Homeಚಳವಳಿಜ್ವಾಲಾಮುಖಿಯ ಕಂಪನ : ಸಸಿಕಾಂತ್ ಸೆಂಥಿಲ್‌ರವರ ಮೊದಲ ಬರಹ...

ಜ್ವಾಲಾಮುಖಿಯ ಕಂಪನ : ಸಸಿಕಾಂತ್ ಸೆಂಥಿಲ್‌ರವರ ಮೊದಲ ಬರಹ…

- Advertisement -
- Advertisement -

ತಮಿಳುನಾಡು ಮೂಲದ ಶಶಿಕಾಂತ್ ಸೆಂಥಿಲ್ ದೇಶಕ್ಕೆಲ್ಲಾ ಗೊತ್ತಾದದ್ದು ಅವರ ರಾಜೀನಾಮೆಯ ಮೂಲಕ. ಆದರೆ, ರಾಜ್ಯದ ಹಲವು ಜಿಲ್ಲೆಗಳ ಸಾಮಾನ್ಯ ಜನರಿಗೆ ಅವರು ಜನಪರ ಕಾಳಜಿಯ ಪ್ರೀತಿಯ ಜಿಲ್ಲಾಧಿಕಾರಿ. ತನ್ನ ದಕ್ಷತೆ, ಸೂಕ್ಷ್ಮ ಸಂವೇದನೆಗಳ ಕಾರಣಕ್ಕೆ ಜನ ಮೆಚ್ಚಿದ ಐಎಎಸ್ ಅಧಿಕಾರಿ ಶಶಿಕಾಂತ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ತನ್ನ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟರು. ಎಲ್ಲರಿಗೂ ಅಚ್ಚರಿಯಾಗಿದ್ದು, ದೇಶದ ಇಂದಿನ ಪರಿಸ್ಥಿತಿಯಲ್ಲಿ ತಾನು ಐಎಎಸ್ ಅಧಿಕಾರಿಯಾಗಿದ್ದು, ದೇಶವನ್ನು ಕಾಡುತ್ತಿರುವ ಅಪಾಯದ ವಿರುದ್ಧ ಹೋರಾಡಲಾಗದು ಎಂದು ಹೇಳಿದ್ದರಿಂದ. ಸೆಂಥಿಲ್ ರವರ ಬರಹವನ್ನು ಹರ್ಷಕುಮಾರ್ ಕುಗ್ವೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಭಿನಂದನೆಗಳು ನಿಮಗೆಲ್ಲ! ಒಂದು ಚರಿತ್ರೆಯೇ ನಿರ್ಮಾಣವಾಗುತ್ತಿರುವುದಕ್ಕೆ ನೀವೆಲ್ಲಾ ಸಾಕ್ಷಿಯಾಗುತ್ತಿದ್ದೀರಿ. ಇದನ್ನೆಲ್ಲ ನಾನು ಮತ್ತು ನನ್ನಂತೆ ಇರುವ ಅನೇಕರು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಡಿಸ್ಕವರಿ ಚಾನಲ್‍ನಲ್ಲಿ ಎರಡನೇ ಮಹಾಯುದ್ಧದ ದೃಶ್ಯಗಳನ್ನು ನೋಡುತ್ತಾ `ಇಂತಹ ಹುಚ್ಚಾಟ ನಡೆದಿದ್ದಾದರೂ ಹೇಗೆ?’ ಎಂದು ನಿಮ್ಮನ್ನು ನೀವೇ ಮನಸಿನಲ್ಲಿ ಕೇಳಿಕೊಂಡಿದ್ದನ್ನು ನೆನಪು ಮಾಡಿಕೊಳ್ಳಿ, `ಅಲ್ಲಾ ಒಳ್ಳೆಯ ಸಾಂಸಾರಿಕ ಮೌಲ್ಯಗಳನ್ನು ಹೊಂದಿರುವ ಸಾಮಾನ್ಯ ಜರ್ಮನ್ನರು ಅಂತಾ ಒಬ್ಬ ತಲೆತಿರುಕ ಮನುಷ್ಯನ ಹಿಂದೆ ಹೋಗಿದ್ದಾದರೂ ಹೇಗೆ?’, `ಅವರು ತಮ್ಮೊಟ್ಟಿಗೆ ಬದುಕುವ ನೆರೆಹೊರೆಯ ಸಹ ಮನುಷ್ಯರನ್ನು ಆ ಮಟ್ಟಿಗೆ ದ್ವೇಷಿಸಿ ಕೀಳಾಗಿ ನೋಡುವಂತೆ ಮಾಡಿದ್ದಾದರೂ ಏನು?’ ಎಂಬಂತಹ ಕಾಡುವ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿಯೇ ಇರುತ್ತದೆ ಎಂದು ನಾನು ಬಲ್ಲೆ. ಆದರೆ ಈ ಯಾವ ಪ್ರಶ್ನೆಗೂ ನಿಮಗೆ ಸಮಾಧಾನಕರ ಉತ್ತರ ಸಿಕ್ಕಿರಲಾರದು ಎಂದೂ ಹೇಳಬಲ್ಲೆ. ಸ್ವಲ್ಪ ಹತ್ತಿರದಿಂದ ನೋಡಿ. ಕಳೆದ 6 ವರ್ಷಗಳಲ್ಲಿ ನಿಮ್ಮೊಳಗೆ ಮತ್ತು ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ ಎಂಬುದನ್ನು ಗಮನಿಸಿ.

