ಇಂದಿನ ಕ್ರೂರ ಪರಿಸ್ಥಿತಿಯ ಎದುರು ಇಂದಿರಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಪಿಕ್ನಿಕ್‌ಗೆ ಸಮ…!

ಜಾಣ ಮೌನಕ್ಕಿದು ಸಮಯವಲ್ಲ. ದಮನಿತರು ದನಿಯೆತ್ತದಿರುವುದು ದಮನಕಾರಿಯ ಧೈರ್ಯವನ್ನು ಹೆಚ್ಚಿಸುತ್ತದೆ. ಮೌನ ಸಲ್ಲದು ಎಂಬ ಮಾತು ಎಷ್ಟು ಮುಖ್ಯವೋ, ಹಿಂಸೆ ಸರ್ವಥಾ ಸಲ್ಲದು ಎಂಬ ವಿವೇಕವೂ ಅಷ್ಟೇ ಮುಖ್ಯ. ಮಾತಾಡದೆ ಹೋಗಿದ್ದರೆ ಇಂದಿರಾ ಹೇರಿದ್ದ ತುರ್ತುಪರಿಸ್ಥಿತಿ ಅಷ್ಟು ಲಗುಬಗೆಯಲ್ಲಿ ತೊಲಗುತ್ತಿರಲಿಲ್ಲ. ನೆನಪಿಡೋಣ, ಈಗ ದೇಶದ ಕೈಕಾಲುಗಳ ಕಟ್ಟಿ ಹಾಕಿ ಬಾಯಿಗೆ ಬೀಗ ಜಡಿಯಲು ಮುಂದಾಗಿರುವ ಪ್ರಭುಗಳೂ ಆಗ ತುರ್ತುಪರಿಸ್ಥಿತಿ ವಿರುದ್ಧ ಮಾತಾಡಿದ್ದರು… ಸರ್ವಾಧಿಕಾರದ ವಿರುದ್ಧ ಪ್ರಜೆಗಳ ಎಚ್ಚರಿಸಲು ‘ಕಹಳೆ’, ’ದುಂದುಭಿ’ ಮುಂತಾದ ಭೂಗತ ಪತ್ರಿಕೆಗಳನ್ನು ಹೊರತಂದಿದ್ದರು. ಇತಿಹಾಸದ ಈ ಭಾಗವನ್ನು ಮರೆತಂತೆ ನಟಿಸತೊಡಗಿದ್ದಾರೆ ಅವರು.

ನಿರಂತರ ಎಚ್ಚರವೇ ಜೀವಂತ ಜನತಂತ್ರಕ್ಕೆ ನಾವು ತೆರಬೇಕಾದ ಬೆಲೆ. ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿದೆ. ವಿವೇಕದ ಮಾತುಗಳು ಹುಸಿಯಾಗುವುದಿಲ್ಲ. ಇತಿಹಾಸ ದಿಟವಾಗಿಯೂ ಮರುಕಳಿಸಿದೆ. ಆದರೆ ನಾಜೀ ಜರ್ಮನಿಯ ಇತಿಹಾಸ ಭಾರತದ ಭೂಪ್ರದೇಶದಲ್ಲಿ ಮರುಕಳಿಸಿದೆ. ಇದರ ಮುಂದೆ ಇಂದಿರಾ ಗಾಂಧೀ ಅವರು ಹೇರಿದ್ದ ಕರಾಳ ತುರ್ತುಪರಿಸ್ಥಿತಿ ಕೇವಲ ವನವಿಹಾರ ಸಮಾನ. ಡಿಸೆಂಬರ್ 21-22ರಂದು ಮೈಸೂರಿನಲ್ಲಿ ಮಾಧ್ಯಮ ಮತ್ತು ಜನತಂತ್ರ ಕುರಿತ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ಮಹಾತ್ಮಾ ಗಾಂಧೀಯವರ ಮೊಮ್ಮಗ ರಾಜಮೋಹನಗಾಂಧೀ ಅವರು ಬಳಸಿದ ಪದವಿದು – ‘ವನವಿಹಾರ’. Emergency was just a picnic before what is happening to the Country now ಎಂಬುದಾಗಿ ಅವರು ಉದ್ಗರಿಸಿದ್ದುಂಟು.

