Homeಮುಖಪುಟಪತ್ರಕರ್ತ ನಿಖಿಲ್ ವಾಗ್ಲೆ ಕಾರಿನ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರು: ಪ್ರತಿಪಕ್ಷಗಳಿಂದ ಖಂಡನೆ

ಪತ್ರಕರ್ತ ನಿಖಿಲ್ ವಾಗ್ಲೆ ಕಾರಿನ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರು: ಪ್ರತಿಪಕ್ಷಗಳಿಂದ ಖಂಡನೆ

- Advertisement -
- Advertisement -

ಪತ್ರಕರ್ತ ನಿಖಿಲ್ ವಾಗ್ಲೆ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಶುಕ್ರವಾರ ದಾಳಿ ನಡೆಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಪತ್ರಕರ್ತನ ಮೇಲಿನ ದಾಳಿಗೆ ಪ್ರತಿಪಕ್ಷಗಳು ವ್ಯಾಪಕ ಖಂಡನೆಯನ್ನು ವ್ಯಕ್ತಪಡಿಸಿದೆ.

ಎಲ್‌ಕೆ ಅಡ್ವಾಣಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ ಪ್ರಶಸ್ತಿ’ ನೀಡಿದ ನಂತರ ನಿಖಿಲ್ ವಾಗ್ಲೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಎಲ್‌ಕೆ ಅಡ್ವಾಣಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸಿಂಘಾಡ್ ರಸ್ತೆ ಪ್ರದೇಶದಲ್ಲಿ ರಾಷ್ಟ್ರ ಸೇವಾದಳ ಆಯೋಜಿಸಿದ್ದ ‘ನಿರ್ಭಯ್ ಬಾನೋ’ ಕಾರ್ಯಕ್ರಮಕ್ಕೆ ನಿಖಿಲ್ ವಾಗ್ಲೆ, ಅಸೀಮ್ ಸರೋದೆ ಮತ್ತು ವಿಶ್ವಂಭರ ಚೌಧರಿ ಪೊಲೀಸ್ ರಕ್ಷಣೆಯಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಶಾಯಿ ಎರಚಿ ಕಾರಿನ ವಿಂಡ್‌ಸ್ಕ್ರೀನ್ ಒಡೆದು ಹಾಕಿದ್ದಾರೆ.

‘ನಿರ್ಭಯ್ ಬಾನೊ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಪುಣೆ ಬಿಜೆಪಿ ಘಟಕ ಪೊಲೀಸರಿಗೆ ಮನವಿ ಮಾಡಿತ್ತು. ಶಿವಸೇನೆಯ ಪುಣೆ ನಗರಾಧ್ಯಕ್ಷ ಪ್ರಮೋದ್ ಭಂಗಿರೆ ಅವರು ಈ ಕಾರ್ಯಕ್ರಮವನ್ನು ನಾವು ವಿರೋಧಿಸುತ್ತಿಲ್ಲ. ಆದರೆ ವಾಗ್ಲೆ ಅವರ ಭಾಗವಹಿಸುವಿಕೆಯನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಹೇಳಿದ್ದರು.

ಖಂಡೋಜಿ ಬಾಬಾ ಚೌಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ನಿಖಿಲ್ ವಾಗ್ಲೆ ಅವರ ಕಾರನ್ನು ಗುಂಪುಗೂಡಿ  ಧ್ವಂಸಗೊಳಿಸುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಾಳಿಯಿಂದ ಕಾರಿನ ವಿಂಡ್‌ಸ್ಕ್ರೀನ್ ಮತ್ತು ಸೈಡ್ ಪ್ಯಾನ್‌ಗಳಿಗೆ ಹಾನಿಯಾಗಿದೆ. ನಿಖಿಲ್ ವಾಗ್ಲೆ ಪೊಲೀಸ್ ರಕ್ಷಣೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳುವಲ್ಲಿ ಯಶಸ್ವಿಯಾಗಿದ್ದಾರೆ.

‘ನಿರ್ಭಯ್ ಬಾನೋ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ವಾಗ್ಲೆ, ನನ್ನ ಮೇಲೆ ಹಲ್ಲೆ ನಡೆಸಿದ ಎಲ್ಲರನ್ನೂ ನಾನು ಕ್ಷಮಿಸುತ್ತೇನೆ. ಈ ಹಿಂದೆ ಆರು ಬಾರಿ ನನ್ನ ಮೇಲೆ ದಾಳಿ ಮಾಡಲಾಗಿದೆ ಮತ್ತು ಇದು ಏಳನೆಯದು ಎಂದು ಹೇಳಿದ್ದಾರೆ.

ನಿಖಿಲ್ ವಾಗ್ಲೆ ವಿರುದ್ಧ ಎಫ್‌ಐಆರ್‌

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ನಿಖಿಲ್ ವಾಗ್ಲೆ (64) ವಿರುದ್ಧ  ಬಿಜೆಪಿಯ ಹಿರಿಯ ನಾಯಕ ಸುನೀಲ್ ದೇವಧರ್ ಪುಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಿಖಿಲ್ ವಾಗ್ಲೆ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 500 (ಮಾನನಷ್ಟ) ಮತ್ತು 505ರಡಿಯಲ್ಲಿ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರತಿಪಕ್ಷಗಳಿಂದ ಟೀಕೆ:

ಶುಕ್ರವಾರ ಸಂಜೆ ಪುಣೆಯ ಖಂಡೋಜಿ ಬಾಬಾ ಚೌಕ್‌ನಲ್ಲಿ ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ ನಂತರ ವಿರೋಧ ಪಕ್ಷಗಳು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಘಟನೆಗೆ ಕಟುವಾಗಿ ಪ್ರತಿಕ್ರಿಯಿಸಿದ ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್, ಹಲವಾರು ಮಹಾ ವಿಕಾಸ್ ಅಘಾಡಿ ಮಹಿಳಾ ಕಾರ್ಯಕರ್ತರನ್ನು ಬಿಜೆಪಿ ಗೂಂಡಾಗಳು ಥಳಿಸಿದ್ದಾರೆ ಮತ್ತು ಅವರ ಮೇಲೆ ಮೊಟ್ಟೆ, ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆಯಲಾಗಿದೆ. ಘಟನೆ ನಡೆಯುವ ವೇಳೆ ಪುಣೆ ಪೊಲೀಸರು ಮೂಖಪ್ರೇಕ್ಷಕರಾಗಿದ್ದರು. ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಅವರ ಕಾರಿಗೆ ಮಸಿ, ಮೊಟ್ಟೆ ಎಸೆದು ಕಾರು ಒಡೆದಿದ್ದಾರೆ. ಪುಣೆಯಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವವನ್ನು ಕೊಂದು ಹಾಕುವ ಹುನ್ನಾರ ನಡೆದಿದೆ. ದೇವೇಂದ್ರ ಫಡ್ನವೀಸ್‌ಗೆ ನಾಚಿಕೆಯಾಗಬೇಕು, ಮಹಾರಾಷ್ಟ್ರದ ಅಸಹಾಯಕ ಹೆಣ್ಣುಮಕ್ಕಳಿಗೆ ಹಾನಿ ಮಾಡಲು ಮತ್ತು ಗಾಯಗೊಳಿಸಲು ನಿಮ್ಮ ಸಿಬ್ಬಂದಿಗೆ ನೀವು ಆದೇಶ ನೀಡುತ್ತಿದ್ದೀರಿ, ಮಹಾರಾಷ್ಟ್ರವು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಸಂಜಯ್ ರಾವುತ್ ಸಾಮಾಜಿಕ ಮಾದ್ಯಮ ವೇದಿಕೆ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಪುಣೆ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಮ್ಮ ಮಾಜಿ ಕಾರ್ಪೊರೇಟರ್ ಅಭಿಷೇಕ್ ಘೋಸಲ್ಕರ್ ಅವರ ಅಕಾಲಿಕ ಮತ್ತು ದುರದೃಷ್ಟಕರ ಹತ್ಯೆಯಾಗಿ 24 ಗಂಟೆ ಕಳೆದಿಲ್ಲ. ಈಗ ಬಿಜೆಪಿಯನ್ನು ಟೀಕಿಸಿದ್ದಕ್ಕೆ ಈ ದಾಳಿಯನ್ನು ಮಾಡಲಾಗಿದೆ, ಇದು ಖಂಡನೀಯ ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. ಇದಲ್ಲದೆ ಪ್ರಿಯಾಂಕಾ ಚತುರ್ವೇದಿ ಅವರು ಮುಂಬೈನಲ್ಲಿ ತಮ್ಮ ಪಕ್ಷದ ನಾಯಕ ಅಭಿಷೇಕ್ ಘೋಸಲ್ಕರ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಅಮಿತ್ ಶಾಗೆ ಬರೆದ ಪತ್ರದಲ್ಲಿ ಥಾಣೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರು ಪೊಲೀಸ್ ಠಾಣೆಯೊಳಗೆ ಗುಂಡು ಹಾರಿಸಿದ ಘಟನೆಯನ್ನು ಕೂಡ ಉಲ್ಲೇಖಿಸಿದ್ದಾರೆ.

ಎನ್‌ಸಿಪಿಯ ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಅವರು ನಿಖಿಲ್ ವಾಗ್ಲೆ ಅವರ ಮೇಲಿನ ದಾಳಿಯನ್ನು “ಬಲವಾಗಿ” ಖಂಡಿಸುವುದಾಗಿ ಹೇಳಿದ್ದಾರೆ. ನಿಖಿಲ್ ವಾಗ್ಲೆ “ಸತ್ಯದ ಧ್ವನಿ ಮತ್ತು ಪತ್ರಿಕೋದ್ಯಮದ ದಾರಿದೀಪ” ಎಂದು ಬಣ್ಣಿಸಿದ್ದಾರೆ. ಇದು ಕೇವಲ ವ್ಯಕ್ತಿಯ ಮೇಲಿನ ಹಲ್ಲೆಯಲ್ಲ, ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಲೋಕಸಭೆ ಚುನಾವಣೆ | ದೇಶದಲ್ಲಿ 96.88 ಕೋಟಿ ಮತದಾರರು : ಚುನಾವಣಾ ಆಯೋಗ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...