Homeಮುಖಪುಟಹಿಂಜಾವೇ ಕಾರ್ತಿಕ್ ಕಗ್ಗೊಲೆಯೂ ಸಂಘಿಗಳ ಮುಗಮ್ ಮೌನವೂ!!

ಹಿಂಜಾವೇ ಕಾರ್ತಿಕ್ ಕಗ್ಗೊಲೆಯೂ ಸಂಘಿಗಳ ಮುಗಮ್ ಮೌನವೂ!!

- Advertisement -
- Advertisement -

| ಶುದ್ದೋಧನ |

ಪುತ್ತೂರು ಹೇಳಿಕೇಳಿ ಸಂಘಪರಿವಾರದ ಆಡಂಬೋಲ. ಸಣ್ಣಪುಟ್ಟ ವೈಯಕ್ತಿಕ ತಂಟೆ-ತಕರಾರಿಗೂ ಕೋಮುದ್ವೇಷದ ಕಲರ್ ಬಳಿದು ಬಿಜೆಪಿಯ ಮಾತೃ “ಸಂಘ” ಧರ್ಮಕಾರಣದ ಮೈಲೇಜ್ ಪಡೆಯುತ್ತಲೇ ಇದೆ. ಮಾಯಾಭಟ್ ಎಂಬ ಹವ್ಯಕರ ಹೆಣ್ಣಿನ ಪ್ರೇಮ್ ಕಹಾನಿಗೆ ಮತೀಯ ವೈಷಮ್ಯದ ಆಯಾಮ ಕೊಟ್ಟು ಹಲವು ವರ್ಷ ಕೇಸರಿ ಬೆಳೆ ತೆಗೆದ ಪರಿವಾರಕ್ಕೆ ಸೌಮ್ಯಭಟ್ ಎಂಬ ಮತ್ತೊಂದು ಹಾರವ ಹುಡುಗಿಯನ್ನು ಸಾಬರ ವಿಕೃತ ಹುಡುಗನೊಬ್ಬ ಕೊಂದು ಹಾಕಿದ್ದು “ಅಗತ್ಯವಿದ್ದಾಗೆಲ್ಲ” ಪುತ್ತೂರಿಗೆ ಬೆಂಕಿಹಾಕಲು ನೆಪವಾಗಿತ್ತು.

ಇಂದು ಕೇಂದ್ರ ಮಂತ್ರಿಯಾಗಿರುವ ಸುಳ್ಯದ ಸದಾನಂದಗೌಡ ಅಂದು ಪುತ್ತೂರಿನಲ್ಲಿ ಶಾಸಕರಾದದ್ದಾಗಲಿ, ಸದ್ಯ ಕಾಂಗ್ರೆಸ್‍ನಲ್ಲಿರುವ ಶಕುಂತಲಾ ಶೆಟ್ಟಿ ಹಿಂದೆ ಬಿಜೆಪಿಯಿಂದ ಗೆದ್ದದ್ದಾಗಲಿ, ಮತ್ತೀಗ ಎಮ್ಮೆಲ್ಲೆ ದರ್ಬಾರು ನಡೆಸಿರುವ ಸಂಜೀವ ಮಠಂದೂರು ಎಂಬ ಸದಾನಂದ ಗೌಡರ ನೆಂಟ ವಿಧಾನಸೌಧದ ಭಾಗ್ಯ ಕಂಡಿರುವುದಾಗಲಿ ಎಲ್ಲವೂ ಸಂಘ ಸಾಹಸದಿಂದಲೇ!!

