Homeಅಂತರಾಷ್ಟ್ರೀಯಕೊಲಂಬಿಯಾದಲ್ಲಿ ಮೊದಲ ಎಡಪಂಥೀಯ ಸರ್ಕಾರ; ಸಾಧ್ಯವಾದದ್ದು ಹೇಗೆ?

ಕೊಲಂಬಿಯಾದಲ್ಲಿ ಮೊದಲ ಎಡಪಂಥೀಯ ಸರ್ಕಾರ; ಸಾಧ್ಯವಾದದ್ದು ಹೇಗೆ?

- Advertisement -
- Advertisement -

“ಬಡವರು ಕಾರುಗಳನ್ನು ಹೊಂದಿರುವ ಪ್ರದೇಶ ಒಂದು ಅಭಿವೃದ್ಧಿ ಹೊಂದಿರುವ ರಾಷ್ಟ್ರವಲ್ಲ. ಎಲ್ಲಿ ಶ್ರೀಮಂತರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೋ ಅದು ಅಭಿವೃದ್ಧಿ ಹೊಂದಿದ ದೇಶ.” – ಪೆಟ್ರೊ

2022ರ ಜೂನ್ 19ರಂದು ನಡೆದ ಅಂತಿಮ ಚುನಾವಣೆಗಳ ನಂತರ, ಬೊಗೊಟಾದ ಮಾಜಿ ಸೆನೆಟರ್ ಮತ್ತು ಮೇಯರ್ ಗುಸ್ತಾವೊ ಪೆಟ್ರೊ ಅವರು ಕೊಲಂಬಿಯಾದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭೂಸುಧಾರಣೆ, ಸಾರ್ವತ್ರಿಕ ಆರೋಗ್ಯ ಸೇವೆ ಹಾಗೂ ಸಾಮಾಜಿಕ ಸೇವೆಗಳನ್ನು ವಿಸ್ತರಿಸುವ ವಿಷಯಗಳ ನಿಲುವುಗಳ ಮೇಲೆ ಪೆಟ್ರೊ ಚುನಾವಣೆಯ ಕ್ಯಾಂಪೇನ್ ಮಾಡಿದ್ದರು. ಕೊಲಂಬಿಯಾದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತೀವ್ರ ಬಲಪಂಥೀಯ ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನುಂಡಿದ್ದಾರೆ. ಕೊಲಂಬಿಯಾದಲ್ಲಿ ತೀವ್ರ ಬಲಪಂಥೀಯ ದೊಡ್ಡ ವ್ಯಾಪಾರಗಳ, ಭೂಮಾಲಿಕರ ಹಿತಾಸಕ್ತಿಗಳನ್ನು, ಮಾರಕ ಹಾಗೂ ಕರಾಳ ಪೊಲೀಸ್ ವ್ಯವಸ್ಥೆ ಮತ್ತು ಎಡಪಂಥೀಯ ಬಂಡುಕೋರರ ವಿರುದ್ಧ ಕ್ರೂರ ಯುದ್ಧವನ್ನು ಬೆಂಬಲಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಪೆಟ್ರೊ ಅವರು ಆರೋಗ್ಯ ಸೇವೆಯ ವಿಸ್ತರಣೆ ಮತ್ತು ಇತರ ಸಮಾಜ ಕಲ್ಯಾಣ ಸೇವೆಗಳು, ಪರಿಸರವಾದ ಹಾಗೂ ಕೊಲಂಬಿಯಾದಲ್ಲಿ ಶಾಂತಿ ನೆಲೆಸಲು ದಂಡುಕೋರರೊಂದಿಗೆ ಶಾಂತಿ ಒಪ್ಪಂದ ಮುಂದುವರೆಸುವುದಕ್ಕೆಲ್ಲ ಬದ್ಧವಾಗಿ ನಿಂತಿದ್ದಾರೆ.

ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಕೊಲಂಬಿಯಾದ್ದು ವಿಶಿಷ್ಟ ಸ್ಥಾನ, ಏಕೆಂದರೆ ಅಲ್ಲಿ ಈ ಒಂದು ದೇಶವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ದೇಶಗಳಲ್ಲಿ ಸಮಾಜವಾದಿ ಅಧ್ಯಕ್ಷರು ಬಂದುಹೋಗಿದ್ದಾರೆ. ಕೊಲಂಬಿಯಾದಲ್ಲಿ ಎಡಪಂಥೀಯ ಚಳವಳಿ ಸದಾಕಾಲ ಅತ್ಯಂತ ಗಟ್ಟಿಯಾಗಿದ್ದರೂ, ಎರಡು ಕಾರಣಗಳಿಂದ ಅವುಗಳ ಮೊಬಿಲೈಸೇಷನ್ ಅಥವಾ ಸಂಘಟಿಸುವಿಕೆ ಇಲ್ಲಿಯತನಕ ಅಸಾಧ್ಯವಾಗಿತ್ತು; ಒಂದು ಅಮೆರಿಕದಿಂದ ತೀವ್ರವಾದ ಹಸ್ತಕ್ಷೇಪ ಮತ್ತು ಕೊಲಂಬಿಯಾದ ಎಲೀಟ್ ವರ್ಗದಿಂದ ಆರ್ಥಿಕ ಬೆಂಬಲ ಪಡೆಯುವ ಅತಿ ಹಿಂಸಾತ್ಮಕವಾದ ಬಲಪಂಥೀಯ ಮಿಲಿಟಿಯಾಗಳು.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಡೆದ ಭಾರಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪೆಟ್ರೊ ಅವರ ವಿಜಯ ಕಾಣಿಸಿಕೊಂಡಿದೆ, ಕೋವಿಡ್ ಸಮಯದಲ್ಲಿ ಆರೋಗ್ಯ ಸೇವೆ ಮತ್ತು ಇತರ ಸಮಾಜ ಕಲ್ಯಾಣ ಸೇವೆಗಳಿಗೆ ಅವಕಾಶ ಸಿಗದೆ ಇರುವುದು, ಸಂಪತ್ತಿನ ಅಸಮಾನತೆ ಮತ್ತು ಪೊಲೀಸರ ದೌರ್ಜನ್ಯವು ಜನರು ರಸ್ತೆಗಳಿದು ಪ್ರತಿಭಟಿಸುವಂತೆ ಮಾಡಿತ್ತು. ಹಲವಾರು ವರ್ಷಗಳಿಂದ ಬಿಕ್ಕಟ್ಟಿನ ಸಮಯದಲ್ಲಿ ಸರಕಾರವು ತೋರಿದ ಉದಾಸೀನತೆಗೆ ಪ್ರತಿಕ್ರಿಯೆಯಾಗಿ ಪೆಟ್ರೊ ಅವರ ಗೆಲುವು ಕಾಣಿಸಿಕೊಂಡಿದೆ.

ಯಾರು ಈ ಗುಸ್ತಾವೋ ಪೆಟ್ರೊ?

ಗುಸ್ತಾವೊ ಪೆಟ್ರೊ ತನ್ನ 17ನೆಯ ವಯಸ್ಸಿನಲ್ಲಿಯೇ ರಾಜಕೀಯ ಜೀವನವನ್ನು ಎಂ-19 ಆಂದೋಲನದ ಭಾಗವಾಗಿ ಶುರು ಮಾಡಿದ್ದರು. 1970ರ ಎಪ್ರಿಲ್ 19ರ ಭ್ರಷ್ಟ ಚುನಾವಣೆಗೆ ಪ್ರತಿಕ್ರಿಯೆಯಾಗಿ ಒಂದು ಗೆರಿಲ್ಲಾ ಆಂದೋಲನ ಹುಟ್ಟಿಕೊಂಡಿತ್ತು, ಅದುವೆ ಎಂ-19. ಅನೇಕ ವರ್ಷಗಳ ಮಿಲಿಟರಿ ಆಳ್ವಿಕೆಯ ನಂತರ ಕೊಲಂಬಿಯಾದಲ್ಲಿ ಮೊದಲ ಬಾರಿಗೆ ಚುನಾವಣೆಗಳಾಗಿದ್ದು ಆಗ. ಆದರೆ ಕೊಲಂಬಿಯಾದ ಹೆಚ್ಚಿನ ಜನರು ಆ ಚುನಾವಣೆಯನ್ನು ಒಂದು ಪ್ರಹಸನದಂತೆ ಕಂಡರು. ಆ ಚುನಾವಣೆಯಲ್ಲಿ ಕೊಲಂಬಿಯಾದ ಮಾಜಿ ಅಧ್ಯಕ್ಷ ರೊಹಾಸ್ ಪಿನಿಲಾ ಸ್ಪರ್ಧಿಸಿ ಸೋತಿದ್ದರು. ರೊಹಾಸ್ ಅವರನ್ನು ಸೋಲಿಸಲು ಚುನಾವಣೆಯನ್ನು ರಿಗ್ಗಿಂಗ್ ಮಾಡಲಾಗಿದೆ ಎಂದು ಎಂ-19 ಆರೋಪಿಸಿತ್ತು.

