ಮಾರಿ ದೇವತೆಯನ್ನು ತಲೆಯ ಹೊತ್ತು, ಬೀದಿಬೀದಿಯಲ್ಲಿ ಸಾಗುತ್ತಾ, ಅರೆ ಬಾರಿಸುತ್ತಾ, ಮೈಗೆ ಚಾಟಿಯೇಟು ಹೊಡೆದುಕೊಳ್ಳುತ್ತಾ, ದೇಹವನ್ನು ಘಾಸಿಗೊಳಿಸಿಕೊಂಡು ಭಿಕ್ಷಾಟನೆ ಮಾಡುವ ಅಲೆಮಾರಿ ಸಮುದಾಯ ‘ಸಿಂಧೋಳ’.
ರಾಜ್ಯದಲ್ಲಿ ಈ ಜನಾಂಗದವರು ಹೆಚ್ಚು ಸಂಖ್ಯೆಯಲ್ಲೇನೂ ಇಲ್ಲ. ಅಲ್ಲಲ್ಲಿ ಬಿಡಾರಗಳನ್ನು ಹಾಕಿಕೊಂಡು ಹೊಟ್ಟೆಪಾಡು ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಕೂಲಿಕಾರರಾಗಿಯೂ ದುಡಿಯುತ್ತಿದ್ದಾರೆ. ಬೇಟೆಯಾಡಿ ಬದುಕುವುದಕ್ಕೆ ಅರಣ್ಯ ಇಲಾಖೆಯವರು ಬಿಡದೇ ಇರುವುದರಿಂದ ಆಹಾರ ಅಭ್ರತೆಯನ್ನೂ ಎದರಿಸುತ್ತಿದ್ದಾರೆ. ಸ್ವಂತ ಮನೆಗಳಿಲ್ಲ, ಜಮೀನಿಲ್ಲ, ಸರ್ಕಾರ ಉದ್ಯೋಗ ಪಡೆದವರ ದಾಖಲೆಯೂ ಇಲ್ಲ. ಇಂತಹ ಸಮುದಾಯಗಳನ್ನು ಅಧಿಕಾರ ವರ್ಗ ಅಷ್ಟಾಗಿ ಗಮನಿಸುವುದೂ ಇಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಸಿಂಧೋಳ ಜನಾಂಗದ ಸುಮಾರು 40 ಕುಟುಂಬಗಳು ಹಲವು ವರ್ಷಗಳಿಂದ ಕೃಷಿ ಇಲಾಖೆಯ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ವಾಸವಿದ್ದವು. ಈ ಜಾಗದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ಇಲಾಖೆ ಮುಂದಾಯಿತು. ಜಾಗ ಖಾಲಿ ಮಾಡುವಂತೆ ಸಿಂಧೋಳರಿಗೆ ಮೂರ್ನಾಲ್ಕು ಭಾರಿ ಸೂಚನೆಯನ್ನೂ ನೀಡಿತು. ಆದರೆ ಹೋಗುವುದೆಲ್ಲಿಗೆ?
ಇದನ್ನೂ ಓದಿರಿ: ರಾಜಸ್ಥಾನ: ಮದ್ಯಪಾನ ಮಾಡಲು ನಿರಾಕರಿಸಿದ ಬುಡಕಟ್ಟು ಯುವಕನ ಮೇಲೆ ಅಮಾನುಷ ಹಲ್ಲೆ
ಜಾಗ ಖಾಲಿ ಮಾಡಿಸಲು ಹೀಗೆ ಸೂಚನೆ ನೀಡುತ್ತಿದ್ದಾರೆಂದು ಭಾವಿಸಿದ ಸಿಂಧೋಳರು ಅಲ್ಲಿಯೇ ಉಳಿದರು. ಆದರೆ ಕಳೆದ ಜೂನ್ 18ರಂದು ಪೊಲೀಸರೊಂದಿಗೆ ಬಂದ ಕೃಷಿ ಅಧಿಕಾರಿಗಳು ಅಲೆಮಾರಿಗಳ ಗುಡಿಸಲುಗಳನ್ನು ಕಿತ್ತೊಗೆದರು. ಕನಿಷ್ಠ ಮಾನವೀಯತೆಯನ್ನೂ ತೋರದೆ ಗುಡಿಸಲುಗಳನ್ನು ಕೆಡವಿದರು. ಇದರ ಜೊತೆಗೆ ಮಳೆಯೂ ಸುರಿಯುತ್ತಿತ್ತು. “ಒಂದೆರಡು ದಿನ ಸಮಯ ಕೊಡಿ. ಬೇರೆಡೆ ತೆರಳುತ್ತೇವೆ” ಎಂದು ಅಲೆಮಾರಿಗಳು ಅಂಗಲಾಚಿದರು. ಆದರೆ ಅದಕ್ಕೆ ಪೊಲೀಸರು ಆಸ್ಪದ ನೀಡಲಿಲ್ಲ.
ಘಟನೆಯ ಕುರಿತು ‘ನಾನುಗೌರಿ.ಕಾಂ’ಗೆ ಮಾಹಿತಿ ನೀಡಿದ ಅಲೆಮಾರಿ ಬುಡಕಟ್ಟು ಮಹಾಸಭಾದ ವೀರೇಶ್, “ಇಲ್ಲಿನ ಸಿಂಧೋಳರಲ್ಲಿ ನಾಲ್ಕೈದು ಗರ್ಭಿಣಿಯರಿದ್ದು, ಹೆರಿಗೆಯ ದಿನಗಳನ್ನು ಎಣಿಸುತ್ತಿದ್ದಾರೆ. ವಯಸ್ಸಾದವರು, ಅಂಗವಿಕಲ ಮಕ್ಕಳೂ ಇದ್ದಾರೆ. ಪೊಲೀಸರು ರೈಡ್ ಮಾಡಿದಾಗ ಬಿಡಾರದ ವಸ್ತುಗಳು ಹಾನಿಗೊಳಗಾದ ಕಾರಣ ಮತ್ತೆ ಗುಡಿಸಲುಗಳನ್ನು ಕಟ್ಟಿಕೊಳ್ಳಲೂ ಆಗುತ್ತಿಲ್ಲ. ಜೇಬಿನಲ್ಲಿ ಹಣವೂ ಇಲ್ಲ. ಆಹಾರ ಧಾನ್ಯಗಳನ್ನು ಪೊಲೀಸರು ಮಳೆಗೆ ಬೀಸಾಡಿದ್ದರಿಂದ ಆಹಾರದ ಅಭಾವವೂ ಉಂಟಾಗಿದೆ. ಹಳ್ಳಿಗಳಿಗೆ ಹೋಗಿ ಭಿಕ್ಷಾಟನೆ ಮಾಡಲೂ ಸಾಧ್ಯವಾಗುತ್ತಿಲ್ಲ. ಅನೇಕರು ಉಪವಾಸವಿರುವುದಾಗಿ ಹೇಳಿದ್ದಾರೆ” ಎಂದು ಮಾಹಿತಿ ನೀಡಿದರು.
ಇಷ್ಟೆಲ್ಲ ಆದ ಮೇಲೆ ರಟ್ಟಿಹಳ್ಳಿ ತಾಲ್ಲೂಕು ಆಡಳಿತ ಕ್ರಮ ವಹಿಸಲು ಮುಂದಾಯಿತು. ಮೂರು ಕಿಮೀ ದೂರದಲ್ಲಿನ ಖಾಲಿ ಜಾಗದಲ್ಲಿ ತಂಗಲು ಸೂಚಿಸಿತು. ಆ ಜಾಗವಾದರೂ ತಗ್ಗು ಹಾಗೂ ಕಸದಿಂದ ಕೂಡಿದೆ. ಮಳೆ ಬಂದರೆ ಈ ಪ್ರದೇಶಕ್ಕೆ ನೀರು ನುಗ್ಗುತ್ತದೆ. ತಾತ್ಕಾಲಿಕವಾಗಿ ಪಕ್ಕದ ಬೋರ್‌ವೆಲ್‌ನಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕವನ್ನೇನೋ ಕಲ್ಪಿಸಿದ್ದಾರೆ.
“ಬೇರೆ ಕಡೆ ಜಾಗ ಮಾಡಿಕೊಡುತ್ತೇವೆ. ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಸದಸ್ಯರಿಲ್ಲ. ಚುನಾಯಿತ ಸದಸ್ಯರು ಬಂದ ತಕ್ಷಣವೇ ಮೊದಲ ಅಜೆಂಡಾದಲ್ಲೇ ಸಿಂಧೋಳರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದೆಲ್ಲ ಸಾಧ್ಯವಾಗುವುದು ಯಾವಾಗ ಎಂಬ ಸ್ಪಷ್ಟತೆ ಇಲ್ಲ. ಸದ್ಯಕ್ಕೆ ಸಮುದಾಯ ಅತಂತ್ರವಾಗಿದೆ” ಎನ್ನುತ್ತಾರೆ ವೀರೇಶ್.
ಶಾಶ್ವತ ಪರಿಹಾರಕ್ಕೆ ಸಿಂಧೋಳರ ಮನವಿ
“ತಾತ್ಕಾಲಿಕ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸದರಿ ಜಾಗದಲ್ಲಿ ಗುಡಿಸಲು ನಿರ್ಮಿಸುತ್ತಿದ್ದೇವೆ. ನಮಗೆ ಸ್ವಂತ ನಿವೇಶನಗಳಿಲ್ಲ, ಮನೆಗಳಿಲ್ಲ. ಜೀವನ ನಡೆಸುವುದು ಕಷ್ಟವಾಗಿದೆ. ಈಗ ನೀಡಿರುವ ಜಾಗವು ತಗ್ಗುಪ್ರದೇಶದಿಂದ ಕೂಡಿದೆ. ಮಳೆ ಬಂದರೆ ನೀರು ನುಗ್ಗುತ್ತದೆ. ಕಸದ ರಾಶಿ ಈ ಜಾಗದಲ್ಲಿದೆ. ಹೀಗಾಗಿ ಕಸವನ್ನು ತೆರವುಗೊಳಿಸಿ ತಗ್ಗು ಪ್ರದೇಶವನ್ನು ಸಮತಟ್ಟು ಮಾಡಬೇಕು. ಎಲ್ಲ ಕುಟುಂಬಗಳಿಗೆ ತಾತ್ಕಾಲಿಕ ಹಕ್ಕು ಪತ್ರ ನೀಡಬೇಕು. ವಸತಿ ಸೌಲಭ್ಯ ಕಲ್ಪಿಸಬೇಕು. ಶಾಶ್ವತ ವಿದ್ಯುತ್, ಕುಡಿಯುವ ನೀರು, ಗಟಾರ ಹಾಗೂ ಅಂಗನವಾಡಿ ವ್ಯವಸ್ಥೆ ಕಲ್ಪಿಸಬೇಕು”- ಇತ್ಯಾದಿ ಬೇಡಿಕೆಗಳನ್ನು ಸಿಂಧೋಳರು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಇದನ್ನೂ ಓದಿರಿ: ವಿಚಾರಣೆಯಿಲ್ಲದೆ 2 ವರ್ಷ ಜೈಲಿನಲ್ಲೇ ಕಳೆದ ಬುಡಕಟ್ಟು ಯುವತಿ!
ಸಮುದಾಯದ ಬೇಡಿಕೆಯನ್ನು ಉಲ್ಲೇಖಿಸಿ ಹಿರೇಕೆರೂರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹಬೂಬಸಾಬ್ ಪ. ನದಾಫ್ ಅವರು, ಇಲಾಖೆಯ ಉಪ ನಿರ್ದೇಶರಿಗೆ, ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಮೇಲಧಿಕಾರಿಗಳು ಹೆಚ್ಚಿನ ಕ್ರಮ ವಹಿಸುವ ತುರ್ತು ಎದುರಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಸಿಂಧೋಳ ಜನರು ಅಸ್ಪೃಶ್ಯರಲ್ಲೇ ಅಸ್ಪೃಶ್ಯರು. ಕಟ್ಟಕಡೆಯ ಸಮುದಾಯ ಎಂದರೂ ತಪ್ಪಾಗದು. ಇಡೀ ಕರ್ನಾಟಕದಲ್ಲಿ ಸುಮಾರು 10ರಿಂದ 15 ಸಾವಿರ ಜನರು ಈ ಸಮುದಾಯದಲ್ಲಿರಬಹುದು. ಆದರೆ ಯಾವುದೇ ಸರ್ಕಾರವಿದ್ದಾಗಲೂ ಸಿಂಧೋಳರ ಅಭಿವೃದ್ಧಿಗೆ ಕ್ರಮ ವಹಿಸಲಿಲ್ಲ. ಈ ಜನರು ಹಸಿವಿನಿಂದ ನರಳುವಾಗ ಅಧಿಕಾರಸ್ಥರು ಯೋಗದ ವಿಜೃಂಭಣೆಯಲ್ಲಿ ಮುಳುಗಿದ್ದಾರೆ. ಹಸಿದ ಜನರ ಮುಂದೆ ಮಾನವೀಯತೆಗಾಗಿ ಯೋಗ ಮಾಡುತ್ತಾರಂತೆ” ಎಂದು ವಿಷಾದಿಸಿದರು.