Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಜಮಖಂಡಿ: ಕ್ಷೇತ್ರ ಉಳಿಸಿಕೊಳ್ಳಲು ಪಣತೊಟ್ಟ ನ್ಯಾಮಗೌಡ; ಸೋಲುಣಿಸಲು ಸೆಡ್ಡು ಹೊಡೆದ ಗುಡಗುಂಟಿ

ಜಮಖಂಡಿ: ಕ್ಷೇತ್ರ ಉಳಿಸಿಕೊಳ್ಳಲು ಪಣತೊಟ್ಟ ನ್ಯಾಮಗೌಡ; ಸೋಲುಣಿಸಲು ಸೆಡ್ಡು ಹೊಡೆದ ಗುಡಗುಂಟಿ

- Advertisement -
- Advertisement -

ಜಮಖಂಡಿಯು ಐತಿಹಾಸಿಕ ಕ್ಷೇತ್ರವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿದ್ದ 465 ಸಂಸ್ಥಾನಗಳಲ್ಲಿ ಜಮಖಂಡಿಯ ಪಟವರ್ಧನ ಮಹಾರಾಜರ ಸಂಸ್ಥಾನವೂ ಒಂದಾಗಿತ್ತು. ಆದರೆ ಈಗ ಬಾಗಲಕೋಟ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದು, ಈಗಲೂ ಜಮಖಂಡಿಗೆ ಜಿಲ್ಲಾ ಮಾನ್ಯತೆ ನೀಡಬೇಕು ಎಂದು ಹೋರಾಟ ನಡೆಯುತ್ತಿದೆ.

ಜಮಖಂಡಿಯ ಪಟವರ್ಧನ ಮಹಾರಾಜ ಭಾರತದ ಏಕೀಕರಣಕ್ಕಾಗಿ ಹೋರಾಡಿದವರು. 1947ಕ್ಕಿಂತ ಮುಂಚೆ ಜನತೆಯು ಬ್ರಿಟಿಷರ ಸಂಕೋಲೆಯಿಂದ ಭಾರತದ ಸಾರ್ವಭೌಮತ್ವವನ್ನು ಬಿಡಿಸಿಕೊಳ್ಳಲು ಚಳವಳಿ ನಡೆಸಿದರು. ಸ್ವಾತಂತ್ರ್ಯಾನಂತರ ದೇಶದಲ್ಲಿನ ಎಲ್ಲಾ ಸಂಸ್ಥಾನಗಳು ಒಟ್ಟಾಗಿ ಭಾರತದ ಏಕೀಕರಣವಾಗಬೇಕಿತ್ತು. ಎಲ್ಲ ರಾಜರು ಇದನ್ನು ವಿರೋಧ ಮಾಡಿದರು. ಈ ವೇಳೆ ಪರಶುರಾಮ ಶಂಕರರಾವ್ ಪಟವರ್ಧನ ಮಹಾರಾಜರು, ”ಕುಡಚಿ- ಬಾಗಲಕೋಟ ರೈಲು, ಜಂಬಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಸೇತುವೆ ನಿರ್ಮಾಣ, ಜಮಖಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಷರತ್ತುಗಳೊಂದಿಗೆ” ಅಂದಿನ ಗೃಹ ಸಚಿವ ವಲ್ಲಭಭಾಯಿ ಪಟೇಲ್‌ ಅವರ ಸಮ್ಮುಖದಲ್ಲಿ ಜಮಖಂಡಿ ಸಂಸ್ಥಾನವನ್ನು ದೇಶದಲ್ಲಿಯೇ ಪ್ರಥಮವಾಗಿ ಏಕೀಕರಣದಲ್ಲಿ ವಿಲೀನಗೊಳಿಸಿ ಇತಿಹಾಸ ನಿರ್ಮಿಸಿದರು. ಆದರೆ ಇಂದಿಗೂ ಜಮಖಂಡಿ ಜಿಲ್ಲಾ ಕೇಂದ್ರವಾಗಿಲ್ಲ ಎನ್ನುವುದು ಇಲ್ಲಿಯ ಜನರ ಅಸಮಾಧಾನವಾಗಿದೆ.

