Homeಮುಖಪುಟಭಾರತ ಒಕ್ಕೂಟ ವ್ಯವಸ್ಥೆ ಎಂಬ ಒಂದು ಅಣಕು ಪ್ರಹಸನ: ಬಿ.ಶ್ರೀಪಾದ್ ಭಟ್

ಭಾರತ ಒಕ್ಕೂಟ ವ್ಯವಸ್ಥೆ ಎಂಬ ಒಂದು ಅಣಕು ಪ್ರಹಸನ: ಬಿ.ಶ್ರೀಪಾದ್ ಭಟ್

ಅಸಮಾನ ಅಧಿಕಾರದ ಹಂಚಿಕೆ, ರಾಜಕೀಯ ಮತ್ತು ಆರ್ಥಿಕ ಸರ್ವಾಧಿಕಾರ, ಸಂವಿಧಾನದ ದುರ್ಬಳಕೆ, ರಾಜ್ಯಗಳ ಅಸಮಾನ ಪ್ರಾತಿನಿದ್ಯವಿರುವ ಭಾರತವನ್ನು ಒಕ್ಕೂಟ ವ್ಯವಸ್ಥೆ ಎನ್ನಲಾದೀತೆ?

- Advertisement -
- Advertisement -

(ಈ ಪ್ರಬಂಧ ಹೊಸ ಬರಹದಲ್ಲಿದೆ. ಕನ್ನಡ ನುಡಿಗೆ ಹೊಂದದ ಮಹಾಪ್ರಾಣಗಳನ್ನು ಕೈಬಿಡಲಾಗಿದೆ ಅಥವಾ ಮಿತವಾಗಿ ಬಳಸಲಾಗಿದೆ)

ಸಂವಿದಾನ ರಚನೆಯ ಚರ್ಚೆಯ ಸಂದರ್ಬದಲ್ಲಿ ಅಂಬೇಡ್ಕರ್ ಅವರು ‘ಸಂವಿದಾನವು ಒಕ್ಕೂಟ ವ್ಯವಸ್ಥೆಯ ಸಂವಿದಾನ… ಕೇಂದ್ರವೆನ್ನುವುದು ರಾಜ್ಯಗಳ ತಂಡವಲ್ಲ… ರಾಜ್ಯಗಳು ಕೇಂದ್ರದಿಂದ ಅದಿಕಾರ ಪಡೆದುಕೊಳ್ಳುವ ಏಜೆನ್ಸಿಗಳಲ್ಲ. ಕೇಂದ್ರ ಮತ್ತು ರಾಜ್ಯಗಳನ್ನು ಸಂವಿದಾನವು ಸೃಶ್ಟಿಸಿದೆ. ಎರಡೂ ಸಂವಿದಾನದಿಂದ ಅದಿಕಾರ ಪಡೆದುಕೊಂಡಿವೆ. ಇಂತಹ ವೈವಿದ್ಯ ಸಮಾಜ ವ್ಯವಸ್ಥೆಯನ್ನು ಆಡಳಿತ ನಡೆಸಲು “asymmetrical federalism” ರಚನೆಯನ್ನು ಆಯ್ದುಕೊಂಡಿದ್ದೇವೆ’ ಎಂದು ಹೇಳುತ್ತಾರೆ. ಭಾರತೀಯ ವಿದೇಶಾಂಗ ನೀತಿ ಪರಿಣಿತ ಅಂಬರ್ ಕುಮಾರ್ ಘೋಶ್ ಅವರು ಭಾರತದ ಒಕ್ಕೂಟ ವ್ಯವಸ್ಥೆಯನ್ನು ‘ಒಂದು ಪಕ್ಷದ ಒಕ್ಕೂಟ (1952-1967), ಅಬಿವ್ಯಕ್ತಿ ಒಕ್ಕೂಟ (1967-1989), ಬಹು ಪಕ್ಷಗಳ ಒಕ್ಕೂಟ (1989-2014) ಮತ್ತು ಬಲಾಡ್ಯ ಪಕ್ಷದ ಮರಳುವಿಕೆಯ ಒಕ್ಕೂಟ (2014-)’ ಎಂದು ವಿವಿಧ ಘಟ್ಟಗಳಾಗಿ ವಿಂಗಡಿಸುತ್ತಾರೆ.

ಭಾರತ ಸಂವಿದಾನದ ಪರಿಚ್ಚೇದ 1ರ ಅನುಸಾರ ‘ಇಂಡಿಯಾ/ಭಾರತವು ರಾಜ್ಯಗಳ ಒಕ್ಕೂಟವಾಗಿದೆ’. ಆಗಿನ ಭಾರತದ ಸಂದರ್ಭದಲ್ಲಿ ಕೇಂದ್ರವೆಂದರೆ ಒಕ್ಕೂಟವೆಂದು ಅರ್ಥೈಸಲಾಗಿತ್ತು. ನಂತರ 1956ರಲ್ಲಿ ಭಾಶಾವಾರು ಆದಾರದಲ್ಲಿ ರಾಜ್ಯಗಳನ್ನು ಪುನರ್ವಿಂಗಡಣೆ ಮಾಡಲಾಯಿತು. ಈ ಒಕ್ಕೂಟ ವ್ಯವಸ್ಥೆಯ ವಿಶೇಶಣಗಳೆಂದರೆ ಕೇಂದ್ರ ಸರಕಾರ/ರಾಜ್ಯ ಸರಕಾರ, ಕೇಂದ್ರ ಮತ್ತು ರಾಜ್ಯಗಳ ನಡುವೆ ಅದಿಕಾರದ ಹಂಚಿಕೆ (ಸಂವಿದಾನದ 7ನೆ ಶೆಡ್ಯೂಲ್), ಸಂವಿದಾನದ ಪರಮಾದಿಕಾರ (ಅದರ ಮೂಲ ಸಂರಚನೆಯನ್ನು ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಬದಲಿಸಲು ಅದಿಕಾರವಿಲ್ಲ), ಸ್ವತಂತ್ರ ನ್ಯಾಯಾಂಗ, ಸ್ವತಂತ್ರ ಚುನಾವಣಾ ಆಯೋಗ, ದ್ವಿಸದನ, ಮುಂತಾದವು. ಆದರೆ ದಶಕಗಳಿಂದಲೂ ಒಕ್ಕೂಟ ವ್ಯವಸ್ಥೆಯ ಈ ವಿಶೇಶ ಹಂಚಿಕೆಗಳು ನಾಮಕಾವಸ್ತೆ ಕಾಗದದ ಮೇಲೆ ಮಾತ್ರ ಉಳಿದುಕೊಂಡಿವೆ. ಕೇಂದ್ರ ಸರಕಾರವು ಸಂಪೂರ್ಣ ಅದಿಪತ್ಯವನ್ನು ಪಡೆದುಕೊಂಡಿದೆ. ರಾಜ್ಯಗಳಿಗೆ ಸಂವಿದಾನಬದ್ದ ಸ್ವಾಯತ್ತತೆ ಇದ್ದರೂ ಸಹ ವಾಸ್ತವದಲ್ಲಿ ಕೇಂದ್ರದ ಮರ್ಜಿಯಲ್ಲಿ ಆಡಳಿತ ನಡೆಸುವಂತಹ ಪರಿಸ್ಥಿತಿ ಇದೆ. ಅದೇ ರೀತಿ ಒಂದು ಸಂವಿದಾನ, ಒಂದು ನಾಗರಿಕತೆ, ಒಂದು ಕರೆನ್ಸಿ, ಅಖಿಲ ಭಾರತ ಸೇವೆಗಳು, ಮುಂತಾದ ಏಕರೂಪದ ಗುಣಲಕ್ಷಣವೂ ಇದೆ. ಮೇಲ್ನೋಟಕ್ಕೆ ಈ ಏಕರೂಪತೆಯು ರಾಜ್ಯಗಳ ಸ್ವಾಯತ್ತತೆಯನ್ನು ಗೌಣಗೊಳಿಸುವುದಿಲ್ಲ. ಆದರೆ ಕೇಂದ್ರ ಸರಕಾರವು ಈ ಏಕರೂಪತೆಯನ್ನು ತನ್ನ ಸ್ವಾರ್ಥಕ್ಕೋಸ್ಕರ ದುರ್ಬಳಕೆ ಮಾಡಿಕೊಳ್ಳುತ್ತದೆ. 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅದಿಕಾರಕ್ಕೆ ಬಂದ ನಂತರ ಈ ಒಕ್ಕೂಟ ವ್ಯವಸ್ಥೆಯು ಮತ್ತಶ್ಟು ದುರ್ಬಲಗೊಂಡು ಕೇಂದ್ರ ಸರಕಾರ ಎನ್ನುವುದು ಒಂದು ಸರ್ವಾದಿಕಾರದ ಆಡಳಿತವಾಗಿ ಮಾರ್ಪಟ್ಟಿದೆ. ರಾಜ್ಯಗಳು ಶಕ್ತಿಹೀನಗೊಂಡಿವೆ. ಇಂದಿನ ದಿನಗಳಲ್ಲಿ ರಾಜ್ಯಗಳ ಸ್ಥಿತಿ ಶೋಚನೀಯವಾಗಿದೆ. ಮೋದಿಯ ಸರಕಾರವು ಗರಿಷ್ಠ ಅದಿಕಾರವನ್ನು ರಾಜ್ಯಗಳ ಮೇಲೆ ಚಲಾಯಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ಅಣಕದಂತಿದೆ. ‘ರಾಜ್ಯಗಳಿಂದ ದೇಶ’ ಎನ್ನುವ ವಿಕೇಂದ್ರೀಕರಣ ನೀತಿಯನ್ನು ಸಂಪೂರ್ಣವಾಗಿ ನಾಶ ಮಾಡಿರುವುದು ಇವರ ಆರು ವರ್ಶಗಳ ಸಾದನೆ.

ಆಸ್ಟ್ರೇಲಿಯಾದ ಸಂವಿದಾನ ತಜ್ಞ ಕೆ.ಸಿ.ವ್ಹೇರೆ ‘ಇಂಡಿಯಾ ಒಂದು quasi-federal ಪ್ರಬುತ್ವ’ ಎಂದು ಹೇಳುತ್ತಾರೆ. ಕಾನೂನು ತಜ್ಞರು ಸಹ ಇದನ್ನು ಅನುಮೋದಿಸುತ್ತಾರೆ. ಸುಪ್ರೀಂ ಕೋರ್ಟ್ ಸಹ ‘ಭಾರತವು ಕೇಂದ್ರದೆಡೆಗೆ ಬಲವಾದ ಪಕ್ಷಪಾತ ಹೊಂದಿರುವ ಒಕ್ಕೂಟ ವ್ಯವಸ್ಥೆ’ ಎಂದು ಅಬಿಪ್ರಾಯ ಪಟ್ಟಿದೆ. ಕಳೆದ ಎಪ್ಪತ್ತು ವರ್ಶಗಳಲ್ಲಿ ಚುನಾಯಿತ ಕೇಂದ್ರ ಸರಕಾರಗಳ ವರ್ತನೆಗಳನ್ನು ಕಂಡಾಗ ಭಾರತವು ಸಂಪೂರ್ಣವಾಗಿ ಕೇಂದ್ರದ ಪರವಾದ quasi-federal, ಏಕಪಕ್ಷೀಯ ವ್ಯವಸ್ಥೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಸಾವಿರಾರು ನಿದರ್ಶನಗಳಿವೆ. ಮತ್ತು ಈ ಕುರಿತು ಎಣೆಯಲ್ಲದಷ್ಟು ಚರ್ಚೆಗಳಾಗಿವೆ. ಹೊಸದನ್ನು ಹೇಳುವಂತಹ ವಿಚಾರಗಳೇ ಉಳಿದಲ್ಲ. ರಕ್ಷಣೆ, ವಿದೇಶಾಂಗ ವ್ಯವಹಾರ, ಕರೆನ್ಸಿ, ನಾಗರಿಕತೆ, ರೈಲ್ವೆಗಳಂತಹ ಮುಖ್ಯ ಇಲಾಖೆಗಳನ್ನು ದೇಶದ ಬದ್ರತೆಯ ನೆಪದಲ್ಲಿ ಶೇ.100% ಪ್ರಮಾಣದಲ್ಲಿ ಕೇಂದ್ರದ ಆದೀನದಲ್ಲಿದೆ. ಇದರ ಪರಮಾದಿಕರವನ್ನು ಪ್ರಶ್ನಿಸಿದರೆ ದೇಶದ್ರೋಹಿ ಎಂದು ಬಂದಿಸಲಾಗುತ್ತದೆ.

