Homeಅಂತರಾಷ್ಟ್ರೀಯವಲಸೆ ನಿಯಂತ್ರಣ ಕರಾಳ ಕಾಯ್ದೆಗೆ ಒಪ್ಪಿಗೆ ನೀಡಿದ ಫ್ರಾನ್ಸ್!

ವಲಸೆ ನಿಯಂತ್ರಣ ಕರಾಳ ಕಾಯ್ದೆಗೆ ಒಪ್ಪಿಗೆ ನೀಡಿದ ಫ್ರಾನ್ಸ್!

- Advertisement -
- Advertisement -

ಡಿಸೆಂಬರ್ 20, 2023ರಂದು ಫ್ರೆಂಚ್ ಸಂಸತ್ತು ಫ್ರಾನ್ಸಿನೊಳಕ್ಕೆ ವಲಸೆಯನ್ನು ಕಡಿಮೆ ಮಾಡುವ ಹೊಸ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಿತು. ಈ ಮಸೂದೆಯು ಹೊರ ದೇಶದ ವಲಸಿಗರ ರಕ್ಷಣೆಯನ್ನು ದುರ್ಬಲಗೊಳಿಸಿತು. ಅದು ’ಗಣರಾಜ್ಯದ ತತ್ವಗಳನ್ನು’ ಅನುಸರಿಸದವರಿಗೆ ವಾಸದ ಪರವಾನಗಿ (ರೆಸಿಡೆನ್ಸ್ ಪರ್ಮಿಟ್)ಯ ಹಕ್ಕನ್ನು ಕೂಡಾ ನಿರಾಕರಿಸುತ್ತದೆ. ಆದರೆ, ಈ ಗಣರಾಜ್ಯ ತತ್ವಗಳ ವ್ಯಾಖ್ಯಾನ ಅಸ್ಪಷ್ಟವಾಗಿದೆ.

ಆತಂಕಕಾರಿಯೆಂಬಂತೆ- ದ್ವಿರಾಷ್ಟ್ರೀಯತೆ ಹೊಂದಿರುವವರ ಫ್ರೆಂಚ್ ಪೌರತ್ವವನ್ನು ಕೆಲವು ನಿರ್ದಿಷ್ಟ ’ಅಪರಾಧ’ಗಳಿಗೆ ಸಂಬಂಧಿಸಿ ರದ್ದು ಮಾಡಲೂ ಈ ಮಸೂದೆಯು ಅವಕಾಶ ಮಾಡಿಕೊಡುತ್ತದೆ. ಫ್ರೆಂಚ್ ನೆಲದಲ್ಲಿ ವಿದೇಶಿ ಪೋಷಕರಿಗೆ ಹುಟ್ಟುವ ಮಕ್ಕಳಿಗೆ ಸಹಜ ರೀತಿಯಲ್ಲಿ ಪೌರತ್ವ ನೀಡುವುದನ್ನು ಕೂಡ ಮಸೂದೆಯು ಕಿತ್ತುಹಾಕುತ್ತದೆ. ಯಾವುದೇ ಅಪರಾಧದಲ್ಲಿ ಶಿಕ್ಷೆಯಾದವರಿಗೆ ಫ್ರೆಂಚ್ ಪೌರತ್ವ ನೀಡುವುದನ್ನು ಅದು ನಿಷೇಧಿಸುತ್ತದೆ. ಅದು ದೇಶದೊಳಗೆ ಬರಲು ಅವಕಾಶ ನೀಡಬಹುದಾದ ವಿದೇಶೀಯರ ಸಂಖ್ಯೆಯನ್ನು ಸೀಮಿತಗೊಳಿಸುವ ವಲಸೆ ಕೋಟಾಗಳನ್ನು ಸೃಷ್ಟಿಸಿದೆ. ಇದನ್ನು ಸಂವಿಧಾನಬಾಹಿರವೆಂದು ಟೀಕಿಸಲಾಗುತ್ತಿದೆ.

