’ಎನ್ನನ್ನೇ ಕೌಂಟರ್ ಮಾಡತೀಯಾ, ನೀನು ಕೌಂಟ್ ಆಗದಂಗ ಮಾಡತೀನಿ’
ಸೈಬರಾಬಾದು ಪೊಲೀಸರು ಪಶುವೈದ್ಯರ ಮೇಲೆ ನಡೆಸಿದ ಅತ್ಯಾಚಾರ, ಬರ್ಬರ ಕೊಲೆ ಹಾಗೂ ದಹನದ ಆರೋಪಿಗಳನ್ನು ನೇರ ಮುಖಾಮುಖಿಯಲ್ಲಿ ಕೊಂದು ಹಾಕಿದ್ದು ಅದಕ್ಕೆ ಅವರಿಗೆ ಷಹಬ್ಬಾಸುಗೀರಿ, ಆಫ್ ಸೀಸನ್ ರಕ್ಷಾ ಬಂಧನ ಹಾಗೂ ಪುಷ್ಪವೃಷ್ಟಿ ಎಲ್ಲಾ ಜೋರು ನಡದದ. ಹೈದರಾಬಾದಿಗೆ ಹೋಗಲಾರದವರು ಅಲ್ಲಿನ ಪೊಲೀಸರಿಗೆ ವಾಟ್ಸಪ್ಪಿನಿಂದನ ಕಾಲು ಬೀಳಲಿಕ್ಕೆ ಹತ್ಯಾರ.
“ಆ ಘಟನಾ ಭಾಳ ಕ್ರೂರ ಇತ್ತು. ಆ ಅಪರಾಧಿಗಳು ಕ್ಷಮೆಗೆ ಅರ್ಹರಿರಲಿಲ್ಲ. ಕೋರ್ಟು, ಕಚೇರಿ ಅಂತ ಯಾವಾ ಕಾಯತಾನ? ಅದಕ್ಕೆ ಸಾಕ್ಷಿ ಹುಡುಕುವುದು ಕಷ್ಟ ಇತ್ತು. ಅಪರಾಧಕ್ಕ ಒಳಗಾದವಳು ಜೀವಂತ ಉಳಿಯಲಿಲ್ಲ. ಭಾರತೀಯ ಸಾಕ್ಷಿ ಕಾನೂನು ಪ್ರತ್ಯಕ್ಷ ಸಾಕ್ಷಿಗಳನ್ನಷ್ಟ ನಂಬತದ. ಅದಕ್ಕ ಹಂಗ ಮಾಡಬೇಕಾತು” ಅಂತ ಹೇಳೋರು ಇದ್ದಾರ.
“ನಮ್ ದೇಶದಾಗ ಇರೋವೆಲ್ಲಾ ಆ ಬ್ರಿಟಿಷರ ಕಾಲದ ಅಪರಾಧಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ, ಸಾಕ್ಷಿ ಕಾಯಿದೆ. ಅವುಗಳಿಂದ ಎಲ್ಲಾ ನ್ಯಾಯ ಸಿಗೋದಿಲ್ಲ” ಅಂತ ಅವಲತ್ತುಗೊಳ್ಳೋರು ಅವನ್ನ ಸರ್ವಮಾನ್ಯ ಸಂಸದರು ಬದಲಾಯಿಸಬೇಕು ಅಂತ ಯಾಕ ಕೇಳಂಗಿಲ್ಲಾ? ಎಪ್ಪತ್ತು ವರ್ಷದ ನಾಗರಿಕತೆ ಕಾಯಿದೆ, ಕಾಶ್ಮೀರದ ಅಧಿನಿಯಮಗಳು, ಐವತ್ತು ವರ್ಷದ ಯೋಜನಾ ಆಯೋಗ, ಸಂಖ್ಯಾಶಾಸ್ತ್ರದ ಆಯೋಗ ಮುಂತಾದವನ್ನೆಲ್ಲಾ ನಮ್ಮ ಘನ ಸರಕಾರ ಒರಿಸಿ ಒಗೀತದ ಅಂದರ ಹೊತ್ತಿ ಉರಿತಾ ಇರೋ ಸಮಸ್ಯೆಗಳಿಗೆ ಪರಿಹಾರ ಯಾಕ ಕಂಡುಕೋಬಾರದು?
