ಗೌರಿ ದಾರಿ
ತಮಂಧದ ಘನವು
ಜಗವ ಆವರಿಸುವಾಗ
ಲೋಕದುರಿಗೆ ತೆತ್ತುಕೊಂಡು..
ಬೇಯುತ್ತಾ ಬೇಯುತ್ತಾ
ಬೆಳಕಾದವಳಲ್ಲವೇ ಗೌರಿ…?
ಬಹಿರಂಗದ ಬೆಂಕಿಯಲ್ಲಿ
ಅಂತರಂಗದ ಹಿಮಕರಗಿದಾಗ
ಉಕ್ಕಿಹರಿದ ಮಮಕಾರದಲ್ಲಿ
ರೂಪುಗೊಂಡ
ರೂಹಲ್ಲವೇ ಗೌರಿ…?
ಹೊರಗಿನ ಬಿರುಗಾಳಿಗೆ
ಒಳಗಿನ ಸುಳಿಗಾಳಿಗೆ..
ಒಡಲ ಸೊಡರು ಆರದಂತೆ
ದೀಕ್ಷೆತೊಟ್ಟ
ದೀವಟಿಗೆಯಲ್ಲವೇ ಗೌರಿ?
ಸಿದ್ಧತೆಗೆ ತಕ್ಕಂತೆ
ಸಿದ್ಧಾಂತ ಹೊಸೆಯದೇ..
ಬೀದಿಯ ಜೊತೆ
ಬೆಸಗೊಂಡು
ಬೀದಿದೀಪವಾಗಿದ್ದಲ್ಲವೇ ಗೌರಿ?
ನಾನೆಂಬ ನಾಗರಕೆ
ಒಳದನಿಯ
ಪಿಸುಪುಂಗಿಯ ಕಾವಲಿಟ್ಟು…
ನಾನಳಿದು ತಾನುರಿದು
ನಮ್ಮೊಳಗೇ ನಾವಾಗಿ
ಸಿಕ್ಕವಳಲ್ಲವೇ ಗೌರಿ…?
ಕೆಂಪೊಳಗಿನ ನೀಲಿಯನ್ನು
ನೀಲಿಯೊಳಗಿನ ಕೆಂಪನ್ನು..
ಕಪ್ಪೊಳಗಿನ ಕೆಚ್ಚನ್ನು
ಬಿಳಿಯೊಳಗಿನ ಬಯಲನ್ನು..
ಅರಿತು ಕಲಿತು ಕಲೆತು
ಕಾಮನಬಿಲ್ಲಾದವಳಲ್ಲವೇ ಗೌರಿ…?
-ಶಿವಸುಂದರ್
——————————-
ಮೊನ್ನೆ ಮೊನ್ನೆಯಪ್ಪೇ
ನಮ್ಮ ಜೊತೆಯಿದ್ದ ಸಣಕಲು
ಗಟ್ಟಿಗಿತ್ತಿಯೊಬ್ಬಳನ್ನು
ಆಕೆ
ಬಡವರ, ಆದಿವಾಸಿಗಳ
ಅಲ್ಪಸಂಖ್ಯಾತರ, ಹಿಂದುಳಿದವರ
ದಲಿತರ ಪರವಾಗಿ ಮಾತನಾಡುತ್ತಾಳೆ
ಎನ್ನುವ ಕಾರಣಕ್ಕಾಗಿ ಕೊಲ್ಲಲಾಯಿತು
ಗುಂಡು ಹೊಡೆದು.
ಕೊಲೆಗಾರ ಅರೆಸ್ಟ್ ಆದಾಗ
ಅವನ ಮೋಬೈಲ್ ನಲ್ಲಿ ಸಿಕ್ಕವು
ಆಕೆಯ ಮೂರು ಸೆಲ್ಫಿಗಳು.