ಹಿಂದೂತ್ವದ ಹೆಸರಲ್ಲಿ ಬಿಲ್ಲವರು, ಬಂಟರಂತಹ ಶೂದ್ರ ಸಮುದಾಯದ ಬಿಸಿರಕ್ತದ ಯುವಕರ ತಲೆಕೆಡಿಸಿ ಅವರಿಂದ ಗಲಾಟೆ, ದೊಂಬಿ ಮಾಡಿಸುವ ಬಿಜೆಪಿಗರು ಹೆಣಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಸರ್ಕಾರವಿದ್ದಾಗ ಪರೇಶ್ ಮೇಸ್ತನ ಸಾವನ್ನು ಮುಂದಿಟ್ಟುಕೊಂಡು `ಇಡೀ ಕರಾವಳಿಗೆ ಬೆಂಕಿಹಚ್ಚುತ್ತೇವೆ’ ಎಂಬಂತೆ ಮಾತನಾಡಿ, ಹಿಂದೂತ್ವ ಸಂಘಟನೆಗಳ ಕಾರ್ಯಕರ್ತರ ಮಾರಣಹೋಮ ನಡೆಯುತ್ತಿದೆ ಅಂತೆಲ್ಲ ಬೊಬ್ಬಿಟ್ಟು ಕೇಂದ್ರಕ್ಕೆ ದೂರು ಕೊಡುವಷ್ಟರಮಟ್ಟಿಗೆ ಬಿಜೆಪಿಗರು ಹಾರಾಡಿದ್ದು ನೆನಪಿರಬಹುದು. ಆದರೆ ಅದೇ ಕರಾವಳಿಯಲ್ಲಿ ಈಗ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿಯನ್ನೇ ಹತ್ಯೆ ಮಾಡಲಾಗಿದೆ. ಕಾರಣ ಏನೇ ಇರಲಿ, ತನಿಖೆಗೂ ಮೊದಲೇ ಬೀದಿಗಿಳಿದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಬೆಂಕಿ ಹಚ್ಚುತ್ತಿದ್ದ ಸಂಘ ಪರಿವಾರ ಇದೀಗ ತುಟಿ ಎರಡು ಮಾಡುತ್ತಿಲ್ಲ. ಯಾಕೆಂದರೆ, ಈಗ ರಾಜ್ಯದಲ್ಲಿ ಅಧಿಕಾರದಲ್ಲಿರೋದು ಅವರದೇ ಬಿಜೆಪಿ ಸರ್ಕಾರ! ಧರ್ಮವನ್ನು ನೆಪ ಮಾಡಿಕೊಳ್ಳುವ ಇವರ ರಾಜಕಾರಣದ ವರಸೆ ಇಂತದ್ದು!

ಪುತ್ತೂರಿನ ಕಾರ್ತಿಕ್ ಸುವರ್ಣ ಆ ದುರ್ದೈವಿ. ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆಗಿದ್ದವ. ಅವನನ್ನು ಪೊಲೀಸ್ ಠಾಣೆಯ ಬಳಿಯೇ ಸಾರ್ವಜನಿಕರ ಕಣ್ಣೆದುರೇ ಚಾಕುವಿನಿಂದ ಬರ್ಬರವಾಗಿ ಇರಿದು ಸಾಯಿಸಲಾಗಿದೆ. ಆದರೆ ಹಿಂದೂ ಸಂಘಟನೆಯ ಪ್ರಮುಖ ಮುಂದಾಳಿನ ಹತ್ಯೆಯಾದರೂ ಸಂಘ ಪರಿವಾರದ ರಣಧೀರರ ಅಡ್ರಸ್ಸೇ ಇಲ್ಲಾ! ಕೊಲೆಯಾದವನು ಅಲ್ಪಸಂಖ್ಯಾತ ಸಮುದಾಯದವನೆಂಬಂತೆ ಪುತ್ತೂರು ತಣ್ಣಗಿದೆ!! ಹತ್ತಿರದಲ್ಲೇ ಇರುವ ಕಲ್ಲಡ್ಕದ ಕೇಸರಿ ಕಮಾಂಡರ್ ಪ್ರಭಾಕರ ಭಟ್, ಇದೇ ಏರಿಯಾದ ಕೂಗುಮಾರಿ ಶೋಭಾ ಕರಂದ್ಲಾಜೆ ಮತ್ತು ಸದಾನಂದಗೌಡರು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ!!

