Homeಮುಖಪುಟಬೆಳ್ಳಿಚುಕ್ಕಿ; ವಿಶ್ವದ ಪ್ರಥಮ ಬೆಳಕು - CMBR

ಬೆಳ್ಳಿಚುಕ್ಕಿ; ವಿಶ್ವದ ಪ್ರಥಮ ಬೆಳಕು – CMBR

- Advertisement -
- Advertisement -

“ಇಲ್ಲೇನೊ ಸರಿಯಿಲ್ಲ, ಇನ್ನೇನೋ ಬೇಕಲ್ಲಾ, ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ (ನಾವೇ) ಗಾಳಿಪಟ” ಎಂಬ ಗಾಳಿಪಟದ ಸಿನಿಮಾ ಹಾಡನ್ನು ಕೇಳಿರಬಹುದು. ಆ ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಬಾನಂಗಳದ ಆಕಾಶ ವೀಕ್ಷಣೆ ಮಾಡೋಣ ಅಂತ ಆಕಾಶ ನೋಡಿದರೆ, ಮೋಡಗಳು ಬಾನಿನಲ್ಲಿ ನೃತ್ಯ ಮಾಡುತ್ತಿವೆ. ಬೆಳಗಿನ ಹೊತ್ತು ಸೂರ್ಯನನ್ನೂ ಮರೆಮಾಚಿ ಕಾರ್ಮೋಡಗಳು ಹರಡಿದ್ದರೆ, ಸೂರ್ಯ ಜಾರಿದಾಗ ಮೋಡಗಳಿಂದ ಮಳೆಯೂ ಜಾರುತಿದೆ. ನಮ್ಮ ಆಕಾಶ ವೀಕ್ಷಣೆಗೆ ಮಳೆಯ ಸಿಂಚನವಾಗುತ್ತಿರುವುದಂತು ನಿಜ. ಇರಲಿ ಈ ವಾರ ಆಕಾಶ ವೀಕ್ಷಣೆಯ ಬದಲು, ವಿಶ್ವದ ನಿಗೂಢ ಸತ್ಯಗಳನ್ನು ಬಿಡಿಸುವ ದಾರಿಯಲ್ಲಿ ನಡೆದಿರುವ ವಿಸ್ಮಯಕಾರಿಯಾದ ಮತ್ತು ಆಕಸ್ಮಿಕ ಘಟನೆಯೊಂದರೆ ಬಗ್ಗೆ ಇಂದು ತಿಳಿಯೋಣ.

ಬ್ರಹ್ಮಾಂಡ ಎಷ್ಟು ದೊಡ್ಡದು ಎಂದು ಊಹಿಸುವುದು ಕಷ್ಟ. ನೀವು ಊಹಿಸಿದಷ್ಟು, ಇನ್ನೂ ದೊಡ್ಡದಾಗುತ್ತಾ ಹೋಗುತ್ತದೆ. ಅಂದರೆ, ಬ್ರಹ್ಮಾಂಡದ ನಿಗೂಢತೆಗಳನ್ನು ಭೇದಿಸಿದಷ್ಟು ಮತ್ತಷ್ಟು ನಿಗೂಢತೆಗಳು ಕಾಡುತ್ತಿರುತ್ತವೆ ಮತ್ತು ಆ ಚಕ್ರ ಮುಂದುವರಿಯುತ್ತಲೇ ಇರುತ್ತದೆ.

20ನೇ ಶತಮಾನ ಭೌತ ವಿಜ್ಞಾನ ಮತ್ತು ಖಗೋಳ ವಿಜ್ಞಾನಕ್ಕೆ ಮಾಂತ್ರಿಕ ಸಮಯ. ಮನುಷ್ಯನ ಕಲ್ಪನೆಯ ಪರಿಧಿಗಳನ್ನು ಹಿಗ್ಗಿಸಿದ ಶತಮಾನ ಎಂದೇ ಬಿಂಬಿಸಬಹುದು. ಅದರಲ್ಲೂ ದೂರದರ್ಶಕಗಳಲ್ಲಿನ ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ, ವಿಶ್ವದ ಉಗಮದ ಬಗೆಗಿನ ವಿಷಯಗಳು ನಮ್ಮ ಎದುರು ಎಳೆಎಳೆಯಾಗಿ ತೆರೆದುಕೊಂಡವು.

