Homeಮುಖಪುಟಗುರುತೇ ಸಿಗದಂತೆ ಬದಲಾಗಿರುವ ಪ್ರಜಾಪ್ರಭುತ್ವದ ಚಹರೆ; ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ವೈಫಲ್ಯದ ಕುರಿತು...

ಗುರುತೇ ಸಿಗದಂತೆ ಬದಲಾಗಿರುವ ಪ್ರಜಾಪ್ರಭುತ್ವದ ಚಹರೆ; ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ವೈಫಲ್ಯದ ಕುರಿತು ಅರುಂಧತಿ ರಾಯ್- ಭಾಗ 1

- Advertisement -
- Advertisement -

ಖ್ಯಾತ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರು ಸ್ಟಾಕ್‌ಹೋಮ್‌ನ ಸ್ವೀಡಿಶ್ ಅಕಾಡೆಮಿಯಲ್ಲಿ “ಚಿಂತನೆ ಮತ್ತು ಒತ್ತಡದ ಅಡಿಯಲ್ಲಿ ಸತ್ಯ” ಎಂಬ ವಿಷಯದ ಕುರಿತ ಸಮಾವೇಶದಲ್ಲಿ ಮಾರ್ಚ್ 22ರಂದು ಮಾಡಿದ ಭಾಷಣದ ಸಾರಾಂಶದ ಮೊದಲ ಭಾಗವಿದು. ಈ ಶೀರ್ಷಿಕೆಯ ವಿಷಯವನ್ನು ಅವರು ತಿರುವುಮುರುವು ಮಾಡಿ ಉಪನ್ಯಾಸ ನೀಡಿದ್ದು, ಮೊದಲ ಭಾಗದಲ್ಲಿ ಮಾತನಾಡಿದ ಪ್ರಜಾಪ್ರಭುತ್ವದ ವೈಫಲ್ಯ ಅಥವಾ “ಒತ್ತಡದ ಅಡಿಯಲ್ಲಿ ಸತ್ಯ”ದ ವಿಷಯ ಇಲ್ಲಿದೆ. ಚಿಂತನೆಯ ವಿಷಯ- ಹಾಗೆ ನೋಡಿದಲ್ಲಿ ಪ್ರತ್ಯೇಕಿಸಲು ಸಾಧ್ಯವಿಲ್ಲದ ಸಾಮಾಜಿಕ, ರಾಜಕೀಯ ಮತ್ತು ಸಾಹಿತ್ಯಿಕ ಚಿಂತನೆಯ ವಿಷಯ ಮುಂದಿನ ವಾರ ಪ್ರಕಟಗೊಳ್ಳಲಿದೆ.
– ಅನುವಾದಕ.

**

ಈಸಮಾವೇಶವನ್ನು ಎರಡು ವರ್ಷಗಳಿಗೂ ಹಿಂದೆ ಯೋಜಿಸಲಾಗಿತ್ತು. ಅಂದರೆ, ಕೊರೊನಾ ಮಹಾಮಾರಿ ಮಾಡಿದ ವಿನಾಶ ಮತ್ತು ಉಕ್ರೇನ್ ಮೇಲೆ ರಶ್ಯಾದ ದಾಳಿಗೆ ಮೊದಲೇ ಇದನ್ನು ಯೋಜಿಸಲಾಗಿತ್ತು. ಆದರೆ, ಮಹಾ ವಿನಾಶಕಾರಿಯಾದ ಈ ಎರಡು ಘಟನೆಗಳು- ನಾವಿಲ್ಲಿ ಚಿಂತಿಸಲು ಸೇರಿರುವ ವಿಪತ್ತನ್ನು ಇನ್ನಷ್ಟು ತೀವ್ರಗೊಳಿಸಿವೆ. ಅದೆಂದರೆ, ಪ್ರಜಾಪ್ರಭುತ್ವಗಳು ಗುರುತಿಸಲೂ ಸಾಧ್ಯವಾಗದ ರೂಪ ತಳೆದು, ಆದರೆ, ಆತಂಕಕಾರಿಯಾಗಿ ಗುರುತಿಸಬಹುದಾದ ಅನುರಣನವಾಗಿ ಪರಿವರ್ತನೆಗೊಳ್ಳುತ್ತಿರುವ ಒಂದು ವಿದ್ಯಮಾನ. ಅಭಿವ್ಯಕ್ತಿಯ ಮೇಲೆ ಹೆಚ್ಚುತ್ತಿರುವ ತೀರಾ ಹಳೆಯ ಮತ್ತು ತೀರಾ ಹೊಸರೀತಿಯ ಪೊಲೀಸ್‌ಗಿರಿಯು ಯಾವ ಮಟ್ಟ ಮುಟ್ಟಿದೆ ಎಂದರೆ, ವಾತಾವರಣವು ಒಂದು ರೀತಿಯಲ್ಲಿ ದಂಡಿಸುವ ಪಾಖಂಡಿ ಯಂತ್ರದಂತೆ ಭಾಸವಾಗುತ್ತಿದೆ. ಬಲೆಯಲ್ಲಿ ಸಿಕ್ಕಿ ಕೊನೆಗೊಳ್ಳುವಂತೆ ಭಾಸವಾಗುವ ಯಾವುದೋ ಒಂದರತ್ತ ನಾವು ವೇಗವಾಗಿ ಸಾಗುತ್ತಿದ್ದೇವೆ. ಈ ಉಪನ್ಯಾಸದ ಶೀರ್ಷಿಕೆಯು ಸೂಚಿಸುವ ಅನುಕ್ರಮಣಿಕೆಯನ್ನು ನಾನು ಬದಲಿಸಿ, ವಿಫಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ವಿದ್ಯಮಾನದೊಂದಿಗೆ ನನ್ನ ಮಾತನ್ನು ಆರಂಭಿಸುತ್ತೇನೆ.

ನಾನು ಕಳೆದ ಸಲ ಸ್ವೀಡನ್ನಿಗೆ ಬಂದದ್ದು 2017ರಲ್ಲಿ, ಗೋಥೆನ್‌ಬರ್ಗ್ ಪುಸ್ತಕ ಮೇಳಕ್ಕಾಗಿ. ಹಲವಾರು ಕಾರ್ಯಕರ್ತರು ಅದನ್ನು ಬಹಿಷ್ಕರಿಸುವಂತೆ ಕೇಳಿಕೊಂಡರು. ಯಾಕೆಂದರೆ, ಅದು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ತೀರಾ ಬಲಪಂಥೀಯ ಪತ್ರಿಕೆಯಾದ “ನ್ಯೆ ಟೈಡರ್”ಗೆ (Nye Tider) ಮಳಿಗೆ ಹಾಕಲು ಅವಕಾಶ ನೀಡಿತ್ತು. ಹಾಗೆ ಮಾಡುವುದು (ಬಹಿಷ್ಕರಿಸುವುದು) ಅಸಂಬದ್ಧವಾದೀತು ಎಂದು ಆ ಸಮಯದಲ್ಲಿ ನಾನವರಿಗೆ ವಿವರಿಸಿದೆ. ಯಾಕೆಂದರೆ, ನನ್ನ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿಶ್ವ ವೇದಿಕೆಯಲ್ಲಿ ಆದರದ ಸ್ವಾಗತ ನೀಡಲಾಗುತ್ತಿತ್ತು, ನೀಡಲಾಗುತ್ತಿದೆ. ಆದರೆ, ಆತ 1925ರಲ್ಲಿ- ಮುಸ್ಸೋಲಿನಿಯ ನ್ಯಾಷನಲ್ ಫ್ಯಾಸಿಸ್ಟ್ ಪಾರ್ಟಿಯ “ಸ್ವಯಂಸೇವಕ”ರಾದ “ಬ್ಲ್ಯಾಕ್ ಶರ್ಟ್ಸ್” ಮಾದರಿಯಲ್ಲಿ- ಸ್ಥಾಪಿಸಲಾದ ಹಿಂದೂ ಶ್ರೇಷ್ಠತಾ ಭ್ರಮೆಯ ಬಲಪಂಥೀಯ ಸಂಘಟನೆಯಾಗಿರುವ ಆರೆಸ್ಸೆಸ್ಸಿನ ಆಜೀವ ಸದಸ್ಯ.

ಗೋಥೆನ್‌ಬರ್ಗ್‌ನಲ್ಲಿ ನಾನು ನಾರ್ಡಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟಿನ ಮೆರವಣಿಗೆ ನೋಡಿದೆ. ಅದು ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ನಡೆದ ಮೊದಲ ನಾಝಿ ಮೆರವಣಿಗೆ. ಯುವ ನಾಝಿ ವಿರೋಧಿಗಳು ಅದನ್ನು ಬೀದಿಯಲ್ಲೇ ಎದುರಿಸಿದರು. ಆದರೆ, ಇಂದು ಬಹಿರಂಗವಾಗಿ ನಾಝಿ ಎಂದು ಹೇಳಿಕೊಳ್ಳದೇ ಇದ್ದರೂ, ಒಂದು ತೀರಾ ಬಲಪಂಥೀಯ ಪಕ್ಷವು ಸ್ವೀಡಿಶ್ ಸರಕಾರದಲ್ಲಿ ಆಳುವ ಕೂಟದ ಭಾಗವಾಗಿದೆ ಮತ್ತು ನರೇಂದ್ರ ಮೋದಿ ಭಾರತದಲ್ಲಿ ಒಂಭತ್ತು ವರ್ಷಗಳಿಂದ ಪ್ರಧಾನಿಯಾಗಿ ಆಡಳಿತ ಮಾಡುತ್ತಿದ್ದಾರೆ.

ವಿಫಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ ನಾನು ಮುಖ್ಯವಾಗಿ ಭಾರತದ ಬಗ್ಗೆಯೇ ಹೆಚ್ಚು ಮಾತನಾಡುತ್ತೇನೆ. ಯಾಕೆಂದರೆ, ಅದು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಹೆಸರಾಗಿದೆ ಎಂಬುದಕ್ಕಾಗಿ ಅಲ್ಲ; ಅದು ನಾನು ಪ್ರೀತಿಸುವ, ನನಗೆ ಗೊತ್ತಿರುವ, ನಾನು ವಾಸಿಸುವ ಸ್ಥಳ; ಪ್ರತಿದಿನವೂ ನನ್ನ ಹೃದಯವನ್ನು ಒಡೆಯುವಂಥ, ಮತ್ತೆ ಅದನ್ನು ಸರಿಪಡಿಸುವಂಥ ಸ್ಥಳ ಅದು ಎಂಬುದಕ್ಕಾಗಿ.

ನಾನು ಹೇಳುತ್ತಿರುವುದು ನೆರವಿಗಾಗಿ ಕರೆ ಅಲ್ಲ ಎಂಬುದನ್ನು ನೆನಪಿಡಿ. ಯಾಕೆಂದರೆ, ಯಾವುದೇ ನೆರವು ಬರುವುದಿಲ್ಲ ಎಂಬುದು ಭಾರತದಲ್ಲಿ ಇರುವ ನಮಗೆ ಚೆನ್ನಾಗಿಯೇ ಗೊತ್ತಿದೆ. ಯಾವುದೇ ನೆರವು ಬರುವುದು ಸಾಧ್ಯವಿಲ್ಲ ಕೂಡಾ.

ನಾನು ಮಾತನಾಡುತ್ತಿರುವುದು ದೋಷಗಳಿಂದ ಕೂಡಿದ್ದರೂ, ಹಿಂದೊಮ್ಮೆ ಅಷ್ಟೊಂದು ವಿಶಿಷ್ಟವಾದ ಸಾಧ್ಯತೆಗಳಿಂದ ತುಂಬಿದ್ದ- ಸಂತೋಷ, ತೃಪ್ತಿ, ಸಹಿಷ್ಣುತೆ, ವೈವಿಧ್ಯ ಮತ್ತು ಸುಸ್ಥಿರತೆ ಇತ್ಯಾದಿಗಳಿಗೆ ಪಾಶ್ಚಾತ್ಯ ಜಗತ್ತಿಗಿಂತ ಮೂಲಭೂತವಾಗಿ ವಿಭಿನ್ನವಾದ ಅರ್ಥ ಮತ್ತು ತಿಳಿವಳಿಕೆಗಳನ್ನು ಮುಂದಿಟ್ಟ ದೇಶವೊದರ ಬಗ್ಗೆ ನಿಮಗೆ ತಿಳಿಸಲು ಮಾತನಾಡುತ್ತಿದ್ದೇನೆ. ಅವೆಲ್ಲವನ್ನೂ ಈಗ ನಂದಿಸಲಾಗುತ್ತಿದೆ; ಆಧ್ಯಾತ್ಮಿಕವಾಗಿ ಹೊಸಕಿಹಾಕಲಾಗುತ್ತಿದೆ.