“ನಮ್ಮಲ್ಲೆ ನ್ಯಾಯಾಧೀಶರ ಸಂಖ್ಯೆ ಕಮ್ಮಿ, ಪೊಲೀಸರ ಸಂಖ್ಯೆ ಕಮ್ಮಿ. ಪೊಲೀಸರಾಗ, ವಕೀಲರು ಮತ್ತ ನ್ಯಾಯಾಧೀಶರಾಗ ಹೆಣ್ಣುಮಕ್ಕಳ ಸಂಖ್ಯೆ ಇನ್ನೂ ಕಮ್ಮಿ” ಅಂದರ ಹೆಚಿಗೆ ಸಿಬ್ಬಂದಿ ನೇಮಕ ಮಾಡರಿ, ಯಾರು ಬ್ಯಾಡಂದಾರು? “ಬೆಳೆಯೋ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಠಾಣಾಗಳಿಲ್ಲ, ಅವರಿಗೆ ಆಧುನಿಕ ತಂತ್ರಜ್ಞಾನ ಇಲ್ಲ, ಅಪರಾಧ ಪ್ರಯೋಗಾಲಯಗಳು ಇಲ್ಲ, ನ್ಯಾಯಾಲಯಗಳು ಕಮ್ಮಿ”, ಅಂದರ ಅವನ್ನು ಸುರು ಮಾಡರಿ.
ಒಂದು ಸ್ವಲ್ಪ ಮೂರ್ತಿ ಕೂಡಸೋದು, ಭರ್ರ್ ಅಂತ ದೇಶ-ದೇಶ ತಿರಗ್ಯಾಡೋದು, ಸಭೆ ಸಮಾರಂಭ ಮಾಡೋದು ಕಡಮಿ ಮಾಡರಿ. ಅತಿ ಶ್ರೀಮಂತರಿಗೆ ತೆರಿಗೆ ವಿನಾಯಿತಿ ಕೊಡೋದು ನಿಲ್ಲಸರಿ, ಯಾರ ಬ್ಯಾಡಂದಾರು? ಆದರ ಈ ಥರಾ ಉಲ್ಟಾ ಮಾತಾಡೋ ವಿದ್ರೋಹಿ ಚಿಂತಕರು ಈಗ ಕಮ್ಮಿ ಆಗ್ಯಾರ.
ಇರಲಿ ಈ ತರಹದ ನಕಲಿ ಮುಖಾಮುಖಿಗಳ ಬಗ್ಗೆ ನಮ್ಮ ಸರ್ವೋಚ್ಚ ನ್ಯಾಯಾಲಯ ಏನು ಹೇಳೇದ ಅಂತ ನೋಡೋಣು.
ಪ್ರಜೆಗಳ ಸಾಮಾಜಿಕ ಹಕ್ಕುಗಳ ಸಂಘಟನೆ ಪ್ರಕರಣದಾಗ ನ್ಯಾಯಮೂರ್ತಿ ನಾರಿಮನ್ ಹಾಗೂ ಲೋಧಾ ಅವರು “ನಮ್ಮ ಸಂವಿಧಾನ ಕೆಲವು ಹಕ್ಕುಗಳನ್ನು ಪ್ರಜೆಗಳಿಗೆ ಕೊಡಲಾಗಿದೆ. ಕೆಲವೇ ಕೆಲವು ಹಕ್ಕುಗಳನ್ನು ಎಲ್ಲರಿಗೂ ಕೊಟ್ಟಿದೆ. ಅದರಲ್ಲಿ ಜೀವ, ಆತ್ಮಗೌರವ ಹಾಗೂ ಸ್ವಾತಂತ್ರ್ಯದ ಹಕ್ಕು ಮುಖ್ಯ. ಈ ಹಕ್ಕುಗಳನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯ ಇಲ್ಲ. ಸರಕಾರವೂ ಕಿತ್ತುಕೊಳ್ಳಲಿಕ್ಕೆ ಬರೋದಿಲ್ಲ. ದೇಶದ್ರೋಹಿಗಳು, ಶತ್ರುದೇಶದವರು, ದೇಶದ ವಿರೋಧಿಗಳು ಅನ್ನಿಸಿಕೊಂಡವರನ್ನು ಸಹಿತ ನ್ಯಾಯಿಕ ಪ್ರಕ್ರಿಯೆಗೆ ಒಳಪಡಿಸಬೇಕು,” ಅಂತ ಹೇಳಿದರು.
ಅದರಲ್ಲಿ ಪ್ರಮುಖವಾದದ್ದು- ಸಂವಿಧಾನದ 21ನೇ ಕಲಮು. ಅದು ಹೀಗಿದೆ – “ಕಾನೂನುರೀತ್ಯಾ ಸಿದ್ಧಪಡಿಸಿದ ಪ್ರಕ್ರಿಯೆಯ ಹೊರತುಪಡಿಸಿ ಯಾವುದೇ ವ್ಯಕ್ತಿಯ ಪ್ರಾಣ ಹಾಗೂ ಸ್ವಾತಂತ್ರ್ಯದ ಹರಣ ಸಲ್ಲದು”. ಇದನ್ನು ಯಾರೂ ಮೀರಬಾರದು ಅಂತ ಅದರಾಗ ಅದ. ಅದು ತೆಲಂಗಾಣ ಪೊಲೀಸರಿಗೂ ಅನ್ವಯಸತದ ಅಂತ ಬ್ಯಾರೆ ಹೇಳಬೇಕಿಲ್ಲ.