ಈ ನಡುವೆ ನೀವು ಹೆಚ್ಚೆಚ್ಚು ರಾಷ್ಟ್ರವಾದಿಯಾಗಲು ತೊಡಗಿರುತ್ತೀರಿ ಮಾತ್ರವಲ್ಲ, ಆ ಬಗ್ಗೆ ಯಾರಾದರೂ ಕೇಳಿದರೆ ಬಲವಾಗಿ ನಿಮ್ಮನ್ನು ನೀವು ಸಮರ್ಥಿಸಿಕೊಂಡು ಮಾತಾಡಲೂ ಶುರು ಮಾಡಿರುತ್ತೀರಿ. ದೇಶದ ಸ್ಥಿತಿ ಅಧೋಗತಿಗೆ ಇಳಿಯುತ್ತಿರುವುದು ಸಹ ನಿಮ್ಮ ಅನುಭವಕ್ಕೆ ಬರತೊಡಗಿರುತ್ತದೆ. (ಮಹಾನ್ ರಕ್ಷಕ ಬರುವುದಕ್ಕೂ ಮೊದಲೇ ಇದು ಶುರುವಾಗಿತ್ತು). ಯಾರೆಲ್ಲ ದೇಶದ ಅಧೋಗತಿಗೆ ಕಾರಣರಾಗಿದ್ದಾರೆ ಎಂದು ನಿಮಗೆ ಅನಿಸುತ್ತದೆಯೋ ಅವರ ಮೇಲೆಲ್ಲಾ ನೀವು ನಿಮ್ಮ ಸಿಟ್ಟು ಸಿಡುಕತೊಡಗಿರುತ್ತೀರಿ. ಬಹಳ ಸ್ಪಷ್ಟವಾಗಿ ಯಾವುದಾದರೂ ಒಂದು ಕಡೆ ನಿಂತು ನಿಲುವು ತಳೆಯಲು ಆರಂಭಿಸಿರುತ್ತೀರಿ. ಇಷ್ಟಾದಕೂಡಲೇ ನಿಮಗೆ ಒಂದು ಅಧಿಕಾರವೇ ಸಿಕ್ಕಂತೆ ಭಾಸವಾಗತೊಡಗಿರುತ್ತದೆ. ಕಾಶ್ಮೀರದ ಮೇಲೆ ನಿರ್ಬಂಧ ಹೇರಿದಾಗ ನೀವು ಬಹಳ ಖುಷಿಪಟ್ಟಿರಿ. `ಮಗಂದ್, ಈ ಕೆಲಸ ಮೊದಲೇ ಆಗಬೇಕಿತ್ತು ನೋಡು…’ ಎಂದೂ ನಿಮ್ಮ ಸಂತೋಷ ಹೊರಹಾಕಿರುತ್ತೀರಿ. ಪುಲ್ವಾಮಾ ದಾಳಿ ನಡೆದು ಪ್ರಧಾನಮಂತ್ರಿಯವರು ಟಿವಿ ಪರದೆ ಮೇಲೆ ಕಾಣಿಸಿಕೊಂಡು, `ಬಹಳ ದೊಡ್ಡ ತಪ್ಪು ಮಾಡಿದ್ದೀರಾ? ಇದಕ್ಕೆ ಅಷ್ಟೇ ದೊಡ್ಡ ಬೆಲೆಯನ್ನು ನೀವು ತೆರಬೇಕಾಗುತ್ತದೆ’ ಎಂದು ಹೇಳಿದಾಗ ನಿಮ್ಮ ಎದೆಗಳು ಉಬ್ಬಿದ್ದವು, ಅಷ್ಟೇ ಏಕೆ, ನೀವು ನಿಮ್ಮ ಕಲ್ಪನಾಲೋಕದಲ್ಲಿ ಫೈಟರ್ ವಿಮಾನಗಳ ಮೇಲೆ ಹಾರಿಹೋಗಿ ಆ ದರಿದ್ರ ಪಾಕಿಸ್ತಾನದ ಮೇಲೆ ಬಾಂಬುಗಳ ಮಳೆಯನ್ನೇ ಸುರಿಸಿ ಬಂದಿರಿ. ಅಲ್ಲವೇ?

