Homeಕರ್ನಾಟಕಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ನಡೆಸುವಂತಿಲ್ಲ: ಸುಪ್ರೀಂ ಆದೇಶ

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ನಡೆಸುವಂತಿಲ್ಲ: ಸುಪ್ರೀಂ ಆದೇಶ

ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಹೈಕೋರ್ಟ್ ನೀಡಿದ್ದ ಅನುಮತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ

- Advertisement -
- Advertisement -

ಕರ್ನಾಟಕ ವಕ್ಫ್ ಮಂಡಳಿಯ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ‘ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ’ ಕಾಪಾಡಬೇಕು ಎಂದು ಸೂಚಿಸಿದೆ. ಇಲ್ಲಿ ಗಣೇಶ ಚತುರ್ಥಿ ನಡೆಸಬಾರದೆಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ಗಣೇಶ ಹಬ್ಬವನ್ನು ಇಲ್ಲಿ ಆಚರಿಸಲು ಸರ್ಕಾರ ಅನುಮತಿ ನೀಡಬಹುದು ಎಂದು ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಕ್ಫ್‌ ಬೋರ್ಡ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

“200 ವರ್ಷಗಳಿಂದ ಈ ಸ್ಥಳದಲ್ಲಿ ಇಂತಹ ಧಾರ್ಮಿಕ ಉತ್ಸವಗಳನ್ನು ನಡೆಸಿಲ್ಲ” ಎಂದು ವಕ್ಫ್‌ ಮಂಡಳಿ ವಾದಿಸಿತು. ನ್ಯಾಯಾಲಯದ ತ್ರಿಸದಸ್ಯ ಪೀಠವು ‘ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಗಣೇಶ ಉತ್ಸವವನ್ನು ಆಚರಿಸಬಾರದು’ ಎಂದು ತೀರ್ಪು ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಮೈದಾನ ರಾಜ್ಯ ಸರ್ಕಾರಕ್ಕೆ ಸೇರಿದ್ದೋ ಅಥವಾ ವಕ್ಫ್ ಮಂಡಳಿಗೆ ಸೇರಿದ್ದೋ ಎಂಬ ವಿವಾದ ಹೈಕೋರ್ಟ್‌ನಲ್ಲಿದೆ.

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಂಡಳಿಯ ವಕೀಲ ದುಶ್ಯಂತ್ ದವೆ, “ಧಾರ್ಮಿಕ ಅಲ್ಪಸಂಖ್ಯಾತ  ಹಕ್ಕುಗಳನ್ನು ಈ ರೀತಿ ತುಳಿಯಬಹುದು ಎಂಬ ಭಾವನೆಯನ್ನು ನೀಡಬೇಡಿ” ಎಂದು ಕೋರಿದರು.

“ಈ ಮೈದಾನದಲ್ಲಿ ಬೇರೆ ಯಾವುದೇ ಸಮುದಾಯದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆದಿಲ್ಲ. ಇದನ್ನು ಕಾನೂನಿನ ಪ್ರಕಾರ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಇದ್ದಕ್ಕಿದ್ದಂತೆ ಇದು ವಿವಾದಿತ ಭೂಮಿ ಎಂದು ಪ್ರತಿಪಾದಿಸಲಾಗುತ್ತಿದೆ. ಗಣೇಶ ಚತುರ್ಥಿ ನಡೆಸಲು ಚಿಂತಿಸಲಾಗಿದೆ” ಎಂದು ವಕ್ಫ್‌ ತಿಳಿಸಿತು.

ಆದರೆ ಸರ್ಕಾರ ವಕೀಲರು ಎರಡು ದಿನ ಅವಕಾಶ ಕೋರಿದರು. ಈ ವೇಳೆ, ಮಂಡಳಿಯ ವಕೀಲರು, “ಬಾಬರಿ ಮಸೀದಿ ಪ್ರಕರಣದಲ್ಲಿ ಅಂದಿನ ಯುಪಿ ಸಿಎಂ ಕೂಡ ಭರವಸೆ ನೀಡಿದ್ದರು. ಅಲ್ಲಿ ಏನಾಯಿತು ಎಂದು ನಿಮಗೆ ತಿಳಿದಿದೆ” ಎಂದು 1992ರ ಮಸೀದಿ ಧ್ವಂಸವನ್ನು ಉಲ್ಲೇಖಿಸಿದರು.

ಇದಕ್ಕೂ ಮುನ್ನ ಮೈದಾನದಲ್ಲಿ ಇಂತಹ ಘಟನೆಗಳು ನಡೆದಿವೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಸರಕಾರಿ ವಕೀಲ ಮುಕುಲ್ ರೋಹಟಗಿ, ‘‘ಈಗ ಒಂದು ಕಾರ್ಯಕ್ರಮವನ್ನು ವಿರೋಧಿಸಲು ಅದು ಆಧಾರವಾಗುವುದಿಲ್ಲ. ಕಳೆದ 200 ವರ್ಷಗಳಿಂದ ಆಟದ ಮೈದಾನವಾಗಿ ಬಳಸಲಾಗುತ್ತಿತ್ತು. ಈ ಮೈದಾನ ಸರ್ಕಾರಕ್ಕೆ ಸೇರಿದೆ” ಎಂದರು.

“ದೆಹಲಿಯಲ್ಲಿ ದಸರಾ ವೇಳೆ ಪ್ರತಿಕೃತಿಗಳನ್ನು ಎಲ್ಲೆಂದರಲ್ಲಿ ದಹಿಸುತ್ತಾರೆ. ‘ಈ ಹಿಂದೂ ಹಬ್ಬವನ್ನು ಮಾಡಬೇಡಿ’ ಎಂದು ಜನರು ಹೇಳುತ್ತಾರೆಯೇ? ನಾವು ಸ್ವಲ್ಪ ವಿಶಾಲ ಮನೋಭಾವದಿಂದ ನೋಡಬೇಕು. ಗಣೇಶ ಚತುರ್ಥಿ ವೇಳೆ ಏನಾಗಲಿದೆ?” ಎಂದು ಪ್ರಶ್ನಿಸಿದರು.

ಆದರೆ ಮಂಡಳಿಯ ವಕೀಲ ದೇವ್, “ಈ ದೇಶದಲ್ಲಿ ಯಾವುದೇ ದೇವಾಲಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ” ಎಂದರು.

“ವಕ್ಫ್ ಕಾಯಿದೆ 1995 ಪ್ರಕಾರ ಸರ್ಕಾರಿ ಸಂಸ್ಥೆಗಳು ವಶಪಡಿಸಿಕೊಂಡಿರುವ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಬೇಕಾಗುತ್ತದೆ. ಈ ಆಸ್ತಿಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂಸ್ಥೆಯ ಒಡೆತನದ ಜಾಗದಲ್ಲಿ ಹಿಂದೂ ಹಬ್ಬವನ್ನು ಆಚರಿಸಲು ಯೋಚಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. “ಮುಂದಿನ ವರ್ಷ ಚುನಾವಣೆ ಇರುವುದರಿಂದ ಇದನ್ನು ಮಾಡಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಬಿಬಿಎಂಪಿ ಚುನಾವಣೆ 2023ಕ್ಕೆ ನಡೆಯಲಿದೆ” ಎಂದು ಬೋರ್ಡ್ ಗಮನ ಸೆಳೆಯಿತು.

ಮಂಡಳಿಯ ವಕೀಲರಾದ ಕಪಿಲ್ ಸಿಬಲ್, ಆಗಸ್ಟ್ 9 ರಂದು ದಾಖಲಾಗಿರುವ ಎಫ್‌ಐಆರ್‌ ಉಲ್ಲೇಖಿಸಿದರು. “ಮುಸ್ಲಿಂ ಮತ್ತು ಹಿಂದೂ ಸಮುದಾಯದ ನಡುವೆ ವಿವಾದವಿದೆ (ಮತ್ತು) ಈ ಜಮೀನು ಕಂದಾಯ ಇಲಾಖೆಗೆ ಸೇರಿದೆ ಎಂದು ದೂರು ದಾಖಲಾಗಿದೆ. ದೂರಿನಲ್ಲಿ ಬಾಬರಿ ಮಸೀದಿಯ ಬಗ್ಗೆ ಕೆಲವು ಉಲ್ಲೇಖಗಳನ್ನು ಮಾಡಿರುವುದು ತುಂಬಾ ಗೊಂದಲದ ಸಂಗತಿ” ಎಂದು ಅವರು ತಿಳಿಸಿದರು.

ಅಲ್ಲಿ ಉತ್ಸವ ಮಾಡಲು ಸರ್ಕಾರ ಅನುಮತಿ ನೀಡುವುದನ್ನು ಕೋರ್ಟ್ ಒಪ್ಪಲಿಲ್ಲ. ಕರ್ನಾಟಕವು ಇತ್ತೀಚಿನ ತಿಂಗಳುಗಳಲ್ಲಿ ಕೆಲವು ಕೋಮುಗಲಭೆಗಳನ್ನು ಕಂಡಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಒಂದಲ್ಲ ಒಂದು ಕೋಮುದ್ವೇಷ ಪ್ರಕರಣಗಳಿಗೆ ರಾಜ್ಯ ಸಾಕ್ಷಿಯಾಗುತ್ತಿದೆ.

ಇದನ್ನೂ ಓದಿರಿ: ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ!

ರಾಜ್ಯ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. “ಇದು ಯಾವುದೇ ಗಡಿರೇಖೆಗಳಿಲ್ಲದ ಬಯಲು ಭೂಮಿ. ನಾಳೆ ಮತ್ತು ಮರುದಿನ ಭೂಮಿಯನ್ನು ಬಳಸಲು ಸರ್ಕಾರಕ್ಕೆ ದಯವಿಟ್ಟು ಅನುಮತಿ ನೀಡಿ. ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ” ಎಂದು ವಾದಿಸಿದರು.

ವಕ್ಫ್ ಮಂಡಳಿಯು ಈ ವಿಷಯವನ್ನು ತುರ್ತಾಗಿ ನಿರ್ಧರಿಸಬೇಕು ಎಂದು ಕೋರಿತು. ದ್ವಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರು ಅಭಿಪ್ರಾಯ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಸಮಸ್ಯೆಯನ್ನು ಮುಖ್ಯ ನ್ಯಾಯಮೂರ್ತಿಯವರಿಗೆ ಕಳುಹಿಸಿದರು. ಸಿಜೆಐ ಯುಯು ಲಲಿತ್ ಅವರು ತ್ರಿಸದಸ್ಯ ಪೀಠದ ಮುಂದೆ ಪಟ್ಟಿ ಮಾಡಿದರು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎಎಸ್ ಓಕಾ ಮತ್ತು ಎಂಎಂ ಸುಂದ್ರೇಶ್ ಸಮಸ್ಯೆಯನ್ನು ಗಮನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...