Homeಕರ್ನಾಟಕಗಾಂಧೀಜಿಯವರನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

ಗಾಂಧೀಜಿಯವರನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಮಂಗಳವಾರ ನಗರದ ಪುರಭವನ ಸಭಾಂಗಣದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಅಗಲಿದ ಆರು ವರ್ಷಗಳ ನೆನಪಿನಲ್ಲಿ ”ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ” ಕುರಿತು ಗೌರಿ ಸ್ಮಾರಕ ಟ್ರಸ್ಟ್ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದ್ರರಾಮಯ್ಯ ಸೇರಿದಂತೆ ದೇಶದ ನಾನಾಭಾಗದ ಹೋರಾಟಗಾರರು ಭಾಗಿಯಾಗಿದ್ದರು.

ಕಾಯಕ್ರಮದಲ್ಲಿ ಮಾತನಾಡಿದ ಮಣಿಪುರದ ಸಾಮಾಜಿಕ ಹೋರಾಟಗಾರ್ತಿ ಏಂಜೆಲಾ ಅಂಗದ್ ಅವರು, ”ನಾನು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವಳು. ನಾನು ದನ ತಿನ್ನುತ್ತೇನೆ, ಹಂದಿ ತಿನ್ನುತ್ತೇನೆ. ನಾನು ನನ್ನ ಜಾತಿ, ನನ್ನ ಧರ್ಮವನ್ನು ಉಡುಗೆಯ ಮೂಲಕ ತೋರಿಸುವುದಿಲ್ಲ. ನಾನು ನನ್ನಿಷ್ಟದ್ದನ್ನು ತಿನ್ನುತ್ತೇನೆ, ನನ್ನಿಷ್ಟದ ಬಟ್ಟೆ ತೊಡುತ್ತೇನೆ. ನನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗದು” ಎಂದು ಹೇಳಿದ್ದಾರೆ.

”ಮುಸ್ಲಿಮ್‌ ಸಹೋದರ, ಸಹೋದರಿಯರ ಮೇಲೆ ದಮನ ನಡೆದಾಗ ಸುಮ್ಮನೆ ನೋಡಲಾಗುವುದಿಲ್ಲ. ಈಶಾನ್ಯ ಭಾರತದಲ್ಲಿ ಶೋಷಿತರನ್ನು ಮತ್ತಷ್ಟು ದಮನ ಮಾಡಲಾಗುತ್ತಿದೆ. ಅಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ತಮ್ಮ ತನವನ್ನು ಕಳೆದುಕೊಂಡಿರುವ ಜನರು ಬಿಜೆಪಿಯನ್ನು ವಿರೋಧಿಸಿದಾಗಲೂ, ಬಿಜೆಪಿಯೇ ಜನರನ್ನು ಆಳುತ್ತಿದ್ದಾರೆ” ಎಂದರು.

”ಪ್ರಧಾನಮಂತ್ರಿ ನಮ್ಮ ಸಮುದಾಯಗಳ ಕೆಲವು ಸಂಕೇತಗಳನ್ನು ತಮ್ಮ‌ಉಡುಗೆಯಲ್ಲಿ ಬಳಸುತ್ತಾರೆ. ಕತ್ತಿಗೆ, ತಲೆಗೆ ನಮ್ಮ ಬಟ್ಟೆ ಕಟ್ಟಿಕೊಂಡೇ ನಮ್ಮ ಮೇಲಿನ ದಮನದ ನೀತಿ ಮುಂದುವರೆಸುತ್ತಿದ್ದಾರೆ. ಕೆಲವು ನಕಲಿ ಆದರ್ಶಗಳನ್ನು ತೋರಿಸಿಕೊಂಡು ನಮ್ಮನ್ನು ತುಳಿಯುತ್ತಿದ್ದಾರೆ” ಎಂದು ಕಿಡಿಕಾರಿದರು.

”ದೇಶದಲ್ಲಿ ಮಾನವೀಯತೆಯನ್ನು ಒಡೆದು ಹಾಕಲಾಗುತ್ತಿರುವಾಗ, ಅದನ್ನು ಮರು ಜೋಡಿಸುವುದು ನಮ್ಮ ಕೆಲಸವಾಗುತ್ತದೆ. ನಮ್ಮ ಆತ್ಮಸಾಕ್ಷಿಗಿಂತ ಕರುಣೆ ಮತ್ತು ಸಹನೆಗಿಂತ ದೊಡ್ಡ ಗುರುವಿರಲು ಸಾಧ್ಯವಿಲ್ಲ. ಖಾಸಗಿ ಬಂಡವಾಳ, ಭ್ರಷ್ಟಾಚಾರಗಳೇ ಆಡಳಿತವಾಗಿರುವಾಗ ಈ ಮಾರ್ಗದರ್ಶಿ ಸೂತ್ರಗಳು ನಮ್ಮನ್ನು ಮುನ್ನಡೆಸಬೇಕು” ಎಂದರು.

”ಇವತ್ತಿನ ಭಾರತ ನಮ್ಮ ಹಣೆಬರಹವಲ್ಲ. ನಾವು ನಮ್ಮ ಹೆಗಲುಗಳನ್ನು ನೋಡಿಕೊಳ್ಳಬೇಕು,. ನಾವು ಹೇಗೆ ಎಲ್ಲರೂ ಕೂಡಿಕೊಂಡಿದ್ದೆವೆಂಬುದನ್ನು ನಮ್ಮ ಆಹಾರಗಳನ್ನು ಹಂಚಿಕೊಂಡು ತಿಂದು ಬದುಕಿದ್ದೆವುದು ಎಂಬುದನ್ನು ನೆನಪಿಸಿಕೊಳ್ಳಬೇಕು. ರೈತರ ದೆಹಲಿಯ ಗಡಿಗಳಲ್ಲಿ ಸಾಧಿಸಿದ್ದನ್ನು, ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ತಮ್ಮತನವನ್ನು ಉಳಿಸಿಕೊಂಡಿರುವುದನ್ನು ನೋಡಬೇಕು. ಕಾಶ್ಮೀರದ ಜನರಿಂದ ಧೈರ್ಯವನ್ನು ಕಲಿಯಬೇಕು. ನದಿಯ ಹರಿಯುವಿಕೆಯನ್ನು ನೆನಪಿಟ್ಟುಕೊಳ್ಳಬೇಕು, ಅದೇ ಸಮಯದಲ್ಲಿ ನಾವು ಸೇರಬೇಕಿರುವ ಮಹಾಸಾಗರದ ಕಾಣ್ಕೆಯನ್ನೂ ಕಾಪಾಡಿಕೊಳ್ಳಬೇಕು” ಎಂದು ಕರೆಕೊಟ್ಟರು.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಕರಾಳ ದಿನಕ್ಕೆ 6 ವರ್ಷ: ಹೋರಾಟಗಾರರು, ಒಡನಾಡಿಗಳಿಂದ ನುಡಿನಮನ

ನಟ ಪ್ರಕಾಶ್ ರಾಜ್ ಮಾತನಾಡಿ, ”ನಾನು ಬರುವುದಕ್ಕೂ ಮುನ್ನ ಒಂದು ಮಾಧ್ಯಮದವರು ನನ್ನನ್ನ ಸಂದರ್ಶನಕ್ಕೆ ಕರೆದಿದ್ದರು. ಅಲ್ಲಿ ಅದಾಲತ್ ನಡೆಸುತ್ತೇವೆ ಎಂದು ಹೇಳಿದ್ದರು. ಅಲ್ಲಿ ಸುಮಾರು 30 ಜನರಿದ್ದರು. ಅವರೆಲ್ಲರೂ ಕಾವಿ ಧರಿಸಿದ್ದರು. ಅವರಲ್ಲೊಬ್ಬ ನೀವು ಕಾಂಗ್ರೆಸ್ಸಾ? ಎಂದು ಕೇಳಿದ. ನಾನು ನಿಮ್ಮ ಪಕ್ಷದ ವಿರೋಧಿ ಎಂದೆ. ನಾವು ಒಡೆದು ಹಾಳುವವರನ್ನು ವಿರೋಧಿಸಲೇಬೇಕು” ಎಂದು ಹೇಳಿದ್ದಾರೆ.

”ನೀವು ಸನಾತನಕ್ಕೆ ಹುಟ್ಟಿದೀರಾ? ಎಂದು ಕೇಳಿದರು. ಇಲ್ಲಪಾ ನಾನು ನಮ್ಮ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ ಎಂದು ಉತ್ತರ ಕೊಟ್ಟೆ” ಎಂದರು.

”ನಾವು ಗೌರಿಯನ್ನು ಹೂಳಲಿಲ್ಲ, ಬಿತ್ತಿದ್ದೇವೆ. ಒಂದು ಧ್ವನಿಯನ್ನ ಅಡಗಿಸಿದ್ದಕ್ಕೆ, ನೂರಾರು ಗೌರಿಯರು ಹುಟ್ಟಿದ್ದೇವೆ. ದೇಶಕ್ಕೆ ಗಾಯವಾದಾಗ, ನಾವು ಮೌನವಾಗಿದ್ದರೆ, ಅದು ಇಡೀ ದೇಶವನ್ನೇ ಸುಡುತ್ತದೆ. ಹಾಗಾಗಿ ನಾವು ಧ್ವನಿ ಎತ್ತಬೇಕು, ಪ್ರಶ್ನೆ ಮಾಡಬೇಕು” ಎಂದರು.