ನಿಮ್ಮ ಕಾಲೇಜು ವಾಟ್ಸಾಪ್ ಕ್ಯಾಚಪ್ ಗುಂಪುಗಳಲ್ಲಿಯಂತೂ, `ನಾವು ವರ್ಸಸ್ ಅವರು’, `ಬಿಜೆಪಿ ಯುಗ ವರ್ಸಸ್ ಕಾಂಗ್ರೆಸ್ ಯುಗ’ ಮುಂತಾಗಿ ಬಿಸಿಬಿಸಿ ಚರ್ಚೆಗಳನ್ನು ನಡೆಸಿರುತ್ತೀರಿ. ಈ ಎದೆಯುಬ್ಬಿಸುವ ಬಗ್ಗೆಯಾಗಲೀ ಸೋಷಿಯಲ್ ಮೀಡಿಯಾದಲ್ಲಿ ರೋಷಾವೇಶ ತೋರಿಸುವುದರ ಬಗ್ಗೆಯಾಗಲೀ ಹೆಚ್ಚು ಮಾತಾಡದಿರುವುದೇ ಲೇಸು. ನಾನು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದು ನಿಮಗೆ ಅರ್ಥ ಆಗಿರಬಹುದು ಎಂದುಕೊಂಡಿದ್ದೇನೆ.

ನಮಗೆಲ್ಲರಿಗೂ ಅರಿವಿಗೆ ಬರುತ್ತಿರುವುದೇನೆಂದರೆ ದೇಶದಲ್ಲಿ ಏನೋ ಮಹತ್ತರವಾದುದು ನಡೆಯುತ್ತಿದೆ ಎಂದು. ಹಿಂದೆಂದೂ ನಡೆಯದೇ ಇರುವುದು ಈಗ ನಡೆಯುತ್ತಿದೆ ಎಂದು ಎಲ್ಲರಿಗೂ ಅನಿಸುತ್ತಿದೆ. ಅಲ್ಲವೇ? ಇದೆಲ್ಲಾ ಕೋಮುವಾದಿ ರಾಜಕಾರಣ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಹೌದು. ಆದರೆ ಅಂತಹ ರಾಜಕಾರಣ ಈ ದೇಶಕ್ಕೆ ಹೊಸದೇನೂ ಅಲ್ಲ. ಆರೆಸ್ಸೆಸ್ಸಿನ ರಾಜಕೀಯ ಸಂಘಟನೆಯಾದ ಜನಸಂಘ ಹುಟ್ಟಿದ್ದು 1951ರಲ್ಲಿ. ಕೋಮುವಾದಿ ರಾಜಕೀಯ ತನ್ನ ಉತ್ತುಂಗಕ್ಕೆ ತಲುಪಿದ್ದು 1992ರ ಡಿಸೆಂಬರ್ 6ರಂದು. ಹಾಗಿದ್ದ ಮೇಲೆ ಈಗ ಹೊಸದಾಗಿ ಆಗುತ್ತಿರುವುದೇನು? ಯಾಕೆ ಇಷ್ಟೆಲ್ಲಾ ಉದ್ವೇಗ ಜನರ ಮನಸ್ಸಿನಲ್ಲಿ ಉಂಟಾಗುತ್ತಿದೆ? ನನ್ನ ಈ ಲೇಖನವನ್ನು ನೀವು ಭಯ ಹುಟ್ಟಿಸಲಿಕ್ಕಾಗಿ ಬರೆದ ಬರೆಹ ಎಂದುಕೊಳ್ಳಬಹುದೇನೋ. ಆದರೂ ಸಹ ಒಂದು ವಿಷಯದ ಕುರಿತು ನಿಮಗೆ ತಿಳಿಸಲೇಬೇಕು. ಅದರ ಕುರಿತು ನೀವು ಈಗಾಗಲೇ ಕೇಳಿರುತ್ತೀರಿ, ಕೇಳಿ ಅದರ ಬಗ್ಗೆ ಅಷ್ಟಾಗಿ ಆಸಕ್ತಿ ತೋರದೇ ಕಡೆಗಣಿಸಿಯೂ ಇರುತ್ತೀರಿ. ಆದರೆ ಅದರ ಅನುಭವವಂತೂ ನಿಮಗೆ ಆಗಿರಲು ಸಾಧ್ಯವಿಲ್ಲ. ಅದರ ಬಗ್ಗೆಯೇ ನಾನು ಒಂದರ ಪರಿಚಯ ಮಾಡಿಕೊಡಲು ಬಯಸಿದ್ದೇನೆ.

ಮಹನೀಯರೆ ಮತ್ತು ಮಹಿಳೆಯರೆ! ಬಾಪುವಿನ ನಾಡಿಗೆ ಆಗಮಿಸಿರುವ ಫ್ಯಾಸಿಸಂಗೆ ಇದೋ ಸುಸ್ವಾಗತ ಕೋರುತ್ತಿರುವೆ. ಓಹ್.. ಇಷ್ಟು ಹೇಳಿದೊಡನೆ ಬಿಟ್ಟು ಬಿಡಬೇಡಿ. ಇಂಡಿಯಾ ಬಹುದೊಡ್ಡ ಪ್ರಜಾಪ್ರಭುತ್ವ ಎಂದು ಬಲ್ಲೆ. ಇದರ ಕುರಿತು ನನ್ನ ಪರಿಚಯ ಮುಗಿಯುವವರೆಗೂ ನನ್ನ ಮಾತುಗಳನ್ನು ಸಹಿಸಿಕೊಳ್ಳಿ!
ಈ ಫ್ಯಾಸಿಸಂ ಅಂದರೆ ಏನು ಅದರ ಮೂಲಸ್ವರೂಪ ಎಂಥದ್ದು ಎಂಬುದನ್ನು ನಿಮಗೆ ತಿಳಿಸಲು ಅದರ ಕುರಿತು ನಡೆದಿರುವ ಹಲವಾರು ಸಂಶೋಧನೆಗಳಲ್ಲಿ ಕೆಲವನ್ನು ನಿಮಗೆ ತಿಳಿಸಬಯಸುತ್ತೇನೆ. ಅಮೆರಿಕದ ತತ್ವಜ್ಞಾನಿ ಮತ್ತು ಯೇಲ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರೊಫೆಸರ್ ಆಗಿರುವ ಜಾಸನ್ ಸ್ಟ್ಯಾನ್ಲೀ ಎಂಬುವವರ ವಿಚಾರಗಳ ಮೂಲಕ ಇದನ್ನು ವಿವರಿಸುತ್ತೇನೆ.

