Homeಅಂಕಣಗಳುಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

ಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

- Advertisement -
- Advertisement -

ಶಿವಮೊಗ್ಗದಲ್ಲಿ ಫೆಬ್ರವರಿ 20ರಂದು ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಆ ನಗರವನ್ನು ಒಂದು ದಿನದ ಉದ್ವಿಘ್ನತೆಗೆ ದೂಡಿತ್ತು. ಈ ಕೊಲೆಯ ತನಿಖೆಯಾಗುವ ಮೊದಲೇ ಅದರ ಸುತ್ತ ಸುತ್ತಿಕೊಂಡ ಸುದ್ದಿಗಳಿಂದ ಮರುದಿನ ಕೋಮುಗಲಭೆಯ ವಾತಾವರಣ ದಟ್ಟವಾಯಿತು. ಮುಖ್ಯವಾಗಿ ಬಹುಸಂಖ್ಯಾತ ಕೋಮಿನವರು ಅಲ್ಪಸಂಖ್ಯಾತ ಕೋಮಿನವರಿಗೆ ಸೇರಿದ ಮನೆಗಳು, ಅಂಗಡಿ ಮುಂಗಟ್ಟುಗಳ ಮೇಲೆ ಪೊಲೀಸರ ಎದುರಿನಲ್ಲೇ ಕಲ್ಲು ತೂರಾಟ ನಡೆಸಿದ ಡಿಸ್ಟರ್ಬಿಂಗ್ ವಿಡಿಯೋಗಳು ಹರಿದಾಡಿದವು. ಅದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಕಲ್ಲು ತೂರಾಟಗಳೂ ನಡೆದವು. 22ರಂದು ನಿಷೇಧಾಜ್ಞೆಯಿಂದಾಗಿ ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಒಂದು ಕಡೆ ಆಳುವ ಪಕ್ಷದ ನೇತಾರರ-ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಗಳು-ನಡೆಗಳು ಈ ಉದ್ವಿಘ್ನತೆಯನ್ನು ಪ್ರಚೋದಿಸುವಂತೆ ಇದ್ದರೆ, ಅಂತಹವರನ್ನು ತರಾಟೆಗೆ ತೆಗೆದುಕೊಂಡು ಶಾಂತಿಪಾಲನೆಗಾಗಿ ತಮ್ಮ ವರದಿಗಾರಿಕೆಯ ಕೆಲಸ ಮಾಡಬೇಕಿದ್ದ ಸುದ್ದಿ ಚಾನೆಲ್‌ಗಳು (ಅವುಗಳ ಆಂಕರ್‌ಗಳು), ಎಷ್ಟೋ ಆನ್‌ಲೈನ್ ಸುದ್ದಿತಾಣಗಳು ಗಲಭೆಯನ್ನು ಪ್ರಚೋದಿಸುವಂತೆ ಕೆಲಸ ಮಾಡುತ್ತಿದ್ದವು.

ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಆಂಕರ್ ಕೇಳುತ್ತಿದ್ದ ಪ್ರಶ್ನೆ ಹೀಗಿತ್ತು: ’ಈ ಸರ್ಕಾರದವರು ಸುಮ್ಮನೆ ಬಿಡೋದಿಲ್ಲ ಅನ್ನುವ ಭಯ ಬೇಡ್ವಾ ಅವರಿಗೆ (ಕೊಲೆಗಾರರಿಗೆ)’ ಅನ್ನುವ ರೀತಿಯಲ್ಲಿ. ಈ ಕೊಲೆಯಿಂದ ಆತನಿಗೆ ನೋವಾಗಿರುವುದಕ್ಕಿಂತಲೂ, ಹರ್ಷ ಕುಟುಂಬದ ನೋವನ್ನು ಹಂಚಿಕೊಳ್ಳುವುದಕ್ಕಿಂತಲೂ, ಅವರ ನೋವಿಗೆ ಸಾಂತ್ವನ ನುಡಿಯುವುದಕ್ಕಿಂತಲೂ, ಈ ಕೊಲೆ ತನಿಖೆಯಾಗಬೇಕು ಎನ್ನುವ ಕಾಳಜಿಗಿಂತಲೂ ಒಂದು ಪಕ್ಷದ ’ರಾಜಕೀಯ’ದ ಘಾಟು ಆ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಕಲ್ಲು ತೂರಾಟದ ಬಗ್ಗೆ ಮಾತನಾಡುವಾಗ ’ಹಸಿರು ಧ್ವಜವನ್ನು ಪ್ರದರ್ಶಿಸಿ ಕಲ್ಲು ತೂರಾಟ ನಡೆಸಿದರು’ ಎಂಬುದನ್ನು ಒತ್ತಿಒತ್ತಿ ಹೇಳುವ ಮೂಲಕ ಒಂದು ಕೋಮಿನ ವಿರುದ್ಧ ವಿಷ ಕಕ್ಕುವ ಧಾಟಿ ವ್ಯಕ್ತವಾಗುತ್ತಿತ್ತು. ಇನ್ನು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದ ಮಂತ್ರಿಗಳಿಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಗೃಹ ಮಂತ್ರಿಗಳಿಗೆ ಕೇಳುವ ಪ್ರಶ್ನೆಗಳು ಕೂಡ ಶಾಂತಿಯನ್ನು ಬಯಸುವಂತವಾಗಿರಲಿಲ್ಲ. ಇಂತಹ ಅಪದ್ಧಗಳ ವಿರುದ್ಧ ಮಾತನಾಡುತ್ತಲೇ ಇರುವಂತೆ ಪದೇಪದೇ ಅವುಗಳ ಬಗ್ಗೆ ಹೇಳುತ್ತಿರುವಂತೆ ಮಾಧ್ಯಮಗಳು ಇನ್ನೂ ಅಧಃಪತನದ ದಾರಿ ಹಿಡಿಯುತ್ತಿರುವುದು ಕಳವಳಕಾರಿಯಾಗಿದೆ.

ಫೆಬ್ರವರಿ ಮೊದಲ ವಾರದಿಂದಲೇ ಆರಂಭವಾಗಿರುವ, ಸಂಘ ಪರಿವಾರ ಉತ್ಪಾದಿಸಿರುವ ಹಿಜಾಬ್ ವಿವಾದದಲ್ಲಿ ಕೆಲವು ಪತ್ರಕರ್ತರು ಪೋಲಿ ಪೋಕರಿಗಳಂತೆ ನಡೆದುಕೊಂಡಿದ್ದು ಪ್ರಜ್ಞಾವಂತ ನಾಗರಿಕ ಸಮುದಾಯ ತಲೆತಗ್ಗಿಸುವ ಸಂಗತಿಯಾಗಿತ್ತು. ಸಣ್ಣ ವಯಸ್ಸಿನ ವಿದ್ಯಾರ್ಥಿನಿಯನ್ನು ಅಟ್ಟಾಡಿಸಿಕೊಂಡು ಹೋಗಿ ವಿಡಿಯೋ ಚಿತ್ರೀಕರಿಸುವ ದೃಶ್ಯಗಳು ಮನುಕುಲಕ್ಕೇ ಕಪ್ಪುಚುಕ್ಕೆಯಂತಿದ್ದವು. ಇನ್ನು ಹಿಜಾಬ್ ಸಂಬಂಧವಾಗಿ ಮುಸ್ಲಿಮರ ಮೇಲೆ ದ್ವೇಷದ ಮಾತುಗಳನ್ನು ಎಗ್ಗಿಲ್ಲದೆ ಉಗುಳಿದ ಟಿವಿ ಆಂಕರ್‌ಗಳಂತೂ ಮಾನವ ಸಂತತಿಗೆ ಕಳಂಕ ತರುವಂತೆ ನಡೆದುಕೊಂಡರು. ಇಂತಹ ಸಮಯದಲ್ಲಿ ಒಂದಷ್ಟು ಪ್ರಶ್ನೆಗಳನ್ನು ಎಲ್ಲರೂ ಕೇಳಿಕೊಳ್ಳಲೇಬೇಕಾದ ಪರಿಸ್ಥಿತಿ ಒದಗಿದೆ.

