ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಮುನ್ನವೇ ರೈಲುಗಳ ಸಂಚಾರ ರದ್ದುಗೊಳಿಸಿರುವುದಕ್ಕೆ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯುವಜನರ ಪ್ರತಿಭಟನೆಗೆ ಸರ್ಕಾರ ಹೆದರುತ್ತಿದ್ದರೆ ಇಡೀ ದೇಶವನ್ನೇ ಬಂದ್ ಮಾಡಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯುವಕರು ದೆಹಲಿಗೆ ಆಗಮಿಸುವುದನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳ ನಡುವೆ, ಅಕ್ಟೋಬರ್ 10ರಂದು ಬೆಳಿಗ್ಗೆ 4ರಿಂದ ಮಧ್ಯಾಹ್ನ 2ರವರೆಗೆ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಕೆಲವು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ರೈಲ್ವೆ ಮಂಡಳಿ ಶುಕ್ರವಾರ ರದ್ದುಗೊಳಿಸಿದೆ.
ಇದರ ಬೆನ್ನಲ್ಲೇ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬರುವ ಯುವಕರ ಸಂಚಾರಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚುವಂತೆ ದೆಹಲಿ ಪೊಲೀಸರು ದೆಹಲಿ ಮೆಟ್ರೋ ರೈಲು ನಿಗಮವನ್ನು (ಡಿಎಂಆರ್‌ಸಿ) ಒತ್ತಾಯಿಸಿದ್ದಾರೆ ಎಂಬ ವರದಿಗಳೂ ಬೆಳಕಿಗೆ ಬಂದಿವೆ.
ಈ ಬೆಳವಣಿಗೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಜೀತ್ ದೀಪ್ಕೆ, ಜಂತರ್ ಮಂತರ್ ಗೊತ್ತುಪಡಿಸಿದ ಪ್ರತಿಭಟನಾ ಸ್ಥಳವಾಗಿರುವುದರಿಂದ ಅಲ್ಲಿ ಪ್ರತಿಭಟನೆ ನಡೆಸಲು ಸರ್ಕಾರದ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಯುವಜನರ ಪ್ರತಿಭಟನೆಯನ್ನು ತಡೆಯಲು ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಕಿಡಿಕಾರಿದ ಅವರು, “ನೀವು ಯುವಕರಿಗೆ ಹೆದರುತ್ತಿದ್ದರೆ ಇಡೀ ದೇಶವನ್ನೇ ಬಂದ್ ಮಾಡಿ” ಎಂದು ಸವಾಲು ಹಾಕಿದ್ದಾರೆ.
ಇನ್ನೊಂದೆಡೆ, ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸಲು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. SIR ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪ ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯಬೇಕಿದ್ದ ಪ್ರತಿಭಟನೆಗೆ ಮುನ್ನವೇ ರೈಲು ರದ್ದತಿ ಹಾಗೂ ಪ್ರತಿಭಟನೆಗೆ ಅನುಮತಿ ನಿರಾಕರಣೆಯ ಬೆಳವಣಿಗೆಗಳು ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತೀವ್ರತೆ ನೀಡಿವೆ.