”ಪ್ರಶ್ನಿಸಿದರೆ ಕೊಲ್ಲುತ್ತೇವೆ ಎನ್ನುತ್ತಾರೆ. ಕೈಯಲ್ಲಿ ಆಯುಧ ಹಿಡಿದು ಬರುತ್ತರೆ. ಆಯುಧ ಹಿಡಿದು ಬರುವವರು ಧೀರರಲ್ಲ, ಹೇಡಿಗಳು. ನಾನು ತಪ್ಪನ್ನ ಪ್ರಶ್ನಿಸಲೇಬೇಕಿದೆ. ಆಗ ಮಾತ್ರ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ. ನಾನು ಪ್ರಶ್ನೆ ಕೇಳುತ್ತಲೇ ಇರಬೇಕು ಎಂದರು.

ಖ್ಯಾತ ಪತ್ರಕರ್ತೆ ಸುಪ್ರಿಯಾ ಶ್ರೀನಟೆ ಅವರು ಮಾತನಾಡಿ, ”ಇಂದಿನ ಸಂದರ್ಭದಲ್ಲಿ ಭಾರತ ಎಂದರೆ ಯಾವುದು? ಕೆಲವರಿಗೆ ಇಂಡಿಯಾ ಎಂಬ ಪದವನ್ನೇ ಕೇಳಲು ಸಾಧ್ಯವಿಲ್ಲ. ಇಂಡಿಯಾ ಎಂಬ ಹೆಸರು ಸಂವಿಧಾನದಿಂದ ದೊರಕಿದ್ದು, ಇದನ್ನು ಇಂದು ‘ಭಾರತ್’ ಎಂದು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಂದಿನ ಜಿ20 ಸಮಾವೇಶದಲ್ಲೂ ದ್ರೌಪದಿ ಮುರ್ಮು ಅವರು ಅದನ್ನೇ ಪುನರುಚ್ಛರಿಸಿದ್ದಾರೆ. ಇದನ್ನು ಒಪ್ಪಲಾಗದು” ಎಂದು ಅವರು ಹೇಳಿದರು.

”ವಿ ದ ಪೀಪಲ್‌ ಆಫ್‌ ಇಂಡಿಯಾ, ಹಮ್‌ ಭಾರತ್‌ ಕೆ ಲೋಗ್‌ ಎಂಬುದು ಸಂವಿಧಾನದ ಕೊಡುಗೆ. ಇದನ್ನು ಒಬ್ಬ ಮನುಷ್ಯ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಾವು ತೆಗೆದುಹಾಕಲಾಗದು. ಒಬ್ಬ ವ್ಯಕ್ತಿ ತನ್ನ ಅಭಿಪ್ರಾಯಕ್ಕೆ ವಿರುದ್ಧ ಇರುವವರನ್ನು ಸಹಿಸುವುದಿಲ್ಲ ಎಂದರೆ, ಆತನಿಗೆ ಈ ದೇಶದ ಜೊತಗೆ ಏನೋ ಸಮಸ್ಯೆ ಇದೆ ಎಂಧರ್ಥ. ನಾನು ನನ್ನ ತಾಯಿಯನ್ನು ಅಮ್ಮ ಎಂದು ಕರೆಯುತ್ತೇನೆ, ಕೆಲವರು ಮಾಯಿ ಎನ್ನಬಹುದು ಅಥವಾ ಬೇರೇನೋ ಕರೆಯಬಹುದು. ಅದನ್ನು ಬದಲಿಸುವ ಉದ್ಧಟತನ ಯಾರು ತೋರಿಸುತ್ತಾರೆ” ಎಂದು ಇಂಡಿಯಾ ಎಂಬ ಹೆಸರನ್ನು ಭಾರತ್ ಎಂದು ಬದಲಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಕಿಡಿಕಾರಿದರು.

”ಭಾರತ್ ಎಂಬುದು ಸಾವಿರಾರು ವರ್ಷಗಳ ಇತಿಹಾಸವಿರುವ ಉಜ್ವಲವಾದ ದೇಶ. ಇಲ್ಲಿ ನದಿಗಳಿವೆ, ನಾಲೆಗಳಿವೆ, ಜನರಿದ್ದಾರೆ, ರಾಜ್ಯಗಳಿವೆ. ಇವೆಲ್ಲವೂ ಸೇರಿ ಭಾರತ. ಈ ದೇಶ ಕಾರ್ಮಿಕರಿಗೆ ಸೇರಿದ್ದು, ರೈತರಿಗೆ ಸೇರಿದ್ದು, ವಿದ್ಯಾರ್ಥಿಗಳಿಗೆ ಸೇರಿದ್ದು, ಮಹಿಳೆಯರಿಗೆ ಸೇರಿದ್ದು. ಒಬ್ಬ ವ್ಯಕ್ತಿ ಅದನ್ನು ತನ್ನಿಷ್ಟದಂತೆ ನಡೆಸಲು ಸಾಧ್ಯವಿಲ್ಲ” ಎಂದರು.

”ನಾನು ಈ ದೇಶದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನವಿರುವ, ಹಿಂದಿಯ ಅಡಿಯಾಳಾಗಬೇಕಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುತ್ತೇನೆ. ಮಣಿಪುರದ ಮಹಿಳೆಯರು ಬೆತ್ತಲೆ ಮೆರವಣಿಗೆಯಂತ ಕೃತ್ಯದ ಬಗ್ಗೆ ಕೇವಲ 26 ಸೆಕೆಂಡ್‌ ಮಾತಾಡುವ ಆಳುವವರಿಲ್ಲದ ದೇಶವನ್ನು ಬಯಸುತ್ತೇನೆ. ಒಳ್ಳೆಯ ಆಡಳಿತವಿರುವ, ದೇಶದ ಬಗ್ಗೆ ಚಿಂತಿಸುವ ನಾಯಕರಿರುವ ದೇಶವನ್ನು ಊಹಿಸಿಕೊಳ್ಳುತ್ತೇನೆ. ನಾನು ನಮ್ಮ (ಕರ್ನಾಟಕ) ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಅವರು ಮಹಿಳಾ ಪರವಾದ ಯೋಜನೆಗಳನ್ನು ನುಡಿದಂತೆ ಜಾರಿಗೊಳಿಸಿದ್ದಾರೆ. ಅವರು ದೇಶವನ್ನು ಒಡೆಯುವ ಮಾತಾಡಲಿಲ್ಲ, ದ್ವೇಷದ ಭಾಷಣ ಮಾಡಲಿಲ್ಲ” ಎಂದು ತಿಳಿಸಿದರು.

”ದೇಶದ ಹೆಸರನ್ನು ಬದಲಿಸಲು ಯತ್ನಿಸುತ್ತಿರುವವರ ಪೂರ್ವಜರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ದೇಶ ಕಟ್ಟಲು ಶ್ರಮಿಸಲಿಲ್ಲ. ಅವರಿಗೆ ಭಾರತವೇನು ಗೊತ್ತಿದೆ, ಇಂಡಿಯಾ ಏನು ಗೊತ್ತಿದೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

”ನಾನು ನೀವು ಎಲ್ಲರೂ ಸೇರಿ ನಮ್ಮ ಪೂರ್ವಜರು ಕನಸು ಕಂಡ ದೇಶ ಕಟ್ಟಲು ಪ್ರಯತ್ನಿಸಬೇಕು. ಭರವಸೆ ತರಬೇಕು. ನಾವು ಹಲವು ಧರ್ಮಗಳನ್ನು ಪಾಲಿಸುತ್ತೇವೆ. ಆದರೆ ಅದಕ್ಕಿಂತ ಪವಿತ್ರವಾದದ್ದು, ಸಂವಿಧಾನ. ಯಾವುದೇ ಭೇಧಭಾವವಿಲ್ಲದೆ, ರಕ್ಷಣೆಯನ್ನು, ಘನತೆಯನ್ನು, ಸ್ವಾತಂತ್ರ್ಯವನ್ನು, ಓಟು ಮಾಡುವ ಅಧಿಕಾರವನ್ನೂ ಖಾತ್ರಿಪಡಿಸುವ ಏಕೈಕ ಗ್ರಂಥ ಸಂವಿಧಾನ. ಅಂತಹ ಹಕ್ಕುಗಳ ರಕ್ಷಣೆಗಾಗಿ ನಾವು ಹೋರಾಟ ಮಾಡೋಣ” ಎಂದು ಕರೆಕೊಟ್ಟರು.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯದ ಬೇಡಿಕೆ

ಕೇರಳದ ಮಾಜಿ ಸಚಿವೆ, ಶಾಸಕಿ ಶೈಲಜಾ ಟೀಚರ್ ಮಾತನಾಡಿ, ”ಅಸಹಿಷ್ಣುತೆ ಈ ದೇಶವನ್ನು ಆಳುತ್ತಿದೆ. ಬಾಬಾ ಸಾಹೇಬರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಇಪ್ಪತ್ತು ವರ್ಷಗಳ ನಂತರವೂ ಕಾಪಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದು ಹೇಳಿದರು.