ಇಂತಹ ಮತಿಭ್ರಷ್ಟ ಮಾಧ್ಯಮಗಳು ಇಂದು ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಬದಲು ಅವುಗಳ ಜೊತೆಗೆ ಶಾಮೀಲಾಗಿ ತಾವೇ ಉಪ ಅಧಿಕಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಆಳುವ ಪ್ರಭುತ್ವಗಳ ಅಂಕೆಯಲ್ಲಿದ್ದರೆ ಸಾಕು, ಯಾವುದೇ ನೀತಿಸಂಹಿತೆಯನ್ನು ಅನುಸರಿಸದೆ ಮನಸೋ ಇಚ್ಛ ಕಾರ್ಯನಿರ್ವಹಿಸುವ ಸ್ವೇಚ್ಚಾಕೇಂದ್ರಗಳಾಗಿವೆ. ಇದರ ಜೊತೆಗೆ, ಒಂದು ಮಾಧ್ಯಮವನ್ನು ಮತ್ತೊಂದು ಮಾಧ್ಯಮ (ಮುಖ್ಯವಾಹಿನಿಗಳಲ್ಲಿ ಮುಖ್ಯವಾಗಿ) ಪ್ರಶ್ನಿಸದ ಅಲಿಖಿತ ನಿಯಮ ಇಂದಿಗೂ ಜಾರಿಯಲ್ಲಿದೆ. ಈ ಸಮಯದಲ್ಲಿ ಇಂತಹ ಮರಿ ಅಧಿಕಾರ ಕೇಂದ್ರಗಳಿಗೆ ಮೂಗುದಾರ ಹಾಕಿ ಸರಿದಾರಿಗೆ ತರುವುದು ನಾಗರಿಕ ಸಮಾಜದ ಕೆಲಸವಾಗಿದೆ. ಅದಕ್ಕಾಗಿ ಇಂದು ಎಷ್ಟೋ ಟೂಲ್‌ಗಳು ಲಭ್ಯವಿವೆ. ಇಂದು ಸ್ವತಂತ್ರ ಯುಟ್ಯೂಬರ್‌ಗಳು ಲಕ್ಷಾಂತರ ಜನರನ್ನು ತಲುಪಬಹುದಾಗಿದೆ. ಯುಪಿ ಚುನಾವಣೆಯ ಸಮಯದಲ್ಲಿ ಮುಖ್ಯವಾಹಿನಿ ಮಾಧ್ಯಮಗಳನ್ನು ಮೀರಿಸುವಂತಹ ಯುಟ್ಯೂಬರ್‌ಗಳು ತಮ್ಮ ದಿಟ್ಟ ಪಾರದರ್ಶಕ ವರದಿಗಾರಿಕೆಯಿಂದ ಅವುಗಳಿಗೆ ’ಥ್ರೆಟ್’ ಆಗಿ ಪರಿಣಮಿಸಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳ ಆರ್ಥಿಕ ಸಂಪನ್ಮೂಲಗಳಿಗೆ ಈ ಯುಟ್ಯೂಬರ್‌ಗಳು ಹೊಡೆತ ನೀಡಿಲ್ಲವಾದರೂ, ಅವರ ವಿಷಪೂರಿತ ಪ್ರೊಪೊಗಾಂಡವನ್ನು ತಳಕಮಳಕ ಮಾಡಿ ನಿಜದರ್ಶನ ಮಾಡಿಸಲು ಸಫಲವಾಗುತ್ತಿದ್ದಾರೆ. ಕನ್ನಡದಲ್ಲಿಯೂ ಅಲ್ಲಲ್ಲಿ ಇಂತಹ ಕೆಲವು ಪ್ರಯತ್ನಗಳು ಆಗಿದ್ದರೂ ಅವು ಇನ್ನೂ ಹಲವು ಪಟ್ಟು ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಅಂತಹ ದೊಡ್ಡ ಪಡೆಯನ್ನು ಸೃಷ್ಟಿಸುವತ್ತ ಜನಪರ ಸಂಘಟನೆಗಳು ಆಸ್ತೆ ವಹಿಸಬೇಕಿದೆ.

ಇದು ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳ ಪಾಡಾದರೆ, ಅಳಿಸಿ ಹಾಕಲು ಸುಲಭವಾಗಿರದಂತಹ ಪ್ರಿಂಟ್ ಮಾಧ್ಯಮವೂ ದ್ವೇಷವನ್ನು, ಸುಳ್ಳುಗಳನ್ನು ಹರಡುವುದರಿಂದ ಹೊರತಾಗೇನೂ ಉಳಿದಿಲ್ಲ. ಕೆಲವೇ ದಿನಗಳ ಹಿಂದೆ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ರಾಯಚೂರಿನ ಕೋರ್ಟ್ ಒಂದರಲ್ಲಿ ಬಾಬಾಸಾಹೇಬರ ಫೋಟೋವನ್ನು ತೆರವುಗೊಳಿಸಿದ ಪ್ರಕರಣದಲ್ಲಿ, ಆ ವಿವಾದಕ್ಕೆ ಕಾರಣವಾಗಿದ್ದ ನ್ಯಾಯಾಧೀಶರ ಮೇಲೆ ಕ್ರಮ ತೆಗೆದುಕೊಳ್ಳದೆ ಇದ್ದದ್ದಕ್ಕೆ ಅಂಬೇಡ್ಕರ್‌ವಾದಿ ಸಂಘಟನೆಗಳು ಒಂದುಗೂಡಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದವು. ಹಲವು ವರ್ಷಗಳಿಂದ ’ವಿಶ್ವಾಸಾರ್ಹ’ ಎಂದು ನಂಬಿಕೊಂಡಿದ್ದ ದಿನಪತ್ರಿಕೆಗಳು ಕೂಡ ಈ ಪ್ರತಿಭಟನೆಯನ್ನು ಉಪೇಕ್ಷೆ ಮಾಡಿದವು. ಇನ್ನೂ ಕೆಲವು ಪತ್ರಿಕೆಗಳು ಪ್ರತಿಭಟನೆಯ ಕಾರಣವನ್ನು ಮರೆಮಾಚಿ ಪ್ರತಿಭಟನೆಯ ದಿನದ ಟ್ರಾಫಿಕ್ ವರ್ಣನೆಗೆ ನಿಂತವು! ಬೆರಳೆಣಿಕೆಯ ಡಿಜಿಟಲ್ ಮಾಧ್ಯಮಗಳಷ್ಟೇ ಈ ಪ್ರತಿಭಟನೆಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿದ್ದು.

ಇನ್ನೂ ಕೆಲವು ದಿನಗಳ ಹಿಂದಕ್ಕೆ ಹೋದರೆ, ಇತ್ತೀಚೆಗೆ ವಿಶ್ವವಾಣಿ ಎಂಬ ಕನ್ನಡ ದಿನಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಯ್ತು. ಮೆಡಿಕಲ್ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ರೋಸ್ಟರ್ ಪದ್ಧತಿಯ ಪ್ರಕಾರ ನೀಡಲಾಗುವ ಮೀಸಲಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆಯೋ ಅಥವಾ ಮೀಸಲಾತಿಯ ಬಗ್ಗೆ ಶೋಷಕ ಜಾತಿಯ ಸಮುದಾಯಗಳ ಅಸಹನೆಯ ವಾದದ ಗಿಳಿಪಾಠ ಒಪ್ಪಿಸುವುದಕ್ಕಾಗಿಯೋ, ಗಗನ್ ಎಂಬ ವ್ಯಕ್ತಿ ಮಾಡಿದ್ದ ಒಂದು ವಿಡಿಯೋ ಆಧರಿಸಿ, ಯಾವುದೇ ರೀತಿಯ ಪರಿಶೀಲನೆ ಮಾಡದೆ ಉತ್ಪಾದಿಸಿದ್ದ ವರದಿ ಅದು. ಅದರಲ್ಲಿ ಈ ಗಗನ್ ಎಂಬ ವ್ಯಕ್ತಿ ನೀಟ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದರೂ, ಆತನಿಗೆ ಗದಗದ ಸರ್ಕಾರಿ ಕಾಲೇಜಿನಲ್ಲಿ ಅನೆಸ್ತೇಶಿಯಾ ವಿಭಾಗಕ್ಕೆ ಸೀಟು ದೊರಕುತ್ತಿಲ್ಲ ಎಂದು ವರದಿಯಾಗಿತ್ತು. ವರದಿಯಲ್ಲಿ ಹತ್ತಾರು ಸುಳ್ಳುಗಳು ಮತ್ತು ತಪ್ಪುಗಳು ಇದ್ದವು. ಆತ ಮೊದಲ ರ್‍ಯಾಂಕ್ ಪಡೆದದ್ದು ಮುಖಕ್ಕೆ ಹೊಡೆಯುವ ಸುಳ್ಳಾಗಿತ್ತು. ರೋಸ್ಟರ್ ಪದ್ಧತಿಯ ಪ್ರಕಾರ ಹಂಚುವ ಸೀಟುಗಳು ರೊಟೇಟ್ ಆಗುವುದರಿಂದ ಈ ವರ್ಷ ಗದಗಿನ ಕಾಲೇಜಿನಲ್ಲಿ ಅನಸ್ತೇಶಿಯಾ ವಿಭಾಗದ ಸೀಟುಗಳು ಕೆಲವು ವರ್ಗಗಳಿಗೆ ಮೀಸಲಾಗಿದ್ದರೂ, ಅವು ಮುಂದಿನ ವರ್ಷಗಳಲ್ಲಿ ಸಾಮಾನ್ಯ ವರ್ಗಗಳಿಗೆ ತೆರೆದುಕೊಳ್ಳುತ್ತವೆ. ಈ ವರ್ಷ ಬೇರೆ ಇತರ ಕಾಲೇಜಿನಲ್ಲಿ ಅರವಳಿಕೆ ಮದ್ದಿನ ವಿಭಾಗದ ಸೀಟುಗಳು ಸಾಮಾನ್ಯ ವರ್ಗಕ್ಕೆ ಲಭ್ಯವಿರುತ್ತವೆ. ಸಾಮಾನ್ಯ ವರ್ಗದ ಮೊದಲ ರ್‍ಯಾಂಕ್ ವಿದ್ಯಾರ್ಥಿಗೆ ಈ ವಿಭಾಗದಲ್ಲಿ ಸೀಟು ಸಿಗುವುದೇ ಕಷ್ಟ ಎಂಬಂತೆ ನರೆಟಿವ್ ಕಟ್ಟುವುದು ಪರೋಕ್ಷವಾದ ಸುಳ್ಳಾಗಿತ್ತು!

ಇಂತಹ ಸುಳ್ಳುಗಳನ್ನು ಕೆಲವೇಕೆಲವು ಡಿಜಿಟಲ್ ಮಾಧ್ಯಮಗಳು ಬಯಲಿಗೆಳೆದಾಗ, ಹಲವು ಓದುಗರು ಪ್ರಶ್ನಿಸಿದಾಗ ತಪ್ಪಿಗೆ ವಿಷಾದ ಕೂಡ ವ್ಯಕ್ತಪಡಿಸದೆ, ಓದುಗರ ಕ್ಷಮೆ ಕೋರದೆ ಮತ್ತೇನೋ ಸಬೂಬು ಕೊಟ್ಟಿತು ಆ ಪತ್ರಿಕೆ. ಇಂತಹ ಸುಳ್ಳುಗಳು ಒಂದು ಪತ್ರಿಕೆಯಲ್ಲಿ ಪ್ರಕಟವಾದಾಗ, ಅನ್ಯ ಪತ್ರಿಕೆಗಳು ಅದರ ಬಗ್ಗೆ ಮೌನ ವಹಿಸುವುದು ಅಥವಾ ಬೇರೆ ಮಾಧ್ಯಮಗಳ ಉಸಾಬರಿ ನನಗೇಕೆ ಎಂದು ತೆಪ್ಪಗಿರುವುದು ಇಂತಹ ಅಪರಾಧಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಲ್ಲವೇ? ಇಂತಹವನ್ನು ಪ್ರಶ್ನಿಸಲು ಪ್ರಾರಂಭಿಸಿದರೆ, ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ವರದಿಗಳ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳುವ ನವಸಂಪ್ರದಾಯಕ್ಕೆ ನಾಂದಿ ಹಾಡಬಹುದಲ್ಲವೇ? ಅಥವಾ ಆ ಹೊಣೆಗಾರಿಕೆಯೇ ಬೇಡವಾಗಿದೆಯೇ ಇಂದಿನ ಮಾಧ್ಯಮಗಳಿಗೆ?

ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ವಿಷವನ್ನು ಕಕ್ಕಿ ಯುದ್ಧಗಳಿಗೆ, ನರಮೇಧಗಳಿಗೆ, ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡಿರುವ, ಇವುಗಳನ್ನು ಪ್ರತಿಪಾದಿಸಿ ಕಾರ್ಯಾಚರಣೆಗೆ ಇಳಿಯುವವರ ನಡೆಗಳ ಬಗ್ಗೆ ಜನರ ಸಮ್ಮತಿಯನ್ನು ಉತ್ಪಾದಿಸಲು ನೇರವಾಗಿ ಕಾರಣವಾಗಿರುವ ಮಾಧ್ಯಮಗಳನನ್ನು ಜಗತ್ತು ಸಾಕಷ್ಟು ಕಂಡಿದೆ. ಇನ್ನು ಈ ಮಾಧ್ಯಮಗಳ ನಡೆಗಳನ್ನು ಪ್ರಶ್ನಿಸಿ ಅವುಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಅವುಗಳ ದಾರಿಗಳನ್ನು ತಿದ್ದಿ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.


ಇದನ್ನೂ ಓದಿ: ಆದೇಶ ಅರಿಯದೆ ಮಕ್ಕಳ ಮೇಲೆ ಮಾಧ್ಯಮಗಳ ಸವಾರಿ: ಅಧಿಕಾರಿಗಳ ಬೇಸರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...