Homeಅಂಕಣಗಳುಹೈದ್ರಾಬಾದ್ ಫಂಡ್: ಪಾಕಿಸ್ತಾನಕ್ಕೆ ಮುಖಭಂಗ, 306 ಕೋಟಿ ರೂ. ಯಾರ ಪಾಲಾಗಲಿದೆ?

ಹೈದ್ರಾಬಾದ್ ಫಂಡ್: ಪಾಕಿಸ್ತಾನಕ್ಕೆ ಮುಖಭಂಗ, 306 ಕೋಟಿ ರೂ. ಯಾರ ಪಾಲಾಗಲಿದೆ?

- Advertisement -
- Advertisement -

ಇಂಗ್ಲೆಂಡ್ ಅಂಡ್ ವೇಲ್ಸ್ ಹೈಕೋರ್ಟ್ ಇತ್ತೀಚೆಗೆ ಕೊಟ್ಟ ತೀರ್ಪೊಂದು ಎಲ್ಲರ ಗಮನ ಸೆಳೆದಿದೆ. ಲಂಡನ್‍ನ ನ್ಯಾಟ್‍ವೆಸ್ಟ್ ಬ್ಯಾಂಕಿನಲ್ಲಿರುವ 35 ಮಿಲಿಯನ್ ಪೌಂಡ್ ಅಂದರೆ 306 ಕೋಟಿ ರೂಪಾಯಿ ಹಣ ತನಗೆ ಸೇರಬೇಕೆಂದು ಪಾಕಿಸ್ತಾನ ಹೂಡಿದ್ದ ದಾವೆಯನ್ನು ತಳ್ಳಿ ಹಾಕಿರುವ ನ್ಯಾಯಾಲಯ ಭಾರತದ ಪರವಾಗಿ ತೀರ್ಪು ನೀಡಿದೆ. ಆ ಮೂಲಕ ಸುಮಾರು ಏಳು ದಶಕಗಳ ಹಳೆಯ ಪ್ರಕರಣವೊಂದು ಇತ್ಯರ್ಥ ಕಂಡಂತಾಗಿದೆ. ‘ಹೈದ್ರಾಬಾದ್ ಫಂಡ್’ ಎಂತಲೇ ಹೆಸರಾದ ಈ ವಿವಾದ ಕೇವಲ ಹಣದ ಕಾರಣಕ್ಕೆ ಮಾತ್ರವಲ್ಲದೆ ಭಾರತ ಪಾಕಿಸ್ತಾನಗಳ ನಡುವೆ ಪ್ರತಿಷ್ಠೆಯ ವಿಷಯವಾಗಿತ್ತು.

ಏನಿದು ಹೈದ್ರಾಬಾದ್ ಫಂಡ್..?

1948ರ ಸೆಪ್ಟೆಂಬರ್ ನಲ್ಲಿ ಹೈದ್ರಾಬಾದ್‍ನ ಏಳನೇ ನಿಜಾಮನಾಗಿದ್ದ ಮೀರ್ ಒಸ್ಮಾನ್ ಅಲಿ ಖಾನ್, ಇಂಗ್ಲೆಂಡ್‍ನಲ್ಲಿದ್ದ ಪಾಕಿಸ್ತಾನದ ಅಂದಿನ ರಾಯಭಾರಿ ಹಬೀಬ್ ಇಬ್ರಾಹಿಂ ರಹಮತುಲ್ಲಾ ಖಾತೆಗೆ ವರ್ಗಾವಣೆ ಮಾಡಿದ್ದ 1 ಮಿಲಿಯನ್ ಪೌಂಡ್ ಹಣವಿದು. ಅದೀಗ 35 ಮಿಲಿಯನ್‍ನಷ್ಟಾಗಿದೆ. ಆದರೆ ನಂತರ ಕೋರ್ಟ್‍ನಲ್ಲಿ ಹಣಕ್ಕಾಗಿ ದಾವೆ ಹೂಡಿದ ಒಸ್ಮಾನ್ ಅಲಿ ಖಾನ್, ಹಣವನ್ನು ತಾನು ವರ್ಗಾವಣೆ ಮಾಡಿಲ್ಲ, ನನ್ನ ಗಮನಕ್ಕೆ ಬಾರದೆ ಅಂದಿನ ಹೈದ್ರಾಬಾದ್ ಪ್ರಾಂತ್ಯದ ಹಣಕಾಸು ಮತ್ತು ವಿದೇಶಾಂಗ ಸಚಿವನಾಗಿದ್ದ ನವಾಬ್ ಮೊಯಿನ್ ನವಾಜ್ ಜಂಗ್, ವರ್ಗಾವಣೆ ಮಾಡಿದ್ದ ಎಂದು ಹೇಳಿಕೆ ನೀಡಿದ್ದರು. ಆಗ ಪ್ರಕರಣ ಇತ್ಯರ್ಥವಾಗುವವರೆಗೆ ಹಣವನ್ನು ‘ಫ್ರೀಜ್’ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು.