ರೊಹಾಸ್ ಪಿನಿಲಾ

ಎಂ-19 ಒಂದು ರಾಷ್ಟ್ರೀಯವಾದಿ ಆಂದೋಲನವಾಗಿತ್ತು, ಅದು ತಮ್ಮ ದೇಶವನ್ನು ದೊಡ್ಡ ವ್ಯಾಪಾರಗಳು ಮತ್ತು ಶ್ರೀಮಂತ ಗಣ್ಯರು ಹಾಳುಮಾಡುತ್ತಿದ್ದಾರೆ ಎಂದು ಘೋಷಿಸಿತ್ತು. ಕೊಕಾ-ಕೋಲಾ ಮತ್ತು ಚಿಕಿಟಾದಂತಹ ಅಮೆರಿಕದ ಕಂಪೆನಿಗಳು ಕೊಲಂಬಿಯನ್ ಸರಕಾರ ಮತ್ತು ಪ್ಯಾರಾ ಮಿಲಿಟರಿ ಪಡೆಗಳೊಂದಿಗೆ ಕೆಲಸ ಮಾಡುತ್ತಿದ್ದವು. ಮಾರ್ಕಿಸ್ಟ್-ಲೆನಿನಿಸ್ಟ್ ರೆವಲ್ಯೂಷನರಿ ಆರ್ಮಡ್ ಫೋರ್ಸಸ್ ಆಫ್ ಕೊಲಂಬಿಯಾ (ಎಫ್‌ಎಆರ್‌ಸಿ)ಯ ನಂತರ ಎಂ-19 ಎಲ್ಲಕ್ಕಿಂತ ದೊಡ್ಡ ಗೆರಿಲ್ಲಾ ಗುಂಪಾಗಿತ್ತು.

ಪೆಟ್ರೊರವರನ್ನು 1985ರಲ್ಲಿ ಬಂಧಿಸಲಾಯಿತು. ಬಿಡುಗಡೆಯ ನಂತರ ಅವರು, ಎಂ-19 ನ ಮಾಜಿ ಸದಸ್ಯರೊಂದಿಗೆ ಎಂ-19 ಡೆಮಾಕ್ರೆಟಿಕ್ ಅಲಾಯನ್ಸ್ ಸ್ಥಾಪಿಸಿ, ಚುನಾವಣೆಗಳಲ್ಲಿ ಸ್ಪರ್ಧಿಸತೊಡಗಿದರು. ಅಲ್ಟರ್ನೇಟಿವ್ ಡೆಮಾಕ್ರೆಟಿಕ್ ಪೋಲ್‌ನ ಭಾಗವಾಗಿ ಅವರು ಸೆನೆಟರ್ ಆಗಿ ಕಾರ್ಯನಿರ್ವಹಿಸಿದರು. ಕೊಲಂಬಿಯದ 2010ರ ಚುನಾವಣೆಯಲ್ಲಿ ವಿಫಲ ಪ್ರಯತ್ನದ ನಂತರ ಅವರು ಪಾರ್ಟಿಯನ್ನು ತೊರೆದರು. 2011ರಲ್ಲಿ ಅವರು ಪ್ರೊಗ್ರೆಸಿವ್ ಮೂವ್‌ಮೆಂಟ್‌ಅನ್ನು ಸ್ಥಾಪಿಸಿದರು, ಅದುವೇ ನಂತರ ಹ್ಯೂಮೇನ್ ಕೊಲಂಬಿಯಾ ಎಂದು ಬದಲಾಯಿತು.

