Homeಮುಖಪುಟಕೊಚ್ಚಿ ಕಾಲ್ತುಳಿತ ಪ್ರಕರಣ: ತಜ್ಞರ ಸಮಿತಿಯಿಂದ ತನಿಖೆ

ಕೊಚ್ಚಿ ಕಾಲ್ತುಳಿತ ಪ್ರಕರಣ: ತಜ್ಞರ ಸಮಿತಿಯಿಂದ ತನಿಖೆ

- Advertisement -
- Advertisement -

ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (CUSAT )ನಲ್ಲಿ ಶನಿವಾರ ನಡೆದ ಓಪನ್ ಏರ್ ‘ಟೆಕ್‌ ಫೆಸ್ಟ್‌’ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು ಮತ್ತು 64 ಮಂದಿಗೆ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ತಜ್ಞರ ಸಮಿತಿ ರಚನೆ ಮಾಡುವುದಾಗಿ ಸಚಿವೆ ಆರ್.ಬಿಂದು ಹೇಳಿದ್ದಾರೆ.

ಕೇರಳದ ಉನ್ನತ ಶಿಕ್ಷಣ ಸಚಿವರಾದ ಆರ್.ಬಿಂದು ಈ ಕುರಿತು ಮಾತನಾಡಿದ್ದು, ಕೇರಳ ಸರ್ಕಾರವು ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲು ತೀರ್ಮಾನಿಸಿದೆ. ಮೂವರು ಸದಸ್ಯರ ಸಮಿತಿಯಲ್ಲಿ ತಾಂತ್ರಿಕ ತಜ್ಞರನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶನಿವಾರ ಸಂಜೆ ಕಾಲ್ತುಳಿತದಲ್ಲಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಇನ್ನು ಕೂಡ ಚಿಂತಾಜನಕವಾಗಿದೆ. ಸುಮಾರು 40 ವಿದ್ಯಾರ್ಥಿಗಳು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆಯ ನಂತರ ಮನೆಗಳಿಗೆ ವಾಪಾಸ್ಸಾಗಿದ್ದಾರೆ. CUSAT ವಿವಿಯ ಮೂವರು ವಿದ್ಯಾರ್ಥಿಗಳ ಮೃತದೇಹಗಳನ್ನು ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಮೃತದೇಹಗಳನ್ನು ಊರಿಗೆ ರವಾನಿಸಲಾಗಿದೆ.

ಮೃತರನ್ನು ಅತುಲ್ ತಂಬಿ, ಆನ್ ರುಫ್ತಾ, ಸಾರಾ ಥಾಮಸ್ ಮತ್ತು ಅಲ್ವಿನ್ ಜೋಸೆಫ್ ಎಂದು ಗುರುತಿಸಲಾಗಿದೆ. ಅಲ್ವಿನ್ ಹೊರತುಪಡಿಸಿ ಉಳಿದ ಮೂವರು CUSAT ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು.

ಕಾರ್ಯಕ್ರಮದ ಆಯೋಜಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಸಂಗೀತ ಕಾರ್ಯಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಎ ಅಕ್ಬರ್ ಹೇಳಿದ್ದಾರೆ.

ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಳೆಯಿಂದಾಗಿ ವಿದ್ಯಾರ್ಥಿಗಳು ಓಡಿ ಬಂದಾಗ ಒಂದು ಗೇಟ್ ಮೂಲಕ ಮಾತ್ರ ಪ್ರವೇಶಕ್ಕೆ ಅನುಮತಿಸಿರುವುದು ನೂಕು ನುಗ್ಗಲಿಗೆ ಕಾರಣವಾಗಿದೆ ಮತ್ತು ಸಮಸ್ಯೆಯನ್ನು ಉಲ್ಬಣಗೊಳಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

CUSAT ವಿವಿ ಆಯೋಜಿಸಿದ ವಾರ್ಷಿಕ ಟೆಕ್ ಉತ್ಸವದ ಎರಡನೇ ದಿನವಾದ ನಿನ್ನೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭಾಂಗಣ ಭಾಗಶಃ ತುಂಬಿತ್ತು. ಈ ವೇಳೆ ಹಠಾತ್ತನೆ ಮಳೆ ಸುರಿದಿದ್ದರಿಂದ ನೆರೆದಿದ್ದ ವಿದ್ಯಾರ್ಥಿಗಳು ಆಶ್ರಯ ಪಡೆಯಲು ಸಭಾಂಗಣದತ್ತ ಓಡಲಾರಂಭಿಸಿದರು. ಈ ವೇಳೆ ನೂಕು ನುಗ್ಗಲು ಸಂಭವಿಸಿ ದುರಂತ ಉಂಟಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ತುರ್ತು ಸಂಪುಟ ಸಭೆ ಕರೆದು ದುರಂತದ ಬಗ್ಗೆ ಮಾಹಿತಿ ಪಡೆದಿದ್ದರು.

ಇದನ್ನು ಓದಿ: ಕೊಚ್ಚಿ: ‘ಟೆಕ್‌ ಫೆಸ್ಟ್‌’ನಲ್ಲಿ ಕಾಲ್ತುಳಿತ; ನಾಲ್ವರು ವಿದ್ಯಾರ್ಥಿಗಳು ಸಾವು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read