ಶಿಕ್ಷಣ ದಾನ ಅಥವಾ ಭಿಕ್ಷೆಯಲ್ಲ, ಅದು ನಮ್ಮ ಮೂಲಭೂತ ಹಕ್ಕು. ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೆ ಫ್ರೀಡಂ ಪಾರ್ಕ್ ಬಿಟ್ಟು ಕದಲುವುದಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳಿದರು.
ಶಿಕ್ಷಣ ಹಕ್ಕು ಕಾಯ್ದೆಯ (ಆರ್ಟಿಇ) ಸಮಗ್ರ ಜಾರಿಗೆ ಆಗ್ರಹಿಸಿ ಮತ್ತು ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡುವುದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಗುರುವಾರ (ನ.26) ಪ್ರಾರಂಭಿಸಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಇದೊಂದು ನಿರ್ಣಾಯಕ ಹೋರಾಟ, ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳದೆ ನಾವು ಈ ಜಾಗ ಬಿಟ್ಟು ಕದಳಲುವುದಿಲ್ಲ ಎಂದು ಹೇಳಿದರು. ನಾವಿಲ್ಲಿ ನಿಸ್ವಾರ್ಥವಾಗಿ ಬಂದು ಸೇರಿರುವುದು. ನಮ್ಮ ರಾಜ್ಯದ ಎಲ್ಲಾ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿ, ಎಲ್ಲಾ ಮೂಲಭೂತ ಸೌಲಭ್ಯ ಕೊಡಿ ಎಂದು ಕೇಳಲು. ಇದು ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಸೀಮಿತವಾದ ಹೋರಾಟ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಂವಿಧಾನದಲ್ಲಿ ನಾವು ಕೆಲವು ಮೂಲಭೂತ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಅದರಲ್ಲಿ ಶಿಕ್ಷಣದ ಹಕ್ಕು ಕೂಡ ಒಂದು. ಹಾಗಾಗಿ ಎಲ್ಲಾ ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕು ಸಿಗಬೇಕು. ಅದಕ್ಕಾಗಿ ತಂದ ಶಿಕ್ಷಣದ ಹಕ್ಕು ಕಾಯ್ದೆ (ಆರ್ಟಿಇ) ಸಮಗ್ರವಾಗಿ ಜಾರಿಯಾಗಬೇಕು. ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಸಿಗಬೇಕು. ಶಾಲೆಗಳು ಗಟ್ಟಿಯಾಗಬೇಕು ಎಂದರು.
ಸರ್ಕಾರಿ ಶಾಲೆಗಳು ದಲಿತರು, ಬಡವರು, ಅಲ್ಪಸಂಖ್ಯಾತರದ್ದು. ಈ ಶಾಲೆಗಳಲ್ಲಿ 60ರಷ್ಟು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿದ್ದಾರೆ. ಶೇ.51ರಷ್ಟು ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನಾವೆಲ್ಲ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಭಾಷಣ ಮಾಡುತ್ತೇವೆ. ಆದರೆ, ಈ ಶಾಲೆಗಳಲ್ಲಿ ಶೇ. 35ರಷ್ಟು ಅತಿಥಿ ಶಿಕ್ಷಕರಿದ್ದಾರೆ. ರಾಜ್ಯದಲ್ಲಿ ಶೇ. 60 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಈ ಪೈಕಿ ಶೇ.50ರಷ್ಟು, ಅಂದರೆ 30 ಸಾವಿರ ಹುದ್ದೆಗಳು ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದಲ್ಲಿ ಒಮ್ಮೆ ಭಾಷಣ ಮಾಡುವಾಗ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕೈ ಮುಗಿದು, “ನಮಗೆ ಶಿಕ್ಷಕರನ್ನು ಒಂದು ಒಟ್ಟು ಬಿಡಿ, ಇನ್ನೇನು ಬೇಡ” ಎಂದು ಕೈ ಮುಗಿದು ಬೇಡಿಕೊಂಡಿದ್ದರು. ಕೆಲವೊಂದು ಶಾಲೆಗಳಲ್ಲಿ ಶೂನ್ಯ (ಎಲ್ಲಾ ಅತಿಥಿ) ಶಿಕ್ಷಕರಿದ್ದಾರೆ. ಶೇ.38ರಷ್ಟು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಇಲ್ಲ. ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಸಿಎಂ ಇಲ್ಲ ಅಂದ್ರೆ ಏನಾಗಬಹುದು? 100ಕ್ಕೆ 38 ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಇಲ್ಲ ಎಂದು ವಿವರಿಸಿದರು.
ಶೇ. 23ರಷ್ಟು ಶಾಲೆಗಳಲ್ಲಿ ಕೊಠಡಿಗಳು ಬಳಸಲು ಯೋಗ್ಯವಾಗಿಲ್ಲ. ಶೇ. 19ರಷ್ಟು ಶಾಲೆಗಳಲ್ಲಿ ಬಿಸಿಯೂಟ ಕೊಠಡಿಗಳು ಇಲ್ಲ. ಆರ್ಟಿಇ ಕಾಯ್ದೆ ಪ್ರಕಾರ ಸುಮಾರು ಶೇ. 50ರಷ್ಟು ಶಾಲೆಗಳಲ್ಲಿ ಶೌಚಾಲಯ ಇದ್ದರೂ ಕೂಡ ಅದು ಕಾರ್ಯ ನಿರ್ವಹಿಸುತ್ತಿಲ್ಲ. ಶೇ.16ರಷ್ಟು ಶಾಲೆಗಳಲ್ಲಿ ಶೌಚಾಲಯ ಬಳಸಲು ಯೋಗ್ಯವಾಗಿಲ್ಲ. ಅಂದರೆ, ಅವುಗಳಲ್ಲಿ ನೀರಿಲ್ಲ. ಹೆಣ್ಣು ಮಕ್ಕಳು ಬಳಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
“ಭೇಟಿ ಬಚಾಚೋ ಭೇಟಿ ಪಡಾವೋ” ಎನ್ನುತ್ತಾರೆ. ಕನಿಷ್ಠ ಶೌಚಾಲಯ ಇಲ್ಲದ ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಹೇಗೆ ಕಳಿಸುವುದು ಎಂದು ನಿರಂಜನರಾಧ್ಯ ಪ್ರಶ್ನಿಸಿದರು. ಶೇ. 40ರಷ್ಟು ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ಶೇ.30ರಷ್ಟು ಶಾಲೆಗಳಲ್ಲಿ ತಡೆಗೋಡೆ ಇಲ್ಲ. ಶೇ. 32ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿಲ್ಲ. ಬಹುತೇಕ ತಂದೆ- ತಾಯಂದಿರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಅಂಕಿ ಅಂಶ ಮುಂದಿಟ್ಟರು.
ಅನೇಕ ಶಾಲೆಗಳಿಗೆ ಭೇಟಿ ಕೊಟ್ಟಾಗ ಶಿಕ್ಷರು ಇರಲಿಲ್ಲ. ಕೇಳಿದ್ರೆ ಅವರ ಡೆಪ್ಯೂಟೇಶನ್ ಮೇಲೆ ಹೋಗಿದ್ದಾರೆ, ಎಸ್ಐಆರ್ ಮಾಹಿತಿ ಸಂಗ್ರಹ ತೆರಳಿದ್ದಾರೆ ಮತ್ತು ಇತರ ಕೆಲಸಗಳಿಗೆ ಹೋಗಿದ್ದಾರೆ ಎನ್ನುತ್ತಾರೆ. ಬಹುತೇಕ ಶಾಲೆಗಳಲ್ಲಿ ಗಣಿತ, ಇಂಗ್ಲಿಷ್, ವಿಜ್ಞಾನಕ್ಕೆ ಶಿಕ್ಷಕರಿಲ್ಲ. ಮೊದಲ ಬಾರಿ ಶಾಲೆಗೆ ಹೋಗುವ ಕುಟುಂಬದ ಮಕ್ಕಳಿಗೆ ಹೆಚ್ಚುವರಿ ಕಲಿಸುವವರಿಲ್ಲ ಎಂದು ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ ವಿವರಿಸಿದರು.
