Homeಮುಖಪುಟಈಶಾನ್ಯದಲ್ಲಿ ಬೆಂಕಿಯೊಂದಿಗೆ ಆಟವಾಡುವುದನ್ನು ನಿಲ್ಲಿಸಿ

ಈಶಾನ್ಯದಲ್ಲಿ ಬೆಂಕಿಯೊಂದಿಗೆ ಆಟವಾಡುವುದನ್ನು ನಿಲ್ಲಿಸಿ

- Advertisement -
- Advertisement -

ರಾಷ್ಟ್ರೀಯತೆಯ ಪರೀಕ್ಷೆ ಗಡಿಗಳಲ್ಲಿ ಆಗತ್ತೆ. ದೇಶದ ಗಡಿಗಳ ರಕ್ಷಣೆ ಕೇವಲ ಭದ್ರತಾ ಪಡೆಗಳ ಶೌರ್ಯದಷ್ಟೇ ಅಲ್ಲ, ರಾಜಕೀಯ ನೇತೃತ್ವದ ತಿಳಿವಳಿಕೆಯ ಪರೀಕ್ಷೆಯನ್ನೂ ಅದು ಬೇಡುತ್ತದೆ. ಕಳೆದ ವಾರ ಮಣಿಪುರದಲ್ಲಿ ನಡೆದ ಹಿಂಸೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ನಿಯತ್ತು ಮತ್ತು ನೀತಿ ಎರಡರ ಮೇಲೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ರಾಜ್ಯದ ಸೂಕ್ಷ್ಮವಾದ ಜಾತಿವಾರು ಸಮತೋಲನವನ್ನು ನಿರ್ಲಕ್ಷಿಸಿ ತನ್ನದೇ ಆದ ರಾಜಕೀಯ ಅಜೆಂಡಾ ಹೇರುವ ಪ್ರಯತ್ನ ಈ ಗಡಿಭಾಗದ ರಾಜ್ಯಕ್ಕಷ್ಟೇ ಅಲ್ಲ, ಇಡೀ ದೇಶಕ್ಕೂ ದುಬಾರಿಯಾಗಲಿದೆ.

ಮೊದಲ ನೋಟದಲ್ಲಿ ಮಣಿಪುರದಲ್ಲಿ ಆದ ಹಿಂಸೆ ಅಲ್ಲಿನ ಎರಡು ದೊಡ್ಡ ಸಮುದಾಯಗಳಾದ ಮೈತ್‌ಯಿ ಮತ್ತು ಕುಕಿ ಸಮುದಾಯಗಳ ನಡುವೆ ಆದ ಜನಾಂಗೀಯ ಕಲಹದ ಹಿಂಸೆಯಾಗಿದೆ. ಮಣಿಪುರದ ಬೆಟ್ಟಗಳಲ್ಲಿ ನೆಲೆಸಿದ ಮೈತ್‌ಯಿ ಸಮುದಾಯ ರಾಜ್ಯದ ಬಹುಸಂಖ್ಯಾತ ಸಮುದಾಯವಾಗಿದೆ. ವೈಷ್ಣವ ಹಿಂದೂ ನಂಬಿಕೆಯ ಮೈತ್‌ಯಿ ಸಮುದಾಯ ಜನಸಂಖ್ಯೆಯ 54% ರಷ್ಟಿದೆ ಹಾಗೂ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿದೆ. ಈಶಾನ್ಯ ಪರ್ವತ ರಾಜ್ಯಗಳಲ್ಲಿ ಇದುವೇ ದೊಡ್ಡ ಹಿಂದೂ ಸಮುದಾಯವಾಗಿದ್ದು, ಸ್ವಾಭಾವಿಕವಾಗಿಯೇ ರಾಜ್ಯದಲ್ಲಿ ಬಿಜೆಪಿಯ ಹೆಚ್ಚಿನ ಬೆಂಬಲ ಮೈತ್‌ಯಿ ಸಮಯದಾಯದಿಂದ ಬಂದಿದೆ. ಅಧಿಕೃತವಾಗಿ ಅವರಿಗೆ ಒಬಿಸಿ ಸ್ಥಾನಮಾನ ನೀಡಲಾಗಿದೆ.

