Homeಮುಖಪುಟಕುರಿ-ಆಡು ರಕ್ತದ ಫ್ರೈ ಲಾಕಿ ಮಾಡುವುದು ಹೇಗೆ?: ಇಲ್ಲಿದೆ ಬೊಂಬಾಟ್ ರೆಸಿಪಿ

ಕುರಿ-ಆಡು ರಕ್ತದ ಫ್ರೈ ಲಾಕಿ ಮಾಡುವುದು ಹೇಗೆ?: ಇಲ್ಲಿದೆ ಬೊಂಬಾಟ್ ರೆಸಿಪಿ

ಹಳ್ಳಿಯ ಕಡೆ ಒಂದು ಮೇಕೆ ಅಥವಾ ಕುರಿ ರಕ್ತಕ್ಕೆ 50 ರೂ ನಿಂದ 100 ರೂ ವರೆಗೆ ಬೆಲೆ ಇರುತ್ತದೆ. ಲಾಕಿಯನ್ನು ಹಲವು ಹೋಟೆಲ್‌ಗಳಲ್ಲಿ ಸಹ ಮಾಡುತ್ತಾರೆ.

- Advertisement -
- Advertisement -

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕುರಿ ರಕ್ತದ ಫ್ರೈ ಲಾಕಿ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಸಂಗೀತ ದಿಗ್ಗಜ ಹಂಸಲೇಖರವರು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ “ಪೇಜಾವರ ಸ್ವಾಮಿಗಳು ದಲಿತರ ಕೇರಿಗೆ ಹೋಗಿದ್ದರಿಂದ ಏನೂ ಪ್ರಯೋಜನವಿಲ್ಲ. ಅವರಿಗೆ ಕೋಳಿ ಮಾಂಸ ಕೊಟ್ಟಿದ್ದರೆ ಪೇಜಾವರರು ತಿನ್ನುತ್ತಿದ್ದರೆ? ಹೋಗಲಿ ಕುರಿ ರಕ್ತದ ಫ್ರೈ ಕೊಟ್ಟರೆ ತಿನ್ನುತ್ತಿದ್ದರೆ” ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಯಾರಾದರೂ ಕುರಿ ರಕ್ತ ಕುಡಿಯುತ್ತಾರೆಯೇ? ಫ್ರೈ ಮಾಡುತ್ತಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಒಂದಷ್ಟು ಜನರಿಗೆ ಇದರ ಕುರಿತು ಮಾಹಿತಿಯೇ ಇಲ್ಲ. ಇನ್ನು ಮತ್ತಷ್ಟು ಜನರು ಅದರ ಸ್ವಾದದ ಬಗ್ಗೆ ಬರೆಯುತ್ತಿದ್ದಾರೆ. ಆದರೆ ನಿಜವಾಗಿಯೂ ಕುರಿ ರಕ್ತದ ಫ್ರೈ ಎಂಬುದು ಬಹಳ ವರ್ಷದಿಂದ ಚಾಲ್ತಿಯಲ್ಲಿರುವ ಜನಪ್ರಿಯ ಆಹಾರವಾಗಿದೆ. ಹಾಗಾಗಿ ಕುರಿ-ಆಡು ರಕ್ತದ ಫ್ರೈ ಲಾಕಿ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಕುರಿ ಅಥವಾ ಮೇಕೆಯನ್ನು ಕೊಯ್ಯುವ ಮೊದಲೇ ಅದರ ರಕ್ತ ಯಾರಿಗೆ ಬೇಕೆಂದು ನಿಗಧಿಯಾಗಿರುತ್ತದೆ. ನಮಗೆ ಬೇಕು, ನಮಗೆ ಬೇಕು ಎಂಬ ಪೈಪೋಟಿ ಸಹ ಇರುತ್ತದೆ. ಕುರಿಯನ್ನು ಕೊಯ್ಯುವಾಗ ಶುಚಿಯಾದ ಒಂದು ದೊಡ್ಡ ಬಟ್ಟಲಿನಲ್ಲಿ ಸ್ವಲ್ಪ ಉಪ್ಪು ಮತ್ತು ಹುಣಿಸೆ ರಸ ಹಾಕಿ ಇಟ್ಟುಕೊಂಡು ಅದಕ್ಕೆ ಪೂರ್ತಿ ರಕ್ತವನ್ನು ಬಸಿದುಕೊಳ್ಳಬೇಕು. ನಂತರ ಸ್ವಲ್ಪ ಹೊತ್ತಿನಲ್ಲೇ ಆ ಬಿಸಿ ರಕ್ತ ತಣಿದು ಹೆಪ್ಪುಗಟ್ಟುತ್ತದೆ, ಅಂದರೆ ಗಟ್ಟಿಯಾಗಿರುತ್ತದೆ. ಸ್ವಲ್ಪ ನೀರು ಸಹ ಬಿಟ್ಟಿಕೊಂಡಿರುತ್ತದೆ. ಆ ನೀರನ್ನು ಚೆಲ್ಲಿ ಬದಲಿಗೆ ಶುದ್ಧ ನೀರು ಹಾಕಿ ಅದನ್ನು ಹದವಾಗಿ ಬೇಯಿಸಿಕೊಳ್ಳಬೇಕು. ಎರಡು ಕಡೆ ತಿರುವಿಹಾಕಿ ಒಂದು ಹದಕ್ಕೆ ಬೆಂದ ನಂತರ ನೀರನ್ನು ಚೆಲ್ಲಿಬಿಡಬೇಕು. ನಂತರ ಅದನ್ನು ಚೆನ್ನಾಗಿ ಸ್ಪೂನ್, ಚಾಕು ಅಥವಾ ಕೈಯಲ್ಲಿ ಪುಡಿ ಮಾಡಿಕೊಳ್ಳಬೇಕು.

ನಂತರ ಈರುಳ್ಳಿ, ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ಹಚ್ಚಿಕೊಳ್ಳಬೇಕು. ಜೊತೆಗೆ ಅರ್ಧ ಹೋಳು ತೆಂಗಿನ ಕಾಯಿಯನ್ನು ತುರಿದುಕೊಳ್ಳಬೇಕು. ಸ್ಟೌವ್ ಹಚ್ಚಿ ಬಾಣಲಿಯಿಟ್ಟು ಸ್ವಲ್ಪ ಎಣ್ಣೆ ಹಾಕಿ ಒಗ್ಗರಣೆ ಹಾಕಬೇಕು. ಕರಿಬೇವು ಹಾಕಿ, ಹಸಿರು ಮೆಣಸಿನ ಕಾಯಿ, ಈರುಳ್ಳಿ ಬೆಂದ ನಂತರ ರಕ್ತದ ಪುಡಿಯನ್ನು ಸೇರಿಸಿ ತಿರುಗಿಸಬೇಕು. ತೆಂಗಿನ ತುರಿ ಹಾಕಿ, ಸ್ವಲ್ಪ ಅರಿಶಿಣ ಪುಡಿ ಮತ್ತು ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು. ಖಾರ ಬೇಕೆಂದರೆ ಸ್ವಲ್ಪ ಮೆಣಸಿನಪುಡಿಯನ್ನು ಸೇರಿಸಬಹುದು. ಚೆನ್ನಾಗಿ ಫ್ರೈ ಆದ ನಂತರ ಇಳಿಸಿ ಸೇವಿಸಬಹುದು.

ಇದಕ್ಕೆ ಲಾಕಿ ಎಂದು ಕರೆಯುತ್ತಾರೆ. ಇದರಿಂದ ಎದೆನೋವು ಗುಣವಾಗುತ್ತದೆ, ಬಹಳ ಪೌಷ್ಠಿಕಾಂಶದ ಆಹಾರ ಎಂದು ಹಳ್ಳಿಯ ಕೆಲವರು ಹೇಳುತ್ತಾರೆ. ಎದೆನೋವು ಗುಣದ ಬಗ್ಗೆ ನಮಗೆ ಗೊತ್ತಿಲ್ಲ, ಆದರೆ ಲಾಕಿ ಸಕತ್ ರುಚಿ ಇರುತ್ತದೆ ಎನ್ನುವುದು ಸತ್ಯ.

ಹಳ್ಳಿಯ ಕಡೆ ಒಂದು ಮೇಕೆ ಅಥವಾ ಕುರಿ ರಕ್ತಕ್ಕೆ 50 ರೂ ನಿಂದ 100 ರೂ ವರೆಗೆ ಬೆಲೆ ಇರುತ್ತದೆ. ಲಾಕಿಯನ್ನು ಹಲವು ಹೋಟೆಲ್‌ಗಳಲ್ಲಿ ಸಹ ಮಾಡುತ್ತಾರೆ. ಬೆಂಗಳೂರಿನಲ್ಲಿ ‘ವಿದ್ಯಾ ಪೀಠ’ ವೃತ್ತದ ಪಕ್ಕದಲ್ಲೇ ಇರುವ ಶಂಕರ್‌ನಾಗ್ ವೃತ್ತದಲ್ಲಿನ ಹಲವು ಮಾಂಸಹಾರದ ಹೋಟೆಲ್‌ಗಳಲ್ಲಿ ಪ್ರತಿ ಮಧ್ಯಾಹ್ನ ಲಾಕಿ ದೊರೆಯುತ್ತದೆ. ಆಸಕ್ತಿ ಇರುವವರ ಹೋಗಿ ಸವಿಯಬಹುದು.


ಇದನ್ನೂ ಓದಿ: ತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...