Homeಕರ್ನಾಟಕಹಿಜಾಬಿಗೆ ಡಿಯರ್ ಮೀಡಿಯಾದ 5W -1H ಜವಾಬ್

ಹಿಜಾಬಿಗೆ ಡಿಯರ್ ಮೀಡಿಯಾದ 5W -1H ಜವಾಬ್

- Advertisement -
- Advertisement -

ಸಾಮಾನ್ಯವಾಗಿ ರಣಹದ್ದುಗಳು ಆಕಾಶದಲ್ಲಿ ಹಾರಾಡುತ್ತಿವೆ ಎಂದರೆ, ಅಲ್ಲಿ ಕೆಳಗೆ ನೆಲದಲ್ಲಿ ಯುದ್ಧಭೂಮಿ ಇರಬಹುದು, ಹೆಣಗಳ ರಾಶಿ ಬಿದ್ದಿರಬಹುದು ಎಂಬ ಯೋಚನೆ ಬರುವುದು ಸಹಜ. ಆದರೆ, ಯುದ್ಧ ಸಂಭವಿಸಬಹುದು ಮತ್ತು ಅಲ್ಲಿ ಹೆಣಗಳ ರಾಶಿ ಬಿದ್ದು ತಮಗೆ ಮೃಷ್ಟಾನ್ನ ಭೋಜನ ಸಿಗಬಹುದೆಂಬ ನಿರೀಕ್ಷೆಯಲ್ಲಿ ರಣಹದ್ದುಗಳು ಹಾರಾಡತೊಡಗಿವೆ ಎಂದರೆ, ಅದನ್ನು ಹೇಗೆ ಪರಿಗಣಿಸಬೇಕು?

“ಡಿಯರ್_ಮೀಡಿಯಾ” ರಣಹದ್ದುಗಳು ಹೀಗೆ ಉಡುಪಿಯ ಆಕಾಶದಲ್ಲಿ ಕಳೆದೊಂದು ತಿಂಗಳಿನಿಂದ ಭೋಜನದ ನಿರೀಕ್ಷೆಯಲ್ಲಿ ಹಾರಾಟ ನಡೆಸುತ್ತಿವೆ ಎಂದರೆ, ಬೇರಿನ್ನಾರದೋ “ಸ್ಕ್ರಿಪ್ಟ್” ಆಧರಿಸಿಯೇ ಈ ಹಾರಾಟ ನಡೆಯುತ್ತಿದೆ ಎಂಬ ತೀರ್ಮಾನಕ್ಕೆ ನೇರವಾಗಿ ಬಂದುಬಿಡಬಹುದು. ಯಾಕೆಂದರೆ, ಈ ರೀತಿ, ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಆಧರಿಸಿ ರಣಹದ್ದುಗಳ ಹಾರಾಟ ನಡೆದಿರುವುದು ಕರಾವಳಿಯಲ್ಲಿ ಇದೇ ಮೊದಲೇನಲ್ಲ.

ಕರ್ನಾಟಕದಲ್ಲಿ ಸಾಮಾನ್ಯವಾಗಿ, ಒಂದು ವಿಧಾನಸಭಾ ಚುನಾವಣೆಗೆ ರನ್‌ಅಪ್ ಶುರುವಾಗುವುದು ಸುಮಾರು ಒಂದು-ಒಂದೂವರೆ ವರ್ಷಗಳ ಮೊದಲು. ಜನರ ಪರವಾದ, ಅಭಿವೃದ್ಧಿಯ, ಆಡಳಿತ ಸಂಬಂಧಿ ವಿಚಾರಗಳಿಲ್ಲದಿದ್ದಾಗ ಓಟು ಬ್ಯಾಂಕಿನ ನೆಲ ಹದಗೊಳಿಸಿ, ಭಾವನೆಯ ಬೀಜಗಳನ್ನು ಬಿತ್ತಿ, ಮತದ ಬೆಳೆ ತೆಗೆಯುವುದಕ್ಕೆ ಅಂದಾಜು ಅಷ್ಟು ಸಮಯ ಬೇಕಾಗುತ್ತದೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನಿಸಿ. ಚುನಾವಣೆಗೆ ಏಳು ತಿಂಗಳ ಮೊದಲು 2017ರ ಅಕ್ಟೋಬರ್ ಕೊನೆಯ ವಾರದಲ್ಲಿ ಅಂದಿನ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರಾವಳಿ ಪ್ರವಾಸದಲ್ಲಿದ್ದರು. ಅವರು, ತಮ್ಮ ಸಂಪುಟ ಸಹೋದ್ಯೋಗಿ ರಮಾನಾಥ ರೈ ಅವರ ಮನೆಯಲ್ಲಿ ಆಹಾರ ಸೇವಿಸಿ, ಅಲ್ಲಿಂದ ಧರ್ಮಸ್ಥಳಕ್ಕೆ ಭೇಟಿ ನೀಡುವುದಿತ್ತು. ಸಿದ್ದರಾಮಯ್ಯನವರ ಬಟ್ಟಲು ಆಕಾಶದಲ್ಲಿ ಸುಳಿದಾಡುತ್ತಿದ್ದ ರಣಹದ್ದುಗಳಿಗೆ ಕಾಣಿಸಿಬಿಟ್ಟಿತು. ಸಿದ್ದರಾಮಯ್ಯನವರು ಮೀನು ತಿಂದಿದ್ದಾರೆ ಮತ್ತು ಮೀನು ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂಬ ಗುಲ್ಲು ರಣಹದ್ದುಗಳ ಮೂಲಕ ಎದ್ದಿತು. ಸಿದ್ದರಾಮಯ್ಯನವರು ತಮ್ಮ ಎಂದಿನ ಶೈಲಿಯಲ್ಲಿ “ಮೀನು ಮಾತ್ರ ಅಲ್ಲ, ಕೋಳಿನೂ ತಿಂದಿದ್ದೇನೆ” ಎಂದುಬಿಟ್ಟರು. ರಣಹದ್ದುಗಳಿಗೆ ಸಿದ್ದರಾಮಯ್ಯನವರು ತಿಂದುಬಿಟ್ಟದ್ದು ಮೃಷ್ಟಾನ್ನಭೋಜನವಾಯಿತು, ರಣಹದ್ದುಗಳು ಸೃಷ್ಟಿಸಿದ ಈ ವಿವಾದ ಮುಂದೆ ಏನೇನು ಮಾಡಿತು ಎಂಬುದು ಈಗ ಇತಿಹಾಸ.