1947ರಲ್ಲಿ ಭಾರತ ವಿಭಜನೆಯಾದಾಗ, ತನ್ನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ ಪ್ರಾಂತ್ಯವನ್ನು ಭಾರತದೊಂದಿಗೆ ವಿಲೀನ ಮಾಡದೆ ಸ್ವತಂತ್ರವಾಗುಳಿಯಲು ನಿಜಾಮ ನಿರ್ಧರಿಸಿದ. ಆಗ ಭಾರತದೊಂದಿಗೆ ಒಂದು ಯಥಾಸ್ಥಿತಿ ಒಪ್ಪಂದಕ್ಕೆ ಸಹಿ ಹಾಕಿದ್ದ. ಅದರ ಪ್ರಕಾರ ಒಂದು ವರ್ಷದ ಕಾಲ ಭಾರತವು ಹೈದ್ರಾಬಾದ್‍ನಲ್ಲಿ ಸೇನೆಯನ್ನು ಜಮಾವಣೆ ಮಾಡದೆ ಯಥಾಸ್ಥಿತಿ ಕಾಪಾಡಬೇಕಿತ್ತು. ಹಾಗಾಗಿ ಸಿಕಂದರಾಬಾದ್‍ನಲ್ಲಿ ಭಾರತೀಯ ಸೇನೆಯನ್ನು ವಾಪಾಸ್ ಕೂಡಾ ಕರೆಸಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ನಿಜಾಮನ ‘ರಜಾಕಾರ್’ ಸೈನಿಕರ ಉಪಟಳ ಹೆಚ್ಚಾಗಿತ್ತಲ್ಲದೆ, ನಿಜಾಮ ಪೋರ್ಚುಗೀಸರ ಜತೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದರಿಂದ ಭಾರತವು 1948ರ ಸೆಪ್ಟೆಂಬರ್ ನಲ್ಲಿ ‘ಆಪರೇಷನ್ ಪೋಲೊ’ ಹೆಸರಿನ ಸೇನಾ ಕಾರ್ಯಾಚರಣೆ ಮೂಲಕ ಹೈದ್ರಾಬಾದ್ ಅನ್ನು ತನ್ನೊಳಗೆ ವಿಲೀನ ಮಾಡಿಕೊಂಡಿತು. ಅಂತಹ ಯುದ್ಧಮಯ ಸನ್ನಿವೇಶದಲ್ಲೇ ವಿತ್ತ ಸಚಿವ ಹಣವನ್ನು ಪಾಕಿಸ್ತಾನದ ರಾಯಭಾರಿ ಅಕೌಂಟಿಗೆ ವರ್ಗಾಯಿಸಿದ್ದ.

ವಿಲೀನದ ನಂತರ ನಿಜಾಮ ಹಣ ವಾಪಾಸ್ ನೀಡುವಂತೆ ಕೇಳಿದಾಗ ಪಾಕಿಸ್ತಾನ ತಕರಾರು ಮಾಡಿತು. ಹಾಗಾಗಿ ಲಂಡನ್ ಕೋರ್ಟ್‍ನಲ್ಲಿ ದಾವೆ ಹೂಡಿದರು.

ಪಾಕಿಸ್ತಾನದ ವಾದ ಏನಾತ್ತು..?

