ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಕಾಳಿ ಸ್ವಾಮಿ (ಋಷಿ ಕುಮಾರ ಸ್ವಾಮೀಜಿ) ಅವರಿಗೆ ಮಸಿ ಬಳಿಯಲಾಗಿದೆ.
ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಗಂಗಮ್ಮ ದೇವಾಲಯಕ್ಕೆ ಋಷಿಕುಮಾರ ಸ್ವಾಮಿ ಬಂದಿದ್ದ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಋಷಿಕುಮಾರ ಸ್ವಾಮೀಜಿಗೆ ಧಿಕ್ಕಾರ ಕೂಗಿ ಮುಖಕ್ಕೆ ಕಪ್ಪುಮಸಿ ಬಳಿದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಾಡಗೀತೆಯ ಕುರಿತು ಋಷಿಕುಮಾರ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಘಟನೆಯನ್ನು ಶಿವರಾಮೇಗೌಡರ ಬಣದ ಕರವೇ ಸಮರ್ಥಿಸಿಕೊಂಡಿದೆ.
ಘಟನೆ ಕುರಿತು ಕಾಳಿ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, “ನಾನು ಯಾರನ್ನು ಅವಮಾನಿಸಿಲ್ಲ. ದಾಖಲೆಗಳಿದ್ದರೆ ಕೋರ್ಟ್‌ನಲ್ಲಿ ದಾವೆ ಹೂಡಲಿ. ಇದರಿಂದ ನಾನೇನು ವಿಚಲಿತನಾಗಿಲ್ಲ” ಎಂದಿದ್ದಾರೆ.
ಋಷಿ ಕುಮಾರ ಸ್ವಾಮೀಜಿ ಕಾಲಿಗೆ ಪೆಟ್ಟು ಬಿದ್ದಿದೆ ಎಂದು ಆರೋಪಿಸಲಾಗಿದ್ದು, ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
“ನಾಡಗೀತೆಯನ್ನು ಅನುಸರಿಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು” ಎಂದು ಕಾಳಿ ಸ್ವಾಮೀಜಿ ಹೇಳಿದ್ದರೆಂದು ದೂರಲಾಗುತ್ತಿದೆ.
ಸ್ವಾಮೀಜಿ ಹೇಳಿದ್ದೇನು?
“ಕಾಳಿಕಾ ಸೇನೆಯ ವತಿಯಿಂದ ಮಲ್ಲೇಶ್ವರಂನಲ್ಲಿ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಇತ್ತು. ಪೂಜೆ ಬಹಳ ಚೆನ್ನಾಗಿ ಆಯ್ತು. ನನಗೆ ಬಹಳ ಖುಷಿ ಆಯ್ತು. ಪೂಜೆ ಮುಗಿಸಿ ಹೊರ ಬರುವ ವೇಳೆ ಕೆಲವರು ಬಂದು ನೀವು ಕುವೆಂಪು ಅವರನ್ನು ಮತ್ತು ಕನ್ನಡ ಪಡೆಗಳನ್ನು ನಿಂದಿಸಿದ್ದೀರಾ ಎಂದು ಸೃಷ್ಟಿ ಮಾಡಿಕೊಂಡು ನನ್ನ ಬಳಿ ಜಗಳ ಮಾಡಿದ್ರು. ಕುವೆಂಪು ಅವರನ್ನು ಕನ್ನಡ ಪಡೆಗಳನ್ನು ನಾನು ಯಾವತ್ತಿಗೂ ನಿಂದಿಸಿಲ್ಲ. ನಿಮ್ಮ ಬಳಿ ದಾಖಲೆಗಳಿದ್ರೆ ಅದನ್ನು ತರಬೇಕು. ಅದನ್ನು ಬಿಟ್ಟು ಕಪ್ಪು ಮಸಿ ಬಳಿದ್ರೆ ಹೇಗೆ” ಎಂದು ಕಾಳಿ ಸ್ವಾಮೀಜಿ ಕೇಳಿದ್ದಾರೆ.
ಇದನ್ನೂ ಓದಿರಿ: ದೇಶದಲ್ಲಿ ಹಿಜಾಬ್ ನಿಷೇಧಿಸಬೇಕು: ಕಾಳಿ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ
ವಿವಾದಗಳನ್ನು ಸೃಷ್ಟಿಸುತ್ತಿರುವ ಕಾಳಿ ಸ್ವಾಮೀಜಿ
ಕನ್ನಡ ನಾಡನ್ನು ರಾಷ್ಟ್ರಕವಿ ಕುವೆಂಪು ಅವರು “ಸರ್ವ ಜನಾಂಗದ ಶಾಂತಿ ತೋಟ” ಎಂದು ಕರೆದಿದ್ದಾರೆ. ನಾಡಗೀತೆಯ ಎಲ್ಲ ಜನವರ್ಗವನ್ನು ಸೌಹಾರ್ದತೆಯಿಂದ ಬದುಕಲು ಪ್ರೇರೇಪಿಸುತ್ತದೆ. ಅನೇಕ ಮಹನೀಯರು ಇದನ್ನೇ ಸಾರಿದ್ದಾರೆ. ಆದರೆ ಕಾಳಿ ಸ್ವಾಮೀಜಿ ಒಂದಲ್ಲ ಒಂದು ವಿವಾದವನ್ನು ಸೃಷ್ಟಿಸುತ್ತಾ “ಸರ್ವಜನಾಂಗದ ಶಾಂತಿಯ ತೋಟ”ವನ್ನು ಹದಗೆಡಿಸುತ್ತಿರುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹಿಂದೂ ಮುಸ್ಲಿಂ ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಕಾಳಿ ಸ್ವಾಮೀಜಿ ಎಗ್ಗಿಲ್ಲದೆ ಮಾಡುತ್ತಿರುವುದು ಕಂಡು ಬರುತ್ತಿದೆ ಎಂಬ ಆರೋಪಗಳು ಬರುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ.
“ಬಾಬ್ರಿ ಮಸೀದಿಯಂತೆ ಶ್ರೀರಂಗಪಟ್ಟಣದ ಮಸೀದಿಯನ್ನೂ ಕೆಡವಬೇಕು” ಎಂದು ಕಾಳಿ ಸ್ವಾಮೀಜಿ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡಿದ್ದರು. ಪ್ರಕರಣ ಕೂಡ ದಾಖಲಾಗಿತ್ತು. ನಂತರದಲ್ಲೂ ಕೋಮುದ್ವೇಷವನ್ನು ಮುಂದುವರಿಸಿದ ಸ್ವಾಮೀಜಿ, “ಅದಾನ್ ವಿರುದ್ಧ ಸುಪ್ರಬಾತ” ಎಂಬ ವಿವಾದದಲ್ಲೂ ಪಾಲ್ಗೊಂಡಿದ್ದರು. “ಹಲಾಲ್ ಕಟ್‌ಗೆ ವಿರೋಧ ವ್ಯಕ್ತಪಡಿಸಿ ಜಟ್ಕಾ ಕಟ್” ಎಂದು ಕೋಳಿಯನ್ನು ಕೊಯ್ದು ಪ್ರಚಾರ ಪಡೆದಿದ್ದರು.