Homeಕ್ರೀಡೆಒಲಂಪಿಕ್ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

ಟೋಕಿಯೋದಲ್ಲಿ ಭಾರತೀಯ ಹಾಕಿ; ಗತವೈಭವದ ಮರುಕಳಿಕೆಗೆ ನಾಂದಿ!

- Advertisement -
- Advertisement -

ಆಗಸ್ಟ್ 6, 2021 ಭಾರತದ ಹಾಕಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥ ದಿನ. ಸುವರ್ಣಾಕ್ಷರ ಏಕೆ ಎಂದು ನೀವು ಕೇಳಬಹುದು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪಡೆದ ಕಂಚಿಗೆ ಚಿನ್ನದಷ್ಟೇ ಬೆಲೆಯಿದೆ. ಇದಕ್ಕೆ ಮುಖ್ಯ ಕಾರಣ ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಹಲವು ವರ್ಷಗಳಿಂದ ಆದ ಹಿನ್ನಡೆ. ಸುದೀರ್ಘ 41 ವರ್ಷಗಳ ನಂತರ ಈಗ ಭಾರತ ಹಾಕಿ ತಂಡ ಪದಕ ಪಡೆದುಕೊಂಡಿದೆ. ನಾಲ್ಕು ದಶಕಗಳ ನಿರಾಸೆ, ಹತಾಶೆ, ಕಣ್ಣೀರಿನ ನಂತರ ಕೋವಿಡ್ ಪಿಡುಗಿನ ಮಧ್ಯದಲ್ಲಿಯೇ, ಪ್ರೇಕ್ಷಕರಿಲ್ಲದ
ಟೋಕಿಯೋದ ಕ್ರೀಡಾಂಗಣದಲ್ಲಿ ಬಿಸಿಲಿನ ನಡುವೆಯೇ ಅತೀವ ಆರ್ದ್ರತೆಯಲ್ಲಿ ಬೆವರು ಸುರಿಸಿ, ಪಣತೊಟ್ಟು ನಂತರ ಆನಂದಬಾಷ್ಪ ಹೊರಸೂಸಿ ಇಡೀ ಭಾರತ ಮತ್ತೆ ಹಾಕಿಯತ್ತ ಗಮನಹರಿಸುವಂತೆ ಸದ್ಯದ ಹಾಕಿ ತಂಡ ಕಾರ್ಯನಿರ್ವಹಿಸಿದೆ.

ಎರಡು ವರ್ಷಗಳಿಂದ ಬೆಂಗಳೂರಿನ ’ಸಾಯಿ’ ತರಬೇತಿ ಶಿಬಿರದಲ್ಲಿ ಬಸವಳಿದು, ಬೆಂಡಾಗಿ ಕೋವಿಡ್ ನಡುವೆಯೂ ಶ್ರಮವಹಿಸಿ ಒಲಿಂಪಿಕ್ಸ್ ಪದಕ ಗಳಿಸುವ ಛಲದಿಂದ ತಮಗಿಂತ ಕೆಳಗಿನ ರ್‍ಯಾಂಕಿಂಗ್‌ನಲ್ಲಿರುವ ಯಾವುದೇ ತಂಡದ ವಿರುದ್ಧ ಸೋಲದೇ ಕಂಚಿಗಾಗಿ ನಡೆದ ತೀವ್ರ ಪೈಪೋಟಿಯಲ್ಲಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ರಿಯೋ 2016ರಲ್ಲಿ ಕಂಚಿನ ಪದಕ ಪಡೆದಿದ್ದ ಜರ್ಮನಿಯ ವಿರುದ್ಧ ಗಳಿಸಿದ ಅತ್ಯಂತ ರೋಚಕ ಜಯ ಎಲ್ಲ ಹಾಕಿ ಪ್ರೇಮಿಗಳು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿತು. ಈ ಒಲಿಂಪಿಕ್ಸ್ ಪದಕದಿಂದ ಮತ್ತೆ ಭಾರತೀಯ ಹಾಕಿ ದಶಕಗಳ ನಂತರ ಮೈಕೊಡವಿ ಪುಟಿದೇಳುವಂತೆ ಮಾಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪೂಲ್ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಇತ್ತು. ಆ ಪಂದ್ಯದಲ್ಲಿ ಗಳಿಸಿದ ರೋಚಕ 3-2 ಅಂತರದ ಜಯ ಅತ್ಯಂತ ಮಹತ್ವಪೂರ್ಣವಾಗಿತ್ತು. ಎರಡು ಗುಂಪುಗಳಲ್ಲಿ ಇದ್ದ 8 ತಂಡಗಳಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ಅವಕಾಶವಿತ್ತು. ಸದ್ಯದ ಭಾರತೀಯ ತಂಡದಲ್ಲಿ ಅನುಭವಿ ಹಾಗೂ ಯುವಪ್ರತಿಭೆಗಳ ಮಿಶ್ರಣ ಅಪರೂಪವಾಗಿತ್ತು. 10 ಯುವಕರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡುತ್ತಿದ್ದರು. ಗೋಡೆಯಂತಿದ್ದು 15 ವರ್ಷಗಳಿಂದ ಭಾರತದ ಗೋಲ್ ಕಾಯುತ್ತಿರುವ ಶ್ರೀಜೇಶ್, ಡ್ರ್ಯಾಗ್ ಫ್ಲಿಕ್ ಪರಿಣಿತರಾದ ರುಪಿಂದರ್ ಪಾಲ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್, ನಾಯಕ ಮನಪ್ರೀತ್ ಸಿಂಗ್ ಹಾಗೂ ಸುರಿಂದರ್ ಸಿಂಗ್ ಹೊಸ ಆಟಗಾರರಿಗೆ ತಮ್ಮ ಅನುಭವವನ್ನು ಧಾರೆಯೆರೆದರು.