ಸತ್ತು ಹೋಗಿದೆಯೆಂದೇ ಭಾವಿಸಲಾಗಿದ್ದ ವಿದ್ಯಾರ್ಥಿ ಚಳವಳಿ ಗರಿಕೆಯಂತೆ ಮೊಳೆತು ಚಿಗುರಿದೆ. ದೇಶದ ಮೂಲೆ ಮೂಲೆಗಳಲ್ಲಿ ವ್ಯಾಪಿಸಿ ಹಸಿರೊಡೆದಿದೆ. ಜೆ.ಪಿ.ಆಂದೋಲನದಲ್ಲಿ ಬೆರೆತು ಭುಗಿಲೆದ್ದಿದ್ದ ಅಂದಿನ ಆ ಶಕ್ತಿಶಾಲಿ ವಿದ್ಯಾರ್ಥಿ ಚಳವಳಿಯಲ್ಲಿ ಇಂದಿನ ಪ್ರಭುಗಳಲ್ಲಿ ಅನೇಕರೂ ಮತ್ತು ಪರಿವಾರದ ಸಂಘಟನೆಗಳೂ ಭಾಗವಹಿಸಿದ್ದವು. ದೇಶವನ್ನು ದಾಸ್ಯದ ನೊಗದಿಂದ ಬಿಡಿಸಬೇಕೆಂದು ಘರ್ಜಿಸಿದ್ದವು. ಪ್ರಜೆಗಳು ಬಂದರು ಸಿಂಹಾಸನ ಖಾಲಿ ಮಾಡಿರಿ ಎಂಬ ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಕ್ರಾಂತಿಗೀತೆಗೆ ದನಿಗೂಡಿಸಿ ಹಾಡಿದ್ದವು. ಇಂದು ಆ ಅವೇ ಶಕ್ತಿಗಳು-ಸಂಘಟನೆಗಳು ಸಿಂಹಾಸನ ಏರಿ ಕುಳಿತಿವೆ. ಪ್ರಜೆಗಳನ್ನು ಧಿಕ್ಕರಿಸಿವೆ. ದೇಶದ ಕೊರಳು ಮತ್ತೊಂದು ಬಗೆಯ ದಾಸ್ಯದ ನೊಗಕ್ಕೆ ಹೂಡಲ್ಪಡುತ್ತಿದೆ. ವಿದ್ಯಾರ್ಥಿ ಚಳವಳಿಗೆ ದೇಶದ್ರೋಹದ ಹೆಸರಿಡಲಾಗುತ್ತಿದೆ. ಸುಳ್ಳು ಸುದ್ದಿಗಳು ಮತ್ತು ಮಿಥ್ಯಾಪ್ರಚಾರದ ವಾಟ್ಸ್ಯಾಪ್ ಯೂನಿವರ್ಸಿಟಿಗಳನ್ನು ಕಟ್ಟಿ ನಿಲ್ಲಿಸಲಾಗುತ್ತಿದೆ. ಅರಿವಿನ ಮತ್ತು ಸಮಾನತೆಯ ಬೆಳಕನ್ನು ಹಂಚುವ ನಿಜದ ವಿಶ್ವವಿದ್ಯಾಲಯಗಳನ್ನು ಕೆಡವುವ ಕಾರಸ್ಥಾನ ಜರುಗಿದೆ.

ದಮನದ ವಿರುದ್ಧ ಅನ್ಯಾಯಕ್ಕೆ ಎದುರಾಗಿ ವಿದ್ಯಾರ್ಥಿಶಕ್ತಿ ತೋರತೊಡಗಿರುವ ಸಾತ್ವಿಕ ಕೆಚ್ಚು ವಿವೇಕದ ದೊಂದಿಯನ್ನು ಸಮಾಜಶಕ್ತಿ ಎತ್ತಿ ಹಿಡಿಯಬೇಕಿದೆ. ತಡಮಾಡಿದರೆ ಸರದಿಯ ಪ್ರಕಾರ ಕಾಲಬುಡಕ್ಕೆ ಬಂದೀತು… ಬಲು ತುಟ್ಟಿಯಾಗಿ ಪರಿಣಮೀಸೀತು… ಮತ್ತು…ದುರಿತ ಕಾಲದ ಬಹುಜನ ಭಾರತ ಓದಿಕೊಳ್ಳಬೇಕಿರುವ ಕೆಲ ಕವಿತೆಗಳು ಇಲ್ಲಿವೆ…