”ಕರ್ನಾಟಕದ ಮುಖ್ಯಮಂತ್ರಿ ಇಲ್ಲಿದ್ದಾರೆ. ಅವರು ಕೋಮುವಾದಿಗಳನ್ನು ಸೋಲಿಸಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದಗಳು. ಕೋಮುವಾದಿ ಶಕ್ತಿಗಳನ್ನು ಕರ್ನಾಟಕದ ಜನತೆ ಸೋಲಿಸಿದ್ದಾರೆ” ಎಂದರು.

”ಜಾತ್ಯಾತೀತತೆ ನಮ್ಮ ಸಂವಿಧಾನದ ಗುಣವನ್ನು, ವಿವಿಧೆತೆಯಲ್ಲಿ ಏಕತೆ ನಮ್ಮ ವೇದ ವಾಕ್ಯ. ಸಂಘಪರಿವಾರ ಇದನ್ನು ಒಪ್ಪುವುದಿಲ್ಲ. ಸನಾತನ ಧರ್ಮ ಎಂದರೇನು? ಅದನ್ನು ಖಂಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಸಂಘಪರಿವಾರದ ಸನಾತನ ಧರ್ಮವೇ ಬೇರೆ. ದೇವರೇ ಚಾತುರ್ವರ್ಣ ರಚಿಸಿದ್ದಾನೆ ಎನ್ನುತ್ತಾರೆ. ಬ್ರಾಹ್ಮಣರು ತಲೆಯಲ್ಲಿ ಹುಟ್ಟಿದವರು, ವಿದ್ಯೆ ಅವರಿಗೆ ಎನ್ನುವುದನ್ನು ನಾವು ಒಪ್ಪಲು ಸಾಧ್ಯವೇ? ಶೂದ್ರರು ಕಾಲಿನಲ್ಲಿ ಹುಟ್ಟಿದ್ದು ಎನ್ನುವುದನ್ನು ಒಪ್ಪಲು ಸಾಧ್ಯವೇ? ಇಲ್ಲ. ಅದು ಸಾಧ್ಯವಿಲ್ಲ” ಎಂದು ಹೇಳಿದರು.

”ಪ್ರಜಾಪ್ರಭುತ್ವವನ್ನು ನಾವು ಉಳಿಸಬೇಕಾಗಿದೆ. ಹಿಂದುತ್ವ ಪರಿಕಲ್ಪನೆ ಅಂದರೆ ಒಡೆದು ಆಳುವ ಪರಿಕಲ್ಪನೆ. ಫ್ಯಾಸಿಸಂ ನಮ್ಮನ್ನು ಆಳುತ್ತಿದೆ. ಜನರನ್ನು ನಿಯಂತ್ರಿಸುತ್ತದೆ” ಎಂದರು.

”ಗಾಂಧೀಜಿ ಯಾರು? ಸಾವರ್ಕರ್ ಯಾರು? ಎಂಬುದು ನಮಗೆ ತಿಳಿದಿದೆ. ಅವರು ಸನಾತನ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಇಂದು ಏನಾಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಅವಿಶ್ವಾಸ ಗೊತ್ತುವಳಿಯನ್ನು ವಿರೋಧ ಪಕ್ಷಗಳು ಮಂಡಿಸಿದಾಗ ಮಣಿಪುರದ ಬಗ್ಗೆ ಕೆಲವೇ ಕೆಲವು ನಿಮಿಷಗಳು ಮೋದಿ ಮಾತನಾಡಿದರು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

”ಕೊರಾನಾ ಸಮಯದಲ್ಲಿ ಗೋವಿನ ಗಂಜಲ ಸವರಿಕೊಳ್ಳಿ ಎಂದರು. ದೇಶ ಈ ದಿಕ್ಕಿನಲ್ಲಿ ಸಾಗುತ್ತಿದೆ. ದೇಶವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು, ಸೆಕ್ಯುಲರಿಸಂ ಉಳಿಸಲು ನಾವು ಗೌರಿ ಹೆಸರಲ್ಲಿ ಮುಂದಡಿ ಇಡಬೇಕಾಗಿದೆ” ಎಂದರು.

ರೈತ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ”ದೇಶದಲ್ಲಿ ಹಿಂಸೆಯ ವಾತಾವರಣ ರೂಪುಗೊಂಡಿದೆ. ಗೌರಿ ಲಂಕೇಶ್‌ ಕೂಡಾ ಇದಕ್ಕೆ ಬಲಿಯಾದರು. ಈ ರೀತಿಯ ಕೃತ್ಯಗಳು ಹಲವು ವರ್ಷಗಳಿಂದಲೇ ನಡೆಯುತ್ತಿವೆ. 2015ರಲ್ಲಿ ಉತ್ತರ ಪ್ರದೇಶದ ಮುಜಫರ್‌ ನಗರದಲ್ಲಿ ಗಲಭೆಯಾಯಿತು. 2017ರಲ್ಲಿ ಗೌರಿ ಬಲಿಯಾದರು. ಇದು ಮುಂದುವರೆದಿದೆ” ಎಂದು ಹೇಳಿದರು.

”ಕೆಲವು ದಿನಗಳ ಹಿಂದೆ ಕಬ್ಬು ಬೆಳೆವ ರೈತರಿಂದ ದಾಳಿ ಮಾಡಿಸಿದರು. ಕರ್ನಾಟಕದಲ್ಲೂ ಇದನ್ನೇ ಮಾಡಲು ಪ್ರಯತ್ನ ಮಾಡಿದರು. ಇಲ್ಲಿ ರಾಮನ ಹೆಸರು ನಡೆಯದಿದ್ದಾಗ ಹನುಮಂತನ ಹೆಸರು ಹೇಳಿದರು. ಆದರೆ, ಅದೂ ಕೆಲಸ ಮಾಡಲಿಲ್ಲ” ಎಂದು ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಹರಿಹಾಯ್ದರು.

”ನಾಗಪುರ ನಿರ್ಧಾರ ಮಾಡುತ್ತದೆ – ಯಾವ ದೇವರು ಯಾವತ್ತು ಎಲ್ಲಿಗೆ ಹೋಗಬೇಕು. ಯಾರ ಪಾಲಿನ ಊಟ ಎಲ್ಲಿ ಸಿಗುತ್ತದೆ ಎಂದು ಅವರು ಹೇಳುತ್ತಾರೆ. ಇಂದು ನಾನು ಈ ಮಾತಾಡಿದ್ದಕ್ಕೆ ಅವರ ಬೆಂಬಲಿಗರು ನನ್ನ ವಿರುದ್ಧವೂ ಮಾತನಾಡುತ್ತಾರೆ” ಎಂದರು.

”ನಾವೂ ಹಿಂದುಗಳೇ, ಅವರಿಗಿಂತಲೂ ಉತ್ತಮ ಹಿಂದುಗಳು. ನಮ್ಮ ಧರ್ಮ ಪಾಲಿಸಲು ನಮಗೆ ಸಂವಿಧಾನ ಅವಕಾಶ ನೀಡಿದೆ. ನಾವು ಹಿಂದೂ ಎಂದು ಹೇಳಿಕೊಳ್ಳಲು ನಮಗೇನೂ ಭಯವಿಲ್ಲ. ಆದರೆ, ನಾವು ಭಾರತೀಯ ಹಿಂದೂಗಳೂ, ಭಾರತೀಯ ಮುಸಲ್ಮಾನರೂ ಆಗಿದ್ದೇವೆ. ನಾಗಪುರದವರಿಗೆ ಹದರಬೇಕಾದ ಅಗತ್ಯವಿಲ್ಲ” ಎಂದು ಗುಡುಗಿದರು.

”ಕರ್ನಾಟಕದ ಜನರು ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದೀರಿ, ಅಭಿನಂದನೆಗಳು. ಈಗ ಬೇರೆ ರಾಜ್ಯಗಳಲ್ಲೂ ಇದೇ ಪುನರಾವರ್ತನೆಯಾಗಬೇಕು. ನಮ್ಮನ್ನು ಆಳುತ್ತಿರುವವರು ಹೊರದೇಶಗಳಲ್ಲಿ ಗಾಂಧಿಯ ಹೆಸರು ಹೇಳಿತ್ತಾರೆ. ಆದರೆ, ಅವರನ್ನು ಕೊಂದವರು ಯಾರು? ಗೌರಿಯನ್ನು ಹತ್ಯೆ ಮಾಡಿದವರು ಯಾರು? ದೆಹಲಿಯಲ್ಲಿ‌ 770 ರೈತರು ಸತ್ತಾಗ ಆಧಿಕಾರ ಯಾರದಿತ್ತು. ರೈತರನ್ನು 13 ತಿಂಗಳು ಬೀದಿಯಲ್ಲಿ ಇಟ್ಟವರು ಯಾರು? ಇದೆಲ್ಲವನ್ನೂ ಮಾಡಿದ್ದು ಯಾರೆಂದು ಆಳುವವರು ಹೇಳಬೇಕು” ಎಂದರು.

”ಸಂಘರ್ಷ ಇನ್ನೂ ಜಾರಿಯಲ್ಲಿದೆ. ರೈತರ ಹೋರಾಟ, ಆಧಿವಾಸಿಗಳ ಹೋರಾಟ, ಯುವಜನರ ಹೋರಾಟ ಹೀಗೆ ಅನೇಕ ದಿಕ್ಕುಗಳಲ್ಲಿ ವೇದಿಕೆಗಳಲ್ಲಿ ಸಂಘರ್ಷ ನಡೆಯುತ್ತಿದೆ” ಎಂದರು.

”ಮಣಿಪುರದಲ್ಲಿ ಪರಸ್ಪರ ಗಲಭೆ ಮಾಡಿಸುತ್ತಾರೆ. ಅಲ್ಲಿ, ಇಡೀ ಜಗಳ ಗಣಿಗಾರಿಕೆಗಾಗಿ ನಡೆಸಲ್ಪಡುತ್ತಿದೆ. ಅದನ್ನು ಅದಾನಿಗೆ ಕೊಡಲು ಯತ್ನಿಸುತ್ತಿದ್ದಾರೆ. ಕಾಶ್ಮೀರದ ಪ್ರವಾಸೋದ್ಯಮ ನಷ್ಟದಲ್ಲಿದೆ. 50,000 ಲಾಭ ಗಳಿಸುತ್ತಿದ್ದವರು ಇಂದು 2,000ಕ್ಕೆ ಇಳಿದಿದೆ. ಅದಾನಿಗೆ ಇದರ ಲಾಭವೂ ಸಿಗುತ್ತದೆ” ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ”ಗೌರಿ ಲಂಕೇಶ್ ಅವರು ಹತ್ಯೆಯಾಗಿ 6 ವರ್ಷಗಳು ಕಳೆದಿವೆ. ಅವರ ಹತ್ಯೆ ಪ್ರಕರಣದ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಅವರ ಹತ್ಯೆಯಲ್ಲಿ ಭಾಗಿಯಾಗಿರುವವರು ಯಾರೇ ಆಗಿದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗೌರಿ ಆಶಯಗಳ ಜೊತೆಗಿರುವ ಎಲ್ಲರೂ ನಿಟ್ಟುಸಿರು ಬಿಡುವಂತಹ ತೀರ್ಪು ಬರುತ್ತದೆ ಎಂಬ ಭರವಸೆ ಇದೆ” ಎಂದು ಹೇಳಿದರು.

”ಗೌರಿ ಲಂಕೇಶ್ ಅವರು ಪತ್ರಕರ್ತೆ ಎಂಬುದಕ್ಕಿಂತ ಅವರೊಬ್ಬರ ಹೋರಾಟಗಾರ್ತಿ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಲ ನನ್ನನ್ನು ಭೇಟಿ ಮಾಡಿದ್ದರು. ಅವರು ಯಾವತ್ತೂ ಕೂಡ ವೈಯಕ್ತಿಕ ವಿಚಾರಗಳಿಗಾಗಿ ಭೇಟಿ ಮಾಡಿದವರಲ್ಲ. ನಮಗೆ ಸಹಾಯಮಾಡಿ, ಕುಟುಂಬಕ್ಕೆ ಸಹಾಯ ಮಾಡಿ, ಪತ್ರಿಕೆಗೆ ಸಹಾಯ ಮಾಡಿ ಎಂದವರಲ್ಲ. ಅವರು ಯಾವಾಗ ಭೇಟಿ ಮಾಡಿದರೂ ಕೋಮು ಸೌಹಾರ್ದತೆ, ರೈತರು, ಆದಿವಾಸಿಗಳ ಬಗ್ಗೆ ಮಾತನಾಡುತ್ತಿದ್ದರು. ಎಲ್ಲ ವರ್ಗದ ದನಿಯಾಗಿ ಕೆಲಸ ಮಾಡುತ್ತಿದ್ದರು” ಎಂದು ಗೌರಿ ಲಂಕೇಶ್ ಒಡನಾಟವನ್ನು ನೆನಪಿಸಿಕೊಂಡರು.

