ಹಿಜಾಬ್ ಧರಿಸುವುದರಿಮದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಿಲ್ಲ ಅಥವಾ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವುದಿಲ್ಲ ಎಂದು ಹಿರಿಯ ವಕೀಲ ದುಶ್ಯಂತ್ ದವೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರವಾಗಿ ಅವರು ವಾದ ಪೂರ್ಣಗೊಳಿಸಿದ್ದಾರೆ.
ಹಿಜಾಬ್ ಮುಸ್ಲಿಂ ಮಹಿಳೆಯರ ಘನತೆಯನ್ನು ಹೆಚ್ಚಿಸುತ್ತದೆ, ಸಂವಿಧಾನದ 19 ಮತ್ತು 21 ನೇ ಪರಿಚ್ಛೇದದ ಅಡಿಯಲ್ಲಿ ಸಂರಕ್ಷಿತ ಹಕ್ಕನ್ನು ಹೊಂದಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದರ ಕಾನೂನುಬದ್ಧತೆಯನ್ನು ಪರೀಕ್ಷಿಸುವಲ್ಲಿ ಹೈಕೋರ್ಟ್ ತಪ್ಪಾಗಿ ಗ್ರಹಿಸಿದೆ ಎಂದು ಅವರು ವಾದಿಸಿದ್ದಾರೆ.
ಕರ್ನಾಟಕ ಹೈಕೋರ್ಟ್‌ನ ತೀರ್ಪು ಸಂಪೂರ್ಣವಾಗಿ ಸಮರ್ಥನೀಯವಲ್ಲ. ಏಕೆಂದರೆ ದೋಷಾರೋಪಣೆ ಮಾಡಲಾದ ಸರ್ಕಾರದ ಸುತ್ತೋಲೆಯು ಅಸಾಂವಿಧಾನಿಕ, ಕಾನೂನುಬಾಹಿರ ಮತ್ತು ಕಾನೂನು ದುರುದ್ದೇಶದಿಂದ ಕೂಡಿದೆ ಮತ್ತು ಸಂವಿಧಾನದ 14, 19, 21 ಮತ್ತು 25 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ದವೆ ವಾದಿಸಿದರು.
ಧಾರ್ಮಿಕ ಆಚರಣೆಯನ್ನು ಮುಸ್ಲಿಂ ಸಮುದಾಯವು ತನ್ನ ಧಾರ್ಮಿಕ ನಂಬಿಕೆಯ ಭಾಗವಾಗಿ ಆಚರಿಸುತ್ತದೆ. ಸಾಂಪ್ರದಾಯಿಕವಾಗಿ ಒಬ್ಬ ವ್ಯಕ್ತಿಯು ಗೌರವಾನ್ವಿತ ಸ್ಥಳಕ್ಕೆ ಹೋದಾಗ, ಅವನು ಅಥವಾ ಅವಳು ತಮ್ಮ ತಲೆಯನ್ನು ಮುಚ್ಚಿಕೊಳ್ಳುತ್ತಾರೆ. ನಮ್ಮ ಪ್ರಧಾನ ಮಂತ್ರಿಗಳು ಸಹ ಆಗಸ್ಟ್ 15 ರಂದು ತಮ್ಮ ತಲೆಗೆ ಪೇಟ ಧರಿಸುತ್ತಾರೆ. ಶಾಲೆಯು ಅತ್ಯಂತ ಗೌರವಾನ್ವಿತ ಸ್ಥಳವಾಗಿದೆ ಮತ್ತು ಪೂಜಾ ಸ್ಥಳವಾಗಿದೆ ಎಂಬುದನ್ನು ಪೀಠ ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್‌ಗೆ ಅವಕಾಶವಿಲ್ಲದೆ ಮಂಗಳೂರು ವಿವಿಯ ಶೇ.16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಡ್ರಾಪ್‌ಔಟ್
ಕರ್ನಾಟಕ ರಾಜ್ಯದ ಅಧಿಕಾರಿಗಳ ಲೋಪದಿಂದಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುವ ಮಾದರಿಯನ್ನು ತೋರಿಸಿವೆ. ಹಿಜಾಬ್ ಮುಸ್ಲಿಮರ ಅಸ್ಮಿತೆಯ ಸಂಕೇತವಾಗಿದೆ. ಅದನ್ನು ನಿಷೇಧಿಸುವ ಮೂಲಕ ಅವರನ್ನು ಮತ್ತೆ ಕಡೆಗಣಿಸಲಾಗುತ್ತಿದೆ ಎಂದು ದುಶ್ಯಂತ್ ದವೆಯವರು ತಮ್ಮ ವಾದವನ್ನು ಪೂರ್ಣಗೊಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಎಂಟು ದಿನಗಳ ಕಾಲ ಅರ್ಜಿದಾರರ ವಾದ ಆಲಿಸಿದೆ. ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮುಂದುವರೆಸಿದ್ದಾರೆ.
ಇದನ್ನೂ ಓದಿ; ಹಿಜಾಬ್ ವಿವಾದದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು ಸಾಮಾಜಿಕ ಪ್ರತ್ಯೇಕತೆ ಅನುಭವಿಸುತ್ತಿದ್ದಾರೆ: ಪಿಯುಸಿಎಲ್ ವರದಿ