1923ರಲ್ಲಿ ಅಮೇರಿಕಾದ ಮೌಂಟ್ ವಿಲ್‌ಸನ್ ವೀಕ್ಷಣಾಲಯಕ್ಕೆ ಆಗ ತಾನೆ ಎಡ್ವಿನ್ ಹಬಲ್ ಎಂಬ ಖಗೋಳ ವಿಜ್ಞಾನಿ ಸೇರಿಕೊಂಡರು. ನಿಮಗೆ ಹಬಲ್ ಎಂಬ ಹೆಸರು ಚಿರಪರಿಚಿತ ಅನ್ನಿಸಬಹುದು. ನಾಸಾ ಬಾಹ್ಯಾಕಾಶ ಸಂಸ್ಥೆ, 1990ರಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಖಗೋಳ ವೀಕ್ಷಣಾಲಯದ ಹೆಸರನ್ನು ಹಬಲ್ ದೂರದರ್ಶಕ ಎಂದು ಕರೆಯಿತು. ಈ ಹಬಲ್ ದೂರದರ್ಶಕದ ಸಹಾಯದಿಂದ ತೆಗೆದ ಚಿತ್ರಗಳು, ಬ್ರಹ್ಮಾಂಡದ ವರ್ಣರಂಜಿತ ಚಿತ್ರಕಾವ್ಯವನ್ನೇ ಸೃಷ್ಟಿಸಿರುವುದಂತೂ ನಿಜ. ಜನಸಾಮಾನ್ಯರು ಹಬಲ್‌ನ ಬಣ್ಣದ ಚಿತ್ರಗಳನ್ನು ಕಂಡು ವಿಶ್ವದ ಅನಂತತೆ ಬಗ್ಗೆ ಮೂಕವಿಸ್ಮಿತರಾಗಿದ್ದಾರೆ. ಹಾಗಾಗಿ ಈ ಹಬಲ್ ದೂರದರ್ಶಕ ಎಲ್ಲರಿಗೂ ಚಿರಪರಿಚಿತ. ಕಳೆದ ಮೂವತ್ತು ವರ್ಷಗಳಲ್ಲಿ ವಿಶ್ವದ ಬಗ್ಗೆ ಹಬಲ್ ದೂರದರ್ಶಕ ಬಿಚ್ಚಿಟ್ಟ ಸತ್ಯಗಳು ಅಪಾರ. ಇಂದಿಗೂ ಈ ಹಬಲ್ ದೂರದರ್ಶಕ ಚಾಲ್ತಿಯಲ್ಲಿದೆ, ಅದರೆ ಇದರಲ್ಲಿನ ತಂತ್ರಜ್ಞಾನಕ್ಕೆ ವಯಸ್ಸಾಗಿದೆ. ಆಧುನಿಕ ತಂತ್ರಜ್ಞಾನ ಬೆಳೆದಂತೆ, ಅನೇಕ ಹೊಸ ಆವಿಷ್ಕಾರಗಳು ನಡೆದಂತೆ, ಹಬಲ್ ದೂರದರ್ಶಕಕ್ಕೆ ಉತ್ತರಾಧಿಕಾರಿ ಬರಲೇಬೇಕಾಗುತ್ತದೆ. ಅದುವೆ ಜೇಮ್ಸ್ ವೆಬ್ ದೂರದರ್ಶಕ!

ಆಧುನಿಕ ಮತ್ತು ಭವಿಷ್ಯದ ತಂತ್ರಜ್ಞಾನವುಳ್ಳ ಈ ದೂರದರ್ಶಕವನ್ನು ಈ ವರ್ಷದ ಡಿಸೆಂಬರ್‌ನಲ್ಲಿ ನಾಸಾ ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಜೇಮ್ ವೆಬ್ ದೂರದರ್ಶಕ ಹಬಲ್‌ಗಿಂತಲೂ ಸುಮಾರು ನಾಲ್ಕುಪಟ್ಟು ದೊಡ್ಡದಾಗಿದ್ದು, ವಿಶ್ವದ ನಿಗೂಢತೆಯನ್ನು ವೇಗವಾಗಿ ಭೇದಿಸುವಲ್ಲಿ ಇದರ ಉಡಾವಣೆ ಒಂದು ಕ್ರಾಂತಿಕಾರಿಕ ಹೆಜ್ಜೆ ಇಡಬಹುದೇನೋ!

ಮೌಂಟ್ ವಿಲ್‌ಸನ್ ವೀಕ್ಷಣಾಲಯಕ್ಕೆ ಸೇರಿಕೊಂಡಿದ್ದ ಎಡ್ವಿನ್ ಹಬಲ್, ನಮ್ಮ ಹಾಲು ಹಾದಿ (Milky Way) ಗ್ಯಾಲಾಕ್ಸಿಗೆ ಹತ್ತಿರವಾಗಿದ್ದ ಆಂಡ್ರೋಮಿಡಾ (Andromeda) ಗ್ಯಾಲಾಕ್ಸಿಯ ಅಧ್ಯಯನದಲ್ಲಿ ತೊಡಗುತ್ತಾರೆ. ಆಂಡ್ರೋಮಿಡಾ ನಂತರ ಅನೇಕ ಗ್ಯಾಲಾಕ್ಸಿಗಳ ಅಧ್ಯಯನ ನಡೆಸಿದ ಹಬಲ್, ನಮ್ಮ ವಿಶ್ವದ ಬಗ್ಗೆ ಇದ್ದ ನಿಗೂಢತೆಯನ್ನು ತಮ್ಮ ಥಿಯರಿಯ ಮೂಲಕ ಭೇದಿಸುವಲ್ಲಿ ಯಶಸ್ವಿಯಾಗುತ್ತಾರೆ. ಹಬಲ್ ಲಾ (Hubble Law) ಎಂಬ ಹೊಸ ಸಮೀಕರಣಗಳನ್ನು ಹುಟ್ಟುಹಾಕಿದ ಹಬಲ್, ಈ ಸಮೀಕರಣದ ಸಹಾಯದಿಂದ ಅನೇಕ ಗ್ಯಾಲಾಕ್ಸಿಗಳು ಭೂಮಿಯಿಂದ ಎಷ್ಟು ದೂರವಿದೆ ಎನ್ನುವುದನ್ನು ಲೆಕ್ಕ ಹಾಕುತ್ತಾರೆ. ಹಬಲ್ ಸಮೀಕರಣ 20ನೇ ಶತಮಾನದ ಅತ್ಯಂತ ಪ್ರಮುಖ ಸಮೀಕರಣ. ಹಬಲ್‌ರವರ ಗ್ಯಾಲಾಕ್ಸಿಗಳ ಅಧ್ಯಯನ ಮತ್ತು ಹಬಲ್ ಲಾ ಎಲ್ಲವೂ ವಿಶ್ವದ ಬಗ್ಗೆ ಅಂದಿಗೆ ಇದ್ದ ಹಲವು ಕಲ್ಪನೆಗಳನ್ನು ಒಡೆದು ಹಾಕಿದವು. ಅಂದಿನ ವಿಜ್ಞಾನ ವಿಶ್ವವು ಎಲ್ಲಾ ದಿಕ್ಕುಗಳಲ್ಲು ತಟಸ್ಥವಾಗಿದೆ ಎಂದು ಗ್ರಹಿಸಿತ್ತು. ಐನ್‌ಸ್ಟೈನ್‌ರವರೂ ಕೂಡ ವಿಶ್ವ ತಟಸ್ಥವಾಗಿರುವುದನ್ನು ಅಚಲವಾಗಿ ನಂಬಿದ್ದರು (1931ರ ಹೊತ್ತಿಗೆ ಐನ್‌ಸ್ಟೈನ್ ವಿಸ್ತಾರವಾಗುತ್ತಿರುವ ವಿಶ್ವವನ್ನು ಒಪ್ಪಿದರು). ಆದರೆ, ಹಬಲ್‌ನ ಅಧ್ಯಯನ ನಾವು ತಟಸ್ಥವಾಗಿರುವ ವಿಶ್ವದಲ್ಲಿ ಇಲ್ಲಾ, ಬದಲಾಗಿ ಪ್ರತಿ ಕ್ಷಣವು ವಿಸ್ತಾರವಾಗುತ್ತಿರುವ ವಿಶ್ವದಲ್ಲಿದ್ದೇವೆ ಎಂದು ತಿಳಿಸಿತು.

