Homeಅಂಕಣಗಳುಕಳೆದು ಹೋದ ದಿನಗಳನ್ನು ಮುಗಿಸುವ ಮುನ್ನ: ಪ್ರಸಾದ್ ರಕ್ಷಿದಿ

ಕಳೆದು ಹೋದ ದಿನಗಳನ್ನು ಮುಗಿಸುವ ಮುನ್ನ: ಪ್ರಸಾದ್ ರಕ್ಷಿದಿ

ಹಾರ್ಲೆ ಬಳಗದ ಕಾರ್ಮಿಕ ನೊಬ್ಬನಿಗೆ ಕನ್ನಡ ಕಲಿಸಿದ ಅರ್ಧ ಶತಮಾನದ ನಂತರ ತೋಟದ ಮಾಲಿಕರಿಗೂ ಕನ್ನಡ ಕಾಗುಣಿತ ಕಲಿಸಿದ ಹೆಗ್ಗಳಿಕೆ ನನ್ನದು!

- Advertisement -
- Advertisement -

ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -21

ಇಲ್ಲಿಯವರೆಗಿನ ಬರಹಗಳು ಮಲೆನಾಡಿನ ಕಾಫಿ ವಲಯದ ಅದರಲ್ಲಿಯೂ ಮುಖ್ಯವಾಗಿ ಇಂದಿನ ಕೊಡಗು ಮತ್ತು ಕೊಡಗಿನ ಭಾಗವಾಗಿದ್ದ ಮಂಜರಾಬಾದ್ ಪ್ರದೇಶದ ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲದ ಸಂಕಥನವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ಇಡೀ ಕಾಫಿ ವಲಯವೇ ಇಂದು ಬಿಕ್ಕಟ್ಟಿನಲ್ಲಿದೆ.  ಮುಂದಿನ ದಿನಗಳ ಖಂಡಿತವಾಗಿಯೂ ಹಿಂದಿನಂತೆ ಇರಲು ಸಾಧ್ಯವೇ ಇಲ್ಲವೆಂಬ ಭಾವನೆ ಇಲ್ಲಿನ ಬಹುಪಾಲು ಜನರದ್ದಾಗಿದೆ.

ಅದನ್ನು ಕಾಲವೇ ನಿರ್ಧರಿಸಲಿದೆ.

ಎರಡು ವಿಷಯಗಳೊಂದಿಗೆ ಈ ಸರಣಿಯನ್ನು ಮುಗಿಸುತ್ತೇನೆ,

ಈ ಬರಹದಲ್ಲಿ ಉಲ್ಲೇಖಿಸಲಾದ ಹಲವಾರು ಹಿರಿಯರು ಇಂದು ನಮ್ಮೊಂದಿಗೆ ಇಲ್ಲ. ಈ ಬರಹದ ಹರಹು 1860ನೇ ಇಸವಿ ಆಸುಪಾಸಿನಿಂದ ಪ್ರಾರಂಭವಾಗಿ, ಸುಮಾರು 2000 ಇಸವಿಯ ವರೆಗಿನ ಕಾಲಘಟ್ಟವನ್ನು ಮಾತ್ರ ಗಣನೆಗೆ ತೆಗೆದು ಕೊಂಡಿದ್ದೇನೆ. ಅನಂತರ ನಡೆದ ಕೆಲವು ಘಟನೆಗಳನ್ನು ಸಾಂದಸರ್ಭಿಕವಾಗಿ ಪೂರಕ ವಿಷಯವಾಗಿ ಮಾತ್ರ ತೆಗೆದುಕೊಂಡಿರುವುದರಿಂದ. ಇದು ಸಮಕಾಲೀನ ವಿಷಯಗಳಿಗೆ ಸಮಗ್ರವಾಗಿ ಚಾಚಿಕೊಂಡಿಲ್ಲ ಎನ್ನುವುದನ್ನು ಓದುಗರು ಗಮನಿಸಬೇಕು.

ಇಲ್ಲೇ ಉಲ್ಲೇಖವಾಗಿರುವ ಅನೇಕ ಕುಟುಂಬಗಳವರು ಈಗ ಬೇರೆ ಬೇರೆ ಕಡೆ ಹೋಗಿ ನೆಲೆಸಿದ್ದಾರೆ. ಕೆಲವು ಕುಟುಂಬಗಳವರು ಮಾತ್ರ ಇಲ್ಲಿಯೇ ಉಳಿದು ಹಳೆಯ ವೃತ್ತಿಯನ್ನು ಮುಂದುವರೆಸಿದ್ದಾರೆ.

ಹಾರ್ಲೆ ಗಣಪಯ್ಯನವರ ಸಹೋದರ ಕೃಷ್ಣಮೂರ್ತಿಯವರ ಕುಟುಂಬದವರು ಇಲ್ಲೇ ನೆಲೆಸಿದ್ದಾರೆ.

ಗಣಪಯ್ಯನವರ ಹಾರ್ಲೆ ಎಸ್ಟೇಟ್ ಈಗ ಚಿಕ್ಕಮಗಳೂರಿನ ಕಾಫಿ ಬೆಳೆಗಾರರಾದ ಡಿ.ಎಂ ಶಂಕರ್ ಮತ್ತು ಪೂರ್ಣೇಶ್ ಸಹೋದರರ ಒಡೆತನದಲ್ಲಿದೆ.

ರವೀಂದ್ರನಾಥರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಮಕ್ಕಳು ಬೇರೆ ಬೇರೆ ಉದ್ಯೋಗಗಳಲ್ಲಿ ದೇಶ ವಿದೇಶಗಳಲ್ಲಿ ಇದ್ದಾರೆ.

ಪ್ರದೀಪ್ ಕೆಂಜಿಗೆ

92ರ ಹರೆಯದ ರವೀಂದ್ರನಾಥರು ಇಂದೂ ಉತ್ಸಾಹಿಗಳಾಗಿ ಆಸಕ್ತರಿಗೆ ಆನ್ಲೈನ್ ಮೂಲಕ ಸಂಸ್ಕೃತ ಸಾಹಿತ್ಯದ ಪಾಠ ಮಾಡುತ್ತಿದ್ದಾರೆ. ಭಾರತೀಯ ದ್ರಾವಿಡ ಭಾಷೆಗಳಿಗೂ ಮತ್ತು ಯುರೋಪಿಯನ್ ಭಾಷೆಗಳಿಗೂ ಇರುವ ತುಲನಾತ್ಮಕ ಸಂಬಂಧದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನೂರಾರು ಜನರಿಗೆ ಅವರು ತಮ್ಮಲ್ಲಿರುವುದನ್ನು ಹಂಚಿದ್ದಾರೆ.

ನಾನು ವೈಯಕ್ತಿಕವಾಗಿ ಅವರಿಂದ ಕಲಿತದ್ದು ಬಹಳ,

ಅವರು ಯಾವಾಗಲೂ ಹೇಳುವ ಎರಡು ವಿಷಯಗಳು.

ಒಂದು ಮರ ಅಥವಾ ಗಿಡ ಹೂ ಬಿಡುತ್ತದೆ. ಹೂವು ಮಕ್ಕಳ ಹಾಗೆ ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಹೂವು ತನ್ನಗಿರುವ ಆಕರ್ಷಣೆಯ ಮೂಲವೇ ದುಂಬಿಗಳನ್ನು ಕರೆಯುತ್ತದೆ. ಮಕ್ಕಳಿಗೆ ಇರುವ ಮುಗ್ಧ, ನಿರ್ಮಲ ಆಕರ್ಷಣೆಯೇ ಮಕ್ಕಳನ್ನು ಪೋಷಿಸಲು ಉತ್ತೇಜಿಸುವ ಮುಖ್ಯ ಅಂಶವಾಗಿದೆ

ಕಾಯಿ ಹಾಗಲ್ಲ ಅದು ಹಸಿರಾಗಿ ಎಲೆಯ ಮರೆಯಲ್ಲಿ ರಕ್ಷಣೆ ಪಡೆಯುತ್ತದೆ. ರುಚಿಯೂ ಅಷ್ಟೆ ಕಹಿ, ಹುಳಿ ಅಥವಾ ಒಗರು. ತನ್ನ ಹತ್ತಿರ ಬರದಂತೆ ಎಲ್ಲರಿಂದ ದೂರ ನಿಲ್ಲುತ್ತದೆ.

ಫಲ ಮಾಗಿ ಹಣ್ಣಾಗುತ್ತಿದ್ದಂತೆ ಆಕರ್ಷಕ ಬಣ್ಣ, ರುಚಿ.

