Homeಮುಖಪುಟರೈತ ಚಳವಳಿಯ ಕಣ ಪಂಜಾಬ್‌ನಲ್ಲಿ ಚುನಾವಣೆ: ಯಾರಿಗೆ ಲಾಭ?

ರೈತ ಚಳವಳಿಯ ಕಣ ಪಂಜಾಬ್‌ನಲ್ಲಿ ಚುನಾವಣೆ: ಯಾರಿಗೆ ಲಾಭ?

- Advertisement -
- Advertisement -

ಐತಿಹಾಸಿಕ ರೈತ ಹೋರಾಟ ಜಯಗಳಿಸಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಯೂರುವಂತೆ ಮಾಡಿದೆ. ಈ ರೈತ ಹೋರಾಟದ ಯಶಸ್ಸಿನಲ್ಲಿ ಪಂಜಾಬ್ ರೈತರು ಅತಿ ಮಹತ್ವದ ಪಾತ್ರ ವಹಿಸಿದ್ದರು. ಮೊದಲಿಗೆ ಅಲ್ಲಿನ 32 ಸಂಘಟನೆಗಳು ಒಟ್ಟಾಗಿ ದೆಹಲಿಗೆ ಧಾವಿಸಿ ಇಡೀ ಪ್ರಪಂಚವೇ ತಮ್ಮೆಡೆಗೆ ತಿರುಗಿ ನೋಡುವಂತೆ ಮಾಡಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ದಿಟ್ಟವಾಗಿ ಹೋರಾಡಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮತ್ತು ಎಂಎಸ್‌ಪಿಗೆ ಶಾಸನಬದ್ಧ ಮಾನ್ಯತೆಗಾಗಿ ಸಮಿತಿ ರಚಿಸುವಂತೆ ಮಾಡಿದರು. ಈಗ ಎಲ್ಲರ ಪ್ರಶ್ನೆ ಮುಂಬರುವ ಫೆಬ್ರವರಿ 20ರಂದು ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ರೈತರ ಬೆಂಬಲ ಯಾರಿಗಿರುತ್ತದೆ ಎಂಬುದು ಮತ್ತು ಆ ಬೆಂಬಲದೊಂದಿಗೆ ಆ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಬಲ್ಲುದೇ ಎಂದು.

ಇದಕ್ಕೆ ಉತ್ತರ ಅಷ್ಟು ಸರಳವಾಗಿಲ್ಲ. ಆದರೆ ಬಿಜೆಪಿ ಅಂತೂ ರೈತ ದ್ರೋಹಿ ಪಕ್ಷ ಎಂಬ ಹಣೆಪಟ್ಟಿ ಪಡೆದಿದೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅಮರಿಂದರ್ ಸಿಂಗ್‌ರವರ ಪಂಜಾಬ್ ಲೋಕ್ ಕಾಂಗ್ರೆಸ್ ಸಹ ರೈತರ ವಿರೋಧ ಎದುರಿಸಬೇಕಾಗಿದೆ. ಈ ನಡುವೆ ರೈತರ ಕೆಲವು ಸಂಘಟನೆಗಳು ತಾವೇ ಸಂಯುಕ್ತ ಸಮಾಜ್ ಮೋರ್ಚಾ ಎಂಬ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಅದರಿಂದ ಅಂತರ ಕಾಯ್ದುಕೊಂಡಿದೆ. ಈ ಎಲ್ಲಾ ಕಾರಣಗಳಿಗಾಗಿ ಈ ಬಾರಿಯ ಚುನಾವಣೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಅಮರಿಂದರ್ ಸಿಂಗ್‌

ರೈತ ಹೋರಾಟವೊಂದೇ ಚುನಾವಣೆಯನ್ನು ನಿರ್ಧರಿಸುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ ಈ ಬಾರಿ ಪಂಜಾಬ್ ಜನರು ಎಲ್ಲಾ ಪಕ್ಷದ ಅಭ್ಯರ್ಥಿಗಳನ್ನು ಪ್ರಶ್ನಿಸುತ್ತಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆ ತೋರಿಸಿ ಅನ್ನುತ್ತಿದ್ದಾರೆ. ಪಂಜಾಬ್ ಹೆಚ್ಚು ಸಾಲ ಮಾಡಿದ ರಾಜ್ಯಗಳ ಪಟ್ಟಿಯಲ್ಲಿರವುದೇಕೆ ಎಂದು ಕೇಳುತ್ತಿದ್ದಾರೆ. ಇವನ್ನು ಹೊರತುಪಡಿಸಿ “ಪಂಜಾಬ್‌ನ ಮೂರು ಭಾಷಿಕ ಪ್ರದೇಶಗಳು, ಜಾತಿ, ಧರ್ಮ, ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳು ಹಾಗೂ ಪ್ರತಿ ಕ್ಷೇತ್ರದ ಅಭ್ಯರ್ಥಿಗಳು ಯಾರು ಎಂಬೆಲ್ಲಾ ಅಂಶಗಳು ಈ ಚುನಾವಣೆಯಲ್ಲಿ ಯಾರು ಬಹುಮತ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸುತ್ತವೆ” ಎನ್ನುತ್ತಾರೆ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಯುವ ರೈತ ಬಲ್ಜಿತ್ ಸಿಂಗ್.

ಓಡುವ ಕುದುರೆ ಬೆನ್ನೇರಿದ ಕಾಂಗ್ರೆಸ್ ಚುನಾವಣೆಗೆ ಆರು ತಿಂಗಳು ಇರುವಂತೆಯೇ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನದಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್‌ರವರನ್ನು ಕೆಳಗಿಳಿಸಿ ದಲಿತ ಸಮುದಾಯದ ಚರಣ್‌ಜಿತ್ ಸಿಂಗ್ ಚನ್ನಿಯವರನ್ನು ಸಿಎಂ ಮಾಡಿತು. ಇದಕ್ಕೆ ಮುಖ್ಯ ಕಾರಣ ನವಜೋತ್ ಸಿಂಗ್ ಸಿಧುವಾಗಿದ್ದರೂ ಚನ್ನಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಲ್ಪಾವಧಿಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಜನರ ಕೈಗೆ ಸಿಗುವ ಸಿಎಂ ಎಂಬ ಮಾತು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ತೀವ್ರ ಭ್ರಷ್ಟಾಚಾರ ಮತ್ತು ಜನರಿಗೆ ಸಿಗುತ್ತಿಲ್ಲ ಎಂಬುದು ಹಿಂದಿನ ಸಿಎಂ ಅಮರಿಂದರ್ ಮೇಲಿದ್ದ ಆರೋಪ. ಅದನ್ನು ಚೆನ್ನಿ ತೊಡೆದುಹಾಕಿ ಬರುವ ಚುನಾವಣೆಯಲ್ಲಿ ತಾನೇ ಸಿಎಂ ಅಭ್ಯರ್ಥಿ ಎಂಬ ಸಂದೇಶ ರವಾನಿಸಿದ್ದಾರೆ.

ಪಂಜಾಬ್‌ನಲ್ಲಿ 34 ಎಸ್‌ಸಿ ಮೀಸಲು ಕ್ಷೇತ್ರಗಳಿವೆ. ಶೇ.32ರಷ್ಟು ಸಂಖ್ಯೆಯ ದಲಿತ ಸಮುದಾಯವಿದೆ. ಅವರಲ್ಲಿ ಹೆಚ್ಚಿನವರು 2017ರಲ್ಲಿ ಆಪ್ ಪಕ್ಷಕ್ಕೆ ಮತ ಚಲಾಯಿಸಿದ್ದರು ಎಂಬ ವರದಿಯಿದೆ. ಆಪ್ ಚಿಹ್ನೆ ಪೊರಕೆಯಾಗಿದ್ದ ಕಾರಣಕ್ಕೂ ಬಹಳಷ್ಟು ದಲಿತರು ಅದು ನಮ್ಮದು ಎಂದುಕೊಂಡು ಬೆಂಬಲಿಸಿದ್ದರು. ಈ ಬೆಂಬಲ ಈಗಲೂ ಉಳಿದಿದೆ ಎನ್ನಲಾಗುತ್ತಿದ್ದರೂ, ಚನ್ನಿಯವರು ಸಹ ದಲಿತರಾದ್ದರಿಂದ ಕಾಂಗ್ರೆಸ್‌ಗೆ ಒಂದಷ್ಟು ದಲಿತ ಸಮುದಾಯದ ಮತಗಳು ಬರುವುದು ಗ್ಯಾರಂಟಿ.

ಇನ್ನು ಮೋದಿಯವರ ಭದ್ರತಾ ಲೋಪ ಆರೋಪದ ಸಂದರ್ಭದಲ್ಲಿ ಅದನ್ನು ಚನ್ನಿಯವರು ನಿಭಾಯಿಸಿದ ರೀತಿಗೆ ಒಂದು ದೊಡ್ಡ ವರ್ಗದಿಂದ ಪ್ರಶಂಸೆ ವ್ಯಕ್ತವಾಗಿತ್ತು. ಭದ್ರತಾ ಲೋಪ ಸಂಭವಿಸಿಲ್ಲ, ಮೋದಿಯವರ ಚುನಾವಣಾ ರ್‍ಯಾಲಿಗೆ ಜನ ಬಾರದೇ ಇದ್ದುದ್ದಕ್ಕೆ ಈ ನಾಟಕ ಆಡುತ್ತಿದ್ದಾರೆ ಎಂದು ಅವರು ಬಹಿರಂಗವಾಗಿ ಆರೋಪಿಸಿದ್ದರು. ಫ್ಲೈ ಓವರ್‌ನಲ್ಲಿ ಪ್ರತಿಭಟಿಸುತ್ತಿದ್ದರು ಎಂದು 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನ ಬಂಧಿಸಿದ್ದರು. ಮಾಧ್ಯಮಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದಲ್ಲದೆ, ಮಾಧ್ಯಮಗಳ ಎದುರೇ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಬಳಿ ತೆರಳಿ ಬಿಜೆಪಿ ಸದಸ್ಯರ ಕೈ ಹಿಡಿದು ಮಾತನಾಡಿಸುವ ಸಂಯಮ ತೋರಿದ್ದರು. ಬಿಜೆಪಿ ಪಂಜಾಬಿಯನ್ನರನ್ನು ಆರೋಪಿಗಳನ್ನಾಗಿಸುತ್ತಿದೆ ಎಂಬ ಭಾವನೆಗೆ ಪುಷ್ಟಿ ನೀಡಿ ಮಾಧ್ಯಮಗಳನ್ನು ನಿಭಾಯಿಸಿದ್ದರು. ಈ ಎಲ್ಲಾ ಘಟನೆಗಳ ಜೊತೆಗೆ ಅವರೊಬ್ಬ ಸಮರ್ಥ ಆಡಳಿತಗಾರ ಎಂಬ ಹೆಸರು ಅವರಿಗೆ ಧನಾತ್ಮವಾಗಿ ಕೆಲಸ ಮಾಡುತ್ತಿದೆ. ದೆಹಲಿ ರೈತ ಹೋರಾಟದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಸಮರ್ಪಕ ಪರಿಹಾರ, ಸರ್ಕಾರಿ ಉದ್ಯೋಗ ನೀಡುವುದು, ಹೊಸ ಯೋಜನೆಗಳನ್ನು ಘೋಷಿಸುವುದು ಸೇರಿ ಚನ್ನಿಯವರು ಅಲ್ಪಾವಧಿಯಲ್ಲಿ ಮುನ್ನಲೆಗೆ ಬಂದಿದ್ದಾರೆ.