ಅತ್ತ ಮಿಜೊರಾಂ ಮತ್ತು ಮ್ಯಾನ್‌ಮಾರ್‌ಗೆ ಅಂಟಿಕೊಂಡಿರುವ ಪ್ರದೇಶಗಳಲ್ಲಿ ನೆಲೆಸಿರುವ ಕುಕಿ ಆದಿವಾಸಿ ಸಮುದಾಯದ ಸಂಖ್ಯೆ ಕೇವಲ 15% ರಷ್ಟಿದೆ ಆದರೆ ಇಂಫಾಲದ ಕೆಲವು ಗುಡ್ಡಗಾಡು ಜಿಲ್ಲೆಗಳಲ್ಲಿ ಇವರ ಪ್ರಭಾವವಿದೆ. ಮಣಿಪುರದ ಕುಕಿ, ನೆರೆರಾಜ್ಯದ ಮಿಜೊರಾಂನ ಲುಶಾಯಿ ಮತ್ತು ಗಡಿಯಾಚೆಯ ಮ್ಯಾನ್‌ಮಾರ್‌ನಲ್ಲಿ ನೆಲೆಸಿರುವ ಚಿನ್, ಎಲ್ಲರೂ ಒಂದೇ ಸಮಾಜದ ಜನರಾಗಿದ್ದಾರೆ, ಪರಸ್ಪರ ಸಂಬಂಧ ಹೊಂದಿದ್ದಾರೆ. ಕಳೆದ ವರ್ಷ ಚುನಾವಣೆಗಳಲ್ಲಿ ಬಿಜೆಪಿಗೆ ಕುಕಿ ಬಾಹುಳ್ಯವುಳ್ಳ ಕ್ಷೇತ್ರಗಳಲ್ಲೂ ಒಂದಿಷ್ಟು ಸಫಲತೆ ಸಿಕ್ಕಿದ್ದರೂ, ಬಿಜೆಪಿ ಸರಕಾರದ ಅನೇಕ ಕ್ರಮಗಳ ಕಾರಣದಿಂದ ಕುಕಿ ಸಮುದಾಯಕ್ಕೆ ಅದರಲ್ಲೂ, ವಿಶೇಷವಾಗಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್‌ರೊಂದಿಗೆ ಸರಿಬರುವುದಿಲ್ಲ. ಈ ರಾಜಕೀಯ ಪರಕೀಯತೆಯೇ ಕಳೆದ ವಾರ ಆದ ಹಿಂಸೆಯ ಮೂಲದಲ್ಲಿದೆ.

ಕಳೆದ ವರ್ಷ ಮಣಿಪುರದ ಚುನಾವಣೆಗಳಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಬಿರೇನ್ ಸಿಂಗ್ ಕುಕಿ ಪ್ರದೇಶಗಳಲ್ಲಿ ಎರಡು ವಿಷಯಗಳ ಮೇಲೆ ಕಟುವಾದ ಕ್ರಮ ಕೈಗೊಂಡರು. ಮೊದಲನೆಯದು, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಫೀಮಿನ ಕೃಷಿ ಮತ್ತು ಡ್ರಗ್ಸ್‌ನ ಸಮಸ್ಯೆಗೆ ಸಂಬಂಧಿಸಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರದ ಆತಂಕ ಸರಿಯಾಗಿದೆ ಹಾಗೂ ರಾಜ್ಯ ಸರಕಾರದ ಮೂಲಕ ಕ್ರಮ ಅವಶ್ಯಕವಾಗಿತ್ತು. ಆದರೆ ಮುಖ್ಯಮಂತ್ರಿಯು ಅಫೀಮಿನ ಜಮೀನುದಾರರು ಮತ್ತು ಡ್ರಗ್ ಮಾಫಿಯಾದ ವಿರುದ್ಧದ ಕಾರ್ಯಾಚರಣೆಗೆ, ಕುಕಿ ಸಮುದಾಯದ ವಿರುದ್ಧದ ಸಮರ ರೂಪ ನೀಡಿದರು. ಅವರು ಅನೇಕ ಬಾರಿ ಕುಕಿ ಆದಿವಾಸಿಗಳನ್ನು ಹೊರಗಿನವರು ಮತ್ತು ವಲಸಿಗರು ಎಂದು ಬಿಂಬಿಸುವ ಹೇಳಿಕೆಗಳನ್ನು ನೀಡಿದರು, ಅದರಿಂದ ಸ್ವತಃ ಬಿಜೆಪಿಯ ಕುಕಿ ಶಾಸಕರಿಗೂ ಕೂಡ ಅವರ ವಿರುದ್ಧ ಬಂಡಾಯ ಏಳುವ ಅನಿವಾರ್ಯತೆ ಸೃಷ್ಟಿಯಾಯಿತು.

ಎರಡನೆಯ ವಿಷಯ ಅರಣ್ಯಕ್ಕೆ ಸಂಬಂಧಿಸಿದ್ದು, ಅಲ್ಲಿಯೇ ಕುಕಿ ಸಮುದಾಯದ ಜನರು ನೆಲೆಸಿದ್ದಾರೆ. ಇತ್ತೀಚಿಗೆ ಕೇಂದ್ರೀಯ ಪರಿಸರ ಸಚಿವ ಭುಪೇಂದ್ರ ಯಾದವ ಮಣಿಪುರದಲ್ಲಿ ಹೇಳಿದ್ದೇನೆಂದರೆ, ರಾಜ್ಯದ ಅರಣ್ಯವು ಕೇಂದ್ರೀಯ ಕಾನೂನುಗಳ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತವೆ ಹಾಗೂ ಸಂರಕ್ಷಿತ ಅರಣ್ಯ (ರಿಸರ್ವ್ ಫಾರೆಸ್ಟ್)ಗಳನ್ನು ತೆರವುಗೊಳಿಸಲಾಗುವುದು ಎಂದು. ಇದರಲ್ಲೂ ರಾಜ್ಯ ಸರಕಾರ ಸಂವೇದನಾಶೀಲವಾಗಿ ವರ್ತಿಸುವ ಬದಲಿಗೆ ಒತ್ತಾಯಪೂರ್ವಕವಾಗಿ ಹಲವಾರು ಗ್ರಾಮಗಳನ್ನು ತೆರವುಗೊಳಿಸಿತು. ಇದರಿಂದ ತಮಗೆ ತಲೆತಲಾಂತರದಿಂದ ಬಂದಿರುವ ಭೂಮಿಯಿಂದ ಹೊರದಬ್ಬಲಾಗುತ್ತಿದೆ ಎಂದ ಸಂದೇಹ ಕುಕಿ ಸಮುದಾಯಕ್ಕೆ ಬಂತು. ಇದಕ್ಕೆ ವಿರೋಧ ಕಾಣಿಸಿಕೊಂಡಾಗ ಮುಖ್ಯಮಂತ್ರಿಯವರೇ ಹೋಗಿ ಜನರಿಗೆ ಬೆದರಿಕೆ ಹಾಕಿದರು ಹಾಗೂ ಸ್ಥಳೀಯ ಕುಕಿ ಭೂಗತ ಉಗ್ರವಾದಿಗಳೊಂದಿಗೆ ಅನೇಕ ವರ್ಷಗಳಿಂದ ನಡೆದುಕೊಂಡ ಬಂದ ಒಪ್ಪಂದವನ್ನು ರದ್ದುಪಡಿಸುವ ಹಾಗೂ ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದರು.

