ಐಐಟಿ ಮದ್ರಾಸ್ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಲತೀಫ್ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಇಬ್ಬರು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಕುಳಿತಿದ್ದರು. ಕಾಲೇಜು ಮಂಡಳಿ ಎದುರು ಮೂರು ಬೇಡಿಕೆಗಳನ್ನು ಮುಂದಿರಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳನ್ನು ಕಾಲೇಜು ಆಡಳಿತ ಮಂಡಳಿ ಈಡೇರಿಸುವ ಭರವಸೆ ನೀಡಿದ್ದು, ಇನ್ನೊಂದು ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದೆ.

ಸೋಮವಾರ ಬೆಳಗ್ಗೆ 10 ಗಂಟೆಯಿಂದ ಅಜರ್ ಮೊಯ್ದೀನ್ ಮತ್ತು ಜಸ್ಟಿನ್ ಜೋಸೆಫ್ ಎಂಬ ಇಬ್ಬರು ವಿದ್ಯಾರ್ಥಿಗಳು ಕ್ಯಾಂಪಸ್‌ನ ಮುಖ್ಯ ದ್ವಾರದ ಬಳಿ ಭಿತ್ತಿಪತ್ರ ಹಿಡಿದು, ಪ್ರತಿಭಟನೆಗೆ ಕುಳಿತಿದ್ದಾರೆ. ಪ್ರಮುಖ ಕಾಲೇಜುಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಸಾವಿನ ಪ್ರಕರಣಗಳನ್ನು ಕೊನೆಗೊಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉಳಿದ ವಿದ್ಯಾರ್ಥಿಗಳು ಬೆಂಬಲಿಸಿದರು.

ನವೆಂಬರ್ 9 ರಂದು ಮಾನವಿಕ ಮತ್ತು ಸಮಾಜ ವಿಜ್ಞಾನ ವಿಷಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಫಾತಿಮಾ ಲತೀಫ್ ಆತ್ಮಹತ್ಯೆಗೆ ಶರಣಾಗಿದ್ದಳು. ಫಾತಿಮಾ ಸಾವಿನ ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮ ವಿಚಾರಿಸಲು ಬಾಹ್ಯ ತಜ್ಞರ ಸಮಿತಿ ರಚಿಸುವುದು, ಕಾಲೇಜುಗಳ ಪ್ರತಿ ಇಲಾಖೆ ಕುಂದುಕೊರತೆ ನಿವಾರಿಸಲು ಘಟಕಗಳನ್ನು ಸ್ಥಾಪಿಸುವುದು, ಫಾತಿಮಾ ಕುಟುಂಬಸ್ಥರು ಮಾಡಿದ ಆರೋಪಗಳ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಪ್ರಾಧ್ಯಾಪಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಆಂತರಿಕ ಬೇಡಿಕೆ ಈಡೇರಿಸು ಬಗ್ಗೆ ಆಲೋಚಿಸುವುದಾಗಿ ಮಂಡಳಿ ಹೇಳಿದೆ.

ನಮ್ಮ ಎರಡು ಬೇಡಿಕೆಗಳನ್ನು ಶೀಘ್ರವಾಗಿ ಸ್ವೀಕರಿಸಲಾಗುವುದು ಎಂದು ಡೀನ್, ವಿದ್ಯಾರ್ಥಿ ಸಂಘಕ್ಕೆ ಭರವಸೆ ನೀಡಿದ್ದಾರೆ. ಹೀಗಾಗಿ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ಐಐಟಿ ಮದ್ರಾಸ್‌ನಿಂದ ಗುರುತಿಸಲ್ಪಟ್ಟ ಸ್ವತಂತ್ರ ವಿದ್ಯಾರ್ಥಿ ಸಂಘವಾದ ಚಿಂತಾ ಬಾರ್, ಡೀನ್ ಶಿವಕುಮಾರ್.ಎಂ .ಶ್ರೀನಿವಾಸನ್ ಅವರಿಂದ ಸ್ವೀಕರಿಸಿರುವ ಇಮೇಲ್ ಸ್ಕ್ರೀನ್ ಶಾರ್ಟ್ ಗಳನ್ನು ಪೋಸ್ಟ್ ಮಾಡಿದೆ. ಕಿರುಕುಳ, ತಾರತಮ್ಯ ಇತ್ಯಾದಿಗಳ ವಿರುದ್ಧದ ಕುಂದುಕೊರತೆ ನಿವಾರಣಾ ಕಾರ್ಯವಿಧಾನವು ಇಲಾಖೆಗಳಲ್ಲಿ ಲಭ್ಯವಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾನು ನಿರ್ದೇಶಕರೊಂದಿಗೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ” ಎಂದು ಇಮೇಲ್ ತಿಳಿಸಿದೆ.

1 COMMENT

LEAVE A REPLY

Please enter your comment!
Please enter your name here