Homeಮುಖಪುಟಸಿಂಹ ಲಾಂಛನದಿಂದ ಧ್ವಜ ಸಂಹಿತೆಯ ತನಕ; ಭಾರತೀಯ ಸಂಕೇತಗಳ ಅರ್ಥ ಬದಲಾಯಿಸುತ್ತಿರುವ ಮೋದಿ ಸರಕಾರ

ಸಿಂಹ ಲಾಂಛನದಿಂದ ಧ್ವಜ ಸಂಹಿತೆಯ ತನಕ; ಭಾರತೀಯ ಸಂಕೇತಗಳ ಅರ್ಥ ಬದಲಾಯಿಸುತ್ತಿರುವ ಮೋದಿ ಸರಕಾರ

- Advertisement -
- Advertisement -

ಅಶೋಕನ ಸಿಂಹ ಲಾಂಛನದಲ್ಲಿರುವ ಸಿಂಹಗಳು ಧರ್ಮಚಕ್ರದ ಮೇಲೆ ನಿಂತಿವೆ. ಅವು ತಮ್ಮ ಶಕ್ತಿಯನ್ನು ಧರ್ಮದಿಂದ ಪಡೆಯುತ್ತವೆ. ಮೋದಿಯ ಸೆಂಟ್ರಲ್ ವಿಸ್ತಾದಲ್ಲಿರುವ ಸಿಂಹಗಳು ಧರ್ಮವನ್ನು ಮೆಟ್ಟಿನಿಂತಿವೆ ಮತ್ತು ತಾವೇ ಸ್ವತಃ ಶಕ್ತಿಗಳಾಗಿವೆ.

*****

ಭಾರತದ ಮೊದಲ ಗಣರಾಜ್ಯವು ಎರಡನೇ ಸುತ್ತಿಗೆ ದಾರಿ ಮಾಡಿಕೊಡುತ್ತಿರುವಾಗ ಸಂಕೇತಗಳು, ಲಾಂಛನಗಳು ಕೂಡಾ ಬದಲಾಗಬೇಕು; ಈ ಪಲ್ಲಟವನ್ನು ಇನ್ನೂ ಅಧಿಕೃತವಾಗಿ ಘೋಷಿಸದೇ ಇರುವುದರಿಂದ
– ಈ ಬದಲಾವಣೆಗಳು ಸೆಂಟ್ರಲ್ ವಿಸ್ತಾದ ಹಿಂಬಾಗಿಲಿನ ಮೂಲಕ- ವಿರೂಪಗೊಳಿಸುವಿಕೆ, ತಿರುಚುವಿಕೆ, ಕತ್ತರಿಸುವಿಕೆ, ಅಳಿಸುವಿಕೆ ಮುಂತಾದ ಅಕ್ರಮಗಳಿಂದಲೇ ಬರಬೇಕು! ಹೀಗಿದ್ದರೂ ಈ ಕಳ್ಳತನದ ಹಿಂದೆ ಒಂದು ಸ್ಪಷ್ಟವಾದ ಸಿದ್ಧಾಂತವಿದೆ: ನಾವು ಸ್ವಾತಂತ್ರ್ಯ ಹೋರಾಟದ ರಾಷ್ಟ್ರೀಯವಾದದಿಂದ, ಪವಿತ್ರವಾದ ಸಂವಿಧಾನದ ಮೌಲ್ಯಗಳಿಂದ, 20ನೇ ಶತಮಾನವನ್ನು ರೂಪಿಸಿದ ಐತಿಹಾಸಿಕ ಸ್ಮೃತಿಗಳಿಂದ ಸಂಬಂಧ ಕಳಚಿ ದೂರ ಸರಿಯುವಂತೆ ಮಾಡಲಾಗುತ್ತಿದೆ. ಈ ನಿರ್ವಾತವನ್ನು ಭವ್ಯ ದೃಶ್ಯಾವಳಿಗಳು, ಹೊಸ ಮೌಲ್ಯಗಳು, ಹೊಸ ನೆನಪುಗಳಿಂದ ತುಂಬಲಾಗುತ್ತಿದೆ. ಮುಂಬರಲಿರುವ ’ಅಮೃತ ಮಹೋತ್ಸವ’ ಎಂದು ಕರೆಯಲಾಗುತ್ತಿರುವ- ಸ್ವಾತಂತ್ರ್ಯ ದಿನದ 75ನೇ ವರ್ಷಾಚರಣೆಯು ಸ್ವಾತಂತ್ರ್ಯದತ್ತ ನಮ್ಮ ನಡಿಗೆಯನ್ನು ನೆನಪಿಸುವುದಕ್ಕಿಂತ ಹೆಚ್ಚಾಗಿ, ಅದನ್ನು ಮರೆತು, ’ಭವಿಷ್ಯದ ಜೊತೆ ನಮ್ಮ ಮುಖಾಮುಖಿ’ಯ (ಟ್ರಿಸ್ಟ್ ವಿಥ್ ಡೆಸ್ಟಿನಿ) ಘೋಷಣೆಯಿಂದ ತಥಾಕಥಿತ “ನವ ಭಾರತ”ದ ಕಡೆಗೆ ನಡೆಯುವುದರ ಕುರಿತಾಗಿದೆ.

