Homeಮುಖಪುಟನಿಮ್ಮ ವಿಚಾರ ಪಾಲಿಸಿದ್ದೀವಿ. ನಮ್ಮ ಮಾತು ನಿಮಗೆ ಕೇಳುತ್ತಿದೆಯೇ? - ಪ್ರಧಾನಿ ಮೋದಿಗೆ ಕಮಲ್‌ ಹಾಸನ್‌...

ನಿಮ್ಮ ವಿಚಾರ ಪಾಲಿಸಿದ್ದೀವಿ. ನಮ್ಮ ಮಾತು ನಿಮಗೆ ಕೇಳುತ್ತಿದೆಯೇ? – ಪ್ರಧಾನಿ ಮೋದಿಗೆ ಕಮಲ್‌ ಹಾಸನ್‌ ಬಹಿರಂಗ ಪತ್ರ

ಕೆಳಸ್ತರವನ್ನು ನಾಶಗೊಳಿಸಲು ಹೊರಟರೆ, ಅದು ಮೇಲುಸ್ತರದ ವಿನಾಶಕ್ಕೂ ಕಾರಣವಾಗುತ್ತದೆ ಎಂಬುದನ್ನು ಇತಿಹಾಸ ತಿಳಿಸಿಕೊಟ್ಟಿದೆ. ಇದನ್ನು ವಿಜ್ಞಾನ ಕೂಡಾ ಒಪ್ಪುತ್ತದೆ!

- Advertisement -
- Advertisement -

ರಾಜಕಾರಣಿಯಾಗಿ ಬದಲಾಗಿರುವ ಪ್ರತಿಭಾನ್ವಿತ ಬಹುಭಾಷಾ ಚಿತ್ರತಾರೆ ಕಮಲಹಾಸನ್ ಅವರು ಕೊರೋನ ಲಾಕ್‌ಡೌನ್ ಮತ್ತು ಅದು ಬಡವರಿಗೆ ಒಡ್ಡಿರುವ ಸಂಕಷ್ಟಗಳ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಎರಡನೇ ಪತ್ರ ಬರೆದಿದ್ದಾರೆ. ಸುದೀರ್ಘವಾಗಿರುವ ಈ ಪತ್ರದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

-ಇವರಿಗೆ
ಗೌರವಾನ್ವಿತ ಪ್ರಧಾನಮಂತ್ರಿಯವರು,
ಭಾರತ ಗಣರಾಜ್ಯ

ಗೌರವಾನ್ವಿತರೇ,

ಇದು ನಾನು ನಿಮಗೆ ಬರೆಯುತ್ತಿರುವ ಎರಡನೇ ಪತ್ರವಾಗಿದೆ. ಈ ಹಿಂದೆ ಮಾರ್ಚ್‌ 23ರಂದು ಈ ದೇಶದ ಒಬ್ಬ ನಾಗರಿಕನಾಗಿ ಒಂದು ಪತ್ರ ಬರೆದಿದ್ದೆ. ಇದೀಗ ಮತ್ತೊಮ್ಮೆ ಅದೇ ನೆಲೆಯಲ್ಲಿ, ಆದರೆ ನಿರಾಶೆಯಿಂದ ಈ ಬಹಿರಂಗ ಪತ್ರವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನನ್ನ ಮೊದಲ ಪತ್ರದಲ್ಲಿ ನಾನು ಸಮಾಜದ ದೀನ ದಲಿತರ, ದುರ್ಬಲರ ಹಾಗೂ ಅವಗಣಿತರ ಬಗ್ಗೆ ಯಾವುದೇ ನಿರ್ಲಕ್ಷ್ಯ ತೋರಬೇಡಿ ಎಂದು ಒತ್ತಾಯಿಸಿದ್ದೆ.

