Homeಮುಖಪುಟಸುಚಿತ್ರ ಫಿಲ್ಮ್‌ ಸೊಸೈಟಿಯನ್ನು ಹೊರದಬ್ಬಲು ಹೊರಟಿದೆಯೇ ಸುಚಿತ್ರ ಟ್ರಸ್ಟ್‌?: ನಾಳೆ ಪ್ರತಿಭಟನೆ

ಸುಚಿತ್ರ ಫಿಲ್ಮ್‌ ಸೊಸೈಟಿಯನ್ನು ಹೊರದಬ್ಬಲು ಹೊರಟಿದೆಯೇ ಸುಚಿತ್ರ ಟ್ರಸ್ಟ್‌?: ನಾಳೆ ಪ್ರತಿಭಟನೆ

2015ರಿಂದೀಚೆಗೆ ಸುಚಿತ್ರ ಟ್ರಸ್ಟ್‌ ಕಾರ್ಪೊರೇಟ್‌ ಹಿಡಿತಕ್ಕೆ ಸಿಲುಕುತ್ತಿರುವ ಆತಂಕ ವ್ಯಕ್ತವಾಗಿದೆ. ಟ್ರಸ್ಟ್‌ ಹುಟ್ಟಲು ಕಾರಣವಾದ ಸುಚಿತ್ರ ಫಿಲ್ಮ್‌ ಸೊಸೈಟಿಯನ್ನು ಹೊರದೂಡಲು ಯತ್ನಿಸಲಾಗುತ್ತಿದೆ ಎಂಬ ಆರೋಪಗಳು ಬಂದಿವೆ.

- Advertisement -
- Advertisement -

ಭಾರತದ ಪ್ರತಿಷ್ಟಿತ ಫಿಲ್ಮ್‌ ಸೊಸೈಟಿಗಳಲ್ಲಿ ಒಂದಾದ, ಇದೇ ವರ್ಷ ಸುವರ್ಣ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಸುಚಿತ್ರ ಫಿಲ್ಮ್‌ ಸೊಸೈಟಿಯ ಭವಿಷ್ಯ ಡೋಲಾಯಮಾನವಾಗಿದೆ. ಕಾರ್ಪೊರೇಟ್‌ ಹಿಡಿತಕ್ಕೆ ಸಿಲುಕುತ್ತಿರುವ ಸುಚಿತ್ರ ಟ್ರಸ್ಟ್‌, ತಮ್ಮ ಮೂಲ ಬೇರಾದ ಸೊಸೈಟಿಯ ಅಸ್ತಿತ್ವಕ್ಕೆ ಅಡ್ಡಿಪಡಿಸಲು ಹೊರಟಿದೆ ಎಂದು ಸೊಸೈಟಿಯ ಸದಸ್ಯರು ಆರೋಪಿಸಿದ್ದಾರೆ.

ಟ್ರಸ್ಟ್‌‌ ಜಾರಿಗೊಳಿಸುತ್ತಿರುವ ಹೊಸ ನಿಯಮಗಳಿಂದಾಗಿ ಬೇಸತ್ತಿರುವ ಸುಚಿತ್ರ ಫಿಲ್ಮ್‌ ಸೊಸೈಟಿಯ ಸದಸ್ಯರು ನವೆಂಬರ್‌‌ 14 ರಂದು (ಭಾನುವಾರ) ಸುಚಿತ್ರ ಗೇಟಿನ ಎದುರು ಮೌನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಪ್ರತಿಭಟನೆ ನಡೆಯಲಿದೆ.

ಸುಚಿತ್ರ ಫಿಲ್ಮ್‌ ಸೊಸೈಟಿಯ ಇತಿಹಾಸವನ್ನು ನೋಡುತ್ತಾ ಹೋದರೆ, ಸೊಸೈಟಿಯಿಂದಾಗಿ ಟ್ರಸ್ಟ್‌ ಹುಟ್ಟಿಕೊಂಡಿತು. ಆದರೆ ಟ್ರಸ್ಟ್ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕುತ್ತಿರುವ ಆತಂಕವನ್ನು ಟ್ರಸ್ಟ್‌ ಹಾಗೂ ಸೊಸೈಟಿಯ ಒಡನಾಟದಲ್ಲಿದ್ದವರು ವ್ಯಕ್ತಪಡಿಸುತ್ತಿದ್ದಾರೆ.