ಹಿಂದೂ ಗಂಡಿನ ಜೀವ, ಹಿಂದೂ ಹೆಣ್ಣಿನ ಮಾನ ಬಂಡವಾಳ ಮಾಡಿಕೊಂಡು ರಾಜಕಾರಣ ಮಾಡುವ ಸಂಘಪರಿವಾರದ ಘಟಾನುಘಟಿ ಬೆಂಕಿ ನವಾಬರೆಲ್ಲಾ ಏಕಿಂಥ ಘನಘೋರ ಮೌನದಲ್ಲಿದ್ದಾರೆ. ಹಿಂದೂ ಹೆಣ ಬಿದ್ದಾಗ ಧರ್ಮ ರಕ್ಷಣೆಯ ದೈವ ಆವಾಹನೆಯಾದಂತೆ ಹಾರಾಡುತ್ತಿದ್ದ ಬಿಜೆಪಿ-ಆರೆಸ್ಸೆಸ್-ಹಿಂಜಾವೇ…… ಮುಂತಾದ ಗ್ಯಾಂಗಿನ ಭಜರಂಗ ಬಲಿಗಳ ನಿಗೂಢ ಮೌನದ ಜಾಡು ಹಿಡಿದು ಹೊರಟರೆ ಕಾರ್ತಿಕ್‍ನನ್ನು ಕೊಂದ ಕೊಲೆಗಡುಕರು ಹಿಂದೂತ್ವದ ಅಭಿಯಾನದಲ್ಲಿ ಅರ್ಪಣಾಭಾವದಿಂದ ತೊಡಗಿಸಿಕೊಂಡವರೇ ಆಗಿದ್ದಾರೆಂಬ ಅಚ್ಚರಿ ಬೆಳಕಿಗೆ ಬರುತ್ತದೆ. ಪಾತಕಿಗಳಾದ ಕಿರಣ್ ರೈ ಮತ್ತು ಚರಣ್ ರೈ ಸಹೋದರರು ಹಾಗೂ ಪ್ರಿತೇಶ್ ಶೆಟ್ಟಿಗೆ ಬಿಜೆಪಿಯ ಆಯಕಟ್ಟಿನ ಅಧಿಕಾರಸ್ಥರ ಸಂಪರ್ಕವೂ ಇದೆಯೆಂಬ ಪುಕಾರುಗಳು ಎದ್ದಿವೆ. ಪವರ್‍ಫುಲ್ ಹಿಂಜಾವೇ ನಾಯಕ ತಾನೆಂಬ ಹುಂಬ ಅಹಮಿಕೆಯಲ್ಲಿ ಲೇವಾದೇವಿ, ಕೌಟುಂಬಿಕ ವ್ಯಾಜ್ಯ, ಚಿಟ್‍ಫಂಡ್, ಹೊಡಪೆಟ್‍ಗಳಲ್ಲಿ ಸಂಧಾನಕಾರನಾಗಿ ಮೂಗುತೂರಿಸುತ್ತಿದ್ದ ಕಾರ್ತಿಕ್‍ನ ಹತ್ಯೆ ಸುತ್ತ ಮೂರು ಸಾಧ್ಯತೆಯನ್ನು ಪೊಲೀಸರು ತರ್ಕಿಸುತ್ತಿದ್ದಾರೆ.

ಪೊಲೀಸರು ಅಂದಾಜಿಸಿರುವಂತೆ ಚಿಟ್‍ಫಂಡ್ ವ್ಯವಹಾರದ ಸೇಡು ಬರೀ ಇಪ್ಪತ್ತೇಳು ವರ್ಷದ ಕಾರ್ತಿಕ್‍ನನ್ನು ಬಲಿ ಹಾಕಿದೆ. ಪುತ್ತೂರಿನ ದರ್ಬೆಯಲ್ಲಿ ಮಾತೃಛಾಯ ಎಂಬ ಹೆಸರಿನ ಚಿಟ್‍ಫಂಡ್ ದಂಧೆ ಕಿರಣ್-ಚರಣ್ ಸಹೋದರರು ನಡೆಸಿಕೊಂಡಿದ್ದರು. ಕಿಶೋರ್ ಎಂಬಾತ ಬರೋಬ್ಬರಿ ನಾಲ್ಕು ಲಕ್ಷ ಹಣವನ್ನು ಚರಣ್ ರೈಗೆ ಕೊಡಬೇಕಿತ್ತು. ಆದರೆ ಆತ ಕೊಡದೆ ಸತಾಯಿಸುತ್ತಿದ್ದ. ಹಾಗಾಗಿ ಚರಣ್ ಆತನಿಗೆ ಲಾಯರ್ ನೋಟಿಸ್ ಕೊಟ್ಟಿದ್ದ. ಇದರಿಂದ ಕೆರಳಿದ ಕಿಶೋರ್ ಸುಜಿತ್ ಬಂಗೇರ, ಮನೀಶ್ ಕುಮಾರ್, ಪ್ರೀತಮ್ ಶೆಟ್ಟಿಯೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಚರಣ್‍ಗೆ ಹಲ್ಲೆ ಮಾಡಿ ಹೆದರಿಸಿದ್ದ. ಈ ಪುಂಡರ ಪಟಾಲಂಗೆ ಹಿಂಜಾವೇ ಕಿಂಗ್ ಕಾರ್ತಿಕ್ ಸುವರ್ಣ ತನ್ನ ರಾಜಕೀಯ ಬಲದಿಂದ ನೆರವಾಗುತ್ತಿದ್ದ. ಹೀಗಾಗಿ ಕಿರಣ್-ಚರಣ್ ತಂಡ ಮತ್ತು ಕಾರ್ತಿಕ್ ಗುಂಪಿನ ನಡುವೆ 2018ರ ಜನವರಿಯಿಂದ ಆಗಾಗ ಜಗಳ-ಕದನ ಆಗುತ್ತಲೇ ಇತ್ತು. ಮೊನ್ನೆ ಸೆಪ್ಟೆಂಬರ್ 3ರಂದು ಚೌತಿಯ ಗಣೇಶ ವಿಸರ್ಜನೆ ಬಳಿಕ ಸಂಪ್ಯದಲ್ಲಿ ನಡೆದ ಯಕ್ಷಗಾನ ನೋಡುತ್ತಾ ನಿಂತಿದ್ದ ಕಾರ್ತಿಕ್ ಸುವರ್ಣನ ಮುಂದೆ ಕಿರಣ್-ಚರಣ್ ಪ್ರತ್ಯಕ್ಷರಾಗಿದ್ದಾರೆ. ಎರಡೂ ಕಡೆಯವರು ಗುರಾಯಿಸಿದ್ದಾರೆ. ಮಾತಿಗೆ ಮಾತಾಗಿದೆ. ಇದೇ ಸಂದರ್ಭವೆಂದು ವೈರಿ ಪಡೆ ಕಾರ್ತಿಕ್‍ನನ್ನು ಇರಿದು ಕೊಂದು ಪರಾರಿಯಾಗಿದ್ದಾರೆ.

