ಉದ್ಯೋಗ ಸೃಷ್ಟಿ ಅನ್ನೋದು ಉಂಟಾಗುವುದು ನಗರ ಪ್ರದೇಶಗಳಲ್ಲಿ ಕಾರ್ಖಾನೆಗಳ ಕೆಲಸ ಹೆಚ್ಚುವುದು ಹಾಗೂ ಸೇವಾ ಕ್ಷೇತ್ರ ಬೆಳೆಯುವುದರಿಂದ ಆಗುವುದಾದರೆ, ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿಯಂತಹ ಯೋಜನೆಗಳಿಂದ. ಆ ಎರಡೂ ಕ್ಷೇತ್ರಗಳಲ್ಲಿ ಕೆಲಸ ಆಗೊಲ್ಲದು. ನಗರಗಳ ಕಾರಖಾನೆಗಳು ಮುಚ್ಚಲಿಕ್ಕೆ ಹತ್ಯಾವು. ಉಳಿದಿದ್ದವು ಲೇ ಆಫು, ವಿ.ಆರ್.ಎಸ್ಸು, ಡಿಸ್ಸ ಮಿಸ್ಸಲ್ಲು ಅಂತ ಶುರು ಹಚ್ಚಿಕೊಂಡಾವು. ಮನಮೋಹನಾನಂತರ ಸರಕಾರದೊಳಗ ಉದ್ಯೋಗ ಖಾತ್ರಿ ಯೋಜನೆ ನಿಂತು ಹೋಗೇದ.
ಜವಾಹರ ಲಾಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಪ್ರೊ. ಜಯಂತಿ ಘೋಷ್ ಅವರು ಒಂದು ಮಾತು ಹೇಳ್ಯಾರ.
“ನಮ್ಮ ಅರ್ಥ ವ್ಯವಸ್ಥೆಯನ್ನು ಸುಧಾರಿಸಲಿಕ್ಕೆ ಏನು ಮಾಡಬೇಕೋ, ಅದರ ಯಥಾವತ್ತು ಉಲ್ಟಾ ಕೆಲಸಗಳನ್ನ ಸರಕಾರ ಮಾಡುತ್ತಿದೆ,” ಅಂತ.
ಹಂಗಾರ ಏನು ಮಾಡಬಹುದಿತ್ತು, ಇವರು ಏನು ಮಾಡಲಿಕ್ಕೆ ಹತ್ಯಾರ?
ಮೊದಲನೆಯದಾಗಿ ಈಗ ನಾವು ಎದುರಿಸುತ್ತಿರುವ ಸಮಸ್ಯೆಯ ಹೆಸರು `ಸ್ಟಾಗಫ್ಲೇಷನ್’ ಅಂದರ ‘ಜಡ ಹಣದುಬ್ಬರ’. ಬೇಡಿಕೆ ಕಡಿಮೆಯಾಗಿ, ನಿರುದ್ಯೋಗ ಜಾಸ್ತಿಯಾಗಿ, ಉಬ್ಬರ ಹೆಚ್ಚಾದಾಗ ಉಂಟಾಗುವುದು ಜಡ ಹಣದುಬ್ಬರ. ಇದಕ್ಕೂ ಹಣದುಬ್ಬರಕ್ಕೂ ಏನು ವ್ಯತ್ಯಾಸಪಾ ಅಂದರ ಇದು ಹಣ ದುಬ್ಬರಕ್ಕಿಂತಲೂ ಹೆಚ್ಚು ಅಪಾಯಕಾರಿ.
ಡಯಾಗ್ನೋಸಿಸ್ ಆತು ಅಂದಮ್ಯಾಲೆ ಗುಳಿಗೆ – ಇಂಜಕ್ಷನ್ ಕೊಡಬೇಕಲ್ಲಾ, ಅದನ್ನು ಬಿಟ್ಟು ರೋಗ ಹೆಚ್ಚು ಮಾಡೋ ಮೈಗೆ ಬ್ಯಾಕ್ಟೀರಿಯಾ -ವೈರಸ್ಸು ಗಳನ್ನು ಚುಚ್ಚಿದರೆ ಹೆಂಗೆ? ಆಗ ನಾವು `ಆವ ರೋಗವು ಎನಗೆ ದೇವ ಧನ್ವಂತ್ರಿ’ ಅಂತ ಭೈರವಿ ರಾಗದಾಗ ಹಾಡಿ ಹೋಗಬೇಕು ಅಷ್ಟ.