ಹ್ಯೂಮೇನ್ ಕೊಲಂಬಿಯಾದ ಭಾಗವಾಗಿ, ಬೊಗೊಟಾದ ಮೇಯರ್ ಸ್ಥಾನಕ್ಕೆ ಪೆಟ್ರೊ ಸ್ಪರ್ಧಿಸಿದರು. ಆಗ ಮೇಯರ್ ಆಗಿ ಅವರು ಮಾಡಿದ ಕೆಲಸಗಳು ಪೆಟ್ರೊ ಅವರನ್ನು ವಿಶ್ವವಿಖ್ಯಾತರನ್ನಾಗಿಸಿತು. 2012ರಲ್ಲಿ ಅವರು ಇಂಟೆಗ್ರೇಟೆಡ್ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಸಿಸ್ಟಂಅನ್ನು ದೇಶದಲ್ಲಿ ಪರಿಚಯಿಸಿದರು. ಅವರು ರ್‍ಯಾಪಿಡ್ ಬಸ್ ಟ್ರಾನ್ಸಿಟ್, ಬಸ್ ಹಾಗೂ ಗೊಂಡೊಲಾ ಲಿಫ್ಟ್ ವ್ಯವಸ್ಥೆಗಳನ್ನು ಒಟ್ಟುಗೂಡಿಸಿ ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸೃಷ್ಟಿಸಿದ್ದರು.

ಈ ಇಂಟೆಗ್ರೇಟೆಡ್ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆಯ ಪ್ರಸ್ತಾಪವನ್ನು ತಂದಿದ್ದು ಪೆಟ್ರೋಗಿಂತ ಮುಂಚೆ ಇದ್ದ ಮೇಯರ್. ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಪೆಟ್ರೊ ಅದನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದರು ಹಾಗೂ ಈ ವ್ಯವಸ್ಥೆಯನ್ನು ವಿಸ್ತರಿಸಿ, ಹೆಚ್ಚು ಕಾರ್ಯಕ್ಷಮತೆಯಿಂದ ನಡೆಯುವಂತೆ ಮಾಡಿ, ಬೊಗೊಟಾದಲ್ಲಿ ಸರಾಸರಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಿಸಿದರು ಹಾಗೂ ನಗರದಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡಿದರು.

2018ರಲ್ಲಿ ಪೆಟ್ರೊ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು, ಆ ಚುನಾವಣೆಯಲ್ಲಿ ಐವಾನ್ ಡುಕೆ ವಿಜಯಿಯಾಗಿ ಪೆಟ್ರೊ ಎರಡನೇ ಸ್ಥಾನ ಪಡೆದಿದ್ದರು. ಆದರೆ ಕೋವಿಡ್-19 ಸಾಂಕ್ರಾಮಿಕವನ್ನು ಸರಿಯಾಗಿ ನಿರ್ವಹಿಸದೇ ಇದ್ದರಿಂದ ಡುಕೆಯ ಜನಪ್ರಿಯತೆ ಕುಗ್ಗಿತು, ಅದುವೆ ನಂತರ, ಅಂದರೆ ಈ ವರ್ಷ ಪೆಟ್ರೋ ವಿಜಯಕ್ಕೆ ಕಾರಣವಾಯಿತು.