ಮತ್ತೊಂದು ಅನುಮಾನದ ಸಾಧ್ಯತೆಯಲ್ಲಿ ಗಾಂಜಾ ದಂಧೆಯ ಅಮಲೇರಿದೆ! ಗಾಂಜಾ ವ್ಯವಹಾರದ ವೈಷಮ್ಯದಿಂದ ಕಿರಣ್-ಚರಣ್ ಮತ್ತು ಕಾರ್ತಿಕ್ ಸುವರ್ಣ ಬದ್ಧವೈರಿಗಳಾಗಿದ್ದರೆಂಬ ಮಾತು ಪುತ್ತೂರಲ್ಲಿ ಪಿಸುಗುಡುತ್ತಿದೆ. ಕಾರ್ತಿಕ್‍ಗೆ ರಾಜಕೀಯ ಪ್ರಭಾವ ಇದ್ದುದರಿಂದ ಆತನದೇ ಮೇಲುಗೈ ಆಗುತ್ತಿದ್ದುದು ಎದುರಾಳಿಗಳನ್ನು ಕೊಲೆ ಸ್ಕೆಚ್‍ಗೆ ಪ್ರಚೋದಿಸಿರಬಹುದೆಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೆ ಕಾರ್ತಿಕ್‍ನ ತಾಯಿ ಆಡಿರುವ ಮಾತುಗಳು ಸಂಘಪರಿವಾರದ ಜನಿವಾರಿಗಳು ಶೂದ್ರ ಹುಡುಗರನ್ನು ಬೇಕಾದಂತೆ ಬಳಸಿಕೊಂಡು ಬಲಿ ಹಾಕುತ್ತಿರುವ ಧರ್ಮೋನ್ಮಾದ ಹಿಕಮತ್ತುಗಳನ್ನು ಬಿಚ್ಚಿಟ್ಟಿದೆ!! “ನನ್ನ ಮಗ ಅಮಾಯಕ. ಯಾರ ತಂಟೆಗೂ ಹೋದವನಲ್ಲ. ಆದರೆ ಯಾವಾಗ ಹಿಂದೂ ಜಾಗರಣ ವೇದಿಕೆ ಸೇರಿಕೊಂಡನೋ, ಬಿಜೆಪಿ ರಾಜಕಾರಣಿಗಳೊಂದಿಗೆ ಒಡನಾಟ ತೊಡಗಿದನೋ ಆಗಾತ ಕೆಲವರ ಕೆಂಗಣ್ಣಿಗೆ ತುತ್ತಾಗಿದ್ದ; ವೈಷಮ್ಯ ಬೆಳೆಸಿಕೊಂಡಿದ್ದ….. ಆತ ಸಂಘಟನೆ(ಹಿಂಜಾವೇ) ರಾಜಕೀಯ(ಬಿಜೆಪಿ) ಸೇರಿಕೊಂಡು ಒಂದಿಷ್ಟು ದ್ವೇಷ, ಹಗೆತನ ಸಂಪಾದಿಸಿದ್ದನಷ್ಟೇ… ಅದೇ ಆತನ ಕೊಲೆ ಮಾಡಲಾಗಿದೆ….. ಪೊಲೀಸ್ ಠಾಣೆ ಎದುರೇ ಕೊಲೆ ಮಾಡುತ್ತಾರೆಂದರೆ ರಾಜಕಾರಣಿಗಳ ಬೆಂಬಲ ಇರಲೇಬೇಕು…. ಇಲ್ಲದಿದ್ದರೆ ಪಾತಕಿಗಳಿಗೆ ಅಷ್ಟು ಧೈರ್ಯ ಎಲ್ಲಿಂದ ಬರಬೇಕು?” ಎಂದು ಬಿಕ್ಕುತ್ತಾರೆ ಕಾರ್ತಿಕ್‍ನ ತಾಯಿ.

ದಕ್ಷಿಣ ಕನ್ನಡದ ಸಂಘಪರಿವಾರದ ಭಜರಂಗದಳ, ಆರೆಸ್ಸೆಸ್, ಹಿಂಜಾವೇ, ವಿಶ್ವ ಹಿಂದೂ ಪರಿಷತ್, ಮಹಿಳಾ ಸಂಘಟನೆಗಳಲ್ಲಿ ಲೀಡರಿಕೆ, ಹಿಡಿತ ಸಾಧಿಸುವಿಕೆಯ ಮೇಲಾಟದ ಸಂಘರ್ಷ ಮಾಮೂಲಿ ಎಂಬಂತಾಗಿದೆ. ಪಾಪದ ಶೂದ್ರ ಹುಡುಗ, ಹುಡುಗಿಯರಿಗೆ ಹಿಂದೂತ್ವದ ಪುಂಡಾಟದಿಂದ ಪ್ರಾಪ್ತವಾಗುವ ಸಾಮಾಜಿಕ ಇಮೇಜ್‍ನ ಆಕರ್ಷಣೆಗೆ ಒಳಗಾಗುವಂತೆ ಮಾಡಲಾಗುತ್ತದೆ. ಈ ಆ್ಯಂಟಿ ಹೀರೋಯಿಸಮ್ ಜತೆಗೆ ರಾಜಕೀಯ ಗೌರವ, ಹಣಕಾಸಿನ ಲಾಭ, ತಾಪಂ-ಜಿಪಂ ಮುಂತಾದ ಸ್ಥಳೀಯ ಸಂಸ್ಥೆ ಸದಸ್ಯರ ಸೆಳೆತಕ್ಕೆ ಹಿಂದುಳಿದ ವರ್ಗದ ತರುಣ-ತರುಣಿಯರು ಬೀಳುವಂತೆ ನಾಜೂಕಾಗಿ ಮಾಡಲಾಗುತ್ತಿದೆ. ಈ ಆಮಿಷ ಸಂಘಪರಿವಾರದ ತರಹೇವಾರಿ ತಂಡಗಳಲ್ಲಿ ಸೇಡು-ದ್ವೇಷ-ಹಗೆತನದ ಶೀತಲ ಸಂಘರ್ಷವಾಗಿ ಮಾರ್ಪಟ್ಟಿದೆ. ಇದು ಕಾರ್ತಿಕ್ ಸುವರ್ಣನಂಥ ಧಾಡಸಿ ಯುವಕರನ್ನು ಆಪೋಷನ ಪಡೆಯುತ್ತಿದೆ! ಕರಾವಳಿಯ ಕೇಸರಿ ಪರಿವಾರದ ಯಾವ್ಯಾವ ಪಡೆಯಲ್ಲಿ ಯಾರ್ಯಾರಿಗೆ ಎಂತೆಂಥ ಕೇಡು ಕಾದಿದೆಯೋ?!!