ಆಡು, ಮಾತಾಡು
ತುಟಿಗಳಿಗೆ ಅಂಕೆ ಇಲ್ಲ
ಆಡು, ಮಾತಾಡು
ನಾಲಗೆ ಇನ್ನೂ ನಿನ್ನದೇ
ಆಡು, ಮಾತಾಡು,
ದೇಹ ನಿನ್ನ ಸ್ವಂತದ್ದು
ಆಡು, ಮಾತಾಡು,
ಜೀವ ಹಾರಿ ಹೋಗಿಲ್ಲ
ಹಾಡು ಮಾತಾಡು

ನೋಡು, ಕಮ್ಮಾರನ ಕುಲುಮೆಯಲಿ
ಭುಗಿಲೆದ್ದಿದೆ ಜ್ವಾಲೆ, ಕೆಂಪೇರಿದೆ ಲೋಹ,
ಸಡಿಲಾಗುತ್ತಿದೆ ಬೀಗಗಳ ಬಾಯಿ
ಮುರಿಯುತ್ತಿದೆ ಸರಪಳಿಗಳ ಕೀಲು.
ದೇಹ ನಾಲಗೆ ಸತ್ತು ಹೋಗುವ ಮುಂಚಿನ
ಈ ಎರಡು ಗಳಿಗೆಯೇ ಸಾಕು
ಆಡು, ಮಾತಾಡು

ಸತ್ಯ ಇನ್ನೂ ಉಸಿರಾಡುತಿದೆ
ಆಡು, ಮಾತಾಡು
ಹೇಳಲೇಬೇಕಾದ್ದು, ಹೇಳಿಯೇಬಿಡು
ಆಡು ಮಾತಾಡು.
(ಫೈಜ್ ಅಹ್ಮದ್ ಫೈಜ್- ಅನುವಾದ- ಬಾಗೇಶ್ರೀ)

ಗಂಟೆ
ಫೋನಿನ ಗಂಟೆ ಮೊಳಗಿತು
ನಾನೆಂದೆ- ನಾನು ಇಲ್ಲ ಕಣ್ರೀ
ಮತ್ತು ಮಗ್ಗುಲು ಬದಲಿಸಿ ನಿದ್ದೆ ಹೋದೆ.

ಬಾಗಿಲ ಗಂಟೆ ಮೊಳಗಿತು
ನಾನೆಂದೆ- ನಾನು ಇಲ್ಲ ಕಣ್ರೀ
ಮತ್ತು ಮಗ್ಗುಲು ಬದಲಿಸಿ ನಿದ್ದೆ ಹೋದೆ.

ಅಲಾರಂ ಗಂಟೆ ಮೊಳಗಿತು
ನಾನೆಂದೆ- ನಾನು ಇಲ್ಲ ಕಣ್ರೀ
ಮತ್ತು ಮಗ್ಗುಲು ಬದಲಿಸಿ ನಿದ್ದೆ ಹೋದೆ.

ಒಂದು ದಿನ
ಮರಣದ ಗಂಟೆ ಮೊಳಗಿತು…
ಗಡಿಬಿಡಿ ಮಾಡಿ ಎದ್ದು ಕುಳಿತೆ
ನಾನಿರುವೆ.. ನಾನಿರುವೆ.. ನಾನಿರುವೆ..
ಮರಣ ಹೇಳಿತು-
ನಿದ್ದೆ ಹೋಗಯ್ಯಾ ಈಗ ಮಗ್ಗಲು ಬದಲಿಸಿ
(ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಕುಂವರ್ ನಾರಾಯಣ್)

ಅವರು ಮೊದಲು ಬಂದದ್ದು..
ಅವರು ಮೊದಲು ಬಂದದ್ದು ಕಮ್ಯೂನಿಸ್ಟರ ಎತ್ತಿ ಹಾಕಿಕೊಳ್ಳಲು
ಮತ್ತು ನಾನು ತುಟಿ ತೆರೆಯಲಿಲ್ಲ
ಯಾಕೆಂದ್ರೆ ನಾನು ಕಮ್ಯೂನಿಸ್ಟ್ ಆಗಿರಲಿಲ್ಲ

ನಂತರ ಅವರು ಬಂದರು ಸಮಾಜವಾದಿಗಳ ಎತ್ತಿ ಹಾಕಿಕೊಂಡು ಹೋಗಲು
ಮತ್ತು ನಾನು ಪ್ರತಿಭಟಿಸಲಿಲ್ಲ
ಯಾಕೆಂದ್ರೆ ನಾನು ಸಮಾಜವಾದಿ ಆಗಿರಲಿಲ್ಲ,

ಆನಂತರ ಅವರು ಬಂದರು ಕಾರ್ಮಿಕ ನಾಯಕರನ್ನು ಹಿಡಿದೊಯ್ಯಲು
ಮತ್ತು ನಾನು ಬಾಯಿ ಹೊಲಿದುಕೊಂಡಿದ್ದೆ
ಯಾಕೆಂದ್ರೆ ನಾನು ಕಾರ್ಮಿಕ ನಾಯಕನಾಗಿರಲಿಲ್ಲ

ತದನಂತರವೂ ಅವರು ಬಂದರು ಯಹೂದಿಗಳನ್ನು ಎಳೆದೊಯ್ಯಲು
ಮತ್ತು ಆಗಲೂ ನಾನು ದನಿ ಎತ್ತಲಿಲ್ಲ
ಯಾಕೆಂದ್ರೆ ನಾನು ಯಹೂದಿಯೇನೂ ಆಗಿರಲಿಲ್ಲ

ತರುವಾಯ ಅವರು ಬಂದೇ ಬಂದರು…
ನನ್ನನ್ನು ಕೈದು ಮಾಡಲು
ಮತ್ತು ಆಗ ಯಾರೂ ಉಳಿದಿರಲಿಲ್ಲ
ಕೊರಳೆತ್ತಲು, ನನ್ನ ಸಲುವಾಗಿ.
(- ಮಾರ್ಟಿನ್ ನಿಮೋಲರ್, ಹಿಟ್ಲರನ ಅಭಿಮಾನಿಯಾಗಿದ್ದು ವಿರೋಧಿಯಾಗಿ ಪರಿವರ್ತನೆಗೊಂಡ ಪಾದ್ರಿ )

ರೊಟ್ಟಿ ಮತ್ತು ಸಂಸತ್ತು
ಒಬ್ಬ ಮನುಷ್ಯ
ರೊಟ್ಟಿ ಬೇಯಿಸ್ತಾನೆ,
ಒಬ್ಬ ಮನುಷ್ಯ ರೊಟ್ಟಿ ತಿಂತಾನೆ
ಮೂರನೆಯ ಮನುಷ್ಯನೂ ಒಬ್ಬನಿದ್ದಾನೆ
ಅವನು ರೊಟ್ಟಿಯನ್ನು ಬೇಯಿಸುವುದೂ ಇಲ್ಲ ತಿನ್ನುವುದೂ ಇಲ್ಲ
ಅವನು ಕೇವಲ ರೊಟ್ಟಿಯೊಂದಿಗೆ ಆಟ ಆಡ್ತಾನೆ
ಯಾರು ಈ ಮೂರನೆಯ ಮನುಷ್ಯ?
ನನ್ನ ದೇಶದ ಸಂಸದ ಮೌನ ಧರಿಸಿದ್ದಾನೆ.
(-ಧೂಮಿಲ್)

ಅವರು ಭಯಪಡುತ್ತಾರೆ
ಅವರು ಭಯಪಡುತ್ತಾರೆ
ಯಾವುದರ ಬಗ್ಗೆ ಅವರಿಗೆ ಭಯ ಅವರಿಗೆ
ಧನ ದೌಲತ್ತು
ಸಿಡುಗುಂಡು, ಸುಡುಮದ್ದು, ಪೊಲೀಸ್ ಫೌಜು ಸರ್ವಸ್ವ ಇದ್ದಾಗ್ಯೂ
ಅವರು ಭಯ ಪಡುತ್ತಾರೆ
ಯಾಕೆಂದ್ರೆ ಒಂದಲ್ಲ ಒಂದು ದಿನ
ಹತಾರುಗಳಿರದ ಬರಿಗೈಗಳ ದೀನ ದರಿದ್ರ ಜನ
ಅವರನ್ನು ಕಂಡು
ಭಯಪಡುವುದ
ನಿಲ್ಲಿಸಿಬಿಡುತ್ತಾರೆ
(ಗೋರಖನಾಥ ಪಾಂಡೆ)

ಮುರಿದು ಸುರಿಯಲಿ ಸಾವಿರ ಸಿಡಿಲುಗಳು

ಬಡಿದು ಬೀಸಲಿ ಲಕ್ಷ ಬಿರುಗಾಳಿಗಳು

ಅರಳಿಯೇ ಅರಳಲಿವೆ ಅರಳಬೇಕಿರುವ ಹೂವುಗಳು

(ಸಾಹಿರ್ ಲೂಧಿಯಾನ್ವಿ)

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here