ಓಂಪ್ರಕಾಶ ಪ್ರಕರಣ ಹಾಗೂ ಪ್ರಕಾಶ ಕದಂ ಪ್ರಕರಣದಾಗ ಕೋರ್ಟು ಸರಕಾರಕ್ಕೆ ಚಾಟಿ ಏಟು ನೀಡಿತು. ಕದಂ ಪ್ರಕರಣದಾಗ ನ್ಯಾಯಮೂರ್ತಿ ಮಾಕಾರ್ಂಡೇಯ ಕಟ್ಜು ಹಾಗೂ ಜಿ.ಎಸ್ ಶರ್ಮಾ ಅವರು ಬಂದೂಕು ಕುದುರೆ ಒತ್ತಿ ಮಜಾ ನೋಡುವ ಪೊಲೀಸರಿಗೆ ಗಲ್ಲು ಕಂಬ ಕಾದಿದೆ ಅಂತ ಹೇಳಿದರು. ಜಸ್ಪಾಲ್ ಸಿಂಗ್ ಪ್ರಕರಣದಾಗ ನ್ಯಾಯಾಧೀಶರಾದ ಮದನ ಲೋಕೂರ ಹಾಗೂ ಉದಯ ಲಲಿತ ಅವರು “ನ್ಯಾಯಿಕ ಪ್ರಕ್ರಿಯೆಯ ಭಾಗವಾಗಿರುವ ಪೊಲೀಸರೇ ಹೀಗೆ ಮಾಡಿದರೆ ಹೇಗೆ? ಅವರಿಗೆ ನ್ಯಾಯಾಲಯಗಳ ಮೇಲೆ ವಿಶ್ವಾಸ ಇಲ್ಲ ಅಂತ ಹೇಳಿ ಅವರೇ ಆರೋಪ ಮಾಡುವವರು, ತನಿಖೆ ಮಾಡುವವರು, ನ್ಯಾಯಾಧೀಶರು ಹಾಗೂ ಕುಣಿಕೆ ತೊಡಿಸುವವರು ಆದರೆ ಹೇಗೆ?. ಇದು ಅಕ್ಷಮ್ಯ. ನಾಗರಿಕ ಸಮಾಜದಲ್ಲಿ ಇಂತಹ ಹತ್ಯೆಗಳಿಗೆ ಸ್ಥಾನ ಇರಲಿಕ್ಕೆ ಸಾಧ್ಯವೇ ಇಲ್ಲ” ಅಂದರು.
ನ್ಯಾಯದಾನಾತೀತ ಕೊಲೆಗಳ ಬಲಿಪಶುಗಳ ಸಂಘ ಅಂತ ಒಂದದ. ಅವರು ವಿವಿಧ ರಾಜ್ಯಗಳ ಪೊಲೀಸರು ಮಾಡಿದ ಸುಮಾರು ಐದು ಸಾವಿರ ಇಂತಹ ಹತ್ಯೆಗಳ ಮಾಹಿತಿ ಜಮಾ ಮಾಡಿ ಸುಪ್ರೀಮ ಕೋರ್ಟಿಗೆ ಕಳಿಸಿದರು. ಆಗ ಅದು ಕೇಂದ್ರದ ಪ್ರತಿಕ್ರಿಯೆ ಕೋರಿತು. ಇನ್ನು ಮುಂದೆ ಇಂಥವುಗಳನ್ನು ತಡೆಯಲು ಕ್ರಮ ಕೈಕೊಳ್ಳುತ್ತೇವೆ ಅಂತ ಕೇಂದ್ರ ಕೋರ್ಟಿಗೆ ತಿಳಿಸಿತು. ಆದರ ಇದು ಇನ್ನೂ ಜಾರಿ ಆದಂಗಿಲ್ಲ.
ನಮ್ಮ ದೇಶದಾಗ ಸಂವಿಧಾನ ಅಂತ ಒಂದು ಅದ. ಅದು ಇರೋ ತನಕಾ ಅಂತೂ ನಾವು ಅದನ್ನ ಪಾಲಿಸಬೇಕು. ಇನ್ನೂ ಒಂದು ಹೆಜ್ಜೆ ಮುಂದ ಹೋಗಿ ಹೇಳಬೇಕಂದರ ಮಾನವೀಯ ಮೌಲ್ಯಗಳನ್ನ ಸಂವಿಧಾನದಾಗ ಬರೆಯದೇ ಇದ್ದರೂ ಪಾಲಿಸಬೇಕು.
ಇಂದಿರಾ, ನೆಹರೂ ಗಾಂಧಿ ವಿರುದ್ಧ ರಾಜನಾರಾಯಣ ಅನ್ನೋ ಪ್ರಕರಣದಾಗ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಏಚ್.ಆರ್ ಖನ್ನಾ ಅವರು ಇತರ ನ್ಯಾಯಾಧೀಶರಿಗಿಂತ ವಿಭಿನ್ನ ತೀರ್ಪು ನೀಡಿದರು. ಆ ಒಂಟಿ ದನಿ ಈಗ ಭಾರತೀಯ ನ್ಯಾಯಿಕ ಇತಿಹಾಸದಾಗ ದಾಖಲು ಆಗೇದ.
“ಸಮಾನತೆ, ಭ್ರಾತೃತ್ವ, ನ್ಯಾಯದಾನದ ಮೂಲಭೂತ ತತ್ವಗಳು ಹಾಗೂ ಪಾರದರ್ಶಕತೆ ಇವೆಲ್ಲ ನಾಗರಿಕ ಸಮಾಜದ ಲಕ್ಷಣಗಳು. ಇಂತಹ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎನ್ನುವುದು ನಾಗರಿಕ ಸಮಾಜದ ಕರ್ತವ್ಯ. ಇವುಗಳನ್ನು ಪಾಲಿಸಬೇಕು ಎಂದು ನಮ್ಮ ಸಂವಿಧಾನದಲ್ಲಿ ಬರೆದಿದ್ದ ಮಾತ್ರಕ್ಕೆ ನಾವು ಅವುಗಳನ್ನು ಜಾರಿಮಾಡಬೇಕೆಂತಿಲ್ಲ. ಇವುಗಳನ್ನು ಪಾಲಿಸುವುದು ನಾಗರಿಕ ಸಮಾಜದ ಪವಿತ್ರ ಕರ್ತವ್ಯಗಳಲ್ಲಿ ಒಂದು. ಇದು ನಾವು ಮಾಡಲೇ ಬೇಕಾದ ಕೆಲಸ. ಇದಕ್ಕೆ ನಾವು ಸಬೂಬು ಹೇಳಬಾರದು” ಅಂತ.
ಇದು ನಮಗೆ ನೆನಪಿರಲಿ. “ಸಂವಿಧಾನವೇ ಪರಮ ಶ್ರೇಷ್ಠ, ಅದನ್ನು ಬಿಟ್ಟು ನಾವು ಆ ಕಡೆ ಈ ಕಡೆ ಮಿಸುಕಾಡಬಾರದು” ಅಂತ ಕೂಗುವವರು ಹಾಗೂ “ಸಂವಿಧಾನವೇನು ಮಹಾ? ಅದೊಂದು ಪುಸ್ತಕ ಅಷ್ಟೇ, ಅದನ್ನು ನಾವು ಹೇಗೆ ಬೇಕಾದರೂ ಬದಲಾಯಿಸಬಹುದು. ಅದನ್ನು ಬದಲಾಯಿಸಲಿಕ್ಕೆಯೇ ನಾವು ಬಂದಿರುವುದು” ಅಂತ ಅನ್ನುವವರು, ಇಬ್ಬರೂ ಈ ನಿನ್ನೆಯ ನನ್ನಿಯನ್ನ ಮರಿಲಾರದಂಗ ಇರಲಿ.
ಕನ್ನಡದ ಪತ್ರಿಕೆ, ಠೀವಿ ಚಾನೆಲ್ಲುಗಳಲ್ಲಿ `ಎನಕೌಂಟರ್’ ಅನ್ನೋ ತಮಗ ಪ್ರಾಪರ್ ಚಾನಲ್ಲಿಂದ ದತ್ತವಾದ ಶಬ್ದ ಬಳಸಿದರು. ಅದರ ಬದಲೀ ಈ ಕೆಳಗಿನವು ಯಾವು ಆದರೂ ಉಪಯೋಗಿಸಬಹುದಿತ್ತು- ‘ಖೋಟಾ ಸೆಣಸಾಟ’, ’ಕಣ್ಕಟ್ಟಿನ ಕಾದಾಟ’, ‘ನಕಲಿ ಪ್ರತಿಘಾತ’, ’ಗಿಲೀಟಿನ ಗಲಾಟೆ’, ‘ಮೋಸದ ಮಾರಾಮಾರಿ’ ಇತ್ಯಾದಿ. ಅವಾಗ ಅದರ ಖರೇ ತಥ್ಯ ಹೊರಗ ಬರತಿತ್ತು.