ಜಮಖಂಡಿಯ ಸುತ್ತಲೂ 12 ಜ್ಯೋತಿರ್ಲಿಂಗ ಮಾದರಿಯಂತೆ ಶಿವನ ದೇವಾಲಯಗಳು ಮತ್ತು ಈಶ್ವರ ಲಿಂಗಗಳು ಕಾಣಸಿಗುತ್ತವೆ. ಇಂದಿಗೂ ಎಲ್ಲ ಕಟ್ಟಡಗಳು ಸುಸಜ್ಜಿತವಾಗಿದ್ದು, ಸಾರ್ವಜನಿಕ ವೀಕ್ಷಣೆಗೆ ಲಭ್ಯವಿವೆ.

ಜಮಖಂಡಿಯ ಸುತ್ತಮುತ್ತ ಅನೇಕ ಧಾರ್ಮಿಕ ಸ್ಥಳಗಳನ್ನು ಕಾಣಬಹುದು. ಕಡಕೋಳ ಗ್ರಾಮದಲ್ಲಿ ಹೆಬ್ಬಿ ಬಸವೇಶ್ವರ ಮತ್ತು ಗುಬ್ಬೇಶ್ವರ ದೇವಸ್ಥಾನ ಪ್ರಸಿದ್ಧಿಯನ್ನು ಹೊಂದಿವೆ. ಮರೇಗುದ್ದಿ ಶ್ರೀ ಅಡವಿಸಿದ್ದೇಶ್ವರ ಮಠ ಇದೆ. ಹಳಿಂಗಳಿ ಎಂಬ ಐತಿಹಾಸಿಕ ಸ್ಥಳವಿದ್ದು, ಅಲ್ಲಿ ಪ್ರಾಚಿನ ಕಾಲದ 700 ಜೈನ ಮುನಿಗಳ ಸಮಾಧಿ ಸ್ಥಳಗಳಿವೆ. ಇನ್ನು ಸಮೀಪದ ಕೊಣ್ಣೂರುನಲ್ಲಿರುವ ಕರಿಸಿದ್ದೇಶ್ವರ ದೇವರು ಪ್ರಸಿದ್ಡವಾಗಿದೆ. ಇಲ್ಲಿಗೆ ಪಕ್ಕದ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

ವಿಶೇಷ ಹಾಗೂ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿರುವ ಜಮಖಂಡಿ ಕ್ಷೇತ್ರ:

ಸ್ವಾತಂತ್ರ್ಯಾ ನಂತರ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸದಾ ಮೇಲುಗೈ ಸಾಧಿಸುತ್ತ ಬಂದಿದೆ. ಕಾಂಗ್ರೆಸ್‌ನ ಬಿಡಿ ಜತ್ತಿ ಮತ್ತು ರಾಮಣ್ಣ ಕಲೂತಿ ಹ್ಯಾಟ್ರಿಕ್‌ ಜಯ ಸಾಧಿಸಿದ್ದಾರೆ. ಈ ಪೈಕಿ ಜತ್ತಿಯವರು ನಾಲ್ಕು ಬಾರಿ ಈ ಕ್ಷೇತ್ರದಿಂದ ಪ್ರತಿನಿಧಿಸಿದ್ದು, ಹಂಗಾಮಿ ರಾಷ್ಟ್ರಪತಿ, ಉಪರಾಷ್ಟ್ರಪತಿಯಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

1971ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿದ್ದರಿಂದ ಶಾಸಕ ಬಿ.ಡಿ ಜತ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿದ್ದವು. ಜತ್ತಿಯವರನ್ನು ಪಾಂಡಿಚೇರಿಯ ಗವರ್ನರ್‌ ಆಗಿ ನೇಮಕಗೊಳಿಸಲಾಗಿತ್ತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳಿಂದ ಶ್ರೀಶೈಲಪ್ಪ ಅಥಣಿ ಹಾಗೂ ಎ ಜಿ ದೇಸಾಯಿ ಕಣಕ್ಕಿಳಿದಿದ್ದರು. ಈ ಪೈಕಿ 1,400 ಮತಗಳಿಂದ ಶ್ರೀಶೈಲಪ್ಪ ಆಯ್ಕೆಯಾದರು. ಆಗ ಬಿ ಎಂ ಪಾಟೀಲರು ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ವಿರುದ್ಧ ಬಂಡಾಯ ಸಾರಿ 12 ಶಾಸಕರೊಂದಿಗೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದರು. ರಾಜ್ಯಪಾಲ ಧರ್ಮವೀರ್‌ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವುದರೊಂದಿಗೆ ರಾಜ್ಯದಲ್ಲಿ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ಈ ಮಧ್ಯೆ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀಶೈಲಪ್ಪ ಪ್ರಮಾಣ ವಚನವನ್ನೂ ಸ್ವೀಕರಿಸಲಿಲ್ಲ. ಅವರು ‘ಏಕ್‌ ದಿನ್‌ ಕಾ ರಾಜಾ’ ಎಂಬ ಖ್ಯಾತಿ ಪಡೆದರು. ಜಮಖಂಡಿಯಲ್ಲಿ 47 ವರ್ಷಗಳ ಹಿಂದೆಯೂ ಉಪ ಚುನಾವಣೆ ನಡೆದು ರಾಜ್ಯ ಸರ್ಕಾರವನ್ನೇ ಬುಡಮೇಲುಗೊಳಿಸಿತ್ತು ಎಂಬುದು ಮತ್ತೊಂದು ವಿಶೇಷ ಸಂಗತಿಯಾಗಿದೆ.

ಬಿ.ಡಿ. ಜತ್ತಿ

ಕೆಲವು ವರ್ಷಗಳ ಹಿಂದಷ್ಟೇ ಮೃತಪಟ್ಟ ಕಾಂಗ್ರೆಸ್ ನಾಯಕ ದಿವಂಗತ ಸಿದ್ದು ನ್ಯಾಮಗೌಡ ಅವರು ಜಮಖಂಡಿ ಶಾಸಕರಾಗಿ, ಮಾಜಿ ಕೇಂದ್ರ ಸಚಿವರಾಗಿ, ‘ಬ್ಯಾರೇಜ್ ಸಿದ್ದು’ ಎಂದೇ ಪ್ರಖ್ಯಾತಿ ಪಡೆದಿದ್ದರು. ಏಷ್ಯಾ ಖಂಡದಲ್ಲೇ ಪ್ರಥಮವಾಗಿ ರೈತರಿಂದ ಹಣ ಸಂಗ್ರಹಿಸಿ ರೈತರಿಂದ ನಿರ್ಮಾಣಗೊಂಡ ಚಿಕ್ಕಪಡಸಲಗಿ ಬ್ಯಾರೇಜ್‌ ರೂವಾರಿ ಸಿದ್ದು ನ್ಯಾಮಗೌಡ ಎನ್ನುವುದು ವಿಶೇ‍ಷ ಸಂಗತಿಯಾಗಿದೆ.

1991ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಬಾಗಲಕೋಟೆಯಿಂದ ರಾಮಕೃಷ್ಣ ಹೆಗೆಡೆ ನಾಮಪತ್ರ ಸಲ್ಲಿಸಿದ್ದರು. ಹೆಗಡೆ ವಿರುದ್ಧ ಕಣಕ್ಕಿಳಿಸಲು ಪ್ರಭಾವಿ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಕಾಂಗ್ರೆಸ್‌ ಅಷ್ಟರಲ್ಲಾಗಲೇ ಚಿಕ್ಕಪಡಸಲಗಿಯಲ್ಲಿ ಬ್ಯಾರೇಜ್ ನಿರ್ಮಿಸಿ ಪ್ರಸಿದ್ಧರಾಗಿದ್ದ ಸಿದ್ದು ನ್ಯಾಮಗೌಡ ಅವರನ್ನು ಕಣಕ್ಕಿಳಿಸಿತು. ರಾಮಕೃಷ್ಣ ಹೆಗಡೆ ಅವರನ್ನು ಸಿದ್ದು ನ್ಯಾಮಗೌಡ ಅವರು 22 ಸಾವಿರ ಮತಗಳ ಅಂತರದಿಂದ ಸೋಲಿಸಿ, ಸಂಸದರಾಗಿ ಆಯ್ಕೆಯಾದರು. ಪಿವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಕಲ್ಲಿದ್ದಲು ಸಚಿವರು ಕೂಡ ಆಗಿದ್ದರು. ಇಂತಹ ಪ್ರಬಾವಿ ನಾಯಕ ಸಿದ್ದು ನ್ಯಾಮಗೌಡ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿ, 40,240 ಮತ ಪಡೆದರೂ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ವಿರುದ್ಧ 19,690 ಮತಗಳ ಅಂತರದಲ್ಲಿ ಸೋಲು ಕಂಡರು.