We live in an Expanding Universe! ಈ Expanding Universeಅನ್ನು ಕಲ್ಪಿಸಿಕೊಳ್ಳುವುದು ಹೇಗೆಂದರೆ, ಒಂದು ಬಲೂನ್ ತೆಗೆದುಕೊಂಡು ಅದರೆ ಮೇಲೆ ದಪ್ಪ ದಪ್ಪ ಚುಕ್ಕಿಗಳನ್ನು Marker ಮುಖಾಂತರ ಬರೆದು, ನಂತರ ಬಲೂನ್‌ಅನ್ನು ಊದಿ. ಬಲೂನ್ ದೊಡ್ಡದಾದಂತೆ, ಚುಕ್ಕೆಗಳ ಮಧ್ಯೆ ಇರುವ ದೂರವು ದೊಡ್ಡದಾಗುತ್ತಾ ಹೊಗುತ್ತವೆ. ಅಂದರೆ, ಒಂದೊಂದು ಚುಕ್ಕಿಯು ಇತರೆ ಚುಕ್ಕೆಗಳಿಂದ ದೂರ ಸಾಗುವುದನ್ನು ಗ್ರಹಿಸಬಹುದು. ಈಗ ಈ ಚುಕ್ಕೆಗಳನ್ನು ವಿಶ್ವದಲ್ಲಿನ ಗ್ಯಾಲಾಕ್ಸಿಗಳು ಎಂದು ತಿಳಿದುಕೊಂಡು ಯೋಚಿಸಿ! ಏನಾಗುತ್ತಿದೆ? ಗ್ಯಾಲಾಕ್ಸಿಗಳು ಪರಸ್ಟರ ದೂರ ಹೋಗುತ್ತಿವೆ. ಅಂದರೆ, ಗ್ಯಾಲಾಕ್ಸಿಗಳ ನಡುವಿನ ದೂರ ವಿಸ್ತಾರವಾಗುತ್ತಿದೆ. ಇದನ್ನೆ Expanding Universe ಎಂದು ಗ್ರಹಿಸಿರುವುದು.

ಎಡ್ವಿನ್ ಹಬಲ್ ಅಧ್ಯಯನಗಳಿಂದ, ವಿಶ್ವವು ಲಕ್ಷಾಂತರ-ಕೋಟ್ಯಂತರ ವರ್ಷಗಳಿಂದಲೂ ವಿಸ್ತಾರವಾಗುತ್ತಿದೆ ಎನ್ನವ ವಿಷಯವನ್ನು ತಿಳಿದೆವು. ನಮ್ಮ ಕಲ್ಪನೆಯ ಪ್ರ್ರಕಾರ, ವಿಶ್ವವು ವಿಸ್ತಾರವಾಗುತ್ತಿದೆ ಎಂದರೆ, ವಿಶ್ವವು ಮೊದಲಿಗೆ ಒಂದು ಬಿಂದುವಿನಿಂದ ಪ್ರಾರಂಭವಾಗಿದ್ದರೆ ಮಾತ್ರ ಸಾಧ್ಯ. ಈ ದಿಕ್ಕಿನಲ್ಲಿ ಯೋಚನೆ ಪ್ರಾರಂಭಿಸಿದಾಗ, ಹಬಲ್ ಲಾ ಮುಖಾಂತರವೇ ನಮಗೆ ವಿಶ್ವದ ಉಗಮದ ಕಾಲಘಟ್ಟ ಗೊತ್ತಾಗುತ್ತದೆ. ವಿಶ್ವದ ವಯಸ್ಸು, ಸರಿ ಸುಮಾರು 15ರಿಂದ 18 ಬಿಲಿಯನ್ ವರ್ಷಗಳು. ಅಂದರೆ, ಅಷ್ಟು ಬಿಲಿಯನ್ ವರ್ಷಗಳ ಹಿಂದೆ ಇಡೀ ಬ್ರಹ್ಮಾಂಡ ಯಕಶ್ಚಿತ್ ಒಂದು ಕೇಂದ್ರಬಿಂದುವಾಗಿತ್ತು.

ಈಗ ನಾವು ನೋಡುತ್ತಿರುವ ಎಲ್ಲಾ ದ್ರವ್ಯಗಳು (Matter) ಆ ಕೇಂದ್ರದಲ್ಲಿಯೇ ಇತ್ತು, ಆ ಕೇಂದ್ರವು ಅನಂತವಾದ ಸಾಂದ್ರತೆ (Density) ಹೊಂದಿತ್ತು ಎಂದು ಗ್ರಹಿಸಲಾಯಿತು. ಈ ಅನಂತ ಸಾಂದ್ರತೆಯ ಬಿಂದು ಒಮ್ಮೆಲೆ Explode ಆಯಿತೇ? ಅದೇ Big Bang! ಅಲ್ಲಿಂದ ಇಲ್ಲಿಯವರೆಗೂ ಆ explode ಆದ ಬಿಂದುವು ವಿಸ್ತಾರವಾಗುತ್ತಲೇ ಇದೆ. ಈ ವಿಸ್ತಾರವಾಗುತ್ತಿರುವ ವಿಶ್ವದ ಒಳಗೆ ನಮ್ಮ ಸೌರ ಮಂಡಲ, ಗ್ರಹಗಳು, ನಕ್ಷತ್ರಗಳು, ನೆಬುಲ್ಲಾಗಳು, ಗ್ಯಾಲಾಕ್ಸಿಗಳು ನಾವು ನೀವು ಎಲ್ಲರೂ ಇರುವುದು!

ಅನಂತ ಸಾಂದ್ರತೆಯ ಬಿಂದುವು explode ಆಗಿ ಎಲ್ಲಾ ದಿಕ್ಕಿನಲ್ಲೂ ವಿಸ್ತಾರವಾಗುತ್ತಿದ್ದಾಗ, ಈ ವಿಸ್ತಾರವಾದ ಗೋಳಕ್ಕೆ (Sphere) ಹೊರಪದರ (ಅರ್ಥಮಾಡಿಕೊಳ್ಳಲು ಬಳಸಿದ ಪದ, ವೈಜ್ಞಾನಿಕ ಪದವಲ್ಲ) ಇರಲೇ ಬೇಕು. ಅಂದರೆ, ಅನಂತ ಸಾಂದ್ರತೆಯುಳ್ಳ ಬಿಂದುವು ಸ್ಪೋಟವಾದಾಗ ಮೂಡಿದ ಪ್ರಥಮ ಬೆಳಕು – ಅದು ಇಂದಿಗೂ ಗೋಳಾಕಾರದಲ್ಲಿ ವಿಸ್ತಾರವಾಗುತ್ತಲೆ ಇದ್ದಿರಬಹುದು ಎಂಬ ಊಹೆ. ಇದ್ದರೆ ಆ ಪ್ರಥಮ ಬೆಳಕಿನ ಪದರವನ್ನು ನಾವು ಅಧ್ಯಯನ ಮಾಡಬಹುದಾ? ಆಧ್ಯಯನ ಮಾಡಿದರೆ Big Bang ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಬಹುದು ಅಥವಾ Big Bang ನಡೆದಿದೆ ಎಂದು ದೃಢೀಕರಿಸಬಹುದು ಎಂದು ತಿಳಿದು ಆ ಪದರದ ಇರುವಿಕೆಯನ್ನು ಹುಡುಕಲು ವಿಜ್ಞಾನಿಗಳು ಹೊರಟರು.

1960ರಲ್ಲಿ ಡಿಕ್ಕೆ, ಪೆಬೆಲ್ಸ್ ಮತ್ತು ಆವರ ತಂಡವು Big Bangನ ಪ್ರಥಮ ಬೆಳಕಿನ ಪದರದ ಹುಡುಕುವಿಕೆಯಲ್ಲಿ ಮಂಚೂಣಿಯಲ್ಲಿದ್ದರು. ಇವರು Big Bang ನಂತರ 18 ಬಿಲಿಯನ್ ವರ್ಷಗಳು ಕಳೆದಿರುವುದರಿಂದ, ಆ ಬೆಳಕಿನ ಪದರವು ತಂಪಾಗಿ Microwave ತರಂಗಾಂತರದಲ್ಲಿ ಗೋಚರಿಸಬಹುದು ಎಂದು ಅಧ್ಯಯನ ಮಾಡಿ, ಪ್ರಯೋಗಗಳನ್ನು ನಡೆಸುತ್ತಿದ್ದರು.