ಚರಣ್‌ಜಿತ್ ಸಿಂಗ್ ಚನ್ನಿ

ಪಕ್ಷದ ಆಂತರಿಕ ಸಮೀಕ್ಷೆಗಳಲ್ಲಿ ಚನ್ನಿ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಕಾಂಗ್ರೆಸ್‌ನ ಕೆಲ ಮುಖಂಡರು ತಿಳಿಸಿದ್ದಾರೆ. ನಟ ಸೋನು ಸೂದ್‌ರವರ ಸಹೋದರಿ ಕಾಂಗ್ರೆಸ್ ಸೇರಿದ ನಂತರ ಸೋನು ಸೂದ್ ಸಹ ಚನ್ನಿ ಪರವಾಗಿ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಸನ್ನಿವೇಶಗಳು ಚನ್ನಿಯವರ ಪರವಾಗಿವೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಓಡುವ ಕುದುರೆಯ ಬೆನ್ನೇರಿದೆ. ಆದರೆ ತಾನು ಸಿಎಂ ಆಗಬೇಕು ಎಂದು ಕನಸು ಕಾಣುತ್ತಿರುವ ನವಜೋತ್ ಸಿಂಗ್ ಸಿಧು ಕಾಂಗ್ರೆಸ್‌ಗೆ ಮುಳುವಾಗುವ ಸಂಭವವಿದೆ. ಕಾಂಗ್ರೆಸ್ ಇನ್ನೂ ಪಕ್ಷದ ಸಿಎಂ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸದಿದ್ದರೂ ಚನ್ನಿ ಬಹುತೇಕ ಖಚಿತ ಅಭ್ಯರ್ಥಿ ಎನ್ನಲಾಗುತ್ತಿದೆ. ಒಂದು ಪಕ್ಷ ನವಜೋತ್ ಸಿಂಗ್ ಸಿಧು ಬಂಡಾಯವೆದ್ದಲ್ಲಿ ಅದು ಕಾಂಗ್ರೆಸ್ ಪಾಲಿಗೆ ಬಹುದೊಡ್ಡ ನಷ್ಟವಾಗಲಿದೆ.

ಆಪ್ ಈ ಬಾರಿಯೂ ಟ್ರೇನ್ ಮಿಸ್ ಮಾಡಿಕೊಳ್ಳಲಿದೆಯೇ?

ದೆಹಲಿಯ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಆಮ್ ಆದ್ಮಿ ಪಕ್ಷ 2017ರ ಪಂಜಾಬ್ ಚುನಾವಣೆಯಲ್ಲಿಯೂ ಅಧಿಕಾರ ಹಿಡಿಯುವ ಕನಸು ಕಂಡಿತ್ತು. ಉತ್ತಮ ಹೋರಾಟ ನೀಡಿದ ಆಪ್ ಮೊದಲ ಚುನಾವಣೆಯಲ್ಲಿಯೇ ಶೇ.23.80ರಷ್ಟು ಮತಗಳೊಂದಿಗೆ 20 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನದೊಂದಿಗೆ ಅಧಿಕೃತ ವಿರೋಧ ಪಕ್ಷವಾಯಿತು. ಅದಕ್ಕೂ ಮುಂಚೆ ಅಧಿಕಾರದಲ್ಲಿದ್ದ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಮೈತ್ರಿಕೂಟವನ್ನು ಮೂರನೇ ಸ್ಥಾನಕ್ಕೆ ತಳ್ಳಿತ್ತು. 2017ರಲ್ಲಿ ಆಪ್‌ಗೆ ಮುಳುವಾಗಿದ್ದು ನಾಯಕತ್ವದ ಮುಖ. ಆಗ ಆಪ್‌ಗೆ ಕೊನೆ ಕ್ಷಣದವರೆಗೂ ಮುಖ್ಯಮಂತ್ರಿ ಅಭ್ಯರ್ಥಿ ಸಿಕ್ಕಿರಲಿಲ್ಲ.

