Homeಮುಖಪುಟಗುಜರಾತ್‌ ತೂಗುಸೇತುವೆ ದುರಂತ: ಸಾವಿನ ಸಂಖ್ಯೆ 141ಕ್ಕೆ ಏರಿಕೆ; 177 ಜನರ ರಕ್ಷಣೆ

ಗುಜರಾತ್‌ ತೂಗುಸೇತುವೆ ದುರಂತ: ಸಾವಿನ ಸಂಖ್ಯೆ 141ಕ್ಕೆ ಏರಿಕೆ; 177 ಜನರ ರಕ್ಷಣೆ

ಶತಮಾನದಷ್ಟು ಹಳೆಯದಾದ ಸೇತುವೆಯ ನವೀಕರಣಕಾರರು, ಸೇತುವೆಯನ್ನು ಮತ್ತೆ ತೆರೆಯುವ ಮೊದಲು ಸುರಕ್ಷತಾ ಪ್ರಮಾಣಪತ್ರವನ್ನು ಪಡೆದುಕೊಂಡಿಲ್ಲ: ಅಧಿಕಾರಿ

- Advertisement -
- Advertisement -

ಗುಜರಾತ್‌ನ ಮೊರ್ಬಿ ನಗರದಲ್ಲಿ ಮಚ್ಚು ನದಿಯ ಮೇಲೆ ನಿರ್ಮಿಸಲಾದ ಸುಮಾರು ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ನಿನ್ನೆ (ಅಕ್ಟೋಬರ್‌ 30) ಸಂಜೆ ಕುಸಿದಿದೆ. ಸೇತುವೆ ಮೇಲಿದ್ದ ಹಲವರು ನದಿಗೆ ಬಿದ್ದಿದ್ದಾರೆ. “ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದೆ, ಸುಮಾರು 177 ಜನರನ್ನು ಉಳಿಸಲಾಗಿದೆ” ಎಂದು ಎನ್‌ಡಿಟಿವಿ ವರದಿ ಮಾಡಿದೆ. ನಾಪತ್ತೆಯಾಗಿರುವ ಹಲವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ.

ಸಾವಿಗೀಡಾದವರಲ್ಲಿ ಹೆಚ್ಚು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್‌ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇದು ತುಂಬಾ ದುಃಖಕರವಾಗಿದೆ ಎಂದು ರಾಜ್‌ಕೋಟ್‌ನ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಪ್ರತಿಕ್ರಿಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೇತುವೆ ಕುಸಿದ ನಂತರ ಹಲವರು ಈಜಿಕೊಂಡು ಬದುಕುಳಿಯಲು ಯತ್ನಿಸಿದ್ದರು. ಸೇತುವೆಯ ಮುರಿದ ತುದಿಗೆ ಜನರ ಗುಂಪು ಅಂಟಿಕುಳಿತಿರುವ ದೃಶ್ಯಗಳು ಕಂಡುಬಂದಿದ್ದವು. ಮರಿದ ಸೇತುವೆಯೂ ಕೂಡ ಭಾಗಶಃ ಮುಳುಗಿದೆ.

ಕಾಣೆಯಾದವರ ಪತ್ತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಐದು ತಂಡಗಳು ರಾತ್ರಿಯಿಡೀ ಕಾರ್ಯನಿರ್ವಹಿಸಿವೆ. ನಂತರ ಸೇನೆ, ನೌಕಾಪಡೆ ಮತ್ತು ವಾಯುಪಡೆ ಕೂಡ ಕಾರ್ಯಾಚರಣೆಗೆ ಕೈಜೋಡಿಸಿವೆ.

ಸುಮಾರು 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದೆ. ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳು ದೃಶ್ಯಗಳಲ್ಲಿ ಕಂಡುಬಂದಿದ್ದಾರೆ. ಐತಿಹಾಸಿಕವಾದ ಸೇತುವೆಯನ್ನು ಇತ್ತೀಚೆಗೆ ನವೀಕರಿಸಿದ ನಂತರ ಜನರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಿನ್ನೆ ಸಂಜೆ 6.42ರ ವೇಳೆಗೆ ಸೇತುವೆ ಮುರಿದುಬಿದ್ದಿದೆ.

ಶತಮಾನದಷ್ಟು ಹಳೆಯದಾದ ಸೇತುವೆಯ ನವೀಕರಣಕಾರರು, ಸೇತುವೆಯನ್ನು ಮತ್ತೆ ತೆರೆಯುವ ಮೊದಲು ಸುರಕ್ಷತಾ ಪ್ರಮಾಣಪತ್ರವನ್ನು ಪಡೆದುಕೊಂಡಿಲ್ಲ ಎಂದು ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿ ಸಂದೀಪ್‌ಸಿನ್ಹ್ ಝಲಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಸೇತುವೆ ಕುಸಿದಾಗ ಸೇತುವೆ ಮೇಲೆ ಸುಮಾರು 500 ಮಂದಿ ಇದ್ದರು. ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಜನರು ಜಮಾಯಿಸಿದ್ದರು. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

“ಈ ದುರಂತದ ಹೊಣೆಯನ್ನು ಸರ್ಕಾರ ಹೊರುತ್ತದೆ. ಪ್ರಧಾನಿಯವರು ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ. ಎಲ್ಲಾ ಉನ್ನತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಕಳೆದ ವಾರ ನವೀಕರಣ ನಡೆದಿತ್ತು. ನಮಗೂ ಆಘಾತವಾಗಿದೆ. ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ” ಎಂದು ಗುಜರಾತ್‌ನ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವ ಬ್ರಿಜೇಶ್ ಮೆರ್ಜಾ ತಿಳಿಸಿದ್ದಾರೆ.

ಘಟನೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. “ನವೀಕರಣದ ನಂತರ ಸಾರ್ವಜನಿಕರಿಗೆ ಇತ್ತೀಚೆಗೆ ತೆರೆಯಲಾದ ಸೇತುವೆಯು ಕುಸಿದು ಉಂಟಾಗಿರುವ ಘಟನೆಯಿಂದ ತೀವ್ರ ದುಃಖವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೋರ್ಬಿಯಲ್ಲಿ ಸಂಭವಿಸಿದ ದುರ್ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಪ್ರಧಾನಿಯವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳನ್ನು ತುರ್ತು ಸಜ್ಜುಗೊಳಿಸುವಂತೆ ಕೋರಿದ್ದಾರೆ. ಪರಿಸ್ಥಿತಿಯನ್ನು ಸರಿಯಾಗಿ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕೆಂದು ತಿಳಿಸಿರುವ ಅವರು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಬೇಕು ಎಂದು ಸೂಚಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಮೋರ್ಬಿ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಎಎಪಿ ಮುಖ್ಯಸ್ಥರಾದ ಅರವಿಂದ ಕೇಜ್ರೀವಾಲ್ ಅವರು, ಸಂತ್ರಸ್ತರು ಬದುಕುಳಿಯಲಿ ಎಂದು ಪ್ರಾರ್ಥಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 4 ಲಕ್ಷ ಹಾಗೂ ಗಾಯಗೊಂಡವರಿಗೆ ₹ 50 ಸಾವಿರ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಗುಜರಾತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಂತ್ರಸ್ತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಆರ್ಥಿಕ ನೆರವು ಘೋಷಿಸಿದ್ದಾರೆ.

ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಅವರು ರಾಜ್ಯ ರಾಜಧಾನಿ ಅಹಮದಾಬಾದ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿರಿ: ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳ ಬಿಡುಗಡೆಗೆ ಕೇಂದ್ರದಿಂದ ಅನುಮೋದನೆ: ಗುಜರಾತ್‌ ಸರ್ಕಾರದ ಅಫಿಡವಿಟ್‌ನಲ್ಲಿ ಉಲ್ಲೇಖ

ಮೋರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಕಳೆದ ವಾರ ಅದನ್ನು ನವೀಕರಿಸಲಾಗಿತ್ತು. ನವೀಕರಣದ ನಂತರ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗಿತ್ತು.

ಸರ್ದಾರ್‌ ಪಟೇಲ್‌ ಪ್ರತಿಮೆ ಪುಷ್ಪನಮನ ಸಲ್ಲಿಸಿ ಮೋದಿ ಪ್ರತಿಕ್ರಿಯೆ

“ನಾನು ಏಕ್ತಾ ನಗರದಲ್ಲಿದ್ದೇನೆ, ಆದರೆ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ. ನನ್ನ ಜೀವನದಲ್ಲಿ ಅಪರೂಪದ ಘಟನೆ ಇದಾಗಿದ್ದು, ನೋವನ್ನು ಅನುಭವಿಸಿದ್ದೇನೆ. ಒಂದು ಕಡೆ, ನೋವಿನಿಂದ ಕೂಡಿದ ಹೃದಯವಿದೆ, ಇನ್ನೊಂದು ಕಡೆ ಕರ್ತವ್ಯದ ಹಾದಿ” ಎಂದು ಗುಜರಾತ್‌ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಜನ್ಮದಿನದ ಅಂಗವಾಗಿ ಪ್ರಧಾನಿ ಏಕ್ತಾನಗರದಲ್ಲಿದ್ದಾರೆ.

“ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುಃಖದ ಸಮಯದಲ್ಲಿ ಸರ್ಕಾರವು ಎಲ್ಲಾ ರೀತಿಯಲ್ಲೂ ಸಂತ್ರಸ್ತ ಕುಟುಂಬಗಳೊಂದಿಗೆ ಇರುತ್ತದೆ” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...