Homeಮುಖಪುಟಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

ಇದು ಕಾಶ್ಮೀರದ ಸಮಸ್ಯೆಯಲ್ಲ; ಭಾರತ ಒಕ್ಕೂಟದ ಸಮಸ್ಯೆ

- Advertisement -
- Advertisement -

ಕಾಶ್ಮೀರವು ನಿಸ್ಸಂದೇಹವಾಗಿ ಭಾರತದ ಭಾಗ. ಈ ಮಾತನ್ನು ಹೇಳದೇ ಮುಂದುವರೆದರೆ ಕೆಲವರ ದಾಳಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹೇಳುತ್ತಲೇ ಇಲ್ಲ. ಏಕೆಂದರೆ, ಇಡೀ ಲೇಖನ ಅಂಥವರ ನಿಲುವನ್ನು ಬಯಲುಗೊಳಿಸಲಿದೆ. ಆದರೆ, ಬಹುಮುಖಿ ಸಂಸ್ಕೃತಿಯನ್ನು ಒಳಗೊಂಡ ಅಪೂರ್ವವಾದ ಸಂಕರ ಸಂಸ್ಕೃತಿಯನ್ನು ಒಳಗೊಂಡಿದ್ದ ಕಾಶ್ಮೀರವು ಭಾರತಕ್ಕೆ ಶಿಖರಪ್ರಾಯವಾದ ಬದುಕನ್ನು ಹೊಂದಿತ್ತು. ಆ ದೃಷ್ಟಿಯಿಂದ ಅದಿಲ್ಲದೇ ಭಾರತವು ಅಪೂರ್ಣ ಎಂದು ಯಾರಾದರೂ ಹೇಳಿದರೆ ಅದಕ್ಕೆ ಅರ್ಥವಿದೆ.

ಎರಡನೆಯ ಸಂಗತಿ, ಕಾಶ್ಮೀರವನ್ನು ಒಂದು ಸಮಸ್ಯೆಯನ್ನಾಗಿ ಮಾಡುವುದರಲ್ಲಿ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರ ಪಾತ್ರ ದೊಡ್ಡದು. ಅದನ್ನು ಸೂಕ್ತವಾಗಿ ಬಗೆಹರಿಸಿದ್ದರೆ ಬಿಜೆಪಿ ಆರೆಸ್ಸೆಸ್‍ಗಾಗಲೀ, ಪಾಕಿಸ್ತಾನಕ್ಕಾಗಲೀ ಅದರಲ್ಲಿ ತಾವು ಇರುತ್ತಲೇ ಇರಲಿಲ್ಲ. ಈ ವಿವರಗಳು ಈ ಸಂಚಿಕೆಯ ಉಳಿದ ಲೇಖನಗಳಲ್ಲೂ ದೊರೆಯುವುದರಿಂದ ಅದರ ಬಗ್ಗೆ ಇಲ್ಲಿ ಹೇಳುವ ಅಗತ್ಯವಿಲ್ಲ.

ಆದರೆ, ಎರಡು ಸಂಗತಿಗಳನ್ನು ಇಲ್ಲಿ ಚರ್ಚಿಸಲೇಬೇಕಿದೆ. ಒಂದು ‘ಸ್ವಾಯತ್ತ’ ರಾಜ್ಯವಾಗಿದ್ದ ಕಾಶ್ಮೀರವನ್ನು ವಿಭಜಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಪ್ರಕ್ರಿಯೆಯನ್ನು ಆಗಗೊಳಿಸಲು ಒಕ್ಕೂಟ ಸರ್ಕಾರವು ಅನುಸರಿಸಿದ ವಿಧಾನ ಯಾವುದು? ಆ ವಿಧಾನವು ನಮಗೆ ಯಾವ ಸೂಚನೆಗಳನ್ನು ನೀಡುತ್ತದೆ? ತನ್ನ ಅವಿಭಾಜ್ಯ ಅಂಗವೆಂದು ವಿವಿಧ ಪಕ್ಷಗಳ ನೇತೃತ್ವದ ಎಲ್ಲಾ ಸರ್ಕಾರಗಳು ಹೇಳುತ್ತಾ ಬಂದ ಒಂದು ಭೂಭಾಗದ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ, ಆ ಭೂಭಾಗದಲ್ಲಿ ವಾಸಿಸುತ್ತಿರುವ ಜನರ ಅಭಿಪ್ರಾಯ ಕೇಳುವ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ತೋರಲಿಲ್ಲ ಎಂಬುದಷ್ಟೇ ಅಲ್ಲ. ಅವರನ್ನು ಕೇಳಿದರೆ ಆ ಭೂಭಾಗ ನಮ್ಮ ಜೊತೆಗೇ ಇರುವುದಿಲ್ಲ ಎಂಬ ಭಯ ಭಾರತದ ಆಳುವವರಿಗೆ ಇತ್ತೇ ಎಂಬುದು ಮುಖ್ಯವಾದ ಪ್ರಶ್ನೆ.