ಆದರೆ ಎರಡನೆಯ ಪಂದ್ಯದಲ್ಲೇ ವಿಶ್ವಚಾಂಪಿಯನ್ ಆಸ್ಟೇಲಿಯಾ ವಿರುದ್ಧ 7-1ರ ಸೋಲು ಅನಿರೀಕ್ಷಿತವಾಗಿತ್ತು. ಈ ಭಾರಿ ಸೋಲಿನ ಆಘಾತದಿಂದ ಬೇಗನೇ ಚೇತರಿಸಿಕೊಂಡು, ಅಮೋಘ ಧೈರ್ಯದಿಂದ ಪುಟಿದೆದ್ದು ಬಂದ ಭಾರತ ಸ್ಪೇನ್, 2016ರ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಮತ್ತು ಜಪಾನ್ ತಂಡಗಳಿಗೆ ಸೋಲುಣಿಸಿ 2016ರಲ್ಲಿ ನಡೆದಂತೆಯೇ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಗಳಿಸಿದ ೩-೧ರ ಜಯ ಮನಮೋಹಕವಾಗಿತ್ತು.

ಆದರೆ ಸೆಮಿಫೈನಲ್ ಪ್ರವೇಶಿಸಿದರೆ ಪದಕದ ಒತ್ತಡ ಹೆಚ್ಚಾಗಿರುತ್ತದೆ ಅಲ್ಲದೆ ವಿಶ್ವಚಾಂಪಿಯನ್ ಬೆಲ್ಜಿಯಂ ಸೋಲು ಅತಿ ಕಠಿಣವೆಂಬ ಮಾತೂ ಪ್ರಚಲಿತದಲ್ಲಿತ್ತು. ಆದರೂ ಇಡೀ ಭಾರತ ಎಚ್ಚೆತ್ತು ನೋಡುವಂತೆ ಆಡಿ, 5-2ರ ಅಂತರದ ಸೋತರೂ ನಿಜವಾದ ಹೋರಾಟವನ್ನು ಭಾರತ ಹಾಕಿ ತಂಡ ಎತ್ತಿ ತೋರಿಸಿತ್ತು. ಭಾರತ ತಂಡ ಸೋತರೂ ಕಂಚಿನ ಆಸೆ ಇನ್ನೂ ಜೀವಂತವಾಗಿತ್ತು.