ಈ ಮಸೂದೆಯು ವಿದೇಶೀಯರು ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳಿಗೆ ಗಂಭೀರ ಹಿನ್ನಡೆ ಎಂದು ಟೀಕಿಸಲಾಗುತ್ತಿದೆ. ವಿಶ್ವಸಂಸ್ಥೆಯ ಮಕ್ಕಳ ನಿಧಿಯು ಈ ಮಸೂದೆಯನ್ನು ಟೀಕಿಸಿದ್ದು, ಹೆತ್ತವರು ಗಡಿಪಾರನ್ನು ಎದುರಿಸುತ್ತಿರುವ ಸಂದರ್ಭಗಳಲ್ಲಿ, ಹೊರ ರಾಷ್ಟ್ರೀಯರ ಮಕ್ಕಳನ್ನು ಅವರ ಹೆತ್ತವರಿಂದ ಪ್ರತ್ಯೇಕಗೊಳಿಸುವುದರ ವಿರುದ್ಧ ರಕ್ಷಣೆಯನ್ನು ಅದು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ. ಇದು ಆ ಮಕ್ಕಳ ಹಕ್ಕುಗಳ ಪ್ರಮುಖ ಉಲ್ಲಂಘನೆಯಾಗಿದೆ.

ಫ್ರಾನ್ಸ್ ತನ್ನಲ್ಲಿಗೆ ಆಶ್ರಯ ಕೇಳಿ ಬರುವವರು ಮತ್ತು ವಿದೇಶಿ ವಿದ್ಯಾರ್ಥಿಗಳನ್ನು ಸ್ವಾಗತಿಸುವಲ್ಲಿ ತನ್ನ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗುವುದು ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಭರವಸೆ ನೀಡಿದ್ದರೂ, ಸರಿಯಾದ ದಾಖಲೆಯಿಲ್ಲದ ವಲಸೆಯನ್ನು ಅಪರಾಧೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಮಸೂದೆಯು ದಾಪುಗಾಲಿಟ್ಟಿದೆ. ಕಾರ್ಮಿಕ ಚಳವಳಿಯ ಬೇಡಿಕೆಗಳು ಮತ್ತು ಗಡಿಗಳನ್ನು ಮುಚ್ಚಲು ಒತ್ತಾಯಿಸುತ್ತಿರುವ ಜನಾಂಗೀಯಭಯದ (Xenophobic) ಪ್ರತಿಗಾಮಿ ಶಕ್ತಿಗಳ ನಡುವೆ ಅಗತ್ಯವಾಗಿ ಬೇಕಾಗಿದ್ದ ಒಂದು ಸಂಧಾನದ ಪರಿಣಾಮವೇ ಈ ಮಸೂದೆ ಎಂದು ಮ್ಯಾಕ್ರನ್ ವಾದಿಸಿದ್ದಾರೆ.

ಹೊಸ ಮಸೂದೆಯು ದಾಖಲೆಗಳಿಲ್ಲದ ವಲಸೆಯನ್ನು ಅಪರಾಧೀಕರಣಗೊಳಿಸುತ್ತದೆ. ಅದು ಕ್ಷಮಾದಾನದ ಅವಕಾಶಗಳನ್ನು ಕಡಿಮೆಗೊಳಿಸಿ, ಉಲ್ಲಂಘನೆಗಳಿಗೆ ಶಿಕ್ಷೆಯನ್ನು ಹೆಚ್ಚಿಸುತ್ತದೆ. ಈ ಕ್ರಮಗಳು ಒಳಗೊಳ್ಳುವಿಕೆ ಮತ್ತು ಸಹಾನುಭೂತಿಯ ತತ್ವಗಳಿಗೆ ವಿರುದ್ಧವಾಗಿವೆ. ಹತ್ತಿರ ಹತ್ತಿರ 10 ಶೇಕಡಾ ಫ್ರೆಂಚ್ ಜನಸಂಖ್ಯೆಯು ವಲಸಿಗರಿಂದ ಕೂಡಿದೆ. ಅದರಲ್ಲಿ ಅರ್ಧದಷ್ಟು ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಿಂದ ಬಂದವರು. ಹತ್ತಿರ ಹತ್ತಿರ 10 ಲಕ್ಷ ಜನರು, ವಲಸಿಗರ ಮಕ್ಕಳೂ ಸೇರಿದಂತೆ- ದಾಖಲೆಗಳನ್ನು ಹೊಂದಿರದವರು. ಈ ಮಸೂದೆಯು ಅಧ್ಯಕ್ಷ ಮ್ಯಾಕ್ರೋನ್ ಅವರ ಮಧ್ಯಪಂಥೀಯ ರೆನಾಯ್ಸೆನ್ಸ್ ಪಾರ್ಟಿಯ ಒಳಗೂ ವಿವಾದಕ್ಕೆ ಕಾರಣವಾಗಿದೆ. ಆದರೆ, ತೀವ್ರ ಬಲಪಂಥೀಯ ಫ್ರಂಟ್ ನ್ಯಾಷನಲ್ ಪಾರ್ಟಿ ಇದನ್ನೊಂದು ’ತಾತ್ವಿಕ ವಿಜಯ’ ಎಂದು ಬಣ್ಣಿಸಿದೆ.