ಅದರೆ, ಅದರ ಮರುದಿನವೇ ದೇಶಾದ್ಯಂತ ಕಟ್ಟುನಿಟ್ಟಿನ ಹಾಗೂ ತಕ್ಷಣವೇ ಜಾರಿಗೆ ಬರುವಂತೆ ಲಾಕ್‌ಡೌನ್‌ ಘೋಷಿಸಲಾಯಿತು. ಇದು ಬಹುತೇಕ ನೋಟು ಅಪಮೌಲ್ಯಗೊಳಿಸಿದ ರೀತಿಯಲ್ಲಿಯೇ ಇತ್ತು. ಆದರೂ ನಾನು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೆ. ಏಕೆಂದರೆ ನಾನು ಆಯ್ಕೆ ಮಾಡಿದ ನಾಯಕ ನೀವಾಗಿದ್ದಿರಿ ಮತ್ತು ಭರವಸೆ ಇಡಬಹುದಾದ ನಾಯಕರೂ ಆಗಿದ್ದಿರಿ. ನೋಟು ಅಪಮೌಲ್ಯದ ಸಂದರ್ಭದಲ್ಲೂ ನಾನು ನಿಮ್ಮ ಮೇಲೆ ಅತಿಯಾದ ಭರವಸೆ ಹೊಂದಿದ್ದೆ. ಆದರೆ, ನಂತರದಲ್ಲಿ ನಾನಿಟ್ಟಿದ್ದ ಭರವಸೆ ತಪ್ಪು ಎಂದು ಗೊತ್ತಾಯಿತು. ಮಾತ್ರವಲ್ಲ, ನೀವು ಕೂಡಾ ತಪ್ಪಾಗಿದ್ದೀರಿ ಎಂದು ಕಾಲವೇ ತಿಳಿಸಿತು.

ನಾನು ಈಗಲೂ ನಂಬಿರುವುದು ಏನೆಂದರೆ, ನೀವು ಈಗಲೂ 1.4 ಬಿಲಿಯನ್ ಭಾರತೀಯರ ನಾಯಕನಾಗಿದ್ದೀರಿ; ಅದರಲ್ಲೂ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಿಮ್ಮನ್ನು ನಿಜವಾಗಿಯೂ ಹಿಂಬಾಲಿಸುತ್ತಿರುವವರ ನಾಯಕನಾಗಿದ್ದೀರಿ ಎಂದು. ಜೊತೆಗೆ ಜಗತ್ತಿನಲ್ಲಿ ನಿಮ್ಮಂತಹ ಪ್ರಭಾವಿ ನಾಯಕ ಬೇರೆ ಯಾರೂ ಇಲ್ಲ ಎಂದೇ ಭಾವಿಸಿದ್ದೇನೆ ಕೂಡಾ. ನೀವು ಏನೇ ಹೇಳಿದರೂ, ಜನರು ಅದನ್ನು ಪಾಲಿಸುತ್ತಿದ್ದಾರೆ. ಇಂದಿಗೂ ಅದೆಷ್ಟರ ಮಟ್ಟಿಗೆ ನಿಮ್ಮ ಮೇಲೆ ನಂಬಿಕೆ ಇರಿಸಿದ್ದಾರೆ ಎಂದರೆ, ನೀವು ಚಪ್ಪಾಳೆ ತಟ್ಟಿ ಎಂದಾಗ, ಅಸಂಖ್ಯಾತ ಆರೋಗ್ಯ ಸಿಬ್ಬಂದಿಗಳಿಗೆ ದೇಶಾದ್ಯಂತ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಲಾಯಿತು. ನಾವು ನಿಮ್ಮ ವಿಚಾರ ಹಾಗೂ ಆದೇಶಗಳನ್ನು ಪಾಲಿಸಿದ್ದೇವೆ. ಆದರೆ, ನಮ್ಮ ಮಾತುಗಳು ಮಾತ್ರ ಕೇವಲ ನಮಗೆ ಮಾತ್ರ ಸೀಮಿತವಾಗಬಾರದಲ್ಲವೇ? ಜನರ ಜೊತೆ ಬೆರೆಯುವ ಒಬ್ಬ ನಾಯಕನಾಗಿ ನನ್ನಲ್ಲೂ ಕೆಲವು ಪ್ರಶ್ನೆಗಳಿವೆ.

ನನ್ನ ಆತಂಕವೇನೆಂದರೆ, ನೋಟು ಅಪಮೌಲ್ಯಗೊಳಿಸಿದ ಸಂದರ್ಭದಲ್ಲಾದ ಸಂಕಷ್ಟವು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಎದುರಾಗುವ ಸಾಧ್ಯತೆಯಿದೆ. ನೋಟು ಅಪಮೌಲ್ಯಗೊಳಿಸಿದ ಸಂದರ್ಭದಲ್ಲಿ ಅದು ಬಡಜನರ ಉಳಿತಾಯ ಮತ್ತು ಜೀವನೋಪಾಯದ ಮೇಲೆ ಭಾರೀ ಪರಿಣಾಮ ಬೀರಿತ್ತು. ಅಂತದ್ದೇ ಪರಿಸ್ಥಿತಿಯನ್ನು ನಾವೀಗ ಮತ್ತೆ ಎದುರು ನೋಡುತ್ತಿದ್ದೇವೆ. ಯೋಜನಾರಹಿತವಾದ ಈ ಲಾಕ್‌ಡೌನ್‌ನಿಂದಾಗಿ ಬಡಜನರು ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೂ, ಆ ಬಡಜನರಿಗೆ ನಿಮ್ಮ ಹೊರತು ಬೇರೆ ಯಾರೂ ಕಾಣುವುದಿಲ್ಲ. ಒಂದು ಕಡೆಯಲ್ಲಿ ನೀವು ಶ್ರೀಮಂತರಲ್ಲಿ ದೀಪ ಬೆಳಗಿಸುವಂತೆ ಮೂಲಕ ಅದ್ಬುತ ಚಿತ್ರವನ್ನು  ತೋರಿಸುತ್ತಿದ್ದರೆ, ಇನ್ನೊಂದೆಡೆ ಬಡವರ ದುಸ್ಥಿತಿಯ ನಾಚಿಕೆಗೇಡಿನ ಚಿತ್ರಣ ಕಾಣುವಂತಾಗಿದೆ. ಮಾತ್ರವಲ್ಲದೇ, ನಿಮ್ಮ ಜಗತ್ತಿಗೆ ಸೇರಿದವರು ಬಾಲ್ಕನಿಯಲ್ಲಿ ಎಣ್ಣೆ ಸುರಿದು ದೀಪ ಹಚ್ಚುವವುದರಲ್ಲಿ ನಿರತರಾಗಿದ್ದರೆ, ಅದೇ ಇನ್ನೊಂದು ಕಡೆಯಲ್ಲಿ ಬಡವರು ತಮ್ಮಲ್ಲಿ ಉಳಿದಿರುವ ಎಣ್ಣೆಯಲ್ಲಿ ಎಷ್ಟು ದಿನ ರೊಟ್ಟಿ ಬೇಯಿಸಬಹುದು ಎಂದು ಲೆಕ್ಕ ಹಾಕುತ್ತಿದ್ದಾರೆ.

ನಿಮ್ಮ ಹಿಂದಿನ ಎರಡು ಭಾಷಣಗಳಲ್ಲಿ ನೀವು ಅಗತ್ಯ ಸೌಕರ್ಯಗಳು ಬೇಕಿರುವ ಜನರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದೀರಿ. ಆದರೆ, ಅದಕ್ಕಿಂತಲೂ ಮುಖ್ಯವಾದ ಒಂದು ವಿಚಾರವಿದೆ. ನಿಮ್ಮ ಸೈಕೋಥೆರಪಿ ತಂತ್ರಗಾರಿಕೆಯ ಮಾತುಗಳು ಬಾಲ್ಕನಿ ಹೊಂದಿದ್ದು, ಅದರ ಮೇಲೆ ನಿಂತು ನಿಮಗೆ ಜಯಘೋಷ ಹಾಕುವವರ ಪ್ರಾಥಮಿಕ ಆತಂಕಗಳನ್ನು ದೂರ ಮಾಡಬಹುದು. ಆದರೆ, ತಲೆಯ ಮೇಲೆ ಸೂರೇ ಇಲ್ಲದವರ ಬಗ್ಗೆ ಆಲೋಚಿಸಿ. ನನಗೆ ಖಂಡಿತವಾಗಿಯೂ ಭರವಸೆಯಿದೆ, ನಿಮ್ಮದು ಕೇವಲ ಬಾಲ್ಕನಿ ಹೊಂದಿರುವವರ ಸರಕಾರವಾಗಿರಲಾರದು. ಬದಲಿಗೆ, ಈ ದೇಶದಲ್ಲಿ ವಾಸಿಸುವ ಬಾಲ್ಕನಿ ರಹಿತ ಬಹುದೊಡ್ಡ ಸಮಾಜದ ಸರಕಾರವೂ ಆಗುವುದು ಎಂದು ನಂಬಿದ್ದೇನೆ. ಈ ದೇಶದ ವ್ಯವಸ್ಥೆ ಹಾಗೂ ನಿರ್ಮಾಣವು ಮಧ್ಯಮ ವರ್ಗದವರಿಂದ ಆಗಿದೆ ಎಂಬುದೇನೋ ನಿಜ. ಸ್ಥಿತಿವಂತರು ಮತ್ತು ಶ್ರೀಮಂತರು ತಮ್ಮ ಬದುಕನ್ನು ಕಟ್ಟಿಕೊಳ್ಳಬಲ್ಲರು. ಆದರೆ, ಬಡವರ್ಗದ ಜನರು ಯಾವತ್ತೂ ಸಮಾಜದ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಲಾರರು. ಹಾಗೆಂದು, ದೇಶದ ಬೆಳವಣಿಗೆ ಮತ್ತು ಜಿಡಿಪಿಯಲ್ಲಿ ಅವರ ಪಾತ್ರವೇ ಇಲ್ಲ ಎಂದು ನಿರ್ಲಕ್ಷಿಸಲಾಗದು. ಕೆಳಸ್ತರವನ್ನು ನಾಶಗೊಳಿಸಲು ಹೊರಟರೆ, ಅದು ಮೇಲುಸ್ತರದ ವಿನಾಶಕ್ಕೂ ಕಾರಣವಾಗುತ್ತದೆ ಎಂಬುದನ್ನು ಇತಿಹಾಸ ತಿಳಿಸಿಕೊಟ್ಟಿದೆ. ಇದನ್ನು ವಿಜ್ಞಾನ ಕೂಡಾ ಒಪ್ಪುತ್ತದೆ!