ಅಂತಹ ಭಯ ಇದ್ದುದರಿಂದಲೇ, ಈಗಾಗಲೇ ಅಲ್ಲಿದ್ದ ಅಸಂಖ್ಯಾತ ಸೇನೆ, ಅರೆಸೇನಾ ಪಡೆಗಳ ಜೊತೆಗೆ, ಸುಮಾರು 45 ಸಾವಿರ ಪಡೆಗಳನ್ನು ಒಂದು ವಾರದ ಮೊದಲು ಜಮಾವಣೆ ಮಾಡಲಾಯಿತು. ಕಾಶ್ಮೀರದ ಕುರಿತು ಸಂಸತ್ತಿನಲ್ಲಿ ಘೋಷಣೆ ಮಾಡುವ ದಿನ ಮತ್ತೆ 8 ಸಾವಿರ ಸೈನಿಕರನ್ನು ದೇಶದ ವಿವಿಧ ಭಾಗಗಳಿಂದ ವಿಮಾನಗಳಲ್ಲಿ ಕೊಂಡೊಯ್ದು ಇಳಿಸಲಾಯಿತು. ಆ ದಿನ ಕಾಶ್ಮೀರದಲ್ಲಿ ಇಂಟರ್‍ನೆಟ್, ಫೋನ್ ಇತ್ಯಾದಿ ಸಂಪರ್ಕ ಸಾಧನಗಳು ಇರಲಿಲ್ಲ. ಅಲ್ಲೇನು ನಡೆಯುತ್ತಿದೆ ಎಂಬ ಸುಳಿವು ಹೊರಜಗತ್ತಿಗೆ ಗೊತ್ತಾಗಲಿಲ್ಲ. ಆದರೆ, ಸೈನ್ಯದ ಸಂಪರ್ಕಕ್ಕೆ ಸೆಟಲೈಟ್ ಫೋನ್‍ಗಳನ್ನು ಒದಗಿಸಲಾಗಿತ್ತು.

ಅದಕ್ಕೆ ಹಿಂದಿನ ದಿನಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ ಭಯಗ್ರಸ್ತ ವಾತಾವರಣ ನಿರ್ಮಾಣವಾಗಿತ್ತು. ಕಳೆದ ಮೂರು ದಶಕಗಳಲ್ಲಿ ಕಫ್ರ್ಯೂ ವಾತಾವರಣವನ್ನು ಸಾಕಷ್ಟು ಅನುಭವಿಸಿ ಗೊತ್ತಿರುವ ಅವರು, ದಿನಗಟ್ಟಲೇ ಮನೆಯಿಂದ ಹೊರಗೆ ಬರದಿದ್ದರೂ ಬದುಕಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಪರದಾಡಿದರು. ದಿನ ತುಂಬಿದ ಗರ್ಭಿಣಿಯರ ಹೆರಿಗೆಗೆ ಏನು ಮಾಡಬೇಕೆಂದು ಕುಟುಂಬದವರು ಚಿಂತಾಕ್ರಾಂತರಾಗಿದ್ದರು.

ಆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಮತ್ತು ಇಂದು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಜೊತೆಗೇ ಹಿಂದೆ ಅಧಿಕಾರ ಹಂಚಿಕೊಂಡಿದ್ದ ಇಬ್ಬರನ್ನು ಗೃಹಬಂಧನದಲ್ಲಿರಿಸಲಾಗಿತ್ತು ಮತ್ತು ಘೋಷಣೆಯ ನಂತರ ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರ ತಂದೆ (ಮುಫ್ತಿ ಮಹಮದ್ ಸಯೀದ್) ಈ ದೇಶದ ಗೃಹ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಭಯೋತ್ಪಾದಕರು ಅವರ ಮಗಳನ್ನು ಅಪಹರಿಸಿದ್ದರು. ಇನ್ನೊಬ್ಬರ ತಾತ (ಷೇಕ್ ಅಬ್ದುಲ್ಲಾ) ಒಬ್ಬ ಸೆಕ್ಯುಲರ್ ವ್ಯಕ್ತಿಯಾಗಿದ್ದು, ಕಾಶ್ಮೀರವು ಭಾರತದೊಂದಿಗೆ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಹೊತ್ತಿನ ಕಾಶ್ಮೀರದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ಅವರು ಶ್ರೀನಗರ ಲಾಲ್‍ಚೌಕ್‍ನಲ್ಲಿ ನೆಹರು ಪಕ್ಕ ನಿಂತು ತನ್ನ ಜನರಿಗೆ ಜನಮತಗಣನೆಯ ಭರವಸೆಯನ್ನು ಕೊಟ್ಟಿದ್ದರು. ಆ ಭರವಸೆಯನ್ನು ಸ್ವತಃ ನೆಹರೂ ಉಳಿಸಿಕೊಳ್ಳದೇ, ತನ್ನೀ ಸ್ನೇಹಿತನನ್ನು ಬಂಧಿಸಿ ದೂರದ ಊಟಿಯಲ್ಲಿಟ್ಟಿದ್ದರು.
ಇಂತಹ ಮೋಸಗಳನ್ನು ಅನುಭವಿಸಿದ ಕಾಶ್ಮೀರಿಗಳು ದಿನೇ ದಿನೇ ಭಾರತ ಸರ್ಕಾರದಿಂದ ದೂರ ಸರಿದಿದ್ದರು. ಆದರೆ, ಭಾರತದಿಂದ ಅಲ್ಲ.

ಕೆಲವೇ ತಿಂಗಳು ನಡೆಯುವ ಅಮರನಾಥ ಯಾತ್ರೆಯೊಂದರಿಂದಲೇ 50,000 ಕಾಶ್ಮೀರಿಗಳು ತಮ್ಮ ಇಡೀ ವರ್ಷದ ಬದುಕನ್ನು ನಡೆಸುತ್ತಾರೆ. ಭಾರತದ ಜೊತೆಗೆ ಅವರದ್ದು ಶತಮಾನಗಳ ಸಂಬಂಧ. ಅದನ್ನು ಮತ್ತಷ್ಟು ಬೆಸೆದುಕೊಂಡು ಪ್ರೀತಿಯಿಂದ ಅವರನ್ನು ಗೆಲ್ಲುವ ಪ್ರಯತ್ನವನ್ನು ಕಾಂಗ್ರೆಸ್ಸೂ ಮಾಡಲಿಲ್ಲ, ಬಿಜೆಪಿಯೂ ಮಾಡಲಿಲ್ಲ. ಇದ್ದುದರಲ್ಲಿ ವಿ.ಪಿ.ಸಿಂಗ್, ದೇವೇಗೌಡರು ಮತ್ತು ಬಿಜೆಪಿಯ ವಾಜಪೇಯಿ ಆ ಪ್ರಯತ್ನವನ್ನು ಒಂದು ಮಟ್ಟಿಗಾದರೂ ಮಾಡಿದ್ದರು.

ಅಳಿದುಳಿದಿದ್ದ ವಿಶ್ವಾಸವನ್ನು ಕಿತ್ತುಹಾಕುವ ಹಾಗೆ ಮೋದಿ – ಅಮಿತ್‍ಷಾ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಆ ಕಾರ್ಯಾಚರಣೆಯ ರೀತಿಯು ಇಡೀ ದೇಶಕ್ಕೆ ಒಂದು ಸಂದೇಶ ನೀಡಿದೆ. ದೇಶದ ಯಾವ ಭೂಭಾಗವನ್ನು ಬೇಕಾದರೂ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳಲು ತಾವು ಶಕ್ತರಾಗಿದ್ದೇವೆ ಎಂಬುದೇ ಆ ಸಂದೇಶ. ಅದಕ್ಕೆ ಬೇಕಿರುವುದು, ಆ ಭೂಭಾಗದ ಜನರನ್ನು ಉಳಿದವರ ಕಣ್ಣಿನಲ್ಲಿ ದುಷ್ಟರನ್ನಾಗಿಸುವುದು. ಅದಕ್ಕೆ ಪೂರಕವಾಗಿ ದುಡಿಯಲು ಭಾರೀ ದೊಡ್ಡ ಮಾಧ್ಯಮ ಶಕ್ತಿ ಅವರೊಂದಿಗಿರುವುದರಿಂದ ಸೈನ್ಯದ ಬಲ ಎರಡನೆಯ ಸುತ್ತಿನಲ್ಲಷ್ಟೇ ಬೇಕಾಗುತ್ತದೆ. ಭಾರತ ಒಕ್ಕೂಟದ ಮೂಲಭೂತ ಆಶಯಕ್ಕೆ ವಿರುದ್ಧವಾಗಿ ಈ ಕೆಲಸ ನಡೆಯುತ್ತಿದೆ ಎಂಬುದನ್ನು ದೇಶದ ಪ್ರತಿಯೊಂದು ರಾಜ್ಯದ ಜನರೂ ಅರಿಯಬೇಕಿದೆ.

ಕಾಶ್ಮೀರದ ಜನರನ್ನು ಪ್ರೀತಿಯಿಂದ ಗೆದ್ದು ಅವರನ್ನು ಭಾರತದ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಹೊಣೆ ಈಗ ಸಂಪೂರ್ಣ ಭಾರತದ ಜನರದ್ದೇ ಆಗಿದೆ.

  • ಡಾ. ವಾಸು ಎಚ್.ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...