ಆರಂಭದಲ್ಲಿ ಇದು ಏಳನೇ ನಿಜಾಮ ಮತ್ತು ಪಾಕಿಸ್ತಾನ ನಡುವಿನ ವಿವಾದವಾಗಿತ್ತಷ್ಟೆ. ಆದರೆ 1956ರಲ್ಲಿ ನಿಜಾಮ ಹಣದ ಮೇಲಿನ ದಾವೆ ಹೂಡಿಕೆ ಹಕ್ಕನ್ನು ಭಾರತದ ರಾಷ್ಟ್ರಪತಿಗಳ ಜತೆ ಹಂಚಿಕೊಂಡಾಗ ‘ಹೈದ್ರಾಬಾದ್ ಫಂಡ್’ನ ಮೇಲೆ ಮೂರು ಹಕ್ಕುದಾರರು ಸೃಷ್ಟಿಯಾಗಿದ್ದರು. ಹಣ ತನಗೆ ಸೇರಬೇಕೆಂದು ವಾದಿಸಲು ಪಾಕಿಸ್ತಾನ ಎರಡು ಅಂಶಗಳನ್ನು ಮುಂದಿಡುತ್ತಿತ್ತು. ಮೊದಲನೆಯದು, ಹೈದ್ರಾಬಾದ್ ಪ್ರಾಂತ್ಯವು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವಂತೆ ತನಗೆ ಕೊಟ್ಟಿದ್ದ ಹಣ ಇದು ಎನ್ನುವುದು. ಎರಡನೆಯ ವಾದದಲ್ಲಿ, ಸರ್ಕಾರಿ ಮಾನದಂಡಗಳ ಅನ್ವಯ ವರ್ಗಾವಣೆಯಾದ ಈ ಹಣವನ್ನು ಭಾರತದಿಂದ ‘ಸುರಕ್ಷಿತವಾಗಿಡಲು’ ತನಗೆ ವರ್ಗಾಯಿಸಬೇಕೆಂದು ಹೇಳಿಕೊಂಡಿತ್ತು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ದಿವಂಗತ ಮೀರ್ ಒಸ್ಮಾನ್ ಅಲಿ ಖಾನ್‍ನ ಮೊಮ್ಮಕ್ಕಳಾದ ಮುಫ್ಫಖಮ್ ಝಾ ಮತ್ತು ಮುಖ್ಖರ್ರಂ ಝಾ, ವಿದೇಶಾಂಗ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದ್ದರು. ಆದರೆ 2013ರಲ್ಲಿ ಪಾಕಿಸ್ತಾನ ಇದನ್ನು ಮತ್ತೆ ನ್ಯಾಯಾಲಯದ ಕಟೆಕಟೆ ಹತ್ತಿಸಿತ್ತು. ಈಗ ಅದರ ವಿರುದ್ಧವೇ ತೀರ್ಪು ಹೊರಬಂದಿದೆ.

ಯಾರಿಗೆ ಸೇರಲಿದೆ ಈ ಹಣ..?

ನ್ಯಾಯಾಲಯವು ತನ್ನ ತೀರ್ಪಿನಲ್ಲಿ “ಈ ಹಣದ ಮೇಲೆ ಏಳನೇ ನಿಜಾಮನ ಹಕ್ಕಿದೆ. ಹಾಗಾಗಿ ದಿವಂಗತ ನಿಜಾಮನ ಪರ ವಾದಿಗಳಾದವರಿಗೆ (ಅವರ ಮೊಮ್ಮಕ್ಕಳು ಮತ್ತು ಭಾರತ) ಈ ಹಣ ಸಂದಾಯವಾಗುತ್ತೆ” ಎಂದು ಹೇಳಿದೆ ಮಾತ್ರವಲ್ಲ, “ಅದನ್ನು ಹೇಗೆ ಹಂಚಿಕೊಳ್ಳಬೇಕೆಂಬ ಆಯ್ಕೆಯನ್ನು ಅವರಿಗೇ ಬಿಟ್ಟಿದ್ದೇನೆ. ಆದರೆ ಹಾಗೆ ಹಂಚಿಕೊಳ್ಳುವ ವಿಧಾನ/ನಿಯಮವನ್ನು ನನ್ನ ಮುಂದೆ ಮಂಡಿಸಿ, ಅನುಮೋದನೆ ಪಡೆದುಕೊಳ್ಳಬೇಕು” ಎಂದೂ ಹೇಳಿದೆ.

