Homeಕರ್ನಾಟಕಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

ಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

- Advertisement -
- Advertisement -

ನಿನ್ನೆ ನಿಧನರಾದ ಎಚ್.ಎಸ್. ದೊರೆಸ್ವಾಮಿ ತಮ್ಮೊಂದಿಗೆ, ಇನ್ನು ಮುಂದೆ ಕಂಡುಕೊಳ್ಳಲು ಕಷ್ಟ ಎನಿಸುವ ಒಂದು ವಿದ್ಯಮಾನ, ಒಂದು ಪರಂಪರೆ ಮತ್ತು ಒಂದು ರೀತಿಯ ಆಕರ್ಷಣೆಯನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ನ್ಯಾಯಕ್ಕಾಗಿ ಶಾಶ್ವತ ಹೋರಾಟಗಾರ, ಶೇಕಡಾ 100 ರಷ್ಟು ಗಾಂಧಿವಾದಿ (ಅವರ ನಮ್ರತೆ ಮತ್ತು ಪ್ರಾಮಾಣಿಕತೆ ಅದನ್ನು ಸ್ವೀಕರಿಸಲು ಒಪ್ಪಲಾರದು) ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಗಮನಿಸುವ  ತೀಕ್ಷ್ಣ ದೃಷ್ಟಿ ಮತ್ತು ಅವರ ಮಾಗಿದ ವಯಸ್ಸಿನಲ್ಲಿಯೂ ಎಲ್ಲವನ್ನೂ ತಿಳಿಯುವ ಹಂಬಲ ಹೊಂದಿರುವ ವ್ಯಕ್ತಿಯಾಗಿದ್ದರು. ಅವರು ಅಕ್ಷರಶಃ ಮತ್ತು ಸಾಂಕೇತಿಕವಾಗಿಯೂ ಎತ್ತರದ ವ್ಯಕ್ತಿ.  ಅವರು ಆಸ್ಪತ್ರೆಗೆ ದಾಖಲಾಗುವುದು ಇತ್ತೀಚೆಗೆ ಹೆಚ್ಚಾಗಿತ್ತಾದರೂ, ಅವರು ಕೋವಿಡ್ ಜಯಿಸಿದ್ದರು, ಅವರ ಆಮ್ಲಜನಕದ ಮಟ್ಟವು ಅತ್ಯುತ್ತಮವಾಗಿತ್ತು, ಸಕ್ಕರೆ ಅಂಶ ಮತ್ತು ಬಿಪಿ 20 ವರ್ಷದ ಯುವಕನಿಗಿರುವಂತೆ ಸಾಮಾನ್ಯವಾಗಿತ್ತು. ರಾಜಕೀಯ ಅಥವಾ ಸೈದ್ಧಾಂತಿಕವಾಗಿ ನಮ್ಮ ಸಮಾಜವನ್ನು ಹಾಳುಗೆಡವುತ್ತಿರುವ ಎಲ್ಲಾ ರೀತಿಯ ವೈರಸ್‌ಗಳ ವಿರುದ್ಧ ಹೋರಾಡಿದ ಅವರು ಅಂತಿಮವಾಗಿ ಮಾರಣಾಂತಿಕ ವೈರಸ್‌ಗೆ ಬಲಿಯಾಗಲಿಲ್ಲ ಎಂಬುದು ಗಮನಾರ್ಹ.

