Homeಅಂಕಣಗಳುಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

- Advertisement -
- Advertisement -

ಹಸಿರುಮಯವಾಗಿದ್ದ ಮಂಡ್ಯವನ್ನು ಕೇಸರಿಮಯವಾಗಿಸಲು ಪಣತೊಟ್ಟ ಬಿಜೆಪಿಗಳು ಪ್ರಧಾನಿಯವರ ರೋಡ್ ಶೋ ಏರ್ಪಡಿಸಿದ್ದ ಫಲವಾಗಿ ಮೋದಿ ಕೈ ಬೀಸಲು ಅಡ್ಡಿಯಾಗಿದ್ದ ಮರದ ರೆಂಬೆಕೊಂಬೆಗಳನ್ನೆಲ್ಲಾ ಕಡಿದು, ರಸ್ತೆಯ ಮಾರ್ಗವನ್ನು ಬದಲಿಸಿ ಅಂತೂ ಮಂಡ್ಯಕ್ಕೆ ಮೋದಿ ಕರೆತಂದು ಫೈಟರ್ ರವಿಯನ್ನ ಪರಿಚಯಿಸಿದವಲ್ಲಾ. ಮಂಡ್ಯ ಧೀಮಂತ ರಾಜಕಾರಣಿಗಳಿಗೆ ಹೆಸರಾದ ಜಿಲ್ಲೆ. ಅಲ್ಲಿನ ರಾಜಕಾರಣದ ಇತಿಹಾಸ ನೋಡಿದರೆ ಇಲ್ಲಿನ ಪ್ರಾಮಾಣಿಕ ಮತದಾರರ ಮೆಚ್ಚಿನ ಜನ ನಾಯಕರ ಇತಿಹಾಸವೇ ಇದೆ. ಅವರ ಸಂತತಿಗಳು ಕೂಡ ಇನ್ನೂ ಇವೆ. ಅವರನ್ನೆಲ್ಲಾ ಬಿಟ್ಟು ಈ ಬಿಜೆಪಿಗಳು ಫೈಟರ್ ರವಿ ಎಂಬ ವ್ಯಕ್ತಿಯನ್ನು ಪರಿಚಯಿಸಿದಾಗ ಮೋದಿಯವರಿಗೆ ಅಮಿತ್‌ಶಾ ದರ್ಶನ ಮಾಡಿದಂತಾಗಿ ಕೈ ಮುಗಿದು ಮುಗುಳುನಕ್ಕಿದ್ದಾರಲ್ಲಾ. ಇದು ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ. ಬೆಂಗಳೂರು ಠಾಣೆಗಳಲ್ಲಿ ಕೇಸುಗಳಿರುವ ವ್ಯಕ್ತಿಯೊಬ್ಬ ಜಾದೂ ಮಾಡಿದಂತೆ ಧನಕನಕ ಸಂಗ್ರಹಿಸಿಕೊಂಡು ಒಂದು ಓಟಿಗೆ ಇಂತಿಷ್ಟು ಸಾವಿರ ಕೊಡುತ್ತೇನೆಂದು ಘೋಷಣೆ ಮಾಡಿಕೊಂಡು ತಿರುಗುತ್ತಿರುವಾಗ, ಆತ ಬಿಜೆಪಿಗಳಿಗೆ ಗಣ್ಯನಾಗಿ ಕಂಡಿದ್ದೂ ಅಲ್ಲದೆ, ಆತ ಪ್ರಧಾನ ಮಂತ್ರಿ ಭೇಟಿಮಾಡಲೇಬೇಕಾದ ವ್ಯಕ್ತಿಯೆಂದು ಭಾವಿಸಿದ ಈ ಬಿಜೆಪಿಗಳು ಮುಟ್ಟಿರುವ ಪಾತಾಳ ಎದ್ದು ಬರಲಾರದಂತಹುದಂತಲ್ಲಾ, ಥೂತ್ತೇರಿ.

