Homeಮುಖಪುಟದಿಶಾ ಬಂಧನ ಕಾನೂನುಪಾಲನೆಯ ಲೋಪದೋಷ ಅಷ್ಟೇ ಅಲ್ಲ; ಪ್ರಜಾಪ್ರಭುತ್ವದ ಅಣಕು ಕೂಡ

ದಿಶಾ ಬಂಧನ ಕಾನೂನುಪಾಲನೆಯ ಲೋಪದೋಷ ಅಷ್ಟೇ ಅಲ್ಲ; ಪ್ರಜಾಪ್ರಭುತ್ವದ ಅಣಕು ಕೂಡ

- Advertisement -
- Advertisement -

ದಿಶಾ ರವಿ, 21ರ ವಯಸ್ಸಿನ ಈ ಯುವತಿಯ ಬಂಧನ, ಕೇವಲ ಕಾನೂನಿನ ಪಾಲನೆಯಲ್ಲಿ ಆದ ಲೋಪದೋಷಗಳ ಒಂದು ಉದಾಹರಣೆಯಾಗಿ ಉಳಿದಿಲ್ಲ. ಈ ಘಟನೆ ಬಹಳಷ್ಟು ಪ್ರಶ್ನೆಗಳನ್ನು ಎತ್ತಿದೆ. ಯಾವುದೇ ಸರ್ಕಾರವಾಗಲಿ, ಸರ್ವಾಧಿಕಾರಿ ಧೋರಣೆಯನ್ನು ತನ್ನ ಆಡಳಿತ ವೈಖರಿಯಾಗಿ ಬದಲಾಯಿಸಿದರೆ, ಅದು ಮಾಡುತ್ತಾಹೋಗುವ ದಮನಕಾರಿ ಕಾರ್ಯಗಳೆಲ್ಲ, ನಿಧಾನವಾಗಿ ಜನರಿಗೆ, ’ಬಹುಶಃ ಇದೇ ನಿಜವಾದ ಆಡಳಿತ ಮಾದರಿ ಇರಬಹುದು’ ಎನಿಸಲು ಪ್ರಾರಂಭವಾಗುತ್ತದೆ. ಅದರಲ್ಲೂ ಸ್ವಂತ ವಿಚಾರ, ಸಹನೆ, ಸಹಿಷ್ಣುತೆ ಎಲ್ಲವನ್ನು ಧರ್ಮದ ಅಮಲು ಆಕ್ರಮಿಸಿದಾಗ ಪಂಚತಂತ್ರದ ಕಥೆಯಂತೆ “ನನ್ನ ಒಂದು ಕಣ್ಣು ಹೋದರೆ ಚಿಂತೆ ಇಲ್ಲ, ಪಕ್ಕದ ಮನೆಯವನ ಎರಡೂ ಕಣ್ಣು ಹೋಗುತ್ತದಲ್ಲಾ ಅಷ್ಟು ಸಾಕು” ಎನ್ನುವ ಮನಸ್ಥಿತಿ ಸಾಮಾನ್ಯವಾಗುತ್ತದೆ.

ಈ ಮೇಲಿನ ಉದಾಹರಣೆ ದಿಶಾ ರವಿಯ ಬಂಧನವನ್ನು ಸಮರ್ಥಿಸುವವರಿಗೂ ಅನ್ವಯಿಸುತ್ತದೆ. ಇಲ್ಲಿ ಪರಿಸರ ಪ್ರೇಮಿ (ಕಾಳಜಿಯ ಜೊತೆ) ಯುವತಿಯೊಬ್ಬಳು ದೇಶದ ಇನ್ನೊಂದು ಮೂಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹರಿವು, ವಿಸ್ತಾರ ಅರಿತುಕೊಂಡು ಸ್ಪಂದಿಸಿದ್ದು ಮತ್ತು ರೈತರ ಹೋರಾಟವನ್ನು ಪ್ರತ್ಯೇಕಿಸಿ ನೋಡದೆ ಅದನ್ನು ಸಮಸ್ಯೆಗಳ ಶೃಂಖಲೆಯ ಒಂದು ಕೊಂಡಿಯಂತೆ ನೋಡಿದ್ದು ಅವಳ ಪ್ರಬುದ್ಧತೆಯನ್ನು ತೋರಿಸುತ್ತದೆ. ಆದರೆ ನಮ್ಮ “ಮಹಾನಾಯಕ”ನ ಪ್ರಕಾರ ಅವಳೊಂದು “ಆಂದೋಲನ ಜೀವಿ” ಏಕೆಂದರೆ ತಮ್ಮ ತಮ್ಮ ಸಮಸ್ಯೆಗೆ ತಾವು ಮಾತ್ರ ಹೋರಾಟ ಮಾಡಬೇಕು. ನೇರವಾಗಿ ಸಂಬಂಧಿಸದವರೆಲ್ಲ ಹೊರಗಿನವರು. ಸ್ವಾತಂತ್ರ್ಯಕ್ಕಾಗಿ ಹನಿ ರಕ್ತ ಹರಿಸದವರಿಗೆ ಆಂದೋಲನ ಹೇಗೆ ಅರ್ಥವಾಗಬೇಕು?

ಸ್ವತಂತ್ರ ದೇಶದಲ್ಲಿ, ಪ್ರಜಾಪ್ರಭುತ್ವದ ಕಾನೂನಿನ ಚೌಕಟ್ಟಿನ ಒಳಗೆ ಶಾಂತಿಯುತವಾಗಿ ನಡೆಯುವ ಸತ್ಯಾಗ್ರಹ ಅಥವಾ ಅಂದೋಲನಗಳಿಗೆ ಸರ್ವಾಧಿಕಾರಿ ಸರ್ಕಾರಗಳು ಬಹಳ ಹೆದರುತ್ತವೆ. ಅದರಲ್ಲಿ ಮುಖ್ಯವಾಗಿ ಕಾಣುವುದು, ವ್ಯಕ್ತಿಗಳ ಉದ್ದೇಶಗಳಿಗೆ ಕಳಂಕ ತಂದು UAPA, NIA ಅಥವಾ ದೇಶದ್ರೋಹದಂತಹ ಆರೋಪಹೊರಿಸಿ ಅವರಿಗೆ ತಮ್ಮ ಸಮಜಾಯಿಶಿ ಕೊಡಲೂ ಸಹ ಅವಕಾಶ ಸಿಗದಂತೆ ಮಾಡಿ, ಸರ್ಕಾರವನ್ನು ಪ್ರಶ್ನಿಸುವ ಇರಾದೆ ಇರುವವರಿಗೆಲ್ಲ ಒಂದು ಅಪರೋಕ್ಷ ಸಂದೇಶ ಕೊಡುತ್ತಾರೆ. ಇದು ಭೀಮಾ ಕೋರೆಗಾಂವ್ ಇರಬಹುದು CAA-NRC ಪ್ರತಿಭಟನೆ ಇರಬಹುದು ಅಥವಾ ರೈತರ ಧರಣಿ ಇರಬಹುದು. ಈ ಪ್ರಯತ್ನಗಳಲ್ಲಿ ಕೃತಕವಾಗಿ ಸೃಷ್ಟಿಸುವ ದಾಖಲೆಗಳು ಬಯಲಿಗೆ ಬರುವಷ್ಟರಲ್ಲಿ ವರ್ಷಗಳೇ ಕಳೆದುಹೋಗುತ್ತವೆ.

ದಿಶಾ ರವಿ ಬಂಧನದಲ್ಲಿ ಬರುವ ಮೊದಲ ಪ್ರಶ್ನೆ ಆಕೆಯ ಅಪರಾಧ ಏನು? ಅದು ದೇಶದ್ರೋಹವಾಗುತ್ತದೆಯೇ? ಇದಕ್ಕೆ ದೆಹಲಿ ಪೊಲೀಸರು ಹೇಳುವುದೇನೆಂದರೆ “ದಿಶಾ ಸ್ವೀಡನ್‌ನ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಜೊತೆಗೂಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಟೂಲ್‌ಕಿಟ್ ತಯಾರಿಸಿ ನಂತರ ಅದನ್ನು ತಿದ್ದಿ ಹಂಚಿಕೊಂಡಿದ್ದಾಳೆ. ಅದರಲ್ಲಿ ಅವಳಿಗೆ ಸಮರ್ಥಿಸಿರುವ ಕೆಲವು ವ್ಯಕ್ತಿಗಳು ಖಾಲಿಸ್ತಾನ ಸಮರ್ಥಕರಾಗಿದ್ದಾರೆ. ಆದ್ದರಿಂದ ಅದು ದೇಶದ್ರೋಹ.”

ಮೊದಲನೆಯದಾಗಿ ದೇಶದ್ರೋಹದ ಸೆಕ್ಷನ್ 124ಎ ಐಪಿಸಿ ಪ್ರಕಾರ ಯಾರಾದರೂ ಮಾತು ಅಥವಾ ಬರವಣಿಗೆಯಲ್ಲಿ ಅಥವಾ ಸನ್ನೆಗಳಲ್ಲಿ ಅಥವಾ ತೋರಿಕೆ ಮೂಲಕ ದ್ವೇಷ ಹುಟ್ಟುವಂತೆ ಮಾಡಿದರೆ ಅಥವಾ ಸರ್ಕಾರದ ವಿರುದ್ಧ ಅಸಂತುಷ್ಟತೆಯನ್ನು ಹುಟ್ಟುಹಾಕಲು ಪ್ರಯತ್ನಿಸಿದರೆ ಅದು ದೇಶದ್ರೋಹವಾಗುತ್ತದೆ. ಇದನ್ನು ಓದಿದ ಪ್ರತಿಯೊಬ್ಬ ವಿಚಾರವಂತ ಪ್ರಜೆಗೂ ಒಂದು ಪ್ರಶ್ನೆಯಂತೂ ಕಾಡುತ್ತದೆ. ಅದೇನೆಂದರೆ “ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಶಾಂತಿಯುವ ಪ್ರತಿಭಟನೆ ಎಂಬ ನಮ್ಮ ಹಕ್ಕು ಇದೆಯಲ್ಲಾ- ಅಲ್ಲಿಗೆ ಸರ್ಕಾರವನ್ನು ಪ್ರಶ್ನಿಸುವುದೇ ಪ್ರಜಾಪ್ರಭುತ್ವದ ಸತ್ವವಲ್ಲವೇ?” ಇದಕ್ಕೆ ಉತ್ತರ ಇಷ್ಟೇ. ’ದೇಶದ್ರೋಹ’ದ ಕಲಂ 124ಎ ಈಗ ಗತಿಸಿಹೋಗಿದೆ, ನಿರರ್ಥಕವಾಗಿದೆ”. ಅದು ಜಾರಿಗೆ ಬಂದಿದ್ದು 1870ರಲ್ಲಿ ಮೆಕಾಲ್ಲೆ ಬರೆದ ದಂಡ ಪ್ರಕ್ರಿಯೆ ಸಂಹಿತೆಯಲ್ಲಿ. ಅದೂ ಬ್ರಿಟಿಷ್ ಸರ್ವಾಧಿಕಾರವನ್ನು ಪ್ರಶ್ನಿಸುವ ಭಾರತೀಯರನ್ನು ಹಣಿಯಲು. ಬ್ರಿಟನ್ ಸೇರಿ ಎಲ್ಲ ಪಾಶ್ಚಿಮಾತ್ಯ ದೇಶಗಳೂ ಈ ಕಲಂಅನ್ನು ತೆಗೆದುಹಾಕಿವೆ. ಆದರೆ ಪ್ರಜಾಪ್ರಭುತ್ವ ಭಾರತದಲ್ಲಿ ಅದಿನ್ನು ಅಸ್ತಿತ್ವದಲ್ಲಿದೆ. ರಕ್ತ ಮಾಂಸ ತುಂಬಿದ ಜೀವಿಯಂತೆ ಕ್ಷಣಕ್ಷಣವೂ ಉಸಿರಾಡುತ್ತಿದೆ.

PC : The Guardian

ದಿಶಾ ರವಿಯನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲು ಬಂದ ದೆಹಲಿ ಪೊಲೀಸರು, ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಂತರರಾಜ್ಯ ಬಂಧನಗಳ ವಿಚಾರದಲ್ಲಿ ನೀಡಿರುವ ಯಾವುದೇ ನಿರ್ದೇಶನಗಳನ್ನು ಪಾಲಿಸಿಲ್ಲ. ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಎಸ್ ಪಿ ಗರ್ಗ್ ಹಾಗೂ ಐಪಿಎಸ್ ಅಧಿಕಾರಿ ಕನ್ವಲ್‌ಜಿತ್ ಡಿಯೋಲ್ ಅವರ ಕಮಿಟಿಯ ಮಾರ್ಗದರ್ಶನಗಳ ಪ್ರಕಾರ ಬೇರೆ ರಾಜ್ಯಗಳಲ್ಲಿ ಬಂಧನ ಮಾಡುವಾಗ ಬಂಧಿಸುವ ವ್ಯಕ್ತಿ ತನ್ನ ವಕೀಲನನ್ನು ಸಂಪರ್ಕಿಸಲು ಅವಕಾಶ ಕೊಡಬೇಕು. ಅದನ್ನು ದಿಶಾ ರವಿಗೆ ನಿರಾಕರಿಸಲಾಯಿತು.

* ಬಂಧಿಸಿರುವ ವ್ಯಕ್ತಿಗೆ ಅವರ ಭಾಷೆಗೆ ಭಾಷಾಂತರಿಸಿದ ಎಫ್‌ಐಆರ್ ಕೊಡಬೇಕು.

* ಬಂಧಿಸಿ ವಾಪಸ್ಸು ಬರುವಾಗ ಸರಹದ್ದಿನ ಪೊಲೀಸ್ ಠಾಣೆಯ ಡೈರಿಯಲ್ಲಿ ಬಂಧನದ ಎಲ್ಲ ಮಾಹಿತಿಯನ್ನು ನಮೂದಿಸಬೇಕು.

* ಅತ್ಯಂತ ಗಂಭೀರವಲ್ಲದ ಪ್ರಸಂಗಗಳಲ್ಲಿ ಬಂಧಿತ ವ್ಯಕ್ತಿಯನ್ನು ಹತ್ತಿರದ ಮ್ಯಾಜಿಸ್ಟ್ರೇಟರ ಎದುರು ಹಾಜರುಪಡಿಸಿ ಹೊರರಾಜ್ಯಕ್ಕೆ ಹೋಗಲು ರಿಮಾಂಡ್ ಪಡೆಯಬೇಕು.

ದಿಶಾ ರವಿಯ ಕೇಸಿನಲ್ಲಿ ಈ ಎಲ್ಲ ನಿಯಮಗಳ ಉಲ್ಲಂಘನೆ ಆಯಿತು. ಅಷ್ಟೇಅಲ್ಲದೆ ದೆಹಲಿಯಲ್ಲಿ ಭಾನುವಾರದ ದಿನ ಮ್ಯಾಜಿಸ್ಟ್ರೇಟರ ಎದುರು ಆಕೆಯನ್ನು ಹಾಜರುಪಡಿಸಿ 5 ದಿನಗಳ ರಿಮಾಂಡ್ ಪಡೆಯಲಾಯಿತು. ರಿಮಾಂಡ್ ಅರ್ಜಿಯಲ್ಲಿ ನೀಡಿದ ಕಾರಣಗಳು ದಿಶಾ ಅಳಿಸಿಹಾಕಿದ ವಾಟ್ಸಾಪ್ ಚಾಟ್ಸ್ ಪಡೆಯಬೇಕಿದೆ ಮತ್ತು ಇನ್ನಿತರ ಇಂಟರ್‌ನೆಟ್‌ಗೆ ಸಂಬಂಧಿಸಿದ ಮಾಹಿತಿ ಪಡೆಯುವುದಿದೆ ಎಂದು. ಆ 5 ದಿನಗಳ ಕಾಲ ಕೆಲಸ ಇರುವುದು ಸೈಬರ್ ಪೊಲೀಸರಿಗೆ ಹಾಗೂ ಇಂಟರ್‌ನೆಟ್ ಸರ್ವಿಸ್ ಕೊಡುವವರಿಗೆ. ದಿಶಾಳಿಂದ ಪಡೆಯುವ ಮಾಹಿತಿ ಏನೂ ಇಲ್ಲವಾಗಿದ್ದರೂ ಮ್ಯಾಜಿಸ್ಟ್ರೇಟ್ ಒಬ್ಬರು ಇಂತಹ ಸಂದರ್ಭದಲ್ಲಿ 5 ದಿನಗಳ ರಿಮಾಂಡ್ ಕೊಟ್ಟಿದ್ದು ಕಾನೂನಿನ ಅಡಿಯಲ್ಲಿ ತಪ್ಪಿರಲಿಕ್ಕಿಲ್ಲ ಆದರೆ ಕಾನೂನಿನ ಚೇತನಕ್ಕೆ ಬಲವಾದ ಪೆಟ್ಟು.

ದೆಹಲಿ ಪೊಲೀಸರು ಆರೋಪಿಸುವ ಖಾಲಿಸ್ತಾನದ ನಂಟು, ಐಎಸ್‌ಐ ನಂಟು ಎಂಬ ಆರೋಪಗಳ ಅದೆಷ್ಟು ಬಾಲಿಶವಾಗಿವೆ ಎಂದರೆ- ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಟೂಲ್‌ಕಿಟ್ ಅನ್ನು ಕೆನಡಾ ನಿವಾಸಿ ಪೊಯಟಿಕ್ ಜಸ್ಟಿಸ್‌ನ ಮೋ ಧಲಿವಾಲ್ ಹಂಚಿಕೊಂಡಿದ್ದಾನೆ ಹಾಗೂ ಆತ ಖಾಲಿಸ್ತಾನದ ಸಮರ್ಥಕನಾಗಿದ್ದಾನೆ. ಇನ್ನೊಬ್ಬ ವ್ಯಕ್ತಿಯ ಸ್ನೇಹಿತ ಐಎಸ್‌ಐಗೆ ಲಿಂಕ್ ಹೊಂದಿದ್ದಾನೆ. ಹೀಗೆ ದೆಹಲಿ ಪೊಲೀಸರು ಹೇಳುವ ಮಾನದಂಡದಲ್ಲಿ ನೋಡುತ್ತ ಹೋದರೆ ನರೇಂದ್ರ ಮೋದಿ ಅವರ ಕ್ಯಾಬಿನೆಟ್ಟಿನ “ಗೋಲಿಮಾರೋಂ ಸಾಲೋಂಕೋ” ಎಂದ ವ್ಯಕ್ತಿ, ಅದೇ ರೀತಿ ದಿನನಿತ್ಯ ದ್ವೇಷ, ಹಿಂಸೆಯ ಹೇಳಿಕೆ ನೀಡುವ ಸಂಸದರು, ನೇಪಾಳ, ಶ್ರೀಲಂಕಾಗಳಲ್ಲೂ ಬಿಜೆಪಿಯನ್ನು ತರುತ್ತೇವೆ ಎನ್ನುವವರು ಎಲ್ಲರೂ ದೇಶದ್ರೋಹಿಗಳೇ. ಮುಖ್ಯವಾಗಿ ಇಂಥವರ ಜೊತೆ ನಿತ್ಯ ಸಂಪರ್ಕ ಹೊಂದಿರುವ ಮಹಾನಾಯಕನೂ ಸಹ.

ಇನ್ನೂ ಮುಖ್ಯವಾಗಿ ಟೂಲ್‌ಕಿಟ್ ಎಂದರೆ, ಒಂದು ಕಾರ್ಯವನ್ನು ಅಥವಾ ಯೋಜನೆಯನ್ನು ನಿಗದಿತ ಗುರಿ ಸಾಧಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಪ್ರಣಾಳಿಕೆ. ಉದಾಹರಣೆಗೆ:- ರಿಹಾನ್ನಾ, ಗ್ರೆಟಾ, ಮಿಲನಾ ಹ್ಯಾರಿಸ್ ಮುಂತಾದವರು ರೈತರಿಗೆ ನೀಡಿದ ಬೆಂಬಲ ಹಾಗೂ ಅದರಿಂದ ರೈತರ ಪ್ರತಿಭಟನೆಗೆ ದೊರೆತ ಅಂತಾರಾಷ್ಟ್ರೀಯ ಮನ್ನಣೆ, ಮಹತ್ವ. ಇವುಗಳನ್ನು ಕೇವಲಗೊಳಿಸುವ ನಿರ್ದಿಷ್ಟ ಗುರಿಯಿಂದ ನಮ್ಮ ದೇಶದ ಸ್ಲೀಪಿಂಗ್ ಸೆಲೆಬ್ರಿಟಿಗಳ ಕೈಯಿಂದ #IndiaTogether #IndiaAgainstPropoganda ಎಂದು ಒಂದೇ ತರಹದ ಮೇಸೆಜ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಸುವುದು, ಗೋಧಿ ಮೀಡಿಯಾದಿಂದ ಇದಕ್ಕೆ ಇನ್ನು ಹೆಚ್ಚಿನ ಮಹತ್ವ ಕೊಡಿಸುವುದು ಇತ್ಯಾದಿ, ಇವೆಲ್ಲಾ ಟೂಲ್‌ಕಿಟ್‌ಗಳೇ.

ದಿಶಾ ಪ್ರಕರಣಕ್ಕೆ ಹಾಗೂ ವೈಯಕ್ತಿಕವಾಗಿ ದಿಶಾರವಿಗೆ ದೇಶದ ಮೂಲೆಮೂಲೆಗಳಿಂದ ವಿಶಾದ ಹಾಗೂ ಸಮರ್ಥನೆ ವ್ಯಕ್ತವಾಗುತ್ತಿದೆ. ಅದರಿಂದ ಅವಳಿಗೆ ಲಾಭವಾಗುವ ಜೊತೆಗೆ ಅದು ವಿರೋಧವೂ ಆಗಬಹುದು. ಜಿದ್ದಿನ ಸರ್ಕಾರ ಇನ್ನೂ ಹೆಚ್ಚುಹೆಚ್ಚಾಗಿ ಅವಳನ್ನು ಕಾಡಬಹುದು. ಸರ್ಕಾರದ ಇಂತಹ ನಡೆಗಳು ಅದರ ಅಭದ್ರತೆಯ ದ್ಯೋತಕ. ಇದರಿಂದ ಜನ ಹೆಚ್ಚೆಚ್ಚು ಪ್ರೇರಿತರಾಗಿ ಹೆಚ್ಚು ಸಂಘಟಿತರೂ ಆಗಬಹುದು. ಅಣ್ಣಾ ಹಜಾರೆಯಂತಹ ರಾಜಕೀಯ ಪ್ರೇರಿತ ಆಂದೋಲನಗಳಿಗೆ ಒಂದು ಮಿತಿ ಇರುತ್ತದೆ ಆದರೆ ದೇಶದ ಅಂತಃಸತ್ವವಾದ ಪ್ರಜೆ ಪ್ರಭುತ್ವವನ್ನು ಪ್ರಶ್ನಿಸಿದರೆ ಪ್ರಭು ಕೇಳಗಿಳಿಯಲೇಬೇಕು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಭಾರತದ ಸಾರ್ವಭೌಮತೆ ಜನರೇ ಜನರಿಗಾಗಿ ಕಟ್ಟಿಕೊಂಡಿರುವಂಥದ್ದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...