Homeಮುಖಪುಟಇಸ್ರೇಲ್- ಹಮಾಸ್‌: ಒಪ್ಪಂದದ ಉಲ್ಲಂಘನೆ ಆರೋಪ, ಪ್ರತ್ಯಾರೋಪ; ಮತ್ತೆ ಯುದ್ಧದ ಭೀತಿ

ಇಸ್ರೇಲ್- ಹಮಾಸ್‌: ಒಪ್ಪಂದದ ಉಲ್ಲಂಘನೆ ಆರೋಪ, ಪ್ರತ್ಯಾರೋಪ; ಮತ್ತೆ ಯುದ್ಧದ ಭೀತಿ

- Advertisement -
- Advertisement -

ಇಸ್ರೇಲ್‌ನಿಂದ ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹಮಾಸ್‌ ಒತ್ತೆಯಾಳುಗಳ ಎರಡನೇ ಗುಂಪನ್ನು ಬಿಡುಗಡೆ ಮಾಡಲು ವಿಳಂಬ ಮಾಡಿತ್ತು. ಈ ವೇಳೆ ಯುದ್ಧ ಯಾವುದೇ ಕ್ಷಣದಲ್ಲಿ ಮರು ಆರಂಭಿಸುವುದಾಗಿ ಇಸ್ರೇಲ್‌ ಬೆದರಿಕೆ ಹಾಕಿತ್ತು. ಈ ಬೆಳವಣಿಗೆ ಮಧ್ಯೆಯೇ ಪ್ಯಾಲೆಸ್ತೀನ್‌ ಕೈದಿಗಳ ಬಿಡುಗಡೆಗೆ ಬದಲಾಗಿ ಹಮಾಸ್ ಶನಿವಾರ ರಾತ್ರಿ ಇಸ್ರೇಲ್‌ ಮತ್ತು ವಿದೇಶಿ ಒತ್ತೆಯಾಳುಗಳ ಎರಡನೇ ಗುಂಪನ್ನು ಬಿಡುಗಡೆ ಮಾಡಿದೆ. ಆದರೆ ಯಾವುದೇ ಕ್ಷಣದಲ್ಲಿ ಯುದ್ಧ ಮರು ಆರಂಭದ ಭೀತಿ ಪ್ರಾರಂಭವಾಗಿದೆ.

ಹಮಾಸ್ 8 ಮಕ್ಕಳು ಮತ್ತು ಐದು ಮಹಿಳೆಯರು ಸೇರಿ 13 ಇಸ್ರೇಲ್‌ ಒತ್ತೆಯಾಳುಗಳನ್ನು ಗಾಝಾದಲ್ಲಿನ ರೆಡ್‌ಕ್ರಾಸ್‌ನ ಅಂತರಾಷ್ಟ್ರೀಯ ಸಮಿತಿಗೆ ಹಸ್ತಾಂತರಿಸಿರುವ ಬಗ್ಗೆ ಇಸ್ರೇಲ್ ದೃಢಪಡಿಸಿದೆ. ಅವರನ್ನು ಈಜಿಪ್ಟ್‌ನ ರಫಾ ಕ್ರಾಸಿಂಗ್‌ನಾದ್ಯಂತ ಭದ್ರತೆಯಲ್ಲಿ ಇಸ್ರೇಲ್‌ಗೆ ಕರೆ ತರಲಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಇಸ್ರೇಲ್ ಮಿಲಿಟರಿ ಪಡೆಗಳು ತಿಳಿಸಿದೆ. ಇದಲ್ಲದೆ ನಾಲ್ವರು ಥಾಯ್ಲೆಂಡ್‌ ಪ್ರಜೆಗಳನ್ನೂ ಕೂಡ ಬಿಡುಗಡೆ ಮಾಡಲಾಗಿದೆ.

ಇದಾದ ಕೆಲವೇ ಗಂಟೆಗಳಲ್ಲಿ 39 ಪ್ಯಾಲೆಸ್ತೀನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ ಎಂದು ಇಸ್ರೇಲ್‌ ಅಧಿಕಾರಿಗಳು ಮುಂಜಾನೆ ತಿಳಿಸಿದ್ದಾರೆ.

ಹಮಾಸ್ ಒತ್ತೆಯಾಳುಗಳ ಎರಡನೇ ಗುಂಪನ್ನು ಬಿಡುಗಡೆಗೆ ತಡ ಮಾಡಿತ್ತು. ಇಸ್ರೇಲ್ ಒಪ್ಪಂದದ ಪ್ರಮುಖ ಅಂಶಗಳನ್ನು ತಿರಸ್ಕರಿಸಿದೆ ಎಂದು ಹೇಳಿಕೊಂಡಿತ್ತು. ಉತ್ತರ ಗಾಝಾಕ್ಕೆ ಪರಿಹಾರ ಸಾಮಾಗ್ರಿ ತಲುಪಲು ಇಸ್ರೇಲ್‌ ಬೇಕಾದ ರೀತಿಯ ಸಹಾಯವನ್ನು ಮಾಡುತ್ತಿಲ್ಲ. ಒಪ್ಪಿಗೆಯಂತೆ ಪ್ಯಾಲೆಸ್ತೀನ್‌ ಕೈದಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿತ್ತು.

ಶನಿವಾರ ಸಂಜೆ ಲೆಬನಾನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಮಾಸ್ ಅಧಿಕಾರಿ ಒಸಾಮಾ ಹಮ್ದಾನ್, ಬಿಡುಗಡೆ ಮಾಡಬೇಕಾದ ಕೈದಿಗಳ ಜೊತೆ ಇಸ್ರೇಲ್‌ ಚೆಲ್ಲಾಟವಾಡುತ್ತಿದೆ. ಮನೆಗೆ ಹಿಂದಿರುಗಲು ಪ್ರಯತ್ನಿಸಿದ ಗಾಝಾ ನಿವಾಸಿಗಳ ಮೇಲೆ ಇಸ್ರೇಲ್‌ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಇಸ್ರೇಲ್ ನಿರಾಕರಿಸಿದೆ ಮತ್ತು ಹಮಾಸ್ ಎರಡನೇ ಗುಂಪಿನ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ 4 ದಿನಗಳ ಕದನ ವಿರಾಮವು ಬೇಗನೆ ಕೊನೆಗೊಳ್ಳುತ್ತದೆ ಎಂದು ಬೆದರಿಕೆ ಹಾಕಿತ್ತು. ಇಸ್ರೇಲ್‌ ಮಿಲಿಟರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಕ್ಟ್ ಈ ಬಗ್ಗೆ ಪ್ರತಿಕ್ರಿಯಿಸಿ ನಾವು ನಮ್ಮ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಶನಿವಾರ ರಾತ್ರಿ ಹಮಾಸ್ ತನ್ನ ಅಧಿಕೃತ ಟೆಲಿಗ್ರಾಮ್ ಚಾನೆಲ್‌ನಲ್ಲಿ ಕತಾರ್ ಮತ್ತು ಈಜಿಪ್ಟ್ ನಡೆಸಿದ ಮಾತುಕತೆಯಂತೆ ಒತ್ತೆಯಾಳುಗಳ ಬಿಡುಗಡೆ ಮಾಡುತ್ತೇವೆ ಎಂದು ಹೇಳಿತ್ತು. ಒತ್ತೆಯಾಳು ಒಪ್ಪಂದದ ಬಗ್ಗೆ ಕತಾರ್ ಪ್ರಧಾನಿಯೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೂಡ ಮಾತುಕೆತೆಯನ್ನು ನಡೆಸಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ.

ಸಂಕ್ಷಿಪ್ತ ಕದನ ವಿರಾಮ ಶುಕ್ರವಾರ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಜಾರಿಗೆ ಬಂದಿದೆ. ಅಕ್ಟೋಬರ್ 7 ರಂದು ಪ್ರಾರಂಭವಾದ 50 ದಿನಗಳ ಸಂಘರ್ಷದಲ್ಲಿ ಇದೇ ಮೊದಲ ಬಾರಿಗೆ 4 ದಿನಗಳ ಕದನ ವಿರಾವನ್ನು ಘೋಷಿಸಲಾಗಿದೆ.

ಒಪ್ಪಂದದ ಭಾಗವಾಗಿ ಗಾಝಾದಲ್ಲಿ ಒತ್ತೆಯಾಳಾಗಿದ್ದ 50 ಇಸ್ರೇಲ್‌ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದೆ. ಇದಕ್ಕೆ ಬದಲಾಗಿ ಇಸ್ರೇಲ್ ಜೈಲುಗಳಲ್ಲಿದ್ದ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರು ಸೇರಿ 150 ಪ್ಯಾಲೆಸ್ತೀನ್‌ ಜನರನ್ನು ಬಿಡುಗಡೆ ಬಗ್ಗೆ ಒಪ್ಪಂದ ಮಾಡಲಾಗಿತ್ತು.

ಇನ್ನು ತಾತ್ಕಾಲಿಕ ಕದನ ವಿರಾಮವಿದ್ದರೂ ಹಮಾಸ್ ನಿಯಂತ್ರಿಸುತ್ತಿರುವ ದಕ್ಷಿಣ ಗಾಝಾ ಮತ್ತು ಉತ್ತರ ಗಾಝಾವನ್ನು ಇಸ್ರೇಲ್ ಹೆಚ್ಚಾಗಿ ವಶಪಡಿಸಿಕೊಂಡಿದೆ ಮತ್ತು ಅಲ್ಲಿನ ಹಮಾಸ್ ಹೋರಾಟಗಾರರು ಸಾಕಷ್ಟು ಭೀತಿಯಿಂದಿದ್ದಾರೆ.

ಇದನ್ನು ಓದಿ: ಕೊಚ್ಚಿ: ‘ಟೆಕ್‌ ಫೆಸ್ಟ್‌’ನಲ್ಲಿ ಕಾಲ್ತುಳಿತ; ನಾಲ್ವರು ವಿದ್ಯಾರ್ಥಿಗಳು ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎವರೆಸ್ಟ್, ಎಂಡಿಹೆಚ್ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದ ನೇಪಾಳ

0
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಂಹೆಚ್‌ಗಳ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಅಲ್ಲದೆ ಈ ಮಸಾಲೆಗಳಲ್ಲಿನ ಎಥಿಲೀನ್ ಆಕ್ಸೈಡ್...