ಜರ್ಮನಿ ಒಲಿಂಪಿಕ್ಸ್‌ನಲ್ಲಿ ಒಂದು ಬಾರಿ ಚಿನ್ನ ಪಡೆದ ತಂಡ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನೋಡುತ್ತಿದ್ದಂತೆ ಜರ್ಮನಿ 2-0 ಲೀಡ್ ಪಡೆದಾಗಲೂ ಭಾರತ ಹಾಕಿ ತಂಡ ಧೃತಿಗೆಡಲಿಲ್ಲ. ಮೂರನೇ ಕ್ವಾರ್ಟರ್ ಸಮಯಕ್ಕೆ ಸ್ಕೋರ್ 3-3 ರಲ್ಲಿ ಸಮವಾಗಿತ್ತು. ರುಪಿಂದರ್, ಗುರ್ಜಂತ್, ಸಿಮ್ರನ್‌ಜೀತ್ ಮತ್ತು ಹಾರ್ದಿಕ್ ಇವರುಗಳ ಪ್ರತಿಭೆಯ ಮೂಲಕ 5-3 ಲೀಡ್ ಪಡೆದಾಗ ಕೂಡ ಕಂಚಿನ ಪದಕ ನಿಶ್ಚಿತವಾಗಿರಲಿಲ್ಲ. ನಾಲ್ಕನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಗೋಲ್ ಹೊಡೆದು ಸ್ಕೋರ್ 5-4 ಆದಾಗ ನಿಜವಾದ ಒತ್ತಡ ಭಾರತದ ಮೇಲಿತ್ತು. ಈ ಲೀಡ್ ಉಳಿಸಿಕೊಳ್ಳಲು ಭಾರತ ಪಟ್ಟಪಾಡು ನೋಡಲಿಕ್ಕಾಗಲಿಲ್ಲ. ಆ ಪಂದ್ಯದ ಕೊನೆಯ ಹತ್ತು ನಿಮಿಷಗಳು ಒಂದು ಯುಗದಂತೆ ಅನ್ನಿಸಿತ್ತು. ಇನ್ನೂ 6 ನಿಮಿಷ ಇದೆ ಎನ್ನುವಾಗ ಜರ್ಮನಿಗೆ ಪೆನಾಲ್ಟಿ ಕಾರ್ನರ್ ಸಿಕ್ಕಿ ಹೃದಯ ಬಾಯಿಗೆಬಂದಿತ್ತು. ತಮ್ಮ ಹಾಕಿ ಜೀವನದ ಅತ್ಯಂತ ಮಹೋನ್ನತ ಸೇವ್ ಮಾಡಿದ ಶ್ರೀಜೇಶ ಭಾರತಕ್ಕೆ ಕಂಚು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎಲ್ಲ ಆಟಗಾರರು, ಸಹಾಯಕ ಸಿಬ್ಬಂದಿ, ಆಸ್ಟ್ರೇಲಿಯಾ ಮೂಲದ ಕೋಚ್ ಗ್ರಹಾಂ ರೀಡ್ ಅವರುಗಳ ಸಂಭ್ರಮ ಮುಗಿಲುಮುಟ್ಟಿತ್ತು. ಜೊತೆಗೆ ಇಡೀ ಭಾರತ ಸಂಭ್ರಮಿಸಿತು. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದ ಅಂಶವೆಂದರೆ ಭಾರತೀಯ ಆಟಗಾರರು ತೋರಿದ ಹೋರಾಟದ ಮನೋಭಾವ ಹಾಗೂ ಟೀಮ್ ವರ್ಕ್. ಪದಕ ವಿತರಣಾ ಸಮಯದಲ್ಲಿ ಕೋವಿಡ್ ನಿಯಮದಿಂದ ಆಟಗಾರರೇ ತಟ್ಟೆಯಿಂದ ಪದಕ ತೆಗೆದುಕೊಂಡು ಪಕ್ಕದಲ್ಲಿದ್ದ ಗೋಲ್‌ಕೀಪರ್ ಶ್ರೀಜೇಶ್ ಅವರ ಕೊರಳಿಗೆ ಹಾಕಿ ಗೌರವಿಸಿದರು. ಈ ದೃಶ್ಯ ಅತ್ಯಂತ ಅವಿಸ್ಮರಣೀಯವಾಗಿತ್ತು. ನಂತರ ಉಳಿದ ಎಲ್ಲ ತಂಡಗಳ ಆಟಗಾರರು ಅದನ್ನೇ ಅನುಸರಿಸಿದರು.

ಮತ್ತೊಂದೆಡೆ ಭಾರತೀಯ ವನಿತೆಯರು ತೋರಿದ ಪ್ರದರ್ಶನ ಕೂಡ ಎಲ್ಲರ ಗಮನ ಸೆಳೆಯಿತು. 1980 ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಆಹ್ವಾನದ ಮೇರೆಗೆ ಆಡಿದ ಭಾರತೀಯ ಮಹಿಳೆಯರು ನಂತರ ಹಲವು ವರ್ಷಗಳ ಕಾಲ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಪಡೆಯಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೂ ಒಂದೂ ಪಂದ್ಯ ಗೆಲ್ಲದೇ 12ನೆಯವರಾಗಿ ಉಳಿದರು. ಆದರೆ ಈ ಬಾರಿ ಎಲ್ಲರನ್ನು ತಮ್ಮ ಹೋರಾಟದ ಮನೋಭಾವದಿಂದ ಚಕಿತಗೊಳಿಸಿ ಮನಸೂರೆಗೊಂಡರು. ಮೊದಲು ನೆದರ್‍ಲ್ಯಾಂಡ್, ಜರ್ಮನಿ, ಗ್ರೇಟ್ ಬ್ರಿಟನ್ ತಂಡಗಳ ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು. ಆದರೆ ಬಸವಳಿಯದೇ ಗೆಲ್ಲಲಿವೆ ಎಂದು ನಿರೀಕ್ಷಿಸಿದ್ದ ವಿಶ್ವಚಾಂಪಿಯನ್ ಐರ್‍ಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೇಲೆ ಮಿಂಚಿ ಮೊಟ್ಟ ಮೊದಲ ಬಾರಿಗೆ ನಾಕ್‌ಐಟ್ ಹಂತ ಪ್ರವೇಶ ಮಾಡಿದಾಗ ರಾಶಿ ರಾಶಿ ಅಭಿನಂದನೆಗಳ ಸುರಿಮಳೆಯೇ ಬಂದಿತು.

ನಂತರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆದ ಆಸ್ಟ್ರೇಲಿಯಾ ಮೇಲೆ ಸಾಧಿಸಿದ ಐತಿಹಾಸಿಕ ಜಯ ಅಂತಾರಾಷ್ಟ್ರೀಯ ಮಹಿಳಾ ಹಾಕಿಯಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿತು. ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 2-1ರಿಂದ ಸೋತರೂ ಕಂಚಿನ ಹೋರಾಟದಲ್ಲಿ ಧೃತಿಗೆಡದೆ ಹೋರಾಡಿದರು. ಆದರೆ ಕಂಚಿನ ಹೋರಾಟದ ಪಂದ್ಯ ಕೈಹಿಡಿಯಲಿಲ್ಲ. ರೋಚಕ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 4-3 ಅಂತರದಿಂದ ಗೆದ್ದಿತು. ಭಾರತೀಯ ಹಾಕಿ ತಂಡದ ವನಿತೆಯರ ಆಕ್ರಂದನ ದೆಹಲಿಗೆ ಕೇಳಿಸುವಂತಿತ್ತು. ಕಠಿಣ ಪರಿಶ್ರಮಪಟ್ಟ ಭಾರತೀಯ ಮಹಿಳೆಯರಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ವಂದನಾ ಕಟಾರಿಯಾ, ತಡವಾಗಿ ಸ್ಥಾನ ಪಡೆದ ಗುರ್ಜಿತ್ ಕೌರ್, ನಾಯಕಿ ರಾಣಿ ರಾಂಪಾಲ್, ಸಲೀಮಾ ಟೇಟೆ, ದೀಪ್ ಗ್ರೇಸ್ ಎಕ್ಕಾ, ಗೋಲ್ ಕೀಪರ್ ಸವಿತಾ ಎಲ್ಲರ ಗಮನ ಸೆಳೆದರು.

ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ಏಕೆ ಪ್ರಾಮುಖ್ಯತೆ ಪಡೆದಿದೆಯೆಂದರೆ, 1928ರಿಂದ 1996ರವರೆಗೆ ಭಾರತ ಪಡೆದ 12 ಪದಕಗಳಲ್ಲಿ ಹಾಕಿ ತಂಡ ಗಳಿಸಿದ್ದು 11 ಪದಕಗಳು. ಅದರಲ್ಲಿ 8 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿತ್ತು.
ಮತ್ತೆ ಈ ಗತಕಾಲದ ವೈಭವ ಮರುಕಳಿಸಲು ಕಠಿಣ ಪರಿಶ್ರಮದ ಅಗತ್ಯ ಇತ್ತು. ಅದು ಟೋಕಿಯೋ ಸಾಧನೆಯ ಮೂಲಕ ಸಾಕಾರಗೊಂಡಿದೆ. ಮಿಕ್ಕ ಯುರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬದಲಾದ ನಿಯಮಗಳಿಗೆ ಮತ್ತು ಕೃತಕ ಹುಲ್ಲಿನ ಅಂಗಳಕ್ಕೆ ಬೇಗ ಒಗ್ಗಿಕೊಂಡರೆ ಭಾರತಕ್ಕೆ ನಾಲ್ಕು ದಶಕ ಬೇಕಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಭಾರತೀಯ ಪುರುಷರ ತಂಡ ಅರ್ಹತೆ ಪಡೆಯದೇ ಇದ್ದಾಗ, ಆಗಲೇ ಎಲ್ಲರೂ ಭಾರತೀಯ ಹಾಕಿಯ ಶ್ರದ್ಧಾಂಜಲಿ ಬರೆದುಬಿಟ್ಟಿದ್ದರು. ಆದರೆ ನಂತರ ಭಾರತ ವಿದೇಶಿ ತರಬೇತುದಾರರು ಮತ್ತು ತಂತ್ರಜ್ಞಾನ ತಂಡಗಳ ನೆರವಿನಿಂದ ಬಹಳಷ್ಟು ಹೂಡಿಕೆ ಮಾಡಿ ಈಗ ಈ ಮಟ್ಟದ ಸುಧಾರಣೆ ತೋರಲಾಗಿದೆ.

ಕಳೆದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ಈಗ ಟೋಕಿಯೋದಲ್ಲಿ ಕಂಚು ಗಳಿಸಿಯಾಗಿದೆ. ಆದರೆ ಮುಂದೇನು? ಸತತ ಪ್ರಯತ್ನ ಮುಂದುವರೆಯಬೇಕು ಹಾಗೂ ಹಲವು ಬದಲಾವಣೆಗಳನ್ನು ಮಾಡಲೇಬೇಕು. ಮಂದಿನ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈವರೆಗೆ ಭಾರತದ ಹಾಕಿಯನ್ನು ಭದ್ರವಾಗಿ ಕಾಪಾಡಿದ 35 ವರ್ಷದ ಶ್ರೀಜೇಶ್ ಹಾಗೂ 31 ವರ್ಷದ ಸವಿತಾ ಇರುವರೇ? ಟೋಕಿಯೋದಲ್ಲಿ ಪಡೆದ ಹುಮ್ಮಸ್ಸು ಮತ್ತು ಮೊಮೆಂಟಮ್ ಮುಂದುವರೆಯಬೇಕೆಂದರೆ ಶತಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಪುರುಷರು, ಮಹಿಳೆಯರು ತೋರಿದ ಪ್ರದರ್ಶನದಿಂದ ಹೆಚ್ಚಿನ ಮಟ್ಟದ ನಿರೀಕ್ಷೆ ಮತ್ತು ಒತ್ತಡ ಸ್ವಾಭಾವಿಕವಾಗಿ ಇದ್ದೇ ಇರುತ್ತದೆ. ಇದನ್ನು ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಹೇಗೆ ನಿಭಾಯಿಸುತ್ತವೆ ಕಾದು ನೋಡಬೇಕು.

ಚಂದ್ರಮೌಳಿ ಕಣವಿ

ಚಂದ್ರಮೌಳಿ ಕಣವಿ
ಖ್ಯಾತ ಕವಿ ಚೆನ್ನವೀರ ಕಣವಿಯವರ ಮಗನಾದ ಚಂದ್ರಮೌಳಿ ಕಣವಿಯವರು ಸ್ವತಃ ಕ್ರೀಡಾಪಟು. ಬ್ಯಾಂಕ್ ವೃತ್ತಿಯಿಂದ ನಿವೃತ್ತರಾಗಿರುವ ಕಣವಿಯವರು ಪ್ರವೃತ್ತಿಯಲ್ಲಿ ಕ್ರೀಡಾ ಬರಹಗಾರರು ಮತ್ತು ವೀಕ್ಷಕವಿವರಣೆಗಾರರು.


ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...