ಅದಿಕಾರದ ಹಂಚಿಕೆ / ರಾಜಕೀಯ ಸರ್ವಾದಿಕಾರ / ಸಂವಿದಾನದ ದುರ್ಬಳಕೆ

ಅನೇಕ ಸಂದರ್ಬಗಳಲ್ಲಿ ಕೇಂದ್ರ ಸರಕಾರವು ಸಂವಿದಾನದ ನೀತಿಸಂಹಿತೆಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಉದಾಹರಣೆಗೆ ಪರಿಚ್ಚೇದ 200ರ ಅನುಸಾರ ರಾಜ್ಯ ಸರಕಾರವು ವಿದಾನ ಮಂಡಲದ ಎರಡೂ ಸದನಗಳಲ್ಲಿ (ವಿದಾನ ಸಬೆ, ವಿದಾನ ಪರಿಶತ್) ಮಸೂದೆಯನ್ನು ಅನುಮೋದನೆ ಮಡೆದುಕೊಂಡು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸುತ್ತದೆ. ರಾಜ್ಯಪಾಲರಿಗೆ ಈ ಮಸೂದೆಯ ಅಂಶಗಳು ಆಕ್ಷೇಪಾರ್ಹವೆನಿಸಿದರೆ ಅವರು ಅದನ್ನು ಮರುಪರಿಶೀಲನೆಗೆ ಮರಳಿ ರಾಜ್ಯ ಸರಕಾರಕ್ಕೆ ಕಳುಹಿಸುತ್ತಾರೆ. ಆದರೆ ರಾಜ್ಯ ಸರಕಾರವು ಯಾವುದೇ ತಿದ್ದುಪಡಿ ಮಾಡದೆ ಅದನ್ನು ಮರಳಿ ರಾಜ್ಯಪಾಲರಿಗೆ ಕಳುಹಿಸಿದರೆ ಅವರು ಈ ಮಸೂದೆಯನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸುತ್ತಾರೆ. ಆದರೆ ಇಂದಿನ ಭಾರತದ ಪ್ರಜಾಪ್ರಬುತ್ವದಲ್ಲಿ ರಾಷ್ಟ್ರಪತಿಗಳು ಕೇಂದ್ರ ಸರಕಾರದ ಕೈಗೊಂಬೆಯಾಗಿರುವುದರಿಂದ ಅದರ ನಿರ್ದೇಶನದಂತೆ ನಡೆದುಕೊಳ್ಳುತ್ತಾರೆ. ಅಂತಿಮವಾಗಿ ರಾಜ್ಯ ಸರಕಾರದ ಸ್ವಾಯತ್ತತೆಯ ಪ್ರತೀಕವಾದ ಮಸೂದೆಯೊಂದು ಕೇಂದ್ರದ ಮರ್ಜಿಗೆ ಒಳಪಡುತ್ತದೆ. ಕೇಂದ್ರವು ಕಾನೂನುಬಾಹಿರ ವಿಟೋ ಬಳಸಿ ರಾಜ್ಯದ ಅದಿಕಾರವನ್ನು ನಿಯಂತ್ರಿಸುತ್ತದೆ.

ಇದೇ ರೀತಿ ಕೇಂದ್ರ ಸರಕಾರವು ಪರಿಚ್ಚೇದ 356ರನ್ನು ದುರ್ಬಳಕೆ ಮಾಡಿಕೊಂಡು ಬಾಲಿಶ ನೆಪವೊಡ್ಡಿ ಚುನಾಯಿತ ರಾಜ್ಯ ಸರಕಾರಗಳನ್ನು ವಜಾಗೊಳಿಸಬಹುದು. ಪರಿಚ್ಚೇದ 368ರ ಅನುಸಾರ ಸಂವಿದಾನದ ತಿದ್ದುಪಡಿಗಳನ್ನು ಮಾಡಲು ಸಂಸತ್ತಿಗೆ ಪರಮಾದಿಕಾರ ನೀಡಲಾಗಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವ ಕೇಂದ್ರ ಸರಕಾರ ತಿದ್ದುಪಡಿ ಮಾಡುವ ಸಂದರ್ಬದಲ್ಲಿ ನಿಜದ ಹಕ್ಕುದಾರರಾದ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುವುದಿಲ್ಲ. ಸಂಸತ್ತಿನಲ್ಲಿ ಅಂಗೀಕಾರವಾಗುವ ಈ ಸಂವಿದಾನದ ತಿದ್ದಪಡಿಗಳು ರಾಜ್ಯಗಳಿಗೂ ಅನ್ವಯವಾಗುತ್ತವೆ ಆದರೆ ರಾಜ್ಯಗಳಿಗೆ ತಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸುವ ಅದಿಕಾರವಿಲ್ಲ. ಎಲ್ಲವೂ ಏಕಪಕ್ಷೀಯವಾಗಿ ನಿರ್ದರಿಸಲ್ಪಡುತ್ತದೆ.