ಭಾರತದ ಪ್ರಜಾಪ್ರಭುತ್ವವನ್ನು ವ್ಯವಸ್ಥಿತವಾಗಿ ಕಳಚಲಾಗುತ್ತಿದೆ. ಕೇವಲ ಆಚರಣೆಗಳಷ್ಟೇ ಉಳಿದಿವೆ. ಮುಂದಿನ ವರ್ಷ ನೀವು ನಮ್ಮ ಗದ್ದಲದ, ವರ್ಣರಂಜಿತ ಚುನಾವಣೆಗಳ ಬಗ್ಗೆ ಬಹಳಷ್ಟನ್ನು ಕೇಳಲಿದ್ದೀರಿ. ಯಾವುದು ಕಾಣದೇ ಇರಬಹುದು ಎಂದರೆ- ಒಂದು ನ್ಯಾಯಬದ್ಧ ಚುನಾವಣೆಗ ಅಗತ್ಯವಾದ ಸಮತಟ್ಟಾದ ಮೈದಾನ. ಬದಲಾಗಿ ಅದು ಕಡಿದಾದ ಕಲ್ಲು ಬಂಡೆಗಳಿಂದ ತುಂಬಿದೆ. ಅವೆಂದರೆ, ಆಳುವ ಪಕ್ಷದ ಕೈಯಲ್ಲಿರುವ ಬಹುತೇಕ ಎಲ್ಲಾ ಹಣ, ಮಾಹಿತಿ, ಚುನಾವಣಾ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆ. ಸ್ವೀಡನ್‌ನದ್ದೇ ಆದ “ವಿ ಡೆಮ್ ಇನ್‌ಸ್ಟಿಟ್ಯೂಟ್” ವಿವರವಾದ ದತ್ತಾಂಶಗಳ ತುಲನಾತ್ಮಕ ಅಧ್ಯಯನ ಮಾಡಿ, ಪ್ರಜಾಪ್ರಭುತ್ವಗಳ ಆರೋಗ್ಯವನ್ನು ಅಳತೆ ಮಾಡಿದ್ದು, ಭಾರತವನ್ನು “ಚುನಾಯಿತ ಸರ್ವಾಧಿಕಾರ”ಗಳ ಪಟ್ಟಿಯಲ್ಲಿ ಎಲ್ ಸಾಲ್ವದೋರ್, ಟರ್ಕಿ ಮತ್ತು ಹಂಗೇರಿಯ ಜೊತೆಗೆ ಸೇರಿಸಿದೆ ಮತ್ತು ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ಭವಿಷ್ಯ ಹೇಳಿದೆ. ಪ್ರಜಾಪ್ರಭುತ್ವದಿಂದ ಸರ್ವಾಧಿಕಾರಕ್ಕೆ, ಅಥವಾ ಇನ್ನಷ್ಟು ಕೆಟ್ಟದಾದುದಕ್ಕೆ ಬೀಳಲಿರುವ 140 ಕೋಟಿ ಜನರ ಕುರಿತು ನಾವಿಲ್ಲಿ ಮಾತನಾಡುತ್ತಿದ್ದೇವೆ.

ಪ್ರಜಾಪ್ರಭುತ್ವ ಯಂತ್ರವನ್ನು ಕಳಚುವ ಪ್ರಕ್ರಿಯೆಯು- ಮೋದಿ ಮತ್ತು ಆರೆಸ್ಸೆಸ್ ಅಧಿಕಾರಕ್ಕೆ ಬರುವ ಮೊದಲೇ ಆರಂಭವಾಗಿತ್ತು. ಹದಿನೈದು ವರ್ಷಗಳ ಹಿಂದೆ, ನಾನು ’ನಂದುತ್ತಿರುವ ಪ್ರಜಾಪ್ರಭುತ್ವದ ಬೆಳಕು’ (ಡೆಮಾಕ್ರಸಿ’ಸ್ ಫೆಯ್ಲಿಂಗ್ ಲೈಟ್) ಎಂಬ ಪ್ರಬಂಧ ಬರೆದಿದ್ದೆ. ಮುಕ್ತ ಮಾರುಕಟ್ಟೆಯ ಜೊತೆಗೆ ಹೊಸದಾಗಿ ಮತ್ತು ಉತ್ಸಾಹದಿಂದ ಸಂಬಂಧ ಬೆಳೆಸಿಕೊಂಡ ಹಳೆಯ, ಪಾಳೇಗಾರಿ ಪ್ರತಿಷ್ಠಿತರ ಮತ್ತು ತಂತ್ರಜ್ಞರಿಂದ ತುಂಬಿದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಅದು 2009ರಲ್ಲಿ. ಐದು ವರ್ಷಗಳ ನಂತರ 2014ರಲ್ಲಿ ಮೋದಿ ಭಾರತದ ಪ್ರಧಾನಮಂತ್ರಿ ಆದರು. ನಂತರದ ಒಂಬತ್ತು ವರ್ಷಗಳಲ್ಲಿ ಭಾರತವು ಗುರುತೇ ಸಿಗದಷ್ಟು ಬದಲಾಗಿದೆ. ಸಂವಿಧಾನವು ಮಾನ್ಯತೆ ನೀಡಿರುವ “ಜಾತ್ಯತೀತ, ಸಮಾಜವಾದಿ ಗಣರಾಜ್ಯ”ವು ಬಹುತೇಕ ಅಸ್ತಿತ್ವದಲ್ಲೇ ಇಲ್ಲ. ಮಹಾನ್ ಸಾಮಾಜಿಕ ಹೋರಾಟಗಳು, ಛಲಬಿಡದ ದಾರ್ಶನಿಕ ಪರಿಸರ ಹೋರಾಟಗಳನ್ನು ದಮನಿಸಲಾಗಿದೆ. ಈಗ ನಾವು ಸಾಯುತ್ತಿರುವ ನದಿಗಳು, ಕುಸಿಯುತ್ತಿರುವ ಅಂತರ್ಜಲಮಟ್ಟ, ಮಾಯವಾಗುತ್ತಿರುವ ಕಾಡುಗಳು ಅಥವಾ ಕರಗುತ್ತಿರುವ ಹಿಮ ಸರೋವರಗಳ ಬಗ್ಗೆ ಅಪರೂಪದಲ್ಲಿ ಮಾತನಾಡುತ್ತೇವೆ. ಯಾಕೆಂದರೆ, ಈ ಚಿಂತೆಗಳನ್ನು ನಮ್ಮ ತಕ್ಷಣದ ಭಯಗಳು ಬದಲಿಸಿ ಆವರಿಸಿವೆ. ಅಥವಾ ಸಿದ್ಧಾಂತ, ತಾತ್ವಿಕತೆಯ ಯಾವ ಕಡೆಯಲ್ಲಿ ನೀವಿದ್ದೀರಿ ಎಂಬುದರ ಆಧಾರದಲ್ಲಿ- ಸಂತೋಷದ ಭ್ರಮೆಗಳು ಆವರಿಸಿಕೊಂಡಿವೆ.

ಭಾರತವು ವಾಸ್ತವಿಕವಾಗಿ ಒಂದು ಕಾರ್ಪೊರೆಟ್, ಹಿಂದೂ ಧಾರ್ಮಿಕ ಪ್ರಭುತ್ವವಾಗಿದೆ, ಮಿತಿ ಮೀರಿದ ಪೊಲೀಸ್ ಪ್ರಭುತ್ವವಾಗಿದೆ, ಬೆದರಿಕೆಯ ಪ್ರಭುತ್ವವಾಗಿದೆ. ಸಾಂವಿಧಾನಿಕ ಸಂಸ್ಥೆಗಳು ಹಿಂದಿನ ಆಡಳಿತದಿಂದ, ನಿರ್ದಿಷ್ಟವಾಗಿ ಮುಖ್ಯ ವಾಹಿನಿಯ ಮಾಧ್ಯಮಗಳಿಂದ ಟೊಳ್ಳಾಗಿದ್ದವು. ಈಗ ಅವು ಹಿಂದೂ ಶ್ರೇಷ್ಠತೆಯ ಭಾವನೆಯಿಂದ ಧುಮುಗುಡುತ್ತಿವೆ. ಅದೇ ಸಮಯದಲ್ಲಿ ಮುಕ್ತ ಮಾರುಕಟ್ಟೆಯು ತಾನು ಏನನ್ನು ಮಾಡಬೇಕೂ ಆದನ್ನೇ ಮಾಡಿದೆ. ಚುಟುಕಾಗಿ, 2023ರ ಆಕ್ಸ್‌ಫಾಮ್ (Oxfam) ವರದಿಯ ಪ್ರಕಾರ ಭಾರತದ ಮೇಲ್ಮಟ್ಟದ ಒಂದು ಶೇಕಡಾ ಅತಿ ಶ್ರೀಮಂತರು ಭಾರತ ಒಟ್ಟು ಸಂಪತ್ತಿನ 49 ಶೇಕಡ ಪ್ರಮಾಣದ ಒಡೆತನ ಹೊಂದಿರುವಾಗ, ತಳಮಟ್ಟದ 50 ಶೇಕಡಾ ಜನರು (70 ಕೋಟಿ) ಒಟ್ಟು ಸಂಪತ್ತಿನ ಮೂರು ಶೇಕಡ ಪ್ರಮಾಣದ ಒಡೆತನ ಮಾತ್ರ ಹೊಂದಿದ್ದಾರೆ. ನಾವು ಅತೀ ಬಡವರನ್ನು ಹೊಂದಿರುವ ಅತೀ ಶ್ರೀಮಂತ ದೇಶ.

ಈ ಕೆಲವು ವಿಷಯಗಳಿಗೆ ಯಾರನ್ನು ನೇರವಾಗಿ ಹೊಣೆಯಾಗಿಸಬೇಕೋ, ಅವರ ಬದಲು ಈ ಅಸಮಾನತೆಯು ಹುಟ್ಟಿಸುವ ಕೋಪ ಮತ್ತು ಅಸಮಾಧಾನವನ್ನು ಭಾರತದ ಅಲ್ಪಸಂಖ್ಯಾತರ ಕಡೆಗೆ ನಿರ್ದೇಶಿಸಿ ಬಳಸಿಕೊಳ್ಳಲಾಗಿದೆ. ಭಾರತದ ಜನಸಂಖ್ಯೆಯ 14 ಶೇಕಡಾದಷ್ಟಿರುವ 170 ಕೋಟಿ ಮುಸ್ಲಿಮರೀಗ ಕೋಪಕ್ಕೆ ಗುರಿಯಾದವರಲ್ಲಿ ಮುನ್ನಲೆಯಲ್ಲಿದ್ದಾರೆ.

ಹೀಗಿರುವಾಗ, ಬಹುಸಂಖ್ಯಾತವಾದಿ ಚಿಂತನೆಯು ವರ್ಗ ಮತ್ತು ಜಾತಿ ಗಡಿಗಳನ್ನು ಮೀರಿರುವುದಲ್ಲದೇ, ವಿದೇಶಿ ಭಾರತೀಯರಲ್ಲಿಯೂ ಭಾರೀ ಬೆಂಬಲವನ್ನು ಪಡೆದಿದೆ. ಈ ವರ್ಷದ ಜನವರಿ ತಿಂಗಳಲ್ಲಿ ಬಿಬಿಸಿಯು “ಭಾರತ: ಮೋದಿ ಪ್ರಶ್ನೆ” ಎಂಬ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತು. ಅದು 2001ರಲ್ಲಿ ಗುಜರಾತಿನ ಮುಖ್ಯಮಂತ್ರಿ ಆದಲ್ಲಿಂದ ಹಿಡಿದು, ಭಾರತದ ಪ್ರಧಾನಿಯಾಗಿರುವ ವರ್ಷಗಳ ತನಕ ಮೋದಿಯ ರಾಜಕೀಯ ಪಯಣದ ಜಾಡನ್ನು ಹಿಡಿದಿತ್ತು. ಈ ಚಿತ್ರವು, 2002ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ, ಆಗಿನ ವಿಧಾನಸಭಾ ಚುನಾವಣೆಗಳಿಗೆ ಸ್ವಲ್ಪವೇ ಮೊದಲು ಮೋದಿಯ ಕಣ್ಗಾವಲಿನಲ್ಲಿ ಗುಜರಾತಿನಲ್ಲಿ ನಡೆದ ಮುಸ್ಲಿಂ ವಿರೋಧಿ ನರಮೇಧದ ಕುರಿತು ಬ್ರಿಟಿಷ್ ವಿದೇಶಾಂಗ ಕಚೇರಿಯು ಏಪ್ರಿಲ್ 2002ರಲ್ಲಿ ಆಯೋಜಿಸಿದ್ದ ಆಂತರಿಕ ವರದಿಯನ್ನು ಸಾರ್ವಜನಿಕರ ಮುಂದೆ ಮೊದಲ ಬಾರಿಗೆ ಬಹಿರಂಗಪಡಿಸಿತು.

ಇಷ್ಟು ವರ್ಷಗಳ ಕಾಲ ಬಹಿರಂಗಗೊಳ್ಳದೆ ನಿಷೇಧದಲ್ಲಿದ್ದ ಈ ಸತ್ಯಶೋಧಕ ವರದಿಯು, ವರ್ಷಗಳಿಂದಲೂ ಭಾರತೀಯ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವಕೀಲರು, ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳುತ್ತಾಬಂದಿರುವ ಸಾಮೂಹಿಕ ಅತ್ಯಾಚಾರಗಳು ಮತ್ತು ನರಮೇಧಗಳನ್ನು ದೃಢೀಕರಿಸುತ್ತದಷ್ಟೇ. “ಕನಿಷ್ಟ 2000” ಜನರನ್ನು ಕೊಲೆ ಮಾಡಲಾಗಿದೆ ಎಂದು ವರದಿ ಹೇಳಿರುವುದೇ ಅಲ್ಲದೆ, ಈ ಹತ್ಯಾಕಾಂಡವನ್ನು “ಜನಾಂಗೀಯ ಶುದ್ಧೀಕರಣದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಪೂರ್ವಯೋಜಿತ ನರಮೇಧ” ಎಂದು ಕರೆದಿದೆ. ಕೊಲೆಗಳು ನಡೆಯಲು ಆರಂಭವಾದಾಗ ಸುಮ್ಮನಿರುವಂತೆ ಪೊಲೀಸರಿಗೆ ಆದೇಶಿಸಲಾಗಿತ್ತು ಎಂದು ನಂಬಲಾರ್ಹ ಮೂಲಗಳು ತಮಗೆ ತಿಳಿಸಿರುವುದಾಗಿ ಅದು ಹೇಳುತ್ತದೆ. ವರದಿಯು ಸಂಪೂರ್ಣವಾಗಿ ಈ ನರಮೇಧದ ಹೊಣೆಯನ್ನು ಮೋದಿಯ ಬಾಗಿಲ ಮುಂದೆ ಇರಿಸಿದೆ.

ಇದನ್ನೂ ಓದಿ: 7 ಮಂದಿ ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌‌ ಸಾವು; ವರದಿ ಸಲ್ಲಿಸಲು ಹರ್ಯಾಣ, ಗುಜರಾತ್‌ಗೆ NHRC ಸೂಚನೆ

ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಅದರ ಎಲ್ಲಾ ಲಿಂಕ್‌ಗಳನ್ನು ಕಿತ್ತುಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟ್ಟರ್‌ಗೆ ಆದೇಶಿಸಲಾಯಿತು. ಅವರು ತಕ್ಷಣವೇ ಅದನ್ನು ಪಾಲಿಸಿದರು. ಫೆಬ್ರವರಿ 21ರಂದು ದಿಲ್ಲಿ ಮತ್ತು ಮುಂಬಯಿಗಳಲ್ಲಿ ಇರುವ ಬಿಬಿಸಿ ಕಚೇರಿಗಳನ್ನು ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆಯವರು ಸುತ್ತುವರಿದು ದಾಳಿ ಮಾಡಿದರು- ಆಕ್ಸ್‌ಫ್ಯಾಮ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕಚೇರಿಗಳಿಗೆ ದಾಳಿ ಮಾಡಿದಂತೆ, ಹಲವಾರು ಪ್ರಮುಖ ಪ್ರತಿಪಕ್ಷಗಳ ನಾಯಕರ ಮನೆಗಳಿಗೆ ದಾಳಿ ಮಾಡಿದಂತೆ ಮತ್ತು ಸರಕಾರದ ಜೊತೆ ಪೂರ್ಣವಾಗಿ ಸೇರದ ಬಹುತೇಕ ಎಲ್ಲಾ ಸರಕಾರೇತರ ಸಂಸ್ಥೆಗಳ ಮೇಲೆ ದಾಳಿ ಮಾಡಿದಂತೆ. ಸುಪ್ರೀಂ ಕೋರ್ಟ್ 2002ರ ನರಮೇಧದಿಂದ ಕಾನೂನಿನ ಅಡಿಯಲ್ಲಿ ಮೋದಿಯನ್ನು ಮುಕ್ತಗೊಳಿಸಿದ್ದರೂ, ಬೆಟ್ಟದಷ್ಟು ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದಲ್ಲಿ ಆತನ ಶಾಮೀಲಾತಿಯ ಆರೋಪ ಮಾಡಿದ ಕಾರ್ಯಕರ್ತರು ಮತ್ತು ಪೊಲೀಸ್ ಆಧಿಕಾರಿಗಳು ಜೈಲಿನಲ್ಲಿದ್ದಾರೆ ಅಥವಾ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.

ಇದೇ ಹೊತ್ತಿನಲ್ಲಿ, ಹಲವಾರು ಮಂದಿ- ಶಿಕ್ಷೆಗೊಳಗಾದ ಕೊಲೆಗಡುಕರು- ಜಾಮೀನಿನಲ್ಲೋ, ಪೆರೋಲಿನಲ್ಲೋ ಹೊರಗಡೆ ಇದ್ದಾರೆ. ಕಳೆದ ಆಗಸ್ಟ್‌ನಲ್ಲಿ, ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ 11 ಮಂದಿ ಕೈದಿಗಳು ಜೈಲಿನಿಂದ ಹೊರಬಂದರು. 2002ರ ನರಮೇಧದ ಸಂದರ್ಭದಲ್ಲಿ ಹತ್ತೊಂಬತ್ತು ವರ್ಷ ಪ್ರಾಯದ ಮುಸ್ಲಿಂ ಮಹಿಳೆ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯ ಕುಟುಂಬದ 14 ಸದಸ್ಯರನ್ನು ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರು ಇವರು. ಅವರಲ್ಲಿ ಒಂದು ದಿನದ ಹಸುಗೂಸು ಮತ್ತು ಕಲ್ಲಿಗೆ ತಲೆ ಜಜ್ಜಿ ಕೊಲ್ಲಲಾಗಿದ್ದ ಆಕೆಯ ಮೂರು ವರ್ಷ ಪ್ರಾಯದ ಮಗಳು ಸಲೇಹ ಸೇರಿದ್ದರು. ಜೈಲಿನ ಗೋಡೆಗಳ ಹೊರಗೆ ಅತ್ಯಾಚಾರಿ, ಕೊಲೆಗಡುಕರನ್ನು ಹೀರೋಗಳಂತೆ ಸ್ವಾಗತಿಸಲಾಯಿತು. ಅವರಿಗೆ ಹೂವಿನ ಹಾರ ಹಾಕಲಾಯಿತು. ಆಗ ಕೂಡಾ ರಾಜ್ಯದ ಚುನಾವಣೆ ಸದ್ಯವೇ ನಡೆಯುವುದರಲ್ಲಿತ್ತು.

ಇವತ್ತು ಸ್ವಲ್ಪ ಹೊತ್ತಿನ ಮುಂಚೆ ಪ್ರೊ. ಟಿಮೊಥಿ ಸ್ನೈಡರ್ “ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನು” ಎಂದು ಪ್ರಶ್ನಿಸಿದರು. ಈಗ ನಾನು ಹೇಳಿದ್ದನ್ನು ಕೇಳಿ ಯಾರೂ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ಭಾರತದಲ್ಲಿ ಮಾತನಾಡುವುದಕ್ಕೂ, ಮಾಡುವುದಕ್ಕೂ ಸ್ವಾತಂತ್ರ್ಯಇದೆ. ಬೇಕಾದಷ್ಟು ಇದೆ. ಮುಖ್ಯವಾಹಿನಿಯ ಟಿವಿ ಆಂಕರ್‌ಗಳು- ವಾಸ್ತವವಾಗಿ ದೈಹಿಕ ಹಾನಿ ಅಥವಾ ಬಂಧನಕ್ಕೆ ಗುರಿ ಮಾಡಬಹುದಾದ ರೀತಿಯಲ್ಲಿ ಅಲ್ಪಸಂಖ್ಯಾತರ ಕುರಿತು ಮುಕ್ತವಾಗಿ ಸುಳ್ಳು ಹೇಳಬಹುದು, ಅವರನ್ನು ಮನುಷ್ಯರೇ ಅಲ್ಲದ ರಾಕ್ಷಸರಂತೆ ಚಿತ್ರಿಸಬಹುದು. ಸ್ವಯಂಘೋಷಿತ ದೇವಮಾನವರು ಮತ್ತು ಖಡ್ಗ ಹಿಡಿದು ಜನರ ಗುಂಪುಗಳು ಹತ್ಯಾಕಾಂಡಗಳಿಗೆ, ಮುಸ್ಲಿಂ ಮಹಿಳೆಯರ ಸಾಮೂಹಿಕ ಅತ್ಯಾಚಾರಕ್ಕೆ ಕರೆ ನೀಡಬಹುದು. ದಲಿತರು ಮತ್ತು ಮುಸ್ಲಿಮರನ್ನು ಹಾಡುಹಗಲೇ ಸಾರ್ವಜನಿಕವಾಗಿ ಥಳಿಸಬಹುದು ಮತ್ತು ಅವುಗಳ ವಿಡಿಯೋಗಳನ್ನು ಯೂಟ್ಯೂಬಿನಲ್ಲಿ ಅಪ್‌ಲೋಡ್ ಮಾಡಬಹುದು. ಚರ್ಚುಗಳ ಮೇಲೆ ಮುಕ್ತವಾಗಿ ದಾಳಿ ಮಾಡಿ, ಪಾದ್ರಿಗಳು ಮತ್ತು ನನ್‌ಗಳಿಗೆ ಹೊಡೆದು ಆವಮಾನಿಸಬಹುದು.

ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾದ, ಜನರು ಸ್ವಯಂಆಡಳಿತಕ್ಕಾಗಿ ಸುಮಾರು ಮೂರು ದಶಕಗಳಿಂದ ಹೋರಾಡುತ್ತಿರುವ, ಭಾರತವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಿಲಿಟರಿ ಸಾಂದ್ರತೆಯ ಆಡಳಿತ ನಡೆಸುತ್ತಿರುವ ಮತ್ತು ಸರಕಾರವು ವಿದೇಶಿ ಪತ್ರಕರ್ತರಿಗೆ ಪ್ರವೇಶ ನೀಡದಿರುವ ಕಾಶ್ಮೀರದಲ್ಲಿ, ಸರಕಾರವು- ಆನ್‌ಲೈನ್ ಸೇರಿದಂತೆ ಎಲ್ಲಾ ರೀತಿಯ ಧ್ವನಿಗಳ ಬಾಯಿ ಮುಚ್ಚಿಸಲು, ಸ್ಥಳೀಯ ಪತ್ರಕರ್ತರನ್ನು ಜೈಲಿಗೆ ತಳ್ಳಲು ತನಗೆ ತಾನೇ ಮುಕ್ತ ಸ್ವಾತಂತ್ರ್ಯವನ್ನು ಕೊಟ್ಟುಕೊಂಡಿದೆ.

ದಫನ್ ಭೂಮಿಗಳಿಂದ ತುಂಬಿರುವ ಸುಂದರ ಕಣಿವೆಯಲ್ಲಿ- ಯಾವುದೇ ಸುದ್ದಿಯು ಹೊರಗೆ ಬರದ ಕಣಿವೆಯಲ್ಲಿ- ಜನರು ಹೇಳುತ್ತಾರೆ: “ಕಾಶ್ಮೀರದಲ್ಲಿ ಸತ್ತವರು ಬದುಕಿದ್ದಾರೆ. ಬದುಕಿರುವವರು ಬದುಕಿರುವಂತೆ ನಟಿಸುತ್ತಿರುವ ಸತ್ತವರು.” 2019ರಲ್ಲಿ ಮೋದಿ ಮತ್ತವರ ಪಕ್ಷವು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮತ್ತು ಸಂವಿಧಾನದತ್ತವಾದ ಅರೆ ಸ್ವಾಯತ್ತತೆಯನ್ನು ಏಕಪಕ್ಷೀಯವಾಗಿ ಕಿತ್ತು ಹಾಕಲಾಯಿತು. ತಕ್ಷಣವೇ ಸಂಸತ್ತು ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯನ್ನು ಅಂಗೀಕರಿಸಿತು. ಈ ಕಾಯಿದೆಯು ಸ್ಪಷ್ಟವಾಗಿಯೇ ಮುಸ್ಲಿಮರ ವಿರುದ್ಧ ತಾರತಮ್ಯವೆಸಗುವ ಗುರಿಯನ್ನು ಹೊಂದಿದೆ. ಇದು ರಾಷ್ಟ್ರೀಯ ನಾಗರಿಕರ ದಾಖಲಾತಿ (ಎನ್‌ಆರ್‌ಸಿ)ಯನ್ನು ರೂಪಿಸುವುದಕ್ಕೆ ಪೂರಕವಾಗಿದೆ. ಇದರ ಪ್ರಕಾರ ತಮ್ಮ ಅಸ್ತಿತ್ವದ ಇತಿಹಾಸದ ಬಗ್ಗೆ ಜನರು ಸರಕಾರಿ ಅಂಗೀಕೃತ ದಾಖಲೆಗಳನ್ನು ಒದಗಿಸಬೇಕು. ಈ ಪ್ರಕ್ರಿಯೆಯು ನಾಝಿ ಜರ್ಮನಿಯ ನ್ಯೂರೆಂಬರ್ಗ್ ಕಾನೂನುಗಳಿಗಿಂತ ಬೇರೆಯಾಗಿಲ್ಲ. ಈಗಾಗಲೇ ಅಸ್ಸಾಂ ರಾಜ್ಯದಲ್ಲಿ 20 ಲಕ್ಷ ಜನರನ್ನು ರಾಷ್ಟ್ರೀಯ ನಾಗರಿಕ ದಾಖಲಾತಿಯಿಂದ ಕಿತ್ತುಹಾಕಲಾಗಿದ್ದು, ಅವರು ತಮ್ಮೆಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಅವರನ್ನು “ಘೋಷಿತ ವಿದೇಶೀಯರು” ಅಥವಾ “ಸಂಶಯಾಸ್ಪದ ಮತದಾರರು” ಎಂದು ಘೋಷಿಸಿರುವುದಲ್ಲದೆ, ಎಷ್ಟೋ ಬಾರಿ ಭವಿಷ್ಯದ ಕೈದಿಗಳ ಕಠಿಣ ಶ್ರಮದಲ್ಲೇ ದುಡಿಸಿಕೊಂಡು ಅವರಿಗೆ ದೈತ್ಯ ಬಂಧನ ಕೇಂದ್ರಗಳನ್ನು ನಿರ್ಮಿಸಲಾಗಿದೆ.

