Homeಮುಖಪುಟಮೀಸಲಾತಿ ರದ್ದುಗೊಳಿಸಲು ಹೊರಟಿರುವ ಸ್ಥಾಪಿತ ಹಿತಾಸಕ್ತಿಗಳು

ಮೀಸಲಾತಿ ರದ್ದುಗೊಳಿಸಲು ಹೊರಟಿರುವ ಸ್ಥಾಪಿತ ಹಿತಾಸಕ್ತಿಗಳು

- Advertisement -
- Advertisement -

ಭಾರತೀಯ ಸಂವಿಧಾನದ 14ನೇ ಪರಿಚ್ಛೇದ ಕಾನೂನಿನ ಮುಂದೆ ಸಮಾನತೆ ಮತ್ತು ಎಲ್ಲರಿಗೂ ಕಾನೂನುಗಳ ಸಮಾನ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಅಂತೆಯೇ ಪರಿಚ್ಛೇದ 16(1) ಮತ್ತು 16(2) ಭಾರತೀಯ ಪ್ರಜೆಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸಮಾನ ಅವಕಾಶಗಳನ್ನು ಒದಗಿಸಬೇಕೆಂದು ಪ್ರತಿಪಾದಿಸುತ್ತದೆ. ಸಂವಿಧಾನ ಪರಿಚ್ಛೇದ 15(1) ಸಾಮಾನ್ಯವಾಗಿ ನಾಗರೀಕರ ವಿರುದ್ಧ ಧರ್ಮ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ನಿಷೇಧಿಸುತ್ತದೆ. ಭಾರತೀಯ ಸಂವಿಧಾನದ ಪೀಠಿಕೆ ಮತ್ತು ರಾಜ್ಯ ನಿರ್ದೇಶಕ ತತ್ವಗಳು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವ ಮೌಲ್ಯಗಳು ಮತ್ತು ಎಲ್ಲ ಜೀವಿಗಳನ್ನು ಸಮನಾಗಿ ಪ್ರೀತಿಸುವ ಮತ್ತು ರಕ್ಷಿಸುವ ನೈಸರ್ಗಿಕ ನಿಯಮಗಳಿಗೆ ಅನುಸಾರವಾಗಿ ದಮನಿತರನ್ನು ಮೇಲೆತ್ತುವ ನಿಟ್ಟಿನಲ್ಲಿ ಮೀಸಲಾತಿ ಸೇರಿದಂತೆ ವಿಶೇಷ ರಕ್ಷಣಾತ್ಮಕ ಹಾಗೂ ಉತ್ತೇಜನಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂಬ ನಿರ್ದೇಶನ ನೀಡುತ್ತವೆ.

ಹಿಂದಿನ ಮೈಸೂರು ರಾಜ್ಯ ಸರ್ಕಾರ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ದುರ್ಬಲ ವರ್ಗಗಳಿಗೆ ಶೇ.68ರಷ್ಟು ಮೀಸಲಾತಿ ಸೌಲಭ್ಯವನ್ನು ನೀಡಬೇಕೆಂದು ನಿರ್ಧರಿಸಿದ ಹಿನ್ನೆಲೆಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ಪಂಚ ನ್ಯಾಯಾಧೀಶರ ಪೀಠ 1962ರಲ್ಲಿ ಎಮ್.ಆರ್.ಬಾಲಾಜಿ v/s ಮೈಸೂರು ರಾಜ್ಯಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಂವಿಧಾನದ ಪರಿಚ್ಛೇದ 15(4) ದುರ್ಬಲ ವರ್ಗಗಳನ್ನು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಬಲೀಕರಣಗೊಳಿಸುವ ನಿಬಂಧನೆಯಾಗಿದ್ದು ಯಾವುದೇ ಬಾಧ್ಯತೆಯನ್ನು ಸರ್ಕಾರಗಳ ಮೇಲೆ ಹೇರುವುದಿಲ್ಲವಾದ್ದರಿಂದ ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ವಿವೇಚನೆಗೆ ಬಿಟ್ಟಿರುವ ಅಂಶವನ್ನು ಪ್ರಧಾನವಾಗಿ ಎತ್ತಿ ಹಿಡಿದಿದೆ. 1967ರಲ್ಲಿ ಸಿ.ಎ.ರಾಜೇಂದ್ರನ್ v/s ಭಾರತ ಸರ್ಕಾರಕ್ಕೆ ಸಂಬAಧಿಸಿದ ಪ್ರಕರಣವೊಂದರಲ್ಲಿ ಸರ್ವೋಚ್ಛ ನ್ಯಾಯಾಲಯದ ಪಂಚ ನ್ಯಾಯಾಧೀಶರ ಪೀಠ ಮೇಲ್ಕಂಡ ನ್ಯಾಯಾಲಯದ ತೀರ್ಪನ್ನು ಸರಿಯೆಂದು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಎತ್ತಿ ಹಿಡಿದಿದೆ.

ಭಾರತೀಯ ಸಂವಿಧಾನ ನಾಗರೀಕರಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲವಾದರೂ ಮೀಸಲಾತಿ ನೀಡಲು ಸರ್ಕಾರಕ್ಕೆ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ವಿತರಣೆ ಕುರಿತಂತೆ ವಿವೇಚನಾಧಿಕಾರವನ್ನು ನೀಡುವ ಒಂದು ನಿಬಂಧನೆಯಾಗಿದೆ. ಇದರ ಹಿನ್ನೆಲೆಯಲ್ಲಿಯೇ ಮೀಸಲಾತಿ ಕುರಿತ ಹಲವಾರು ತೀರ್ಪುಗಳು ಸರ್ವೋಚ್ಛ ನ್ಯಾಯಾಲಯದಿಂದ ಇಂದ್ರ ಸಾಹ್ನಿ v/s ಭಾರತ ಸರ್ಕಾರ (1992) ಮತ್ತು ಎಮ್.ನಾಗರಾಜ್ v/s ಭಾರತ ಸರ್ಕಾರ 2006 ಮೊದಲಾದ ಪ್ರಕರಣ ವಿಚಾರಣೆ ಸಂದರ್ಭಗಳಲ್ಲಿ ಮೂಡಿಬಂದಿವೆ.

ಹಿಂದಿನ ಉತ್ತರಪ್ರದೇಶ ಸರ್ಕಾರ 1994ರಲ್ಲಿ ಸಾರ್ವಜನಿಕ ಸೇವೆಯಲ್ಲಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯವನ್ನು ನೀಡಿ ವಿಧೇಯಕವೊಂದನ್ನು ಜಾರಿಗೊಳಿಸಿತು. ಇದಕ್ಕೆ ಅನುಗುಣವಾಗಿ ಉತ್ತರ ಪ್ರದೇಶದಲ್ಲಿ ದುರ್ಬಲ ವರ್ಗಗಳಿಗೆ ಬಡ್ತಿ ಮೀಸಲಾತಿ ಸೌಲಭ್ಯ ಮುಂದುವರೆಯಿತು. 2001ರಲ್ಲಿ ಉತ್ತರಾಖಂಡ ರಾಜ್ಯ ಅಸ್ತಿತ್ವಕ್ಕೆ ಬಂದ ಮೇಲೆ ಕೆಲವಾರು ಮಾರ್ಪಾಡುಗಳೊಂದಿಗೆ ಮೀಸಲು ಸೌಲಭ್ಯವನ್ನು ಅಲಕ್ಷಿತ ವರ್ಗಗಳಿಗೆ ಮುಂದುವರೆಸಲಾಯಿತು. ಉತ್ತರಾಖಂಡ ಉಚ್ಛನ್ಯಾಯಾಲಯ 2011ರಲ್ಲಿ ಇಂತಹ ಸೌಲಭ್ಯ ಅಸಾಂವಿಧಾನಿಕವೆಂದು ತೀರ್ಪು ನೀಡಿತು. 2012ರಲ್ಲಿ ಉತ್ತರಾಖಂಡ ರಾಜ್ಯ ಸರ್ಕಾರ ಈ ತೀರ್ಪಿಗೆ ಅನುಗುಣವಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಇದುವರೆಗೂ ನೀಡಲಾಗಿದ್ದ ಮೀಸಲು ಸೌಲಭ್ಯವನ್ನು ಹಿಂಪಡೆಯಿತು. ಇಂತಹ ತೀರ್ಮಾನವನ್ನು ಸಾಂವಿಧಾನಿಕ ವಿಧಿ ವಿಧಾನಗಳು ಮತ್ತು ಸರ್ವೋಚ್ಛ ನ್ಯಾಯಾಲಯದ ಹಿಂದಿನ ತೀರ್ಪುಗಳ ಆಧಾರದ ಮೇಲೆ ಉತ್ತರಾಖಂಡ ಸರ್ವೋಚ್ಛ ನ್ಯಾಯಾಲಯ ಅಮಾನ್ಯ ಮಾಡಿತು.

ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮನುವಾದಿಗಳ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರ 2012ರಲ್ಲಿ ತಾಳಿದ್ದ ನಕಾರಾತ್ಮಕ ಹಾಗೂ ಅಸಾಂವಿಧಾನಿಕ ನಿಲುವನ್ನು ಉಚ್ಛನ್ಯಾಯಾಲಯ ಸ್ಪಷ್ಟವಾಗಿ ರದ್ದುಗೊಳಿಸಿದ್ದ ವಿಷಯ ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ಪರಿಶೀಲನೆಗೆ ಒಳಪಟ್ಟಿತ್ತು. ಫೆಬ್ರವರಿ 08, 2020ರಂದು ಸರ್ವೋಚ್ಛ ನ್ಯಾಯಾಲಯ ಉತ್ತರಾಖಂಡ ಲೋಕೋಪಯೋಗಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಹಾಯಕ ಅಭಿಯಂತ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸಂವಿಧಾನ ಪರಿಚ್ಛೇದ 16(4) ಮತ್ತು 16(4ಎ) ಅನ್ವಯ ಮೀಸಲಾತಿ ಪ್ರಜೆಗಳ ಮೂಲಭೂತ ಹಕ್ಕಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ನಿಜಕ್ಕೂ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಆಶಯಗಳಿಗೆ ತದ್ವಿರುದ್ಧವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಪದೋನ್ನತಿ ವಿಷಯಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳೇ ಸೂಕ್ತ ತೀರ್ಮಾನವನ್ನು ಕೈಗೊಳ್ಳಬಹುದೆಂದು ಹೇಳಿರುವುದರ ಹಿಂದೆ ಆಳುವ ವರ್ಗ ಮತ್ತು ಸರ್ಕಾರಗಳ ಗೌಪ್ಯ ಕಾರ್ಯಸೂಚಿ ಎದ್ದು ಕಾಣುತ್ತದೆ. ಇದರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಪ್ರಾದೇಶಿಕ ಪಕ್ಷಗಳ ನಾಯಕರು, ಕಮ್ಯುನಿಷ್ಟರು ಮತ್ತು ಪ್ರಗತಿಪರರು ಮಂಡಿಸಿರುವ ಪ್ರತಿಕ್ರಿಯೆ ಮಾಧ್ಯಮಗಳು ಮತ್ತು ನಾಗರೀಕ ಸಮಾಜಗಳಲ್ಲಿ ಗಂಭೀರ ಚರ್ಚೆಗೆ ಒಳಪಟ್ಟಿವೆ.

ನ್ಯಾಯಾಲಯಗಳು ರಾಜ್ಯ ಸರ್ಕಾರಗಳಿಗೆ ಮೀಸಲಾತಿ ಸಂಬಂಧ ಯಾವುದೇ ನಿರ್ದೇಶನ ನೀಡುವ ಪರಮಾಧಿಕಾರ ಹೊಂದಿಲ್ಲ. ಸಂಬಂಧಪಟ್ಟ ರಾಜ್ಯ ಸರ್ಕಾರಗಳು ವಿವೇಚನೆಯಿಂದ ಸಾಮಾಜಿಕ ನ್ಯಾಯದ ಆಶಯದಡಿ ಮೀಸಲಾತಿ ಸೌಲಭ್ಯ ನೀಡಿದರೆ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂಬ ನಿಲುವನ್ನು ಸರ್ವೋಚ್ಛ ನ್ಯಾಯಾಲಯ ಅಭಿವ್ಯಕ್ತಗೊಳಿಸಿರುವುದು ಇಂದು ಭಾರತವನ್ನು ಆಳುತ್ತಿರುವ ಮನುವಾದಿಗಳಿಗೆ ದಮನಿತ ಜನವರ್ಗಗಳ ಮೀಸಲಾತಿ ಸೌಲಭ್ಯವನ್ನು ಕಸಿದುಕೊಳ್ಳಲು ಹೊಸ ಅವಕಾಶವನ್ನು ನೀಡಿದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಇಂತಹ ಹುನ್ನಾರಗಳ ರೂವಾರಿ ಇವರೇ ಎಂಬ ಬಲವಾದ ಗುಮಾನಿ ಸಾರ್ವಜನಿಕರಿಗೆ ಹಾಗೂ ದಮನಿತ ವರ್ಗಗಳಿಗೆ ಬಂದಿರುವುದು ಸಹಜವಾಗಿದೆ.

ರಾಜ್ಯ ನಿರ್ದೇಶಕ ತತ್ವಗಳು ನ್ಯಾಯೋಚಿತ ಹಾಗೂ ಸಮರ್ಥನೀಯ ಹಕ್ಕುಗಳಲ್ಲವೆಂಬ ಧೋರಣೆ ಹಾಗೂ ನಡವಳಿಕೆಗಳು ಇದುವರೆಗೂ ಮುಂದುವರೆಯಲು ಸಾಮಾಜಿಕ ನ್ಯಾಯ ವಿರೋಧಿ ಸ್ಥಾಪಿತ ಹಿತಾಸಕ್ತಿಗಳ ಹುನ್ನಾರ ಕಾರಣವಾಗಿದೆ. ಇದರಿಂದಾಗಿ ಇಂತಹ ವೈಪರೀತ್ಯಗಳು ಮತ್ತು ಅಸಮರ್ಪಕತೆಗಳು ನ್ಯಾಯಾಲಯಗಳ ತೀರ್ಪುಗಳಲ್ಲಿ ಮೂಡಿಬರುತ್ತಿವೆ. ಅಲ್ಲದೆ ಇಂತಹ ಅನುಮಾನದ ಲಾಭವನ್ನು ಪಡೆದು ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲು ಆಡಳಿತಗಾರರು ಮತ್ತು ನ್ಯಾಯಾಂಗ ಅಧಿಕಾರಿಗಳು ಇಂತಹ ಅಸಾಂವಿಧಾನಿಕ ಅಭಿಪ್ರಾಯಗಳು ಮತ್ತು ತೀರ್ಪುಗಳನ್ನು ಪ್ರಕಟಿಸಿ ಮನುವಾದಿಗಳು ಮತ್ತು ಯಥಾಸ್ಥಿತಿವಾದಿಗಳನ್ನು ಸಂತುಷ್ಟಗೊಳಿಸಲು ಸಾಧ್ಯವಾಗಿದೆ. ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಅಂಶವು ಇದುವರೆವಿಗೂ ನ್ಯಾಯಾಂಗ ಕೈಗೊಂಡಿರುವ ಹಲವಾರು ತೀರ್ಪುಗಳಲ್ಲಿ ಅಭಿವ್ಯಕ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳು ಸರ್ವೋಚ್ಛ ನ್ಯಾಯಾಲಯದ ಮೀಸಲಾತಿ ಕುರಿತ ಇತ್ತೀಚಿನ ಅಭಿಪ್ರಾಯವನ್ನು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ನಿರಂತರ ದಮನಕ್ಕೆ ಪೂರಕವಾಗಿರುವುದಾಗಿ ವಿಶ್ಲೇಷಿಸಿವೆ.

ಆದಾಗ್ಯೂ, ರಾಜ್ಯ ಸರ್ಕಾರವು ಈ ವಿವೇಚನೆಯನ್ನು ಚಲಾಯಿಸಲು ಮತ್ತು ಮೀಸಲಾತಿ ನೀಡಲು ಬಯಸಿದರೆ, ಅದು ಮೊದಲು ಸಾರ್ವಜನಿಕ ಸೇವೆಗಳಲ್ಲಿ ಸಂಬಂಧಪಟ್ಟ ಜನವರ್ಗಗಳ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ತೋರಿಸುವ ಪರಿಮಾಣಾತ್ಮಕ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆಯೆಂಬ ಷರತ್ತನ್ನು ಸರ್ವೋಚ್ಛ ನ್ಯಾಯಾಲಯ ವಿಧಿಸಿರುವುದು ನೈಸರ್ಗಿಕ ನ್ಯಾಯ ಮತ್ತು ಸಾಂವಿಧಾನಿಕ ನ್ಯಾಯ ಆಶಯಗಳಿಗೆ ವಿರುದ್ಧವಾಗಿದೆ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ರಾಜಕೀಯ ಮೀಸಲಾತಿ ಪಡೆದಿದ್ದರೂ ಸಹ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಮರ್ಪಕ ಮೀಸಲಾತಿ ಸೌಲಭ್ಯಗಳನ್ನು ಪಡೆಯದೇ ಇತರ ಸಮುದಾಯಗಳಿಗಿಂತ ಹಿಂದುಳಿದಿರುವುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನೆ, ಪರಿಮಾಣಾತ್ಮಕ ಮಾಹಿತಿ ಸಂಗ್ರಹಣೆ ಮತ್ತು ವ್ಯವಸ್ಥಿತ ದತ್ತಾಂಶ ವಿಶ್ಲೇಷಣೆಗಳು ಅವಶ್ಯಕವಿಲ್ಲವೆಂಬ ಸತ್ಯ ಸಾಮಾಜಿಕ ನ್ಯಾಯದಲ್ಲಿ ಅಚಲವಾದ ನಂಬಿಕೆ ಇಟ್ಟಿರುವ ಹೃದಯವಂತ ನ್ಯಾಯಾಧೀಶರು, ನೀತಿ ನಿರೂಪಕರು ಮತ್ತು ಆಡಳಿತಗಾರರಿಗೆ ಅರಿವಾಗುತ್ತದೆ.

ಜಾಗತೀಕರಣ ಯುಗದಲ್ಲಿ ಅಳವಡಿಸಿಕೊಳ್ಳಲಾದ ಹೊಸ ಆರ್ಥಿಕ ನೀತಿಯಿಂದಾಗಿ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಕೆಲಸ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳಿಂದ ವ್ಯವಸ್ಥಿತವಾಗಿ ಜರುಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏರ್ ಇಂಡಿಯಾ, ರೈಲ್ವೆ, ಬಿಎಸ್‌ಎನ್‌ಎಲ್, ಇಂಡಿಯನ್ ಪೆಟ್ರೊ ಕೆಮಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್, ಹಿಂದೂಸ್ತಾನ್ ಝಿಂಕ್ ಲಿಮಿಟೆಡ್, ಮಾರುತಿ ಉದ್ಯೋಗ್ ಲಿಮಿಟೆಡ್ ಮೊದಲಾದ ಸರ್ಕಾರದ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವುದರ ಮೂಲಕ ತನಗೆ ಬೆಂಬಲ ನೀಡಿದ ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ಮತ್ತು ಮಾರುಕಟ್ಟೆ ಶಕ್ತಿಗಳ ಋಣ ತೀರಿಸುವ ಕೆಲಸ ಮಾಡಿದೆ.

ಉದಾರವಾದಿ ಆರ್ಥಿಕ ಪರಿಸರದಲ್ಲಿ ಶೋಷಿತ ಸಮುದಾಯಗಳ ಸಾಂವಿಧಾನಿಕ ಮೀಸಲಾತಿ ಸಹಜವಾಗಿ ರದ್ಧಾಗುತ್ತಿದೆ. ಉಳಿದಿರುವ ಕೆಲವೇ ಸಾರ್ವಜನಿಕ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಇಂತಹ ನ್ಯಾಯಾಂಗದ ತೀರ್ಪುಗಳಿಂದ ಉಳಿದಿರುವ ಮೀಸಲಾತಿ ಸೌಲಭ್ಯಕ್ಕೆ ಚ್ಯುತಿವುಂಟಾಗುತ್ತದೆ. ಖಾಸಗಿ ವಲಯದಲ್ಲಿ ದಮನಿತ ಸಮುದಾಯಗಳಿಗೆ ಮೀಸಲು ಸೌಲಭ್ಯ ಮತ್ತು ಸರ್ಕಾರಿ ಹುದ್ದೆಗಳಿಗೆ ನೇಮಕ ಮತ್ತು ಬಡ್ತಿಯಲ್ಲಿ ಮೀಸಲು ಸೌಲಭ್ಯ ಪಡೆಯಲು ರಾಷ್ಟ್ರೀಯ ಆಂದೋಲನ ಇಂದು ಅತ್ಯವಶ್ಯಕ. ಇಂತಹ ಮಹತ್ವದ ಸಾಮಾಜಿಕ ನ್ಯಾಯಪರ ಬೇಡಿಕೆಯನ್ನು ಮೋದಿ ನೇತೃತ್ವದ ಭಾರತ ಸರ್ಕಾರ ನಿರ್ಲಕ್ಷಿಸುವುದು ತರವಲ್ಲ. ದಮನಿತರ ಮೀಸಲಾತಿ ಮತ್ತು ಸಬಲೀಕರಣಗಳಿಗೆ ಬದ್ಧವಾಗಿಲ್ಲದ ಸರ್ಕಾರವನ್ನು ಕಿತ್ತೊಗೆಯುವ ಇಚ್ಛಾಶಕ್ತಿ ಮತ್ತು ಸಂಘಟಿತ ಹೋರಾಟಗಳನ್ನು ಬಿಜೆಪಿಯೇತರ ಎಡಪಂಥೀಯ ಮತ್ತು ಮಧ್ಯಮಾರ್ಗಿ ರಾಜಕೀಯ ಸಂಘಟನೆಗಳು ದಿಟ್ಟತನದಿಂದ ಮುನ್ನಡೆಸಿ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗಳನ್ನು ಆಧರಿಸಿದ ಪ್ರಬುದ್ಧ ಭಾರತವನ್ನು ರೂಪಿಸಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...