ಕ್ಷೇತ್ರದ ಚುನಾವಣಾ ಇತಿಹಾಸ:

1952ರಿಂದ ಈ ವರೆಗೆ ಎರಡು ಉಪಚುನಾವಣೆ ಸೇರಿದಂತೆ ಒಟ್ಟು 17 ಚುನಾವಣೆಗಳು ನಡೆದಿವೆ. ಅದರಲ್ಲಿ 13 ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲವು ಕಂಡಿದೆ. ಉಳಿದಂತೆ ಜನತಾ ಪಕ್ಷ ಹಾಗೂ ಬಿಜೆಪಿಯಿಂದ ತಲಾ ಎರಡೆರಡು ಬಾರಿ ಗೆಲುವು ಕಂಡಿದ್ದಾರೆ.

1952ರಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿ ಮತಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಡಿ. ಜತ್ತಿ ಅವರು ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದರು. ಈ ವೇಳೆ ಅವರು ಮುಂಬಯಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕಾರ್ಮಿಕ ಮಂತ್ರಿಯಾದರು. ಆ ನಂತರ 1957, 1962 ಹಾಗೂ 1967ರಲ್ಲಿ ನಡೆದ ಚುನಾವಣೆಯಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಡಿ ಜತ್ತಿ ಸತತ ಗೆಲುವು ಸಾಧಿಸಿದರು. 1958ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ನೇಮಕಗೊಂಡು 1962ರ ತನಕ ಆಡಳಿತ ನಡೆಸಿದರು.

ಆ ಬಳಿಕ 1962ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಜತ್ತಿ ಅವರು, ಹಣಕಾಸು ಮಂತ್ರಿಯಾದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾದರು. ನಂತರ ಅವರು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡು 1968ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡರು. 1973ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974ರಲ್ಲಿ ಭಾರತದ ಉಪರಾಷ್ಟ್ರಾಧ್ಯಕ್ಷರಾಗಿ 1980ರವರೆಗೆ ಸೇವೆ ಸಲ್ಲಿಸಿದರು.

ಬಿ.ಡಿ. ಜತ್ತಿ ಅವರು ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಬಳಿಕ 1972ರಲ್ಲಿ ಜಮಖಂಡಿ ಕ್ಷೇತ್ರದ ಅಭ್ಯರ್ಥಿಯಾಗಿ ಪಿ.ಬಿ. ಬಾಂಗಿ ಅವರು ಕಾಂಗ್ರೆಸ್‌ನ ಗೆಲುವಿನ ಓಟವನ್ನು ಮುಂದುವರಿಸಿದರು. ಆ ಬಳಿಕ ಬಂದ ವಿ ವಿ ಪತ್ತಾರ ಅವರು 1978ರಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಗೆಲವು ತಂದುಕೊಟ್ಟರು.

ಜಮಖಂಡಿಯಲ್ಲಿ ಸತತವಾಗಿ ಐದು ಬಾರಿ ಗೆಲ್ಲುವ ಮೂಲಕ ಜಯದ ನಾಗಾಲೋಟವನ್ನು ಮುಂದುವರೆಸಿತ್ತು. ಆದರೆ ಕಾಂಗ್ರೆಸ್‌ ಗೆಲುವಿಗೆ ತಡೆಯೊಡ್ಡಿದ್ದು ಜನತಾ ಪಾರ್ಟಿ. 1983ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಜಿ.ಎಸ್‌ ಬಾಗಲಕೋಟ ಅವರು 41,445 ಮತ ಪಡೆದು ಕಾಂಗ್ರೆಸ್ಸಿನ ಬಿ ಡಿ ಜತ್ತಿ ಅವರನ್ನು ಸೋಲಿಸುವ ಮೂಲಕ ಜನತಾ ಪಾರ್ಟಿಯ ಬಾವುಟ ಹಾರಿಸಿದ್ದರು. ಆಗ ಬಿ ಡಿ ಜತ್ತಿ ಅವರು ಕೇವಲ 17,580 ಮತಗಳು ಮಾತ್ರ ಪಡೆದಿದ್ದರು. 1985ರಲ್ಲೂ ಜಿ ಎಸ್‌ ಬಾಗಲಕೋಟ ಜನತಾ ಪಾರ್ಟಿಯಿಂದ ಗೆಲ್ಲುವ ಮೂಲಕ ಎರಡನೇ ಅವಧಿಗೂ ಶಾಸಕರಾದರು. ಈ ವೇಳೆ ಜಿ ಎಸ್‌ ಬಾಗಲಕೋಟ ಅವರು ಅರಣ್ಯ ಖಾತೆಯ ಸಚಿವರಾದರು.

ಸತತ ಎರಡು ಅವಧಿ ಸೋಲುಂಡ ಕಾಂಗ್ರೆಸ್ 1989ರಲ್ಲಿ ನಡೆದ ಚುನಾವಣೆಯಲ್ಲಿ ರಾಮಣ್ಣ ಕಲೂತಿ ಮೂಲಕ ಜಮಖಂಡಿಯಲ್ಲಿ ಮತ್ತೆ ಗೆಲುವಿನ ಬಾವುಟ ನೆಟ್ಟಿತು. ಆ ನಂತರ 1994 ಮತ್ತು 1999 ರಲ್ಲಿ ನಡೆದ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೆಸ್ಸಿನಿಂದ ಗೆಲ್ಲುವ ಮೂಲಕ ರಾಮಣ್ಣ ಕಲೂತಿ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದರು.

ಜಮಖಂಡಿಯಲ್ಲಿ ಸತತವಾಗಿ ಗೆಲುವಿನ ಓಟ ಮುಂದುವರೆಸಿದ್ದ ಕಾಂಗ್ರೆಸ್‌ಗೆ ಬ್ರೇಕ್ ಹಾಕಿದ್ದು ಸಿದ್ದು ಸವದಿ. ಅಷ್ಟೇ ಅಲ್ಲದೇ ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿಯ ಮೊದಲ ಬಾವುಟ ನೆಟ್ಟಿದ್ದು ಅವರೆ. 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹ್ಯಾಟ್ರಿಕ್ ಸರದಾರ ರಾಮಣ್ಣ ಕಲೂತಿ ಅವರ ಗೆಲುವಿಗೆ ತಡೆಯೊಡ್ಡಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದು ಸವದಿ ಅವರು ಗೆಲುವು ಸಾಧಿಸಿದರು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದಾಗ ಜಮಖಂಡಿಯ 23 ಗ್ರಾಮಗಳು ತೇರದಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದವು. ಬೀಳಗಿ ಮತಕ್ಷೇತ್ರದ ಸಾವಳಗಿ ಪ್ರದೇಶದ 33 ಗ್ರಾಮಗಳು ಜಮಖಂಡಿ ಕ್ಷೇತ್ರಕ್ಕೆ ಸೇರಿಕೊಂಡವು.

2008ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದು ಸವದಿ ತೇರದಾಳ ವಿಧಾನಸಭಾ ಕ್ಷೇತ್ರಕ್ಕೆ ಹೋಗಿದ್ದರಿಂದ ಜಮಖಂಡಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಕಾಂತ ಕುಲಕರ್ಣಿ ಬಿಜೆಪಿಯನ್ನು ಮತ್ತೊಂದು ಅವಧಿಗೆ ಗೆಲ್ಲಿಸಿಕೊಂಡು ಬಂದರು. ಆಗ ಇವರ ಎದುರಾಳಿ ಆಗಿದ್ದವರು ಸಿದ್ದು ನ್ಯಾಮಗೌಡ ಎಂಬುದು ವಿಶೇಷ.

