HomeದಿಟನಾಗರFACT CHECK : ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಅನುದಾನ ಕೇಳುತ್ತಿದೆ ಎಂಬುವುದು ಸುಳ್ಳು

FACT CHECK : ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಅನುದಾನ ಕೇಳುತ್ತಿದೆ ಎಂಬುವುದು ಸುಳ್ಳು

- Advertisement -
- Advertisement -

“ಕರ್ನಾಟಕದಲ್ಲಿ ಏನಾಗ್ತಿದೆಯೋ, ಅದು ಪಾಕಿಸ್ತಾನದ ಟೆಕ್ನಿಕ್. ಪಾಕಿಸ್ತಾನ ತನ್ನ ಹಣೆಗೆ ಗನ್ ಇಟ್ಟುಕೊಳ್ಳುತ್ತದೆ . ಆಮೇಲೆ ಪಾಕಿಸ್ತಾನ ಸರ್ಕಾರ ಅಮೆರಿಕದ ಕಡೆ ನೋಡಿ ಹೇಳುತ್ತದೆ, ‘ನೀವು ನಮಗೆ ದುಡ್ಡು ಕೊಟ್ಟಿಲ್ಲಾ ಅಂದ್ರೆ ನಾವು ನಮ್ಮನ್ನೇ ಶೂಟ್ ಮಾಡಿಕೊಳ್ಳುತ್ತೇವೆ’ ಎಂದು. ಪಾಕಿಸ್ತಾನ ತಾನೇ ಸತ್ತು ಹೋಗುವೆ ಅನ್ನುತ್ತೆ. ಅಮೆರಿಕ ಹೆದರಿ ದುಡ್ಡು ಕೊಡುತ್ತೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡ್ತಿರೋದು ಅದೇ. ಭರವಸೆ ಕೊಟ್ಟಿರುವುದು ನೀವು, ಗ್ಯಾರಂಟಿ ಕೊಡ್ತಿರುವುದು ನೀವು. ಈಗ ಕೇಂದ್ರ ಸರ್ಕಾರ ಅದಕ್ಕೆ ಯಾಕೆ ಸಹಾಯ ಮಾಡಬೇಕು? ನೀವು ಸಂಪನ್ಮೂಲ ಕ್ರೂಡೀಕರಿಸಿ, ನೀವು ಮಾಡಿ ತೋರಿಸಿ. ಈ ಗ್ಯಾರಂಟಿಗಳಿಂದ ರಾಜ್ಯ ನಡೆಸೋಕಾಗುತ್ತದೆ ಅಂತ ತೋರಿಸಿ ನೋಡೋಣ. ನೀವು ಬಿಟ್ಟಿ ಭಾಗ್ಯಗಳೆಲ್ಲಾ ಕೊಟ್ಟು, ಈಗ ನಿಮ್ಮ ಹಣೆಗೆ ಗನ್ ಇಟ್ಟು ನಮ್ಮನ್ನು ಹೆದರಿಸ್ತೀರಾ? ಪಾಕಿಸ್ತಾನ ಅಮೆರಿಕಕ್ಕೆ ಮಾಡಿದಂತೆಯೇ, ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಮಾಡ್ತಿದೆ” ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ನೀಡಿರುವ ಹೇಳಿಕೆಯೊಂದು ವೈರಲ್ ಆಗಿದೆ.

ಸುದ್ದಿ ಸಂಸ್ಥೆ ಎಎನ್‌ಐ ಸಂಪಾದಕಿ ಸ್ಮಿತಾ ಪ್ರಕಾಶ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಅಣ್ಣಾಮಲೈ ಈ ಮಾತುಗಳನ್ನು ಹೇಳಿದ್ದಾರೆ. ಸಂದರ್ಶನ ಯೂಟ್ಯೂಬ್ ಲಿಂಕ್ ಕೆಳಗಿದೆ.

ಯೂಟ್ಯೂಬ್ ಲಿಂಕ್ ಇಲ್ಲಿದೆ 

ಫ್ಯಾಕ್ಟ್‌ಚೆಕ್‌ : ಅಣ್ಣಾಮಲೈ ಹೇಳಿದಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ ಹಣ ಕೇಳುತ್ತಿದೆಯಾ? ಹಣ ಕೊಡದಿದ್ದರೆ ಶೂಟ್ ಮಾಡಿಕೊಳ್ಳುತ್ತೀನಿ ಎಂಬ ರೀತಿಯಲ್ಲಿ ಪಾಕಿಸ್ತಾನದಂತೆ ಕೇಂದ್ರವನ್ನು ಹೆದರಿಸುತ್ತಿದೆಯಾ? ಎಂಬುವುದರ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದೆ.

ಬೆಂಗಳೂರಿನಲ್ಲಿ ಮಾರ್ಚ್ 24ರಂದು ಆಯೋಜಿಸಿದ್ದ ಕಾರ್ಯಕ್ರವೊಂದರಲ್ಲಿ ಮಾತನಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ ಭಾಗ್ಯ’ ಎಂದಿದ್ದರು. ಆ ಬಿಟ್ಟಿ ಭಾಗ್ಯಗಳಿಗೆ ಕೇಂದ್ರ ಹಣ ನೀಡಲ್ಲ ಎಂದು ಹೇಳಿದ್ದರು. ಅದೇ ರೀತಿಯ ಹೇಳಿಕೆಯನ್ನು ಅಣ್ಣಾಮಲೈ ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಸಂಬಂಧಪಟ್ಟಂತೆ ಮಾರ್ಚ್ 25ರಂದು ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದ ಸಚಿವ ಕೃಷ್ಣಬೈರೇಗೌಡ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ ಎಷ್ಟು? ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರ ಹಣ ನೀಡುತ್ತಿದೆಯಾ? ಇತ್ಯಾದಿ ಮಾಹಿತಿಗಳನ್ನು ಅಂಕಿ ಅಂಶ ಸಹಿತ ವಿವರಿಸಿದ್ದರು.

ಸಚಿವರು ನೀಡಿರುವ ಅಂಕಿ ಅಂಶಗಳ ಪ್ರಕಾರ, ರಾಜ್ಯಕ್ಕೆ ಕೇಂದ್ರದಿಂದ 2020-21ನೇ ಸಾಲಿನ ತೆರಿಗೆ ಬಾಕಿ ರೂ. 5,495 ಕೋಟಿ ಮತ್ತು 2021-26ನೇ ಸಾಲಿನಲ್ಲಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ರೂ.6,000 ಕೋಟಿ ಸೇರಿ ಒಟ್ಟು ರೂ.11,495 ಕೋಟಿ ಬರಬೇಕಿದೆ.

ಐದು ಗ್ಯಾರಂಟಿ ಯೋಜನೆಗಳಿಗೆ 2024-25 ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 52 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಈ ಪೈಕಿ ಗೃಹಜ್ಯೋತಿ ಯೋಜನೆಗೆ 9,657 ಕೋಟಿ ರೂ., ಅನ್ನಭಾಗ್ಯ ಯೋಜನೆಗೆ 8,079 ಕೋಟಿ ರೂ., ಶಕ್ತಿ ಯೋಜನೆಗೆ 5,015 ಕೋಟಿ ರೂ., ಯುವನಿಧಿ ಯೋಜನೆಗೆ 650 ಕೋಟಿ ರೂ., ಮತ್ತು ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ನೀಡಿದೆ. ಹಾಗಾಗಿ, ಇಲ್ಲಿ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಅನುದಾನದ ಅವಶ್ಯಕತೆ ಇಲ್ಲ.

ಅಣ್ಣಾಮಲೈ ಕೂಡ ನಿರ್ಮಲಾ ಸೀತಾರಾಮನ್ ರೀತಿಯೇ ಆರೋಪ ಮಾಡಿರುವುದರಿಂದ ಕೃಷ್ಣ ಬೈರೇಗೌಡರು ಬಿಡುಗಡೆ ಮಾಡಿರುವ ಅಂಕಿ ಅಂಶವನ್ನು ನಾವು ಇಲ್ಲಿಯೂ ಉಲ್ಲೇಖಿಸಬಹುದು. ಕೃಷ್ಣ ಬೈರೇಗೌಡರ ಸುದ್ದಿಗೋಷ್ಠಿಗೆ ಸಂಬಂಧಪಟ್ಟಂತೆ ನಾನುಗೌರಿ.ಕಾಂ ಮಾರ್ಚ್ 26, 2024 ರಂದು ಫ್ಯಾಕ್ಟ್‌ ಸುದ್ದಿಯನ್ನು ಪ್ರಕಟಿಸಿದೆ.

 ಸುದ್ದಿ ಲಿಂಕ್ ಇಲ್ಲಿದೆ

ಏಪ್ರಿಲ್ 3, 2024ರಂದು “ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆಯಾ?’ ಎಂಬ ಶೀರ್ಷಿಕೆಯಲ್ಲಿ ನಾನುಗೌರಿ.ಕಾಂ ಮತ್ತೊಂದು ಫ್ಯಾಕ್ಟ್‌ಚೆಕ್ ಸುದ್ದಿಯನ್ನು ಪ್ರಕಟಿಸಿದೆ. ಈ ಸುದ್ದಿಯಲ್ಲೂ ರಾಜ್ಯ ಸರ್ಕಾರ 2022-23ನೇ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಹಣ ಖರ್ಚು ಮಾಡಿತ್ತು. 2023-24ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಹಣ ಮೀಸಲಿಟ್ಟಿದೆ ಎಂಬುವುದರ ಕುರಿತು ವಿವರವಾಗಿ ಬರೆದಿದೆ.

ಸುದ್ದಿಯ ಲಿಂಕ್ ಇಲ್ಲಿದೆ

ಗಮನಾರ್ಹ ವಿಷಯವೆಂದರೆ, ಸಚಿವ ಕೃಷ್ಣ ಬೈರೇಗೌಡರು ದಾಖಲೆ ಸಹಿತ ವಿವರಿಸಿದಂತೆ ಮತ್ತು ರಾಜ್ಯ ಸರ್ಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ಹಣ ಮೀಸಲಿಟ್ಟಂತೆ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಅನುದಾನ ಬಳಸುತ್ತಿಲ್ಲ. ರಾಜ್ಯ ಕೇಳುತ್ತಿರುವುದು ಜಿಎಸ್‌ಟಿ ಪಾಲಿನ ಹಣ, ಹಣಕಾಸು ಆಯೋಗ ಶಿಫಾರಸು ಮಾಡಿದ ಬಾಕಿ ಹಣ ಮತ್ತು ರಾಜ್ಯಕ್ಕೆ ಎನ್‌ಡಿಆರ್‌ಎಫ್‌ ನಿದಿಯಡಿ ಬರಬೇಕಿರುವ ಬರ ಪರಿಹಾರದ ಹಣವಾಗಿದೆ.

2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ ರೂ. 36,675 ಕೋಟಿ ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ರೂ.31,180 ಕೋಟಿಗೆ ಕುಸಿದಿದೆ. ಹೀಗಾಗಿ, ರಾಜ್ಯಕ್ಕೆ ಆಗಿರುವ ನಷ್ಟ ರೂ. 5,495 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. ಇನ್ನು ಜಲಮೂಲಗಳ ಪುನರುಜ್ಜೀವನಕ್ಕೆ 3 ಸಾವಿರ ಕೋಟಿ ರೂ. ಮತ್ತು ಪೆರಿಫೆರಲ್ ರಿಂಗ್ ರಸ್ತೆಗೆ 3 ಸಾವಿರ ಕೋಟಿ ರೂ. ಸೇರಿ ಬೆಂಗಳೂರಿಗೆ ಒಟ್ಟು ರೂ.6,000 ಕೋಟಿ ಶಿಫಾರಸು ಮಾಡಲಾಗಿದೆ. ಹಳೆ ಬಾಕಿ ಸೇರಿ ಒಟ್ಟಾರೆ, ರೂ.11,495 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ

ಕೇಂದ್ರದಿಂದ ರಾಜ್ಯಕ್ಕೆ ಬರ ಬೇಕಿದ್ದ ಬರ ಪರಿಹಾರದ 35,162 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ರಾಜ್ಯದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಏಪ್ರಿಲ್ 22ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಚುನಾವಣಾ ಆಯೋಗವು ಸಮಸ್ಯೆಯನ್ನು ನಿಭಾಯಿಸಲು ಕೇಂದ್ರಕ್ಕೆ ಅನುಮತಿ ನೀಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿದೆ.

ಸುದ್ದಿ ಲಿಂಕ್ ಇಲ್ಲಿದೆ

ಹಾಗಾಗಿ, ನಿರ್ಮಲಾ ಸೀತಾರಾಮನ್ ಮತ್ತು ಅಣ್ಣಾಮಲೈ ಹೇಳಿದಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ ಹಣ ಕೇಳುತ್ತಿದೆ ಎಂಬುವುದು ಸುಳ್ಳು.

ಇದನ್ನೂ ಓದಿ : FACT CHECK : ‘ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...