ಅದೇನೇ ಇರಲಿ, ಒಂದಂತೂ ಸತ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಲ್ಲದೇ, ಕಾಂಗ್ರೆಸ್ಸೊ, ಜೆಡಿಎಸ್ಸೊ ಅಥವಾ ಮೈತ್ರಿ ಸರ್ಕಾರವೋ ಇದ್ದಿದ್ದರೆ ಕಾರ್ತಿಕ್ ಕೊಲೆಯಾದ ಇಷ್ಟೊತ್ತಿಗಾಗಲೇ ಬಿಜೆಪಿ-ಸಂಘ ಪರಿವಾರದ ಜಂಟಿ `ಬೆಂಕಿ’ ಕಾರ್ಯಾಚರಣೆಗಳು ಶುರುವಾಗಿರುತ್ತಿತ್ತು. ಪೊಲೀಸರು ಇದೇ ಆರೋಪಿಗಳನ್ನು ಬಂಧಿಸಿದ್ದರೂ `ಸಾಬರನ್ನು ಬಚಾವು ಮಾಡುವ ಸಲುವಾಗಿ ಅಮಾಯಕ ಹಿಂದೂ ಹುಡುಗರನ್ನು ಫಿಟ್ ಮಾಡಿದ್ದಾರೆ’ ಅಂತ ಭೀಕರ ಭಾಷಣಗಳು ಉದುರುತ್ತಿದ್ದವು. ಹಿಂದೂಗಳ ಮಾರಣಹೋಮ ನಡೆಯುತ್ತಿದೆ ಅಂತ ಬದುಕಿರುವವರ ಹೆಸರನ್ನೂ ಸೇರಿಸಿ ಒಂದು `ಹುತಾತ್ಮರ ಪಟ್ಟಿ’ ತಯಾರಿಸಿಕೊಂಡು ಊರೂರು ಅಲೆದಾಡುತ್ತಿದ್ದರು. ಆದರೀಗ ಗಪ್‍ಚುಪ್. ಇದು ಸಂಘ ಪರಿವಾರಕ್ಕೆ ಹೊಸದೇನೂ ಅಲ್ಲ. ತೀರ ಈಚೆಗೆ ವಿವೇಕಾನಂದ ಕಾಲೇಜಿನ ಎಬಿವಿಪಿಯ ನಾಲ್ಕೈದು ನೀಚ ಹುಡುಗರು ಪಾಪದ ಬುಡಕಟ್ಟು ಹುಡುಗಿಯನ್ನು ಕಾಡಿಗೆ ಕರೆದೊಯ್ದು ಕಾರಲ್ಲೇ ಸರದಿಯಲ್ಲಿ ರೇಪ್ ಮಾಡಿದಾಗಲೂ ಎಬಿವಿಪಿಗಳು `ಈ ರೇಪಿಸ್ಟ್‍ಗಳು ತಮ್ಮವರಲ್ಲ’ ಎಂದಿದ್ದಷ್ಟೇ ಅಲ್ಲ, ಆ ಹುಡುಗಿಯ ನಡತೆಯೇ ಸರಿ ಇಲ್ಲ ಎಂದು ಸಮರ್ಥನೆಗೆ ಇಳಿದಿದ್ದರು. ತಮ್ಮ ಮಕ್ಕಳನ್ನು ಬೇಕಾದಂತೆ ಬಳಸಿಕೊಂಡು ಅವರ ಭವಿಷ್ಯವನ್ನೇ ಹಾಳುಗೆಡಹುವ ಇವರ ಹುನ್ನಾರಗಳನ್ನು ಹೆತ್ತವರು ಈಗಲಾದರು ಅರ್ಥಮಾಡಿಕೊಳ್ಳದಿದ್ದರೆ ಕಾರ್ತಿಕ್‍ನ ತಾಯಿಯಂತೆ ತಮ್ಮದೇ ಮಕ್ಕಳ ಹೆಣದ ಮುಂದೆ ಗೋಳಾಡುವಂತಹ ದುರ್ವಿಧಿಯೇ ಗತಿ!

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಎಸ್‌ಎಫ್‌ಐ ಕಿಡಿ | Naanu Gauri

ಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಭಗತ್‌ ಸಿಂಗ್‌ ಪಾಠ ಕೈ...

0
ರಾಜ್ಯದ ಪಠ್ಯ ಪುಸ್ತಕದಲ್ಲಿ ಸ್ವಾತಂತ್ಯ ಹೋರಾಟಗಾರ ಭಗತ್‌ ಸಿಂಗ್ ಪಾಠ ಸೇರಿ ಅನೇಕ ಪ್ರಗತಿಪರ ಚಿಂತನೆಯ ಪೂರಕ ಪಾಠಗಳನ್ನು ಕೈ ಬಿಟ್ಟು ಸಂಘಪರಿವಾರದ ಸಂಸ್ಥಾಪಕ ಹೆಡಗೇವಾರ್ ಭಾಷಣ ಸೇರ್ಪಡೆ ಹಾಗೂ ಶಿಕ್ಷಣದ ಕೇಸರೀಕರಣ...