ಒಂದರಲ್ಲಿ ಆಕೆ,
ಬಡವರೊಂದಿಗೆ ಧರಣಿ ಕೂತಿದ್ದಳು
ಮನುಷ್ಯರ ಆಹಾರದ ಹಕ್ಕಿಗಾಗಿ,
ಇನ್ನೊಂದರಲ್ಲಿ, ಸ್ವಚ್ಛ ಮಾಡುತ್ತಿದ್ದಳು
ಬುಡನ್ ಸೂಫಿಯ ಹಾದಿಯಲ್ಲಿ ಹಾಕಲಾಗಿದ್ದ
ಕಲ್ಲು ಮುಳ್ಳುಗಳನ್ನು ಕಿತ್ತು,
ಮೂರನೇಯದರಲ್ಲಿ
ಟಾರ್ಚ್ ಹಿಡಿದುಕೊಂಡು ನಿಂತಿದ್ದಳು
ಮುಚ್ಚಿದ ದೇವರ ಮನೆಯ ಬಾಗಿಲಲ್ಲಿ,
ಹಟಮಾರಿ ಹೆಂಗಸು
ಸುಮ್ಮನಿರಬೇಕಿತ್ತು ಮಮ್ಮಲ ಮರುಗಿದರು
ಕೆಲವು ಸಂತ ಗಂಡಸರು,
ಆದರೆ ಹೆಣ್ಣು ಮನಸ್ಸಿಗೆ
ಇದೆಲ್ಲ ಎಷ್ಟು ಅಸಹನೀಯ ಎನ್ನುವುದಕ್ಕೆ
ಸತ್ಯ ಪ್ರಮಾಣದಂತಿವೆ
ಅವಳ ಉದ್ದಿಗ್ನ ಸಿಗರೇಟಿನ
ಅಶಾಂತ ಬೂದಿಯಲ್ಲಿ
ಇನ್ನೂ ಉರಿಯುತ್ತಿರುವ, ಆರುತ್ತಿರುವ
ಸ್ಪಷ್ಟ, ಅಸ್ಪಷ್ಟ ದನಿಗಳು.
-ಚಿದಂಬರ ನರೇಂದ್ರ
————————————–
ಗೌರಿ ಎಂಬ ಬೆಳಕು
ಆಗಾಗ ಅಂದುಕೊಳ್ಳುತ್ತೇನೆ
“ನಾನು ಮೊದಲು ಹೀಗಿರಲಿಲ್ಲ”
ಭಯವಿತ್ತು, ಭವಿಷ್ಯದ ಅಳುಕಿತ್ತು.
“ಜೋಕೆ, ಪ್ರಭುತ್ವ ನಿನ್ನ ಮುಕ್ಕಿ ತಿನ್ನುತ್ತೆ
ನೀನು ಬೆಳೆಯದಂತೆ ತುಳಿತಾರೆ,
ಜೈಲಿಗೆ ಹಾಕಿಸ್ತಾರೆ, ಕೊಲ್ತಾರೆ,
ಕಿರುಕುಳ ಕೊಡ್ತಾರೆ..ʼ
ತರಹೇವಾರಿ ಜನ ಹೇಳಿದ್ದು ಬುದ್ಧಿಮಾತೋ
ಬೆದರಿಸಿ ಬಾಯಿ ಮುಚ್ಚಿಸುವ ಸಂಚೋ-
ಎರಡೂ ಹೌದು.
ನಾನಂತೂ ಬಾಯಿ ತೆರೆಯದೆ ಇದ್ದೆ-
“ಮೊದಲು ನಾನು ಹೀಗಿರಲಿಲ್ಲ”
“ನೀನು ಪತ್ರಕರ್ತ
ಭಟ್ಟಂಗಿಗಳು, ಭಕ್ತರೇ ತುಂಬಿರುವ ವೃತ್ತಿಯಲ್ಲಿ
ನೀನು ಶೋಷಿತರ ಹುಡುಗ.
ದಲಿತ, ಮುಸ್ಲಿಂ, ಒಬಿಸಿ, ಆದಿವಾಸಿ ಎನ್ನಬೇಡ,
ಸಂಘಿಗಳ ಟೀಕಿಸಬೇಡ,
ನಿನ್ನ ಮೇಲೆ ಕಣ್ಣಿಡ್ತಾರೆ,
ತಳಿಯುತ್ತಾರೆ”
-ಅಬ್ಬಾ, ಎಷ್ಟೊಂದು ಮಾತು!
ಒಡಲಕಿಚ್ಚು ದಹಿಸುವಾಗ
ಹೊಟ್ಟೆಪಾಡಿಗೆ ಮುಚ್ಚಿಟ್ಟುಕೊಂಡೆ.
ಹೀಗೊಂದು ದಿನ ಗೌರಿಯಮ್ಮ ಸಿಕ್ಕಳು
ಅವಳಿಗೆ ತಾಕಿದ ಗುಂಡು
ನನ್ನೆದೆಯ ಹೊಕ್ಕು ನಾನು ಸಾಯಲಿಲ್ಲ
ಹುಟ್ಟಿದೆ, ಸಿಡಿದೆ,
ಚಿಮ್ಮಿದ ರಕ್ತ ಶಾಹಿಯಾಗಿ ಹೊಮ್ಮಿತ್ತು
ಗಟಾರದ ಕೊಚ್ಚೆ ನೀರ
ಭಾರೀ ಮಳೆಯೊಂದು ಕೊಚ್ಚಿತ್ತು
‘ನಾನುಗೌರಿ’ಯಾದೆ.
ಭವಿಷ್ಯದ ಭಯವೇ? ಯಾರ ಭವಿಷ್ಯ?
ದೇಶವಿರದೆ, ಪ್ರೀತಿಯಿರದೆ ಭವಿಷ್ಯವುಂಟೆ?
ಇರದುದ ಉಳಿಸಲು, ಆತಂಕ ಕರಗಿ
ಸತ್ಯದ ದಾರಿಯೊಂದು ತೆರೆದಿತ್ತು.
ಅರೆಹೊಟ್ಟೆ ಅಳುಕಲಿಲ್ಲ
ಅದಕೇಕೆ ಅಂಜಲಿ?
ನುಡಿ ಸತ್ಯ ನುಡಿ
ಹೊರಡು ನಿನ್ನ ಹಾದಿ ಇದುವೆ.
ಗೌರಿ ಎಂಬ ಬೆಳಕು ತೆರೆದಿತ್ತು
‘ನಾನುಗೌರಿ’ಯಾದಾಗ
ಎಷ್ಟೊಂದು ಧೈರ್ಯ!
ನಾನು ಏನೆಂದು ತಿಳಿದಾಯ್ತು.
ಬೆದರಿಸಿದವರು ಬೆಚ್ಚಿದರು
ಚುಚ್ಚಿದವರು ಕೊಚ್ಚಿ ಹೋದರು
ಗೌರಿ ಎಂದರೆ ಪ್ರೇಮದ ಸುಡುಸುಡು ಪಂಜು
ಗೌರಿ ಎಂದರೆ ಪ್ರಭುತ್ವಕ್ಕೆ ಸಿಡಿಮದ್ದು
ಗೌರಿ ಎಂದರೆ ನಿರ್ಭೀತ ಮಮತೆ
ಗೌರಿ ಸಾಯಲಿಲ್ಲ
ಕೊಂದವರೆದುರು ಹುಟ್ಟಿದಳು
ನಮ್ಮೆಲ್ಲರೆದೆರಲಿ.
ಆಲವ ಕಡಿಯ ಬಂದವರೆದುರು
ಸಹಸ್ರಾರು ಬೇರು
ಕಾಂಡ ಲಯವಾಗಿ ಹಬ್ಬಿದ ಬಿಳಲ ಕಂಡು
ಕೊಡಲಿಗಳಿಗೆ ಕಂಪನ.
‘ನಾನುಗೌರಿ’.
ಬೆಳಕು ತೆರೆದಾಗ
ಭಯವೇಕೆ?
‘ನಾವೆಲ್ಲ ಗೌರಿ’
ನೊಂದುಬೆಂದು ತಂಗಾಳಿ.
– ಯತಿರಾಜ್ ಬ್ಯಾಲಹಳ್ಳಿ