ರೈತರ ಆಂದೋಲನಕ್ಕೆ ಶೀಘ್ರ ಅಂತ್ಯವಂತೂ ಕಾಣುತ್ತಿಲ್ಲ. ಸರ್ಕಾರದೊಂದಿಗಿನ ಮಾತುಕತೆ ಸ್ಥಗಿತಗೊಂಡಿದ್ದರಿಂದ, ಪಂಜಾಬ್ ಬಿಜೆಪಿಯ ಉನ್ನತ ನಾಯಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಹಿರಿಯ ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಕಾಂತಾ ಚಾವ್ಲಾ “ಆಂದೋಲನ ಇಷ್ಟು ದಿನ ನಡೆಯಲು ಅವಕಾಶ ನೀಡಬಾರದಿತ್ತು ಮತ್ತು ಪ್ರಧಾನಿ ಅವರು ಬಯಸಿದಲ್ಲಿ ‘ಒಂದು ದಿನದಲ್ಲಿ’ ಪರಿಸ್ಥಿತಿಯನ್ನು ಪರಿಹರಿಸಬಹುದು ಎಂದು ಶನಿವಾರ ಹೇಳಿದ್ದಾರೆ.
ಮುಂದಿನ ತಿಂಗಳು ಪಂಜಾಬಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಿದ್ದು ಇದು ಅಲ್ಲಿನ ಬಿಜೆಪಿಯಲ್ಲಿ ಆತಂಕ ಮೂಡಿಸಿದೆ. ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆಯಬಹುದೆಂದು ಪಂಜಾಬ್ ಬಿಜೆಪಿಯ ಹಲವು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಪ್ರತಿಭಟನೆ ನಡೆಯುತ್ತಿದ್ದರೂ ಶಾಂತಿಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ರೈತರು “ಜಗತ್ತಿಗೆ ಒಂದು ಮಾದರಿಯನ್ನು ನೀಡಿದ್ದಾರೆ” ಎಂದು ಬಿಜೆಪಿ ನಾಯಕಿ ಲಕ್ಷ್ಮೀ ಕಾಂತಾ ಚಾವ್ಲಾ ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಾಜಿ ಸಚಿವೆ, 78 ವರ್ಷದ ಚಾವ್ಲಾ ಅವರು ದಿ ಸಂಡೇ ಎಕ್ಸ್‌ಪ್ರೆಸ್ ಜೊತೆ ಮಾತನಾಡಿ, “ಭಾರತದ ಪ್ರಜೆಯಾಗಿ ಮಾತನಾಡುತ್ತಿದ್ದೇನೆ, ಬಿಜೆಪಿ ನಾಯಕಿಯಾಗಿ ಅಲ್ಲ. ಯಾವುದೇ ಪ್ರತಿಭಟನೆ ಇಷ್ಟು ದಿನ ನಡೆಯಬಾರದು ಎಂದು ನಾನು ಭಾವಿಸುತ್ತೇನೆ. ಅದಕ್ಕೆ ಪರಿಹಾರವನ್ನು ಬೇಗನೆ ಕಂಡುಹಿಡಿಯಬೇಕು. ಡಿಸೆಂಬರ್ ಮಧ್ಯದಲ್ಲಿ, ಶೀತ ಅಥವಾ ಆತ್ಮಹತ್ಯೆಯಿಯ ಕಾರಣಕ್ಕೆ ಸಾಯುತ್ತಿರುವ ರೈತರ ಸಂಖ್ಯೆ 30 ಕ್ಕೆ ತಲುಪಿದ ನಂತರ, ನಾನು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆ. ಕೃಷಿ ಸಚಿವರಿಗೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಪ್ರಧಾನಿ ಈ ವಿಷಯವನ್ನು ಕೈಗೆತ್ತಿಕೊಂಡು ಪರಿಹರಿಸಬೇಕು’ ಎಂದು ಅವರು ಹೇಳಿದ್ದಾರೆ.
‘ಪ್ರಧಾನಿ ಸ್ವತಃ ರೈತರೊಂದಿಗೆ ಕುಳಿತು ಪರಿಹಾರ ಕಂಡುಕೊಳ್ಳಬೇಕು. ಪ್ರಧಾನಮಂತ್ರಿ ಬಯಸಿದರೆ, ಒಂದು ದಿನದಲ್ಲಿ ಪರಿಹಾರವನ್ನು ಕಂಡುಹಿಡಿಯಬಹುದು ಎಂದು ನಾನು ಭಾವಿಸುತ್ತೇನೆ’ ಎಂದು ಲಕ್ಷ್ಮೀ ಕಾಂತಾ ಚಾವ್ಲಾ ಹೇಳಿದ್ದಾರೆ.
ಮಾಲ್ವಾ ಮೂಲದ ಬಿಜೆಪಿ ನಾಯಕರೊಬ್ಬರು ಪ್ರತಿಭಟನೆಯ ನಿಜವಾದ ಚಿತ್ರಣವನ್ನು ದೆಹಲಿ ನಾಯಕತ್ವಕ್ಕೆ ಪ್ರಸ್ತುತಪಡಿಸಲು ರಾಜ್ಯ ಘಟಕ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯ ಹೊರತಾಗಿಯೂ ಸಂಸತ್ತಿನಲ್ಲಿ ಕೃಷಿ ಸುಗ್ರೀವಾಜ್ಞೆಗಳನ್ನು ಅಂಗೀಕರಿಸಲಾಯಿತು. ನಂತರ, ಅಕಾಲಿ ದಳವು ನಮ್ಮೊಂದಿಗಿನ 27 ವರ್ಷಗಳ ಮೈತ್ರಿಯನ್ನು ಮುರಿದುಕೊಂಡಿತು. ಆಗಲೂ ನಮ್ಮ ಪಕ್ಷವು ಎಚ್ಚರಗೊಳ್ಳಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ರೈತರು ರೈಲ್ ರೋಕೊ ಮತ್ತು ಅನಿರ್ದಿಷ್ಟ ಪ್ರತಿಭಟನೆಗಳನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸಿದರೂ, ಕೇಂದ್ರ ಸಚಿವರೊಂದಿಗೆ ಮೊದಲ ಸಭೆಯನ್ನು ತುಂಬ ತಡವಾಗಿ, (ನವೆಂಬರ್ 13 ರಂದು) ಏರ್ಪಡಿಸಲಾಯಿತು. ರೈತರು ದೆಹಲಿ ಗಡಿಗಳಿಗೆ ತಲುಪಿದಾಗಿನಿಂದ ಹತ್ತು ಸುತ್ತಿನ ಸಭೆಗಳು ನಡೆದಿವೆ, ಆದರೆ ಯಾವುದೇ ಪ್ರಗತಿಯಿಲ್ಲ’ ಎಂದು ಬಿಜೆಪಿ ನಾಯಕ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷಿ ಕಾಯ್ದೆಗಳ ಕುರಿತ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಅಕ್ಟೋಬರ್ 15 ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ ಬಿಜೆಪಿಯ ಮಾಜಿ ರಾಜ್ಯ ಕಾರ್ಯದರ್ಶಿ ಮಂಜಿಂದರ್ ಸಿಂಗ್, ರಾಜ್ಯದ ಹಿರಿಯ ನಾಯಕತ್ವ ಎಂದಿಗೂ ಆಂದೋಲನವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳುತ್ತಾರೆ.
‘ಕಳೆದ 10 ದಿನಗಳಲ್ಲಿ 15 ಕ್ಕೂ ಹೆಚ್ಚು ಬಿಜೆಪಿ ನಾಯಕರು ಪಕ್ಷ ತೊರೆದು ಅಕಾಲಿ ದಳ ಸೇರಿದ್ದಾರೆ. ಹಿಂದೆ ಹಲವು ಸಲ ಈ ಕಾಯ್ದೆಗಳ ಅಪಾಯದ ಕುರಿತು ನಮ್ಮ ಕೇಂದ್ರ ನಾಯಕರೊಂದಿಗೆ ಗಂಭೀರವಾಗಿ ಚರ್ಚಿಸಿದ್ದೇನೆ. ಆದರೆ ಕೇಂದ್ರ ನಾಯಕತ್ವಕ್ಕೆ ಹಠವೇ ಮುಖ್ಯವಾದ ಕಾರಣಕ್ಕೆ ನಾನು ಬಿಜೆಪಿಯಿಂದ ಹೊರ ಬಂದಿದ್ದೇನೆ ” ಎಂದು ಮಂಜಿಂದರ್ ಸಿಂಗ್ ಹೇಳಿದ್ದಾರೆ.
ಫೆಬ್ರವರಿ 15 ರಂದು ಪುರಸಭೆ ಚುನಾವಣೆಗಳು ನಡೆಯಲಿದ್ದು, ಕೃಷಿ ಕಾಯ್ದೆಗಳ ಕುರಿತಾದ ಕೇಂದ್ರದ ನಿಲುವಿಗೆ ಪಂಜಾಬ್ ಬಿಜೆಪಿಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಅಸಮಾಧಾನ ಭುಗಿಲೇಳುತ್ತಿದೆ.
ರಾಜ್ಯದ 31 ಬಿಜೆಪಿ ನಾಯಕರ ಮನೆಗಳ ಹೊರಗೆ ರೈತರ ಅನಿರ್ದಿಷ್ಟ ಆಂದೋಲನಗಳು ಮುಂದುವರಿದಿವೆ. ಸಾರ್ವಜನಿಕ ಸಮಾರಂಭಕ್ಕಾಗಿ ಬಿಜೆಪಿ ನಾಯಕರು ಮನೆಗಳಿಂದ ಹೊರಬಂದಾಗಲೆಲ್ಲಾ ರೈತರ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ. ಪ್ರತಿಭಟನಾಕಾರರು ಬತಿಂಡಾ ಹೋಟೆಲ್ ಹೊರಗೆ ಶನಿವಾರ ಧರಣಿ ನಡೆಸಿದರು, ಅಲ್ಲಿ ಮಾಜಿ ಸಚಿವ, ಬಿಜೆಪಿಯ ಮನೋರಂಜನ್ ಕಲಿಯಾ ಸಭೆ ನಡೆಸಲು ನಿರ್ಧರಿಸಲಾಗಿತ್ತು.
ಇದೇ ವೇಳೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಬಿಜೆಪಿ ನಾಯಕರು ತಮ್ಮೊಂದಿಗೆ ಸೇರಲು ಸಜ್ಜಾಗಿದ್ದಾರೆ ಎಂದು ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಕೂಡ ಹೇಳಿದ್ದಾರೆ.
ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್
ಇದನ್ನೂ ಓದಿ: ಹಸಿದಾಗ ತಿನ್ನುವುದು ರೊಟ್ಟಿಯನ್ನೇ ವಿನಃ ಜಿಯೋ ಸಿಮ್‌ನಲ್ಲ: ಸಿಮರ್ ಬಲ್ ಸಿಂಗ್