ಏನಿದು ವಿವಾದ? ಸುಚಿತ್ರ ಫಿಲ್ಮ್‌ ಸೊಸೈಟಿಯ ಸದಸ್ಯರು ಹೇಳುವುದೇನು?

ಬೆಂಗಳೂರಿನ ಚಾಮರಾಜಪೇಟೆಯ ಚಿಕ್ಕಕೋಣೆಯಲ್ಲಿ ಸುಚಿತ್ರ ಫಿಲ್ಮ್‌ ಸೊಸೈಟಿಯು 1971ರಲ್ಲಿ ಕೆಲವು ಸಿನೆಮಾ ಆಸಕ್ತರು ಸೇರಿ ಆರಂಭಿಸಿದರು. ಸಿನೆಮಾ ಪ್ರದರ್ಶನಕ್ಕಾಗಿ ವಿವಿಧ ಚಿತ್ರಮಂದಿರಗಳನ್ನು ಹುಡುಕಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾಗ ಕರ್ನಾಟಕ ಸರ್ಕಾರವು ಬನಶಂಕರಿಯಲ್ಲಿ ಸುಚಿತ್ರ ಫಿಲ್ಮ್‌ ಸೊಸೈಟಿಯ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಒಂದು ಸ್ವಂತ ಚಿತ್ರಮಂದಿರವನ್ನು ಕಟ್ಟಿಕೊಳ್ಳಲು ಒಂದು ಸಿಎ ನಿವೇಶನವನ್ನು ಬಿಡಿಎ ಮುಖಾಂತರ ಗುತ್ತಿಗೆ ಆಧಾರದಲ್ಲಿ ಕೊಡಿಸಿತು.

ಇದನ್ನೂ ಓದಿರಿ: ಅಪ್ಪು ಫೋಟೋ ಮುಂದೆ ಶಾಂಪೇನ್ ಸಂಭ್ರಮ: ಕ್ಷಮೆಯಾಚಿಸಿದ ನಿರ್ದೇಶಕ, ನಟ, ನಟಿಯರು

ಈ ನಿವೇಶನವನ್ನು ನೋಡಿಕೊಳ್ಳಲು ಒಂದು ಟ್ರಸ್ಟ್‌ ಮಾಡಿಕೊಳ್ಳಬೇಕೆಂದು ಸರ್ಕಾರ ಸೂಚಿಸಿತು. ಅದಕ್ಕನುಸಾರವಾಗಿ ಸುಚಿತ್ರ ಫಿಲ್ಮ್‌‌ ಸೊಸೈಟಿಯು 1979ರಲ್ಲಿ ಸುಚಿತ್ರ ಸಿನೆಮಾ ಅಕಾಡೆಮಿ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿತು. ಅದರ ಪ್ರಾರಂಭದ ಟ್ರಸ್ಟಿಗಳು ಬಹುತೇಕ ಸುಚಿತ್ರ ಫಿಲ್ಮ್‌‌ ಸೊಸೈಟಿಯಿಂದ ಬಂದವರೇ ಆಗಿದ್ದರಿಂದ ಎರಡೂ ಸಂಸ್ಥೆಗಳು ಅಂದಿನಿಂದಲೂ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾ ಬಂದಿದ್ದವು. ಜಗದ್ವಿಖ್ಯಾತ ಚಿತ್ರ ನಿರ್ದೇಶಕರಾದ ಶ್ರೀಯುತ ಸತ್ಯಜಿತ್ ರಾಯ್ ಅವರು 1980ರಲ್ಲಿ ಈ ಚಿತ್ರಮಂದಿರದ ಮೊದಲ ಅಡಿಗಲ್ಲನ್ನು ಹಾಕಿದರು. ಕಟ್ಟಡ ನಿರ್ಮಾಣಕ್ಕಾಗಿ “ಒಂದು ಇಟ್ಟಿಗೆ ನಿಮ್ಮ ಹೆಸರಿನಲ್ಲಿ” ಚಿತ್ರಮಂದಿರಕ್ಕಾಗಿ, “ಒಂದು ಕುರ್ಚಿ ನಿಮ್ಮ ಹೆಸರಿನಲ್ಲಿ” ಎಂಬ ಅಭಿಯಾನ ನಡೆಸಿ, ಸಾರ್ವಜನಿಕರಿಂದ ಸಂಗ್ರಹಿಸಲಾದ ದೇಣಿಗೆ ಮತ್ತು ಸರ್ಕಾರದ ಅನುದಾನದಿಂದ 1986ರಲ್ಲಿ ಸಿದ್ಧವಾದ ಸುಚಿತ್ರ ಸಭಾಂಗಣವನ್ನು ಮತ್ತು ಕಚೇರಿಯಿದ್ದ ಕಟ್ಟಡವನ್ನು ಉದ್ಘಾಟಿಸಲಾಯಿತು.

ಸಿನೆಮಾ ಪ್ರದರ್ಶನಗಳು ಮಾತ್ರವಲ್ಲದೇ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾದಂತೆ ಸುಚಿತ್ರ ಫಿಲ್ಮ್‌‌ ಸೊಸೈಟಿಯ ಒಪ್ಪಿಗೆ ಪಡೆದು, ಸದರಿ ಟ್ರಸ್ಟ್ ಹೆಸರನ್ನು ಸುಚಿತ್ರ ಸಿನೆಮಾ ಅಂಡ್ ಕಲ್ಚರಲ್ ಅಕಾಡೆಮಿ ಎಂದು ಹೆಸರಿಸಲಾಯಿತು. ಟ್ರಸ್ಟಿಗಳಲ್ಲಿ ಹೆಚ್ಚಿನ ಭಾಗ ಫಿಲ್ಮ್‌‌ ಸೊಸೈಟಿಯ ಸದಸ್ಯರೇ ಇದ್ದರು. ಹಾಗಾಗಿ ಫಿಲ್ಮ್‌‌ ಸೊಸೈಟಿಯು ಕಳೆದ 4 ದಶಕಗಳಿಂದ ನಿರಂತರವಾಗಿ ಹಲವು ಬಗೆಯ ಸಿನೆಮೋತ್ಸವಗಳನ್ನು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದೆ. ಪ್ರಮುಖವಾಗಿ ನೊಸ್ಟಾಲ್ಜಿಯಾ (1977), ಚಿತ್ರಭಾರತಿ (1982), ಇಂಡೋ ಜರ್ಮನ್ ಚಿತ್ರೋತ್ಸವ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (ಮೊದಲ ನಾಲ್ಕು ವರ್ಷಗಳು) ಮುಂತಾದವುಗಳು ಎಣಿಕಗೂ ಮೀರಿ ಯಶಸ್ಸನ್ನು ಕಂಡಿವೆ.

ಭಾರತೀಯ ಚಿತ್ರರಂಗದ ದಿಗ್ಗಜರುಗಳಾದ ವಿ.ಶಾಂತಾರಾಂ, ಸತ್ಯಜಿತ್ ರಾಯ್, ಕಾರಂಜಿಯಾ, ಮೃಣಾಲ್ ಸೆನ್, ಕ್ರಿಸ್ಟೋಫರ್ ಜಾನುಸ್ಸಿ, ಶ್ಯಾಂ ಬೆನಗಲ್, ಕೆ.ಎ.ಅಬ್ಬಾಸ್, ಸುಮಿತ್ರಾ ಬಾವೆ, ಗೋವಿಂದ ನಿಹಲಾನಿ, ಶೇಖರ್ ದಾಸ್ ಹಾಗೂ ಇತರರು ಸುಚಿತ್ರ ಸಭಾಂಗಣದಲ್ಲಿ ನಡೆದ ವಿವಿಧ ಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದಾರೆ.