ಡಿಕ್ಕೆ, ಪೆಬಲ್ಸ್ ಮತ್ತು ತಂಡದವರು ಅಧ್ಯಯನ ಮಾಡುತ್ತಿದ್ದ ಸಂಸ್ಥೆಯ ಕೆಲವು ಕಿಲೋಮೀಟರ್‌ಗಳ
ದೂರದಲ್ಲಿ ಬೆಲ್ ಲಾಬೋರೇಟರಿಯ ಇಬ್ಬರು ಇಂಜಿನಿಯರ್‌ಗಳಾದ ಪೆನ್ಸಿಯಾಸ್ ಮತ್ತು ವಿಲ್ಸನ್, ಕೃತಕ ಉಪಗ್ರಹಗಳೊಂದಿಗೆ ಸಂವಹನ ನಡೆಸಲು ಯೋಗ್ಯವಾಗುವಂತೆ ಒಂದು Microwave Horn Antenna ನಿರ್ಮಿಸುತ್ತಿದ್ದರು. ಈ Microwave Horn Antenna ಅಂದಿಗೆ ವಿನೂತನವಾದ ವಿನ್ಯಾಸ ಹೊಂದಿದ್ದ ರೇಡಿಯೋ ಅಂಟೆನಾವಾಗಿತ್ತು.

ಇವರು, ಈ ಅಂಟೆನಾ ನಿರ್ಮಿಸಿ ಪರೀಕ್ಷೆ ಮಾಡುತ್ತಿರಬೇಕಾದರೆ, ಆಂಟೆನಾದ signalನಲ್ಲಿ background noise (ಉಪಯೋಗವಲ್ಲದ ಹಿನ್ನೆಲೆ ಸಂಕೇತ) ದಾಖಲೆಯಾಗುತ್ತಿದ್ದುದ್ದನ್ನು ಗಮನಿಸಿದರು. ಈ noiseಅನ್ನು ತೆಗೆಯುವುದಕ್ಕೆ ಅನೇಕ ಪ್ರಯೋಗ ಮಾಡಿದರೂ, ಸಫಲವಾಗಲಿಲ್ಲ. ಅಂಟೆನಾವನ್ನು ಯಾವುದೇ ದಿಕ್ಕಿನಲ್ಲಿ, ರಾತ್ರಿಯಲ್ಲಿ, ಹಗಲಿನಲ್ಲಿ, ಮೋಡದ ಸಮಯದಲ್ಲಿ ಉಪಯೋಗಿಸಿದರೂ ಈ noise ಇದ್ದೇ ಇರುತ್ತಿತ್ತು. ಕೊನೆಗೆ ಅಂಟೆನಾದ ಸಿಗ್ನಲ್ ಸ್ವೀಕೃತಿ ಭಾಗದ ಸೆನ್ಸಾರ್‌ಗಳಲ್ಲಿದ್ದ ಹಕ್ಕಿಗಳ ಪಿಕ್ಕೆಗಳು, ಗರಿಗಳು ಮತ್ತು ಗೂಡುಗಳನ್ನು ಕಂಡರು. ಇವೆಲ್ಲವನ್ನೂ ಸ್ವಚ್ಚಮಾಡಿ ಅಂಟೆನಾವನ್ನು ಪರೀಕ್ಷಿಸಿದರೂ, ಆ noise ಇದ್ದೇ ಇರುತ್ತಿತ್ತು.