ಸಂಕೇತಾರ್ಥಗಳ ಪಲ್ಲಟ

ಹೊಸ ಸಂಸತ್ ಭವನದ ಮೇಲೆ ಸ್ಥಾಪಿಸಲಾಗಿರುವ ಹೊಸ ಸಿಂಹ ಲಾಂಛನವು ಈ ಹೊಸ ಸಾಂಕೇತಿಕ ವ್ಯವಸ್ಥೆಯಲ್ಲಿ ಒಂದು ಚಿಕ್ಕ ತುಂಡು ಅಷ್ಟೇ. ಬರೀ ಕ್ಯಾಮರಾ ಕೋನದಿಂದ ಮಾತ್ರವಲ್ಲ; ಸಾರನಾಥದ ಸಿಂಹಗಳಿಗೂ, ಈಗಿನ ’ಹೊಸ ವ್ಯಾಖ್ಯಾನ’ದ ಸಿಂಹಗಳಿಗೂ ಸ್ಪಷ್ಟವಾದ ವ್ಯತ್ಯಾಸ ಇರುವುದರ ಕುರಿತು ಸಂಶಯವಿಲ್ಲ. ಅಶೋಕನ ಮೂಲ ಸಿಂಹ ಲಾಂಛನವು ’ನ್ಯಾಯಬದ್ಧ ಗಣರಾಜ್ಯ’ ಎಂದು ಕರೆಯಲಾಗುವ ಪರಿಕಲ್ಪನೆಯನ್ನು ಸಂಕೇತಿಸುತ್ತಿದ್ದು, ತನ್ನ ಶಾಂತ, ರಾಜಗಾಂಭೀರ್ಯದಿಂದ ನ್ಯಾಯದ ಚಕ್ರವೆನಿಸಿದ ’ಧರ್ಮಚಕ್ರ’ದಿಂದ ಶಕ್ತಿಯನ್ನು ಪಡೆಯುತ್ತದೆ. ’ಭಾರತದ ರಾಷ್ಟ್ರೀಯ ಲಾಂಛನಗಳ ಅಯ್ಕೆ’ ಎಂಬ ತಮ್ಮ ಪ್ರಬಂಧದಲ್ಲಿ ಪ್ರೊಫೆಸರ್ ಭಿಖು ಪಾರೇಖ್ ಅವರು ರಾಷ್ಟ್ರೀಯ ಲಾಂಛನವನ್ನು ವ್ಯಾಖ್ಯಾನಿಸಿರುವುದು ಹೀಗೆ: “ನಾಲ್ಕು ದಿಕ್ಕುಗಳಿಗೆ ಮುಖಮಾಡಿ, ಬೆನ್ನಿಗೆ ಬೆನ್ನು ಹಾಕಿ ಗಂಭೀರವಾಗಿ ಕುಳಿತಿರುವ ನಾಲ್ಕು ಸಿಂಹಗಳು, ಚಕ್ರದಲ್ಲಿ ಸಂಕೇತಿಸಲಾಗಿರುವ ನ್ಯಾಯಬದ್ಧ ಕಾನೂನಿಂದ ನಿರ್ದೇಶಿತವಾದಾಗ ಮಾತ್ರವೇ ಸ್ಥಿರ ಮತ್ತು ಅಪೇಕ್ಷಣೀಯವಾದ ಅಧಿಕಾರದ ಮಹತ್ವವನ್ನು ಪ್ರತಿನಿಧಿಸುತ್ತವೆ.”

