷನ್ ಹೆಂಗ ಸಿಕ್ಕಿತು?” ಅಂತ ನಾನು ಕೇಳಿದೆ. ಈ ಪ್ರಶ್ನೆ ಯಾವಾಗ ಬರುತ್ತೋ ಅಂತ ಹನುಮಂತನನ್ನು ಕಾದುಕೊಂಡು ಕೂತ ಸಂಜೀವಿನಿ ಕಡ್ಡಿಯಂತೆ ಇವನು ಕಾದಿದ್ದ. “ಹಾಂ ನೋಡ್ರಿ, ಕರೆಕ್ಟ ಪ್ರಶ್ನೆ ಕೇಳಿದಿರಿ. ಎಲ್ಲರೂ ಬರೆಬರೆ ‘ಅಮೆರಿಕಾಕ್ಕ ಹೋಗಲಿಕ್ಕೆ ನೀವು ಎಷ್ಟು ಖರ್ಚು ಮಾಡಿದಿರಿ?’, ಅಂತ ಕೇಳತಾರ ಹೊರತು, ‘ನಿಮಗ ಅಲ್ಲೀ ಸೀಟು ಹೆಂಗ ಸಿಕ್ಕಿತು?’ ಅಂತ ಕೇಳೋದಿಲ್ಲ. ಈ ದೇಶದಾಗ ಯಾರಿಗೆ ಯಾವ ಪ್ರಶ್ನೆ ಕೇಳಬೇಕು ಅನ್ನೋ ತರತಮ ಭಾವನನ ಇಲ್ಲ ಯಾರಿಗೂ. ಫೂಲಿಷ್ ಫೆಲೋಸ್” ಅಂತ ಫರಮಾನು ಹೊರಡಿಸಿದ.

ಗಟ್ಟಿ ದನಿಯಲ್ಲಿ ಮಾತಾಡಲು ಶುರು ಮಾಡಿದ. “ಅಲ್ಲಿ ನೋಡ್ರಿ, ಪ್ರತಿಯೊಂದು ವಿವಿಗೂ, ತನ್ನದೇ ಆದ ನಿಯಮ ಇರ್ತದ. ನಮ್ಮ ಹಾಂಗ್ ಅಲ್ಲ. ಅವರ ನಿಯಮದ ಪ್ರಕಾರ ನಾವು ಅರ್ಜಿ ಹಾಕಬೇಕು. ಕೆಲವರು ಟೆಸ್ಟ್ ತೊಗೊಂಡು ನಿರ್ಧಾರ ಮಾಡತಾರ, ಕೆಲವರು ಇಂಟರ್ವ್ಯೂ ಮಾಡತಾರ, ಇನ್ನು ಕೆಲವರು ಒಂದು ಪರ್ಸನಲ್ ಎಸ್ಸೆ ಬರದುಕೊಡರಿ ಅಂತ ಕೇಳತಾರ. ಇದರ ಮ್ಯಾಲೆ ನಮ್ಮನ್ನ ಆಯ್ಕೆ ಮಾಡತಾರ. ಅಲ್ಲೇ ಮೀಸಲಾತಿ, ಕೋಟಾ, ಇಂತದೆಲ್ಲಾ ಸುಂಟಿ ಕೊಂಬು ಇಲ್ಲ. ಹಿಂಗಾಗಿ ನಮ್ಮಂಥ ಮೆರಿಟ್‌ನವರಿಗೆ ಸುಲಭವಾಗಿ ಸೀಟು ಸಿಗತಾವು” ಅಂತಂದ.

“ಅಲ್ಲೇ ವಿವಿ ಕ್ಯಾಂಪಸ್ಸು ಅಂದ್ರ ಹೆಂಗ ಅಂತೀರಿ, ಎಲ್ಲಾ ನೋಬಲ್ ಪ್ರಶಸ್ತಿ ವಿಜೇತ ಪ್ರೊಫೆಸರ್‌ಗಳು, ಇಡೀ ಜಗತ್ತಿನ ಮೂಲೆಮೂಲೆಯಿಂದ ಬಂದ ವಿದ್ಯಾರ್ಥಿಗಳು, ಒಬ್ಬರಿಗಿಂತ ಒಬ್ಬರು ಶಾಣೆ, ರುಚಿರುಚಿ ಊಟ ಬಡಸುವ ಕ್ಯಾಂಟೀನ್‌ಗಳು, ಎಂಥಾ ಜಾಗ” ಅಂತ ಅನ್ನುವ ಓಘದಲ್ಲಿ “ಅಲ್ಲಿನ ಟಾಯ್ಲೆಟ್ ಸಹಿತ ಎಷ್ಟು ಸ್ವಚ್ಛ ಅಂದರ ತುಪ್ಪ ಚೆಲ್ಲಿ ತುಪ್ಪ ಬಳಕೊಳ್ಳಬಹುದು. ನಮ್ಮಂಗ ಅಲ್ಲ” ಅಂತ ಅಂದುಬಿಟ್ಟ.

“ಅಯ್ಯಯ್ಯೋ, ಯಪ್ಪಾ! ಹಂಗ ಎನಾರ ಮಾಡಾಕ ಹೋಗಿ ಮತ್ತ,” ಅಂತ ನಕ್ಕೆ. ನನಗಿಂತ ಜೋರಾಗಿ ಅವನೂ ನಕ್ಕ.

“ಎಲ್ಲಾ ಸರಿಪಾ, ಆ ದೇಶ ಬರೆ ಒಳ್ಳೇ ರಸ್ತೆ-ಸೇತುವೆಯಿಂದಾಗಿ ಛಲೋ ಅದನೋ, ಅಥವಾ ಅಲ್ಲಿ ಜನಕಲ್ಯಾಣ, ಸಾಮಾಜಿಕ ಸಮಾನತೆ, ಶಾಂತಿ, ಕಾನೂನು ಸುವ್ಯವಸ್ಥೆ, ಇಂಥಾವು ಅದಾವೋ,” ಅಂದೆ. “ಏ ಅವು ಎಲ್ಲಾನೂ ಅವ ಸರ್, ಒಳ್ಳೇ ಸರಕಾರ ಅಂದ ಮ್ಯಾಲೆ ಅವು ಎಲ್ಲಾ ಇರೋದ” ಅಂತಂದ.

“ಅಲ್ಲಿನ ವಿವಿಗಳು ತಮ್ಮ ಪ್ರವೇಶ ನೀತಿಯೊಳಗ ‘ವೈವಿಧ್ಯತೆ ಸೂತ್ರ ಅಳವಡಿಸಿಕೊಂಡಾವು ಅಂತಾರಲ್ಲ” ಅದು ಏನು ಅಂದೆ. “ಏನೋ ಸರ್, ಅದು ಗೊತ್ತಿಲ್ಲ. ನಮ್ಮ ಪ್ರವೇಶ ನೀತಿ ಪುಸ್ತಕದಾಗ ಅಂತು ಅಂಥಾದು ಏನೂ ಕಾಣಲೆ ಇಲ್ಲ” ಅಂದ. ನೋಡಪ, ಈ ವರ್ಷ ಪ್ರವೇಶ ತೊಗೊಂಡ ನೀನು, ಐದು ವರ್ಷದ ಹಿಂದ ಪ್ರವೇಶ ಪಡೆದ ನಿಮ್ಮ ಅಣ್ಣ, 15 ವರ್ಷ ಹಿಂದ ಇಲ್ಲಿ ಇಲಿನೋಯಿಸ ವಿವಿಗೆ ಹೋದ ನಿಮ್ಮ ಕಸಿನ್, 30 ವರ್ಷ ಹಿಂದ ಹಾರ್ವರ್ಡ್‌ಗೆ ಹೋದ ನಿಮ್ಮ ಕಾಕಾ, ಎಲ್ಲರಿಗೂ ಪ್ರವೇಶ ಸಿಕ್ಕಿದ್ದು ಈ ನೀತಿಯಿಂದಾಗಿ. ಅಶ್ವೇತ ವರ್ಣದ ವಿದ್ಯಾರ್ಥಿಗಳಿಗೆ, ಏಷಿಯಾ, ಆಫ್ರಿಕಾ ಖಂಡದವರಿಗೆ ಉನ್ನತ ಶಿಕ್ಷಣ ಸಿಗಲಿ ಅಂತ ಹೇಳಿ, ತಮ್ಮ ಕಾಲೇಜು, ವಿವಿಗಳು ಬಹುವರ್ಣದ ಕಾಮನಬಿಲ್ಲುಗಳ ಹಂಗ ಕಾಣಬೇಕು ಅಂತ ಅವರಿಗೆ ನಿರೀಕ್ಷೆ.

ಅದಕ್ಕೆ ನಿಮ್ಮಂಥವರನ್ನ ಕರದುಕರದು ಕೊಡತಾರ” ಅಂತಂದೆ. “ಹೌದ ಬಿಡ್ರಿ ಸರ್, ನಾವು ಟ್ಯಾಲೆನ್ಟೆಡ್ ಇರತೇವಿ, ನಮಗ ಸಿಗತದ. ಯಾರೋ ದಾರಿ ಹೋಕರಿಗೆ ಸಿಗತದ ಏನು?” ಅಂದ. “ಹೌದಪ್ಪ, ನಮ್ಮ ದೇಶದಾಗ ಮೀಸಲು ಸೌಲಭ್ಯ ಅಂದರನೂ ಹಂಗ. ಪ್ರತಿ ಜಾತಿಯಲ್ಲಿನ ಪ್ರತಿಭಾವಂತರಿಗೆ ಅವಕಾಶ ಸಿಗೋ ಹಂಗ ಈ ನೀತಿ ಜಾರಿ ಆಗತದ. ಕೆಟಗಿರಿ ಅಂದರ ಏನು ಅಂದರ ಪ್ರತಿ ಜಾತಿಗೆ ಪ್ರತ್ಯೇಕ ವಿಭಾಗ. ಅಲ್ಲಿನ ಕೆಲವು ರಾಜ್ಯಗಳ ಒಳಗ ಹಿಂದುಳಿದಿರುವಿಕೆಯ ಸೂಚ್ಯಂಕ ಅಂತ ಅದ. ಅದರ ಮ್ಯಾಲೆ ಅಲ್ಲಿ ಮೀಸಲು ಸೌಲಭ್ಯ ಸಿಗತದ. ಅಂದ್ರ, ಅಲ್ಲಿ ನೀನು ಕರಿಯ ಅಗಿದ್ದರ ಒಂದು ಪಾಯಿಂಟು, ಕರಿಯ ಮಾಜಿಸೈನಿಕ ಅಗಿದ್ದರ ಇನ್ನೊಂದು, ಹಂಗನ ಕರಿಯ ಮಹಿಳೆ ಅಗಿದ್ದರ ಇನ್ನೊಂದು. ಕರಿಯ ವಿಧವೆ ಅಗಿದ್ದರ ಮತ್ತೊಂದು, ಯುದ್ಧದಲ್ಲಿ ಅಮರನಾದ ಕರಿಯ ಸೈನಿಕನ ಕರಿಯ ವಿಧವೆ ಆಗಿದ್ದರ ಇನ್ನೊಂದು ಇಷ್ಟು ಪಾಯಿಂಟು, ಇತ್ಯಾದಿ. ಯಾರಿಗೆ ಹೆಚ್ಚು ಪಾಯಿಂಟ್ ಇರತದೋ, ಅವರಿಗೆ ಪ್ರಾಧಾನ್ಯ” ಅಂತಂದೆ.

“ಆಷ್ಟ ಅಲ್ಲ, ಈ ವ್ಯವಸ್ಥೆ ಶುರು ಆಗಿ 150 ವರ್ಷ ಆಗಲಿಕ್ಕೆ ಬಂತು. ಅಂದರ ನಮಗಿಂತ ಡಬಲ್” ಅಂತಂದೆ.

ನಾನು ಇಷ್ಟೆಲ್ಲಾ ಹೇಳಿದ ಮೇಲೆ ಅವನಿಗೆ ಇದೆಲ್ಲಾ ಇದ್ದರೂ ಇರಬಹುದು ಅಂತ ಸಂದೇಹ ಬಂತು. “ಹಂಗಾರ ಅದೂ ಒಂದು ಥರಾ ಮೀಸಲಾತಿ ಇದ್ದಂಗ ಅನ್ನರಿ” ಅಂತ ನಿಟ್ಟುಸಿರುಬಿಟ್ಟ. ಅಲ್ಲದೆ, ತಾನು ಅದು ಯಾವ ಕೊಂಪೆಗೆ ಹೊರಟು ನಿಂತಿದ್ದೇನೆ ಅಂತ ಸಿಟ್ಟು ಬಂತು. ಆ ಕಾಕಾ ಇದನ್ನೆಲ್ಲಾ ತನ್ನ ಹತ್ತಿರ ಹೇಳಿಲ್ಲವಲ್ಲ ಅಂತ ಬೇಜಾರು ಆತು.

ತಾನು ಎಂದರೆ ದ್ರವರೂಪಿ ಚೊಕ್ಕ ಬಂಗಾರದ ರೀತಿಯ ಹುಡುಗ, ತನ್ನ ಜೀವನದ ದಾರಿಗಳೆಲ್ಲಾ ಕೇವಲ ಪ್ರತಿಭೆಯಿಂದ ರೂಪಿಸಿಕೊಂಡಿದ್ದವು. ತಾನು ಶ್ರೇಷ್ಠ, ಇತರರು ಕನಿಷ್ಟ ಅಂತ ತಿಳಿದುಕೊಂಡಿದ್ದ ಅವನ ಭಾವನ ಬಲೂನು ಫಡ್ ಅಂತ ಒಡೆದುಹೋಯಿತು. ತಾನು ಕೂಡ ಒಂದು ಕೆಟಗಿರಿ ಮನುಷ್ಯ ಅಂತ ಗುರುತಿಸಲ್ಪಡುತ್ತೇನೆ ಅಂತ ಅನ್ನೋದನ್ನ ಕಲ್ಪಿಸಿಕೊಂಡು ಭಾರಿ ಬೇಸರ ಆಯಿತು.

“ಅಲ್ಲೋ ಇದೆಲ್ಲಾ ಹೊಸಾ ವಿಷಯ ಅನ್ನೋಹಂಗ ಮಾಡ್ತೀಯಲ್ಲಾ? ನಿನಗ ಇವೆಲ್ಲಾ ಗೂಗಲ್‌ದೊಳಗ ಸಿಗಲಿಲ್ಲ ಏನು? ನಿಮ್ಮ ಕಸಿನ್‌ಗಳು ಹೇಳಿಕೊಡಲಿಲ್ಲವೇನು?” ಅಂತ ಕೇಳಿದೆ. ಒಂದು ಸಣ್ಣ ಪ್ರಶ್ನೆ ಕೇಳಿದರೆ ಗಂಟೆಗಟ್ಟಲೆ ಮಾತಾಡುತ್ತಿದ್ದ ಆ ಹುಡುಗನ ಹತ್ತಿರ ಈ ಪ್ರಶ್ನೆಗೆ ಉತ್ತರ ಇರಲಿಲ್ಲ. ಸಟಕ್ಕನೆ ಎದ್ದುಹೋದ. ಪುಣ್ಯಕ್ಕೆ ಧಾರವಾಡ ಫೇಡೆ ಡಬ್ಬಿ ಬಿಟ್ಟುಹೋದ.

ಅದಕ್ಕೆ ಇರಬೇಕು, ನಾನು ಈ ಎನ್‌ಆರ್‌ಐಗಳು ಹಾಗೂ ಭಾವೀ ಎನ್‌ಆರ್‌ಐಗಳನ್ನ ನಾನ್-ರಿಸಪಾನಸಿಬಲ್-ಇಂಡಿಯನ್‌ಗಳು ಅಂತ ಕರೆಯೋದು.

ಕಾನೂನು ಶಬ್ದಕೋಶದಲ್ಲಿ ‘ನಾನ್-ರಿಸಪಾನಸಿಬಲ್’ ಅನ್ನುವ ಪದಕ್ಕೆ ಅರ್ಥಗಳು ಇವು:
* ಯಾವ ವ್ಯಕ್ತಿಗೆ ಯಾವುದೇ ಒಪ್ಪಂದವನ್ನು ಸೂಕ್ತವಾಗಿ ನಿಭಾಯಿಸಲು ಸಾಮರ್ಥ್ಯ ಇಲ್ಲವೋ,
* ಯಾರ ವ್ಯಕ್ತಿತ್ವದಲ್ಲಿ ಸಮಗ್ರತೆ, ವಿಶ್ವಾಸಾರ್ಹತೆ ಇಲ್ಲವೋ,
* ಯಾರ ಕಾರ್ಯಕ್ಷಮತೆಯಲ್ಲಿ ಜನರಿಗೆ ವಿಶ್ವಾಸ ಇಲ್ಲವೋ, ಅಂತಹವರು.

ನಾನ್-ರಿಸಪಾನಸಿಬಲ್ ಅನ್ನುವ ಪದವನ್ನು ಕಾನೂನು ಕನ್ನಡದ ಸಲುವಾಗಿ ‘ಬೇಜವಾಬುದಾರಿ’ ಅಂತ ತರ್ಜುಮೆ ಮಾಡಿಕೊಳ್ಳಬಹುದಲ್ಲವೇ?

ಹೀಗಾಗಿ ಎನ್‌ಆರ್‌ಐ ಅಂದರೆ ‘ಬಾಹ್ಯ ಕಾಳಜಿ ಮಾತ್ರ ತೋರುವ ಬೇಜವಾಬುದಾರಿ ಭಾರತೀಯರು’ ಅಂತ ಭಾವಾನುವಾದ ಮಾಡಬಹುದು. ಆದರೆ ಇದನ್ನು ಬಾಹ್ಯ ಪ್ರಪಂಚದಲ್ಲಿ ಜೋರಾಗಿ ಹೇಳಿದರೆ ಅವರಿಗೆ ತಿಳಿಯೋದಿಲ್ಲ ಅಂತ ಹೇಳಿ ಅವರನ್ನು ಎನ್‌ಆರ್‌ಐಗಳು ಅಂತ ಕರೆಯೋದು ಅಂತ ನನಗೆ ನಾನೇ ಅಂದುಕೊಂಡೆ.

ನನ್ನವಳು ಮಾತ್ರ ಜೋರಾಗಿ ಜಬರಿಸಿದಳು. “ಯಾರಾದರೂ ಮನೆಗೆ ಬಂದಾಗ ನೀವು ಸುಮ್ಮನೆ ಕೂಡೋದಿಲ್ಲ. ಏನೆನರ ಮಾತಾಡಿ ಅವರನ್ನ ಓಡಿಸಿಬಿಡ್ತೀರಿ. ಮುಂದಿನ ಸರತಿ ಯಾರರ ಬಂದಾಗ ನೀವು ಹೊರಗ ವಾಕಿಂಗ್ ಹೋಗಿಬಿಡ್ರಿ. ಮನಿ ಶಾಂತ ಇರ್ತದ ಅಂತ ಎಚ್ಚರಿಸಿದಳು. ಇವಳ ಮಾತು ಮೊದಲೇ ಕೇಳಿದ್ದರೆ ನಾನು ಆರಾಮವಾಗಿ, ನಿರುಮ್ಮಳವಾಗಿ ಇರುತ್ತಿದ್ದೆ ಎಂದು ಮತ್ತೊಮ್ಮೆ ಅಂದುಕೊಂಡೆ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ಮೀಸಲು ಸೌಲಭ್ಯ – ಭಾಗ ಎರಡು; ಮೀಸಲಾತಿ ಬಗ್ಗೆ ಮಾತು-ಕತೆ

ಇದನ್ನೂ ಓದಿ: ಒಬಿಸಿ ಕಾಯ್ದೆ ತಿದ್ದುಪಡಿ 2021 ಹಿನ್ನೆಲೆ; ಮೀಸಲು ಸೌಲಭ್ಯ – ಭಾಗ ಒಂದು

LEAVE A REPLY

Please enter your comment!
Please enter your name here