ವಿವಾದದ ಆರಂಭ

2015ರವರೆಗೆ ಸುಚಿತ್ರ ಟ್ರಸ್ಟ್‌‌ನ ಆಡಳಿತಾತ್ಮಕ ವೆಚ್ಚವನ್ನು ಸುಚಿತ್ರ ಫಿಲ್ಮ್‌‌ ಸೊಸೈಟಿಯೇ ಭಾಗಶಃ ಭರಿಸುತ್ತಿದ್ದುದರಿಂದ ಅಕಾಡೆಮಿಯು ಫಿಲ್ಮ್‌ ಸೊಸೈಟಿಗೆ ಚಿತ್ರಪ್ರದರ್ಶನಕ್ಕೆ ಸಭಾಂಗಣದ ಬಾಡಿಗೆ ಕೇಳುತ್ತಿರಲಿಲ್ಲ. ಸುಚಿತ್ರ ಅಕಾಡೆಮಿಯು 2015ರಲ್ಲಿ ಪುರವಂಕರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು, ಆ ಸಂಸ್ಥೆಯಿಂದ ಸಿಎಸ್‌ಆರ್‌ ನಿಧಿ ಮೂಲಕ ದೇಣಿಗೆಯನ್ನು ಪಡೆದು ಕಟ್ಟಡವನ್ನು ನವೀಕರಣ ಮಾಡಿತು. ಆಗ ಸುಚಿತ್ರ ಸಿನೆಮಾ ಮತ್ತು ಕಲ್ಚರಲ್‌‌ ಅಕಾಡೆಮಿ ಎಂದಿದ್ದ ಟ್ರಸ್ಟ್ ಹೆಸರನ್ನು ಪುರವಂಕರ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಎಂದು ಬದಲಾಯಿಸಲಾಯಿತು. ಆವರೆಗೆ ಟ್ರಸ್ಟ್‌‌ನ ಖಾಯಂ ಸದಸ್ಯತ್ವ ಇದ್ದ ಸುಚಿತ್ರ ಫಿಲ್ಮ್‌‌ ಸೊಸೈಟಿಯ ಅಧ್ಯಕ್ಷರನ್ನು ಆಹ್ವಾನಿತರು ಎಂದು ಬದಲಿಸಲಾಯಿತು. ಈ ವಿಷಯವು 2016ರ ಸಪ್ಟೆಂಬರ್ ತಿಂಗಳಲ್ಲಿ ಪ್ರಕಟವಾದ ಸುಚಿತ್ರ ಅಪ್ರಿಸಯೇಷನ್ ಮೂಲಕವೇ ಸದಸ್ಯರಿಗೆ ತಿಳಿದದ್ದು ಎನ್ನುತ್ತಾರೆ ಸೊಸೈಟಿಯ ಅಧ್ಯಕ್ಷರಾದ ಬಿ.ಸುರೇಶ್.

ಬಿ.ಸುರೇಶ್‌

ಇದನ್ನೂ ಓದಿರಿ: ಭ್ರಷ್ಟಾಚಾರ, ಅವ್ಯವಸ್ಥೆಗಳ ಗೂಡಾಗಿರುವ ಹಂಪಿ ವಿಶ್ವವಿದ್ಯಾಲಯ: ವಿದ್ಯಾರ್ಥಿ, ಪ್ರಾಧ್ಯಾಪಕರ ಆರೋಪ

ಈ ಬೆಳವಣಿಗೆಗಳನ್ನು ಸುಚಿತ್ರ ಫಿಲ್ಮ್‌‌ ಸೊಸೈಟಿಯು 2016ರಿಂದ ವಿರೋಧಿಸುತ್ತಾ ಬಂದಿದೆ. ತದನಂತರದ ಸುಚಿತ್ರ ಫಿಲ್ಮ್‌ ಸೊಸೈಟಿಯ ವಾರ್ಷಿಕ ಸಾಮಾನ್ಯ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರುಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಹೊಸ ಡೀಡ್‌ನಲ್ಲಿನ ಮಾರ್ಪಾಟುಗಳನ್ನು ಹಿಂದೆಗೆಯಬೇಕೆಂದು, ಹಳೆಯ ಟ್ರಸ್ಟ್ ಡೀಡ್ ಅನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಹಾಗೂ ಸುಚಿತ್ರ ಫಿಲ್ಮ್‌ ಸೊಸೈಟಿಯ ಎಲ್ಲಾ ಹಕ್ಕುಗಳು ಟ್ರಸ್ಟ್‌ನಲ್ಲಿ ಮರುಸ್ಥಾಪಿತವಾಗಬೇಕೆಂಬ ನಡಾವಳಿಗಳನ್ನು ಅನುಮೋದಿಸಿದೆ.