ಈಗಿನ ಹೊಸ ಅವತಾರದ ಸಿಂಹಗಳು ಸ್ಪಷ್ಟವಾಗಿಯೇ ಹೆಚ್ಚು ಭಯಹುಟ್ಟಿಸುವಂತವು, ಕೋಪೋದ್ರಿಕ್ತ ಮತ್ತು ಆತಂಕಕಾರಿಯಾದವೂ ಆಗಿವೆ. ಅವು ಕಣ್ಣಿಗೆ ಗೋಚರವಾಗುವಂತೆ ಹೆಚ್ಚು ದಪ್ಪವೂ, ಅಗಲ ಎದೆಯವೂ ಆಗಿವೆ. ಈ ಆವೃತ್ತಿಯು ಮೂಲದ 1.6 ಮೀಟರ್ ಎತ್ತರಕ್ಕೆ ಹೋಲಿಸಿದಾಗ 6.5 ಮೀಟರ್ ಎತ್ತರವಿದ್ದು, ನಿಜಕ್ಕೂ ದೊಡ್ಡದಾಗಿದೆ. ಸಾಂಸ್ಕೃತಿಕ ಇತಿಹಾಸಕಾರರೂ ಆಗಿರುವ ರಾಜ್ಯಸಭಾ ಸದಸ್ಯ ಜವಾಹರ್ ಸರ್ಕಾರ್ ಎರಡರ ಚಿತ್ರಗಳನ್ನು ಹಾಕಿ ಈ ರೀತಿ ಟ್ವೀಟ್ ಮಾಡಿದ್ದಾರೆ: “ಎಡದಲ್ಲಿರುವ ಮೂಲವು ಗಂಭೀರವಾಗಿದ್ದು, ರಾಜ ಕಳೆಯ ಆತ್ಮವಿಶ್ವಾಸದಿಂದ ಕೂಡಿದೆ. ಬಲದಲ್ಲಿರುವ, ಹೊಸ ಸಂಸತ್ತಿನ ಕಟ್ಟಡದ ಮೇಲಿನ ಮೋದಿಯ ಆವೃತ್ತಿಯು ಗುರುಗುಟ್ಟುತ್ತಿದ್ದು, ಅನಗತ್ಯವಾಗಿ ಆಕ್ರಮಣಕಾರಿಯಾಗಿದೆ ಮತ್ತು ಅದು ಪ್ರಮಾಣಬದ್ಧವಾಗಿಲ್ಲ.”

ಈಗಿನ ಆವೃತ್ತಿಯು ರಾಷ್ಟ್ರೀಯ ಲಾಂಛನಕ್ಕೆ ಅಪಚಾರ ಮಾಡಿದೆಯೇ ಎಂಬುದರ ತಾಂತ್ರಿಕತೆಯ ಬಗ್ಗೆ ನನಗೆ ಚಿಂತೆಯಿಲ್ಲ. ನನಗೆ ಆಸಕ್ತಿ ಇರುವುದು ಇಲ್ಲಿನ ಅರ್ಥಪಲ್ಲಟದ ಕುರಿತು. ಅಶೋಕನ ಸಿಂಹ ಲಾಂಛನದಲ್ಲಿರುವ ಸಿಂಹಗಳು ಧರ್ಮಚಕ್ರದ ಮೇಲೆ ನಿಂತಿವೆ. ಅವು ತಮ್ಮ ಶಕ್ತಿಯನ್ನು ಧರ್ಮದಿಂದ ಪಡೆಯುತ್ತವೆ. ಮೋದಿಯ ಸೆಂಟ್ರಲ್ ವಿಸ್ತಾದಲ್ಲಿರುವ ಸಿಂಹಗಳು ಧರ್ಮವನ್ನು ಮೆಟ್ಟಿನಿಂತಿವೆ ಮತ್ತು ತಾವೇ ಸ್ವತಃ ಶಕ್ತಿಗಳಾಗಿವೆ. ಅವು ಹನುಮಂತನ ಹಿಂದಿನ ಶಾಂತ ರೂಪಗಳ ಬದಲಿಗೆ ಉಗ್ರ ಹನುಮಂತನ ಹೊಸ ರೂಪ ಬಂದಂತೆಯೇ- ಮೂಲ ಸಿಂಹಗಳಿಗೆ ಅಪಚಾರ ಮಾಡಿವೆ. ಅವು ಕಾನೂನುಬದ್ಧ ಆಡಳಿತಕ್ಕೆ ಬುಲ್ಡೋಜರ್ ಆಡಳಿತ ಮಾಡಿರುವುದನ್ನೇ ಇಲ್ಲಿಯೂ ಮಾಡಿವೆ.