ಸಿದ್ದು ನ್ಯಾಮಗೌಡ

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಸಿದ್ದು ನ್ಯಾಮಗೌಡ ಅವರು ದೊಡ್ಡ ಅಂತರದಲ್ಲಿ ಗೆಲ್ಲುವ ಮೂಲಕ ಬಿಜೆಪಿಯನ್ನು ಮಕಾಡೆ ಮಲಗಿಸಿದರು. ಆಗ ಬಿಜೆಪಿ ಸೋಲಲು ಯಡಿಯೂರಪ್ಪ ಕಟ್ಟಿದ ಕೆಜೆಪಿ ಕೂಡ ಬಲವಾದ ಕಾರಣವಾಗಿತ್ತು. ಸಿದ್ದು ನ್ಯಾಮಗೌಡ 49,145 ಮತಗಳನ್ನು ಪಡೆದರೆ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಗದೀಶ್‌ ಗುಡಗುಂಟಿ 27,993 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಕಾಂತ್‌ ಕುಲಕರ್ಣಿ 20,982 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಈ ನಡುವೆ ಕೆಜೆಪಿಯಿಂದ ಸ್ಪರ್ಧಿಸಿದ್ದ ಉಮೇಶ್‌ ಮಹಾಬಲಶೆಟ್ಟಿ ತೀವ್ರ ಪೈಪೋಟಿ ನಡುವೆಯೂ 18,211 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡುತ್ತಾರೆ. ಜೊತೆಗೆ ಜೆಡಿಎಸ್‌ ಅಭ್ಯರ್ಥಿ ಬಸನಗೌಡ ಶಿವನಗೌಡ ಶಿಂಧೂರ 10,326 ಮತ ಪಡೆದು ಐದನೇ ಸ್ಥಾನ ಪಡೆಯುತ್ತಾರೆ. ಆಗ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,76,718 ಇದ್ದರೆ, 1,31,750 ಮತದಾರರು ಮತ ಚಲಾಯಿಸಿದ್ದರು.

2018ರಲ್ಲಿ ನಡೆದ ಚುನಾವಣೆಯಲ್ಲಿ 49,245 ಮತ ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದು ನ್ಯಾಮಗೌಡ ಅವರು ಮತ್ತೆ ಗೆಲುವು ಕಂಡರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಕಾಂತ್‌ ಕುಲಕರ್ಣಿ ತೀವ್ರ ಪೈಪೋಟಿ ನೀಡಿ 2,795 ಮತಗಳ ಅಂತರದಲ್ಲಿ ಸೋಲುತ್ತಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಮುರುಗೇಶ್‌ ನಿರಾಣಿ ಸಹೋದರ ಸಂಗಮೇಶ್‌ ನಿರಾಣಿ 24,461 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ. ಆಗ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2 ಲಕ್ಷದ ಗೆರೆ ದಾಟ್ಟಿದ್ದು, ಆ ಪೈಕಿ 1,53,608 ಮತದಾರರು ಮತ ಚಲಾಯಿಸಿದ್ದರು.

ಶಾಸಕ ಸಿದ್ದು ನ್ಯಾಮಗೌಡರ ಅಕಾಲಿಕ ಮರಣದಿಂದಾಗಿ ಜಮಖಂಡಿಯಲ್ಲಿ 47 ವರ್ಷಗಳ ನಂತರ 2018ರಲ್ಲಿ ಉಪ ಚುನಾವಣೆ ನಡೆಯಿತು. ಸಿದ್ದು ನ್ಯಾಮಗೌಡರ ಮಗ ಆನಂದ್ ನ್ಯಾಮಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಅನುಕಂಪದ ಅಲೆ ಮೇಲೆ 97,017 ಮತಗಳನ್ನು ಪಡೆಯುವ ಮೂಲಕ 39 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಸಂಘಟನೆಯ ಬಲ ನೆಚ್ಚಿಕೊಂಡಿದ್ದ ಬಿಜೆಪಿಯ ಶ್ರೀಕಾಂತ ಕುಲಕರ್ಣಿ 57,537 ಮತ ಪಡೆದು ಸೋಲು ಅನುಭವಿಸಿದರು. ಪ್ರಚಾರದ ವೇಳೆ ‘ಇದು ನನ್ನ ಕೊನೆಯ ಚುನಾವಣೆ’ ಅಸ್ತ್ರ ಬಳಸಿದರೂ ಅನುಕಂಪದ ಅಲೆಯ ಮುಂದೆ ಕೆಲಸಕ್ಕೆ ಬರಲಿಲ್ಲ, ಹಾಗಾಗಿ ಶ್ರೀಕಾಂತ ಸೋಲುಂಡರು.