ಅವರ ಪ್ರಕಾರ ಮೊತ್ತ ಮೊದಲನೆಯದಾಗಿ, ಫ್ಯಾಸಿಸಂ ಎಂಬುದು ಗಂಡಾಳ್ವಿಕೆಯನ್ನು ಸ್ಥಾಪಿಸಲು ಒಬ್ಬ `ಯಜಮಾನನಂತಹ ಪುರುಷ’ನನ್ನು ಮೆರೆಸುವ ಮೂಲಕ ತನ್ನ ಕೆಲಸ ಆರಂಭಿಸುತ್ತದೆ. ಇಲ್ಲಿ ಒತ್ತು ನೀಡಬೇಕಾದ ಅಂಶವೆಂದರೆ ಗಂಡಾಳ್ವಿಕೆ. ಇಲ್ಲಿ ಅದು ಒಂದು ಪರಿಕಲ್ಪನೆಯಾಗಲೀ, ಐಡಿಯಾಲಜಿಯಾಗಲೀ ಅಥವಾ ಒಂದು ಪಕ್ಷವಾಗಲೀ ಅಲ್ಲ. ಅದು ರಕ್ತ ಮಾಂಸ ತುಂಬಿದ ಒಬ್ಬ ವ್ಯಕ್ತಿಯ ಸ್ವರೂಪದಲ್ಲಿ ಕಾಣಿಸುತ್ತದೆ. ಒಬ್ಬ ವಿರಾಟ್ ಪುರುಷನ ರೂಪದಲ್ಲಿ. ಈ ಯಜಮಾನಿಕೆಯ ಪುರುಷನು ದೇಶದ ಎಲ್ಲಾ ಮೌಲ್ಯಗಳಿಗೂ ತಾನೇ ಸಂಕೇತ ಎಂಬಂತೆ ತೋರಿಸಿಕೊಳ್ಳುತ್ತಾನೆ. ಬರಬರುತ್ತಾ ದೇಶದ ಮೌಲ್ಯಗಳ ಏಕೈಕ ಪ್ರತಿನಿಧಿ ತಾನೇ ಆಗಿಬಿಡುತ್ತಾನೆ. ದೇಶದ ಎಲ್ಲಾ ತೀರ್ಮಾನಗಳು ಅವನ ಹೆಸರಿನಲ್ಲಿ ನಡೆಯುತ್ತವೆ, ಎಲ್ಲಾ ಸಾಧನೆಗಳಲ್ಲಿ ಅವನ ಹೆಸರೇ ಕೇಳಿಬರುತ್ತದೆ. ಈ ಲಕ್ಷಣವನ್ನು ಭಾರತದಲ್ಲಿ ಪ್ರತಿಬಿಂಬಿಸುವ ಹಾಗೂ ತೀರಾ ಇತ್ತೀಚಿನ ದಿನಮಾನದಲ್ಲಿ ಇಂತಹ ಸ್ಥಾನ ಗಳಿಸಿರುವಂತ ವ್ಯಕ್ತಿಯ ಹೆಸರನ್ನು ಗುರುತಿಸಿ ಹೇಳುವುದು ಬಾಲಿಶವೆನಿಸಬಹುದು. ಹಿಂದಿನ ಎನ್‍ಡಿಎ ಆಳ್ವಿಕೆಯಲ್ಲಿ ಕೋಮು ರಾಜಕಾರಣ, ದ್ವೇಷದ ಅಪರಾಧಗಳು ಇತ್ಯಾದಿಗಳಿದ್ದವು. ಆದರೆ `ಯಜಮಾನಿಕೆಯ ಗಂಡಸು’ ಇರಲಿಲ್ಲ. ಶ್ರೀ ವಾಜಪೇಯಿಯವರಾಗಲೀ ಶ್ರೀ ಅಡ್ವಾಣಿಯವರಾಗಲೀ ತಮ್ಮ ತಮ್ಮ ಮಟ್ಟಿಗೆ ಸಾಕಷ್ಟು ಉತ್ತಮ ಸ್ಥಾನ ಗಳಿಸಿಕೊಂಡಿದ್ದವರೇ ಆಗಿದ್ದರು, ಆದರೆ ಅವರೆಂದೂ ಆರೆಸ್ಸೆಸ್ ಮತ್ತು ಸಂಘವನ್ನೂ ಮೀರಿ ಬೆಳೆದವರಲ್ಲ.

ಎರಡನೆಯ ಲಕ್ಷಣವೇನೆಂದರೆ, ಈ ಪರಾಕ್ರಮಿ ಗಂಡಸಿದ್ದಾನಲ್ಲ ಅವನು ಒಂದು ಭ್ರಾಮಕ ಗತವೈಭವದ ಕುರಿತು ಕತೆ ಹೆಣೆಯುತ್ತಾ ಹೋಗುತ್ತಾನೆ. ಸಮಾಜದಲ್ಲಿ ಮೌಲ್ಯ ಮತ್ತು ಸಂಸ್ಕೃತಿಗಳ ಅಧೋಗತಿಗೆ ಒಂದು ಗುಂಪನ್ನು ಹೊಣೆ ಮಾಡಲಾಗುತ್ತದೆ. ಹಾಗೆ ದೇಶದ ಅವನತಿಗೆ ಹೊಣೆ ಮಾಡಲಾದ ಗುಂಪನ್ನು ಗುರಿಪಡಿಸಿ ದಾಳಿ ಮಾಡುವ ಬಗ್ಗೆ ಪುಂಖಾನುಪುಂಖವಾಗಿ ಹೇಳಲಾಗುತ್ತದೆ. ಆರೆಸ್ಸೆಸ್ ಹೊಂದಿರುವ ಅಜೆಂಡಾ ಮತ್ತು ಜನಸಂಘಕ್ಕೆ ಇರುವ ಉದ್ದೇಶಗಳ ಹಿನ್ನೆಲೆಯಲ್ಲಿ ಈ ರೀತಿಯ ಒಂದು ಕತೆ ಹೆಣೆಯುವುದು ಇಂದು ಮೋದಿಯವರಿಗೆ ಬಹಳ ಸುಲಭವಾಗಿದೆ. ಯಾಕೆಂದರೆ ಟೆಂಪ್ಲೇಟ್ ಒಂದನ್ನು ಈಗಾಗಲೇ ಸಿದ್ಧ ಮಾಡಿಡಲಾಗಿದೆ. ಇದೆಲ್ಲದರ ಉನ್ನತ ಹಂತವಾಗಿ ಈಗ ಅವನತಿಯತ್ತ ಹೋಗುತ್ತಿರುವ ದೇಶವನ್ನು ಉಳಿಸಲು ದೇಶದ ಜನರಿಗೆ ಕರೆ ನೀಡಲಾಗುತ್ತದೆ. ತೀವ್ರ-ರಾಷ್ಟ್ರವಾದಿ ಘೋಷಣೆಗಳಿಗೆ ಸಾಮಾನ್ಯ ಜನರು ಓಗೊಡುವಂತೆ ಹಾಗೂ ಅಂತಹ ನಡೆಗಳನ್ನು ಕಣ್ಣುಮುಚ್ಚಿಕೊಂಡು ಬೆಂಬಲಿಸುವಂತೆ ಮಾಡಲಾಗುತ್ತದೆ. ನಿಮಗೆ `ಅಚ್ಚೇ ದಿನ್ ಬಂದೇ ಬಿಟ್ಟಿತು?’ `ಕಪ್ಪು ಹಣ’ ಮುಂತಾದ ಘೋಷಣೆಗಳು ನೆನಪಾದವಾ?

ಫ್ಯಾಸಿಸಂ ಜಾರಿಗೊಳಿಸುವ ಮೂರನೇ ತಂತ್ರವೆಂದರೆ ವ್ಯವಸ್ಥೆಯಲ್ಲಿನ ದೋಷಗಳ ಕುರಿತು ಪ್ರಶ್ನೆ ಎತ್ತುವ ಇಲ್ಲವೇ ಚರ್ಚೆ ನಡೆಸುವ ಬೌದ್ಧಿಕ ಸಂಘಟನೆಗಳನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳುವುದು. JNU ಮೇಲಿನ ದಾಳಿ ನಿಮಗೆ ನೆನಪಾಗಿರಬಹುದು. ಇದು ಯಾವುದೋ ಗಳಿಗೆಯಲ್ಲಿ ನಡೆದುಹೋದ ಅಚಾನಕ್ ಘಟನೆ ಎಂದು ಯೋಚಿಸುವುದು ತಪ್ಪಾಗುತ್ತದೆ. ಮೀಡಿಯಾ ಹೌಸ್‍ಗಳಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿರುವವರನ್ನು ಗೋಣು ಆಡಿಸುವಂತೆ ಮಾಡಲಾಗುತ್ತದೆ. ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಲು ಕಟ್ಟಿಕೊಂಡಿರುವ ಕಾನೂನುಬದ್ಧ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮಂಡಿಯೂರಿಸಲಾಗುತ್ತದೆ. ತಮ್ಮ ಆಡಳಿತದ ಮಹಾನ್ ಮಹಾನ್ ಸಾಧನೆಗಳ ಬಗ್ಗೆ ಎಡೆಬಿಡದೆ ಗಂಟೆ ಬಾರಿಸುವಂತೆ ಪ್ರಚಾರ ಯಂತ್ರಾಂಗವನ್ನು ರೂಪಿಸಿ ಸಮಾಜದಲ್ಲಿ ಯಾವುದೇ ಬೌದ್ಧಿಕ ಚರ್ಚೆಗಳಿಗೆ ಜಾಗವೇ ಇಲ್ಲದಂತೆ ಮಾಡಲಾಗುತ್ತದೆ.

ದೇಶದ ಪ್ರಜೆಗಳಲ್ಲಿನ ಬಹುಪಾಲು ಜನರನ್ನು ಬಲಿಪಶುಗಳನ್ನಾಗಿ ಮಾಡಲಾಗಿರುತ್ತದೆ. ಒಂದು `ನ್ಯಾಯಸಮ್ಮತ ಸಮಾಜಕ್ಕಾಗಿ’ ಹಂಬಲಿಸುವಂತಹ, ಇನ್ನೂ ಸಾಮಾಜಿಕ-ಆರ್ಥಿಕ ಸಮತೋಲನ ಸಾಧಿಸಬೇಕಿರುವ ಸಮಾಜದಲ್ಲಿ ಇದು ಬಹಳ ಸುಲಭದ ಕೆಲಸ. `ನಾವು ವರ್ಸಸ್ ಅವರು’ ಎಂಬ ಭಯಾನಕ ಸ್ಥಿತಿ ಸೃಷ್ಟಿಸಿ ಅದನ್ನೇ ಜನರ ನಡುವೆ ಜನಜನಿತಗೊಳಿಸಿಬಿಡಲಾಗುತ್ತದೆ. ನಾನು ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಬಹುಬಗೆಯ ಹಿನ್ನೆಲೆಯವರು ಬರುತ್ತಿದ್ದರು. ಅಲ್ಲಿ ಓದಿದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ನಾವ್ಯಾರೂ ನಮ್ಮ ನಮ್ಮ ಐಡೆಂಟಿಡಿಗಳ ಕುರಿತಾಗಿ ಚರ್ಚಿಸಿದ ನೆನಪಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಕಾಲೇಜುಗಳ ವಾಟ್ಸಾಪ್ ಗುಂಪುಗಳಲ್ಲಿ ನಡೆಯುವ ಚರ್ಚೆಗಳನ್ನು ನೋಡಿದಾಗ ನಾನಲ್ಲಿ ಗಮನಿಸಿದ್ದೇನೆಂದರೆ ಅಲ್ಲಿನ ಶೇಕಡಾ 70ಕ್ಕೂ ಹೆಚ್ಚಿನ ಚರ್ಚೆಗಳು ನಮ್ಮ ನಮ್ಮ ಗುರುತು ಚಹರೆಗಳ ಕುರಿತೇ ಆಗಿದೆ. ಕಾಂಗ್ರೆಸ್ ವರ್ಸಸ್ ಬಿಜೆಪಿ ಯುಗ ಮತ್ತು `ನಾವು ವರ್ಸಸ್ ಅವರು’ದಂತಹ ಮುಸುಕಿನಲ್ಲಿ ಇವು ನಡೆಯುತ್ತಿವೆ. ಈಗ ಸುಲಭವಾಗಿ ಯಾರ ಬಗ್ಗೆಯಾದರೂ `ಅರ್ಬನ್ ನಕ್ಸಲ್’ ಅಥವಾ `ಪ್ರೆಸ್ಟಿಟ್ಯೂಟ್’ ಎಂದು ಆರೋಪಿಸಿಬಿಡಲಾಗುತ್ತಿದೆ. ಆದರೆ, `ಅವರು’ ಎಂದುಕೊಳ್ಳುವವರ ಕುರಿತು ದ್ವೇಷದ ವಾದಸರಣಿ ಹುಟ್ಟುಹಾಕಲಾಗುತ್ತಿದೆ. ಈ ಬಗೆಯ ವಾತಾವರಣ ನಮ್ಮ ಸುತ್ತಲೂ ಇರುವುದು ಮಾತ್ರ ಎಂತಹವರಿಗೂ ದಟ್ಟವಾಗಿ ಗೋಚರಿಸುತ್ತಿದೆ.