ಧ್ವಜ ಸಂಹಿತೆ ಬದಲಾವಣೆ

ಮೇಲೆ ಹೇಳಿದ ಪಲ್ಲಟವು- ಹೆಚ್ಚು ಗಮನಕ್ಕೆ ಬರದ ರಾಷ್ಟ್ರೀಯ ಸಂಕೇತಗಳ ಬದಲಾವಣೆಗಳ ಜೊತೆಜೊತೆಗೇ ನಡೆದಿದೆ. ಸರಕಾರವು ಇತ್ತೀಚೆಗೆ ಭಾರತ ಧ್ವಜಸಂಹಿತೆ 2002ಕ್ಕೆ ಸದ್ದಿಲ್ಲದೇ ಬದಲಾವಣೆ ತಂದು, ಯಂತ್ರಗಳಿಂದ ಮಾಡಿದ ಪಾಲಿಯೆಸ್ಟರ್ ತ್ರಿವರ್ಣ ಧ್ವಜಕ್ಕೆ (ವಾಸ್ತವದಲ್ಲಿ ನಾಲ್ಕು ಬಣ್ಣಗಳು) ಅವಕಾಶ ನೀಡಿದೆ. ಅದು ರಾಷ್ಟ್ರಧ್ವಜದೊಂದಿಗೆ ಮಹಾತ್ಮ ಗಾಂಧಿಯವರಿಗೆ ಇದ್ದ ಕೊನೆಯ ಕೊಂಡಿಯನ್ನು ಕಡಿದುಹಾಕಿದೆ. ಗಾಂಧಿಯವರು ಭಾರತದ ರಾಷ್ಟ್ರಧ್ವಜದ ಬೇರೆಬೇರೆ ಅವತರಣಿಕೆಗಳಿಗೆ ಬದಲಾವಣೆ ಮಾಡಿ, ನಾವೀಗ ಹೊಂದಿರುವ ರೂಪಕ್ಕೆ ತಂದಿದ್ದರು. ಅವರ ಮುಖ್ಯ ಕೊಡುಗೆಯೆಂದರೆ ಮಧ್ಯದಲ್ಲಿ ಚರಕವನ್ನು
ಕೂರಿಸಿದ್ದು. ಸಂವಿಧಾನ ರಚನಾ ಸಭೆಯು ಚರಕದ ಬದಲಿಗೆ ಅಶೋಕನ ಧರ್ಮಚಕ್ರದಿಂದಲೇ ಪಡೆದ ಚಕ್ರವನ್ನು ತಂದಿತು. ಆದರೂ, ರಾಷ್ಟ್ರಧ್ವಜವು ಆಗಲೂ ಗಾಂಧಿಯವರ ಒಂದು ಅಂಶವನ್ನು ಉಳಿಸಿತ್ತು. ಅದೆಂದರೆ, ರಾಷ್ಟ್ರಧ್ವಜದ ಬಟ್ಟೆಯು ಉಣ್ಣೆ/ರೇಷ್ಮೆ/ಖಾದಿಯದ್ದಾಗಿದ್ದು, ಕೈಯಿಂದ ನೂಲಿ, ನೇಯ್ಗೆ ಮಾಡಿದ್ದಾಗಿರಬೇಕು ಎಂಬುದು. ಎಲ್ಲಾ ಸಂಹಿತೆಗಳ ಹಾಗೆಯೇ ಇದನ್ನೂ ಉಲ್ಲಂಘನೆಗಳ ಜೊತೆಗೆಯೇ ಯಾಂತ್ರಿಕವಾಗಿ ಪಾಲಿಸಲಾಗುತ್ತಿತ್ತು. ದೇಶಕ್ಕೆ ಹೆಚ್ಚಾಗಿ ಚೀನಾದಲ್ಲೇ ತಯಾರಿಸಿದ ಪ್ಲಾಸ್ಟಿಕ್ ಧ್ವಜಗಳ ಮಹಾಪೂರ ಬಂತು. ಇನ್ನೂ ಹೆಚ್ಚಾಗಿ ಜೈವಿಕವಾಗಿ ಬದಲಿಸಿದ ಬಿಟಿ ಹತ್ತಿಯಿಂದ ಮಿಲ್ಲುಗಳಲ್ಲಿ ತಯಾರಿಸಿದ ಬಟ್ಟೆಯ ಧ್ವಜಗಳು ಬಂದವು.

ಹೀಗಿದ್ದರೂ, ಸರಕಾರ ಮತ್ತು ಇತರ ಆಧಿಕೃತ ಸಂಸ್ಥೆಗಳು ರಾಷ್ಟ್ರಧ್ವಜವನ್ನು ತಯಾರಿಸಿ ಪೂರೈಸಲು ಮಾನ್ಯತೆ ಪಡೆದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಿಂದ ಪಡೆದ ಧ್ವಜಗಳನ್ನೇ ಉಪಯೋಗಿಸುವುದು ಅನಿವಾರ್ಯವಾಗಿತ್ತು. ಇದಲ್ಲದೇ, ಸಾಂಕೇತಿಕ ಮತ್ತು ಭಾವನಾತ್ಮಕ ಮೌಲ್ಯದ ಜೊತೆಗೆ, ಇದು ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿತ್ತು. ಇಂಡಿಯಾ ಹ್ಯಾಂಡ್‌ಮೇಡ್ ಕಲೆಕ್ಟಿವ್ ಸಂಘಟನೆಯು ಸಿಂಥೆಟಿಕ್ ಧ್ವಜಕ್ಕೆ ಅವಕಾಶ ನೀಡುವ ಈ ಬದಲಾವಣೆಯನ್ನು ವಿರೋಧಿಸಿದೆ.

ಇಲ್ಲಿ ನಾವು ಕಾನೂನು, ಆರ್ಥಿಕತೆ ಮತ್ತು ವಾಸ್ತವಿಕತೆಯ ವಿಷಯಗಳನ್ನು ಪಕ್ಕಕ್ಕಿರಿಸಿ, ಸಾಂಕೇತಿಕವಾಗಿರುವುದಕ್ಕೆ ಗಮನಹರಿಸೋಣ. ಕಳೆದ ಕೆಲವು ವರ್ಷಗಳಿಂದ ಮೋದಿ ಸರಕಾರವು ಆಯಕಟ್ಟಿನ ಜಾಗಗಳಲ್ಲಿ ಭಾರೀ ಗಾತ್ರದ ರಾಷ್ಟ್ರಧ್ವಜಗಳ ಹಾರಾಟವನ್ನು ಉತ್ತೇಜಿಸುತ್ತಿದೆ. ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರವೂ ಈ ನಡೆಯನ್ನು ಅನುಕರಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾವತ್ತೂ ರಾಷ್ಟ್ರಧ್ವಜವನ್ನಾಗಲೀ, ರಾಷ್ಟ್ರಗೀತೆ ’ಜನ ಗಣ ಮನ’ವನ್ನಾಗಲೀ ಅಂಗೀಕರಿಸಿರಲಿಲ್ಲ ಮತ್ತು ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ಅರ್ಧ ದಶಕ ಕಾಲ ರಾಷ್ಟ್ರಧ್ವಜ ಹಾರಿಸಿರಲಿಲ್ಲ ಎಂಬುದೇನೂ ಗುಟ್ಟಿನ ವಿಷಯವಲ್ಲ.

ಈಗ ಅವರು ತ್ರಿವರ್ಣ ಧ್ವಜದ ಸ್ವರೂಪವನ್ನು ಆಪ್ಪಿಕೊಂಡಿರುವುದರಿಂದ, ಹೊಸ ಆಡಳಿತಗಾರರು ಅದರ ಮೂಲವಸ್ತುವಿನ ಜೊತೆಗಾದರೂ ಕೈಯಾಡಿಸಿ ಅರ್ಥ ಬದಲಾವಣೆ ಮಾಡಬೇಕಾಗಿದೆ. ಖಾದಿಯ ದೊರಗಾದ ಬಾವುಟವು ಅದನ್ನು ಜನರ ಹತ್ತಿರಕ್ಕೆ ತಂದಿತ್ತು. ಅದು ವಸಾಹತುಶಾಹಿಯ ವಿರುದ್ಧದ ಹೋರಾಟದ ಕಟು ಅನುಭವಗಳ ನೆನಪಾಗಿತ್ತು. ತಾತ್ವಿಕ ಆಯಾಮದಲ್ಲಿ ಅದು ಶ್ರಮದ ಗೌರವದ ಪ್ರತೀಕವಾಗಿತ್ತು. ನಯವಾದ, ಹೊಳೆಯುವ ದೊಡ್ಡ ಸಿಂಥೆಟಿಕ್ ಬಾವುಟಗಳು ತೋರಿಕೆಯ ಥಳಕು ರಾಷ್ಟ್ರೀಯವಾದವನ್ನು ಪ್ರತಿನಿಧಿಸುತ್ತವೆ. ಗ್ರಾಮೀಣ ಜನರಿಗೆ ಬೆಂಗಳೂರಿನ ಐಟಿ ಉದ್ಯೋಗಿಗಳು ಇದ್ದ ಹಾಗೆಯೇ ಹಿಂದಿನ ಬಾವುಟಕ್ಕೆ ಈಗಿನ ಬಾವುಟವು ಸೋದರ ಸಂಬಂಧಿ.

ಅಧಿಕಾರದ ಸಾಂಕೇತಿಕತೆ

ಇತ್ತೀಚಿನ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯದ ಕುರಿತು ’ದಿ ಪ್ರಿಂಟ್’ನ ಒಪಿನಿಯನ್ ಎಡಿಟರ್ ರಮಾ ಲಕ್ಷ್ಮಿ ಬರೆಯುತ್ತಾ, ಅದರ ರೀತಿ, “ದೊಡ್ಡದು ಅತ್ಯುತ್ತಮವಾದ್ದು, ಥಳುಕಿನದ್ದು ಮತ್ತು ಕಣ್ಣು ಕೋರೈಸುವಂತದ್ದು” ಎಂಬಂತಿದೆ ಎಂದಿದ್ದಾರೆ. ಇದು ಮೋದಿ ಬಹಳ ಚಾಣಾಕ್ಷತನದಿಂದ ರೂಪಿಸಿರುವ ಅಧಿಕಾರದ ಸಾಂಕೇತಿಕತೆಯನ್ನು ಪ್ರತಿಫಲಿಸುತ್ತದೆ. ರಾಷ್ಟ್ರೀಯ ಯುದ್ಧ ಸ್ಮಾರಕವು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಿಂದ ಸ್ವಾತಂತ್ರ್ಯಾನಂತರದ ಯುದ್ಧಗಳತ್ತ ಗಮನವನ್ನು ಪಲ್ಲಟಗೊಳಿಸುವ ಪ್ರಯತ್ನವಾಗಿದ್ದರೆ, ಪಟೇಲರ ಏಕತೆಯ ಪ್ರತಿಮೆ ಮತ್ತು ಅಂಬೇಡ್ಕರ್ ಸ್ಮಾರಕಗಳು- ಈಗಿನ ಆಡಳಿತಗಾರರು ಸ್ವಾತಂತ್ರ್ಯಪೂರ್ವದ ಅವಧಿಯಿಂದ ಕದ್ದು, ಸಾಧ್ಯವಿರುವುದನ್ನು ತಮ್ಮದನ್ನಾಗಿ ಅಪ್ರಾಪ್ರಿಯೇಟ್ ಮಾಡಿಕೊಳ್ಳುವ ಪ್ರಯತ್ನವಾಗಿದೆ.

ಸೆಂಟ್ರಲ್ ವಿಸ್ತಾದ ಉದ್ಘಾಟನೆ ಇನ್ನಷ್ಟೇ ಆಗಬೇಕಾಗಿದೆ. ಆದರೆ, ಅದು ಬೆರಗುಹುಟ್ಟಿಸಬಯಸುನ ಭವ್ಯ ಸಮಾರಂಭ ಆಗಿರುತ್ತದೆ ಎಂದು ನಾವು ಈಗಲೇ ಊಹಿಸಬಹುದು. ಬಹುಶಃ ವಾಲ್ಟರ್ ಬೆಂಜಮಿನ್ ’ರಾಜಕೀಯದ ಸೌಂದರ್ಯೀಕರಣ’ ಎಂದಾಗ ಇದೇ ಅರ್ಥದಲ್ಲಿ ಹೇಳಿರಬೇಕು: ಜನಸಮುದಾಯಗಳಿಗೆ ಯಾವುದೇ ನೈಜ ಪರಿಣಾಮಗಳಿಲ್ಲದೆ ಬರೇ ದೃಶ್ಯಾವಳಿಗಳನ್ನು ತೋರಿಸುವುದು; ಕಲೆಯನ್ನು ಜನರನ್ನು ಮನರಂಜಿಸಿ, ಬೆರಗುಗೊಳಿಸಿ, ತಮ್ಮ ವಾಸ್ತವಿಕ ಜೀವನದ ಸ್ಥಿತಿಗತಿಯನ್ನು ಸಂಪೂರ್ಣವಾಗಿ ಮರೆತುಬಿಡುವಂತೆ ಮಾಡುವ ದೃಶ್ಯಾವಳಿಗಳನ್ನು ಸೃಷ್ಟಿಸಲು ಬಳಸುವುದು.

ಮೋದಿಗೆ ಹೆಚ್ಚಿನ ನಾಯಕರಿಗಿಂತ ಸಾಂಕೇತಿಕತೆಯು ಚೆನ್ನಾಗಿ ಅರ್ಥವಾಗುತ್ತದೆ. ಸರಕಾರದ ಅಚ್ಚಿಗೆ ಸರಿಯಾಗಿ ಜನರನ್ನು ಎರಕಹೊಯ್ಯಲು- ವಾಸ್ತುಶಿಲ್ಪ, ಶಿಲ್ಪಗಳು, ಚಿತ್ರಗಳು, ಭಾಷಣಗಳು ಇತ್ಯಾದಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಬೃಹತ್ ಗಾತ್ರವು ಬೆರಗು ಮೂಡಿಸುತ್ತದೆ; ತಾಂತ್ರಿಕ ಥಳಕು ನಮ್ಮ ಜೀವನದ ಗತಿಯನ್ನೇ ಮರೆಸಿ ಪ್ರಗತಿಯ ಭರವಸೆ ಮೂಡಿಸುತ್ತದೆ. ಕೃತಕ, ನಯವಾದ ರೂಪವು ನಿಜ ಜೀವನದ ಸುಕ್ಕುಗಳನ್ನು ಮಾಯಮಾಡುತ್ತದೆ. ಆಕ್ರಮಣಕಾರಿ ನಿಲುವು ಸಾಮೂಹಿಕ ವಿಶ್ವಾಸವನ್ನು ಮೂಡಿಸಿ, ಆಳವಾಗಿ ಬೇರೂರಿರುವ ಕೀಳರಿಮೆಯನ್ನು ಮುಚ್ಚಿಹಾಕುತ್ತದೆ. ಶಾಂತ ರಸದಿಂದ ರೌದ್ರ ರಸಕ್ಕೆ- ಆಂತರಿಕದಿಂದ ಬಾಹ್ಯಕ್ಕೆ ರೂಪಾಂತರವು- ಒಂದು ಹೊಸ ರಾಜಕೀಯ ಸಮುದಾಯಕ್ಕೆ ಆಹ್ವಾನವಾಗಿದೆ. ಅದನ್ನೇ ಆವರು ’ನವ ಭಾರತ’ ಎಂದು ಕರೆಯುತ್ತಿದ್ದಾರೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


ಇದನ್ನೂ ಓದಿ: ರಾಷ್ಟ್ರೀಯ ಲಾಂಛನ ವಿರೂಪ; ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಂದ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...