ಜಾತಿ ಲೆಕ್ಕಾಚಾರ: 

ಜಮಖಂಡಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದೆ. ಪಂಚಮಸಾಲಿ ಸಮಾಜದ 25 ಸಾವಿರ ಮತಗಳಿವೆ. ಕುರುಬ ಸಮುದಾಯ ಕೂಡ ಪ್ರಬಲವಾಗಿದ್ದು, ಇಲ್ಲಿ ಹಾಲುಮತ ಸಮುದಾಯದ 24 ಸಾವಿರ ಮತದಾರರಿದ್ದಾರೆ. ಇನ್ನುಳಿದಂತೆ ಪರಿಶಿಷ್ಟ ಜಾತಿ, ಪಂಗಡದ 35 ಸಾವಿರ ಮತದಾರರಿದ್ದಾರೆ. 28 ಸಾವಿರ ಮುಸ್ಲಿಮರು, ಗಾಣಿಗ ಸಮಾಜದ 15 ಸಾವಿರ, ಬಣಜಿಗ ಸಮಾಜದ 5,500 ಮತದಾರರಿದ್ದಾರೆ. 10 ಸಾವಿರ ಜೈನ ಹಾಗೂ 5 ಸಾವಿರ ಬ್ರಾಹ್ಮಣ ಮತದಾರರಿದ್ದಾರೆ.

ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಆನಂದ್ ನ್ಯಾಮಗೌಡ

ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ತಂದೆಯ ಸಾವಿನ ಅನುಕಂಪದ ಅಲೆಯಲ್ಲಿ ಆನಂದ್ ನ್ಯಾಮಗೌಡ ಗೆಲವು ಸಾಧಿಸಿದ್ದರು. ಈ ಬಾರಿಯೂ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದುಕೊಂಡು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ.

ಸಿದ್ದು ನ್ಯಾಮಗೌಡ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಬ್ಯಾರೇಜ್ ನಿರ್ಮಾಣದ ವರ್ಚಸ್ಸು ಆನಂದ ನ್ಯಾಮಗೌಡ ಬೆನ್ನ ಹಿಂದಿದೆ. ಅದು ಅವರ ಗೆಲುವಿಗೆ ನಗೆ ಬೀರುವ ಅಂಶವಾಗಿದೆ. ಜೊತೆಗೆ ಅವರು ಪ್ರಬಲ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ.

ವಿರೋಧ ಪಕ್ಷದ ಶಾಸಕರಾಗಿದ್ದುಕೊಂಡೇ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿರುವ ಆನಂದ್ ನ್ಯಾಮಗೌಡ ಅವರು, 215 ಕೋಟಿ ರೂ. ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ, ಪಾಲಿಟೆಕ್ನಿಕ್‌ ಕಾಲೇಜು, ತುಬಚಿ–ಬಬಲೇಶ್ವರ ಏತ ನೀರಾವರಿಯಿಂದ ತಾಲ್ಲೂಕಿನ 33 ಸಾವಿರ ಎಕರೆ ಭೂಪ್ರದೇಶಕ್ಕೆ ನೀರಾವರಿ ಯೋಜನೆ ತಂದಿದ್ದಾರೆ. ಕಾಲೇಜು, ವಸತಿ ನಿಲಯಗಳ ನಿರ್ಮಾಣ ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಎಲ್ಲ ಅಭಿವೃದ್ಧಿ ಕೆಲಸಗಳು ಅವರನ್ನು ಕೈ ಹಿಡಿದರೆ ಆನಂದ್‌ ಗೆಲುವು ನಿಶ್ಚಿತವಾಗುತ್ತದೆ. ಆದರೆ ಎದುರಾಳಿಯು ಲಿಂಗಾಯಿತ ಸಮುದಾಯದ ಪ್ರಬಲ ಅಭ್ಯರ್ಥಿಯಾಗಿರುವುದರಿಂದ ಗೆಲುವು ಅಷ್ಟು ಸುಲಭಕ್ಕೆ ದಕ್ಕುವುದಿಲ್ಲ ಎಂದು ಹೇಳಲಾಗುತ್ತಿದೆ.