ನಮ್ಮ ನವ ಭಾರತವು ಈಗ ಕೇವಲ ವೇಷಭೂಷಣಗಳ, ದೃಶ್ಯ ವೈಭವಗಳ ಭಾರತ. ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿಯ ಹೆಸರಿನ ಕ್ರಿಕೆಟ್ ಸ್ಟೇಡಿಯಂ ಒಂದನ್ನು ಕಲ್ಪಿಸಿಕೊಳ್ಳಿ. ಅದರ ಆಸನ ಸಾಮರ್ಥ್ಯ 1,32,000. 2020ರ ಜನವರಿಯಲ್ಲಿ ಮೋದಿ ಆಗಿನ ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪನ್ನು ಸನ್ಮಾನಿಸಿ, “ನಮಸ್ತೆ ಟ್ರಂಪ್” ಎಂದು ಸಭೆ ನಡೆಸಿದಾಗ ಇದು ತುಂಬಿತ್ತು. ಹಾಡಹಗಲಿನಲ್ಲಿ ಮುಸ್ಲಿಮರ ನರಮೇಧ ನಡೆದ, ಈಗ ಮುಸ್ಲಿಮರು ಒಂದು ಕೊಳಚೆ ಪ್ರದೇಶಗಳಲ್ಲಿ ಬದುಕುತ್ತಿರುವ ನಗರದ ಜನರಿಗೆ ಕೈಬೀಸಿದ ಟ್ರಂಪ್, ಭಾರತದ ವೈವಿಧ್ಯ ಮತ್ತು ಸಹಿಷ್ಣುತೆಯನ್ನು ಹೊಗಳಿದರು. ಮೋದಿ ಜನರಿಂದ ಚಪ್ಪಾಳೆ ತಟ್ಟಿಸಿದರು.

ಒಂದು ದಿನ ನಂತರ ಟ್ರಂಪ್ ದಿಲ್ಲಿಗೆ ಬಂದಾಗ, ಇನ್ನೊಂದು, ಗುಜರಾತಿನ ನರಮೇಧಕ್ಕೆ ಹೋಲಿಸಿದರೆ ಚಿಕ್ಕದೆನ್ನಬಹುದಾದ ಹತ್ಯಾಕಾಂಡವು ಆತ ಉಳಿದುಕೊಂಡಿದ್ದ ಐಷಾರಾಮಿ ಹೊಟೇಲಿನ ಹತ್ತಿರದ ಪ್ರದೇಶದಲ್ಲೇ ನಡೆಯಿತು. ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಈ ಪ್ರದೇಶದಲ್ಲಿ ಶಸ್ತ್ರಧಾರಿ ಹಿಂದೂತ್ವದ ಗೂಂಡಾಗಳು ಮುಸ್ಲಿಮರ ಮೇಲೆ ಎರಗಿ ಕನಿಷ್ಟ 53 ಮಂದಿಯನ್ನು ಕೊಂದು ಮನೆ, ಅಂಗಡಿ, ಮಸೀದಿಗಳಿಗೆ ಬೆಂಕಿಹಚ್ಚಿದರು. ಪೊಲೀಸರು ಮತ್ತೊಮ್ಮೆ ಬದಿಯಲ್ಲಿ ನಿಂತರು. ಟ್ರಂಪ್ ಏನನ್ನೂ ಹೇಳಲಿಲ್ಲ.

ಆ ಭಯಾನಕ ದಿನಗಳ ಬೇರೆ ತರಹದ “ದೃಶ್ಯವೈಭವ”ಗಳು ನಮ್ಮ ಮನಸ್ಸಿಲ್ಲಿ ಸುಟ್ಟು ಅಚ್ಚೊತ್ತಿವೆ: ಭಾರತದ ರಾಜಧಾನಿ ನಗರದ ಬೀದಿಯೊಂದರಲ್ಲಿ ಒಬ್ಬ ಯುವ ಮುಸ್ಲಿಮ್ ವ್ಯಕ್ತಿ ತೀವ್ರ ಗಾಯಗೊಂಡು ಸಾವಿನ ದವಡೆಯಲ್ಲಿ ಬಿದ್ದಿದ್ದಾರೆ. ಆತನನ್ನು ಥಳಿಸಿ, ಒದ್ದು ಭಾರತದ ರಾಷ್ಟ್ರಗೀತೆ ಹಾಡುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾರೆ. ಕೆಲವು ದಿನಗಳ ನಂತರ ಆತ ಮೃತನಾದ. ಅವರ ಹೆಸರ ಫೈಜನ್. ಅವರಿಗೆ 23 ವರ್ಷ ವಯಸ್ಸಾಗಿತ್ತು. ಆ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ.

ಆದರೆ ಇದು ಯಾವುದೂ ಪ್ರಜಾಪ್ರಭುತ್ವ ಪ್ರಪಂಚದ ಅಧ್ವರ್ಯುಗಳಿಗೆ ಲೆಕ್ಕಕ್ಕೇ ಬರಬೇಕಾಗಿಲ್ಲ. ವಾಸ್ತವದಲ್ಲಿ ಲೆಕ್ಕಕ್ಕೇ ಬಂದಿಲ್ಲ. ಯಾಕೆಂದರೆ, ಅವರಿಗೆ ವ್ಯಾಪಾರ ಮಾಡಲಿಕ್ಕಿದೆ. ಯಾಕೆಂದರೆ, ಪಾಶ್ಚಾತ್ಯ ಜಗತ್ತಿಗೆ ಭಾರತವು ಬೆಳೆಯುತ್ತಿರುವ ಚೀನಾದ ಎದುರು ಒಂದು ತಡೆಗೋಡೆ. (ಹಾಗೆಂದು ಅವರು ಭಾವಿಸಿದ್ದಾರೆ.) ಯಾಕೆಂದರೆ, ಫೈಟರ್ ಜೆಟ್ ಮತ್ತು ವಾಣಿಜ್ಯ ವಿಮಾನಗಳ ಉದಾರವಾದ ಖರೀದಿ ಒಪ್ಪಂದಕ್ಕೆ ಬದಲಾಗಿ- ಸ್ವಲ್ಪ ಸಾಮೂಹಿಕ ಅತ್ಯಾಚಾರಗಳು, ಸ್ವಲ್ಪ ಜನಾಂಗೀಯ ಶುದ್ಧೀಕರಣ, ಕೆಲವು ಗಂಭೀರವಾದ ಹಣಕಾಸು ಭ್ರಷ್ಟಾಚಾರ, ರಶ್ಯಾದಿಂದ ಕಚ್ಚಾತೈಲ ಖರೀದಿಸಿ, ಶುದ್ಧೀಕರಿಸಿ, ಐರೋಪ್ಯ ದಿಗ್ಬಂಧನದ ಕಳಂಕ ತೋಡೆದುಹಾಕಿ, ಯುರೋಪಿನ ದೇಶಗಳಿಗೆ- ಕೆಲವು ವರದಿಗಳ ಪ್ರಕಾರ ಯುಎಸ್‌ಎಗೇ ಅದನ್ನು ಮಾರುವ ವ್ಯಾಪಾರ ಮಾಡಬಹುದು. ಯಾಕೆ ಕೂಡದು? ಎಲ್ಲರಿಗೂ ಸಮಾಧಾನ!

ಉಕ್ರೇನಿನವರಿಗೆ ಉಕ್ರೇನ್ ಅವರ ದೇಶ. ರಶ್ಯಾದವರಿಗೆ ಅದು ವಸಾಹತು. ಮತ್ತು ಪಾಶ್ಚಾತ್ಯರಿಗೆ ಮತ್ತು ಯುಎಸ್‌ಎಗೆ ಅದೊಂದು ಗಡಿ ಮಾತ್ರ. (ಹಿಂದೆ ವಿಯೆಟ್ನಾಂ ಮತ್ತು ಅಫ್ಘಾನಿಸ್ತಾನ ಆಗಿದ್ದಂತೆ.) ಆದರೆ, ಮೋದಿಗೆ ಅದು ಪ್ರದರ್ಶನ ನೀಡಲು ಇನ್ನೊಂದು ವೇದಿಕೆ. ಈ ಬಾರಿ- ಭಾರೀ ಮುತ್ಸದ್ಧಿ ಮತ್ತು ಶಾಂತಿದೂತನ ಪಾತ್ರ ವಹಿಸಲು ಮತ್ತು “ಇದು ಯುದ್ಧದ ಕಾಲವಲ್ಲ; ಶಾಂತಿಯ ಕಾಲ” ಮುಂತಾದ ಪ್ರವಚನಗಳನ್ನು ಮಾಡಲು ಸರಿಯಾದ ಕಾಲ.

ಒಳಗೆ ಹೆಚ್ಚುಹೆಚ್ಚಾಗಿ ಭಾಸವಾಗುತ್ತಿರುವ ಒಂದು ಧಾರ್ಮಿಕ ಪಂಗಡದಲ್ಲಿ ಸಂಕೀರ್ಣವಾದ ನ್ಯಾಯಾಂಗ ವ್ಯಾಪ್ತಿಯಿದೆ. ಆದರೆ, ಕಾನೂನಿನ ಮುಂದೆ ಸಮಾನತೆ ಇಲ್ಲ. ಕಾನೂನನ್ನು ಜಾತಿ, ಧರ್ಮ, ಲಿಂಗ ಮತ್ತು ವರ್ಗಗಳ ಆಧಾರದಲ್ಲಿ ಅನ್ವಯಿಸಲಾಗುತ್ತದೆ. ಉದಾಹರಣೆಗೆ: ಒಬ್ಬ ಹಿಂದೂ ಹೇಳುವುದನ್ನು ಒಬ್ಬ ಮುಸ್ಲಿಂ ಹೇಳಲಾಗದು, ಉಳಿದವರೆಲ್ಲರೂ ಹೇಳುವುದನ್ನು ಒಬ್ಬ ಕಾಶ್ಮೀರಿ ಹೇಳಲಾಗದು. ಇದು- ಒಬ್ಬರು ಇನ್ನೊಬ್ಬರಿಗಾಗಿ ಮಾತನಾಡುವ ಒಗ್ಗಟ್ಟನ್ನು ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿಸುತ್ತದೆ. ಆದರೆ, ಅದು ಕೂಡಾ ಒಂದು ಅಪಾಯಕಾರಿ ಚಟುವಟಿಕೆಯಾಗಿಬಿಟ್ಟಿದೆ. ತಡೆಬೇಲಿಯನ್ನು ತಂದೊಡ್ಡಿದೆ.

ದುರದೃಷ್ಟವಶಾತ್, ಇಂಥ ಒಂದು ಕ್ಷಣದಲ್ಲಿ, ಯಾವುದನ್ನು ಹೇಳಬಹುದು, ಯಾವ ಶಬ್ದಗಳನ್ನು ಬಳಸಬಾರದು ಎಂಬುದರ ಪಟ್ಟಿ ನಿಮಿಷ ನಿಮಿಷಕ್ಕೂ ಬೆಳೆಯುತ್ತಿದೆ. ಹಿಂದೆಲ್ಲಾ ಕಥಾನಕಗಳನ್ನು ನಿಯಂತ್ರಿಸುವ ಸರಕಾರಗಳು ಮತ್ತು ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳೂ ಇದ್ದವು. ಇವರು ಪಾಶ್ಚಾತ್ಯರಲ್ಲಿ ಬಿಳಿಯ ಜನರು ಮತ್ತು ಭಾರತದಲ್ಲಿ ಬ್ರಾಹ್ಮಣ ಜನರು. ಅಂದ ಹಾಗೆ, ಇಲ್ಲಿ ಫತ್ವಾ ಜನರೂ ಇದ್ದಾರೆ. ಅವರಿಗೆ ಹತ್ಯೆ ಮತ್ತು ಸೆನ್ಸಾರ್ ಅರ್ಥ ಒಂದೇ.

ನಮ್ಮ ಮೇಲೆ ಯಾವತ್ತೂ ಸವಾರಿ ಮಾಡುತ್ತಾ ಬಂದಿರುವವರು ನೀಡಿರುವ ಲೇಬಲ್ ಮತ್ತು ಗುರುತುಗಳ ಜೈಲಿನಲ್ಲಿ ನಾವು ನಮ್ಮನ್ನೇ ಕೈದು ಮಾಡಿಕೊಂಡರೆ, ನಾವು ಹೆಚ್ಚೆಂದರೆ ಜೈಲು ದಂಗೆ ನಡೆಸಬಹುದೇ ಹೊರತು, ಒಂದು ಕ್ರಾಂತಿಯನ್ನಲ್ಲ.!

ಅರುಂಧತಿ ರಾಯ್

ಅರುಂಧತಿ ರಾಯ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...