ಐಎಎಸ್ (ಕೇಡರ್) ನಿಯಮಗಳು, 1954ಕ್ಕೆ ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ಬದಲಾವಣೆಗಳ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಧ್ವನಿ ಎತ್ತಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಗಳನ್ನು ಈಗಾಗಲೇ ಪ್ರಶ್ನಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಜನವರಿ 23ರಂದು ತಮ್ಮ ಅಸಮ್ಮತಿಯನ್ನು ಪುನರುಚ್ಚರಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಒಕ್ಕೂಟ ರಚನೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರಿಗೆ ಈಗಾಗಲೇ ಎರಡು ಬಾರಿ ಪತ್ರ ಬರೆದಿದ್ದಾರೆ.
ಈ ಹಿಂದೆ, ರಾಜಸ್ಥಾನದ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಭೂಪೇಶ್ ಬಾಘೇಲ್ ಮತ್ತು ಜಾರ್ಖಂಡ್‌ನ ಹೇಮಂತ್ ಸೊರೆನ್ ಕೂಡ ಮೋದಿಯವರಿಗೆ ಪತ್ರ ಬರೆದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಐಎಎಸ್ (ಕೇಡರ್) ನಿಯಮಗಳು, 1954ಕ್ಕೆ ತಿದ್ದುಪಡಿಯನ್ನು ತರಲು ಹೊರಟಿದೆ. ಇದು ರಾಜ್ಯ ಸರ್ಕಾರಗಳ ಮೀಸಲಾತಿಯನ್ನು ತಪ್ಪಿಸಿ ಕೇಂದ್ರದ ಡೆಪ್ಯುಟೇಶನ್‌ನಲ್ಲಿ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲು ಅನುವು ಮಾಡಿಕೊಡುತ್ತದೆ.
ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ಕರಡು ತಿದ್ದುಪಡಿಗಳ ಬಗ್ಗೆ ತೀವ್ರವಾದ ಕಳವಳವನ್ನು ವ್ಯಕ್ತಪಡಿಸಿದ ಸ್ಟಾಲಿನ್, “ಇದು ನಮ್ಮ ಒಕ್ಕೂಟ ರಾಜಕೀಯ ಮತ್ತು ರಾಜ್ಯಗಳ ಸ್ವಾಯತ್ತತೆಗೆ ಪೆಟ್ಟು ನೀಡುತ್ತದೆ” ಎಂದು ಬರೆದಿದ್ದಾರೆ.
ರಾಜ್ಯ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳು ಮುಂಚೂಣಿಯಲ್ಲಿವೆ. ರಾಜ್ಯಗಳು ಆಗಾಗ್ಗೆ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತವೆ. ಇತರೆಡೆಗಳಿಗಿಂತ ಹೆಚ್ಚಾಗಿ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಸೇವೆ ಅಗತ್ಯವಿದೆ. ಅಂತಹ ಸಂದರ್ಭಗಳಲ್ಲಿ, ಅಧಿಕಾರಿಗಳನ್ನು ನಿಯೋಜಿಸಲು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದು ಖಂಡಿತವಾಗಿಯೂ ಅಧಿಕಾರಿಗಳ ಕೊರತೆಯಿಂದಾಗಿ ವಿವಿಧ ರಾಜ್ಯಗಳಲ್ಲಿ ‘ಆಡಳಿತ ಕೊರತೆ’ಯನ್ನು ಉಲ್ಬಣಗೊಳಿಸುತ್ತದೆ. ಇದು ರಾಜ್ಯಗಳ ಆಡಳಿತಾತ್ಮಕ ಚೌಕಟ್ಟಿನ ಕೆಲಸಕ್ಕೆ ‘ಅಪಮಾನ’ ಎಂದು ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.
ಒಕ್ಕೂಟ ರಚನೆಗೆ ಆಗುವ ನಷ್ಟಗಳನ್ನು ಮಮತಾ ಬ್ಯಾನರ್ಜಿಯವರು ತಮ್ಮ ಇತ್ತೀಚಿನ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
“ನಮ್ಮ ಒಕ್ಕೂಟ ರಚನೆಯೊಂದಿಗೆ ಕೇಂದ್ರವು ಹೇಗೆ ಆಟವಾಡಬಹುದು? ಚುನಾಯಿತ ರಾಜ್ಯ ಸರ್ಕಾರಗಳ ಅಭಿಪ್ರಾಯ ಮತ್ತು ಹಕ್ಕುಗಳನ್ನು ಅದು ಹೇಗೆ ತಳ್ಳಿಹಾಕಬಹುದು? ಕೇಂದ್ರವು ಇದನ್ನು ಮಾಡಬಾರದು” ಎಂದು ಬ್ಯಾನರ್ಜಿ ಸಾರ್ವಜನಿಕವಾಗಿ ಆಗ್ರಹಿಸಿದ್ದಾರೆ.
ಈ ತಿದ್ದುಪಡಿಯು ಅಧಿಕಾರಿಗಳಲ್ಲಿ ಭಯದ ಮನೋವಿಕಾರವನ್ನು ಉಂಟುಮಾಡುತ್ತದೆ ಮತ್ತು ಅವರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಮೋದಿಯವರಿಗೆ ಹೀಗಾಗಲೇ ಪತ್ರ ಬರೆದಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ “ಭಯದ ಮನೋವಿಕಾರ” ಎಂಬ ಪದವನ್ನು ಬಳಸಿದ್ದಾರೆ.
ಪ್ರಸ್ತುತ ಇರುವ ನಿಯಮಗಳು ಕೇಂದ್ರ ಸರ್ಕಾರದ ಪರವಾಗಿವೆ. ಮತ್ತಷ್ಟು ಕಠಿಣತೆಯನ್ನು ತರುವುದು ಸಹಕಾರಿ ಒಕ್ಕೂಟವನ್ನು ದುರ್ಬಲಗೊಳಿಸುತ್ತದೆ ಎಂದು ವಿಜಯನ್ ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕಿರುವಷ್ಟೇ ಸಮಾನತೆ ರಾಜ್ಯಸರ್ಕಾರಕ್ಕೂ ಇದೆ. ಏಕೆಂದರೆ ಎರಡು ಸರ್ಕಾರಗಳು ಕೂಡ ಜನರಿಂದ ಆಯ್ಕೆಯಾಗಿವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಹಿಂದುತ್ವ ವಾರ್: ‘ಶಿವಸೇನೆ ಹುಟ್ಟೇ ಇರಲಿಲ್ಲ’ ಎಂದ ಬಿಜೆಪಿ