ಇದನ್ನೂ ಓದಿ: ಗೌರಿ ಲಂಕೇಶ್ ನೆನಪು: ಗೌರವ ನಮನ, ಸಂವಾದ ಕಾರ್ಯಕ್ರಮ – ಸಿಎಂ ಸಿದ್ದರಾಮಯ್ಯ ಭಾಗಿ

”ಎಲ್ಲೇ ಅನ್ಯಾಯವಾದರೂ ಆ ಅನ್ಯಾಯವನ್ನು ಪ್ರತಿಭಟಿಸುವ, ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಗೌರಿ ಲಂಕೇಶ್ ಮಾಡುತ್ತಿದ್ದರು. ಇಂದು ಗೌರಿ ಲಂಕೇಶ್ ಹತ್ಯೆಯಾಗಿ ನಮ್ಮನ್ನು ಅಗಲಿದ್ದಾರೆ. ಅವರು ಬದುಕಬೇಕಿತ್ತು. ಅವರು ಕುಟುಂಬಕ್ಕಾಗಿ ಅಲ್ಲ, ಸಮಾಜದಲ್ಲಿ ದನಿ ಇಲ್ಲದೆ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡಲಿಕ್ಕೆ ಗೌರಿ ಲಂಕೇಶ್ ಅವರು ಬದುಕಿರಬೇಕಿತ್ತು. ಅವರ ನೆನಪು ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ನಮಗೆಲ್ಲರಿಗೂ ಗೌರವ” ಎಂದರು.

”ಗೌರಿ ಲಂಕೇಶ್, ಕಲ್ಬುರ್ಗಿ, ಪನ್ಸಾರೆ, ದಬೋಲ್ಕರ್ ಅವರನ್ನು ಹತ್ಯೆ ಮಾಡಿದವರು ಮಹಾತ್ಮ ಗಾಂಧಿಯವರನ್ನು ಕೊಂದ ಮನಸ್ಥಿತಿಯವರು. ಕೋಮು ಸೌದಾರ್ದತೆಗಾಗಿ ಗಾಂಧೀಜಿ ಹೋರಾಟ ಮಾಡಿದ್ದರು. ಭಾರತ ದೇಶದಲ್ಲಿ ಇರುವ ಯಾರೇ ಕೂಡ ಬೇಧ ಮಾಡಬಾರದು. ಒಟ್ಟಾಗಿ ಬದುಕಬೇಕು ಎಂಬುದನ್ನು ಗಾಂಧೀಜಿ ಪ್ರತಿಪಾದನೆ ಮಾಡಿದರು. ಅದನ್ನು ಕೋಮುವಾದಿಗಳಿಗೆ ಸಹಿಸಲು ಆಗುತ್ತಿರಲಿಲ್ಲ. ಕೋಮುವಾದಿ ಶಕ್ತಿಗಳು ಮಹಾತ್ಮ ಗಾಂಧಿಯವರನ್ನು ಕೊಂದರು. ಅದೇ ಮನಸ್ಥಿತಿಯವರೇ ಗೌರಿ ಲಂಕೇಶ್ ಅವರನ್ನು ಕೊಂದಿದ್ದಾರೆ” ಎಂದು ಆರೋಪಿಸಿದರು.

”ಇಡೀ ದೇಶದಲ್ಲಿ ಯಾರೇ ಕೋಮುವಾದಿಗಳ ವಿರುದ್ಧ ದನಿ ಎತ್ತಿದರೂ, ಅವರಿಗೆ ಎದುರಿಸುವುದು, ಪತ್ರ ಬರೆಯುವುದು, ಜೀವ ಬೆದರಿಕೆ ಹಾಕುತ್ತಾನೆ. ಪ್ರಕಾಶ್ ರೈ ಹೇಳಿದಂತೆ ನಮ್ಮ ಭಯವೇ ಕೋಮುವಾದಿಗಳಿಗೆ ಶಕ್ತಿ. ನೀವ್ಯಾರೂ ಕೋಮುವಾದಿಗಳಿಗೆ ಹೆದರಬಾರದು. ನಿಮ್ಮೆಲ್ಲರ ಹೋರಾಟದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಸಂವಿಧಾನ ಉಳಿಯಬೇಕು ಎಂಬ ಮನಸ್ಸುಗಳು ನಮಗೆ ಶಕ್ತಿಯನ್ನು ಕೊಟ್ಟಿದ್ದಾರೆ. ನಮಗೆ ಶಕ್ತಿಯನ್ನು ನೀಡಿದವರ ಕನಸು ನುಚ್ಚುನೂರಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ” ಎಂದು ಭರವಸೆ ನೀಡಿದರು.

”ವಿಚಾರವಾದಿಳಿಗೆ, ಕೋಮುವಾದಿ ಶಕ್ತಿಗಳ ವಿರುದ್ಧ ಮಾತನಾಡುವವರಿಗೆ ಬೆದರಿಕೆ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸರಿಗೆ ತಿಳಿಸಿದ್ದೇನೆ. ಮೈಸೂರಿನಲ್ಲಿ ಒಂದು ಘಟಕ ಮಾಡಿದ್ದೇವೆ.
ಮಾರಲ್ ಪೊಲೀಸಿಂಗ್ ಮಾಡುವವರ ವರುದ್ದಸ ಕ್ರಮ ಜರುಗಿಸುತ್ತೇವೆ” ಸಿಎಂ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...