ಈ ಜಡ ಹಣದುಬ್ಬರಕ್ಕೆ ಏನು ಮಾಡಬೇಕು? ಮೊದಲನೆಯದಾಗಿ ಬೇಡಿಕೆ ಹೆಚ್ಚು ಮಾಡಬೇಕು. ಇದಕ್ಕೊಂದು ಪೂರ್ವಾಪರ ಸಂದರ್ಭ ಕೊಡತೇನಿ. ಹೋದವರ್ಷ ಭಾರತದ ಮಧ್ಯಮ ವರ್ಗದ ಕಣ್ ಕೂಸಾಗಬೇಕಾಗಿದ್ದ ಟಾಟಾ ನ್ಯಾನೋ ಕಾರು ಎಷ್ಟು ಖರ್ಚಾಗಿದ್ದು ಗೊತ್ತ? ಕೇವಲ ಒಂದು. ಒಂದು ನೂರಲ್ಲಾ, ಸಾವಿರಲ್ಲ. ಬರೇ ಒಂದು. ಇದು ಕುಸಿದ ಬೇಡಿಕೆಯ ಉದಾಹರಣೆ.
ಇನ್ನು ನಿರುದ್ಯೋಗದ ಸಮಸ್ಯೆ ಎಷ್ಟು ಭೀಕರವಾದದ್ದು ಅಂದರ ಈಗಿನ ಪರಿಸ್ಥಿತಿ ಕಳೆದ 43 ವರ್ಷಗಳಲ್ಲಿ ಇರಲಿಲ್ಲ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಮುಖ್ಯಸ್ಥರು ಇದೇ ಮಾತನ್ನು ಆಳುವವರು ಅವರಿಗೆ ಕಾಡಿ ಕಾಡಿ ರಾಜಿನಾಮೆ ಕೊಡಿಸಿದರು. ಚುನಾವಣೆ ಆದ ಮೇಲೆ ಅದೇ ವರದಿಯನ್ನ ಇದೇ ಸರಕಾರ ಯಾವುದೇ ಭಿಡೆ ಇಲ್ಲದೇ ಬಿಡುಗಡೆ ಮಾಡಿತು. ಇವತ್ತಿನ ಲೆಕ್ಕಕ್ಕೆ ಸುಮಾರು ಎಂಟು ಕೋಟಿ ಭಾರತೀಯರಿಗೆ ಯಾವುದೇ ಕೆಲಸ ಇಲ್ಲ. ಸೂಕ್ತ ಉದ್ಯೋಗ ಸೂಚಿ ನೋಡಿದರೆ ಇದು ಸುಮಾರು 40 ಕೋಟಿ.
ಇದನ್ನ ನಮ್ಮ ಸರಕಾರ ಲೆಕ್ಕಕ್ಕೇ ತೊಗೊಳ್ಳವಲ್ಲದು. ಅವರಿಗೆ ಇದು ಕಾಣುತ್ತಿಲ್ಲ. ಅರ್ಜುನಾ ನಿನಗೇನು ಕಾಣುತ್ತಿದೆ ಎಂದರೆ ಬರೀ ಅಚ್ಚೆ ದಿನಗಳು ಹಾಗೂ ಅವು ಬಂದಿಲ್ಲ ಅಂತ ಹೇಳುವ ಸುಳ್ಳುಗಾರರು ಅಂತ ನಮ್ಮ ನಾಯಕರು ಹೇಳುತ್ತಿದ್ದಾರೆ. ಅವರಿಗೆ ಏನು ಕಮ್ಮಿ ಆಗಿದೆ? ಏನೂ ಇಲ್ಲ. ಕೇವಲ ಒಂದು `ಲಾ’ ಕಮ್ಮಿ ಆಗಿದೆ ಅಂತ ಅನಸ್ತದ.
ಕೇಂದ್ರ ರೇಲ್ವೆ ಸಚಿವರೊಬ್ಬರು ಹುಡುಗ- ಹುಡುಗಿಯರು ಮದುವೆ ಆಗುತ್ತಿದ್ದಾರೆ. ಎಲ್ಲ ಸರಿಯಾಗಿದೆ. ಎಲ್ಲಿದೆ ಕುಸಿತ? ಅಂತ ನಚಿಕೇತ ಸಂಹಿತೆಯ ಪ್ರಶ್ನೆ ಕೇಳಿದ್ದರು. ಈ ದೇಶದಾಗ ಯಾರು ಯಾವಾಗ ಮದುವೆ ಮಾಡಿಕೊಳ್ಳುತ್ತಾರೆ ಅಂತ ಕೇಳಬಾರದು. ಅದಕ್ಕೂ ಅರ್ಥ ವ್ಯವಸ್ಥೆಗೂ ಸಂಬಂಧ ಇಲ್ಲ ಅಂತ ಆವಾಗ ತಿಳೀತದ.
ಬೇಡಿಕೆ ಹೆಚ್ಚಾಗಲಿಕ್ಕೆ ಏನು ಮಾಡಬೇಕು? ಉದ್ಯೋಗ ಸೃಷ್ಟಿ ಆಗಬೇಕು, ಮಾಡಿದ ಉದ್ಯೋಗಕ್ಕೆ ಸರಿಯಾದ ಸಂಬಳ ಸಿಗಬೇಕು. ಅಲ್ಲವೇ? ಸಿಂಪಲ್.
ಅತ್ಯಂತ ಗಹನವಾದ ಸಿದ್ಧಾಂತ ಯಶಸ್ಸು ಆಗುವುದು ಯಾವಾಗ ಅಂದರೆ ಅದನ್ನು ಸರಳವಾದ ಭಾಷೆಯಲ್ಲಿ ಹೇಳಿ ಅದನ್ನು ಸಾಮಾನ್ಯ ಜ್ಞಾನದ ಲೆವಲ್ಲಿಗೆ ಏರಿಸಿದಾಗ ಅಂತ ಈ ಶತಮಾನದ ಅತ್ಯದ್ಭುತ ವಿಜ್ಞಾನಿ ರಿಚರ್ಡ್ ಫೆಯನ್ ಮನ್ ಹೇಳಿದ. ಅಂತೆಯೇ ಅಮೆರಿಕೆ- ಇಂಗ್ಲಂಡಿನಲ್ಲಿ ಎಂ.ಎ, ಪಿಎಚ್‍ಡಿಗಳಿಗೆ ಇಂತಹ ಸಿಂಪಲ್ ವಿಷಯಗಳು ಹೊಳೆಯುವುದಿಲ್ಲವೇ?
ಬೇಡಿಕೆ ಹೆಚ್ಚುವುದು- ಖರ್ಚು ಹೆಚ್ಚುವುದು, ಅಭಿವೃದ್ಧಿ ಆಗುವುದು ಎಲ್ಲವೂ ಕೋಳಿ ಮತ್ತು ಮೊಟ್ಟೆಯ ಸಮಸ್ಯೆ ಅಂತ ಹೇಳೋರು ಇದ್ದಾರ. ಆದರ ಪರಿಹಾರ ಅನ್ನೋದು ಮೊಟ್ಟೆಯಿಂದ ಅಥವಾ ಕೋಳಿಯಿಂದ ಶುರು ಆಗಬೇಕು. ಎರಡೂ ಬಿಟ್ಟು ಇರೋ ಮೊಟ್ಟೆಗಳನ್ನ ಆಮಲೇಟು ಮಾಡಿ ತಿಂದು ಆಮ್ಯಾಲೆ ಕೈ ತಿರುವಿದಿರ ಹೆಂಗ?
ಉದ್ಯೋಗ ಸೃಷ್ಟಿ ಅನ್ನೋದು ಉಂಟಾಗುವುದು ನಗರ ಪ್ರದೇಶಗಳಲ್ಲಿ ಕಾರ್ಖಾನೆ ಗಳ ಕೆಲಸ ಹೆಚ್ಚುವುದು ಹಾಗೂ ಸೇವಾ ಕ್ಷೇತ್ರ ಬೆಳೆಯುವುದರಿಂದ ಆಗುವುದಾದರೆ, ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿಯಂತಹ ಯೋಜನೆಗಳಿಂದ. ಆ ಎರಡೂ ಕ್ಷೇತ್ರಗಳಲ್ಲಿ ಕೆಲಸ ಆಗೊಲ್ಲದು. ನಗರಗಳ ಕಾರಖಾನೆಗಳು ಮುಚ್ಚಲಿಕ್ಕೆ ಹತ್ಯಾವು. ಉಳಿದಿದ್ದವು ಲೇ ಆಫು, ವಿ ಆರ್ ಎಸ್ಸು, ಡಿಸ್ಸ ಮಿಸ್ಸಲ್ಲು ಅಂತ ಶುರು ಹಚ್ಚಿಕೊಂಡಾವು. ಮನಮೋಹನಾನಂತರ ಸರಕಾರದೊಳಗ ಉದ್ಯೋಗ ಖಾತ್ರಿ ಯೋಜನೆ ನಿಂತು ಹೋಗೇದ. ಅದಕ್ಕ ಮಹಾತ್ಮಾ ಗಾಂಧಿ ಹೆಸರು ಇಟ್ಟದ್ದನ ತಪ್ಪಾತೋ ಏನೋ. ಈ ಸರಕಾರದವರು ಅದನ್ನ ಮುಟ್ಟಲಿಕ್ಕೆ ಒಲ್ಲರು.
ಇನ್ನು ಸೂಕ್ಷ್ಮ ಅರ್ಥವ್ಯವಸ್ಥೆಯ ನಿರ್ವಹಣೆಯನ್ನು ಇವರು ಮರತುಬಿಟ್ಟಾರ. ಹಣದುಬ್ಬರವನ್ನು ನೋಟು ಪ್ರಿಂಟು ಮಾಡುವ ಪ್ರಮಾಣವನ್ನು ಕಡಿಮೆ ಮಾಡೋದು, ಇತರ ನೀತಿಗಳ ನಿರೂಪಣೆ ಹಾಗೂ ಜಾರಿಯಿಂದಾಗಿ ನಿಯಂತ್ರಿಸಲಿಕ್ಕೆ ಸಾಧ್ಯ ಅದ. ಆದರ ಇವರು ಇವನ್ನೆಲ್ಲ ಮಾಡವಲ್ಲರು. ಅವರಿಗೆ ಇವೆಲ್ಲ ಚಿಲ್ಲರಾ ಸಮಸ್ಯೆ. ಅವರಿಗೆ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದ ಇರೋ ಹಿಂದುಗಳ ಸಮಸ್ಯೆಯೇ ಮುಖ್ಯ. ಅದಕ್ಕೆ ಇಸ್ರೇಲು ಮಾದರಿಯ ಪರಿಹಾರ ಹುಡುಕತಾರ. ಅದೇ ಇಸ್ರೇಲಿನ ಅರ್ಥ ಪರಿಣಿತಿ ಇವರಿಗೆ ಕಾಣಂಗಿಲ್ಲ. ಭಾರಿ ಭಯಂಕರ ದೇಶ ಪ್ರೇಮದ ಭಾಷಣ ಮಾಡೋ ಇವರಿಗೆ ಭಾರತೀಯರ ಸಮಸ್ಯೆ ಅವರಿಗೆ ಕಾಣಂಗಿಲ್ಲ. ಅದನ್ನ ಸ್ಕ್ಯಾಂಡಿನೇವಿಯಾ ಮಾದರಿಯೊಳಗ ಪರಿಹರಿಸಬಹುದು ಅಂತ ಅವರಿಗೆ ಅನ್ನಿಸೋದಿಲ್ಲ.