ಆಗ ಬಾ ನನ್ನನ್ನು ಸ್ವೀಕರಿಸು ಎಂದು ಎಲ್ಲರನ್ನೂ ಕರೆಯುತ್ತದೆ. ಅದು ಮರು ಹುಟ್ಟಿಗೆ ನಾಂದಿ.

ಹಾಗೆ ಮನುಷ್ಯ ಮಾಗಿದಾಗ ತಾನಾಗಿಯೇ ಎಲ್ಲರಿಗೂ ಬೇಕಾದವನಾಗುತ್ತಾನೆ. ಅಲ್ಲಿಯವರೆಗೆ ಆತನೂ ಕಹಿ, ಹುಳಿ. ಒಗರುಗಳ ಮಿಶ್ರಣ.

ಮನುಷ್ಯ ಮಾಗಬೇಕು…….

**********

“ಶಿವ” ಅತ್ಯಂತ ಪಾರದರ್ಶಕ, ಅತ್ಯಂತ ಸರಳ, ಅದರಿಂದಲೇ ಅವನನ್ನು ಬೋಲೇನಾಥ ಎಂದುಕರೆಯುವುದು, ಅವನು ನಿರ್ಗುಣ, ನಿರಾಕಾರ,

ನೀವು ಎಷ್ಟೆಷ್ಟು ಪಾರದರ್ಶಕ ಆಗುತ್ತೀರೋ ಅಷ್ಟು ಸ್ವೀಕರಿಸುವವರಾಗುತ್ತೀರಿ (ರಿಸೆಪ್ಟಿವ್).
ಆದ್ದರಿಂದಲೇ ಅತ್ಯಂತ ಪಾರದರ್ಶಕನಾದ ಶಿವ ಅತ್ಯಂತ ರಿಸೆಪ್ಟಿವ್, ಜಗತ್ತಿನ ಎಲ್ಲ ವಿಷವನ್ನು ಅಂದರೆ ಕೆಟ್ಟದ್ದನ್ನು ಸ್ವೀಕರಿಸುವ ಶಕ್ತಿ ಅವನಿಗೆ ಮಾತ್ರ ಇದೆ. ಆದ್ದರಿಂದಲೇ ಅವನು ವಿಷಕಂಠನಾದ,
ವಿಷವನ್ನು ತಾನು ಸ್ವೀಕರಿಸಿ ಒಳ್ಳೆಯದನ್ನು ಬೇರೆಯವರಿಗೆ ನೀಡಬಲ್ಲ ಶಕ್ತಿ ಸರಳ, ಪಾರದರ್ಶಕ ವ್ಯಕ್ತಿತ್ವಕ್ಕೆ ಮಾತ್ರ ಇರುತ್ತದೆ. ಅಂತಹ ವ್ಯಕ್ತಿ ಪ್ರಮಾಣಾತೀತ, ಯಾಕೆಂದರೆ ಪಾರದರ್ಶಕತೆಗೆ ಪ್ರಮಾಣವಿಲ್ಲ.
ನಾವು ‘ಶಿವ’ ನಾಗಲು ಪ್ರಯತ್ನಿಸಬೇಕು.

*************

ಈ ಬರಹವನ್ನು ನಿಲ್ಲಿಸುವ ಮುನ್ನ ಒಂದು ಸೋಜಿಗವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

ನನ್ನ ಬಾಲ್ಯದ ಘಟನೆಯೊಂದು ಹಲವಾರು ಸಂಗತಿಗಳಿಗೆ ಕಾರಣವಾಯಿತು.

ನನ್ನ ಅಪ್ಪ ಕೆಲಸ ಮಾಡುತ್ತಿದ್ದ ಸಿ.ಎಂ ಪೂಣಚ್ಚನವರ ಪೂರ್ಣಿಮಾ ಎಸ್ಟೇಟಿನಲ್ಲಿ, ಒಬ್ಬ ಕೆಲಸಗಾರ ಯುವಕನಿದ್ದ. ಆಗ ಎಲ್ಲ ಕೆಲಸಗಾರರರೂ ಹೆಬ್ಬೆಟ್ಟಿನವರೇ, ಲಕ್ಷ್ಮಯ್ಯ ನೆಂಬ ಯುವಕ ನನ್ನ ಅಪ್ಪನ ಅಚ್ಚು ಮೆಚ್ಚಿನವನು. ನನಗೂ ಹಿರಿಯ ಗೆಳೆಯ.

ಬಿ.ಎ.ಜಗನ್ನಾಥ್.ಬಾಳ್ಳುಪೇಟೆ

ಒಂದು ದಿನ ವಾರದ ಸಂಬಳ ಪಡೆಯುವಾಗ ಹೆಬ್ಬಟ್ಟು ಒತ್ತಲು ಹೋಗಿ ಏನೋ ಎಡವಟ್ಟಾಗಿ ಅಪ್ಪನಿಂದ ಬೈಗಳು ತಿಂದು ಅವಮಾನಿತನಾದವನು. ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿ ನನ್ನಿಂದ ಕಾಗುಣಿತ ಹೇಳಿಸಿಕೊಂಡು ಓದು ಬರಹ ಕಲಿತು ತಲೆಯೆತ್ತಿ ನಿಲ್ಲುತ್ತಾನೆ. ನಾನು ಇದೇ ಘಟನೆಯನ್ನು ವಿಸ್ತಾರವಾಗಿ ಈ ಮೊದಲು ಬರೆದಿದ್ದೇನೆ (ನೋಡಿ ಇದೇ ಲೇಖಕನ ಬೆಳ್ಳೇಕೆರೆ ಹಳ್ಳಿ ಥೇಟರ್ ಪುಸ್ತಕ. ಈ ಪುಸ್ತಕದ ಮೊದಲ ಅಧ್ಯಾಯವೇ “ಲಕ್ಷ್ಮಯ್ಯನ ಕಾಗುಣಿತ”)

ನಾನು ಈ ಕಳೆದುಹೋದ ದಿನಗಳು ಬರಹವನ್ನು ಪ್ರಾರಂಭಿಸಿದಾಗ ಇದರ ಕಂತುಗಳನ್ನು ಶ್ರೀಮತಿ ಕಮಲಾ ರವೀಂದ್ರನಾಥರಿಗೆ ಕಳುಹಿಸುತ್ತಿದ್ದೆ. ರವೀಂದ್ರನಾಥರಿಗೆ ಕನ್ನಡ ಓದಲು ಬಾರದು ಕಮಲಾ ಅವರು ರವೀಂದ್ರನಾಥರಿಗೆ ಪ್ರತಿದಿನ ಇದನ್ನು ಓದಿಹೇಳುವರು. ರವೀಂದ್ರ ನಾಥರು ಈಗ ಶ್ರವಣ ಸಾಧನವನ್ನು ಬಳಸುತ್ತಾರೆ. ನನ್ನ ಬರಹ ಪ್ರಾರಂಭವಾದ ಒಂದೆರಡು ದಿನಗಳಲ್ಲಿ ಅವರ ಶ್ರವಣ ಸಾಧನ ತಪಾಸಣೆಗಾಗಿ ಕಳುಹಿಸಬೇಕಾಯಿತು. ಆಗ ಬೇರೆಯವರು ಅವರಿಗೆ ಓದಿ ಹೇಳುವುದೂ ಕಷ್ಟವಾಯಿತು. ಆಗ ಕಮಲಾ ರವೀಂದ್ರನಾಥರು “ನೀವು ಲೋಕಕ್ಕೆಲ್ಲ ತಿಳುವಳಿಕೆ ಹೇಳುತ್ತೀರಿ ನಿಮಗೆ ಕನ್ನಡ ಕಲಿಯಲೇನು? ಎಂದರಂತೆ!”

ಅದನ್ನೇ ಸವಾಲಾಗಿ ಸ್ವೀಕರಿಸಿದ ರವೀಂದ್ರನಾಥರು ಒಂದು ವಾರದೊಳಗೆ ಕನ್ನಡ ಕಾಗುಣಿತ ಕಲಿತು ನನ್ನ ಬರಹಗಳನ್ನು ಓದಲಾರಂಭಿಸಿದರು. ಅಷ್ಟರಲ್ಲಿ ಶ್ರವಣ ಸಾಧನ ಬಂದಿತ್ತು.

ಆಗ ಕಮಲಾ ರವೀಂದ್ರ ನಾಥರು “ಬೇಕಾದರೆ ಈಗ ನಾನು ಓದಿ ಹೇಳುತ್ತೇನೆ ಎಂದರಂತೆ”.

ಆಗ ರವೀಂದ್ರನಾಥರು “ನೀನು ಓದಿ ಹೇಳುವುದೇನೂ ಬೇಡ, ನಾನೀಗ ಸ್ವತಂತ್ರ” ಎಂದರು.

ಅಷ್ಟೇ ಅಲ್ಲ ನನಗೆ ಫೋನ್ ಮಾಡಿ “ಪ್ರಸಾದ್ ನೀನು ನನಗೆ ಕನ್ನಡ ಕಲಿಸಿದೆ” ಎಂದರು!

ಹೀಗೆ ಹಾರ್ಲೆ ಬಳಗದ ಕಾರ್ಮಿಕ ನೊಬ್ಬನಿಗೆ ಕನ್ನಡ ಕಲಿಸಿದ ಅರ್ಧ ಶತಮಾನದ ನಂತರ ತೋಟದ ಮಾಲಿಕರಿಗೂ ಕನ್ನಡ ಕಾಗುಣಿತ ಕಲಿಸಿದ ಹೆಗ್ಗಳಿಕೆ ನನ್ನದು!

ಈ ಬರಹಗಳ ಮೊದಲ ಭಾಗದ ವಿವರಗಳಲ್ಲಿ ನನಗೆ ಮಾಹಿತಿ ನೀಡಿದ ಹಲವರು ಈ ಭಾಗದ ಬರಹದಲ್ಲಿಯೂ ಸಹಕರಿಸಿದ್ದಾರೆ.

ಇವರಲ್ಲಿ ಮುಖ್ಯವಾಗಿ, ಬಾಳ್ಳು ಪೇಟೆಯ ಬಿ.ಎ.ಜಗನ್ನಾಥ್, ಪ್ರದೀಪ್ ಕೆಂಜಿಗೆ, ಶಿವಶಂಕರ್ ಇಂಜಿನಿಯರಿಂಗ್ ವರ್ಕ್ಸ್‌ನ ಸುಬ್ರಮಣ್ಯಂ ಇದ್ದಾರೆ ಮತ್ತು ಸ್ವತಃ ರವೀಂದ್ರನಾಥರು ಹಲವಾರು ಮಾಹಿತಿ ನೀಡಿದ್ದಾರೆ.

ಇವರೆಲ್ಲರಿಗೂ ನಾನು ಕೃತಜ್ಞ.

ಜೊತೆಗೆ ಇದುವರೆಗೂ ತಾಳ್ಮೆಯಿಂದ ಕಾದು ಈ ಬರಹಗಳನ್ನು ಓದುತ್ತಿರುವ, ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ, ಈ ಸಂಕಥನವನ್ನು ಮತ್ತೊಮ್ಮೆ ಹೆಚ್ಚಿನ ಓದುಗರಿಗೆ ತಲುಪಿಸುತ್ತಿರುವ ‘ನಾನು ಗೌರಿ ಡಾಟ್ ಕಾಮ್’ ನ  ಎಲ್ಲ ಗೆಳೆಯರಿಗೂ ಧನ್ಯವಾದಗಳು… ನಮಸ್ಕಾರ…

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಮಲೆನಾಡಿನ ವೈವಿಧ್ಯಮಯ ಬೆಳೆಗಳು ಮತ್ತು ಅವುಗಳ ವಿಶೇಷಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳನ್ನು ಹೊಂದದೆ ಮೋದಿ, ಯೋಗಿ ನಿರುದ್ಯೋಗ ತಡೆದಿದ್ದಾರೆ ಎಂದ ಬಿಜೆಪಿ ಸಂಸದ!

0
ಯೂಟ್ಯೂಬರ್ ಒಬ್ಬರು ಉತ್ತರ ಪ್ರದೇಶದ ಬಿಜೆಪಿ ಸಂಸದನ ಬಳಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ವಿಚಿತ್ರವಾದ ಉತ್ತರ ನೀಡುವ ಮೂಲಕ ನಗೆ ಪಾಟಲಿಗೀಡಾಗಿದ್ದಾರೆ. ಯೂಟ್ಯೂಬರ್ ಜೊತೆ ಮಾತನಾಡಿರುವ ಆಝಂಘರ್ ಲೋಕಸಭಾ ಕ್ಷೇತ್ರದ ಬಿಜೆಪಿ...