ಕೋವಿಡ್ ಕಾರಣದಿಂದಾಗಿ, ಯಾವ ಹಂತದ ಹೋರಾಟಕ್ಕೂ ಸಿದ್ಧವಿದ್ದ ತಾವು ಆಳವಾಗಿ ಪ್ರೀತಿಸುವ ಜನರೊಂದಿಗೆ ಇರಲು ಸಾಧ್ಯವಾಗದ ಕಾರಣ ಮತ್ತು ಆ ಜನರ ನೋವುಗಳಿಗೆ ಸ್ಪಂದಿಸಲು ಆಗದ ಕಾರಣ ಅವರು ಸ್ವಲ್ಪ ಕುಗ್ಗಿದರೇನೋ? ಅಲ್ಲದೆ, ಸಾರ್ವಜನಿಕ ಚಟುವಟಿಕೆಯೇ ತನ್ನನ್ನು ಜೀವಂತವಾಗಿಟ್ಟಿದೆ ಎಂದು ಅವರು ಆಗಾಗ ತಮಾಷೆ ಮಾಡುತ್ತಿದ್ದರು. ಕುವೆಂಪು ಅವರ ಪ್ರಸಿದ್ಧ ಸಾಲುಗಳು, ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬುದನ್ನು ಅದರ ಸಂಪೂರ್ಣ ಅರ್ಥದಲ್ಲಿ ಅವರಿಗೆ ಅನ್ವಯಿಸಬಹುದು. ಅವರು ತಮ್ಮ ಜೀವನದುದ್ದಕ್ಕೂ ಬಾಡಿಗೆ ಮನೆಯಲ್ಲಿ ವಾಸಿಸಿದರು ಮತ್ತು ಅವರಿಗೆ ಮನೆಯನ್ನು ಮಂಜೂರು ಮಾಡುವುದಾಗಿ ತಿಳಿಸಿದ ಸರ್ಕಾರದ ಕೊಡುಗೆಯನ್ನು ದೃಢವಾಗಿ ನಿರಾಕರಿಸಿದ್ದರು. ‘ಅಂತಹ ಉಡುಗೊರೆಯನ್ನು ಸ್ವೀಕರಿಸುವುದಾದರೆ, ನೀನು ಅಲ್ಲಿ ವಾಸಿಸಲು ಸ್ವತಂತ್ರಳು. ಆದರೆ ನಾನು ಹೋಗಿ ಗಾಂಧಿ ಭವನದಲ್ಲಿ ವಾಸಿಸುತ್ತೇನೆ’ ಎಂದು ಅವರು ತಮ್ಮ ಹೆಂಡತಿಗೆ ಹೇಳಿದ್ದರು.

ಅವನ ದೃಢತೆ ಹೇಗಿತ್ತೆಂದರೆ, ವೃದ್ಧಾಪ್ಯದಲ್ಲಿ ಸಹಜವಾಗಿರುವ ಪ್ರಕೃತಿ ಕರೆಯನ್ನೂ ಹಿಮ್ಮೆಟ್ಟಿಸಿ ಒಂದು ಸ್ಥಳದಲ್ಲಿ (ಸಾರ್ವಜನಿಕ ಸಭೆಗಳಲ್ಲಿ) ಹಲವು ಗಂಟೆಗಳ ಕಾಲ ಕೂತುಕೊಳ್ಳುತ್ತಿದ್ದರು. ಅವರು ಕನ್ನಡಕವಿಲ್ಲದೆ ಓದಬಲ್ಲವರಾಗಿದ್ದರು, ಒದಗಿಸಿದ ಯಾವ ಆಹಾರವನ್ನಾದರೂ ತಿನ್ನುತ್ತಿದ್ದರು. ಆದರೆ ಅವರು ಸಿಹಿತಿಂಡಿಗಳನ್ನು ಇಷ್ಟಪಡುತ್ತಿದ್ದರು. ಎಷ್ಟೆಂದರೆ, ಹಲವು ಜಾಮೂನುಗಳನ್ನು ಅವರು ಒಟ್ಟಿಗೆ ಸವಿಯುತ್ತಿದ್ದುದನ್ನು ನೋಡಿದ ಅವರ ಅರ್ಧ ವಯಸ್ಸಿನವರೂ ಸೋಜಿಗ ಪಡುತ್ತಿದ್ದರು.

ಅವರನ್ನು ಯಾವುದೇ ಸಮಯದಲ್ಲಿ ನೋಡಲು ಹೋದ ಯಾರಾದರೂ, ಅವರ ಸ್ಮರಣೆಯಿಂದ ಹಲವು ಸಂಗತಿಗಳನ್ನು ಪಡೆಯುತ್ತಿದ್ದರು. ಜಾದೂಗಾರ ತನ್ನ ಟೋಪಿಯಿಂದ ಹೊರ ತೆಗೆಯುವಂತೆ ಅವರು ತಮ್ಮ ಹಳೆಯ ನೆನಪುಗಳನ್ನು ತೆರೆಯುತ್ತಿದ್ದರು. ಅವರ ನೆನಪು ಅಸಾಧಾರಣವಾಗಿತ್ತು. ಗೋಡ್ಸೆ ಪುಣೆಯಿಂದ ರೈಲಿನಿಂದ ಬಂದು  ಯಶವಂತಪುರದ ರೈಲ್ವೆ ನಿಲ್ದಾಣದಲ್ಲಿ ಇಳಿದ ದಿನಾಂಕವನ್ನು ಅವರು ನೆನಪಿಟ್ಟುಕೊಂಡಿದ್ದರು. ‘ಅವನು (ಗೋಡ್ಸೆ) ಪ್ರಮುಖ ವ್ಯಕ್ತಿಯಲ್ಲದಿದ್ದರೆ ಅವನನ್ನು ಸ್ವೀಕರಿಸಲು ಜನಸಮೂಹ ಏಕೆ ಇತ್ತು?’ ಎಂಬುದು ಅವರ ವಾದವಾಗಿತ್ತು. ಆಗ ಗೋಡ್ಸೆಯನ್ನು ಸ್ವಾಗತಿಸಿದ ಸಂಸ್ಥೆ ನಂತರದ ದಿನಗಳಲ್ಲಿ ಗೋಡ್ಸೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಈ ಘಟನೆಯ ನೆನಪು ಗಾಂಧೀಜಿಯವರನ್ನು ದ್ವೇಷಿಸುವ ಕೆಲವು ವರ್ಗದ ಜನರಿಗೆ ಇಷ್ಟವಾಗುವುದು ಸಾಧ್ಯವಿಲ್ಲ. ಅವರ ಬಗ್ಗೆ ಬಿಜೆಪಿಯ ಹಿರಿಯ ರಾಜಕಾರಣಿಯೊಬ್ಬ ದೇಶ ವಿರೋಧಿ ಮತ್ತು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದರು! ಆರೋಪಿಸಿದ ವ್ಯಕ್ತಿ ನಗೆಪಾಟಿಲಿಗೆ ಈಡಾದರು. ಆರೋಪಿತ ಹೊಸ ಚೈತನ್ಯ ಮತ್ತು ಹುರುಪಿನೊಂದಿಗೆ ತಮ್ಮ ಕೆಲಸ ಮುಂದುವರೆಸಿದರು.

ಜನರು ತಮ್ಮ ಮೇಲೆ ಸುರಿಸಿದ ಪ್ರೀತಿ ಗೌರವಾದರಗಳನ್ನು ಅವರು (ದೊರೆಸ್ವಾಮಿ) ಆನಂದಿಸಿದರು. ಇದು ಅವರು ಸ್ವ-ಆಸಕ್ತಿ ಹೊಂದಿದ್ದರೆಂದಲ್ಲ, ಆದರೆ ಅವರು ಜನರನ್ನು ಪ್ರೀತಿಸುತ್ತಿದ್ದರು, ಜನರು ಬಯಸಿದ ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ಅವರೊಂದಿಗೆ ಇರಲು ಮತ್ತು ಗಾಂಧಿವಾದಿ ತತ್ವಗಳ ಆಧಾರದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಲು ಅವರು ಉತ್ಸುಕರಾಗಿದ್ದರು.

ಸುಮಾರು ಒಂಬತ್ತು ದಶಕಗಳವರೆಗಿನ ಅವರ ಸಾರ್ವಜನಿಕ ಜೀವನ ವಿವಿಧ ಮಜಲುಗಳನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟದ ಆರಂಭಿಕ ವರ್ಷಗಳಲ್ಲಿ ಯುವ ಪತ್ರಕರ್ತನಾಗಿ, ಇತ್ತೀಚಿನ ಕೃಷಿ ಹೋರಾಟವನ್ನು ಬೆಂಬಲಿಸುವವರೆಗೆ ಅದು ಹರಡಿತ್ತು. ಬಹುಶಃ ನಮ್ಮ ಕಾಲದಲ್ಲಿ ಇದು ಅತ್ಯಂತ ದೀರ್ಘ ಹೋರಾಟ ಆಗಿದೆ.

ದೊರೆಸ್ವಾಮಿ, doreswamy

ಕಳೆದ ಮೂವತ್ತು ವರ್ಷಗಳಿಂದ ನಾನು ಅವರನ್ನು ಬಲ್ಲೆನಾಗಿದ್ದರೂ, ನಕ್ಸಲರನ್ನು ‘ಮುಖ್ಯವಾಹಿನಿಗೆ’ ಮರಳಿಸಲು ರಚಿಸಿದ ಸಮಿತಿಯ ಸದಸ್ಯನಾಗಿ, ಅವರನ್ನು ಸೂಕ್ಷ್ಮವಾಗಿ  ಗಮನಿಸಿ ತಿಳಿಯುವ ಅವಕಾಶ ಸಿಕ್ಕಿತು. ಅವರು ಎಷ್ಟು ಸೂಕ್ಷ್ಮದ ಮಟ್ಟಿಗೆ ವಿವರಗಳನ್ನು ಕಲೆಹಾಕುತ್ತಿದ್ದರು ಎಂಬುದು ಮತ್ತು  ಅವರ ಒಳನೋಟಗಳು ಉನ್ನತ ಮಟ್ಟದ ವಕೀಲರನ್ನು ನಾಚಿಸುವಂತೆ ಇದ್ದವು. ಅವರನ್ನು ಯಾವ ವಿಷಯದಲ್ಲಾದರೂ ಕನ್ವಿನ್ಸ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ, ಆದರೆ ಒಮ್ಮೆ ಮನವರಿಕೆಯಾದರೆ, ಅವರು ಎಂದೂ ತಮ್ಮ ನಿಲುವನ್ನು ಬಿಟ್ಟುಕೊಡುತ್ತಿರಲಿಲ್ಲ. ಅವರು ಇಬ್ಬರು ಕ್ರಾಂತಿಕಾರಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಚಿಕ್ಕಮಗಳೂರು ಡಿಸಿಗೆ ಹಸ್ತಾಂತರಿಸಿದರು, ಅವರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುವಂತೆ ಪ್ರೀತಿಯಿಂದ ಆದೇಶಿಸಿದರು.

ಗೌರಿ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷರಾಗಲು ಅವರು ಒಪ್ಪಿಕೊಂಡ ಸಂದರ್ಭದಲ್ಲಿ ಮತ್ತೆ ಅವರ ಒಡನಾಟ ಲಭಿಸಿತು. ಅವರು ವೃತ್ತಿಪರ ಇಂಗ್ಲಿಷ್ ಶಿಕ್ಷಕರಂತೆ ಟ್ರಸ್ಟ್ ಡೀಡ್ ನ ಕರಡನ್ನು ಓದಿಕೊಂಡರು ಮತ್ತು ಆತ್ಮೀಯ ಹೆಡ್ ಮಾಸ್ಟರ್ ತರಹ ಟ್ರಸ್ಟ್ ಸಭೆಗಳನ್ನು ನಡೆಸಿದರು.

ಅವರು ಮೂಲತಃ ಪರಮ ಜಾತ್ಯತೀತರು, ಹಿಂದುತ್ವ ರಾಜಕಾರಣದ ಕೋಮುವಾದಿ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ವಿರೋಧಿಸಿದರು ಮತ್ತು ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯಿಂದ ಮೈಲಿ ದೂರ ಸರಿದ ಕಾಂಗ್ರೆಸ್ ಅಥವಾ ಇತರ ಯಾವುದೇ ಪಕ್ಷವಾಗಲೀ ತರಾಟೆಗೆ ತೆಗೆದುಕೊಳ್ಳುವುದನ್ನು ಬಿಡುತ್ತಿರಲಿಲ್ಲ. ಬಹಳ ಹಿಂದೆಯೇ ದೇಶ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರಿಂದ ದೇಶಕ್ಕೆ ಎರಡನೇ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದು ಅವರು ದೃಢವಾಗಿ ನಂಬಿದ್ದರು.

ಅವರು ಸರಳ ಜೀವನವನ್ನು ನಡೆಸಿದರು, ಆದರೆ ತಮ್ಮ ಚಿಂತನೆಗಳು ಮತ್ತು ಅನುಭವದಿಂದ ಅವರು ಶ್ರೀಮಂತರು. ಅವರ ಜೀವನ ಕಥೆಯು ತಂಪಾದ ರಾತ್ರಿಯಲ್ಲಿ ಹೇಳಬೇಕಾದ ತಣ್ಣನೆಯ ಕಥೆಯಲ್ಲ, ಅದು ಎಂದೂ ರಾಜಿಯಾಗದ, ಆದರೆ ಸರಿಯಾದ ಅಲೋಚನೆಯುಳ್ಳ ಮತ್ತು ಕಾರ್ಯ ಪ್ರವೃತ್ತರಾಗಲು ಆಹ್ವಾನ ನೀಡುವ ಬೆಚ್ಚಗಿನ ಅಧ್ಯಯನದ ಕತೆ. ಈ ಸಂದರ್ಭದಲ್ಲಿ ನಮ್ಮ ನಡುವೆ ಇಂತಹ ಮನುಷ್ಯ ಇದ್ದರು ಎಂಬುದನ್ನು ಮುಂದಿನ ತಲೆಮಾರಿಗೆ ನಂಬುವುದಕ್ಕೆ ಕಷ್ಟವಾಗಬಹುದು. ಗಾಂಧೀಜಿ ಕುರಿತ ಐನ್‌ಸ್ಟೆöÊನ್ ಅವರ ಪ್ರಸಿದ್ಧ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು: ‘ಹಲವು ತಲೆಮಾರುಗಳ ನಂತರ, ಇಂತಹ ಮನುಷ್ಯ ಈ ಭೂಮಿಯ ಮೇಲೆ ಜೀವಂತವಾಗಿ ನಡೆದಾಡಿದ್ದಾನೆ ಎಂಬುದನ್ನು ನಂಬುವುದು ಕಷ್ಟವಾಗಬಹುದು’

ಅನುವಾದ: ಪಿ ಮಲ್ಲನಗೌಡರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...