ಅಪರೂಪದ ಆರ್ಥಿಕ ತಜ್ಞ ಡಾ. ಡಿ. ಎಂ ನಂಜುಂಡಪ್ಪ ಈ ದೇಶದ ಆರ್ಥಿಕ ಸಮಸ್ಯೆಗಳಿಗೆ ನೀಡಿದ ಪರಿಹಾರದ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
1. ನಮ್ಮ ದೇಶಕ್ಕೆ ಬೇಕಾಗಿರುವುದು ಆದಾಯ ತೆರಿಗೆ ಅಲ್ಲ. ಖರ್ಚಿನ ತೆರಿಗೆ. (ಅಯ್ಯೋ ಬಿಡಿ ಸಾ. ಅದಿಲ್ಲದಿದ್ದರೆ ನಾವು ವಿರೋಧ ಪಕ್ಷಗಳ ಜನಪ್ರಿಯ ನಾಯಕರನ್ನು ಹೆದರಿಸೋದು ಹೇಗೆ?)
2. ಗಳಿಕೆಯನ್ನು ಉತ್ತೇಜಿಸಿದಂತೆಯೇ ಉಳಿಕೆಯನ್ನು ಉತ್ತೇಜಿಸಬೇಕು. ಬರೀ ಗಳಿಸಿ, ಉಳಿಸದೇ ಹೋದ ದೇಶಕ್ಕೆ ಭವಿಷ್ಯವಿಲ್ಲ. (ಕೊಳ್ಳುಬಾಕನೆಂಬೋ ಬೀಜಾಸುರನು ರಾರಾಜಿಸುತ್ತಿರುವಾಗ ಉಳಿಸುವವರು ಯಾರು ಸಾ?)
3. ಎಲ್ಲ ರೀತಿಯ ಆದಾಯ ತೆರಿಗೆ ವಿನಾಯಿತಿಗಳನ್ನು ರದ್ದು ಮಾಡಬೇಕು. ಸುಂಕದ ಮಟ್ಟವನ್ನು ಕಮ್ಮಿ ಮಾಡಬೇಕು. (ವಿನಾಯಿತಿಗೆಂದೇ ಸ್ವಯಂಸೇವಾ ಸಂಸ್ಥೆ ತೆರೆದವರು ಏನು ಮಾಡಬೇಕು ಸಾ?)
4. ಬಡವರ ಕೈಯಲ್ಲಿ ಹಣ ಓಡಾಡುವಂತೆ ಮಾಡಬೇಕು (ಅಯ್ಯೋ ಸಾ, ಹೀಗೆ ಮಾಡುತ್ತೇವೆ ಎನ್ನುವ ಆಶ್ವಾಸನೆಯಿಂದ ನಾವು ಅಧಿಕಾರಕ್ಕೆ ಬರೋದು. ಅದನ್ನು ಪೂರೈಸಿ ಬಿಟ್ಟರೆ ಮುಂದಿನ ಚುನಾವಣೆಯಲ್ಲಿ ನಾವು ಏನು ಮಾತಾಡಬೇಕು?)
ಆ ಶಾರದಾ ಪುತ್ರನ ಶಿಫಾರಸುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ವ್ಯವಧಾನವಂತೂ ನಮಗೆ ಇಲ್ಲ.
ಸುಮ್ಮನೆ ಒಂದು ಜೋಕು ಕೇಳಿ ನಗೋಣ. ಕೆಲವೊಮ್ಮೆ ಜೋಕುಗಳೇ ನಮ್ಮ ಜೀವನ ಸಂಕಷ್ಟಗಳನ್ನು ಸರಿಯಾಗಿ ವಿವರಿಸತಾವ ಅಂತ ಅನ್ನಿಸತದ.
ಅಂಥಾದು ಇಲ್ಲೊಂದು ಅದ ನೋಡ್ರಿ. ಸರದಾರಜೀ ಜೋಕು.
“ನನಗೆ ಹಣದುಬ್ಬರದ ಸಮಸ್ಯೆ ಇಲ್ಲ. ನಾನು ಯಾವಾಗಲೂ ನನ್ನ ಬೈಕಿಗೆ ಕೇವಲ ನೂರು ರೂಪಾಯಿಯ ಪೆಟ್ರೋಲ್ ಹಾಕಿಸೋದು”.