ಆದರೆ, ಪ್ರಸ್ತುತ ಎದುರಾಗಿರುವ ಬಿಕ್ಕಟ್ಟು ಯಾರನ್ನೂ ಬಿಟ್ಟಿಲ್ಲ. ಸಮಾಜದ ಮೇಲ್ವರ್ಗದ ಜನರಿಂದ ಹಿಡಿದು ಕೆಳವರ್ಗದ ಜನರ ತನಕ ಅದು ಯಾರನ್ನೂ ಬಿಟ್ಟಿಲ್ಲ. ಆದುದರಿಂದ ಪ್ರತಿಯೊಬ್ಬರನ್ನೂ ಈ ಸಂಕಷ್ಟದಿಂದ ಪಾರುಮಾಡಬೇಕಿಗಿದೆ. ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ದಿನಗೂಲಿ ನೌಕರರು, ಬೀದಿಬದಿ ವ್ಯಾಪಾರಸ್ಥರು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಮತ್ತು ಅಸಹಾಯಕ ವಲಸೆ ಕಾರ್ಮಿಕರು ಇವರೆಲ್ಲರೂ ಸುರಂಗದ ಕೊನೆಯಲ್ಲಿ ಬೆಳಕು ಕಾಣುತ್ತದೆಯೋ ಎಂಬ ಹುಡುಕಾಟದಲ್ಲಿದ್ದರೆ, ನಾವು ಸುರಕ್ಷಿತವಾಗಿರುವ ಮಧ್ಯಮ ವರ್ಗವನ್ನಷ್ಟೇ ನೋಡುತ್ತಿದ್ದೇವೆ. ಅದನ್ನು ನಾನು ತಪ್ಪೆಂದು ಹೇಳಲಾರೆ. ಆದರೆ, ನನ್ನ ಕಾಳಜಿಯೆಂದರೆ, ಈ ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗುವ ಸ್ಥಿತಿ ಬರಕೂಡದು. ಕೋವಿಡ್‌-19ಗಿಂತಲೂ ಭವಿಷ್ಯದಲ್ಲಿ ಹಸಿವು, ಆಯಾಸ ಹಾಗೂ ಅಭಾವಗಳೇ (HED-20) ಹೆಚ್ಚಿನ ಸಂತ್ರಸ್ತರನ್ನು ಹುಟ್ಟು ಹಾಕಲಿವೆ.

ಪ್ರತೀ ಬಾರಿಯೂ ನೀವು ಚುನಾವಣಾ ಸಂದರ್ಭದಲ್ಲಿ ಮಾತನಾಡಿದಂತೆಯೇ ಮಾತನಾಡುತ್ತೀರಿ. ಆದುದರಿಂದ ನೀವು ನಾಗರಿಕರು ಹಾಗೂ ರಾಜ್ಯ ಸರಕಾರಗಳ ಮೇಲೆ ಜವಾಬ್ದಾರಿ ಹೊರಿಸಿ, ಈ ಮೂಲಕ ನೀವು ವರ್ತಮಾನ ಮತ್ತು ಭವಿಷ್ಯದ ದಿನಗಳನ್ನು ಚಾಣಕ್ಷತನದಿಂದ ಕಳೆಯಲು ಉದ್ದೇಶಿಸಿರುವಂತೆ ತೋರುತ್ತಿದೆ. ನೀವೇನಾದರೂ ನಿಮ್ಮನ್ನು ಹಾಗೂ ಸರಕಾರವನ್ನು ಚಾಣಕ್ಷ ಎಂದು ಕಲ್ಪಿಸಿಕೊಂಡಿದ್ದರೆ, ಕ್ಷಮಿಸಿ ಬಿಡಿ. ಪೆರಿಯಾರ್‌ ಹಾಗೂ ಗಾಂಧಿ ಅನುಯಾಯಿಯಾಗಿ ನಾನು ಚೆನ್ನಾಗಿ ಅರಿತಿದ್ದೇನೆ, ಅವರಷ್ಟು ಬುದ್ಧಿವಂತರು ಯಾರೂ ಇರಲಾರರು. ಅವರು ಈ ಸಮಾಜಕ್ಕೆ ನೀತಿ, ಸಮಾನತೆ ಮತ್ತು ಸಮೃದ್ಧಿಯನ್ನು ತೋರಿಸಿಕೊಟ್ಟವರು.

ಗೊತ್ತು ಗುರಿಯಿಲ್ಲದ ವಿಚಾರಗಳಿಂದಾಗಿ ಜೀವ ಉಳಿಸುವ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರ ಪರಿಣಾಮವಾಗಿ ಕಾನೂನು ಉಲ್ಲಂಘಿಸಿ ಗುಂಪು ಸೇರುವ ಮೂರ್ಖ ಜನರು, ರೋಗ ಹರಡಲೂ ಕಾರಣರಾಗುತ್ತಿದ್ದಾರೆ. ಇವರ ನಿರ್ಲಕ್ಷ್ಯದಿಂದ ಇತರರು ಪ್ರಾಣ ಕಳೆದುಕೊಂಡರೆ ಯಾರು ಹೊಣೆ?

ಚೀನಾ ಸರಕಾರ ವಿಶ್ವ ಆರೋಗ್ಯ ಸಂಸ್ಥೆಗೆ ಒದಗಿಸಿದ ಮಾಹಿತಿ ಪ್ರಕಾರ, ಡಿಸೆಂಬರ್‌ 8ನೇ ತಾರೀಕಿಗೆ ಚೀನಾದಲ್ಲಿ ಮೊದಲ ಕರೋನಾ ಸೋಂಕು ಪತ್ತೆಯಾಗಿತ್ತು. ಆದರೆ, ಜಗತ್ತಿಗೆ ಇದರ ಪರಿಣಾಮವನ್ನು ತಿಳಿದುಕೊಳ್ಳಲು ಸಮಯ ಬೇಕಾಯಿತು. ಭಾರತದಲ್ಲಿ ಜನವರಿ 30ಕ್ಕೆ ಪ್ರಥಮ ಸೋಂಕು ಪತ್ತೆಯಾಯಿತಾದರೂ ಇಟೆಲಿಯಲ್ಲಾದ ದುರಂತದವರೆಗೂ ನಾವು ಎಚ್ಚೆತ್ತುಕೊಂಡಿರಲಿಲ್ಲ. ಆದರೆ, ಮಾರ್ಚ್‌ 23ರಂದು ರಾತೋರಾತ್ರಿ ಮುಂದಿನ ನಾಲ್ಕು ಗಂಟೆಗಳೊಗಾಗಿ ದೇಶವನ್ನೇ ಲಾಕ್‌ಡೌನ್‌ ಮಾಡಲು ತಿಳಿಸಿದಿರಿ. ಆ ಆದೇಶವು 140 ಕೋಟಿ ಜನಸಂಖ್ಯೆ ಹೊಂದಿದ ಇಡೀ ದೇಶಕ್ಕೆ ಅನ್ವಯಿಸಿತ್ತು.

ಆದರೆ ಈ ಬಾರಿ ನೀವು ಈ ವಿಚಾರದಲ್ಲಿ ವಿಫಲರಾಗಿದ್ದೀರಿ ಎಂದು ಹೇಳಲು ನನಗೆ ವಿಷಾದವಿದೆ. ನಿಮ್ಮ ಸರಕಾರ ಹಾಗೂ ಸರಕಾರದ ಪ್ರತಿನಿಧಿಗಳು ಟೀಕೆಗಳಿಗೆ ಉತ್ತರಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಯಾರಾದರೂ ಮಾತನಾಡಿದರೆ ಅವರನ್ನು ಮೂದಲಿಸಿ ಟ್ರೋಲ್‌ ಮಾಡುವ ನಿಮ್ಮ ಪಡೆ ಅವರನ್ನು ʼದೇಶ ವಿರೋಧಿʼ ಎಂದು ಕರೆಯುತ್ತಿದೆ.

ಈ ಸಮಯದಲ್ಲಿ ನನ್ನನ್ನು ದೇಶ ವಿರೋಧಿ ಎಂದು ಕರೆಯಲಿ ಎಂದು ಅಂತವರಿಗೆಲ್ಲ ನಾನು ಬಹಿರಂಗವಾಗಿ ಸವಾಲು ಒಡ್ಡುತ್ತೇನೆ.  ಈ ಸಂಧಿಗ್ಧತೆಯಲ್ಲಿ ಸಾಮಾನ್ಯ ಜನರು ಸರಕಾರವನ್ನು ದೂರಲಾರರು. ಆದರೆ, ನೀವು ಅವರನ್ನು ದೂರುವಂತೆ ಮಾಡುತ್ತಿದ್ದೀರಿ. ಏಕೆಂದರೆ, ಜನರೂ ತಮ್ಮ ಸುರಕ್ಷಿತ ಜೀವನಕ್ಕಾಗಿಯೇ ಈ ಸರಕಾರವನ್ನು ಆಯ್ಕೆ ಮಾಡಿದ್ದಾರೆ ಮತ್ತು ಅವರು ಅದಕ್ಕಾಗಿ ಸರಕಾರಕ್ಕೆ ತೆರಿಗೆ ಪಾವತಿ ಮಾಡುವವರೂ ಆಗಿದ್ದಾರೆ.

ಸರ್‌, ಇದು ನಿಜಕ್ಕೂ ಕಾಳಜಿ ತೋರುವವರ ಮಾತುಗಳನ್ನೂ ಕೇಳಬೇಕಾದ ಸಮಯ. ನಾನೂ ಕಾಳಜಿ ವಹಿಸುತ್ತಿದ್ದೇನೆ. ಈ ಸಮಯದಲ್ಲಿ ಎಲ್ಲರನ್ನೂ ನೀವು ಸಹಾಯಕ್ಕಾಗಿ ಕೇಳಿಕೊಳ್ಳಬೇಕಿದೆ . ಈ ದೇಶದ ಬಹುದೊಡ್ಡ ಆಸ್ತಿಯೆಂದರೆ, ಈ ದೇಶದ ಮಾನವ ಸಾಮರ್ಥ್ಯ. ಈ ಹಿಂದೆಯೂ ನಾವು ದೊಡ್ಡ ದೊಡ್ಡ ಸಂಕಷ್ಟಗಳನ್ನು ಈ ಮೂಲಕ ಎದುರಿಸಿದ್ದೇವೆ. ಜೊತೆಗೆ ಎಲ್ಲರನ್ನೂ ಒಂದುಗೂಡಿಸಿ, ಯಾವುದೇ ಒಂದು ಕಡೆಗೆ ವಾಲದೆ ಸಮತೋಲನದಲ್ಲಿ ಇದ್ದರೆ, ಇದರಲ್ಲೂ ನಾವು ಜಯಗಳಿಸುತ್ತೇವೆ.

ನಿಮ್ಮ ಮೇಲೆ ಕೋಪವಿದೆ; ಆದರೂ, ನಿಮ್ಮ ಜೊತೆಗಿದ್ದೇನೆ.

ಜೈ ಹಿಂದ್.‌

ಕಮಲಹಾಸನ್‌,

ಅಧ್ಯಕ್ಷ, ಮಕ್ಕಳ್‌ ನೀದಿ ಮೈಯಾಮ್

ಸಂಗ್ರಹಾನುವಾದ: ನಿಖಿಲ್‌ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

    • ಜನಪರ ಮಾಧ್ಯಮವು ಜನರ ವಂತಿಗೆಯಿಂದಷ್ಟೇ ಬೆಳೆಯಲು ಸಾಧ್ಯ. ಉದಾರವಾಗಿ ವಂತಿಗೆ ನೀಡಿ.
      ಅಕೌಂಟ್ ವಿವರ:
      Account name: Gauri Media trust, Account number: 510101006500878 Bank: corporation bank, shrinivasa nagara bangalore. IFSC: CORP0000215

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...