ಫ್ರಾನ್ಸಿಯಾ ಮಾರ್ಕೆಸ್

ಈ ಚುನಾವಣೆಯ ಇನ್ನೊಂದು ವಿಶೇಷವೆಂದರೆ, ಫ್ರಾನ್ಸಿಯಾ ಮಾರ್ಕೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದು. ಈಗ ಫ್ರಾನ್ಸಿಯಾ ಕೊಲಂಬಿಯಾದ ಉಪಾದ್ಯಕ್ಷರಾಗಲಿರುವ ಮೊದಲ ಆಫ್ರೋ-ಕೊಲಂಬಿಯನ್ ಆಗಲಿದ್ದಾರೆ. ಮಾರ್ಕೆಸ್ ಒಬ್ಬ ಮಾನವ ಹಕ್ಕುಗಳ ಕಾರ್ಯಕರ್ತೆ ಹಾಗೂ ಪರಿಸರವಾದಿ ಮತ್ತು ವಕೀಲೆಯಾಗಿದ್ದಾರೆ. ಅವರೂ ತಮ್ಮ ರಾಜಕೀಯ ಜೀವನವನ್ನು ಚಿಕ್ಕವಯಿಸ್ಸಿನಲ್ಲಿ ಅಂದರೆ ತಮ್ಮ 13ನೆಯ ವಯಸ್ಸಿನಲ್ಲಿ ಪ್ರಾರಂಭಿಸಿದರು. ಆಗ ಅವರು ತಮ್ಮ ಹಳ್ಳಿಯನ್ನು ಅಪಾಯಕ್ಕೀಡಾಗಿಸಿದ ಆಣೆಕಟ್ಟು ನಿರ್ಮಾಣದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಾರ್ಕೆಸ್ ಅವರು ಕುಟುಂಬ ಗಣಿಗಾರಿಕೆಯಲ್ಲಿ ತೊಡಗಿತ್ತು. ಅವರು ಬೆಳೆಯುತ್ತ, ಗಣಿಗಾರಿಕೆ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡರು, ಅಕ್ರಮ ಗಣಿಗಾರಿಕೆ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ನಡೆಸುತ್ತಿದ್ದ ಗಣಿಗಾರಿಕೆಯ ವಿರುದ್ಧ ಹೋರಾಟ ಮಾಡಿದರು. ಅವರ ಹೋರಾಟ ಅತ್ಯಂತ ಅಪಾಯಕಾರಿಯಾಗಿತ್ತು, ಏಕೆಂದರೆ ಸ್ಥಳೀಯ ಮಾಫಿಯಾ ಮತ್ತು ಮಿಲಿಟಿಯಾಗಳು ಪದೇಪದೇ ಬೆದರಿಕೆ ಹಾಕುತ್ತಿದ್ದವು. 2014ರಲ್ಲಿ ಮಾರ್ಕೆಸ್ ಕಾವುಕಾದಿಂದ ಬೊಗೊಟಾಗೆ 350 ಕಿಲೊಮೀಟರ್ ಜಾಥಾ ಆಯೋಜಿಸಿದರು, ಅದರಲ್ಲಿ 80 ಆಫ್ರೋ-ಅಮೆರಿಕನ್ನರು ಪಾಲ್ಗೊಂಡು ವಿಶ್ವದ ಗಮನವನ್ನು ಅಕ್ರಮ ಗಣಿಗಾರಿಕೆಯತ್ತ ಸೆಳೆದಿದ್ದರು. ಅವರ ಆ ಕ್ಯಾಂಪೇನ್ ಯಶಸ್ವಿಯಾಗಿ, ಅದರ ಪರಿಣಾಮವಾಗಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಒಂದು ರಾಷ್ಟ್ರೀಯ ಟಾಸ್ಕ್ ಫೋರ್ಸ್‌ಅನ್ನು ರಚಿಸಲಾಯಿತು. ಗಣಿಕಾರಿಕೆ
ವಿರೋಧಿ ಟಾಸ್ಕ್ ಫೋರ್ಸ್ ಎಂಬುದು ಹಿಂದೆಂದೂ ಕಾಣದ ವಿಶೇಷ ಬೆಳವಣಿಗೆಯಾಗಿತ್ತು.

ಫ್ರಾನ್ಸಿಯಾ ಮಾರ್ಕೆಸ್

2022ರಲ್ಲಿ ಅವರು ಮಹಿಳೆಯರ ವಿಷಯಗಳ ಮೇಲೆ, ಆಫ್ರೋ-ಕೊಲಂಬಿಯನ್ನರ ವಿಷಯಗಳ, ಮೂಲನಿವಾಸಿಗಳ ಮತ್ತು ಇಂತಹ ಇತರ ಪ್ರಮುಖ ವಿಷಯಗಳ ಮೇಲೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ತನ್ನ ಯೋಜನೆಯನ್ನು ಘೋಷಿಸಿದರು. ಫ್ರಾನ್ಸಿಯಾ ಪೆಟ್ರೊ ವಿರುದ್ಧ ಸ್ಪರ್ಧಿಸಿ, ಪ್ರೈಮರಿಗಳಲ್ಲಿ ಎರಡನೆಯ ಸ್ಥಾನ ಪಡೆದರು. ತನ್ನ ಉಮೇದುವಾರಿಕೆಯನ್ನು ಖಾತ್ರಿಪಡಿಸಿಕೊಂಡ ನಂತರ ಪೆಟ್ರೋ ಅವರು ಫ್ರಾನ್ಸಿಯಾ ಅವರನ್ನು ತನ್ನ ಉಪಾಧ್ಯಕ್ಷ ಅಭ್ಯರ್ಥಿ ಎಂದು ನಾಮನಿರ್ದೇಶನ ಮಾಡಿದರು.

ಲ್ಯಾಟಿನ್ ಅಮೆರಿಕದಲ್ಲಿ ಎಡಪಂಥೀಯ ಶಕ್ತಿಗಳ ಸಂಚಲನ

ಮೆಕ್ಸಿಕೊ, ಅರ್ಜೆಂಟಿನಾ, ಬೊಲಿವಿಯಾ, ಹೊಂಡುರಾಸ್, ಪೆರು ಮತ್ತು ಚಿಲಿ ನಂತರ ಕೊಲಂಬಿಯಾದಲ್ಲಿ ಪೆಟ್ರೊ ಅವರ ಗೆಲುವು ಇಡೀ ಲ್ಯಾಟಿನ್ ಅಮೆರಿಕದಲ್ಲಿ ರಾಜಕೀಯ ಎಡಕ್ಕೆ ತಿರುವು ಪಡೆದುಕೊಂಡಿದ್ದು ಕಾಣುತ್ತದೆ. ಈ ಬೆಳವಣಿಗೆಗಳು 1990ರ ಕೊನೆಯ ಭಾಗವನ್ನು ನೆನಪಿಸುತ್ತವೆ. ಹಾಗೆಯೇ 2010ರ ಮೊದಲ ಭಾಗದಲ್ಲಿ ಕೂಡ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳು ಎಡಪಂಥದ ಕಡೆಗೆ ವಾಲಿರುವ ಜನಪ್ರಿಯ ಸರಕಾರಗಳನ್ನು ಆಯ್ಕೆ ಮಾಡತೊಡಗಿದ್ದವು. ಈಗ ಮುಂಬರುವ ಬ್ರೆಜಿಲ್‌ನ ಚುನಾವಣೆಗಳಲ್ಲಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವ ಅವರ ವರ್ಕರ್ಸ್ ಪಾರ್ಟಿ ಗೆಲ್ಲುವ ಎಲ್ಲ ಸಾಧ್ಯತೆಗಳಿವೆ. ಕೊಲಂಬಿಯಾ ಮತ್ತು ಚಿಲಿಯಲ್ಲಿ ರಾಜಕೀಯವು ಎಡಪಂಥದ ಕಡೆಗೆ ವಾಲಿದ್ದು, ಹಿಂದೆಂದೂ ಕಾಣದ ವಿದ್ಯಮಾನ ಏಕೆಂದರೆ ಈ ಎರಡೂ ದೇಶಗಳು ಮಿಲಿಟರಿ ಆಳ್ವಿಕೆಯ, ಪ್ರತಿಕ್ರಿಯಾತ್ಮಕ ಅಥವಾ ಅದಕ್ಷತೆಯಿಂದ ಕೂಡಿದ ನಾಯಕತ್ವದ ಅಥವಾ ಆಂತರಿಕ ಕಲಹದ ದೀರ್ಘ ಇತಿಹಾಸವನ್ನು ಹೊಂದಿವೆ.

ಈ ದೇಶಗಳು ಎದುರಿಸುತ್ತಿದ್ದ ಪ್ರಸಕ್ತ ಸಮಸ್ಯೆಗಳೆಲ್ಲವೂ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಇನ್ನಷ್ಟು ಉಲ್ಬಣಗೊಂಡಿದೆ. ಸಾರ್ವಜನಿಕ ಆರೋಗ್ಯ ಸೇವೆಯ ವ್ಯವಸ್ಥೆಗಳು, ಕಲ್ಯಾಣ ಯೋಜನೆಗಳು ಹಾಗೂ ಸಾಮಾಜಿಕ ಸೇವೆಗಳು ಆದ್ಯತೆಯ ವಿಷಯಗಳಾಗಿವೆ. ಸಾಂಕ್ರಾಮಿಕದ ಸಮಯದಲ್ಲಿ ಸಂಪತ್ತಿನ ಅಸಮಾನತೆಯಲ್ಲಿ ಆದ ಹೆಚ್ಚಳವೂ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಈ ದೇಶಗಳಲ್ಲಿ ಸಂಪತ್ತಿನ ಅಸಮಾನತೆಯ ಜೊತೆಗೆ ಅತ್ಯಂತ ಭಾರಿ ಪ್ರಮಾಣದ ಭ್ರಷ್ಟಾಚಾರ ಮತ್ತು ಪಕ್ಷಪಾತಿ ಬಂಡವಾಳಶಾಹಿ ವ್ಯವಸ್ಥೆ ತಳುಕುಹಾಕಿಕೊಂಡಿದೆ. ಹಾಗೂ ಈ ಹೊಸ ನಾಯಕರು ಪರಿಸರ ನಾಶದ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿದ್ದಾರೆ.

ನಾಯಕತ್ವದ ಈ ಹೊಸ ರೂಪವು ಇದಕ್ಕಿಂತ ಮುಂಚಿನ ತಲೆಮಾರಿನ ಎಡಪಂಥೀಯರಷ್ಟು ರ್‍ಯಾಡಿಕಲ್ ಆಗಿಲ್ಲ. ಇದರಲ್ಲಿ ಹೆಚ್ಚಿನವರು ಕಾನೂನು ನ್ಯಾಯವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು, ಕಾರ್ಪೊರೇಷನ್‌ಗಳ ಮೇಲೆ ಸಾಧಾರಣ ನಿಯಂತ್ರಣಗಳು, ಸಮಾಧಾನಕರ ವಿದೇಶಾಂಗ ನೀತಿಗಳು ಹಾಗೆಯೇ ಪರಿಸರ ನಾಶವನ್ನು ಕಡಿಮೆ ಮಾಡಲು ಬದ್ಧರಾಗಿದ್ದಾರೆ. ಪೆಟ್ರೊ ಅವರು ಲಿಂಗತ್ವ, ಜನಾಂಗ, ಪರಿಸರ, ಸ್ವಾತಂತ್ರ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿನಾಶಕಾರಿ ಶಕ್ತಿಗಳ ವಿಷಯಗಳ ಬಗ್ಗೆ ಕಾಳಜಿ ಇರುವ ಹೊಸ ತಲೆಮಾರಿನ ನಾಯಕರ ಭಾಗವಾಗಿದ್ದಾರೆ. ಅರವತ್ತು ವರ್ಷಗಳಿಗಿಂತ ಹೆಚ್ಚು ಸಮಯದ ಹೋರಾಟದ ನಂತರ ಕೊಲಂಬಿಯಾದ ಜನರ ಬಗ್ಗೆ ಅಲ್ಲಿನ ಸರಕಾರ ಒಂದಿಷ್ಟು ಕಾಳಜಿ ಹೊಂದಿರಲೆಂದು ಈ ಗೆಲುವು ಬಂದಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...