ವಲಸೆ ನಿಯಂತ್ರಿಸುವ ಮಸೂದೆ

ದಾಖಲೆಗಳಿಲ್ಲದ ಹಲವಾರು ವಲಸಿಗರು ಫ್ರಾನ್ಸಿನ ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಇಂತಹ ಮಸೂದೆಗಳು ವಲಸೆಯನ್ನೇನೂ ಕಡಿಮೆ ಮಾಡುವುದಿಲ್ಲ. ಆದರೆ, ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇನ್ನಷ್ಟು ಹೆಚ್ಚಿನ ಕಿರುಕುಳ ನೀಡುವುದಕ್ಕೆ ಅವಕಾಶ ಒದಗಿಸುತ್ತವೆ. ಈ ಮಸೂದೆಯು ಪ್ರಬಲ ಜನಾಂಗೀಯ ಗುಂಪುಗಳು ದುರ್ಬಲ ಗುಂಪುಗಳನ್ನು ಶೋಷಿಸುವುದಕ್ಕೆ ನೆರವಾಗುತ್ತದೆ. ಕಪ್ಪು ಮತ್ತು ಮುಸ್ಲಿಮರಾಗಿರುವವರು, ವಲಸಿಗರಾಗಿರುವರೆಲ್ಲರೂ ಸಂಶಯಕ್ಕೆ ಒಳಗಾಗುತ್ತಾರೆ ಮತ್ತು ಅವರು ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ.

ಅಂತರ್ ಸಮುದಾಯಗಳ ಮದುವೆಗಳು ಕಳಂಕಕ್ಕೆ ಒಳಗಾಗಬಹುದು. ಒಬ್ಬ ವಲಸಿಗನ ವಾಸವು ಉದ್ಯೋಗದೊಂದಿಗೆ ಇನ್ನಷ್ಟು ಗಟ್ಟಿಯಾಗಿ ಬಂಧಿತವಾಗುವುದರಿಂದ, ಸರಿಯಾದ ದಾಖಲೆಗಳಿಲ್ಲದ ನೌಕರರ ಮಾಲಕರು ಅವರ ಮೇಲೆ ಇನ್ನಷ್ಟು ಹಿಡಿತ ಹೊಂದುತ್ತಾರೆ. ದಾಖಲೆಗಳಿಲ್ಲದ ವಲಸಿಗರನ್ನು ಸುಲಭವಾಗಿ ಅಧಿಕಾರಿಗಳಿಗೆ ಒಪ್ಪಿಸಬಹುದು.

ಫ್ರಾನ್ಸ್, ವಲಸೆ ಮತ್ತು ಜನಾಂಗ

ಫ್ರಾನ್ಸಿನ ವಲಸಿಗ ಜನಸಂಖ್ಯೆಯು ಮುಖ್ಯವಾಗಿ ಯುರೋಪ್ ಮತ್ತು ಆಫ್ರಿಕಾ ಹಾಗೂ ಪಶ್ಚಿಮ ಏಷ್ಯಾದ ಅದರ ಹಿಂದಿನ ವಸಾಹತುಗಳಿಂದ ಬಂದಿರುವಂತದ್ದು. ಫ್ರೆಂಚ್ ವಸಾಹತೀಕರಣವು ಅತ್ಯಂತ ಕ್ರೂರವಾಗಿತ್ತು. ಫ್ರೆಂಚ್ ಸಾಮ್ರಾಜ್ಯವು ಸ್ಥಳೀಯ ಸಂಸ್ಕೃತಿಗಳನ್ನು ನಾಶ ಮಾಡಿ, ಅವುಗಳ ಜಾಗದಲ್ಲಿ ಫ್ರೆಂಚ್ ಸಂಸ್ಕೃತಿಯನ್ನು ತರುವುದಕ್ಕೆ ತನ್ನನ್ನು ಸಮರ್ಪಿಸಿಕೊಂಡಿತ್ತು.

ಹೈಟಿ, ವಿಶೇಷವಾಗಿ- ಫ್ರೆಂಚ್ ಆಡಳಿತ ಕಾಲದಲ್ಲಿ ಅತ್ಯಂತ ಕ್ರೂರ ರೀತಿಯ ಗುಲಾಮಗಿರಿಯನ್ನು ಅನುಭವಿಸಿತು. ಜೀವ ಹಿಂಡುವಂತಹ ಪರಿಸ್ಥಿತಿಯ ಕಾರಣದಿಂದ ಹೈಟಿಯಲ್ಲಿ ’ಗುಲಾಮ’ರು ಎಷ್ಟು ಬೇಗನೇ ಸಾಯುತ್ತಿದ್ದರೋ ಅಷ್ಟು ಬೇಗನೆ ಅವರ ಜಾಗದಲ್ಲಿ ಬೇರೆಯವರನ್ನು ತರಲಾಗುತ್ತಿತ್ತು ಎಂದರೆ, ಈ ಪ್ರದೇಶದಲ್ಲಿ ಜನಸಂಖ್ಯಾ ಸಂರಚನೆಯೇ ಬದಲಾಯಿತು. ಸ್ವಾತಂತ್ರ್ಯ ಪಡೆದ ನಂತರವೂ, 1940ರ ತನಕ, ಗುಲಾಮರ ಮತ್ತು ಇತರ ಆಸ್ತಿಗಳ ನಷ್ಟದ ಹೆಸರಿನಲ್ಲಿ ಫ್ರಾನ್ಸಿಗೆ ನಷ್ಟ ಪರಿಹಾರ ನೀಡಬೇಕಾದ ಹೊರೆಯನ್ನು ಆ ದೇಶವು ಅನುಭವಿಸಬೇಕಾಗಿತ್ತು.

ಒಂದು ಕಡೆಯಲ್ಲಿ ಫ್ರಾನ್ಸ್- ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕ್ರಾಂತಿಕಾರಿ ಆದರ್ಶಗಳನ್ನು ಎತ್ತಿಹಿಡಿಯುತ್ತೇನೆ ಎಂದು ಹೇಳುತ್ತಾ, ಜಾಗತಿಕವಾಗಿ ಮೊದಲ ಆಧುನಿಕ ಕ್ರಾಂತಿಗಳಲ್ಲಿ ಒಂದನ್ನು ನಡೆಸಿದ್ದರೂ, ಇನ್ನೊಂದು ಕಡೆಯಲ್ಲಿ ಅದು, ತನ್ನ ಆಡಳಿತದ ಅಧೀನದಲ್ಲಿರುವ ಫ್ರೆಂಚೇತರ ಪ್ರಜೆಗಳನ್ನು ಅಮಾನವೀಯವಾಗಿ ಲೂಟಿ ಮಾಡಿತು. ಇದು ಇಂದಿನ ತನಕವೂ ಮುಂದುವರಿದಿದೆ.

ವಲಸೆ ಧೋರಣೆಗಳ ಆಚೆಗೂ, ಈಗಿನ ಫ್ರೆಂಚ್ ಸರಕಾರವು ವಲಸಿಗ ಜನ ಸಮುದಾಯವನ್ನು ದಮನಿಸಲು ಇತರ ದಾರಿಗಳನ್ನು ಕಂಡುಕೊಳ್ಳುತ್ತಲೇ ಇದೆ. ಇಲ್ಲಿ, ಹಿಜಾಬ್‌ನಂತಹ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವುದು, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ನಿಂದಿಸಿ ಗೇಲಿ ಮಾಡುವುದು, ವಲಸಿಗರಿಗೆ ವಾಸದ ವ್ಯವಸ್ಥೆಗಳನ್ನು ಅನಾರೋಗ್ಯಕರವಾಗಿ ಮಾಡುವುದು, ಮೂಲಭೂತವಾದ ನೀರಿನ ಸೌಲಭ್ಯವನ್ನೂ ನಿರಾಕರಿಸುವುದು ನಡೆಯುತ್ತಿದೆ.

ವಲಸೆ ಮತ್ತು ಶ್ರಮ

ಎರಡನೇ ಮಹಾಯುದ್ಧದ ನಂತರ, ಫ್ರೆಂಚ್ ಸಾಮ್ರಾಜ್ಯವು ಅಸ್ಥಿರವಾಯಿತು. ಅನೇಕ ರಾಷ್ಟ್ರೀಯ ವಿಮೋಚನಾ ಚಳವಳಿಗಳು ಅತ್ಯಂತ ಪ್ರಬಲವಾಗಿ ಬೆಳೆದು, ಹಲವಾರು ವಸಾಹತುಗಳಲ್ಲಿ ಯುದ್ಧಗಳಿಗೆ ಕಾರಣವಾಯಿತು. ಆಫ್ರಿಕಾ ಮತ್ತು ಏಷ್ಯಾದಿಂದ ಹಿಂತೆಗೆಯುವಂತೆ ಯುಎಸ್‌ಎ ಮತ್ತು ಸೋವಿಯತ್ ಒಕ್ಕೂಟಗಳೆರಡೂ ಫ್ರಾನ್ಸಿನ ಮೇಲೆ ಒತ್ತಡ ಹೇರಿದವು. ತಾನು ತನ್ನ ಹಿಂದಿನ ವಸಾಹತುಗಳ ಮೇಲೆ ಇನ್ನೂ ರಾಜಕೀಯ ಮತ್ತು ಆರ್ಥಿಕ ಪ್ರಭಾವವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುವಂತೆ, ತನ್ನ ವಿದೇಶಾಂಗ ನೀತಿಯಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಫ್ರಾನ್ಸ್ ಪ್ರತಿಕ್ರಿಯಿಸಿತು.

ಇದನ್ನೂ ಓದಿ: ಇಸ್ರೇಲ್‌ ಅಮಾಯಕ ಪ್ಯಾಲೆಸ್ತೀನ್‌ ನಾಗರಿಕರನ್ನು ಹತ್ಯೆ ಮಾಡಿದೆ: ಆಂಟೋನಿ ಬ್ಲಿಂಕೆನ್

ಎರಡನೇ ಮಹಾಯುದ್ಧವು ಫ್ರಾನ್ಸನ್ನು ಅವಶೇಷವನ್ನಾಗಿ ಪರಿವರ್ತಿಸಿಬಿಟ್ಟಿತ್ತು. ಅದನ್ನು ಮರಳಿ ನಿರ್ಮಿಸಲು ಅದಕ್ಕೆ ತನ್ನ ವಸಾಹತುಗಳಿಂದ ವಲಸೆ ಕಾರ್ಮಿಕರು ಬೇಕಾಗಿದ್ದರು. ಮುರಿದುಬೀಳುತ್ತಿದ್ದ ಫ್ರೆಂಚ್ ಸಾಮ್ರಾಜ್ಯದ ಮೂಲೆಮೂಲೆಗಳಿಂದ ಕಾರ್ಮಿಕರು ಕೆಲಸ ಬಯಸಿ ಬಂದರು.

1970ರ ದಶಕದಲ್ಲಿ ಫ್ರಾನ್ಸ್ ತನ್ನ ನವ ಉದಾರವಾದಿ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ಆರಂಭಿಸಿತು. ಖಾಸಗಿ ಕ್ಷೇತ್ರದಲ್ಲಿ ಸರಕಾರದ ಮಧ್ಯಪ್ರವೇಶ ಕಡಿಮೆಯಾಗಲು ಆರಂಭವಾಯಿತು. ಈ ಹೊತ್ತಿನಲ್ಲಿ ತೀವ್ರ ಬಲಪಂಥೀಯ ಪಕ್ಷಗಳು ಮೈತ್ರಿ ಮಾಡಿಕೊಂಡುಬರುತ್ತಾ ಸಂಘಟಿತವಾಗಲು ಆರಂಭಿಸಿದವು. ಈ ಹೊತ್ತಿನಲ್ಲಿಯೇ ಜನಾಂಗೀಯಭಯವನ್ನು ಪ್ರಚೋದಿಸುವ ಫ್ರಂಟ್ ನ್ಯಾಷನಲ್ ಪಾರ್ಟಿಯ ಸ್ಥಾಪನೆಯಾಯಿತು; ಅದು ಹೊಸ ಬೆಳವಣಿಗೆಗಳಿಂದ ಆತಂಕಿತ ಭಾವನೆ ಅನುಭವಿಸುತ್ತಿದ್ದ ಪಕ್ಷಗಳು ಮತ್ತು ಜನರನ್ನು ಸಂಘಟಿಸಲು ಆರಂಭಿಸಿತು. ಇದರಲ್ಲಿ ಫ್ರೆಂಚ್-ಅಲ್ಜೀರಿಯನ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರು, ಸಣ್ಣ ವ್ಯಾಪಾರಗಳ ಮಾಲಕರು ಮತ್ತು ಸಂಪ್ರದಾಯವಾದಿಗಳು ಸೇರಿದ್ದರು. ನವ ಉದಾರವಾದಿ ಧೋರಣೆಗಳು ಫ್ರಾನ್ಸಿನಲ್ಲಿ ನಿಧಾನವಾಗಿ ಅನಾವರಣಗೊಳ್ಳುತ್ತಾಬಂದಂತೆ, ತೀವ್ರ ಬಲಪಂಥೀಯ ರಾಜಕಾರಣವೂ ಬೆಳೆಯಿತು. 1980ರ ದಶಕದಲ್ಲಿ ಫ್ರಂಟ್ ನ್ಯಾಷನಲ್ ಪಕ್ಷವು ಬೆಳೆಯಲು ಆರಂಭಿಸಿತು.

ದಾಖಲೆಗಳಿಲ್ಲದ ವಲಸಿಗರು ಅನುಕೂಲಕರ ಮತ್ತು ಸುಲಭದಲ್ಲಿ ಒದಗುವ ಬಲಿಪಶುಗಳಾದರು. ಅವರು ವಿದೇಶೀಯರಾಗಿದ್ದರು, ಅವರಲ್ಲಿ ಅನೇಕರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರು. ಇದು ಸಂಪ್ರದಾಯವಾದಿ ಮತ್ತು ಜಾತ್ಯತೀತವಾದಿಗಳಿಬ್ಬರಿಗೂ ಕಿರಿಕಿರಿ ಉಂಟುಮಾಡುತ್ತಿತ್ತು. ಅವರಲ್ಲಿ ಅನೇಕರು ಕಪ್ಪಾಗಿದ್ದು, ಅವರನ್ನು ಹಿಂದುಳಿದವರೆಂಬಂತೆ ನಡೆಸಿಕೊಳ್ಳಲಾಯಿತು. ಜನಾಂಗೀಯವಾದ ಮತ್ತು ಇಸ್ಲಾಮೋಫೋಬಿಯಾದ ಒಂದು ಮಿಶ್ರಣವು, ದಾಖಲೆಗಳಿಲ್ಲದ ವಲಸಿಗರನ್ನು ಬಲಪಂಥೀಯ ರಾಜಕಾರಣಿಗಳ ಪೂರ್ವಗ್ರಹಪೀಡಿತ ಸಿದ್ಧಚಿತ್ರಗಳಿಗೆ (ಸ್ಟೀರಿಯೋಟೈಪ್) ಸುಲಭದ ತುತ್ತಾಗುವಂತೆ ಮಾಡಿತು.

1990ರ ದಶಕದಲ್ಲಿ ದಾಖಲೆಗಳಿಲ್ಲದ ವಲಸಿಗರು ಸಂಘಟಿತರಾಗಲು ಆರಂಭಿಸಿದರು. ಅವರನ್ನು ’ಸಾನ್ಸ್ ಪೇಪಿಯರ್’ (ಫ್ರೆಂಚ್‌ನಲ್ಲಿ ಕಾಗದ ರಹಿತರು) ಕಾರ್ಮಿಕರು ಎಂದು ಕರೆಯಲಾಯಿತು. ’ಫ್ರಾನ್ಸನ್ನು ತಮ್ಮ ಶ್ರಮದ ಕಾರಣದಿಂದ ಮರಳಿ ನಿರ್ಮಿಸಲಾಯಿತು, ತಾವು ಫ್ರಾನ್ಸಿನಲ್ಲಿ ದಶಕಗಳಿಂದ ವಾಸಿಸುತ್ತಿದ್ದೇವೆ, ಫ್ರಾನ್ಸ್ ನಮ್ಮ ಮನೆ, ಈ ಮನೆಯನ್ನು ಕಟ್ಟಲು ತಾವು ನೆರವಾಗಿದ್ದಾರೆ’ ಎಂದು ಅವರು ಹೇಳಲು ಆರಂಭಿಸಿದರು. ಸಾನ್ಸ್ ಪೇಪಿಯರ್ ಚಳವಳಿಯು ಫ್ರಾನ್ಸಿನ ಜನಾಂಗೀಯವಾದ ವಿರೋಧಿಗಳು, ಸ್ತ್ರೀವಾದಿಗಳು ಮತ್ತು ಮಕ್ಕಳ ಹಕ್ಕುಗಳ ಚಳವಳಿಗಳಿಂದ ವ್ಯಾಪಕ ಬೆಂಬಲ ಗಳಿಸಿತು. ವಲಸಿಗರ ಹಕ್ಕುಗಳು ಹಲವಾರು ಇತರ ವಿಷಯಗಳ ಜೊತೆಗೆ ತಳಕುಹಾಕಿಕೊಂಡಿದ್ದು, ಅವುಗಳಲ್ಲಿ ಮಕ್ಕಳ ರಕ್ಷಣೆಯ, ಪಾಲನೆಯ ಹಕ್ಕುಗಳು, ವೈವಾಹಿಕ ಸಂಗಾತಿಗಳ ಹಕ್ಕುಗಳು ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳು ಸೇರಿವೆ.

ಅವರು ಫ್ರೆಂಚ್ ಚರ್ಚುಗಳಲ್ಲಿ ಸಂಘಟಿತರಾಗಲು ಆರಂಭಿಸಿದರು. ಚರ್ಚುಗಳಲ್ಲಿ ಇರುವ ಜನರಿಗೆ ಆಶ್ರಯ ಪಡೆಯಲು ಫ್ರೆಂಚ್ ಕಾನೂನು ಹಿಂದೆ ಅವಕಾಶ ಕೊಡುತ್ತಿತ್ತು. ಅವರು ಬಂಧನದ ಭಯವಿಲ್ಲದೇ, ಚರ್ಚುಗಳಲ್ಲಿ ಒಟ್ಟು ಸೇರಬಹುದಿತ್ತು. ಈಗ ಈ ಕಾನೂನನ್ನು ಬದಲಿಸಲಾಗಿದೆ.

ಕಾರ್ಮಿಕ ಚಳವಳಿಯ ಬಿಕ್ಕಟ್ಟು

2018ರಿಂದೀಚೆಗೆ ಫ್ರೆಂಚ್ ಕಾರ್ಮಿಕರು ಸರಕಾರದ ವ್ಯಾಪಾರಿ ಪರ ನೀತಿಗಳನ್ನು ವಿರೋಧಿಸುತ್ತಿದ್ದಾರೆ. ಅದು ಇಂಧನ ಬೆಲೆ ಏರಿಕೆ ವಿರುದ್ಧ ಸಾರಿಗೆ ಕ್ಷೇತ್ರದ ಕಾರ್ಮಿಕರ ಪ್ರತಿಭಟನೆಯೊಂದರಿಂದ ಆರಂಭವಾಯಿತು. ಅವರ ಸಮವಸ್ತ್ರಗಳು ಹಳದಿಯಾಗಿದ್ದು, ಚಳವಳಿಯನ್ನು ಜಿಲೆಟ್ ಜೌನ್ಸ್ (ಹಳದಿ ಜಾಕೆಟ್) ಎಂದು ಕರೆಯಲಾಗುತ್ತಿದೆ. ಈ ಚಳವಳಿಯು ಕಾರ್ಮಿಕ ವರ್ಗದ ಉದ್ದಗಲದಿಂದ ಬಂದಿರುವ ಜನರನ್ನು ಹೊಂದಿದೆ. ತಕ್ಷಣವೇ ಹಲವಾರು ದಾಖಲೆಗಳಿಲ್ಲದ ವಲಸಿಗರು ಈ ಹಳದಿ ಜಾಕೆಟ್ ಚಳವಳಿಯ ಒಳಗೆಯೇ ತಮ್ಮದೇ ಒಂದು ಚಳವಳಿಯನ್ನು ರೂಪಿಸಲು ಆರಂಭಿಸಿದರು. ಹಳದಿ ಜಾಕೆಟ್ ಚಳವಳಿಯು ಒಂದು ವಿಶಾಲವಾದ ಚಳವಳಿಯಾಗಿದ್ದು, ವಲಸಿಗರ ವಿರೋಧಿಯಾಗಿರುವ ಫ್ರೆಂಚ್ ಕಾರ್ಮಿಕ ವರ್ಗದ ಸದಸ್ಯರನ್ನೂ ಒಳಗೊಂಡಿದೆ. ಈ ವೇದಿಕೆಯು ಫ್ರೆಂಚ್ ಸರಕಾರದ ದೊಡ್ಡ ಉದ್ಯಮಗಳ ಪರ ಧೋರಣೆಗಳ ವಿರುದ್ಧ ಗಮನ ಕೇಂದ್ರೀಕರಿಸುತ್ತದೆ. ಆದರೆ, ದಾಖಲೆಗಳಿಲ್ಲದ ವಲಸಿಗರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಿಲ್ಲ. ಆದುದರಿಂದ, ದಾಖಲೆಗಳಿಲ್ಲದ ವಲಸಿಗರು ಜಿಲೆಟ್ ನೋಯರ್ಸ್ (ಕಪ್ಪು ಜಾಕೆಟ್) ಎಂಬ ಪ್ರತ್ಯೇಕ ವಿಭಾಗವನ್ನು ತೆರೆದಿದ್ದಾರೆ. ಕಪ್ಪು ಜಾಕೆಟ್‌ನವರು- ವಲಸಿಗರ ಬಂಧನ ಕೇಂದ್ರಗಳು, ವಲಸಿಗರ ಅಪರಾಧೀಕರಣ, ಪೊಲೀಸ್ ಕ್ರೌರ್ಯ ಮತ್ತು ಗಡಿಪಾರಿನ ವಿರುದ್ಧ ಪ್ರತಿಭಟಿಸಿದ್ದಾರೆ. ಕಪ್ಪು ಜಾಕೆಟಿನವರು ಫ್ರೆಂಚ್ ಕಾರ್ಮಿಕ ವರ್ಗದ ಒಳಗೆಯೇ ಶೋಷಿತರಾಗಿರುವ ಜನರ ಹಕ್ಕುಗಳಿಗಾಗಿ ಹೋರಾಡಿದ್ದಾರೆ.