ಆನಂದ್ ನ್ಯಾಮಗೌಡ 2018ರ ಉಪಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ತಂದೆ ಸಿದ್ದು ನ್ಯಾಮಗೌಡ ಅವರ ಆಪ್ತರನ್ನು ಹಾಗೂ ಹಿರಿಯ ಮುಖಂಡರನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿ ಬಂದಿದ್ದವು. ನಂತರ ಆನಂದ್ ನ್ಯಾಮಗೌಡ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಿದ್ದರ ಪರಿಣಾಮವಾಗಿ ಜಮಖಂಡಿಯಲ್ಲಿ ಕೈ ಮತ್ತಷ್ಟು ಪ್ರಬಲವಾಗಿದೆ.

ಆನಂದ್‌ಗೆ ಸೋಲಿನ ರುಚಿ ತೋರಿಸುವರೇ ಬಿಜೆಪಿಯ ಗುಡಗುಂಟಿ?

ಜಗದೀಶ್ ಗುಡಗುಂಟಿ

2018ರ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಅವರಿಗೆ ಬಿಜೆಪಿಗಿಂತ ದೊಡ್ಡ ಸ್ಪರ್ಧೆ ಕೊಟ್ಟವರು ಪಕ್ಷೇತರ ಅಭ್ಯರ್ಥಿ ಜಗದೀಶ ಗುಡಗುಂಟಿ. ಅವರಿಗೆ ಗಾಳ ಹಾಕಿ, ಪಕ್ಷಕ್ಕೆ ಬರಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಸೋಲಿಸಲು ಜಗದೀಶ ಗುಡಗುಂಟಿ ಅವರನ್ನು ಮುಂದೆ ಬಿಟ್ಟಿದೆ.

ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿ ಬದಲಾವಣೆಯ ಬೇಡಿಕೆಯ ಕೂಗು ಹೆಚ್ಚು ಕೇಳಿಬಂದ ಹಿನ್ನೆಲೆಯಲ್ಲಿ ಜಮಖಂಡಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್ ತಪ್ಪಿದೆ. ಇದು ಅವರ ಬೆಂಬಲಿಗರಲ್ಲಿ ಅಸಮಾಧಾನ ಉಂಟು ಮಾಡಿದೆ. ಆದರೆ, ಹೊಸ ಮುಖದಿಂದ ಕಮಲ ಅರಳುತ್ತದೆ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಜಗದೀಶ ಗುಡಗುಂಟಿ ಅವರಿಗೆ ಟಕೇಟ್ ದೊರೆಕಿದೆ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹೊಸ ಹುಮ್ಮಸ್ಸಿನೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

ಅಲ್ಲದೇ ಜಮಖಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರಾರ್ಥವಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ ಅವರು ಈಗಾಗಲೇ ಜಗದೀಶ ಗುಡಗಂಟಿ ಪರವಾಗಿ ರೋಡ್‌ ಶೋ ನಡೆಸಿದ್ದು, ಬಿಜೆಪಿಯಲ್ಲೂ ಸ್ಪರ್ಧೆಯ ಉತ್ಸಾಹಕ್ಕೆ ಮತ್ತಷ್ಟು ಮೆರಗು ಬಂದಿದೆ.

ಜೆಡಿಎಸ್‌ನಿಂದ ಯಾಕೂಬ್ ಕಪಡೆವಾಲೆ ಸ್ಪರ್ಧೆಯಲ್ಲಿದ್ದಾರೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ನೇರ ಪೈಪೋಟಿ ಇದೆ. ಮತದಾರರ ಒಲವು ಯಾರ ಕಡೆ ಎನ್ನುವುದನ್ನು ಮೇ 13 ರಂದು ತಿಳಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...