ಎನ್ ಬಿರೇನ್ ಸಿಂಗ್‌

ಅತ್ತ ಕಳೆದ ಕೆಲವು ವರ್ಷಗಳಿಂದ ಮಣಿಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಣಾಮ ಹೆಚ್ಚುತ್ತಿದೆ. ಅಲ್ಲಿ ಮೈತ್‌ಯಿ ಸಮುದಾಯವನ್ನು ಸ್ಥಳೀಯ ಪರಂಪರಾಗತ ಜನಾಂಗದ ಪರಂಪರೆಯಿಂದ ಕಡಿದು ಅವರಲ್ಲಿ ಹಿಂದೂ ಅಸ್ಮಿತೆಯನ್ನು ಎಚ್ಚರಿಸುವ ಕೆಲಸ ನಡೆಯುತ್ತಿದೆ. ಬಹುತೇಕ ಮೈತ್‌ಯಿ ಸಮುದಾಯ ಹಿಂದೂ ಆಗಿರುವುದರಿಂದ (ಅಂದಹಾಗೆ ಅವರಲ್ಲಿ ಪಂಗಾಲ್ ಸಮುದಾಯ ಮುಸ್ಲಿಂ ಆಗಿದ್ದು, ಸಣ್ಣ ಭಾಗ ಕ್ರಿಶ್ಚಿಯನ್ನರೂ ಇದಾರೆ) ಹಾಗೂ ಹೆಚ್ಚಿನ ಕುಕಿ ಮತ್ತು ನಾಗಾ ಜನರು ಕ್ರಿಶ್ಚಿಯನ್ನರಾಗಿರುವುದರಿಂದ, ಪ್ರದೇಶದ ಜನಾಂಗೀಯ ವಿವಿಧತೆ ಮತ್ತು ಒತ್ತಡಕ್ಕೆ ಧಾರ್ಮಿಕ ಸಂಘರ್ಷದ ಸ್ವರೂಪ ನೀಡುವ ಪ್ರಯತ್ನ ನಡೆದಿದೆ. ಒಂದು ಕಾಲಕ್ಕೆ ಮಣಿಪುರದಲ್ಲಿ ನಾಗಾ ಸಮುದಾಯದೊಂದಿಗೆ ಸಂಬಂಧವಿಟ್ಟುಕೊಂಡ ರಿಶಾಂಗ್ ಕಶಿಂಗ್‌ರನ್ನು ಎಲ್ಲ ಸಮುದಾಯಗಳ ಸರ್ವಮಾನ್ಯ ನಾಯಕರೆಂದು ಪರಿಗಣಿಸಲಾಗಿತ್ತು; ಅಲ್ಲಿ ಈಗ ಜಾತೀಯ ದ್ವೇಷ ಮತ್ತು ವೈಮನಸ್ಸು ಆಳವಾಗುತ್ತಿದೆ.

ಇದನ್ನೂ ಓದಿ: ಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅಸಹಾಯಕತೆಯೇನು?

ಅಂದರೆ ಬಹಳ ಸಮಯದಿಂದ ಗುಂಡುಮದ್ದುಗಳು ತಯಾರಾಗುತ್ತಿದ್ದವು ಹಾಗೂ ಈಗ ಕೇವಲ ಒಂದು ಕಿಡಿಯ ಅವಶ್ಯಕತೆ ಇತ್ತು. ಈ ಕಿಡಿ ಹೈಕೋರ್ಟಿನ ಆದೇಶದಿಂದ ಹೊರಬಂದಿತು, ಅದರಲ್ಲಿ ಮೈತ್‌ಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಶಿಫಾರಸ್ಸು ಮಾಡಬೇಕೆಂಬ ನಿರ್ದೇಶನವನ್ನು ರಾಜ್ಯ ಸರಕಾರಕ್ಕೆ ನೀಡಲಾಗಿತ್ತು. ವಿಷಯ ಹತ್ತು ವರ್ಷಗಳಷ್ಟು ಹಿಂದಿನದು, ಆದೇಶ ಹೈಕೋರ್ಟಿನದ್ದಾಗಿತ್ತೇ ಹೊರತು ಸರಕಾರದ್ದಲ್ಲ ಹಾಗೂ ಕೇವಲ ರಾಜ್ಯ ಸರಕಾರ ಅದನ್ನು ಮಾಡುವುದರಿಂದ ಮಾತ್ರ ಯಾವ ಸಮುದಾಯಕ್ಕೂ ಪ.ಪಂ ದರ್ಜೆ ನೀಡಲಾಗುವುದಿಲ್ಲ. ಆದರೆ ಜನಾಂಗೀಯ ಆತಂಕದ ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅದೇಶದಿಂದ ಜನರು ಕೆರಳಿದರು. ಅವರಿಗೆ ಅನಿಸಿದ್ದು; ಒಂದು ವೇಳೆ ಬಹುಸಂಖ್ಯಾತ ಮೈತ್‌ಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ದರ್ಜೆ ಸಿಕ್ಕುಬಿಟ್ಟರೆ ಅವರ ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರದ ಮೇಲಿನ ಅವರ ಹಿಡಿತ ಸಂಪೂರ್ಣವಾಗಿಬಿಡುತ್ತೆ ಎಂದು.

ಇದರ ನೇರ ಸಂಬಂಧ ಭೂಮಿಯ ಮಾಲೀಕತ್ವದೊಂದಿಗೆ ಇದೆ. ಮಣಿಪುರದ 90% ಭೂಮಿ ಗುಡ್ಡಗಾಡು ಪ್ರದೇಶ, ಅಲ್ಲಿ ಕೇವಲ ಪರಿಶಿಷ್ಟ ಸಮುದಾಯಗಳ ಜನರಷ್ಟೇ ಭೂಮಿಯನ್ನು ಖರೀದಿಸಬಹುದು. ಒಂದು ವೇಳೆ ಮೈತ್‌ಯಿ ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಲ್ಲಿ, ಕುಕಿ ಮತ್ತು ನಾಗಾ ಜನಾಂಗದವರಿಗೆ ತಮ್ಮ ಕೈಯಿಂದ ಭೂಮಿಯ ಒಡೆತನವನ್ನು ಕಳೆದುಕೊಳ್ಳುವ ಅಪಾಯ ಕಾಣಿಸಲಾರಂಭಿಸಿತು.

ಭುಪೇಂದ್ರ ಯಾದವ

ರಾಜ್ಯದ ಕುಕಿ ಮತ್ತು ಅದಕ್ಕಿಂತ ದೊಡ್ಡ ನಾಗಾ ಬುಡಕಟ್ಟು ಸಮುದಾಯವು ಈ ಆದೇಶದ ವಿರುದ್ಧ ಪ್ರತಿಭಟನೆ ಮತ್ತು ಬಂದ್ ಆಯೋಜಿಸಿದವು. ನಾಗಾ ಪ್ರದೇಶಗಲ್ಲಿ ಈ ವಿರೋಧ ಶಾಂತಿಪೂರ್ಣವಾಗಿತ್ತು ಆದರೆ ಕುಕಿ ಪ್ರದೇಶಗಳಲ್ಲಿ ಈ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪ್ರದರ್ಶನಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡವು. ಅದರ ಬದಲಿಗೆ ಮೈತ್‌ಯಿ ಜನರು ಇಂಫಾಲ್ ಬೆಟ್ಟಗಾಡಿನಲ್ಲಿ ನೆಲೆಸಿರುವ ಕುಕಿ ಜನರ ಮೇಲೆ ಹಲ್ಲೆ ನಡೆಸಿದರು. ಸರಕಾರ ನೋಡುತ್ತಲೇ ಇತ್ತು, ಹಾಗೂ ಕೆಲವೇ ಗಂಟೆಗಳಲ್ಲಿ ಈ ಬೆಂಕಿ ಹರಡಿಬಿಟ್ಟಿತು. ಮೈತ್‌ಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಈ ಹಿಂಸಾಚಾರಕ್ಕೆ ಇರುವ ಇನ್ನೊಂದು ಆತಂಕಕಾರಿ ಆಯಾಮವೇನೆಂದರೆ, ಮೈತ್‌ಯಿ ಸಮುದಾಯದ ಜನರೇ ಮೈತ್‌ಯಿ ಕ್ರಿಶ್ಚಿಯನ್ನರ ಚರ್ಚ್ ಮೇಲೆಯೂ ದಾಳಿ ಮಾಡಿದರು, ಅಂದರೆ ಜಾತೀಯ ಹಿಂಸೆ ಈಗ ಧಾರ್ಮಿಕ ಹಿಂಸೆಯ ಬಣ್ಣ ಬಳಿದುಕೊಳ್ಳುತ್ತಿದೆ. ಕೇಂದ್ರೀಯ ಗೃಹಸಚಿವ ಮತ್ತು ಪ್ರಧಾನಮಂತ್ರಿ ಕರ್ನಾಟಕದ ಚುನಾವಣೆಗಳಲ್ಲಿ ವ್ಯಸ್ತರಾಗಿದ್ದಾರೆ. ಮಣಿಪುರದಲ್ಲಿ ಸಮಯಕ್ಕೆ ಸರಿಯಾಗಿ ಸೇನೆ ಮತ್ತು ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಿಲ್ಲ. ಅದರ ಪರಿಣಾಮವಾಗಿ, ಇಲ್ಲಿಯತನಕ ಅಧಿಕೃತವಾಗಿ 54 ಜನರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಅನೇಕ ತಲೆಮಾರುಗಳಿಂದ ಬಂದ ಸಂಬಂಧಗಳು ಈಗ ಹಳಸಿಬಿಟ್ಟಿವೆ. ಈ ರಕ್ತದ ಕಲೆಗಳು ಮಾಯವಾಗಲು ಇನ್ನೆಷ್ಟು ಮಳೆಗಾಲ ಕಾಣಬೇಕೋ ನಮಗೆ ಗೊತ್ತಿಲ್ಲ.

ಕಳೆದ ಎರಡು-ಮೂರು ದಿನಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡಿವೆ, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತರಲಾಗಿದೆ, ಭದ್ರತಾ ಪಡೆಗಳನ್ನು ಕಳುಹಿಸಲಾಗಿದೆ. ಆದರೆ ನಿಜವಾದ ಪ್ರಶ್ನೆ ರಾಜಕೀಯ ಪ್ರಶ್ನೆಯಾಗಿದೆ; ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬೆಂಕಿಯೊಂದಿಗೆ ಆಟವಾಡುವುದನ್ನು ನಿಲ್ಲಿಸುವುದೇ? ಮಣಿಪುರದಂತಹ ಪ್ರದೇಶಗಳಲ್ಲಿರುವ ಜಟಿಲವಾದ ಮತ್ತು ಸೂಕ್ಷ್ಮವಾದ ಸಾಮಾಜಿಕ ರಚನೆಯೊಂದಿಗೆ ಹಸ್ತಕ್ಷೇಪವನ್ನು ನಿಲ್ಲಿಸುವುದೇ? ರಾಷ್ಟ್ರಹಿತವನ್ನು ಮುಂದಿಟ್ಟು, ತನ್ನ ತಾತ್ಕಾಲಿಕ ರಾಜಕೀಯ ಸ್ವಾರ್ಥವನ್ನು ಬದಿಗಿಡುವುದೇ?

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...