ಅದಕ್ಕಿಂತಲೂ ಹಿಂದಿನ ವರ್ಷಗಳಲ್ಲಿ ಜನಾರ್ದನ ಪೂಜಾರಿ ಅವರನ್ನು ಒಳಗೊಂಡ ವಿವಾದ, ಆ ಬಳಿಕ 2008ರ ಮಂಗಳೂರು ಚರ್ಚ್ ದಾಳಿ, ಪಕ್ಷಗಳ ಕಾರ್ಯಕರ್ತರ ಕೊಲೆ ಪ್ರಕರಣಗಳು ವಿವಾದಗಳಾಗಿ ಭುಗಿಲೆದ್ದದ್ದುಹೀ॒ಗೆ ಕೋಮುವಾರು-ಜಾತಿವಾರು ಭಾವನೆಗಳನ್ನು ಕೆರಳಿಸಿದ ಘಟನೆಗಳನ್ನೆಲ್ಲ, ಆ ಘಟನೆಗಳು ನಡೆದ ದಿನಾಂಕ ಮತ್ತು ಅಲ್ಲಿಂದ ವಿಧಾನಸಭೆ/ಲೋಕಸಭೆ ಚುನಾವಣೆಗಿದ್ದ ದೂರವನ್ನು ಮತ್ತೊಮ್ಮೆ ನೋಡಿ. ಜೊತೆಗೆ ಈ ಎಲ್ಲ ಘಟನೆಗಳಲ್ಲಿ ಮಾಧ್ಯಮಗಳ ಪಾತ್ರವನ್ನೂ ಒಮ್ಮೆ ಗಮನಿಸಿ. ನಿಮಗೆ ಒಂದು ಸ್ಪಷ್ಟವಾದ ಪ್ಯಾಟರ್ನ್ ಕಾಣಿಸದಿದ್ದರೆ ಮತ್ತೆ ಹೇಳಿ.

ಸಮವಸ್ತ್ರ ವಿವಾದ

30-40ವರ್ಷಗಳ ಹಿಂದೆ ಕರಾವಳಿ ಎಂದರೆ ವಿವಿಧ ಜಾತಿ-ಧರ್ಮಗಳ ಜನ ಒಟ್ಟಾಗಿ ಬದುಕುವ ಜಾಗವಾಗಿತ್ತು. ಒಂದೇ ವಠಾರದಲ್ಲಿ ಒಂದು ಬ್ರಾಹ್ಮಣ, ಒಂದು ಕೊಂಕಣಿ, ಒಂದು ಕ್ರಿಶ್ಚಿಯನ್, ಒಂದು ಮುಸ್ಲಿಂ, ಒಂದು ಜೈನ, ಒಂದು ಬಂಟ, ಒಂದು ಬಿಲ್ಲವ ಕುಟುಂಬ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳುವ ವಾತಾವರಣ ಇತ್ತು. ಆದರೆ ಕೈಗಾರಿಕೀಕರಣ ಮತ್ತು ಅದು ತನ್ನೊಂದಿಗೆ ತಂದ ಜನವಸತಿಯ ಸ್ಥಳಾಂತರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಧರ್ಮವಾರು ಕಾಲೊನಿಗಳ ನಿರ್ಮಾಣಕ್ಕೆ ದಾರಿ ತೆರೆದದ್ದು ಮತ್ತು ಈ ಬದಲಾವಣೆಯ ಫಲವಾಗಿ ಕಾಣಿಸಿಕೊಂಡ ಆರ್ಥಿಕ-ಸಾಮಾಜಿಕ-ರಾಜಕೀಯ ಪಲ್ಲಟಗಳು ನಿಧಾನಕ್ಕೆ ಇಲ್ಲಿ ಕೋಮುವಾದದ ಬೆಳೆ ಹುಲುಸಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟದ್ದು, ಈಗ ಹಿಂದಿರುಗಿ ನೋಡಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ.

ಉಡುಪಿಯಲ್ಲಿ ಎದ್ದಿರುವ ಸಮವಸ್ತ್ರ ವಿವಾದ ಕೂಡ ಒಂದು ಪೂರ್ವ ನಿರ್ಧರಿತ ವಿನ್ಯಾಸದ ಭಾಗ ಎಂಬುದಕ್ಕೆ ಯಾವುದೇ ಸಂಶಯ ಬೇಡ. ಕರಾವಳಿಯ ಸರ್ಕಾರಿ-ಖಾಸಗಿ ಶಾಲೆಗಳಲ್ಲಿ ಶುಕ್ರವಾರದ ಭಜನೆ, ಸರಸ್ವತೀ ಪೂಜೆ, ಇಗರ್ಜಿ ಶಾಲೆಗಳಲ್ಲಿ ನಡೆಯುತ್ತಿದ್ದ ಮಾಸ್‌ಗಳು, ಕ್ರಿಸ್ಮಸ್ ಸಂಭ್ರಮ, ಸಹಪಾಠಿಗಳ ರಂಜಾನ್ ಉಪವಾಸ – ಇವು ಯಾವುವೂ ಕೂಡ ಯಾರಿಗೂ ಯಾವತ್ತೂ ಸಮಸ್ಯೆ ಆದದ್ದಿಲ್ಲ, ಇದರಲ್ಲಿ ಯಾವುದು ಸಾಂವಿಧಾನಿಕ ಯಾವುದು ಅಸಾಂವಿಧಾನಿಕ ಎಂಬ ಚರ್ಚೆ ಆದದ್ದಿಲ್ಲ. ಸಣ್ಣಪುಟ್ಟ ಸಂಗತಿಗಳೇನಾದರೂ ಇದ್ದರೂ ಅದು ತರಗತಿಯ ಶಿಕ್ಷಕರ ಮಟ್ಟದಲ್ಲಿ ಅಥವಾ ಅಬ್ಬಬ್ಬಾ ಎಂದರೆ ಪ್ರಿನ್ಸಿಪಾಲರ ಮಟ್ಟದಲ್ಲಿ ಬಗೆಹರಿಯುತ್ತಿತ್ತು.

70ರ ದಶಕದ ಮಧ್ಯ ಭಾಗದಲ್ಲಿ ಇಲ್ಲಿ ವಿದ್ಯಾರ್ಥಿ ರಾಜಕೀಯ ಸಂಘಟನೆಗಳು ಚುರುಕಾಗತೊಡಗಿದಾಗಲೂ, ಅವು ಆಯಾಯ ಕಾಲೇಜುಗಳಲ್ಲಿರುವ ಉಪನ್ಯಾಸಕ ವರ್ಗದ ರಾಜಕೀಯ ಹಿತಾಸಕ್ತಿಗಳ ಮೂಗಿನ ನೇರಕ್ಕೆ ಸರಿಯಾಗಿ ನಿಗದಿಯಾಗುತ್ತಿದ್ದವು ಮತ್ತು ಅವರವರ ಅಜೆಂಡಾಗಳನ್ನು ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ತರುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದ್ದುದಿತ್ತು. ಈ ಅಜೆಂಡಾಗಳು ಕೂಡ ಆಗೆಲ್ಲ ತಮ್ಮದಲ್ಲದ್ದರ ಕುರಿತು ಅಸಹನೆ ಹೊಂದಿರಲಿಲ್ಲ – ಹೊಂದಿದ್ದರೂ ಅದನ್ನು ಬಹಿರಂಗವಾಗಿ ತೋರಿಸುತ್ತಿರಲಿಲ್ಲ. ತೀರಾ ಇತ್ತೀಚೆಗಿನವರೆಗೂ ಇದು ಹೀಗೆಯೇ ಇತ್ತು.

ಇಲ್ಲಿನ ವಿದ್ಯಾರ್ಥಿ ರಾಜಕೀಯ ಸಂಘಟನೆಗಳು ವಿದ್ಯಾರ್ಥಿಗಳ ರಾಜಕೀಯ ನಿಲುವುಗಳನ್ನು
ಆಧರಿಸಿದ್ದು ಅಲ್ಲವೇ ಅಲ್ಲ. ಅದರಲ್ಲೂ ಪ್ರಿಯೂನಿವರ್ಸಿಟಿ ಮಟ್ಟದಲ್ಲಂತೂ ಇದು ಬಹುತೇಕ ಅಸಾಧ್ಯ. ಇಲ್ಲಿ ಏನಿದ್ದರೂ ಆಯಾ ಕಾಲೇಜಿನ ಉಪನ್ಯಾಸಕ ವರ್ಗದವರದೇ ಮೇಲಾಟ. 70ರ ದಶಕದಲ್ಲಿ ಕ್ಯಾರಿ ಓವರ್, ಕ್ಯಾಪಿಟೇಷನ್ ಶುಲ್ಕ, ಬಸ್ ದರ ಏರಿಕೆ ಎಂದು ವಿದ್ಯಾರ್ಥಿ ಮುಷ್ಕರಗಳು, ಗದ್ದಲಗಳು ನಡೆದಾಗಲೂ ಅದರ ಹಿಂದಿರುವ “ಉಪನ್ಯಾಸಕ ಶಕ್ತಿ”ಗಳನ್ನು ನೆರಳು ರೂಪದಲ್ಲಿಯಾದರೂ ಗುರುತಿಸುವುದು ಸಾಧ್ಯವಿತ್ತು. ಹಾಗಾಗಿ ಇಲ್ಲಿಯ ತನಕವೂ ವಿದ್ಯಾರ್ಥಿಗಳ ಮಟ್ಟದಲ್ಲಿ ರಾಜಕೀಯ ಸಂಚಲನ ಇಲ್ಲಿ ನಡೆದದ್ದಿಲ್ಲ. ಮಾಧ್ಯಮಗಳಿಗೂ ಇದು ಗೊತ್ತಿಲ್ಲದ ಸಂಗತಿಯೇನಲ್ಲ.

ಉಡುಪಿಯ ಹೆಣ್ಣುಮಕ್ಕಳ ಜೂನಿಯರ್ ಕಾಲೇಜಿನಲ್ಲಿ ಈ ವರ್ಷ ಜನವರಿ ಮೊದಲ ವಾರದಲ್ಲಿ ಹಿಜಾಬ್ ಧರಿಸಿ ಬರುವ ಬಾಲಕಿಯರಿಗೆ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಿದ್ದು, ಅವರು ತರಗತಿಯಿಂದ ಹೊರಗೆ ನಿಂತದ್ದು, ಕಡೆಗೆ ಈ ವಿವಾದ ಆ ಶಾಲೆಯಿಂದ ಬೇರೆ ಶಾಲೆಗಳಿಗೆ ಹಬ್ಬಿದ್ದು, ರಾಜ್ಯದಾದ್ಯಂತ ಸುದ್ದಿಯಾದದ್ದು, ನ್ಯಾಯಾಲಯದ ಬಾಗಿಲು ತಟ್ಟಿದ್ದು ಈಗ ಹಳೆಯ ಸುದ್ದಿ.

ಈ ಲೇಖನದ ಉದ್ದೇಶ, ಈ ಸುದ್ದಿಯನ್ನು ನಮ್ಮ ಮಾಧ್ಯಮಗಳು ಹೇಗೆ ಗ್ರಹಿಸಿಕೊಂಡವು ಮತ್ತು ಹೇಗೆ ಸುದ್ದಿಮಾಡಿದವು ಮತ್ತು ಒಟ್ಟೂ ವಿವಾದದಲ್ಲಿ ಮಾಧ್ಯಮದ ಪಾತ್ರ ಏನು ಎಂಬುದರ ಹಿನ್ನೋಟ.

ಒಂದು ಮಿಸ್ಸಿಂಗ್ ಲಿಂಕ್

ಒಂದು ಘಟನೆಯ ಸುದ್ದಿ ಎಂದರೆ ಐದು W ಗಳು ಮತ್ತು ಒಂದು H ಎಂಬುದು ಒಂದು ಸಾಂಪ್ರದಾಯಿಕ ತಿಳಿವಳಿಕೆ. ಯಾವುದೇ ಸುದ್ದಿ ನಡೆದಾಗ, ಅದನ್ನು ಪರಿಪೂರ್ಣವಾಗಿ ಓದುಗರಿಗೆ ಮುಟ್ಟಿಸುವಲ್ಲಿ Who (ಯಾರು), What (ಏನು), Why (ಏಕೆ), When (ಯಾವಾಗ), Where (ಎಲ್ಲಿ) ಮತ್ತು How (ಹೇಗೆ) ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಓದುಗರಿಗೆ ಒದಗಿಸುವುದು ಒಬ್ಬ ಸುದ್ದಿಗಾರನ ನೈತಿಕ, ಸಾಮಾಜಿಕ ಜವಾಬ್ದಾರಿ.

ಉಡುಪಿಯ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗಳನ್ನು ಕಳೆದ ಒಂದೂವರೆ ತಿಂಗಳಿನಿಂದ ಗಮನಿಸುತ್ತಿರುವವರಿಗೆ ಈ ಸಮವಸ್ತ್ರ ವಿವಾದದ ಐದು Wಗಳು ಮತ್ತು ಒಂದು H ಆಳ ಅಗಲಗಳ ಸಹಿತ ಸಿಕ್ಕಿದೆಯೇ ಎಂಬುದನ್ನು ಒಂದುಕ್ಷಣ ಯೋಚಿಸಿ.

ಮಾಧ್ಯಮಗಳು ಸಮವಸ್ತ್ರ ವಿವಾದವನ್ನು ತಮಗೆ ಒದಗಿಸಲಾದ “ಸ್ಕ್ರಿಪ್ಟ್” ಕನ್ನಡಕ ಧರಿಸಿಯೇ ನೋಡಿದರು ಎಂಬುದಕ್ಕೆ ಹಲವು ಆಧಾರಗಳು ಸಿಗುತ್ತವೆ. ನೂರಾರು ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ಉಡುಪಿಯ ಹೆಣ್ಣುಮಕ್ಕಳ ಜೂನಿಯರ್ ಕಾಲೇಜಿನ ಗೇಟಿನಲ್ಲಿ “ಪವಾಡ” ಸಂಭವಿಸುವುದನ್ನು ಎದುರು ನೋಡುತ್ತಾ ಕುಳಿತುಬಿಟ್ಟರು ಮತ್ತು ಉಡುಪಿಯನ್ನು ತಪ್ಪುಕಾರಣಗಳಿಗಾಗಿ ಸುದ್ದಿಮಾಡಿಬಿಟ್ಟರು. ಅದು ಹೇಗೆಂಬುದನ್ನು ಐದು W ಮತ್ತು ಒಂದು H ಎಂಬ ಮೂಲಪಾಠದ ಜಾಡಿನಲ್ಲೇ ನೋಡೋಣ.

WHO (ಯಾರು)

ಸುದ್ದಿಗಾರರ ಸಂದಣಿಯು ಒಂದು ಸುದ್ದಿಯನ್ನು ಅದರ ಆಳಕ್ಕಿಳಿದು ನೋಡುವ ಬದಲು ಗೇಟಿನಲ್ಲಿ ನಿಂತು ನೋಡಿದಾಗ ಅವರಿಗೆ ಸರಳವಾಗಿ “ಯಾರೆಂದು” ಕಾಣಿಸಿದ್ದು ಹಿಜಾಬ್ ಧರಿಸಿದ್ದ ಐದಾರು ಮಂದಿ ಅಮಾಯಕ ಹುಡುಗಿಯರು. ಈ ಎಳೆಯ ಮಕ್ಕಳು ಇಲ್ಲಿ ಹರಕೆಯ ಕುರಿಗಳಾಗಿಬಿಟ್ಟರು.

ಒಂದು ತರಗತಿಯಲ್ಲಿ ಏಕಾಏಕಿ ಸಮವಸ್ತ್ರದ ವಿವಾದ ಎಬ್ಬಿಸಿದ್ದು ಯಾರು? ಮಕ್ಕಳ ಸಮವಸ್ತ್ರಕ್ಕೆ ಮೊದಲ ಅಸಹನೆ ವ್ಯಕ್ತಪಡಿಸಿದ್ದು ಯಾರು? ಅವರನ್ನು ಯಾರು ತರಗತಿಯಿಂದ ಹೊರಹಾಕಿದರು? ಯಾರು ಅವರಿಗೆ ಪ್ರವೇಶ ನಿರಾಕರಿಸಿದರು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಮಾಧ್ಯಮಗಳ ಹಿತಾಸಕ್ತಿಗೆ ಅಗತ್ಯ ಇರಲಿಲ್ಲ. ಈ “ಯಾರು” ಎಂಬುದು ಮಾಧ್ಯಮಗಳಿಗೆ ತಿಳಿಯುವುದು ಸಾಧ್ಯವಾಗುತ್ತಿದ್ದರೆ, ಇದೊಂದು ರಾಷ್ಟ್ರೀಯ ವಿವಾದ ಆಗುತ್ತಲೂ ಇರಲಿಲ್ಲ. ಬದಲಾಗಿ ಒಂದಿಷ್ಟು ಶಿಕ್ಷಕರ ಅಸಹನೆಯ ಚಿತ್ರ ಅಥವಾ ಅದಕ್ಕೂ ಮೀರಿದ ಇನ್ನೇನಾದರೂ ಹೊರಬರುತ್ತಿತ್ತು.

ಈ ವಿವಾದದ ಲಾಜಿಕಲ್ ಮೂಲಬಿಂದುಗಳಾಗಬೇಕಾದ ಆ ಶಾಲೆಯ ಶಿಕ್ಷಕರು, ಮಾಧ್ಯಮದ “ಯಾರು” ಎಂಬ ರಾಡಾರ್ ವ್ಯಾಪ್ತಿಗೆ ಬರಲೇ ಇಲ್ಲ. ಅವರೆಲ್ಲ “ಸ್ಟೆಲ್ಥ್ ಮೋಡ್”ನಲ್ಲಿದ್ದರು. ಹಾಗಾಗಿ ರಾಜಕಾರಣಿಗಳಿಗೆ ಈ ವಿವಾದದಲ್ಲಿ ತಮ್ಮ ರಾಜಕೀಯ ಅಜೆಂಡಾಗಳನ್ನು ಮುನ್ನುಗ್ಗಿಸಿ, ಚುನಾವಣೆಯ ಕಾಲಕ್ಕೆ ಹುಲುಸಾದ ಬೆಳೆ ತೆಗೆಯುವ “ಪೊಟೆನ್ಷಿಯಲ್” ಕಾಣಿಸಿತು ಮತ್ತು ವಿವಾದ ಕರಾವಳಿ ಜಿಲ್ಲೆಗಳಾದ್ಯಂತ, ರಾಜ್ಯವ್ಯಾಪಿಯಾಗಿ ಹರಡಿತು ಅನ್ನಿಸುತ್ತದೆ.

WHAT (ಏನು)

ಗೇಟಿನ ಹೊರಗಿನಿಂದ ನಿಂತು ನೋಡಿದವರಿಗೆ, ಇದು ಬಹಳ ಸರಳವಾಗಿ ಹಿಜಾಬ್ ವಿರುದ್ಧ ಕೇಸರಿ ಶಾಲು ವಿವಾದವಾಗಿ ಕಾಣಿಸಿತು. ಇದನ್ನೇ ಆಧರಿಸಿ ವರದಿ ಮಾಡಿದ್ದರಿಂದಾಗಿ ಈ ವಿವಾದ ಬೇರೆ ಕಡೆಗಳಲ್ಲೂ “ಹಿಜಾಬ್-ಕೇಸರಿ ಶಾಲು” ವಿವಾದವಾಗಿ ಸರಳೀಕರಣಗೊಂಡಿತು.

ಈ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಏನಾಗಿತ್ತು? ಅದನ್ನು ಅಲ್ಲಿಗೆ ತಂದವರ ಉದ್ದೇಶ ಏನಾಗಿತ್ತು? ಶಾಲೆಯ ಒಳಗಿರುವವರಿಗೂ ಹೊರಗಿರುವವರಿಗೂ ಏನು ಸಂಬಂಧ? ಎಂಬ ಪ್ರಶ್ನೆಗಳ ಆಳಕ್ಕಿಳಿಯುವುದು ಮಾಧ್ಯಮಗಳಿಗೆ ಅಗತ್ಯವಿರಲಿಲ್ಲ. ಏಕೆಂದರೆ ಅದು ಅವರ “ಸ್ಕ್ರಿಪ್ಟೆಡ್” ಅಜೆಂಡಾಕ್ಕೆ ಹೊಂದುತ್ತಿರಲಿಲ್ಲ.

WHY (ಏಕೆ)

ಗೇಟಿನ ಬಳಿ ನಿಂತು ರಾಜಕಾರಣಿಗಳ ಬೈಟ್ ತೆಗೆದುಕೊಂಡ ಮಾಧ್ಯಮಗಳಿಗೆ ಇಲ್ಲಿ ಬಗೆಬಗೆಯ ಕಾರಣಗಳು ಕಾಣಸಿಕ್ಕವು. ಇದರಲ್ಲಿ ಹೊರಗಿನವರ ಪಿತೂರಿ ಎಂಬುದು ಎದ್ದು ಕಾಣಿಸಿದ ಕಾರಣ. ಈ ಕಾರಣವು ಶಾಲೆಗೆ ಹೊರಗಿನ ರಾಜಕಾರಣಿಗಳ ಅಜೆಂಡಾಗೆ ಹೊಂದಿಕೊಳ್ಳುವ ಕಾರಣಕ್ಕೆ, ಗೇಟಿನ ಬಳಿ ನಿಂತ ಮಾಧ್ಯಮಗಳಿಗೂ ಸರಿಹೊಂದಿಕೆಯಾಯಿತು.

ಆದರೆ, ಶಾಲೆಯ ಶಿಕ್ಷಕರು, ಪ್ರಾಂಶುಪಾಲರ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದ್ದ ಸಮಸ್ಯೆಯೊಂದಕ್ಕೆ ಏಕೆ ಹೊರಗಿನವರು ಪ್ರವೇಶಗೊಂಡರು? ಏಕೆ ವಿದ್ಯಾರ್ಥಿಗಳನ್ನು ಪಠ್ಯೇತರ ರಾಜಕೀಯ ಪ್ರತಿಭಟನೆಗಳಲ್ಲಿ ಬಳಸಲಾಯಿತು? ಏಕೆ ಹೊರಗಿನವರು ಶಾಲೆಯ ಒಳಗೆ ಬರುವಂತಾಯಿತು? ಏಕೆ ರಾಜಕಾರಣಿಗಳು ಈ ಗೊಂದಲದಲ್ಲಿ ಮೂಗು ತೂರಿಸಿದರು? ಇದ್ಯಾವುದೂ ಗೇಟಿನ ಅಡ್ಡ ಹೊರಬದಿಯಲ್ಲಿ ನಿಂತ ಮಾಧ್ಯಮಗಳಿಗೆ ಗೋಚರಿಸಲಿಲ್ಲ ಅಥವಾ
ಗೋಚರಿಸಿದರೂ ಅವರ “ಸ್ಕ್ರಿಪ್ಟಿಗೆ” ಇದೆಲ್ಲ ಹೊಂದಿಕೆ ಆಗುವಂತಿರಲಿಲ್ಲ.

WHEN (ಯಾವಾಗ)

ಜನವರಿ ಮೊದಲ ವಾರದ ಹೊತ್ತಿಗೆ ಮಾಧ್ಯಮಗಳ ಗಮನಕ್ಕೆ ಈ ವಿಚಾರ ಬಂದಾಗಲೇ ಇದೊಂದು “ಪೊಟೆನ್ಷಿಯಲ್” ಇರುವ ಸುದ್ದಿ ಎಂದು ಮನಗಂಡ ಗೇಟು ಸುದ್ದಿಗಾರರುಗಳು ತಮ್ಮ ಕೆಲಸ ಶುರುಹಚ್ಚಿಕೊಂಡರು. ಈ ಸುದ್ದಿಯನ್ನು ತಮಗೆ ಬೇಕಾದ ತರಂಗಾಂತರಕ್ಕೆ ಹೊಂದಿಸುವ, ವಿಸ್ತರಿಸುವ ಕೆಲಸವನ್ನೂ ದಿನವಿಡೀ ಮಾಡಲು ಆರಂಭಿಸಿದರು. ಅದರ ಫಲಿತಾಂಶ ಇಂದು ನಾಡಿನ ಮುಂದಿದೆ.

ಯಾವುದೇ ಸುದ್ದಿಯನ್ನು ಆಳವಾಗಿ ನೋಡುವ ಮನಸ್ಸಿರುವ ಪತ್ರಕರ್ತರಿದ್ದರೆ ಅವರಿಗೆ ಈ ಗದ್ದಲ ಜನವರಿ ಮೊದಲವಾರದಲ್ಲೇ ಆರಂಭಗೊಂಡಿತೇ? ಅಥವಾ ಅದಕ್ಕಿಂತಲೂ ಹಳೆಯ ಚರಿತ್ರೆ ಇದಕ್ಕಿದೆಯೆ? ಎಂಬ ಪ್ರಶ್ನೆ ಏಳಬೇಕಿತ್ತು. ಹಾಗೊಂದು ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ ಅದು ಮತ್ತೆ ನೂರು ಅಸ್ಥಿಪಂಜರಗಳ ಕವಾಟುಗಳನ್ನು ತೆರೆಯುವ ಸಾಧ್ಯತೆಗಳಿರುವುದರಿಂದ, ಅವರ ಅಳತೆಗೋಲಿಗೆ ತಕ್ಕಷ್ಟೇ “ಯಾವಾಗ” ತೀರ್ಮಾನವಾಯಿತು.

WHERE (ಎಲ್ಲಿ)

ಸಹಜವಾಗಿಯೇ ಸುದ್ದಿಗಾರರಿಗೆ ಈ ಇಡಿಯ ಗದ್ದಲ ಆರಂಭಗೊಂಡದ್ದು ಎಲ್ಲಿ ಮತ್ತು ಅಂತ್ಯಗೊಳ್ಳುವುದು ಎಲ್ಲಿ ಎಂಬುದು ಚೆನ್ನಾಗಿ ಗೊತ್ತಿರುವುದರಿಂದ ಅದಕ್ಕೆ ತಕ್ಕಂತೆ ವರದಿಗಳು ಸಿದ್ಧಗೊಂಡವು. ಮುಂದಿನ ಚುನಾವಣೆಗಳ ದಿನಾಂಕಗಳು ಗೊತ್ತಿಲ್ಲದವರೇನಲ್ಲ ಕರಾವಳಿಯ ಸುದ್ದಿಗಾರರು.

ಸುದ್ದಿಯ ತಳಕ್ಕಿಳಿದು ಅಧ್ಯಯನ ಮಾಡುವವರಿದ್ದರೆ ಈ ಇಡಿಯ ಗದ್ದಲಗಳ ಮುಖ್ಯಾಲಯಗಳು ಎಲ್ಲೆಲ್ಲಿವೆ? ಗದ್ದಲದಲ್ಲಿ ಒಳಗೊಂಡ ಪಾತ್ರಧಾರಿಗಳು, ಸೂತ್ರಧಾರಿಗಳು ಎಲ್ಲಿಂದ ಕಾರ್ಯಾಚರಿಸಿದರು? ಎಲ್ಲಿ ಹುಟ್ಟಿಕೊಂಡದ್ದು ಎಲ್ಲೆಲ್ಲಿ ಹರಡಿತು, ಇನ್ನದು ಎಲ್ಲಿಗೆ ತಲುಪಲಿದೆ ಎಂಬೆಲ್ಲ ಸಂಗತಿಗಳೂ ಹೊರಬರುತ್ತಿದ್ದವು.

HOW (ಹೇಗೆ)

ಗೇಟಿನ ಹೊರಬದಿ ನಿಂತು ನಿಮಿಷ ನಿಮಿಷದ ಬೆಳವಣಿಗೆಗಳನ್ನು ಕಣ್ಣಿಗೆ ಕಟ್ಟುವಂತೆ ಒರಲಿಕೊಂಡ ಮಾಧ್ಯಮಗಳಿಗೆ ಈ ಇಡಿಯ ಗದ್ದಲ ಹೇಗೆ ಹುಟ್ಟಿಕೊಂಡಿತು ಎಂಬುದರ ನರೇಟಿವ್ ಖಚಿತವಿತ್ತು. ಆ ಸ್ಕ್ರಿಪ್ಟನ್ನವರು ಒಂದು ಇಂಚೂ ಸಡಿಲಗೊಳಿಸಿಲ್ಲ.

ಆದರೆ, ಈ ಇಡಿಯ ಪ್ರಕರಣದ ಮೂಲ ಸೂತ್ರಧಾರಿಗಳು ಹೇಗೆ ಕಾಲೇಜಿನ ಹೊರಗಿನ ರಾಜಕಾರಣದ ಭಾಗವಾದರು? ಹೇಗೆ ರಾಜಕಾರಣ ಅವರನ್ನು ಬಳಸಿಕೊಂಡಿತು? ಈ ಸಂಬಂಧಗಳೆಲ್ಲ ಹೇಗೆ ಸ್ಥಾಪನೆಗೊಂಡವು? ಮಕ್ಕಳ ಹೆತ್ತವರು ಹೇಗೆ ಈ ಸೂತ್ರಧಾರರ ದಾಳಗಳಾದರು? ಹೇಗೆ ಈ ಇಡಿಯ ಪ್ರಹಸನ ಮುಂದಿನ ಚುನಾವಣೆಗಳ ವೇಳೆ ರಾಜಕೀಯದ ಸಹಾಯಕ್ಕೆ ಬರಲಿದೆ? ಎಂಬೆಲ್ಲ ಪ್ರಶ್ನೆಗಳು ಯಾರಿಗೂ ಬೇಕಾಗಿಲ್ಲ.

ಒಟ್ಟಿನಲ್ಲಿ, ಉದ್ದೇಶಪೂರ್ವಕ ಮೇಲುಪದರದ 5W -1H ಮೂಲಕ ಮಾಧ್ಯಮಗಳು ತಮ್ಮ ಕರ್ತವ್ಯ ನಿಷ್ಠೆಯನ್ನು ಗೇಟುದರ್ಜೆಗೆ ಇಳಿಸಿಕೊಂಡುಬಿಟ್ಟವು ಮತ್ತು ಕರಾವಳಿಯ ಪತ್ರಿಕೋದ್ಯಮದ ಪಾರದರ್ಶಕತೆ ಶಾಶ್ವತವಾಗಿ ಮಸುಕಾಯಿತು ಎಂಬುದು ಪ್ರಜ್ಞಾವಂತರ ಸದ್ಯದ ನೋವು.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ, ದುಪ್ಪಟ್ಟು, ನಮ್ದೇಕತೆ ಅವರ ಕೆಲವು ಪ್ರಕಟಿತ ಪುಸ್ತಕಗಳು.


ಇದನ್ನೂ ಓದಿ: ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಆಯೋಗ ಸುಮ್ಮನೇ ಕೂರಲ್ಲ: ಮಾಧ್ಯಮಗಳಿಗೆ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...