*****

ಮಂಡ್ಯದಲ್ಲಿ ಫೈಟರ್ ರವಿಯ ಜೊತೆಗೆ ಮತ್ತೊಬ್ಬ ಧೀಮಂತ ಮಹಿಳೆ ಸುಮಲತಾ ತಾನು ಈವರೆಗೆ ಹಸುವಿನಂತಿದ್ದೆ, ನನಗೆ ಆನೆ ಬಲ ಬರಬೇಕಾದರೆ ಬಿಜೆಪಿಗೆ ಸೇರಲೇಬೇಕೆಂದು ಹಠತೊಟ್ಟು ಮೋದಿ ಸಮ್ಮುಖದಲ್ಲೇ ಬಿಜೆಪಿಗಿ ನುಗ್ಗಿದ್ದಾರಲ್ಲಾ. ಸುಮಲತಾ ಚುನಾವಣೆಗೆ ನಿಂತಾಗ ನಾಗಮಂಗಲದ ಮಾಜಿ ಶಾಸಕ ಮತ್ತು ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ತನ್ನದೇ ಶೈಲಿಯಲ್ಲಿ ಸುಮಲತಾರನ್ನು ಜರಿದಿದ್ದರು. ಆಗ ಇಡೀ ನಾಡಿನ ತುಂಬ ಪ್ರತಿಭಟನೆಗಳಾಗಿದ್ದವು. ಶಿವರಾಮೇಗೌಡರ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು. ಆದರೆ ಈಗ ಸುಮಲತಾ ದಿಢೀರನೆ ಬಿಜೆಪಿಗೆ ಬೆಂಬಲ ಘೋಷಿಸಿ ಅಸಂಬದ್ಧವಾಗಿ ಮಾತನಾಡುವ ಶಿವರಾಮೇಗೌಡನ ಮಾತನ್ನೇ ಮರೆಸುವಂತೆ ಮುನ್ನುಗ್ಗುತ್ತಿದ್ದಾರಲ್ಲಾ. ಅಂದು ಜೆಡಿಎಸ್ ಲೀಡರುಗಳನ್ನು ಮೆಚ್ಚಿಸಲೋಸ್ಕರ ಅಸಂಬದ್ಧ ಮಾತನಾಡಿದ್ದ ಶಿವರಾಮೇಗೌಡ ಇಂದು ಜೆಡಿಎಸ್‌ನಿಂದಲೀ ಉಚ್ಛಾಟನೆಗೊಂಡು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿರುವಾಗಲೇ, ಫೈಟರ್ ರವಿ ನಾಗಮಂಗಲಕ್ಕೆ ಕೋಟಿಗೂ ಹೆಚ್ಚು ಖರ್ಚು ಮಾಡಿ ಪ್ರಧಾನಿಯಿಂದಲೇ ಕೈ ಮುಗಿಸಿಕೊಂಡು ಭೇಷ್ ಎನ್ನಿಸಿಕೊಳ್ಳುವಾಗ, ಸುಮಲತಾ ಕೂಡ ಬಿಜೆಪಿ ಸೇರಿದ್ದು (ಬಾಹ್ಯ ಬೆಂಬಲವೆಂಬ ನಾಟಕದೊಂದಿದೆಗೆ) ಈಗ ಎಲ್ಲಿಗೆ ಹೋಗಲಿ ಎಂಬ ಸ್ಥಿತಿಯನ್ನು ಶಿವರಾಮೇಗೌಡ ಎದುರಿಸುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಈಗ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಕಳೆದ ಬಾರಿ ಎದುರಿಸಿದ್ದ ಚುನಾವಣೆಯನ್ನು ಪ್ರಪಂಚದಲ್ಲೆಲ್ಲಾ ಹರಡಿರುವ ಅಂಬರೀಶ್ ಅಭಿಮಾನಿಗಳು ಕುತೂಹಲದಿಂದ ನೋಡಿದ್ದರು. ಅದೂಅಲ್ಲದೆ ದುಬೈನ ಬುರ್ಜು ಖಲೀಫದ ಕಟ್ಟಡದಲ್ಲಿ ಕುಳಿತ ಅದರ ಮಾಲೀಕರೂ ಕೂಡ ವೀಕ್ಷಿಸಿದ್ದರು. ಏಕೆಂದರೆ ಅವರೆಲ್ಲಾ ಅಂಬರೀಶ್ ಗೆಳೆಯರಾಗಿದ್ದರು. ಅದೂಅಲ್ಲದೆ ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಕೂಡ ತನ್ನ ಗೆಳೆಯನ ಪತ್ನಿ ಗೆಲ್ಲಲೆಂದು ಪ್ರಾರ್ಥಿಸಿದ್ದರು. ಅಂತೂ ಸುಮಲತಾ ಗೆದ್ದರು. ಆ ಗೆಲುವಿನಲ್ಲೂ ಕೆಲವು ದಾಖಲೆಗಳಿದ್ದವು. ಅವರ ಬೆನ್ನಿಗೆ ರೈತಸಂಘ, ಕಾಂಗ್ರೆಸ್ಸು, ಕೆಲ ಬಿಜೆಪಿಗಳೂ ನಿಂತಿದ್ದವು. ಆದ್ದರಿಂದ ಒಂದು ಲಕ್ಷದ ಇಪ್ಪತೈದು ಸಾವಿರ ಲೀಡಿನಲ್ಲಿ ಗೆದ್ದಿದ್ದರು. ಇದನ್ನೆಲ್ಲ ದಾಟಿದ ಸುಮಲತಾ ಬಿಜೆಪಿಗೆ ನೆಗೆದದ್ದು ಈ ಶತಮಾನದ ದ್ರೋಹ ಎಂದು ಮಂಡ್ಯದ ಸ್ವಾಭಿಮಾನಿಗಳು ಹೇಳುತ್ತಿದ್ದಾರಲ್ಲಾ. ಇದೆಲ್ಲಕ್ಕಿಂತ ಮಂಡ್ಯದವರು ಬೆಚ್ಚಿರುವುದೇಕೆಂದರೆ ಅಂದು ಸೆರಗೊಡ್ಡಿ ಮತ ಕೇಳಿದ್ದ ಈಕೆಯ ನಟನೆ ನಮಗೆ ಗೊತ್ತೇ ಆಗಲಿಲ್ಲ ಎಂದ ರೋಷಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಪ್ರಧಾನಿ ಭೇಟಿಯಿಂದ ಮಂಡ್ಯ ಸುಸ್ತು ಹೊಡೆದು ಕುಳಿತಿದೆಯಲ್ಲಾ. ಏಕೆಂದರೆ ಇಡೀ ಸರಕಾರಿ ಯಂತ್ರಾಂಗವನ್ನೇ ಬಳಸಿಕೊಂಡು ಅದ್ದೂರಿಯಾಗಿ ಪ್ರಧಾನಿಯ ಪ್ರವಾಸವನ್ನು ಮಾಡಿ ಮುಗಿಸಿದ ಬಿಜೆಪಿಯ ಸಾಧನೆ ನೋಡಿದರೆ, ಪ್ರಧಾನಿಗಳು ಫೈಟರ್ ರವಿಗೆ ಕೈ ಮುಗಿದದ್ದು ಮತ್ತು ಸುಮಲತಾರನ್ನು ಪಾರ್ಟಿಗೆ ಸೇರಿಸಿಕೊಂಡಿದ್ದೇ ಬಹುದೊಡ್ಡ ಸಾಧನೆಯಾಗಿ ಕಾಣತೊಡಗಿದೆಯಲ್ಲಾ. ಒಂದೊಂದು ತಾಲೂಕಿನಿಂದ ತಲಾ ಎಪ್ಪತ್ತು ಬಸ್ಸು ಜನ ತುಂಬಿಕೊಂಡು ಬಂದವು. ಅದರಲ್ಲಿ 50 ಜನರಿದ್ದು ತಲಾ ಮುನ್ನೂರು ಬಟವಾಡೆಯಾಗಿ ಕೊಟ್ಟರಂತಲ್ಲಾ. ಹಣ ಮತ್ತು ಬಂದ ಜನರ ದಾಖಲೆ ಎಲ್ಲ ಸರಿಯಾಗಿರಬೇಕು ಎಂದು ಹಿಂದೆಂದು ಕಾಣದ ಶಿಸ್ತಿನಿಂದ ನಡೆದುಹೋದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನ ಚಲುವರಾಯಸ್ವಾಮಿ ನಡೆಸುವ ಸಭೆಗೆ ಮತ್ತು ಶಿವರಾಮೇಗೌಡ ಹಾಗೂ ಇನ್ನಿತರ ಸಭೆಗೂ ಹೋಗುತ್ತ ನಾವು ಕೂಲಿಗೆ ಹೋದರೆ ಐದುನೂರು ಕೊಡುತ್ತಾರೆ ಈ ಮುನ್ನೂರು ಸಾಲುವುದಿಲ್ಲ ಇನ್ನ ಮುಂದೆ ಐನೂರರ ಜೊತೆಗೆ ಒಂದು ಪ್ಯಾಕೆಟ್ ಬಿರಿಯಾನಿ ಮತ್ತು ಒಂದು ಕ್ವಾಟರ್ ಕೊಡುವುದಿದ್ದರೆ ಮನೆ ಹತ್ತಿರ ಬನ್ನಿ ಎನ್ನವಂತಾಗಿದ್ದಾರಂತಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಗ್ಯಾರಂಟಿ: ಇಂದಿನಿಂದ ತೆಲಂಗಾಣದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ

0
ಅಧಿಕಾರಕ್ಕೆ ಬಂದ ಎರಡೇ ದಿನಕ್ಕೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ತನ್ನ ಆರು ಚುನಾವಣಾ ಗ್ಯಾರಂಟಿಗಳ ಪೈಕಿ ಎರಡನ್ನು ಜಾರಿಗೊಳಿಸಲು ಮುಂದಾಗಿದೆ. ಇಂದಿನಿಂದ 'ಮಹಾಲಕ್ಷಿ' ಯೋಜನೆಯಡಿ ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು...