HomeಮುಖಪುಟCAA: ಕಾನೂನು ಸವಾಲು ಏನಾಯ್ತು?

CAA: ಕಾನೂನು ಸವಾಲು ಏನಾಯ್ತು?

- Advertisement -
- Advertisement -

ಸಂಸತ್ತು ಪೌರತ್ವ (ತಿದ್ದುಪಡಿ) ಕಾಯಿದೆ-2019ನ್ನು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ, ನಿನ್ನೆ ದೇಶದಲ್ಲಿ ಸಿಎಎ ಜಾರಿಗೊಳಿಸಿ ಕೇಂದ್ರ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ. 2019-20ರಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಸಿಎಎಗೆ ಕಾನೂನಿನ ಮೂಲಕ ಸವಾಲನ್ನು ಹಾಕಿ 200ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಜೀವಂತವಾಗಿರುವಾಗ ಲೋಕಸಭೆ ಚುನಾವಣೆ ಹಿನ್ನೆಲೆ ಸಿಎಎಯನ್ನು ತುರ್ತಾಗಿ ಜಾರಿಗೆ ತರಲಾಗಿದೆ.

ಪೌರತ್ವ (ತಿದ್ದುಪಡಿ) ಕಾಯಿದೆ-2019

ಡಿಸೆಂಬರ್ 31, 2014ರ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಿದ ಮುಸ್ಲಿಮರನ್ನು ಹೊರತುಪಡಿಸಿ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವವನ್ನು ನೀಡುವ ನಿಬಂಧನೆಯನ್ನು ಸೇರಿಸಲು ಡಿಸೆಂಬರ್ 2019 ರಲ್ಲಿ ಸಂಸತ್ತು ಪೌರತ್ವ ಕಾಯ್ದೆ-1955ಕ್ಕೆ ತಿದ್ದುಪಡಿಗೆ ಬಿಲ್‌ನ್ನು ಅಂಗೀಕರಿಸಿತ್ತು.

ಭಾರತದ ಕೆಲವು ಪ್ರಾಂತ್ಯಗಳಿಗೆ ಈ ತಿದ್ದುಪಡಿಯಿಂದ ವಿನಾಯ್ತಿ ನೀಡಲಾಗಿದೆ. 2019ರ ಮಸೂದೆಯಲ್ಲೇ ಅದನ್ನು ಉಲ್ಲೇಖಿಸಲಾಗಿತ್ತು. ಸಂವಿಧಾನದ 6ನೇ ಶೆಡ್ಯೂಲ್ ನಲ್ಲಿರುವ ಮೇಘಾಲಯ, ಮಿಜೋರಂ, ಅಸ್ಸಾಂ, ತ್ರಿಪುರಾದಲ್ಲಿ ವಾಸಿಸುತ್ತಿರುವ ಜನರಿಗೆ ಈ ನಿಯಮ ಅನ್ವಯವಾಗುವುದಿಲ್ಲ. 1883ರ ಬಾಂಗ್ಲಾ ಪೂರ್ವ ಗಡಿ ನಿಯಂತ್ರಣಾ ನಿಯಮಗಳಿಗೆ ಅನುಗುಣವಾಗಿ ರೂಪಿಸಲಾಗಿರುವ ಆಂತರಿಕ ಗಡಿ ರೇಖೆಯೊಳಗೆ ಜೀವಿಸುತ್ತಿರುವ ನಾಗರಿಕರಿಗೆ ಇದು ಅನ್ವಯವಾಗುವುದಿಲ್ಲ.

ಈ ಕಾಯ್ದೆ ವಿರುದ್ಧ 2020ರಲ್ಲಿ ವ್ಯಾಪಕವಾಗಿ ಪ್ರತಿಭಟನೆಗಳು ನಡೆದಿದೆ. ವಿಶೇಷವಾಗಿ ಅಸ್ಸಾಂನಲ್ಲಿ ಪ್ರತಿಭಟನೆ ನಡೆದಿದೆ. ಆ ಬಳಿಕ ಸರಕಾರ ಕಾಯ್ದೆಯ ಜಾರಿಯಿಂದ ಹಿಂದಕ್ಕೆ ಸರಿದಿತ್ತು. ಮೇ 28, 2021 ರಂದು, ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆ-1955ರ ಸೆಕ್ಷನ್  16ರ ಅಡಿಯಲ್ಲಿ ಆದೇಶವನ್ನು ಹೊರಡಿಸಿ, ಹೆಚ್ಚಿನ ವಲಸಿಗರನ್ನು ಹೊಂದಿರುವ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 2019ರ ತಿದ್ದುಪಡಿಯಲ್ಲಿ ಗುರುತಿಸಲಾದ ಗುಂಪುಗಳಿಂದ ಪೌರತ್ವ ಅರ್ಜಿಗಳನ್ನು ಸ್ವೀಕರಿಸುವ ಅಧಿಕಾರವನ್ನು ನೀಡಿದೆ.

ಸೋಮವಾರ ಇ-ಗೆಜೆಟ್‌ನಲ್ಲಿ ಸೂಚಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ನಿಯಮಗಳು ಅರ್ಹ ವ್ಯಕ್ತಿಗಳಿಗೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ವಿಧಾನಗಳು ಮತ್ತು ಕಾರ್ಯವಿಧಾನಗಳನ್ನು ಸೂಚಿಸುತ್ತವೆ. ಪೌರತ್ವವನ್ನು ಪಡೆಯಲು ಯಾವ ದಾಖಲೆಗಳು ಮತ್ತು ದಾಖಲೆಗಳು ಅಗತ್ಯವಿದೆ ಎಂಬುದನ್ನು ನಿಯಮಗಳು ಸ್ಪಷ್ಟಪಡಿಸುತ್ತದೆ. ಗೃಹ ವ್ಯವಹಾರಗಳ ಸಚಿವಾಲಯ (MHA) ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ವ್ಯಕ್ತಿಗಳಿಗಾಗಿ ವೆಬ್ ಪೋರ್ಟಲ್ (https://indiancitizenshiponline.nic.in) ನ್ನು ಪ್ರಾರಂಭಿಸಿದೆ. ಪೋರ್ಟಲ್ ಮೂಲಕ ನಿರ್ದಿಷ್ಟವಾಗಿ ಆರು ಅಲ್ಪಸಂಖ್ಯಾತ ಸಮುದಾಯಗಳು -ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕಾನೂನು ಸವಾಲು

ಈ ತಿದ್ದುಪಡಿಯನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 2020ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಿಎಎಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ 200ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ಅಸಾದುದ್ದೀನ್ ಓವೈಸಿ, ಜೈರಾಮ್ ರಮೇಶ್, ರಮೇಶ್ ಚೆನ್ನಿತಲಾ ಮತ್ತು ಮಹುವಾ ಮೊಯಿತ್ರಾ ಮತ್ತು ರಾಜಕೀಯ ಸಂಘಟನೆಗಳಾದ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ, ಡಿಎಂಕೆ, ಅಸೋಮ್ ಗಣ ಪರಿಷತ್ (ಎಜಿಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಅಸ್ಸಾಂ), ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟಗಳ (ಅಸ್ಸಾಂ) ಅರ್ಜಿಗಳು ಕೂಡ ಸೇರಿದೆ. ಅಕ್ಟೋಬರ್ 2022ರಲ್ಲಿ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಸಿಜೆಐ ಲಲಿತ್ ಅವರ ನಿವೃತ್ತಿಯ ನಂತರ ಡಿಸೆಂಬರ್ 2022ರಲ್ಲಿ ಅಂತಿಮ ವಿಚಾರಣೆಗಳು ಪ್ರಾರಂಭವಾಗಲಿದೆ ಎಂದು ಆದೇಶವನ್ನು ನೀಡಿತ್ತು. ಆದರೆ, ಅಂದಿನಿಂದ ಈ ಪ್ರಕರಣದ ವಿಚಾರಣೆ ನಡೆದಿಲ್ಲ. ಸುಪ್ರೀಂಕೋರ್ಟ್ ವೆಬ್‌ಸೈಟ್ ಪ್ರಕಾರ, ಪ್ರಸ್ತುತ ಪ್ರಕರಣವನ್ನು ನ್ಯಾಯಮೂರ್ತಿ ಪಂಕಜ್ ಮಿಥಾಲ್ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಗಿದೆ.

ಸಮಾನತೆಯ ಹಕ್ಕು

ಸಿಎಎಗೆ ವಿರುದ್ಧದ ಅರ್ಜಿಯಲ್ಲಿ ಸಂವಿಧಾನದ 14 ನೇ ವಿಧಿಯನ್ನು ನೂತನ ಪೌರತ್ವ ತಿದ್ದುಪಡಿ ಕಾಯ್ದೆಯು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ. ರಾಜ್ಯವು ಯಾವುದೇ ವ್ಯಕ್ತಿಗೆ ಸಮಾನತೆಯನ್ನು ನಿರಾಕರಿಸುವಂತಿಲ್ಲ, ಭಾರತದ ಕಾನೂನಿನ ಮುಂದೆ ಎಲ್ಲರೂ ಸಮಾನರು, ಧರ್ಮವನ್ನು ಅರ್ಹತೆಯನ್ನಾಗಿ ಬಳಸುವುದು ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್‌ ಗಮನಕ್ಕೆ ತರಲಾಗಿದೆ. ಧರ್ಮಾಧರಿತವಾಗಿ ಪೌರತ್ವವನ್ನು ನೀಡುವ ಮೂಲಕ ರಾಜ್ಯವು ಮುಸ್ಲಿಮರ ವಿರುದ್ಧ ತಾರತಮ್ಯವನ್ನು ಮಾಡುತ್ತಿದೆಯೇ ಎಂಬುದನ್ನು ನ್ಯಾಯಾಲಯವು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ಇಸ್ಲಾಮಿಕ್ ರಾಷ್ಟ್ರಗಳಾಗಿರುವ ಕಾರಣದಿಂದ ಮುಸ್ಲಿಮರನ್ನು ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರ ಗುಂಪಿನಿಂದ ಹೊರಗಿಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಮುಸ್ಲಿಮರನ್ನು ಹೊರಗಿಡಲು ಈ ಮೂರು ದೇಶಗಳನ್ನು ಮಾತ್ರ ಮೂಲಭೂತವಾಗಿ ಆಯ್ಕೆ ಮಾಡಲಾಗಿದೆಯೇ ಎಂಬುವುದಕ್ಕೆ ಉತ್ತರಿಸಿಲ್ಲ. ಏಕೆಂದರೆ ಶ್ರೀಲಂಕಾದಲ್ಲಿ ತಮಿಳು ಹಿಂದೂಗಳು, ಮ್ಯಾನ್ಮಾರ್‌ನ ರೋಹಿಂಗ್ಯಾಗಳು ಅಥವಾ ಅಲ್ಪಸಂಖ್ಯಾತ ಮುಸ್ಲಿಂ ಪಂಗಡಗಳಾದ ಅಹ್ಮದೀಯಸ್ ಮತ್ತು ಹಜಾರಾಗಳು ಸಹ ಈ ದೇಶಗಳಲ್ಲಿ ಕಿರುಕುಳಕ್ಕೊಳಗಾಗುತ್ತಿದ್ದಾರೆ ಆದರೆ ಅವರನ್ನು ಪೌರತ್ವಕ್ಕೆ ಸೇರ್ಪಡೆಗೊಳಿಸಲಾಗಿಲ್ಲ.

ಇದನ್ನು ಓದಿ: ಸಿಎಎ: ಪೌರತ್ವ ಕಾಯ್ದೆ ಏನು ಹೇಳುತ್ತದೆ?

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...