ಈ ಬಾರಿ ಭಗವಂತ್ ಮನ್‌ರವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಅಂತಿಮ ಕ್ಷಣದಲ್ಲಿ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಆಪ್ ಪ್ರಯತ್ನಿಸಿದೆ. ಇಷ್ಟು ದಿನ ತೆಗೆದುಕೊಂಡಿದ್ದಕ್ಕೆ ಬೇರೆ ಯಾರೂ ಸಿಗಲಿಲ್ಲ ಎಂಬುದೇ ಕಾರಣವಾಗಿದೆ. ಮನ್ ಇದ್ದುದರಲ್ಲೇ ವಾಸಿ ಎಂಬ ಅಂತಿಮ ಆಯ್ಕೆಯಾಗಿದೆ. ಕೆಲ ಸಮೀಕ್ಷೆಗಳು ಆಪ್ ಪರವಾಗಿಯೇ ಬಂದಿವೆ. ಉತ್ತಮ ವಾಗ್ಮಿಯೂ ಆದ ಭಗವಂತ್ ಮನ್‌ರನ್ನು ಪಂಜಾಬ್ ಜನ ತಮ್ಮ ಸಿಎಂ ಎಂದು ಸ್ವೀಕರಿಸುತ್ತಾರೆಯೇ ಎಂಬ ಸಂದೇಹ ಬಹಳಷ್ಟು ಜನರಿಗಿದೆ.

ಭಗವಂತ್ ಮನ್‌

ಇನ್ನೊಂದೆಡೆ ರೈತರು ಸ್ಥಾಪಿಸಿರುವ ಸಂಯುಕ್ತ ಸಮಾಜ್ ಮೋರ್ಚಾ ಪಕ್ಷವು ಆಪ್ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ, ರೈತರು ಆಪ್ ಬೆಂಬಲಿಸುತ್ತಾರೆ ಎಂಬ ಮಾತು ಸಹ ಹರಿದಾಡುತ್ತಿದೆ. ಇವೆಲ್ಲವೂ ಮತಗಳಾಗಿ ಎಷ್ಟು ಬದಲಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಅಮರಿಂದರ್ ಸಿಂಗ್ ಕಾಂಗ್ರೆಸ್‌ನ ಸಿಎಂ ಆಗಿದ್ದರೆ ಆಪ್‌ಗೆ ಈ ಚುನಾವಣೆಯಲ್ಲಿ ಬಹುಮತ ಸಾಧಿಸುವ ಸಾಧ್ಯತೆಯಿತ್ತು. ಆದರೆ ಅಮರಿಂದರ್ ಬದಲಿಗೆ ಚನ್ನಿ ಸಿಎಂ ಆದ ನಂತರ ಕಾಂಗ್ರೆಸ್‌ಗೆ ಹೊಸ ಶಕ್ತಿ ಬಂದಿದೆ. ಹಾಗಾಗಿ ಅಲ್ಪ ಅಂತರದಲ್ಲಿ ಆಪ್ ಈ ಬಾರಿಯೂ ಟ್ರೇನ್ ಮಿಸ್ ಮಾಡಿಕೊಳ್ಳುತ್ತದೆ ಎಂಬುದು ಕೆಲವು ರಾಜಕೀಯ ಪಂಡಿತರ ಅಭಿಮತ.

ಶಿರೋಮಣಿ ಅಕಾಲಿ ದಳದ ಸ್ಥಿತಿಯೇನು?