2019ರಲ್ಲಿ ಮೋದಿ ಸರಕಾರವು ಎರಡನೇ ಅವದಿಗೆ ಆಯ್ಕೆಯಾದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ಸರಕಾರವನ್ನು ಪದಚ್ಯತುಗೊಳಿಸಿ ಆ ರಾಜ್ಯವನ್ನು ಕೇಂದ್ರಾಡಳಿತಕ್ಕೆ ಒಳಪಡಿಸಿತು. ದೇಶದ ಬದ್ರತೆಯ ನೆಪವೊಡ್ಡಿ ಈ ಸಂವಿದಾನ ವಿರೋದಿ ಕೃತ್ಯವೆಸಗಿದ ಕೇಂದ್ರ ಸರಕಾರವು ಚುನಾಯಿತ ಸರಕಾರದೊಂದಿಗೆ ಸಮಾಲೋಚನೆಯನ್ನು ನಡೆಸಲಿಲ್ಲ. ಏಕಪಕ್ಷೀಯವಾಗಿ ಕಲಂ 370ನ್ನು ನಿಶೇದಿಸಿತು. ಮೋದಿ ಸರಕಾರದ ಗೃಹ ಮಂತ್ರಿ ಅಮಿತ್ ಶಾ ರಾಜ್ಯಗಳೊಂದಿಗೆ ಚರ್ಚಿಸದೆ ತಮ್ಮ ರಾಜಕೀಯ ಲಾಬಕ್ಕಾಗಿ ‘ಸಿಎಎ’ ಎನ್ನುವ ಕರಾಳ ಶಾಸನವನ್ನು ಜಾರಿಗೊಳಿಸಿದರು.

ರಾಜ್ಯಗಳ ನಿಶ್ಕ್ರಿಯತೆ ಮತ್ತು ಪುಕ್ಕಲುತನದ ಕಾರಣದಿಂದಾಗಿ ಸಂಸತ್ತು ರಾಜ್ಯಗಳೊಂದಿಗೆ ಸಮಾಲೋಚಿಸದೆ, ಅವರನ್ನು ಒಳಗೊಳ್ಳದೆ ಸಂವಿದಾನಕ್ಕೆ ತಿದ್ದುಪಡಿ ತರಬಹುದು. ಸಂಸತ್ತು ಏಕಪಕ್ಷೀಯವಾಗಿ ರಾಜ್ಯವೊಂದರ ಬೌಗೋಳಿಕ ನಕ್ಷೆಯನ್ನು ಬದಲಿಸಬಹುದು. ದೇಶದೊಳಗಿನ ಅಂತರಿಕ ಅಬದ್ರತೆ ಮತ್ತು ಬಾಹ್ಯದ ಅಪಾಯದ ನೆಪವೊಡ್ಡಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ತುರ್ತುಪರಿಸ್ಥಿತಿ ಹೇರಬಹುದು. ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾದರೂ ಸಹ ಅವರನ್ನು ಕೇಂದ್ರ ಸರಕಾರದ ಸೂಚನೆಯ ಮೇರೆಗೆ ರಾಷ್ಟ್ರಪತಿಗಳು ನೇಮಕಾತಿ ಮಾಡುತ್ತಾರೆ. ಇಶ್ಟು ಮಾತ್ರವಲ್ಲದೆ ಇದೇ ರಾಜ್ಯಪಾಲ ರಾಜ್ಯದ ಹಿತಾಸಕ್ತಿಯನ್ನು ಕಾಪಾಡದೆ ಕೇಂದ್ರದ ಏಜೆಂಟರಂತೆ ವರ್ತಿಸುತ್ತಾರೆ. ಈ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು.

ಸಂವಿದಾನದ 7ನೆ ಶೆಡ್ಯೂಲ್‍ನ ಅನುಸಾರ ಕೇಂದ್ರ ಮತ್ತು ರಾಜ್ಯಗಳ ಅದಿಕಾರವನ್ನು ಕೇಂದ್ರ ಪಟ್ಟಿ (98) ರಾಜ್ಯ ಪಟ್ಟಿ (59), ಸಮವರ್ತಿ ಪಟ್ಟಿ (47) ಎಂದು ವಿಂಗಡಿಸಲಾಗಿದೆ. ಆದರೆ ವಾಸ್ತವದಲ್ಲಿ ರಾಜ್ಯಗಳಿಗೆ ತಮ್ಮ ಪಟ್ಟಿಯಲ್ಲಿನ ಅನೇಕ ವಲಯಗಳಲ್ಲಿನ ನೀತಿಗಳನ್ನು, ನಿಯಮಾವಳಿಗಳನ್ನು ಸ್ವತಂತ್ರವಾಗಿ ನಿರ್ದರಿಸುವ ಅದಿಕಾರವಿರುವುದಿಲ್ಲ. ಉದಾಹರಣೆಗೆ ‘ಕೃಶಿ ವಲಯ’ವು ರಾಜ್ಯದ ಪಟ್ಟಿಯಲ್ಲಿ ಬರುತ್ತದೆ. ಆದರೆ ಕೃಶಿಗೆ ಸಂಬಂದಿಸಿದ ಬಹುತೇಕ ಮಸೂದೆಗಳನ್ನು ಪರಿಚ್ಚೇದ 256ರ ದುರ್ಬಳಕೆ ಮಾಡಿಕೊಂಡು ರಾಜ್ಯಗಳ ಮೇಲೆ ಹೇರಲ್ಪಡುತ್ತದೆ ಮತ್ತು ರಾಜ್ಯಗಳು ಕೇಂದ್ರ ರೂಪಿಸಿದ ಮಸೂದೆಯನ್ನು ವಿದಾನಮಂಡಲದಲ್ಲಿಯೂ ಮಂಡಿಸುತ್ತಾರೆ. ಉದಾಹರಣೆಗೆ ಇತ್ತೀಚೆಗೆ ಮೋದಿ ಸರಕಾರವು ಖಾಸಗಿಯವರಿಗೆ ಕೃಶಿ ಉತ್ಪನ್ನಗಳ ಖರೀದಿಯಲ್ಲಿ ಖಾಸಗಿಯವರಿಗೆ ಅವಕಾಶ, ಗುತ್ತಿಗೆ ಬೇಸಾಯವನ್ನು ಒಳಗೊಂಡ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿತು. ಈ ಮಸೂದೆಗಳನ್ನು ರೂಪಿಸುವಾಗ ಇದರ ಹಕ್ಕುದಾರರಾದ ದೇಶದ 28 ರಾಜ್ಯ, 9 ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಏಕಪಕ್ಷೀಯವಾಗಿ ಹೇರಲ್ಪಟ್ಟ ಈ ಮಸೂದೆಗಳನ್ನು ರಾಜ್ಯ ಸರಕಾರಗಳು ಯಥಾವತ್ತಾಗಿ ವಿದಾನಮಂಡಲಗಳಲ್ಲಿ ಮಂಡಿಸಿದವು (ಕೇರಳ, ಪಂಜಾಬ್, ರಾಜಸ್ತಾನ ಸರಕಾರಗಳನ್ನು ಹೊರತುಪಡಿಸಿ).

ಇದೇ ಮಾದರಿಯಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಮೋದಿ ಸರಕಾರವು ‘ರಾಶ್ಟ್ರೀಯ ಶಿಕ್ಷಣ ನೀತಿ 2020’ಯನ್ನು ಸಂಸತ್‍ನಲ್ಲಿಯೂ ಮತ್ತು ವಿದಾನಮಂಡಲಗಳಲ್ಲಿಯೂ ಚರ್ಚಿಸಲಿಲ್ಲ. ಕೇಂದ್ರ ಕ್ಯಾಬಿನೆಟ್‍ನಲ್ಲಿ ಅನುಮೋದನೆ ಮಾಡಿ ಏಕಪಕ್ಷೀಯವಾಗಿ ಇದನ್ನು ಜಾರಿಗೊಳಿಸುತ್ತೇವೆ ಎಂದು ಬಿಜೆಪಿ ಪಕ್ಷದ ಮಂತ್ರಿಗಳು ಹೇಳಿಕೆ ಕೊಡುತ್ತಿದ್ದಾರೆ. ಯುಜಿಸಿ ಸಹ ಸಂವಿದಾನ ನೀತಿಸಂಹಿತೆಗಳನ್ನು ನಿರ್ಲಕ್ಷಿಸಿ, ರಾಜ್ಯ ಸರಕಾರಗಳನ್ನು ಪರಿಗಣಿಸದೆ ನೇರವಾಗಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಪತ್ರವನ್ನು ಬರೆದು ‘ಎನ್‍ಇಪಿ 2020’ ಜಾರಿ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದು ಆದೇಶ ಕೊಡುತ್ತದೆ. ಎಲ್ಲಕ್ಕಿಂತಲೂ ಆತಂಕದ ಸಂಗತಿಯೆಂದರೆ ಚುನಾಯಿತ ರಾಜ್ಯ ಸರಕಾರಗಳು ಸಹ ತಮ್ಮ ಸಂವಿದಾನಬದ್ದ ಹಕ್ಕನ್ನು ರಕ್ಷಿಸಿಕೊಳ್ಳಲು ವಿಫಲಗೊಂಡಿವೆ.

ಆರ್ಥಿಕ ಸರ್ವಾದಿಕಾರ

ಹಣಕಾಸಿನ ವಿಚಾರವನ್ನು ತೆಗೆದುಕೊಂಡರೆ 14ನೆ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರಕಾರವು ತೆರಿಗೆ ರೂಪದಲ್ಲಿನ ಆದಾಯವನ್ನು ಶೇ. 42% ಪ್ರಮಾಣದಲ್ಲಿ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಉಳಿದ ಶೇ. 58% ಪ್ರಮಾಣದ ಆದಾಯವನ್ನು ತಾನು ಬಳಸಿಕೊಳ್ಳುತ್ತದೆ. ರಾಜ್ಯಗಳಿಗೆ ಕೊಡಬೇಕಾದ ಪಾಲನ್ನು ಹಣಕಾಸು ಆಯೋಗ ನಿರ್ದರಿಸುತ್ತದೆ. ಆದರೆ ಈ ಹಣಕಾಸು ಆಯೋಗವನ್ನು ಕೇಂದ್ರ ಸರಕಾರ ರಚಿಸುತ್ತದೆ. ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ, ಪಕ್ಷ ರಾಜಕಾರಣದ ನೇಮಕಾತಿಯಾಗಿ ಹಣಕಾಸು ಆಯೋಗದ ಉಪಾದ್ಯಕ್ಷರನ್ನು ನೇಮಿಸುತ್ತದೆ. ಕಳೆದ ಕೆಲ ವರ್ಶಗಳ ಹಣಕಾಸು ಹಂಚಿಕೆಯನ್ನು ಅವಲೋಕಿಸಿದಾಗ ಪರಿಸ್ಥಿತಿ ತಿಳಿಯುತ್ತದೆ. ಸರಳೀಕರಿಸಿ ಉದಾಹರಣೆ ಮೂಲಕ ವಿವರಿಸಬೇಕೆಂದರೆ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳು ಕೇಂದ್ರದ ಬೊಕ್ಕಸಕ್ಕೆ ಸಂಗ್ರಹಿಸಿಕೊಟ್ಟ ಪ್ರತಿ 100 ರೂಗೆ ಪ್ರತಿಯಾಗಿ ಕೇಂದ್ರವು ಈ ರಾಜ್ಯಗಳಿಗೆ 30 ರೂಗಳನ್ನು ಕೊಡುತ್ತದೆ. ಆದರೆ ಬಿಹಾರ್, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಿಗೆ 150ರೂ, 200ರೂಗಳನ್ನು ಕೊಡುತ್ತದೆ. ಈ ರೀತಿಯ ತಾರತಮ್ಯವು ಉತ್ತರ ಮತ್ತು ದಕ್ಷಿಣ ಭಾರತದ ರಾಜ್ಯಗಳ ನಡುವೆ ಕಂದಕವನ್ನು ಸೃಷ್ಟಿಸಿದೆ.

ಇದೇ ಮಾದರಿಯಲ್ಲಿ ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟ ತೆರಿಗೆಗಳನ್ನು ರದ್ದುಪಡಿಸಿ ‘ಏಕರೂಪಿ ತೆರಿಗೆ’ ಎಂಬ ನೆಪದಲ್ಲಿ 2017ರಲ್ಲಿ ಕೇಂದ್ರೀಕರಣಗೊಂಡ ಜಿಎಸ್‍ಟಿಯನ್ನು ಜಾರಿಗೊಳಸಿದೆ. ಇದನ್ನು ‘ಸಹಕಾರಿ ಒಕ್ಕೂಟ’ ಎಂದು ಕರೆಯಲಾಯಿತು. ಆದರೆ ತೆರಿಗೆ ಸಂಗ್ರಹದ ತಮ್ಮ ಹಕ್ಕನ್ನು ವಂಚಿತಗೊಳಿಸುವ ಈ ‘ಕೇಂದ್ರೀಕೃತ ಜಿಎಸ್‍ಟಿ ವ್ಯವಸ್ಥೆ’ಯನ್ನು ಬಿಜೆಪಿಯೇತರ ರಾಜ್ಯಗಳು ವಿರೋದಿಸಿದವು. ಆದರೆ ಸಂಸತ್ತಿನಲ್ಲಿರುವ ಬಹುಮತವನ್ನು ಬಳಸಿಕೊಂಡು ಮೋದಿ ಸರಕಾರ ‘ಜಿಎಸ್‍ಟಿ’ಯನ್ನು ಜಾರಿಗೊಳಿಸಿತು. ಆದರೆ ಮೂರು ವರ್ಶಗಳ ನಂತರ ಈ ‘ಜಿಎಸ್‍ಟಿ’ ವೈಪಲ್ಯತೆ ಒಕ್ಕೂಟ ವ್ಯವಸ್ಥೆಯು ತನ್ನ ಎಲ್ಲಾ ಅದಿಕಾರವನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಯಾವುದೇ ವಿವೇಚನೆ ಇಲ್ಲದೆ ‘ಜಿಎಸ್‍ಟಿ’ಯನ್ನು ಜಾರಿಗೊಳಿಸಿರುವುದರ ಪರಿಣಾಮವಾಗಿ ಇಂದು ರಾಜ್ಯಗಳು ತಾವೇ ಸಂಗ್ರಹಿಸಿದ ತಮ್ಮದೇ ತೆರಿಗೆ ಮೊತ್ತವನ್ನು ಪಡೆದುಕೊಳ್ಳಲು ಕೇಂದ್ರ ಮುಂದೆ ಅಂಗಲಾಚುವ ದುಸ್ಥಿತಿ ನಿರ್ಮಾಣವಾಗಿದೆ. ಒಂದು ಅಂದಾಜಿನ ಪ್ರಕಾರ 2020-21ರ ಹಣಕಾಸಿನ ವರ್ಶದಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಪರಿಹಾರ ರೂಪದಲ್ಲಿ 3 ಲಕ್ಷ ಕೋಟಿ ಮೊತ್ತವನ್ನು ಕೊಡಬೇಕಾಗಿದೆ. ಆದರೆ ಮೋದಿ ಸರಕರಾವು ತನ್ನ ಬಳಿ ಸಂಪನ್ಮೂಲ ಸಂಗ್ರಹದ ಕೊರತೆ ಕಾರಣಕ್ಕೆ ರಾಜ್ಯಗಳಿಗೆ ದೊರಕಬೇಕಾದ ನ್ಯಾಯಯುತ ಮೊತ್ತವನ್ನು ನೀಡಲು ತಿರಸ್ಕರಿಸುತ್ತಿದೆ. ಸ್ವತಂತ್ರವಾಗಿದ್ದ ರಾಜ್ಯ ಸರಕಾರಗಳ ಹಣಕಾಸು ವ್ಯವಸ್ಥೆ ಇಂದು ಸಂಪೂರ್ಣವಾಗಿ ಕೇಂದ್ರದ ಮೇಲೆ ಅವಲಂಬಿತವಾಗಿದೆ. ಮೋದಿ ಸರಕಾರವು ರಾಜ್ಯಗಳು ಸಾಲ ಪಡೆದುಕೊಳ್ಳುವುದರ ಮಿತಿಯ ಮೇಲೆಯೂ ಸಹ ನಿರ್ಬಂದ ವಿದಿಸಿದೆ. ಉದಾಹರಣೆಗೆ ಕೇರಳ ಸರಕಾರವು 6 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಸಾಲ ಪಡೆಯುವಂತಿಲ್ಲ. ಈ ಮಾದರಿಯ ಸರ್ವಾದಿಕಾರಿ ನಿರ್ಣಯಗಳು ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುತ್ತವೆ.

ಇದೇ ರೀತಿಯಲ್ಲಿ 2014ರಲ್ಲಿ ಅದಿಕಾರಕ್ಕೆ ಬಂದ ಮೋದಿ ಸರಕಾರವು ರಾಜ್ಯ ಸರಕಾರಗಳೊಂದಿಗೆ ಚರ್ಚಿಸದೆ ಅವರಿಗೆ ಮಾಹಿತಿಯನ್ನು ನೀಡದೆ ಏಕಪಕ್ಷೀಯವಾಗಿ ನಿರ್ದಾರ ತೆಗೆದುಕೊಂಡು ‘ಯೋಜನಾ ಆಯೋಗವನ್ನು ವಿಸರ್ಜಿಸಿತು ಮತ್ತು ಅದರ ಬದಲಿಗೆ ‘ನೀತಿ ಆಯೋಗ’ವನ್ನು ಸ್ಥಾಪಿಸಲಾಯಿತು. ಆದರೆ ಈ ಬದಲಾವಣೆಯು ರಾಜ್ಯಗಳ ಸ್ವಾಯತ್ತತೆ ಕಿತ್ತುಕೊಂಡು ‘ಪ್ರದಾನಮಂತ್ರಿ ಕಾರ್ಯಾಲಯ’ (ಪಿಎಮ್‍ಓ)ಗೆ ಪರಮಾದಿಕಾರವನ್ನು ತಂದುಕೊಟ್ಟಿತು. ಈ ಬದಲಾವಣೆಗೆ ಕಾರಣವನ್ನೂ, ಸೂಕ್ಷ್ಮ ಸಮಜಾಯಿಶಿಯನ್ನು ಸಹ ರಾಜ್ಯಗಳಿಗೆ ಕೊಡದ ಮೋದಿ ಸರಕಾರದ ಸರ್ವಾದಿಕಾರಿ ನಡೆಯನ್ನು ಪ್ರಶ್ನಿಸಲೂ ಆಗದಶ್ಟು ರಾಜ್ಯಗಳು ನೈತಿಕವಾಗಿ ದುರ್ಬಲಗೊಂಡಿವೆ.

ರಾಜ್ಯಗಳ ಅಸಮಾನ ಪ್ರಾತಿನಿದ್ಯ

ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಪ್ರತಿನಿದೀಕರಣವು ಆಯಾ ರಾಜ್ಯಗಳ ಬೌಗೋಳಿಕ ವಿಸ್ತೀರ್ಣದ ಮೇಲೆ ಅವಂಬಿತವಾಗಿದೆ. ವಿಸ್ತೀರ್ಣದಲ್ಲಿ ಅತಿ ದೊಡ್ಡ ರಾಜ್ಯ ಎನ್ನುವ ಕಾರಣಕ್ಕೆ ಉತ್ತರ ಪ್ರದೇಶದ ಸಂಸದರು ರಾಜ್ಯಸಬೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಅತಿ ಸಣ್ಣ ರಾಜ್ಯಗಳು ಎನ್ನುವ ಕಾರಣಕ್ಕೆ ಈಶಾನ್ಯ ರಾಜ್ಯಗಳ ಸಂಸದರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದೇ ಸೂತ್ರವು ಕೇರಳ, ಕರ್ನಾಟಕ ಮುಂತಾದ ರಾಜ್ಯಗಳಿಗೂ ಅನ್ವಯಿಸುತ್ತದೆ. ಇದರ ಪರಿಣಾಮವೇನೆಂದರೆ ಆರ್ಥಿಕ – ರಾಜಕೀಯ ನಿರ್ದಾರಗಳು ದೊಡ್ಡ ರಾಜ್ಯಗಳ ಮರ್ಜಿಯ ಮೇಲೆ ನಿರ್ದರಿಸಲ್ಪಡುತ್ತದೆ. ಭಾರತದಂತಹ ದುರ್ಬಲ ಒಕ್ಕೂಟ ವ್ಯವಸ್ಥೆಯಲ್ಲಿ ಇದು ಅಗಾಧವಾದ ಸಮಾಜೋ-ಆರ್ಥಿಕ ಅಸಮಾನತೆಗೆ ಕಾರಣವಾಗಿದೆ. ಕೇವಲ ಸಂಖ್ಯೆಯ ಕಾರಣಕ್ಕೆ ರಾಜ್ಯದ ಅಬಿವೃದ್ದಿ ನಿರ್ದರಿಸ್ಪಡುವುದರಿಂದ ಸಣ್ಣ ರಾಜ್ಯಗಳು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿವೆ.

ಇದರ ಮದ್ಯೆಯೂ ಹಿಂದಿ ನುಡಿಯ ಚದ್ಮವೇಶದಲ್ಲಿ ‘ಹಿಂದೂ ರಾಶ್ಟ್ರೀಯತೆ’ಯನ್ನು ಜಾರಿಗೊಳಿಸಲು ಎಲ್ಲಾ ಬಗೆಯ ಅದಿಕಾರವನ್ನು ಪ್ರಯೋಗಿಸುತ್ತಿರುವ ಬಿಜೆಪಿ ಪಕ್ಷದ ವಿರುದ್ದದ ಪ್ರಾದೇಶಿಕ ಹೋರಾಟಗಳು ಒಕ್ಕೂಟ ವ್ಯವಸ್ಥೆಯ ಕುರಿತು ಭರವಸೆ ಮೂಡಿಸುವಂತಿವೆ. ತಮಿಳುನಾಡು ರಾಜ್ಯದಲ್ಲಿ ಬಾಶಾ ವಿಚಾರಕ್ಕೆ, ಹಿಂದಿ ಹೇರಿಕೆ ವಿರೋದಿ ಜನಾಂದೋಲನಕ್ಕೆ, ದ್ರಾವಿಡ ಅಸ್ಮಿತೆಗೆ ಸಂಬಂದಿಸಿದಂತೆ, ಅಸ್ಸಾಂನಲ್ಲಿ ಸ್ತಳೀಯರ ಆಸ್ತಿತ್ವದ ಕುರಿತು ಸಂಬಂದಿಸಿದಂತೆ, ಕೇರಳ, ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ಸೈದ್ದಾಂತಿಕ ಬದ್ದತೆಯ ಕಾರಣಕ್ಕೆ, ನಿರಂತರವಾಗಿ ನಡೆಸುತ್ತಿರುವ ಸಂಘರ್ಶ ಒಕ್ಕೂಟ ವ್ಯವಸ್ಥೆಯ ಕುರಿತಾದ ಬರವಸೆಯನ್ನು ಜೀವಂತವಾಗಿಟ್ಟಿದೆ. ಈ ಪ್ರತಿರೋದವು ಭಾರತದ ಪ್ರಜಾಪ್ರಬುತ್ವವನ್ನು ರಕ್ಷಿಸುತ್ತಿದೆ. ಆದರೆ ಇದು ಬಯಲಿನಲ್ಲಿರುವ ಬುಡ್ಡಿದೀಪವಾಗುವುದಕ್ಕಿಂತ ಮೊದಲು ಪ್ರಾದೇಶಿಕವಾಗಿ ಸಾಮಾಜಿಕ-ರಾಜಕೀಯ-ಆರ್ಥಿಕ ಪ್ರತಿರೋದ ಮತ್ತು ರಚನಾತ್ಮಕ ಕಾರ್ಯಯೋಜನೆಗಳು ರೂಪುಗೊಳ್ಳಬೇಕು, ಹುರಿಗಟ್ಟಬೇಕು

