ಅಕ್ರಮ ಮದ್ಯ ಮಾರಾಟ ನಿಷೇಧ ಮಾಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ಆಗ್ರಹಿಸಿ ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ವತಿಯಿಂದ ರಾಯಚೂರಿನಲ್ಲಿ ಸತ್ಯಾಗ್ರಹಿಗಳು ನಡೆಸುತ್ತಿರುವ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಇಂದಿಗೆ 9 ನೇ ದಿನಕ್ಕೆ ಕಾಲಿಟ್ಟಿದೆ.

ಫೆಬ್ರವರಿ 11 ರಂದು ಗಾಂಧಿ ಪ್ರತಿಮೆಯ ಮುಂಭಾಗ ಹೋರಾಟ ನಡೆಸಲು ಮುಂದಾದಾಗ ರಾಯಚೂರು ಪೊಲೀಸರು ಅವರಿಗೆ ಅನುಮತಿ ನೀಡಿರಲಿಲ್ಲ. ಇದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದಿರುವ ಉದ್ಯಾನದಲ್ಲಿ ಧರಣಿ ನಡೆಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಇದಕ್ಕೆ ಸ್ಪಂದಿಸದಿದ್ದಾಗ ಪಟ್ಟು ಬಿಡದ ಹೋರಾಟಗಾರರು ಜಿಲ್ಲಾಧಿಕಾರಿಯ ಕಚೇರಿಯ ದ್ವಾರದ ಬಳಿ ರಸ್ತೆಯಲ್ಲೇ ಹೋರಾಟಕ್ಕೆ ಇಳಿದಿದ್ದಾರೆ.

ಫೆಬ್ರವರಿ 12 ರ ಶುಕ್ರವಾರದಂದೂ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟವನ್ನು ಮುಂದುವರೆಸಿದ್ದರು. ಕೊನೆಗೂ ಹೋರಾಟಗಾರರಿಗೆ ಮಣಿದ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ, ಗಾಂಧಿ ಪ್ರತಿಮೆಯ ಬಳಿ ಹೋರಾಟ ನಡೆಸಲು ಅನುಮತಿ ನೀಡಿದ್ದರು. ಅಂದಿನಿಂದ ಗಾಂಧಿ ಪ್ರತಿಮೆಯ ಬಳಿ ಸತ್ಯಾಗ್ರಹಿಗಳು ಅನಿರ್ದಿಷ್ಟಾವಧಿ ಹೋರಾಟವನ್ನು ನಡೆಸುತ್ತಿದ್ದಾರೆ.

ರಾಜ್ಯ ಹೈಕೋರ್ಟ್ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಸರಕಾರಕ್ಕೆ ಆದೇಶವನ್ನು ನೀಡಿತ್ತು. ಈ ಆದೇಶದ ಹಿನ್ನಲೆಯಲ್ಲಿ ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’  ಜನವರಿ 27 ರಂದು ರಾಜ್ಯದ 21 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೋರ್ಟಿನ ಈ  ಆದೇಶವನ್ನು ಜಾರಿಗೊಳಿಸುವಂತೆ ಮನವಿಯನ್ನು ಸಲ್ಲಿಸಿತ್ತು.

ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ 177 ಗ್ರಾಮಗಳ ಪಟ್ಟಿ ಮಾಡಿ ಅಬಕಾರಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಈ ರೀತಿ ಪಟ್ಟಿ ಮಾಡಿ ಸ್ವೀಕೃತಿ ಪಡೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಅವರ ಮೇಲೆ ಯಾವುದೇ ಕ್ರಮ ಜರುಗಿಸದೇ ಇದ್ದರೆ ಮತ್ತೆ ನಾವು ಕೋರ್ಟಿಗೆ ಹೋಗಲು ಸಹಾಯಕವಾಗಲಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಈ ಕ್ರಮಕ್ಕೆ ಮುಂದಾಗಿ ಎಂದು ಆಂದೋಲನದ ಬಸವರಾಜ್ ಕರೆನೀಡಿದ್ದಾರೆ.

ಮದ್ಯ ನಿಷೇಧ ಆಂದೋಲನದ ಸಂಚಾಲಕರಾದ ಸ್ವರ್ಣ ಭಟ್‌ರವರು ಈ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿ, “ನಾವು 2015 ರಿಂದಲೂ ಸಂಪೂರ್ಣ ಮದ್ಯ ನಿಷೇಧಕ್ಕೆ ಹೋರಾಟ ನಡೆಸುತ್ತಲೆ ಬಂದಿದ್ದೇವೆ. ಪ್ರಸ್ತುತ ನಮ್ಮ ಹೋರಾಟ ತಕ್ಷಣಕ್ಕೆ ಅಕ್ರಮ ಮದ್ಯ ಮಾರಾಟ ನಿಲ್ಲಬೇಕು. ಇದನ್ನು ತಡೆಯಲು ನಾವು ಕಾನೂನು ಹೋರಾಟ ನಡೆಸಿ, ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಈ ಆದೇಶದಲ್ಲಿ ಅಕ್ರಮ ಮದ್ಯವನ್ನು ತಡೆಗಟ್ಟಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ. ಡಿಸೆಂಬರ್‌ ಒಂದಕ್ಕೆ ಈ ತೀರ್ಪು ಬಂದರೂ ಇವತ್ತಿನವರೆಗೂ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಊರಲ್ಲಿ ಯಾರು ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ ಎಂದು ಸಾಕ್ಷಿ ಸಮೇತ ಎರೆಡೆರೆಡು ಬಾರಿ ದೂರು ನೀಡಿದ್ದೇವೆ. ಆದರೆ ಸರ್ಕಾರ ಯಾವುದಕ್ಕೂ ಸರ್ಕಾರ ಕಿವಿ ಗೊಡುತ್ತಿಲ್ಲ. ಕಳೆದ ಸೋಮವಾರ ಕೂಡಾ ಎಲ್ಲಾ ಜಿಲ್ಲೆಗಳಲ್ಲಿ ಯಾರ್‍ಯಾರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ನೆನಪಿಸಿದ್ದೇವೆ. ಇದನ್ನೂ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಇದಕ್ಕಾಗಿ ನಾವು ರಾಯಚೂರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ, ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಮಹಿಳೆಯರ ನಿಯೋಗವನ್ನು ಭೇಟಿಯಾಗಬೇಕು ಎಂದು ಸ್ವರ್ಣ ಭಟ್ ಒತ್ತಾಯಿಸಿದ್ದಾರೆ.

“ಹೈಕೋರ್ಟ್ ಆದೇಶದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಹಿಳಾ ಸಂಘಟನೆಗಳು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ 15 ದಿನಗಳು ಮುಗಿದರೂ ಸರಕಾರ ಈ ಆದೇಶವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸರಕಾರ ಉಚ್ಛ ನ್ಯಾಯಾಲಯದ ಆದೇಶವನ್ನು ಸಂಪೂರ್ಣ ನಿರ್ಲಕ್ಷ ಮಾಡಿದೆ. ಹಾಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಆಕ್ರೋಶ ವ್ಯಕ್ತಪಡಿಸಿದೆ.

ಆಂದೋಲನವು, “ಹೈಕೋರ್ಟ್ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು. ಅಕ್ರಮ ಮದ್ಯ ಮಾರಾಟದ ನಿಯಂತ್ರಣಕ್ಕೆ ಪ್ರತಿ ಹಳ್ಳಿಯಲ್ಲಿ 5 ಜನ ಮಹಿಳೆಯರನ್ನೊಳಗೊಂಡ ಕಾವಲು ಸಮಿತಿ ರಚಿಸಬೇಕು ಮತ್ತು ಆ ಸಮಿತಿಗೆ ಅರೆ ನ್ಯಾಯಾಂಗ ಅಧಿಕಾರ ನೀಡಬೇಕು” ಎಂದು ಆಗ್ರಹಿಸಿದೆ.

ಈಗಾಗಲೆ ಕರ್ನಾಟಕ ಪಾನ ನಿಷೇಧ ಕಾಯ್ದೆ 1961 ರ, 2 ನೇ ಅಧ್ಯಾಯ ಕ್ರಮ ಸಂಖ್ಯೆ 8 ಪ್ರಕಾರ ಸಾಮಾನ್ಯ ಸರಕಾರಿ ಆದೇಶ (G.O) ದಲ್ಲಿ ಈ ಅಧಿಕಾರವನ್ನು ನೀಡಬಹುದಾಗಿದೆ ಎಂದು ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಹೇಳಿದೆ.

“ಮಹಾರಾಷ್ಟ್ರ ಪಾನ ನಿಷೇಧ ಕಾಯ್ದೆಯಲ್ಲಿರುವಂತೆ ಕರ್ನಾಟಕದಲ್ಲೂ ಕನಿಷ್ಟ 10% ಸದಸ್ಯರು ಆಯಾ ಹಳ್ಳಿಯ ಸರಹದ್ದಿನಲ್ಲಿ ಮದ್ಯಮಾರಾಟಕ್ಕೆ ಪರವಾನಿಗೆ ನೀಡಲು ನಿರಾಕರಿಸಿದರೆ ಅಲ್ಲಿ ಪರವಾನಿಗೆ ಕೊಡಬಾರದು. ಈ ಅಂಶಗಳನ್ನು ಕರ್ನಾಟಕ ಪಾನ ನಿಷೇಧ ಕಾಯ್ದೆ ಅಧ್ಯಾಯ 3 ರಲ್ಲಿ ಸರಕಾರ ಸೇರಿಸಬೇಕು” ಎಂದು ಆಂದೋಲನವು ಒತ್ತಾಯಿಸಿದೆ.

ಅಲ್ಲದೆ ರಾಜ್ಯ ಸರ್ಕಾರವು ಆನ್‍ಲೈನ್ ಮದ್ಯಮಾರಾಟದ ಚಿಂತನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಸತ್ಯಾಗ್ರಹಿಗಳು ಒತ್ತಾಯಿಸಿದ್ದು, ಈ ಹಕ್ಕೊತ್ತಾಯಗಳನ್ನು ಚರ್ಚಿಸಲು ಮುಖ್ಯಮಂತ್ರಿಗಳು ಮಹಿಳೆಯರ ನಿಯೋಗದೊಂದಿಗೆ ತಕ್ಷಣ ಮಾತುಕತೆ ನಡೆಸಬೇಕು. ತಮ್ಮ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಯ ಸಾವಿರಾರು ಮಹಿಳೆಯರು ಈ ಸತ್ಯಾಗ್ರಹವನ್ನು ಮುನ್ನಡೆಸಲಿದ್ದಾರೆ ಎಂದು ಹೋರಾಟಗಾರರು ಹೇಳಿದ್ದಾರೆ.


ಇದನ್ನೂ ಓದಿ: ಬಡವರ ಜೀವ ಪಣಕ್ಕಿಡಬೇಡಿ: ಮದ್ಯ ನಿಷೇಧಕ್ಕೆ ಆಗ್ರಹಿಸಿ ಪತ್ರ ಚಳವಳಿ 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here