ಸರ್ಕಾರಿ ಶಾಲೆಗಳ ಪುಸ್ತಕದಲ್ಲಿರುವ ಮಕ್ಕಳ ಹಾಜರಾತಿಗೂ, ಮಕ್ಕಳ ದೈಹಿಕ ಉಪಸ್ತಿಗೂ ತಾಳೆಯಾಗುತ್ತಿಲ್ಲ. ದಲಿತ ಅಡುಗೆ ಸಿಬ್ಬಂದಿ ಇರುವಲ್ಲಿ ಇವತ್ತಿಗೂ ಅಸ್ಪೃಶ್ಯತೆ ಜೀವಂತ ಇದೆ. ದಿನದಿಂದ ದಿನಕ್ಕೆ ನಮ್ಮ ಶಾಲೆಗಳು ಅದೋಗತಿಗೆ ಹೋಗುತ್ತಿವೆ. ಆರ್ಟಿಇ ಕಾಯ್ದೆ ಜಾರಿಯಾದ ಮೂರು ವರ್ಷಕ್ಕೆ ಎಲ್ಲಾ ಸೌಲಭ್ಯಗಳು ಇರಬೇಕು ಎಂದದೆ. ಆದರೆ, ಕಾಯ್ದೆ ಜಾರಿಯಾಗಿ 16 ವರ್ಷಗಳು ಕಳೆದರೂ ಏನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನ ಮಾಡಿಯೇ ಇಲ್ಲ. ಮಕ್ಕಳನ್ನು ಖಾಸಗಿ ಶಾಲೆಗೆ ಹೋಗಿ ಎನ್ನಲು ಸರ್ಕಾರಕ್ಕೆ ನಾಚಿಕೆಯಾಗಬೇಕು. ಶಿಕ್ಷಣದ ಹಕ್ಕು ಕಾಯ್ದೆಯ ಸಮಗ್ರ ಜಾರಿ ಬಗ್ಗೆ ಲಿಖಿತ ಭರವಸೆ ಸಿಗುವವರಿಗೆ ನಾವು ಇಲ್ಲಿಂದ (ಫ್ರೀಡಂ ಪಾರ್ಕ್) ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಬಜೆಟ್ ಅಧಿವೇಶನದಲ್ಲಿ ಆರ್ಟಿಇ ಕಾಯ್ದೆಯ ಸಮಗ್ರ ಜಾರಿ ಬಗ್ಗೆ ಘೋಷಣೆ ಮಾಡಬೇಕು. ಅದಕ್ಕಾಗಿ ಹಣ ಮೀಸಲಿಡಬೇಕು. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ಕೊಡುವುದಾದರೆ ವಿಧಾನಸೌಧ, ನಿಮ್ಮ ಸರ್ಕಾರವನ್ನೂ ಕೊಟ್ಟು ಕೊಡಿ. ಬೇರೆಯವರು ನಡೆಸಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಿಕ್ಷಣ ದಾನ ಅಥವಾ ಭಿಕ್ಷೆ ಅಲ್ಲ. ಅದು ನಮ್ಮ ಮೂಲಭೂತ ಹಕ್ಕು. ಸಿಎಂ ಮಗಳು ಸರ್ಕಾರಿನ ಶಾಲೆ ಮಕ್ಕಳಿಗೆ ಹಳೆ ಬಸ್ ಕೊಡ್ತೀವಿ ಎನ್ನುತ್ತಾರೆ. ಬಡವರ ಮಕ್ಕಳು ಭಿಕ್ಷುಕರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳು ಗಟ್ಟಿಯಾಗಬೇಕು ಎನ್ನುವುದು ಒಂದು ರಾಜಕೀಯ ಹೋರಾಟ. ನೀವು ಈ ವಿಷಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ನಮಗೊಂದು ಸಾರ್ವಭೌಮ ಇದೆ. ಅದು ನಮ್ಮ ಮತದಾನದ ಹಕ್ಕು. ನೀವು ಜನ ವಿರೋಧಿ ಕ್ರಮ ನಿಲ್ಲಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಏನೆಂದು ನಿಮಗೆ ತೋರಿಸುತ್ತೇಬೆ ಎಂದು ನಿರಂಜನರಾಧ್ಯ ಸರ್ಕಾರಿ ಎಚ್ಚರಿಕೆ ನೀಡಿದರು.