ನಿಜವಾದ ಪ್ರಶ್ನೆ ಶುರುವಾಗುವುದೇ ಇಲ್ಲಿಂದ. ಯಾಕೆಂದರೆ ನಿಜಾಮನ ಪರವಾಗಿ ಇಬ್ಬರು ಮೊಮ್ಮಕ್ಕಳು ಮಾತ್ರ ದಾವೆಯಲ್ಲಿ ಭಾಗಿಯಾಗಿದ್ದರೂ ಕಾನೂನುಬದ್ಧವಾಗಿ ನಿಜಾಮನ ಪಿತ್ರಾರ್ಜಿತ ಫಲಾನುಭವಿಗಳ ಸಂಖ್ಯೆ 120! ನಿಜಾಮರ ಕುಟುಂಬ ಕಲ್ಯಾಣ ಸಂಘವನ್ನು ಹುಟ್ಟುಹಾಕಿ ಅದರ ಅಧ್ಯಕ್ಷರೂ ಆಗಿರುವ ನಿಜಾಮರ ಮತ್ತೊಬ್ಬ ಮೊಮ್ಮಗ ನಜಾಫ್ ಅಲಿಖಾನ್ ಹೇಳುವಂತೆ, ಬೆರಳೆಣಿಕೆಯ ಮಂದಿ ಬಿಟ್ಟರೆ ಇನ್ನುಳಿದ ನಿಜಾಮನ ವಂಶಸ್ಥರೆಲ್ಲ ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಭಾರತ ಸರ್ಕಾರ ಈ ಹಣದ ಮೇಲೆ ಯಾವ ರೀತಿ ಪಾಲನ್ನು ನಿರೀಕ್ಷಿಸಲಿದೆ ಎನ್ನುವುದು ಸದ್ಯಕ್ಕಂತು ನಿಗೂಢವಾಗಿದೆ. ಹಾಗಾಗಿ ಹಂಚಿಕೆಯ ಕಗ್ಗಂಟು ಇನ್ನಷ್ಟು ಮುಂದುವರೆಯಲಿದೆ.

ಅಂದ ಹಾಗೆ, ಸದರಿ ತೀರ್ಪಿನ ಸಾಧಕ ಬಾಧಕಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪಾಕಿಸ್ತಾನ ಹೇಳಿದೆ. ಹಾಗೊಮ್ಮೆ ಅದೇನಾದರು ಮೇಲ್ಮನವಿ ಸಲ್ಲಿಸಿದರೆ, ಏಳು ದಶಕಗಳ ಈ ಪ್ರಕರಣ ಇನ್ನೊಂದಷ್ಟು ದಶಕಗಳಿಗೆ ಮುಂದುವರೆದರೆ ಅಚ್ಚರಿಯಿಲ್ಲ. ಒಟ್ಟಿನಲ್ಲಿ, ಈ ತೀರ್ಪಿನಿಂದಾಗಿ ಭಾರತದ ಎದುರು ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗ ಆಗಿರುವುದು ಮಾತ್ರ ಸತ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

NDTV ರಾಜೀನಾಮೆ ಬೆನ್ನಲ್ಲೆ ಯೂಟ್ಯೂಬ್ ಚಾನೆಲ್ ತೆರೆದ ರವೀಶ್ ಕುಮಾರ್: ಈಗಾಗಲೇ 10 ಲಕ್ಷದಷ್ಟು...

0
NDTV ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ರಾಜೀನಾಮೆ ಪ್ರಕಟಿಸಿದ ಬೆನ್ನಲ್ಲೆ 'ರವೀಶ್ ಕುಮಾರ್ ಅಫಿಶಿಯಲ್' ಹೆಸರಿನ ಯೂಟ್ಯೂಬ್ ಚಾನೆಲ್‌ ಅನ್ನು ಆರಂಭಿಸಿದ್ದಾರೆ. ತಮ್ಮ ಮೊದಲ ವಿಡಿಯೋದಲ್ಲಿ "ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಿರುವ...