ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ರಾಜ್ಯಾದ್ಯಂತ ತೀವ್ರಗೊಂಡಿವೆ. ಇದರ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವಾರ್ಡ್ ಸಂಖ್ಯೆ 23, ಭಾಗ ಸಂಖ್ಯೆ 128ರ (ಮುದಿಯಪ್ಪ ಬಡಾವಣೆ) 30ಕ್ಕೂ ಹೆಚ್ಚು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರಂ-7 ಸಲ್ಲಿಸಿರುವುದು ಖಾತ್ರಿಯಾಗಿದೆ. ಈ ವಂಚನೆ ವಿರುದ್ಧ ಕಡೂರಿನ ಸಂತ್ರಸ್ತ ಮತದಾರರು ತಮ್ಮ ಮೂಲ ದಾಖಲೆಗಳೊಂದಿಗೆ ಬೀದಿಗಿಳಿದು ಹೋರಾಟಕ್ಕೆ ಇಳಿದಿದ್ದಾರೆ.
ಈ ಪ್ರಕರಣದ ಕುರಿತು ನಾನು ಗೌರಿಯೊಂದಿಗೆ ಮಾತನಾಡಿದ, ‘ನಾಗರಿಕ ಮತಕಾವಲು ಸಮಿತಿ’ಯ ಪ್ರಮುಖರಾದ ಮುನ್ನಾ (ತನೂರು, ಗೌಸ್ ಫೀರ್) ಅವರು, “ಮೂಲತಃ ಅಕ್ಟೋಬರ್ 3 ರಂದು ಈ ಅಕ್ರಮದ ವಿಚಾರ ನಮ್ಮ ಗಮನಕ್ಕೆ ಬಂತು. ತಕ್ಷಣವೇ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆವು. ಅಲ್ಲಿನ ಜನರನ್ನು ಮಾತಾಡಿಸಿದಾಗ, ಅವರು ಕಳೆದ 30 ರಿಂದ 35 ವರ್ಷಗಳಿಂದ ಅದೇ ಪ್ರದೇಶದಲ್ಲೇ ನಿರಂತರವಾಗಿ ವಾಸವಾಗಿದ್ದಾರೆ ಮತ್ತು ಎಲ್ಲಿಗೂ ಸ್ಥಳಾಂತರಗೊಂಡಿಲ್ಲ ಎಂಬುದು ಸ್ಪಷ್ಟವಾಯಿತು. ಬಿಎಲ್ಓ ನೋಟಿಸ್ ನೀಡಿದ ಮೇಲೆಯೇ ತಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲು ಯತ್ನಿಸಿರುವುದು ಅವರಿಗೆ ತಿಳಿದುಬಂದಿದೆ. ಉದ್ದೇಶಪೂರ್ವಕವಾಗಿ ಒಂದೇ ಸಮುದಾಯದವರನ್ನು ಟಾರ್ಗೆಟ್ ಮಾಡಿ ಹೆಸರು ಡೆಲೀಟ್ ಮಾಡಲು ಫಾರಂ-7 ದುರ್ಬಳಕೆ ಮಾಡಲಾಗಿದೆ ಎಂಬ ಸತ್ಯ ಅರಿವಾಯಿತು.
ಒಮ್ಮೆ ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ಮುಗಿದು ಹೆಸರು ಡೆಲೀಟ್ ಆದರೆ, ಅದನ್ನು ಸರಿಪಡಿಸುವುದು ಅತ್ಯಂತ ಕಷ್ಟಕರ. ಆದ್ದರಿಂದ ನಾವು ತಕ್ಷಣವೇ ಜಿಲ್ಲಾಧಿಕಾರಿಗಳ (DC) ಗಮನಕ್ಕೆ ತಂದು ಮನವಿ ಸಲ್ಲಿಸಿದೆವು. ಜಿಲ್ಲಾಧಿಕಾರಿಗಳು ನಮ್ಮ ಎದುರಲ್ಲೇ ತಾಲೂಕಿನ ತಹಶೀಲ್ದಾರರಿಗೆ ಫೋನ್ ಮಾಡಿ, ತಕ್ಷಣವೇ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ಹಾಗೂ ಸರ್ವೇ ನಡೆಸುವಂತೆ ಸೂಚಿಸಿದರು” ಎಂದು ತಿಳಿಸಿದರು.
“ಇದರ ಬೆನ್ನಲ್ಲೇ ಸಂತ್ರಸ್ತ ಮತದಾರರೊಂದಿಗೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆವು. ಸಂಜೆ 7:30 ದಾಟಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ಸ್ಥಳಕ್ಕೆ ಬಂದರು. ‘ಯಾರೇ ಫಾರಂ-7 ಸಲ್ಲಿಸಿದರೂ ಅದನ್ನು ಪರಿಶೀಲಿಸುವುದು ನಮ್ಮ ಕರ್ತವ್ಯ. ಸ್ಥಳ ಪರಿಶೀಲನೆ ನಡೆಸಿ ಅವರು ಇಲ್ಲೇ ವಾಸವಿದ್ದರೆ ಯಾವುದೇ ಕಾರಣಕ್ಕೂ ಹೆಸರು ಡೆಲೀಟ್ ಮಾಡುವುದಿಲ್ಲ’ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ” ಎಂದು ಮುನ್ನಾ ವಿವರಿಸಿದ್ದಾರೆ.
ಈ ಅಕ್ರಮದ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾಗಿದ್ದನ್ನು ವಿವರಿಸಿದ ಅವರು, “ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ನಾವು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಎಸ್ಪಿಯವರನ್ನು ಭೇಟಿ ಮಾಡಿ ಒತ್ತಾಯಿಸಿದೆವು. ಈ ನಡುವೆ ಸಬ್ ಇನ್ಸ್‌ಪೆಕ್ಟರ್ ಅವರು ಆರೋಪ ಎದುರಿಸುತ್ತಿರುವ ಮಾಜಿ ಬಿಜೆಪಿ ಕೌನ್ಸಿಲರ್ ಮೋಹನ್ ಕುಮಾರ್ ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ, ‘ನನಗೆ ಪಕ್ಷದಿಂದ ಫಾರಂಗಳನ್ನು ತಂದುಕೊಟ್ಟಿದ್ದರು. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲದೆ ನಾನು ಕೇವಲ ಸಹಿ ಮಾಡಿಕೊಟ್ಟಿದ್ದೆ’ ಎಂದು ಸಬೂಬು ನೀಡಿದ್ದಾರೆ. ಮೋಹನ್ ಕುಮಾರ್ ಜೊತೆಗೆ ರಾಜೇಶ್ವರಿ ಎಂಬುವವರ ಹೆಸರಿನಲ್ಲೂ ಫಾರಂ-7 ಸಲ್ಲಿಕೆಯಾಗಿದ್ದು, ಇಬ್ಬರೂ ಬಿಜೆಪಿ ಹಿನ್ನೆಲೆಯವರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಣ್ಣಾನಾಯಕ್ ಹಾಗೂ ಸಂತ್ರಸ್ತರ ಆಕ್ರೋಶ
ಕಡೂರು 23ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಅಣ್ಣಾನಾಯಕ್ ಮಾತನಾಡಿ, “ನಮ್ಮ ವಾರ್ಡ್‌ನ 30 ಜನರಿಗೆ ಹೆಸರು ತೆಗೆಯುವ ಸಂಬಂಧ ನೋಟಿಸ್ ನೀಡಲಾಗಿದೆ. ಅಳಿಸಲು ಯತ್ನಿಸಿರುವ 30 ಮತದಾರರ ಪೈಕಿ 29 ಜನರು ಮುಸ್ಲಿಂ ಸಮುದಾಯದವರಾಗಿದ್ದರೆ, ಒಬ್ಬರು ಹಿಂದೂ ಸಮುದಾಯದವರಾಗಿದ್ದಾರೆ. ಕೇವಲ ಚುನಾವಣೆಯಲ್ಲಿ ಗೆಲ್ಲಲು ಇಂತಹ ಅಕ್ರಮಕ್ಕೆ ಮುಂದಾಗಿರುವ ಮಾಜಿ ಕೌನ್ಸಿಲರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಕುರಿತು ನಾನು ಗೌರಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ಹೆಸರು ಹೇಳಲು ಇಚ್ಛಿಸದ ಸಂತ್ರಸ್ತ ಮತದಾರರೊಬ್ಬರು, “ನಾವು ಕೂಲಿ ಮಾಡಿ ಬದುಕುವ ಸಣ್ಣ ಜನ, ಕಳೆದ 25-30 ವರ್ಷಗಳಿಂದ ಇಲ್ಲೇ ಇದ್ದೇವೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಸ್ವಾರ್ಥಕ್ಕಾಗಿ ಬಿಜೆಪಿಯವರು ನಮ್ಮ ಹೆಸರುಗಳನ್ನು ತೆಗೆಯಲು ಹುನ್ನಾರ ನಡೆಸಿದ್ದಾರೆ. ನಮ್ಮ ಬಳಿ ಎಲ್ಲಾ ಅಧಿಕೃತ ದಾಖಲೆಗಳಿದ್ದು, ಕಾನೂನು ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಎದ್ದೇಳು ಕರ್ನಾಟಕ’ ಸಂಘಟನೆಯೂ ಜಿಲ್ಲಾಡಳಿತಕ್ಕೆ ಅಧಿಕೃತ ದೂರು ನೀಡಿದೆ. ಕಡೂರು ಮಾತ್ರವಲ್ಲದೆ ಬೆಳಗಾವಿ (198 ಹೆಸರು), ಬೀದರ್‌ನ ಭಾಲ್ಕಿ (3,244 ಹೆಸರು), ಮೈಸೂರು ಹಾಗೂ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲೂ (778 ಹೆಸರು) ಇದೇ ರೀತಿ ಫಾರಂ-7 ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಈಗಾಗಲೇ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸುಳ್ಳು ಮಾಹಿತಿ ನೀಡಿ ಫಾರಂ-7 ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಅರ್ಹ ಮತದಾರರ ಹಕ್ಕನ್ನು ಕಸಿಯುವ ಇಂತಹ ಕೃತ್ಯಗಳ ವಿರುದ್ಧ ಪಾರದರ್ಶಕ ತನಿಖೆಯಾಗಬೇಕೆಂಬ ಒತ್ತಾಯ ತೀವ್ರಗೊಂಡಿದೆ.