ಹಾರ್ನ್ ಅಂಟೆನಾದಲ್ಲಿ ದಾಖಲಾಗುತ್ತಿದ್ದ noise ಬಗ್ಗೆ ಏನೂ ತಿಳಿಯದ ಪೆನ್ಸಿಯಾಸ್ ಮತ್ತು ವಿಲ್ಸನ್, ತಮ್ಮ ಸ್ನೇಹಿತನ ಮುಖಾಂತರ ಡಿಕ್ಕೆ, ಪೆಬಲ್ಸ್ ಮತ್ತು ತಂಡದ ಅಧ್ಯಯನದ ಬಗ್ಗೆ ತಿಳಿದರು. ಅವರು ಕೂಡ Microwave Horn Antennaದ ಹತ್ತಿರದಲ್ಲಿಯೇ Big Bangನ ಪ್ರಥಮ ಬೆಳಕಿನ ಹುಡುಕಾಟವನ್ನು microwave ತರಂಗಾಂತರದಲ್ಲಿ ನಡೆಸುತ್ತಿದ್ದನ್ನು ಅರಿತ ಪೆನ್ಸಿಯಾಸ್ ಮತ್ತು ವಿಲ್ಸನ್, ಅವರನ್ನು Microwave Horn Antennaದಲ್ಲಿ ದಾಖಲಾಗುತ್ತಿದ್ದ background noiseಅನ್ನು ಪರೀಕ್ಷಿಸಲು ಆಮಂತ್ರಿಸಿದರು. ಪೆನ್ಸಿಯಾಸ್ ಮತ್ತು ವಿಲ್ಸನ್ ತಮಗೆ ಅರಿವಿಲ್ಲದಿದ್ದಂತೆಯೇ, ಡಿಕ್ಕೆ, ಪೆಬಲ್ಸ್ ಮತ್ತು ತಂಡದವರು ಹುಡುಕುತ್ತಿದ್ದ Big Bangನ ಮೊದಲ ಬೆಳಕನ್ನು ತಮ್ಮ Microwave Horn Antennaದಿಂದ ದಾಖಲಿಸಿದ್ದರು! ಅವರು ತಿಳಿದಿದ್ದ ಅಂಟೆನಾದ Background Noise, Big Bangನ ಪ್ರಥಮ ಬೆಳಕಿನ ಪದರದಿಂದ ಬರುತ್ತಿತ್ತು! ಇದನ್ನು Cosmic Microwave Background Radiation (CMBR) ಎಂದು ಕರೆಯಲಾಗಿದೆ. ತದನಂತರದ ದಶಕಗಳಲ್ಲಿ ಈ CMBR ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಇಂದಿಗೆ CMBRನ ಪೂರ್ತಿ ನಕ್ಷೆಯನ್ನು ಕೂಡ ನಾವು ನೋಡಬಹುದಾಗಿದೆ.

ತಮ್ಮ ಆಕಸ್ಮಿಕ ಅನ್ವೇಷಣೆಯಾದ Cosmic Microwave Background Radiationಗೆ ಪೆನ್ಸಿಯಾಸ್ ಮತ್ತು ವಿಲ್ಸನ್‌ಗೆ 1978ರಲ್ಲಿ, ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಈ CMBRನ ಅನ್ವೇಷಣೆ ಅಂದಿಗೆ Big Bang ಥಿಯರಿಗೆ ನೈಜ ಸಾಕ್ಷಿಯನ್ನು ಕೊಟ್ಟಿತು!

ಆದರೆ, ಖಗೋಳ ವಿಜ್ಞಾನದ ಬಗ್ಗೆ ಸಾಕಷ್ಟು ಅಧ್ಯಯನ ಕೈಗೊಂಡು, Big Bang ಥಿಯರಿಯ ಅನ್ವೇಷಣೆಗೆ ಕಾರಣನಾದ ಎಡ್ವಿನ್ ಹಬಲ್ (1889-1953) ನೊಬೆಲ್ ಪ್ರಶಸ್ತಿಗೆ ಭಾಜನರಾಗಲಿಲ್ಲ. ಏಕೆಂದರೆ, ಅಂದಿಗೆ ಖಗೋಳ ವಿಜ್ಞಾನವನ್ನು ನೊಬೆಲ್ ಪ್ರಶಸ್ತಿ ನೀಡುವುದಕ್ಕೆ ಪರಿಗಣಿಸುತ್ತಿರಲಿಲ್ಲ!


ಇದನ್ನೂ ಓದಿ: ಬೆಳ್ಳಿ ಚುಕ್ಕಿ; ಕಪ್ಪು ರಂಧ್ರದ ಬೆಳಕು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...