ನಂತರದ ಬೆಳವಣಿಗೆಯಲ್ಲಿ ಸುಚಿತ್ರ ಟ್ರಸ್ಟ್ ಸಭಾಂಗಣಗಳ ಬಾಡಿಗೆ ದರ ಹೆಚ್ಚಳ ಮಾಡಿದೆ, ಸುಚಿತ್ರ ಫಿಲ್ಮ್‌‌ ಸೊಸೈಟಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ಹಿಂಪಡೆದಿದೆ, ಇದರಿಂದಾಗಿ ಸಭಾಂಗಣದ ಬಾಡಿಗೆಯು ಮೂರು ಪಟ್ಟು ಹೆಚ್ಚಾಗುತ್ತದೆ. ಸುಚಿತ್ರ ಫಿಲ್ಮ್‌ ಸೊಸೈಟಿಯ ಕಚೇರಿ ನಡೆಸಲು ಪ್ರತಿ ತಿಂಗಳು 50,000 ರೂ.ಗಳನ್ನು ದೇಣಿಗೆಯಾಗಿ ನೀಡಬೇಕೆಂದು ತಿಳಿಸಲಾಯಿತು. ಸದಸ್ಯತ್ವದ ಹಣದಲ್ಲಿಯೇ ನಡೆಯಬೇಕಾದ ಫಿಲ್ಮ್‌‌ ಸೊಸೈಟಿಗೆ ಈ ದುಬಾರೀ ದರ ಆಘಾತ ತಂದಿತು. ಈ ಆದೇಶಗಳ ಬಗ್ಗೆ 2019 ಡಿಸೆಂಬರ್‌ನಲ್ಲಿ ನಡೆದ ಸಾಮಾನ್ಯ ಸರ್ವ ಸದಸ್ಯರ ಸಭೆಯಲ್ಲಿ ತೀವ್ರ ಚರ್ಚೆ ನಡೆದು ಈ ಕರಾಳ ಆದೇಶಗಳನ್ನು ಹಿಂತೆಗೆದುಕೊಳ್ಳಬೇಕೆಂದು ಸೂಚಿಸಲಾಯಿತು.

ಈ ಮೇಲ್ಕಂಡ ಬೆಳವಣಿಗೆಗಳಿಂದಾಗಿ ಕಳೆದ 9 ತಿಂಗಳಿನಿಂದ ಫಿಲ್ಮ್‌ ಸೊಸೈಟಿಗೆ ಸುಚಿತ್ರ ಪ್ರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲಾಗದಂತಾಗಿದೆ. 2021ರ ಮಾರ್ಚ್ 24ರವರೆಗೆ ಹಳೆಯ ದರದಲ್ಲಿ ಬಾಡಿಗೆಯನ್ನು ಕೊಟ್ಟಿದ್ದರೂ, ಪರಿಷ್ಕೃತ ದರದಂತೆ ಬಾಡಿಗೆಯನ್ನು ನೀಡಲು ಮತ್ತು ಸುಚಿತ್ರ ಕಚೇರಿಯ ಬಳಕೆಗಾಗಿ ತಿಂಗಳಿಗೆ 50,000 ರೂ. ನಂತೆ ಜನವರಿ 21ರಿಂದ, ಒಟ್ಟು 7 ಲಕ್ಷ ರೂಪಾಯಿಗಳನ್ನು ಕೊಡಲು ಪತ್ರ ಮುಖೇನ ಒತ್ತಾಯಿಸಲಾಗುತ್ತಿದೆ. (ಇದರಲ್ಲಿ ಫಿಲ್ಮ್‌ ಸೊಸೈಟಿಯು ಈ ಹಿಂದೆ ಕೋವಿಡ್ ಸಂಕಷ್ಟದ ಕಾಲದಲ್ಲಿ ನೀಡಿದ 2 ಲಕ್ಷ ರೂ.ಗಳ ಮುಂಗಡ ಹಣವನ್ನು ಸಹ ಮುರಿದುಕೊಳ್ಳಲಾಗಿದೆ.) ಜೊತೆಗೆ ಎರಡು ಲಾಯರ್ ನೋಟೀಸ್ ಸಹ ಸುಚಿತ್ರ ಫಿಲ್ಮ್‌ ಸೊಸೈಟಿಗೆ ಸುಚಿತ್ರ ಟ್ರಸ್ಟ್ ಕಳುಹಿಸಿದೆ ಎನ್ನುತ್ತಾರೆ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರು.

“ಸುಚಿತ್ರ ಫಿಲ್ಮ್‌ ಸೊಸೈಟಿಯನ್ನು ಟ್ರಸ್ಟ್‌ ಜಾಗದಲ್ಲಿ ನಡೆಸುತ್ತಿದ್ದೀರಿ. ತಿಂಗಳಿಗೆ 50,000 ರೂಪಾಯಿ ಕೊಡಬೇಕು ಎಂದು ಲಾಯರ್‌ ನೋಟೀಸ್ ಕಳುಹಿಸಲಾಗಿದೆ. ವರ್ಷಕ್ಕೆ 6,00,000 ರೂಪಾಯಿ ಬಾಡಿಗೆಯನ್ನು ಕಟ್ಟಬೇಕಾಗುತ್ತದೆ. ಸುಚಿತ್ರ ಫಿಲ್ಮ್‌ ಸೊಸೈಟಿಗೆ ವರ್ಷಕ್ಕೆ ಬರುವ ಆದಾಯವೇ ನಾಲ್ಕು ಲಕ್ಷ ಅಥವಾ ನಾಲ್ಕೂವರೆ ಲಕ್ಷ ರೂ. ದಾಟುವುದಿಲ್ಲ. ಬರುವ ಹಣವನ್ನೆಲ್ಲ ಬಾಡಿಗೆ ಕಟ್ಟಿದರೆ ಕಾರ್ಯಕ್ರಮಗಳನ್ನು ಮಾಡುವುದು ಹೇಗೆ?” ಎಂಬುದು ಬಿ.ಸುರೇಶ್‌ ಅವರ ಪ್ರಶ್ನೆ.

ಇದನ್ನೂ ಓದಿರಿ: ‘ಕನ್ನಡ ಮಾತಾಡಿ’ ಎಂದ ರೈತನಿಗೆ ಧಮಕಿ ಹಾಕಿದ ಹಿಂದಿ ಭಾಷಿಗ ಬ್ಯಾಂಕ್‌ ಸಿಬ್ಬಂದಿ!

“ಸೊಸೈಟಿಯ ಅಧ್ಯಕ್ಷರಾದವರು ಟ್ರಸ್ಟ್‌ನ ಕಾಯಂ ಸದಸ್ಯರಾಗಿರುತ್ತಿದ್ದರು. ಹೀಗಾಗಿ ಸೊಸೈಟಿಯ ಕಷ್ಟವನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿತ್ತು. ಬಾಡಿಗೆ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುತ್ತಿತ್ತು. ಕಾರ್ಪೊರೇಟ್ ಸಂಸ್ಥೆಯ ಹೆಸರೂ ಟ್ರಸ್ಟ್‌ಗೆ ಸೇರಿಸಿಕೊಂಡಿರುವುದರಿಂದ ಅನುಮಾನಗಳು ಹೆಚ್ಚಾಗಿವೆ. ಇಡೀ ಜಾಗವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಪ್ರಯತ್ನವಾ? ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲೇಬಾರದು ಎಂಬ ಉದ್ದೇಶವಾ ಎಂಬ ಅನುಮಾನಗಳು ವ್ಯಕ್ತವಾಗಿವೆ” ಎನ್ನುತ್ತಾರೆ ಸದಸ್ಯರು.

ಈ ಕಾರಣದಿಂದಾಗಿಯೇ 2021 ಏಪ್ರಿಲ್ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ 2021ರ ನವೆಂಬರ್‌ನ ಸಾಮಾನ್ಯ ಸರ್ವ ಸದಸ್ಯ ಸಭೆಯನ್ನು ಸುಚಿತ್ರ ಪ್ರಾಂಗಣದಿಂದ ಹೊರಗೆ ಮಾಡಬೇಕಾಯಿತು. ಈ ಹಿನ್ನೆಲೆಯಲ್ಲಿ 14 ನವೆಂಬರ್, 2021ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ಸುಚಿತ್ರ ಕಟ್ಟಡದ ಎದುರಿಗೆ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಲವು ಬೇಡಿಕೆಗಳನ್ನು ಟ್ರಸ್ಟ್‌ ಮುಂದೆ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರು ಇಟ್ಟಿದ್ದಾರೆ.

ಬೇಡಿಕೆಗಳು

1. ಫಿಲ್ಮ್‌ ಸೊಸೈಟಿಯ ಅಧ್ಯಕ್ಷರು ಟ್ರಸ್ಟ್ ಶಾಶ್ವತ ಸದಸ್ಯರಾಗಿಯೇ ಮುಂದುವರಿಯಬೇಕು.

2. ಸುಚಿತ್ರ ಪ್ರಾಂಗಣದಲ್ಲಿ ನಡೆಸಲಾಗುವ ಚಟುವಟಿಕೆಗಳಲ್ಲಿ ಫಿಲ್ಮ್‌‌ ಸೊಸೈಟಿಗೆ ಪ್ರಾತಿನಿಧ್ಯ ಇರಬೇಕು.

3. ಸುಚಿತ್ರ ಫಿಲ್ಮ್‌ ಸೊಸೈಟಿಯ ಕಾರ್ಯಕಾರಿ ಸದಸ್ಯರುಗಳೊಂದಿಗೆ ಸೇರಿ ಸಭೆ ನಡೆಸಿ ಬಾಡಿಗೆ ದರ ವಿಧಿಸುವುದರ ಬಗ್ಗೆ ಚರ್ಚೆ ನಡೆಸಬೇಕು.

4. ಟ್ರಸ್ಟ್‌‌ ಹುಟ್ಟಿಗೆ ಕಾರಣವಾದ ಸುಚಿತ್ರ ಫಿಲ್ಮ್‌‌ ಸೊಸೈಟಿಯು ಯಾವುದೇ ಅಡೆ ತಡೆ ಇಲ್ಲದೇ ಸುಚಿತ್ರ ಪ್ರಾಂಗಣದಲ್ಲಿ ಚಟುವಟಿಕೆಗಳನ್ನು ನಡೆಸುವಂತಾಗಬೇಕು.

“ಈ ಮೇಲ್ಕಂಡ ಬೇಡಿಕೆಗಳು ಈಡೇರಿದರೆ ಸುಚಿತ್ರ ಫಿಲ್ಮ್‌‌ ಸೊಸೈಟಿಯು ತನ್ನ ಸುವರ್ಣ ಮಹೋತ್ಸವವನ್ನು ಘನತೆಯಿಂದ ಆಚರಿಸಬಹುದು. ಸೊಸೈಟಿಯ ಮಗು ಟ್ರಸ್ಟ್‌, ಆದರೆ ತನ್ನ ಪೋಷಕರನ್ನೇ ಹೊರ ಹಾಕುವ ಕೆಲಸವನ್ನು ಟ್ರಸ್ಟ್‌ ಮಾಡುತ್ತಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಸಾರ್ವಜನಿಕರೆಲ್ಲ ಸೇರಿ ಮಾಡಬೇಕಿದೆ” ಎನ್ನುತ್ತಾರೆ ಫಿಲ್ಮ್‌ ಸೊಸೈಟಿ ಸದಸ್ಯರು.


ಇದನ್ನೂ ಓದಿರಿ: ನನ್ನ ಹೇಳಿಕೆ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ: ಕಂಗನಾ ರಣಾವತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...