ಇಂದಿರಾಗಾಂಧಿಯವರ ಕಾಲದಲ್ಲಿ ಜಾರಿಗೊಳಿಸಿದ್ದ ತುರ್ತುಪರಿಸ್ಥಿತಿಗೆ ಈಗಿನ ಪರಿಸ್ಥಿತಿಯನ್ನು ಕೆಲವರು ಹೋಲಿಸುವುದುಂಟು. ಅದು ನಿಜಕ್ಕೂ ಕರಾಳ ಕಾಲವಾಗಿತ್ತು. ಹಾಗೆಯೇ ಸರ್ಕಾರ ಜನರ ಮೇಲೆ ನಿಯಂತ್ರಣ ಸಾಧಿಸಿ ಸರ್ವಾಧಿಕಾರ ನಡೆಸಲಾಗಿತ್ತಲ್ಲದೇ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುವಂತೆ ಮಾಡಲಾಗಿತ್ತು. ಆದರೆ ಈಗ ನಡೆಯುತ್ತಿರುವುದು ಬೇರೆಯೇ ಆಗಿದೆ. ಈಗ ಜನರ ಮನಸ್ಸುಗಳಿಗೆ ವ್ಯವಸ್ಥಿತವಾಗಿ ವಿಷವುಣಿಸಲಾಗುತ್ತಿದೆ. ಅದರ ಮೂಲಕ ಯಾವುದೇ ಕರುಣೆಯಾಗಲೀ ಅನುಕಂಪವಾಗಲೀ ಇರದಂತೆ ಮಾಡಿ ಸಾಯಹೊಡೆಯುವ ಹೊಡಿಬಡಿ ಗುಂಪುಗಳನ್ನು ಹುಟ್ಟುಹಾಕಲಾಗುತ್ತಿದೆ. ಫ್ಯಾಸಿಸ್ಟ್ ಪ್ರಚಾರ ಯಂತ್ರಕ್ಕೆ ಜನರು ಬಲಿ ಬೀಳುತ್ತಿರುವುದೇ ಹೀಗೆ. ಹಾಗೆಯೇ ನಾವು ಕಮ್ಯುನಿಸಂ ಅಥವಾ ಸಮಾಜವಾದ ಇತ್ಯಾದಿಗಳು ಹೇಗೆಲ್ಲಾ ಕೆಲಸ ಮಾಡಿವೆ, ಹೇಗೆ ಕೆಲಸ ಮಾಡುತ್ತವೆ ಎಂದು ಸುಲಭವಾಗಿ ವಿವರಿಸಬಹುದು. ಆದರೆ ಫ್ಯಾಸಿಸ್ಟ್ ತಂತ್ರಗಳು ಅಷ್ಟು ಸುಲಭ ವಿವರಣೆಗೆ ದಕ್ಕುವಂತಿರುವುದಿಲ್ಲ. ಅದಕ್ಕೆ ಒಂದು ನಿರ್ದಿಷ್ಟ ಕಾರ್ಯಸ್ವರೂಪ ಇರುವುದಲ್ಲ. ಅದು `ಯಜಮಾನಿಕೆಯ ಗಂಡಸಿನ ಇಷ್ಟಾನಿಷ್ಟಗಳಿಗೆ ತಕ್ಕಂತೆ ಬದಲಾಗುತ್ತಿರುತ್ತದೆ.’

ನನಗೆ ಸ್ಪಷ್ಟವಾಗಿರುವ ಸಂಗತಿಯೇನೆಂದರೆ ಫ್ಯಾಸಿಸ್ಟ್ ಯಂತ್ರಾಂಗವು ಇಂದು ದೇಶದ ತುಂಬೆಲ್ಲಾ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ. ರಾಷ್ಟ್ರನಿರ್ಮಾಣದ ಹೆಸರಿನಲ್ಲಿ ಅಲ್ಪಸಂಖ್ಯಾತರ ತುಚ್ಛೀಕರಣ ಮಾಮೂಲಿ ಎನಿಸಿಕೊಂಡಿದೆ. ಮೈಮನಸು ಪೂರ್ತಿ ದ್ವೇಷ ತುಂಬಿಕೊಂಡು ಹೊಡಿಬಡಿ, ಕೊಚ್ಚು ಕೊಲ್ಲು ಎಂದು ಹೊರಡುವ ಮಾನಸಿಕತೆ ಬೆಳೆಸಿಕೊಂಡಿರುವ ಒಂದು ಪೀಳಿಗೆಯನ್ನೇ ನಾವು ಹುಟ್ಟುಹಾಕಿದ್ದೇವಲ್ಲವೇ? ಈ ಹೊಡಿಬಡಿ ಗುಂಪಿಗೆ ಮಾನವ ಹಕ್ಕುಗಳು ಅಥವಾ ಮಾನವೀಯ ಮೌಲ್ಯಗಳು ಎಂದರೇನೇ ತಾತ್ಸಾರವಾಗಿಲ್ಲವೇ? ಮಹಾತ್ಮ ಗಾಂಧಿಯನ್ನು ಕೊಂದವನನ್ನೇ ಮೆರೆಸುವ ಮಟ್ಟಕ್ಕೆ ನಾವು ದ್ವೇಷದ ಐಡಿಯಾಲಜಿಯನ್ನು ಪ್ರಚಾರ ಮಾಡುತ್ತಿಲ್ಲವೇ?

ಭಾರತವು, ಗಾಂಧೀಜಿ ಮತ್ತಿತರ ಎಲ್ಲಾ ಮಹಾನ್ ನಾಯಕರ ಮೌಲ್ಯಾದರ್ಶಗಳೊಂದಿಗೆ ಜನ್ಮ ತಳೆದಿತ್ತು. ಆದರೆ ಇಂದು ನಿಧಾನವಾಗಿ ಈ ದೇಶದ ಆತ್ಮದ ಮೇಲೆ ಮಾತ್ರವಲ್ಲದೆ ಮುಂಬರುವ ಪೀಳಿಗೆಗಳ ಮೇಲೂ ಆಳವಾದ ಗಾಯದ ಕಲೆಗಳನ್ನು ಉಳಿಸುತ್ತಿದ್ದೇವೆ. ಜಗದ್ವಿಖ್ಯಾತ ಮನಃಶಾಸ್ತ್ರಜ್ಞ ಹಾಗೂ ನಾಜಿ ನರಮೇಧದಲ್ಲಿ ಬದುಕಿ ಉಳಿದ ಎರಿಕ್ ಸೆಲಿಗ್ಮನ್ ಫ್ರಾಮ್ ಎಂಬಾತ ಹೇಳಿರುವ ಮಾತು ಇಂದಿನ ನಮ್ಮ ಭಾರತಕ್ಕೂ ಅನ್ವಯವಾಗುತ್ತದೆ.

ಯಾರಿಗೆ ಇದೆಲ್ಲದರ ಬಗ್ಗೆ ಇನ್ನೂ ಅರಿವಿಲ್ಲವೋ ಅಂತವರು ಕೂಡಲೇ ಎಚ್ಚೆತ್ತುಕೊಂಡು, ತಮಗೆ ಸಾಮಾನ್ಯವೆನಿಸಿರುವ ರಾಷ್ಟ್ರವಾದಿ ವರ್ತನೆಗಳ ಕುರಿತು ಯೋಚಿಸಲಿ. ಹಿಂದುತ್ವದ ಮಾತು ಲೊಳಲೊಟ್ಟೆಯಾಗಿ ಇದೀಗ ಸ್ಫೋಟಿಸಲು ಸಿದ್ಧವಾಗಿರುವ ಜ್ವಾಲಾಮುಖಿಯತ್ತ ನೋಡಲಿ ಎಂದು ಆಶಿಸುತ್ತೇನೆ. ಬೇಲಿಯ ಮೇಲೆ ನೀವು ಕುಳಿತುಕೊಂಡು ಅದು ಯಾವಾಗ ಸ್ಫೋಟಗೊಳ್ಳುತ್ತದೆ ಎಂದು ನೋಡಲು ಬಯಸಲಾರಿರಿ ಎಂದುಕೊಂಡಿದ್ದೇನೆ. ನಿಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ, ಅವರು ನಿರಾತಂಕವಾಗಿ ಬದುಕಲು ಪ್ರೀತಿ ತುಂಬಿದ ದೇಶವೊಂದನ್ನು ನೀಡುವ ಕುರಿತು ಯೋಚಿಸಿ. ಮಿಕ್ಕಂತೆ ಈಗಾಗಲೇ ಯಾರಿಗೆಲ್ಲಾ ಅರಿವಿದೆಯೋ ನೀವು ನಿಮ್ಮ ಪಾಲಿನ ಕೆಲಸ ಮಾಡಿ. ಗಡಿಯಾರದ ಮುಳ್ಳಿನ ಟಿಕ್‍ಟಿಕ್ ಸದ್ದು ಕೇಳಿಸುತ್ತಿದೆ.

`ಫ್ಯಾಸಿಸಂ ಅಧಿಕಾರಕ್ಕೆ ಬಂದಾಗ, ಬಹುತೇಕ ಜನರಿಗೆ ಸೈದ್ಧಾಂತಿಕವಾಗಿಯಾಗಲೀ, ಆಚರಣಾತ್ಮಕವಾಗಲೀ ಸಿದ್ಧತೆಯೇ ಇರಲಿಲ್ಲ. ಮನುಷ್ಯನಾದವನು ಆ ಪರಿಯಲ್ಲಿ ಕೆಡುಕು ಉಂಟುಮಾಡುತ್ತಾನೆಂದಾಗಲೀ, ಆ ಪರಿಯಲ್ಲಿ ಅಧಿಕಾರಲಾಲಸೆ ಹೊಂದಿರುತ್ತಾನೆ ಎಂದಾಗಲೀ ಅಥವಾ ದುರ್ಬಲರ ಹಕ್ಕುಗಳ ಬಗ್ಗೆ ಆ ಪರಿಯ ಉಪೇಕ್ಷೆ ತೋರುತ್ತಾನೆಂದಾಗಲೀ, ಅಂತಹ ದುರಾಸೆ ಹೊಂದಿರುತ್ತಾನೆ ಎಂದಾಗಲೀ ಜನರು ನಂಬಲು ತಯಾರಿರಲಿಲ್ಲ. ಜ್ವಾಲಾಮುಖಿಯೊಂದು ಸ್ಫೋಟಗೊಳ್ಳುವ ಮುಂಚೆ ಮಾಡುವ ಗಡಗಡ ಸದ್ದಿನ ಬಗ್ಗೆ ಹಿಡಿಯಷ್ಟು ಮಂದಿಗಷ್ಟೇ ಅರಿವಿತ್ತು’.
ಎರಿಕ್ ಫ್ರಾಮ್,
ಎಸ್ಕೇಪ್ ಫ್ರಂ ಫ್ರೀಡಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...