2012ರಲ್ಲಿ ಶೇ.34.73% ರಷ್ಟು ಮತಗಳೊಂದಿಗೆ 56 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರ ಹಿಡಿದಿದ್ದ ಅಕಾಲಿ ದಳ 2017ರ ವೇಳೆಗೆ ಕೇವಲ ಶೇ.25.24 ಮತಗಳೊಂದಿಗೆ 15 ಸ್ಥಾನಕ್ಕೆ ಕುಸಿಯುವ ಮೂಲಕ ಹೀನಾಯ ಸ್ಥಿತಿ ತಲುಪಿತ್ತು. ಈ ಬಾರಿ ಸುಧಾರಿಸಿಕೊಂಡು ಅಧಿಕಾರಕ್ಕೆ ಬರುವ ಕನಸು ಕಂಡಿದ್ದ ಪಕ್ಷಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದು ರೈತ ಹೋರಾಟ. ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಾಗ ಅಕಾಲಿ ದಳ ಆರಂಭದಲ್ಲಿ ಅದನ್ನು ಬೆಂಬಲಿಸಿತ್ತು. ಆದರೆ ಯಾವಾಗ ಪಂಜಾಬ್ ರೈತರು ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದರೋ ಅಕಾಲಿ ದಳ ಸಹ ಉಲ್ಟಾ ಹೊಡೆದು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ತಾನು ರೈತರ ಪರ ಎಂದು ಘೋಷಿಸಿತು. ಆದರೆ ರೈತರು ಅದನ್ನು ಒಪ್ಪಿಕೊಂಡಿದ್ದಾರೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಬಹುಮತ: ಶಿರೋಮಣಿ ಅಕಾಲಿ ದಳ & ಬಿಜೆಪಿ ಮೈತ್ರಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್

ಬಿಎಸ್‌ಪಿ ಪಕ್ಷವು ಅಕಾಲಿ ದಳದ ಜೊತೆ ಮೈತ್ರಿ ಮಾಡಿಕೊಂಡು ದಲಿತ ಮತಗಳ ಮೇಲೆ ಕಣ್ಣಿಟ್ಟಿದೆ. ಇದು ಅಕಾಲಿ ದಳಕ್ಕೆ ವರವಾಗಿ ಪರಿಣಮಿಸಿದೆ. ಅಲ್ಲದೆ ಕಾಂಗ್ರೆಸ್-ಆಪ್ ನಡುವಿನ ಮತ ವಿಭಜನೆಯಲ್ಲಿ ಲಾಭ ಪಡೆಯಲು ಅಕಾಲಿ ದಳ ನೋಡುತ್ತಿದೆ. ಆದರೂ ಅದಕ್ಕೆ ನಿರೀಕ್ಷಿತ ಸ್ಥಾನಗಳು ದಕ್ಕುವ ಸೂಚನೆಗಳು ಕಾಣುತ್ತಿಲ್ಲ.

ಬಿಜೆಪಿ ಮತ್ತು ಅಮರಿಂದರ್ – ಆಟಕ್ಕುಂಟು, ಲೆಕ್ಕಕ್ಕಿಲ್ಲ

ಕಳೆದ ಚುನಾವಣೆಯಲ್ಲಿ 3 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದ್ದ ಬಿಜೆಪಿ ಈ ಬಾರಿ ತಿಣಕಾಡಬೇಕಾದ ಪರಿಸ್ಥಿತಿಯಲ್ಲಿದೆ. ಈ ಚುನಾವನೆಯಲ್ಲಿ ಬಿಜೆಪಿ, ಅಕಾಲಿ ದಳ ಬಿಟ್ಟು ಅಮರಿಂದರ್ ಸಿಂಗ್ ಪಕ್ಷದ ಜೊತೆಗಿನ ಮೈತ್ರಿಯೊಂದಿಗೆ ಚುನಾವಣೆಗೆ ಹೋಗುತ್ತಿದೆ. ನಗರ ಭಾಗದಲ್ಲಿ ಒಂದಷ್ಟು ನೆಲೆ ಹೊಂದಿರುವ ಅದು ಗ್ರಾಮೀಣ ಭಾಗದಲ್ಲಿ ಪೂರಾ ನೆಲಕಚ್ಚಲಿದೆ ಎನ್ನಲಾಗುತ್ತಿದೆ.

ಇನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಕಾಂಗ್ರೆಸ್‌ನಿಂದ ಹೊರಬಂದು ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿರುವ ಕ್ಯಾಪ್ಟನ್ ಅಮರಿಂದರ್ ಸಹ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಆರಂಭದಲ್ಲಿ ಬಿಜೆಪಿ ಸೇರುವುದಿಲ್ಲ ಎಂದಿದ್ದ ಅವರು ಕೊನೆಗೆ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಅದು ಫಲ ಕೊಡುವುದು ದೂರದ ಮಾತಾಗಿದೆ.

ಸಂಯುಕ್ತ ಸಮಾಜ್ ಮೋರ್ಚಾ

ಸುಮಾರು 20 ರೈತ ಸಂಘಟನೆಗಳು ಸೇರಿ ಚುನಾವಣೆ ಹತ್ತಿರದಲ್ಲಿ ಸಂಯುಕ್ತ ಸಮಾಜ್ ಮೋರ್ಚಾ ಎಂಬ ಪಕ್ಷ ಸ್ಥಾಪಿಸಿದ್ದರೂ ಅದು ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ. ಏಕೆಂದರೆ ರೈತ ಹೋರಾಟ ಮುನ್ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ ಇದನ್ನು ಬೆಂಬಲಿಸಿಲ್ಲ. ಇದಕ್ಕೆ ದೊಡ್ಡ ನಾಯಕರಿಲ್ಲ ಮತ್ತು ಪಂಜಾಬ್‌ನಾದ್ಯಂತ ನೆಲೆ ಇಲ್ಲ ಎನ್ನುತ್ತಾರೆ ಬಲ್ಜಿತ್ ಸಿಂಗ್.

ಬಹುಮತ: ಕಾಂಗ್ರೆಸ್ ಮುಖ್ಯಮಂತ್ರಿ: ಅಮರಿಂದರ್ ಸಿಂಗ್

ಅತಂತ್ರ ವಿಧಾನಸಭೆಯ ಸಾಧ್ಯತೆ?

117 ಕ್ಷೇತ್ರಗಳ ಪಂಜಾಬ್‌ನಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಆಪ್ ನಡುವೆ ನೇರ ಪೈಪೋಟಿ ಇರಲಿದೆ. ಕಾಂಗ್ರೆಸ್‌ಗೆ ಹೆಚ್ಚಿನ ಸಾಧ್ಯತೆಯಿದ್ದರೂ ಚನ್ನಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಲ್ಲಿ ನವಜೋತ್ ಸಿಂಗ್ ಸಿಡಿದೇಳುವ ಸಾಧ್ಯತೆ ಇದೆ. ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿ ಅಭ್ಯರ್ಥಿ ಎಂದಾದರೂ ಅದು ಸಹ ಕಾಂಗ್ರೆಸ್‌ಗೆ ಒಳ್ಳೆಯದು ಮಾಡುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಬಾರಿ ಯಾವೊಂದು ಪಕ್ಷವೂ ಬಹುಮತ (59 ಸ್ಥಾನಗಳನ್ನು ಗೆಲ್ಲಬೇಕು) ಗಳಿಸುವುದು ಕಷ್ಟ ಎನ್ನಲಾಗುತ್ತಿದೆ. ಹಾಗಾಗಿ ಅತಂತ್ರ ವಿಧಾನಸಭೆ ಸಾಧ್ಯತೆಯನ್ನು ತಳ್ಳ ಹಾಕುವಂತಿಲ್ಲ. ಆದರೆ ಇತ್ತೀಚೆಗೆ ನಡೆದ ಚಂಢೀಗಡ ನಗರಪಾಲಿಗೆ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಿದ್ದ ಆಪ್ (14) ಮತ್ತು 8 ಸ್ಥಾನಗಳಿಸಿದ್ದ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿಲ್ಲ. ಹಾಗಾಗಿ 12 ಸ್ಥಾನ ಗಳಿಸಿದ್ದ ಬಿಜೆಪಿ ತೆರೆಮರೆಯಲ್ಲಿ ಅಧಿಕಾರ ಹಿಡಿದಿದೆ. ಆದರೆ ವಿಧಾನಸಭೆಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಪಂಜಾಬ್ ಚುನಾವಣೆ: ಸಂಸದ ಭಗವಂತ್ ಮಾನ್ ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...