ಉಪ ಸಂಹಾರ

ಭಾರತವು ಇಂದು ‘quasi-federal ಪ್ರಬುತ್ವ’ವಾಗಿಯೂ ಉಳಿದುಕೊಂಡಿಲ್ಲ. ಪ್ರಸ್ತುತ ಅದು ‘ಕೇಂದ್ರೀಕರಣಗೊಂಡ ಒಕ್ಕೂಟ ವ್ಯವಸ್ಥೆ’. ಸ್ವಾತಂತ್ರ್ಯ ಬಂದ ನಂತರ ಅಪಾರ ವೈವಿದ್ಯತೆ, ಬಹುಸಂಸ್ಕೃತಿಯ ಭಾರತದಲ್ಲಿ ‘ಒಕ್ಕೂಟ ವ್ಯವಸ್ಥೆ’ಯನ್ನು ಮತ್ತಶ್ಟು ವಿಕೇಂದ್ರೀಕಣಗೊಳಿಸುವ ಬದಲಿಗೆ ಕೇಂದ್ರೀಕರಣಕ್ಕೆ ಒತ್ತು ಕೊಟ್ಟಿರುವುದಕ್ಕೆ ಅನೇಕ ಕಾರಣಗಳಿದ್ದವು. ಆದರೆ ಯಾವ ಸಂದರ್ಬದಲ್ಲಿಯೂ ಸಂಪೂರ್ಣವಾಗಿ ಕೇಂದ್ರಕ್ಕೆ ಅದಿಪತ್ಯ ಕೊಟ್ಟಿರಲಿಲ್ಲ. ಆದರೆ ಕ್ರಮೇಣ ಈ ಒಕ್ಕೂಟ ವ್ಯವಸ್ಥೆ ಕುಸಿಯುತ್ತಾ ಹೋದಂತೆ ಫ್ಯಾಸಿಸಂನ ಆಡಳಿತ ಗಟ್ಟಿಗೊಳ್ಳತೊಡಗಿತು. ಮೋದಿ ನೇತೃತ್ವದ ಸರಕಾರದ ಬಳಿ ಅದಿಕಾರ ಕೇಂದ್ರೀಕರಣಗೊಳ್ಳುತ್ತಾ ಹೋದಂತೆ ಒಕ್ಕೂಟ ವ್ಯವಸ್ಥೆ ಕುಸಿಯತೊಡಗಿತು. ಸಮಾಜೋ-ರಾಜಕೀಯ ಸಮೀಕರಣವಾದ ದೇಶವನ್ನು ಹುಸಿ ರಾಷ್ಟ್ರೀಯತೆಯ ಮತಾಂದತೆಯ ಮೂಲಕ ಸೋಲಿಸಲಾಯಿತು. ಇಂತಹ ಬಿಕ್ಕಟ್ಟಿನ ಸಂದರ್ಬದಲ್ಲಿ ರಾಜ್ಯಗಳ ಸ್ವಾಯತ್ತತೆ ಮತ್ತು ರಾಶ್ಟ್ರೀಯ ಸಮಗ್ರತೆ, ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ, ರಾಶ್ಟ್ರೀಕರಣ ಮತ್ತು ಪ್ರಾದೇಶೀಕರಣಗಳ ನಡುವೆ ಸಮತೋಲನ ಸಾದಿವಂತಹ ಒಕ್ಕೂಟ ವ್ಯವಸ್ಥೆಯ ಅವಶ್ಯಕತೆ ಇದೆ. ಇದು ಸಾದ್ಯವಾಗಬೇಕಾದರೆ ಮೊದಲಿಗೆ ರಾಶ್ಟ್ರೀಯ ಪಕ್ಷಗಳ ಏಕಾದಿಪತ್ಯ ಕೊನೆಗೊಳ್ಳಬೇಕು. ಪ್ರಾದೇಶಿಕ ಪಕ್ಷಗಳು ಬಲಗೊಳ್ಳಬೇಕು. ಸಾರ್ವಜನಿಕ ಸಂಸ್ಥೆಗಳಿಗೆ ಸ್ವಾಯತ್ತತೆ ದೊರಕಬೇಕು. ಮುಖ್ಯವಾಗಿ ರಾಜ್ಯಗಳಿಗೆ ಆರ್ಥಿಕ ಸ್ವಾತಂತ್ರ ದೊರಕಬೇಕು. ಸ್ಥಳೀಯ ಸಂಸ್ಥೆಗಳು ಸಬಲೀಕರಣಗೊಳ್ಳಬೇಕು. ‘ಹಿಂದಿ-ಹಿಂದೂ-ಹಿಂದುಸ್ತಾನ’ ಎಂಬ ಮತೀಯವಾದಕ್ಕೆ ಸೋಲುಂಟಾಗಬೇಕು. ಸಾಮಾಜಿಕ ಬಹುತ್ವಕ್ಕೆ, ಬಾಶಾ ಬಹುತ್ವಕ್ಕೆ ಮಹತ್ವ ದೊರಕಬೇಕು. ಈ “ಬೇಕುಗಳು” ಬೆಳೆದಶ್ಟು ಒಕ್ಕೂಟ ವ್ಯವಸ್ಥೆ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ

ಆದರೆ ಈ “ಬೇಕುಗಳು” ಹೇಗೆ? ಯಾವಾಗ? ಯಾರಿಂದ? ಮುಂತಾದ ಯಕ್ಷ ಪ್ರಶ್ನೆಗಳಿಗೆ ಮಾತ್ರ ಸದ್ಯಕ್ಕೆ ಉತ್ತರವಿಲ್ಲ.

ಬಿ. ಶ್ರೀಪಾದ ಭಟ್

(ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ‘JNU ಅಂಗಳದಲ್ಲಿ ರಾಶ್ಟ್ರೀಯವಾದದ ಕ್ಲಾಸುಗಳು’, ‘ವಿಮೋಚಕಿಯ ಕನಸುಗಳು’ ಸೇರಿದಂತೆ ಹಲವು ಅತ್ಯಮೂಲ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.)


ಇದನ್ನೂ ಓದಿ: ಬಲಿಷ್ಠ ಕೇಂದ್ರಕ್ಕೆ ಬಲಿಯಾಗುತ್ತಿದೆಯೇ ಒಕ್ಕೂಟ ವ್ಯವಸ್ಥೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...