ಫ್ರೆಂಚ್ ರಾಜಕಾರಣದಲ್ಲಿ ಬಿಕ್ಕಟ್ಟು

2023- ದಶಕಗಳಲ್ಲಿಯೇ ಫ್ರಾನ್ಸಿನ ರಾಜಕೀಯದಲ್ಲಿ ಅತ್ಯಂತ ತಳಮಳಕಾರಿಯಾದ ವರ್ಷಗಳಲ್ಲಿ ಒಂದು. ಇದು ಫ್ರಾನ್ಸಿನಲ್ಲಿ ಫಿಫ್ತ್ ರಿಪಬ್ಲಿಕ್‌ನ ಕೊನೆಯೂ ಆಗಬಹುದು ಎಂದು ಹಲವರು ಭಾವಿಸುತ್ತಿದ್ದಾರೆ. ಸೌಮ್ಯವಾದಿ ಪ್ರತಿಷ್ಟಿತರು, ಕಾರ್ಮಿಕ ವರ್ಗದ ವಿರುದ್ಧ ಮತ್ತು ಕಾರ್ಮಿಕ ವರ್ಗದ ಒಳಗೆಯೇ ಫ್ರಾನ್ಸಿನ ಪ್ರತಿಗಾಮಿ ಬಲಪಂಥೀಯರ ಬೇಡಿಕೆಗಳು, ಹಲವಾರು ಹಿತಾಸಕ್ತಿಗಳು ಒಂದು ಬಿಕ್ಕಟ್ಟಿನ ಹಂತವನ್ನು ತಲಪುತ್ತಿವೆ.

ಯುರೋಪಿನಲ್ಲಿ- 2015ರಲ್ಲಿ ಸಿರಿಯನ್ ಅಂತರ್ಯುದ್ಧ ಆರಂಭವಾದಂದಿನಿಂದ ವಲಸೆಯು ಒಂದು ಚುನಾವಣಾ ವಿಷಯವಾಗುತ್ತಿದೆ. ಇದು ಯುರೋಪಿನ ಉದ್ದಗಲಕ್ಕೂ ಮತದಾರರ ಧ್ರುವೀಕರಣಕ್ಕೆ ಕಾರಣವಾಗಿದೆ. ಫ್ರಾನ್ಸ್ ಇದಕ್ಕೆ ಹೊರತಲ್ಲ. ಮ್ಯಾಕ್ರನ್ ಸರಕಾರ ಈ ಮಸೂದೆಯನ್ನು ತೀವ್ರ ಬಲಪಂಥೀಯ ನ್ಯಾಷನಲ್ ಪಾರ್ಟಿಗೆ ಒಂದು ವಿನಾಯಿತಿ ಎಂಬಂತೆ ತಂದಿದೆ. ಆದರೆ ಇದರಿಂದ ಫ್ರೆಂಚ್ ಕಾರ್ಮಿಕ ವರ್ಗಕ್ಕೆ ಯಾವುದೇ ಲಾಭವಿಲ್ಲ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಓಂ ಬಿರ್ಲಾ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್; ಧ್ರುವ ರಾಠಿ ನಕಲಿ ಖಾತೆ ವಿರುದ್ಧ...

0
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಮಹಾರಾಷ್ಟ್ರದ ಸೈಬರ್ ಪೊಲೀಸರು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ...