Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಕೊನೆಯ ಭಾಗ; ಕ್ರಾಂತಿಕಾರಿ ವ್ಯಕ್ತಿಯ ಅವಿಧೇಯತೆಯ ಸಾಮರ್ಥ್ಯ

ಕ್ರಾಂತಿಕಾರಿ ಗುಣಸ್ವಭಾವ: ಕೊನೆಯ ಭಾಗ; ಕ್ರಾಂತಿಕಾರಿ ವ್ಯಕ್ತಿಯ ಅವಿಧೇಯತೆಯ ಸಾಮರ್ಥ್ಯ

- Advertisement -
- Advertisement -

ಕ್ರಾಂತಿಕಾರಿಯಲ್ಲದ ಗುಣಸ್ವಭಾವವು ಖಚಿತವಾಗಿ ಬಹುಸಂಖ್ಯಾತರು ಸಾರಿದ ವಿಷಯಗಳನ್ನು ನಂಬುವ ಮನೋಭಾವ ಹೊಂದಿರುತ್ತದೆ. ಆದರೆ, ವಿಮರ್ಶಾತ್ಮಕ ಮನಸ್ಥಿತಿ ಹೊಂದಿರುವ ವ್ಯಕ್ತಿಯು ಖಚಿತವಾಗಿ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುತ್ತಾನೆ. ಆತನು ಪೇಟೆಬೀದಿಯದ್ದಾದ ಬಹುಸಂಖ್ಯಾತರ, ಅಧಿಕಾರಸ್ಥರ ತೀರ್ಮಾನವನ್ನು ಕೇಳಿದಾಗ ಆತ ವಿಶೇಷವಾಗಿ ವಿಮರ್ಶಾತ್ಮಕವಾಗಿ ಇರುತ್ತಾನೆ. ಖಂಡಿತವಾಗಿಯೂ ತಾವು ಹೇಳಿಕೊಳ್ಳುವಂತೆ ಹೆಚ್ಚಿನವರು ನಿಜವಾದ ಕ್ರೈಸ್ತರೇ ಆಗಿದಿದ್ದಲ್ಲಿ, ಅವರಿಗೆ ಇಂಥ ಮನೋಭಾವವನ್ನು ಕಾದುಕೊಂಡು ಬರುವುದು ಕಷ್ಟವೇನೂ ಆಗುತ್ತಿರಲಿಲ್ಲ; ಯಾಕೆಂದರೆ, ಸ್ವೀಕೃತವಾದ ಮಾನದಂಡಗಳ ಕುರಿತು ಈ ವಿಮರ್ಶಾತ್ಮಕ ಮನೋಸ್ಥಿತಿಯೇ ಏಸುಕ್ರಿಸ್ತನದ್ದಾಗಿತ್ತು. ಈ ವಿಮರ್ಶಾತ್ಮಕ ಮನೋಸ್ಥಿತಿಯು ಸಾಕ್ರೆಟಿಸ್‌ನದ್ದು ಕೂಡಾ ಆಗಿತ್ತು. ಅದು ಪ್ರವಾದಿಗಳ ಮತ್ತು ಇಂದು ಒಂದಲ್ಲ ಒಂದು ರೀತಿಯಲ್ಲಿ ನಾವು ಆರಾಧಿಸುವ ಹಲವಾರು ಜನರ ಮನೋಸ್ಥಿತಿಯೂ ಆಗಿತ್ತು. ಅವರು ಸತ್ತು- ಸುರಕ್ಷಿತವೆನಿಸುವಷ್ಟು ಸಾಕಷ್ಟು ದೀರ್ಘಕಾಲವಾದ ಮೇಲೆ ಮಾತ್ರವೇ ಅವರನ್ನು ಸುರಕ್ಷಿತವಾಗಿ ಹೊಗಳಲು ಸಾಧ್ಯ.

“ವಿಮರ್ಶಾತ್ಮಕ ಮನಸ್ಥಿತಿ” ಎಂಬುದು ಕಾಮನ್ ಸೆನ್ಸ್ ಎಂದು ಕರೆಯಲಾಗುವ “ಸಾಮಾನ್ಯ ತಿಳಿವಳಿಕೆ”ಯೆಂಬ ಕ್ಲೀಷೆಯ ಕುರಿತು ಒಬ್ಬ ವ್ಯಕ್ತಿಯು ಸೂಕ್ಷ್ಮವಾಗಿರುವುದು. ಈ ಕಾಮನ್‌ಸೆನ್ಸ್ ಎಂಬುದು ಮತ್ತೆ ಮತ್ತೆ ಪುನರಾವರ್ತಿಸಲಾಗುವ ಅದೇ ಅಸಂಬದ್ಧ ವಿಷಯ. ಅದು ಕಾಮನ್‌ಸೆನ್ಸ್ ಎಂದು ಕರೆಯಲ್ಪಡುವುದು ಯಾಕೆ ಎಂದರೆ, ಪ್ರತಿಯೊಬ್ಬರೂ ಅದನ್ನು ಪುನರಾವರ್ತಿಸುತ್ತಲೇ ಇರುತ್ತಾರೆ. ಬಹುಶಃ ನಾನು ಹೇಳುತ್ತಿರುವ ವಿಮರ್ಶಾತ್ಮಕ ಮನಸ್ಥಿತಿಯೆಂಬುದು- ನೀವು ಅಷ್ಟೊಂದು ಸರಳವಾಗಿ ವ್ಯಾಖ್ಯಾನಿಸಬಹುದಾದ ವಿಷಯವೇನಲ್ಲ. ಆದರೆ, ಒಬ್ಬ ವ್ಯಕ್ತಿಯು ತನ್ನ ಕುರಿತೇ ಅಥವಾ ಇತರರ ಕುರಿತು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದರೆ, ಇಂತಹ ವಿಮರ್ಶಾತ್ಮಕ ಮನಸ್ಥಿತಿ ಹೊಂದಿರುವ ಮತ್ತು ಹೊಂದಿರದ ವ್ಯಕ್ತಿ ಯಾರು ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದು.

ಉದಾಹರಣೆಗೆ, ಎಷ್ಟೊಂದು ಲಕ್ಷ ಮಂದಿ ಅಣ್ವಸ್ತ್ರ ಪೈಪೋಟಿಯಿಂದ ಶಾಂತಿಯ ಸಾಧನೆಯಾಗುತ್ತದೆ ಎಂದು ನಿಜವಾಗಲೂ ನಂಬಿದ್ದಾರೆ? ಇದು ನಮ್ಮ ಈ ತನಕದ ಎಲ್ಲಾ ಅನುಭವಗಳಿಗೆ ವ್ಯತಿರಿಕ್ತವಾಗಿರುವಂತದ್ದು. ಯುನೈಟೆಡ್ ಸ್ಟೇಟ್ಸ್‌ನ ಬೃಹತ್ ಮೆಟ್ರೋಪಾಲಿಟನ್ ನಗರಗಳಲ್ಲಿ ಬಾಂಬ್ ಆಶ್ರಯತಾಣಗಳನ್ನು ಕಟ್ಟಲಾಗಿದ್ದರೂ, ಒಂದು ವೇಳೆ ಅಪಾಯದ ಸೈರನ್ ಮೊಳಗಿದರೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲೆವೆಂದು ಎಷ್ಟೊಂದು ಜನರು ನಂಬಿದ್ದಾರೆ!?

ತಮಗೆ ಹದಿನೈದು ನಿಮಿಷಗಳಿಗಿಂತ ಹೆಚ್ಚಿನ ಸಮಯ ಇರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆ ಹದಿನೈದು ನಿಮಿಷಗಳಲ್ಲಿ ಈ ಆಶ್ರಯತಾಣಗಳ ಬಾಗಿಲುಗಳ ತನಕ ಮುಟ್ಟುವ ಮೊದಲೇ ತಾನು ಕಾಲ್ತುಳಿತಕ್ಕೆ ಸಿಕ್ಕಿ ಸಾಯಬಹುದು ಎಂದು ಊಹಿಸಲು ಒಬ್ಬ ವ್ಯಕ್ತಿ ಅತಿ ಎಚ್ಚರವಾದಿಯಾಗಿರಬೇಕಿಲ್ಲ. ಹೀಗಿದ್ದರೂ, ನಮ್ಮ ಪ್ರಖ್ಯಾತ ಭೂಗತ ಆಶ್ರಯತಾಣಗಳು ತಮ್ಮನ್ನು 50 ಅಥವಾ 100 ಮೆಗಾ ಟನ್ ಬಾಂಬುಗಳಿಂದ ರಕ್ಷಿಸಬಹುದು ಎಂದು ಲಕ್ಷಾಂತರ ಜನರು ಸ್ಪಷ್ಟವಾಗಿಯೇ ನಂಬಿದ್ದಾರೆ. ಯಾಕೆ? ಯಾಕೆಂದರೆ, ಅವರು ವಿಮರ್ಶಾತ್ಮಕ ಮನಸ್ಥಿತಿಯವರಲ್ಲ. ಒಬ್ಬ ಐದು ವರ್ಷ ಪ್ರಾಯದ ಹುಡುಗನಿಗೆ (ಆ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ವಯಸ್ಕರಿಗಿಂತ ಹೆಚ್ಚಿನ ವಿಮರ್ಶಾತ್ಮಕ ಮನೋಭಾವ ಹೊಂದಿರುತ್ತಾರೆ) ಇದೇ ಕತೆಯನ್ನು ಹೇಳಿದರೆ, ಬಹುಶಃ ಆತ ಅದನ್ನು ಪ್ರಶ್ನಿಸಬಹುದು. ಹೆಚ್ಚಿನ ವಯಸ್ಕರು ವಿಮರ್ಶಾತ್ಮಕ ಮನಸ್ಥಿತಿ ಹೊಂದಿರದಂತೆ ಸಾಕಷ್ಟು “ಶಿಕ್ಷಿತ”ರಾಗಿರುತ್ತಾರೆ ಮತ್ತು ಆದುದರಿಂದಲೇ ಶುದ್ಧ ಅವಿವೇಕವನ್ನು- “ವಿವೇಕ ಅಥವಾ ಸಾಮಾನ್ಯ ತಿಳುವಳಿಕೆ” ಎಂದು ನಂಬಿರುತ್ತಾರೆ.

ವಿಮರ್ಶಾತ್ಮಕ ಮನಸ್ಥಿತಿ ಹೊಂದಿರುವ ಜೊತೆಗೆಯೇ ಕ್ರಾಂತಿಕಾರಿ ಗುಣಸ್ವಭಾವವು ಇನ್ನೊಂದು ಅರ್ಥದಲ್ಲಿ- ಅಧಿಕಾರದ ಜೊತೆಗೆ ನಿರ್ದಿಷ್ಟವಾದ ಸಂಬಂಧವನ್ನು ಹೊಂದಿರುತ್ತದೆ. ಆತನು- ಅಧಿಕಾರವು ನಿಮ್ಮನ್ನು ಕೊಲ್ಲಬಹುದು, ಒತ್ತಾಯಿಸಬಹುದು, ಯಾವುದನ್ನಾದರೂ ನಿಮಗೆ ಅನಿವಾರ್ಯಗೊಳಿಸಬಹುದು, ನಿಮ್ಮನ್ನು ತಿರುಚಲೂಬಹುದು ಎಂದು ತಿಳಿಯದಿರುವ ಕನಸುಗಾರನಲ್ಲ. ಆತನಿಗೆ ಅಧಿಕಾರದ ಜೊತೆಗೆ ಬೇರೊಂದು ರೀತಿಯ ನಿರ್ದಿಷ್ಟ ಸಂಬಂಧವಿರುತ್ತದೆ; ಅವನಿಗೆ ಅಧಿಕಾರವೆಂಬುದು ಯಾವತ್ತಿಗೂ ಪವಿತ್ರ ಅಥವಾ ಪೂಜನೀಯವಲ್ಲ, ಅದು ಎಂದೆಂದಿಗೂ ಸತ್ಯದ, ನೈತಿಕವಾದ ಅಥವಾ ಒಳ್ಳೆತನದ ಪಾತ್ರವನ್ನು ವಹಿಸುವುದಿಲ್ಲ. ಇದೊಂದೇ ಇಂದಿನ ಅತ್ಯಂತ ದೊಡ್ಡ ಸಮಸ್ಯೆ ಎನ್ನಲಾಗದಿದ್ದರೂ, ಅತ್ಯಂತ ಮಹತ್ವದ ಸಮಸ್ಯೆಗಳಲ್ಲಿ ಒಂದು: ಅದೆಂದರೆ, ಅಧಿಕಾರದ ಜೊತೆಗೆ ವ್ಯಕ್ತಿಗಳ ಸಂಬಂಧ. ಇದು ಅಧಿಕಾರ ಎಂದರೆ ಏನು ಎಂದು ತಿಳಿದಿರುವ ಪ್ರಶ್ನೆಯಲ್ಲ. ಅಥವಾ ಅಧಿಕಾರದ ಪಾತ್ರ ಮತ್ತು ಕಾರ್ಯಗಳನ್ನು ಕೀಳಂದಾಜು ಮಾಡುವ ವಾಸ್ತವಿಕತೆಯ ಕೊರತೆಯ ಸಮಸ್ಯೆ ಕೂಡಾ ಅಲ್ಲ. ಇದು ಅಧಿಕಾರವನ್ನು ಪವಿತ್ರ, ಪೂಜನೀಯ ಸ್ಥಾನದಲ್ಲಿ ಇರಿಸಲಾಗಿದೆಯೇ, ಅಥವಾ ಒಬ್ಬ ವ್ಯಕ್ತಿ ಅಧಿಕಾರದಿಂದ ನೈತಿಕವಾಗಿ ಪ್ರಭಾವಿತನಾಗಿದ್ದಾನೆಯೇ ಎಂಬ ಪ್ರಶ್ನೆ. ಅಧಿಕಾರದಿಂದ ನೈತಿಕವಾಗಿ ಪ್ರಭಾವಿತನಾದ ವ್ಯಕ್ತಿ ಯಾವತ್ತೂ ವಿಮರ್ಶಾತ್ಮಕ ಮನಸ್ಥಿತಿ ಹೊಂದಿರುವುದು ಸಾಧ್ಯವಿಲ್ಲ; ಆತನು ಯಾವತ್ತೂ ಕ್ರಾಂತಿಕಾರಿ ಗುಣಸ್ವಭಾವದ ವ್ಯಕ್ತಿಯಲ್ಲ.

ಕ್ರಾಂತಿಕಾರಿ ಗುಣಸ್ವಭಾವವು “ಇಲ್ಲ/ಬೇಡ/ಆಗದು” ಎನ್ನಲು ಶಕ್ತವಾಗಿರುತ್ತದೆ.

ಬೇರೆಯೇ ರೀತಿಯಲ್ಲಿ ಹೇಳುವುದಾದರೆ, ಕ್ರಾಂತಿಕಾರಿ ಗುಣಸ್ವಭಾವದ ವ್ಯಕ್ತಿಯು ಅವಿಧೇಯತೆಯ ಸಾಮರ್ಥ್ಯ ಹೊಂದಿರುತ್ತಾನೆ. ಅವಿಧೇಯತೆಯನ್ನು ಒಂದು ಸದ್ಗುಣವನ್ನಾಗಿಸಿಕೊಳ್ಳುವ ವ್ಯಕ್ತಿ ಆತ. ಇದನ್ನು ವಿವರಿಸಲು- ಒಂದು ಸಾಮಾನ್ಯೀಕರಣಗೊಳಿಸಿದ ಅಥವಾ ವಿಶಾಲಾರ್ಥ ಹೊಂದಿರುವಂತದ್ದು ಎಂದು ಕಾಣಬಹುದಾದ ಹೇಳಿಕೆಯಿಂದ ನಾನು ಆರಂಭಿಸಬಹುದು: ಮಾನವ ಇತಿಹಾಸವು ಒಂದು ಅವಿಧೇಯತೆಯ ಕೃತ್ಯದಿಂದ ಆರಂಭವಾಯಿತು ಮತ್ತು ಒಂದು ವಿಧೇಯತೆಯ ಕೃತ್ಯದಿಂದ ಕೊನೆಗೊಳ್ಳಬಹುದು. ನಾನು ಹೀಗೆ ಹೇಳುತ್ತಿರುವುದರ ಅರ್ಥವೇನು? ಇತಿಹಾಸವು ಒಂದು ಅವಿಧೇಯತೆಯ ಕೃತ್ಯದಿಂದ ಆರಂಭವಾಯಿತು ಎಂದು ಹೇಳುವಾಗ ನಾನು- ಹೀಬ್ರೂ ಮತ್ತು ಗ್ರೀಕ್ ಪುರಾಣವನ್ನು ಉಲ್ಲೇಖಿಸುತ್ತಿದ್ದೇನೆ. ಆಡಂ ಮತ್ತು ಈವ್‌ರ ಕತೆಯಲ್ಲಿ ಹಣ್ಣನ್ನು ತಿನ್ನಬಾರದು ಎಂಬ ದೇವರ ಆಜ್ಞೆಯೊಂದಿದೆ. ಮನುಷ್ಯನು- ನ್ಯಾಯವಾಗಿ ಹೇಳುವುದಾದಲ್ಲಿ- ಒಬ್ಬಳು ಹೆಣ್ಣು- “ಇಲ್ಲ/ಆಗದು” ಎಂದು ಹೇಳಲು ಶಕ್ತಳಾಗಿದ್ದಾಳೆ. ಅವಳು ಅವಿಧೇಯತೆ ತೋರಿಸುವುದು ಮಾತ್ರವೇ ಅಲ್ಲದೇ, ತನ್ನ ಅವಿಧೇಯತೆಯನ್ನು ಗಂಡು ಕೂಡಾ ಹಂಚಿಕೊಳ್ಳುವಂತೆ ಮನವೊಲಿಸುವ ಸಾಮರ್ಥ್ಯ ಹೊಂದಿದ್ದಾಳೆ. ಅದರ ಪರಿಣಾಮವೇನು? ಮಾನವನನ್ನು ಸ್ವರ್ಗದಿಂದ ಓಡಿಸಲಾಯಿತು. ಅದರ ಅರ್ಥವೆಂದರೆ, ವೈಯಕ್ತಿಕತೆಯ ಪೂರ್ವದ, ಪ್ರಜ್ಞಾಪೂರ್ವದ, ಇತಿಹಾಸಪೂರ್ವದ, ನೀವು ಬಯಸಿದಲ್ಲಿ ಮಾನವಪೂರ್ವದ ಪರಿಸ್ಥಿತಿಯಿಂದ ಮನುಷ್ಯನನ್ನು ಓಡಿಸಲಾಯಿತು. ತಾಯಿಯ ಗರ್ಭದಲ್ಲಿ ಇರುವ ಭ್ರೂಣಕ್ಕೆ ಹೋಲಿಸಬಹುದಾದ ಪರಿಸ್ಥಿತಿಯದು. ಅಂದರೆ, ಆತನನ್ನು ಇತಿಹಾಸದ ಹಾದಿಯಲ್ಲಿ ಹೊರಗೆ ಓಡಿಸಲಾಯಿತು.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

ಪುರಾಣದ ಭಾಷೆಯಲ್ಲಿ- ಆತನಿಗೆ ಮತ್ತೆಂದೂ ಮರಳುವ ಅನುಮತಿಯಿಲ್ಲ. ವಾಸ್ತವದಲ್ಲಿ ಅವನೆಂದೂ ಮರಳಲು ಅಶಕ್ತ. ಯಾಕೆಂದರೆ, ಒಮ್ಮೆ ಆತನಲ್ಲಿ ತನ್ನತನ ಜಾಗೃತವಾದ ಮೇಲೆ, ತಾನು ಇತರ ಮಾನವನಿಗಿಂತ ಬೇರೆ, ಪ್ರಕೃತಿಯಿಂದ ಬೇರೆ ಎಂದು ಅರಿತುಕೊಂಡ ಮೇಲೆ- ತನಗೆ ತಿಳಿವಳಿಕೆ ಮೂಡುವುದಕ್ಕಿಂತಲೂ ಮೊದಲೇ ಅಸ್ತಿತ್ವದಲ್ಲಿದ್ದ ಆದಿಸ್ವರೂಪದ ಸಾಮರಸ್ಯಕ್ಕೆ ಮರಳುವುದು ಮಾನವನಿಗೆ ಸಾಧ್ಯವಿಲ್ಲ. ಈ ಮೊದಲ ಅವಿಧೇಯತೆಯ ಕೃತ್ಯದಿಂದ ಮಾನವನ ಇತಿಹಾಸವು ಆರಂಭವಾಗುತ್ತದೆ ಮತ್ತು ಈ ಮೊದಲ ಅವಿಧೇಯತೆಯ ಕೃತ್ಯವೇ ಆತನ ಮೊದಲ ಸ್ವಾತಂತ್ರ್ಯದ ಕೃತ್ಯವಾಗಿದೆ.

ಗ್ರೀಕರು ಬೇರೆಯೇ ಸಂಕೇತಗಳನ್ನು ಬಳಸಿದರು. ಅದು ಪ್ರೊಮೆಥಿಯಸ್ (Prometheus)ನ ಸಂಕೇತ. ದೇವತೆಗಳಿಂದ ಬೆಂಕಿಯನ್ನು ಕದ್ದು ಅಪರಾಧ ಕೃತ್ಯವೊಂದನ್ನು ಮಾಡಿದವನು ಪ್ರೊಮೆಥಿಯಸ್. ಅವನು ಒಂದು ಅವಿಧೇಯತೆಯ ಕೃತ್ಯವನ್ನು ಮಾಡುತ್ತಾನೆ. ಅವನು ಮಾನವನಿಗೆ ಬೆಂಕಿಯನ್ನು ಕೊಡುತ್ತಾನೆ ಮತ್ತು ಮಾನವನ ಇತಿಹಾಸ ಅಥವಾ ನಾಗರಿಕತೆ ಆರಂಭವಾಗುತ್ತದೆ. ಹೀಬ್ರೂ ಮತ್ತು ಗ್ರೀಕ್ ಪುರಾಣಗಳೆರಡೂ ಮಾನವ ಪ್ರಯತ್ನ ಮತ್ತು ಇತಿಹಾಸ ಒಂದು ಅವಿಧೇಯತೆಯ ಕೃತ್ಯದಿಂದ ಆರಂಭವಾಯಿತು ಎಂದು ಕಲಿಸುತ್ತವೆ.

ಮಾನವನ ಇತಿಹಾಸವು ಒಂದು ವಿಧೇಯತೆಯ ಕೃತ್ಯದಿಂದಲೇ ಕೊನೆಗೊಳ್ಳಬಹುದು ಎಂದು ನಾನು ಯಾಕೆ ಹೇಳುತ್ತಿದ್ದೇನೆ? ಇಲ್ಲಿ ನಾನು ದುರದೃಷ್ಟವಶಾತ್ ಪೌರಾಣಿಕವಾಗಿ ಮಾತನಾಡುತ್ತಿಲ್ಲ; ಆದರೆ, ಬಹಳ ವಾಸ್ತವಿಕವಾಗಿ ಮಾತನಾಡುತ್ತಿದ್ದೇನೆ. ಎರಡು ಮೂರು ವರ್ಷಗಳ ಅವಧಿಯಲ್ಲಿ ಅಣುಯುದ್ಧವೊಂದು ಮಾನವ ಜನಸಂಖ್ಯೆಯ ಅರ್ಧದಷ್ಟನ್ನು ನಾಶಪಡಿಸಿದರೆ- ಜಗತ್ತನ್ನು ಸಂಪೂರ್ಣ ಅನಾಗರಿಕತೆಯ ಯುಗಕ್ಕೆ ತಳ್ಳಿದರೆ, ಅಥವಾ ಹತ್ತು ವರ್ಷಗಳ ನಂತರ ಇದು ನಡೆದು, ಬಹುಶಃ ಈ ಭೂಮಿಯ ಜೀವಸಂಕುಲವನ್ನು ಸಂಪೂರ್ಣವಾಗಿ ನಾಶ ಮಾಡಿದರೆ- ಇದು ಒಂದು ವಿಧೇಯತೆಯ ಕೃತ್ಯದಿಂದ ಆಗಿರುತ್ತದೆ. ಅದೆಂದರೆ, ಗುಂಡಿ ಒತ್ತುವ ಮನುಷ್ಯರಿಂದ ಹಿಡಿದು, ಆ ಆದೇಶ ನೀಡುವ ಮನುಷ್ಯನ ವಿಧೇಯತೆಯಿಂದ. ಮತ್ತು ಸಿದ್ಧಾಂತಗಳಿಗೆ ವಿಧೇಯತೆ ಕೂಡಾ ಈ ಮಟ್ಟದ ಹುಚ್ಚುತನದ ಯೋಚನೆಯನ್ನು ಸಾಧ್ಯಮಾಡುತ್ತದೆ.

ಅವಿಧೇಯತೆಯು ಒಂದು ದ್ವಂದ್ವಾತ್ಮಕವಾದ ಪರಿಕಲ್ಪನೆ; ಯಾಕೆಂದರೆ, ಅವಿಧೇಯತೆಯ ಪ್ರತಿಯೊಂದು ಕೃತ್ಯವೂ ಒಂದು ವಿಧೇಯತೆಯ ಕೃತ್ಯವೂ ಆಗಿರುತ್ತದೆ; ಹಾಗೆಯೇ ವಿಧೇಯತೆಯ ಪ್ರತಿಯೊಂದು ಕೃತ್ಯವೂ ಒಂದು ಅವಿಧೇಯತೆಯ ಕೃತ್ಯವೂ ಆಗಿರುತ್ತದೆ. ಹೀಗೆ ಹೇಳುವಾಗ ನನ್ನ ಅರ್ಥ ಏನು? ಪ್ರತಿಯೊಂದು ಅವಿಧೇಯತೆಯು, ಟೊಳ್ಳು ಬಂಡುಕೋರತನ ಆಗಿರದಿದ್ದಲ್ಲಿ, ಅದು ಇನ್ನೊಂದು ಸಿದ್ಧಾಂತಕ್ಕೆ ವಿಧೇಯತೆಯಾಗಿರುತ್ತದೆ. ನಾನು ಮೂರ್ತಿಗಳಿಗೆ ಅವಿಧೇಯ; ಯಾಕೆಂದರೆ, ನಾನು ದೇವರಿಗೆ ವಿಧೇಯ. ನಾನು ಸೀಝರ್‌ನಿಗೆ (ಅಥವಾ ರಾಜನಿಗೆ) ಅವಿಧೇಯ; ಯಾಕೆಂದರೆ, ನಾನು ದೇವರಿಗೆ ವಿಧೇಯ. ಧಾರ್ಮಿಕವಲ್ಲದ ನುಡಿಗಟ್ಟಿನಲ್ಲಿ ಹೇಳುವುದಾದರೆ, ನಾನು ತತ್ವಗಳಿಗೆ ಮತ್ತು ಮೌಲ್ಯಗಳಿಗೆ, ನನ್ನ ಆತ್ಮಸಾಕ್ಷಿಗೆ ವಿಧೇಯ; ನಾನು ಪ್ರಭುತ್ವಕ್ಕೆ ಅವಿಧೇಯನಾಗಿರಬಹುದು; ಯಾಕೆಂದರೆ, ನಾನು ಮಾನವೀಯತೆಯ ನಿಯಮಗಳಿಗೆ ವಿಧೇಯ. ಮತ್ತೆ ನಾನು ಯಾವುದಕ್ಕಾದರೂ ವಿಧೇಯನಾಗಿದ್ದರೆ, ಖಂಡಿತವಾಗಿಯೂ ನಾನು ಯಾವತ್ತೂ ಬೇರೆ ಯಾವುದಕ್ಕಾದರೂ ಅವಿಧೇಯ. ಈ ಪ್ರಶ್ನೆಯು ನಿಜವಾಗಿಯೂ ಅವಿಧೇಯತೆ ಅಥವಾ ವಿಧೇಯತೆಯದ್ದಲ್ಲ; ಬದಲಾಗಿ, ಅವಿಧೇಯತೆ ಅಥವಾ ವಿಧೇಯತೆಯು ಯಾಕೆ ಮತ್ತು ಯಾರಿಗೆ ಎಂಬುದರ ಕುರಿತಾದದ್ದು. ನಾನೀಗ ಹೇಳಿರುವುದರ ಅರ್ಥವೇನಾಗುತ್ತದೆ ಎಂದರೆ, ಕ್ರಾಂತಿಕಾರಿ ಗುಣಸ್ವಭಾವ ಎಂಬುದು- ನಾನು ಈ ಪದವನ್ನು ಬಳಸುತ್ತಿರುವ ಅರ್ಥದಲ್ಲಿ- ಅದು ಕೇವಲ ರಾಜಕೀಯದಲ್ಲಿ ಮಾತ್ರ ಸ್ಥಾನ ಹೊಂದಿರುವ ಗುಣಸ್ವಭಾವಗಳ ಒಂದು ಬಗೆಯಾಗಿರಬೇಕಾದ ಅಗತ್ಯವಿಲ್ಲ.

ಕ್ರಾಂತಿಕಾರಿ ಗುಣಸ್ವಭಾವವು ರಾಜಕೀಯದಲ್ಲಿ ಖಂಡಿತವಾಗಿಯೂ ಇದೆ. ಅದರೆ ಅದು- ಧರ್ಮದಲ್ಲಿ, ಕಲೆಯಲ್ಲಿ ಮತ್ತು ತತ್ವಶಾಸ್ತ್ರದಲ್ಲಿಯೂ ಇದೆ. ಬುದ್ಧ, ಪ್ರವಾದಿಗಳು, ಏಸುಕ್ರಿಸ್ತ, ಜಿಯೋರ್ಡಾನೊ ಬ್ರೂನೊ, ಮೆಯಿಸ್ಟರ್ ಎಕ್‌ಹಾರ್ಟ್, ಗೆಲಿಲಿಯೋ, ಮಾರ್ಕ್ಸ್ ಮತ್ತು ಎಂಗೆಲ್ಸ್, ಐನ್‌ಸ್ಟೀನ್, ಷ್ವಿಟ್ಸರ್, ರಸೆಲ್- ಇವರೆಲ್ಲರೂ ಕ್ರಾಂತಿಕಾರಿ ಗುಣಸ್ವಭಾವದ ವ್ಯಕ್ತಿಗಳು. ವಾಸ್ತವದಲ್ಲಿ ಕ್ರಾಂತಿಕಾರಿ ಗುಣಸ್ವಭಾವವನ್ನು ಮೇಲಿನ ಯಾವುದೇ ಕ್ಷೇತ್ರಕ್ಕೆ ಸೇರಿರದವರಲ್ಲಿಯೂ ನೀವು ಕಾಣಬಹುದು: ಯಾವ ವ್ಯಕ್ತಿಗೆ “ಹೌದು” ಎಂಬುದು “ಹೌದು” ಮತ್ತು “ಇಲ್ಲ” ಎಂಬುದು “ಇಲ್ಲ” ಆಗಿರುತ್ತದೋ ಆತ. ಚಕ್ರವರ್ತಿಯ ಬಟ್ಟೆ ಎಂಬ ಆಂಡರ್ಸನ್‌ನ ಯಕ್ಷಕತೆಯಲ್ಲಿ ಬರುವ ಪುಟ್ಟ ಹುಡುಗನ ಹಾಗೆ ವಾಸ್ತವವನ್ನು ನೋಡಲು ಶಕ್ತನಾಗಿರುವ ವ್ಯಕ್ತಿ. ಆ ಹುಡುಗ ಚಕ್ರವರ್ತಿಯು ಬೆತ್ತಲೆಯಾಗಿ ಇರುವುದನ್ನು ನೋಡಿದ ಮತ್ತು ಅದನ್ನು ಹೇಳಿದ. ಮತ್ತು ಅವನು ಏನು ಹೇಳಿದ್ದನೋ ಅದು, ತಾನು ನೋಡಿದ್ದಕ್ಕೆ ನಿಷ್ಟವಾಗಿತ್ತು.

ಹತ್ತೊಂಬತ್ತನೆಯ ಶತಮಾನ ಬಹುಶಃ ಅವಿಧೇಯತೆಯನ್ನು ಗುರುತಿಸಲು ಸುಲಭವಾದ ಅವಧಿಯಾಗಿತ್ತು. ಯಾಕೆಂದರೆ, ಹತ್ತೊಂಬತ್ತನೆಯ ಶತಮಾನವು ಕುಟುಂಬದಲ್ಲಾಗಿರಲೀ, ಪ್ರಭುತ್ವದಲ್ಲಾಗಿರಲೀ ಅತಿಯಾದ ಅಧಿಕಾರ ಎದ್ದುಕಾಣುತ್ತಿದ್ದ ಕಾಲವಾಗಿತ್ತು. ಆದುದರಿಂದ ಕ್ರಾಂತಿಕಾರಿ ಗುಣಸ್ವಭಾವಕ್ಕೆ ಆಗ ಸ್ಥಾನವಿತ್ತು. ಇಪ್ಪತ್ತನೆಯ ಶತಮಾನವು ತೀರಾ ಭಿನ್ನವಾದ ಅವಧಿ. ಸಾಂಸ್ಥಿಕ ಮನುಷ್ಯನನ್ನು ನಿರ್ಮಿಸುವ ಆಧುನಿಕ ಕೈಗಾರಿಕಾ ವ್ಯವಸ್ಥೆಯ ಶತಮಾನ ಇದು; ತಮಗೆ ಅಧೀನರಾಗಿರುವವರು ಅಡೆತಡೆಯಿಲ್ಲದೆ ನಯವಾಗಿ ಕೆಲಸಮಾಡಬೇಕೆಂದು ಬಯಸುವ ವಿಶಾಲವಾದ ಅಧಿಕಾರಶಾಹಿ ವ್ಯವಸ್ಥೆಯಿದು. ಆದರೆ, ಇದನ್ನು ಬಲಪ್ರಯೋಗಕ್ಕಿಂತ ಹೆಚ್ಚಾಗಿ ಕುಶಲೋಪಾಯದಿಂದ ಮಾಡಲಾಗುತ್ತದೆ. ಈ ಅಧಿಕಾರಶಾಹಿಯ ವ್ಯವಸ್ಥಾಪಕರು- ತಮ್ಮ ಆಜ್ಞೆ, ಆದೇಶಗಳಿಗೆ ಅಧೀನತೆಯು ಸ್ವಯಂಸ್ಫೂರ್ತಿಯದ್ದು ಎಂದು ಹೇಳಿಕೊಳ್ಳುತ್ತಾರೆ ಮತ್ತು ವಿಶೇಷವಾಗಿ, ತಾವು ಕೊಡಮಾಡುವ ಭೌತಿಕ ತೃಪ್ತಿಯ ಪ್ರಮಾಣದಿಂದ, ನಾವು ಮಾಡಬೇಕಿರುವುದನ್ನು ನಾವು ಇಷ್ಟದಿಂದಲೇ ಮಾಡುತ್ತಿದ್ದೇವೆ ಎಂದು ನಂಬಿಸಲು ಬಯಸುತ್ತಾರೆ.

ಸಾಂಸ್ಥಿಕ ಮನುಷ್ಯನು ಅವಿಧೇಯತೆ ತೋರುವವನಲ್ಲ; ಅವನಿಗೆ ತಾನು ವಿಧೇಯನಾಗಿದ್ದೇನೆ ಎಂಬುದು ಕೂಡಾ ಗೊತ್ತಿರುವುದಿಲ್ಲ. ತಾನು ವಿಧೇಯನಾಗಿರುವುದರ ಪ್ರಜ್ಞೆಯೇ ಇರದಿರುವಾಗ, ಆತ ಅವಿಧೇಯತೆಯ ಕುರಿತು ಚಿಂತಿಸುವುದಾದರೂ ಹೇಗೆ ಸಾಧ್ಯ? ಆತ ಕೇವಲ ಎಲ್ಲ “ಹುಡುಗ”ರಲ್ಲಿ ಒಬ್ಬ. ಗುಂಪಿನಲ್ಲಿ ಗೋವಿಂದ. ಅವನು “ಸ್ವಸ್ಥ” (sound). ಅದು ತನ್ನನ್ನು, ತನ್ನ ಮಕ್ಕಳನ್ನು, ಮೊಮ್ಮಕ್ಕಳನ್ನು ಕೊಲ್ಲುತ್ತಿದ್ದರೂ, ಆತ “ಸಮಂಜಸ”ವಾದುದನ್ನೇ ಮಾಡುತ್ತಿದ್ದಾನೆ ಮತ್ತು ಹಾಗೆ ಚಿಂತಿಸುತ್ತಾನೆ. ಆದುದರಿಂದ, ಸಮಕಾಲೀನ ಅಧಿಕಾರಶಾಹಿ ಕೈಗಾರಿಕಾ ಯುಗದಲ್ಲಿ ಅವಿಧೇಯನಾಗುವುದು, ಅಥವಾ ಕ್ರಾಂತಿಕಾರಿ ಗುಣಸ್ವಭಾವ ಬೆಳೆಸಿಕೊಳ್ಳುವುದು ಒಬ್ಬ ಮನುಷ್ಯನಿಗೆ ಹತ್ತೊಂಬತ್ತನೆಯ ಶತಮಾನದ ಮನುಷ್ಯನಿಗೆ ಇದ್ದುದಕ್ಕಿಂತ ಇನ್ನಷ್ಟೂ ಹೆಚ್ಚು ಕಷ್ಟ.

ಇದನ್ನೂ ಓದಿ: ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ನಾವಿಂದು ಬ್ಯಾಲೆನ್ಸ್ ಶೀಟುಗಳ ತರ್ಕ, ವಸ್ತುಗಳ ಉತ್ಪಾದನೆಯ ತರ್ಕಗಳ ಯುಗದಲ್ಲಿ ಬದುಕುತ್ತಿದ್ದು, ಅವುಗಳನ್ನು ಈಗ ಮಾನವ ಜೀವಿಯ ಬದುಕಿಗೂ ವಿಸ್ತರಿಸಲಾಗಿದೆ. ವಸ್ತುಗಳು ಸಂಖ್ಯೆಗಳಾಗಿರುವಂತೆಯೇ, ಮಾನವ ಜೀವಿಗಳು ಕೂಡಾ ಬರೇ ಸಂಖ್ಯೆಗಳಾಗಿದ್ದಾರೆ. ವಸ್ತುಗಳು ಮತ್ತು ಮನುಷ್ಯರು ಉತ್ಪಾದನಾ ಪ್ರಕ್ರಿಯೆಯಲ್ಲಿ ಬರೇ ಅಳತೆ-ಪ್ರಮಾಣಗಳಾಗಿದ್ದಾರೆ.

ಮತ್ತೆ ಹೇಳಬೇಕೆಂದರೆ: ತಾನು ವಿಧೇಯ, ಅಧೀನನಾಗಿದ್ದೇನೆ ಎಂದು ಕೂಡಾ ಗೊತ್ತಿಲ್ಲದೇ ಇರುವಾಗ ಅವಿಧೇಯನಾಗುವುದು ತುಂಬಾ ಕಷ್ಟ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಇಲೆಕ್ಟ್ರಾನಿಕ್ ಕಂಪ್ಯೂಟರಿಗೆ ಅವಿಧೇಯನಾಗುವುದು ಯಾರಿಗೆ ಸಾಧ್ಯ? ಇಚ್ಚೆಯಾಗಲೀ, ಭಾವನೆಯಾಗಲೀ, ಉತ್ಕಟತೆಯಾಗಲೀ ಇಲ್ಲದ- ಒಂದು ಇಲೆಕ್ಟ್ರಾನಿಕ್ ಕಂಪ್ಯೂಟರಿನಂತೆ ವರ್ತಿಸುವುದೇ ಆದರ್ಶವಾಗಿರುವಂತಾ ರೀತಿಯ ತತ್ವಜ್ಞಾನಕ್ಕೆ ನಾವು “ಇಲ್ಲ/ಬೇಡ/ಆಗದು” ಎಂದು ಹೇಳುವುದು ಹೇಗೆ?

ವಿಧೇಯತೆಯು ಇಂದು ವಿಧೇಯತೆಯಾಗಿ ಗುರುತಿಸಲ್ಪಡುವುದಿಲ್ಲ. ಯಾಕೆಂದರೆ, ಅದನ್ನು ಸಾಮಾನ್ಯ ತಿಳುವಳಿಕೆ ಅಥವಾ “ಕಾಮನ್ ಸೆನ್ಸ್” ಎಂದು ತಾರ್ಕಿಕಗೊಳಿಸಲಾಗಿದೆ; ಅದನ್ನು ವಸ್ತುನಿಷ್ಟ ಅಗತ್ಯಗಳನ್ನು ಅಥವಾ ಅನಿವಾರ್ಯತೆಗಳನ್ನು ಸ್ವೀಕರಿಸುವ ಒಂದು ವಿಷಯವನ್ನಾಗಿ ಮಾಡಲಾಗಿದೆ. ಪೂರ್ವದಲ್ಲಾಗಲೀ, ಪಶ್ಚಿಮದಲ್ಲಾಗಲೀ ಅದ್ಭುತವಾದ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ಅಗತ್ಯವಿದೆ ಎಂದಾದಲ್ಲಿ ಯಾರಿಗೆ ತಾನೇ ಅವಿಧೇಯರಾಗಿರಲು ಸಾಧ್ಯ? ಇವೆಲ್ಲವನ್ನೂ ಒಂದು ಮಾನವೀಯ ಇಚ್ಚೆ ಅಥವಾ ಇರಾದೆಯ ಪ್ರಶ್ನೆಯಾಗಿಸದೇ, ವಸ್ತುನಿಷ್ಟ ಅಗತ್ಯಗಳ ಒಂದು ಪ್ರಶ್ನೆಯನ್ನಾಗಿ ಪ್ರಸ್ತುತಪಡಿಸಿದರೆ, ಯಾರಿಗೆ ತಾನೇ “ಇಲ್ಲ/ಬೇಡ” ಎಂದು ಹೇಳಬೇಕೆಂದು ಅನಿಸುತ್ತದೆ?

ನಮ್ಮ ಸದ್ಯದ ಪರಿಸ್ಥಿತಿಯ ಇನ್ನೊಂದು ಪ್ರಸ್ತುತ ಅಂಶವೊಂದಿದೆ. ಈ ಕೈಗಾರಿಕಾ ವ್ಯವಸ್ಥೆಯಲ್ಲಿ- ನಾನು ನಂಬಿರುವಂತೆ- ಪಶ್ಚಿಮ ಮತ್ತು ಸೋವಿಯತ್ ಕೂಟದಲ್ಲಿ ಹೆಚ್ಚುಹೆಚ್ಚಾಗಿ ಒಂದೇ ರೀತಿಯಲ್ಲಿ ಬೆಳೆಯುತ್ತಿರುವುದು ಏನೆಂದರೆ, ವ್ಯಕ್ತಿಯು ಭಾರೀ ಪ್ರಮಾಣದ ಅಧಿಕಾರಶಾಹಿಯಿಂದ, ಭಾರಿಯಾದ ಎಲ್ಲದರಿಂದ- ಸರಕಾರ, ಕೈಗಾರಿಕಾ ಅಧಿಕಾರಶಾಹಿ ಮತ್ತು ಕಾರ್ಮಿಕ ಸಂಘಟನೆಗಳ ಅಧಿಕಾರಶಾಹಿಯಿಂದ- ಅನುಭವಿಸುತ್ತಿರುವ ಜೀವಭಯ. ಆತ ಭಯಪಡುತ್ತಿರುವುದು ಮಾತ್ರವಲ್ಲ; ತಾನು ತೀರಾ ಚಿಕ್ಕವನೆಂದು ಭಾವಿಸಿರುವುದು. ಗೊಲಾಯ (Goliath)ನಿಗೆ “ಇಲ್ಲ/ಬೇಡ” ಎನ್ನಬಲ್ಲ ಡೇವಿಡ್ ಯಾರು? ಐವತ್ತು ಅಥವಾ ನೂರು ವರ್ಷಗಳ ಹಿಂದೆ ಇದ್ದ ಅಧಿಕಾರಕ್ಕೆ ಹೋಲಿಸಿದಾಗ ಭಾರೀತನ, ಮತ್ತು ಅಧಿಕಾರದಲ್ಲಿ ಸಾವಿರ ಪಟ್ಟು ಬೆಳೆದಿರುವಂತದ್ದಕ್ಕೆ “ಬೇಡ/ಇಲ್ಲ” ಎಂದು ಹೇಳಬಲ್ಲ ಅಲ್ಪ ಮನುಷ್ಯ ಯಾರು? ವ್ಯಕ್ತಿಯು ಬೆದರಿದ್ದಾನೆ ಮತ್ತು ಸಂತಸದಿಂದ ಅಧಿಕಾರವನ್ನು ಅಂಗೀಕರಿಸಲು ಸಿದ್ಧನಿದ್ದಾನೆ. ತನ್ನ ಶರಣಾಗತಿಯಿಂದ ಮುಂದಕ್ಕೆ ತನ್ನ ಸ್ವಂತ ಮತ್ತು ಮಾನವಕುಲದ ಜೀವದ ಬೆಲೆತೆರಬೇಕಾದೀತು ಎಂಬ ಯೋಚನೆಯೇ ಬಾರದಿರುವ ಸಲುವಾಗಿ- ಸಾಮಾನ್ಯ ತಿಳುವಳಿಕೆ ಮತ್ತು ತಾರ್ಕಿಕತೆಯ ಹೆಸರಿನಲ್ಲಿ ತನಗೆ ನೀಡಲಾದ ಆದೇಶಗಳನ್ನು ಅವನು ಸ್ವೀಕರಿಸುತ್ತಾನೆ.

ಸಾರಾಂಶ ನೀಡುವುದಾದಲ್ಲಿ: “ಕ್ರಾಂತಿಕಾರಿ ಗುಣಸ್ವಭಾವ” ಎಂಬುದರಿಂದ ನಾನು ಒಂದು ನಡವಳಿಕೆಯ ಪರಿಕಲ್ಪನೆಯನ್ನು ಹೇಳುತ್ತಿಲ್ಲ; ಬದಲಾಗಿ, ಒಂದು ಕ್ರಿಯಾಶೀಲ ಪರಿಕಲ್ಪನೆಯಾಗಿ ಅದನ್ನು ಉಲ್ಲೇಖಿಸುತ್ತಿದ್ದೇನೆ. ಒಬ್ಬನು ಕ್ರಾಂತಿಕಾರಿ ಪದಸಮೂಹಗಳನ್ನು ಉದ್ಘರಿಸುತ್ತಾನೆ, ಕ್ರಾಂತಿಯಲ್ಲಿ ಭಾಗವಹಿಸುತ್ತಾನೆ ಎಂಬ ಮಾತ್ರಕ್ಕೆ, ಆತನು ಸ್ವಭಾವತಃ “ಕ್ರಾಂತಿಕಾರಿ” ಆಗುವುದಿಲ್ಲ. ಒಬ್ಬ ಕ್ರಾಂತಿಕಾರಿಯು ಈ ಅರ್ಥದಲ್ಲಿ- ರಕ್ತ ಮತ್ತು ಮಣ್ಣಿನ ಸಂಬಂಧಗಳಿಂದ, ತನ್ನ ತಾಯಿಯಿಂದ, ತಂದೆಯಿಂದ, ಪ್ರಭುತ್ವ, ವರ್ಗ, ಜನಾಂಗ, ವರ್ಣ, ಪಕ್ಷ ಅಥವಾ ಧರ್ಮಗಳಿಗಿರುವ ತನ್ನ ಸಾಮಾಜಿಕ ನಿಷ್ಟೆಯಿಂದ ತನ್ನನ್ನು ತಾನು ವಿಮೋಚನೆಗೊಳಿಸಿಕೊಂಡಿರುವ ಮನುಷ್ಯನಾಗಿರುತ್ತಾನೆ. ಈ ದೃಷ್ಟಿಯಲ್ಲಿ ಕ್ರಾಂತಿಕಾರಿ ಗುಣಸ್ವಭಾವದ ವ್ಯಕ್ತಿಯು ಮಾನವತಾವಾದಿಯಾಗಿದ್ದು, ತನ್ನೊಳಗೆ ಇಡೀ ಮಾನವೀಯತೆಯನ್ನು ಅನುಭವಿಸುತ್ತಾನೆ ಮತ್ತು ಮಾನವೀಯವಾದ ಯಾವುದೂ ಅವನಿಗೆ ಹೊರಗಿನದಲ್ಲ. ಅವನು ಜೀವನವನ್ನು ಪ್ರೀತಿಸುತ್ತಾನೆ ಮತ್ತು ಗೌರವಿಸುತ್ತಾನೆ. ಅವನು ಒಬ್ಬ ಸಂದೇಹವಾದಿ ಮತ್ತು ಅದೇ ಹೊತ್ತಿಗೆ ಒಬ್ಬ ನಂಬಿಕೆಯ ಮನುಷ್ಯ.

ಆತನು ಸಂದೇಹವಾದಿ ಯಾಕೆಂದರೆ, ಆತ ಅನಪೇಕ್ಷ ವಾಸ್ತವಗಳನ್ನು ಮುಚ್ಚಿಡುವ ಸಂಗತಿಗಳಿಗಾಗಿ ಸಿದ್ಧಾಂತಗಳನ್ನು ಸಂಶಯಿಸುತ್ತಾನೆ. ಆತನು ವಿಶ್ವಾಸದ ಮನುಷ್ಯ ಯಾಕೆಂದರೆ, ಇನ್ನೂ ಹುಟ್ಟಿಯೇ ಇರದ, ಆದರೆ, ಅಂತಹ ಸಾಧ್ಯತೆ ಇರುವುದರ ಬಗ್ಗೆ ಆತ ನಂಬುತ್ತಾನೆ. ಅವನು “ಇಲ್ಲ/ಬೇಡ” ಎಂದು ಹೇಳಬಲ್ಲ ಮತ್ತು ಅವಿಧೇಯನಾಗಬಲ್ಲ; ನಿಖರವಾಗಿ ಯಾಕೆಂದರೆ, ಆತನು “ಹೌದು/ಬೇಕು” ಎಂದು ಹೇಳಬಲ್ಲ ಮತ್ತು ನಿಜವಾಗಿಯೂ ತನ್ನ ಸ್ವಂತದ್ದಾದ ಸಿದ್ಧಾಂತಕ್ಕೆ ವಿಧೇಯನಾಗಿರಬಲ್ಲ. ಆತನು ಅರೆನಿದ್ರೆಯಲ್ಲಿ ಇರುವವನಲ್ಲ; ಬದಲಾಗಿ, ತನ್ನ ಸುತ್ತಲಿನ ವೈಯಕ್ತಿಕ ಮತ್ತು ಸಾಮಾಜಿಕ ವಾಸ್ತವಕ್ಕೆ ಸಂಪೂರ್ಣವಾಗಿ ಎಚ್ಚೆತ್ತುಕೊಂಡಿರುತ್ತಾನೆ ಆತನು ಸ್ವತಂತ್ರನಾಗಿದ್ದು, ತಾನು ಏನಾಗಿದ್ದಾನೆಯೋ, ಅದಕ್ಕೆ ಆತನ ಸ್ವಂತ ಪ್ರಯತ್ನವೇ ಕಾರಣವಾಗಿರುತ್ತದೆ. ಆತನು ಮುಕ್ತನಾಗಿದ್ದು, ಯಾರೊಬ್ಬನ ಆಳು ಆಗಿರುವುದಿಲ್ಲ.

ಈ ಸಾರಾಂಶವು ನಾನು ಕ್ರಾಂತಿಕಾರಿ ಗುಣಸ್ವಭಾವಕ್ಕೆ ಬದಲಾಗಿ, ಮಾನಸಿಕ ಆರೋಗ್ಯ ಮತ್ತು ಸುಸ್ಥಿತಿಯನ್ನು ವಿವರಿಸುತ್ತಿದ್ದೇನೆಂದು ಸೂಚಿಸಲೂಬಹುದು. ನಿಜವಾಗಿಯೂ ಇಲ್ಲಿ ನೀಡಲಾದ ವಿವರಣೆಯು ಒಬ್ಬ ಸ್ವಸ್ಥ, ಜೀವಂತಿಕೆಯ, ಮಾನಸಿಕವಾಗಿ ಆರೋಗ್ಯವಂತನಾಗಿರುವ ವ್ಯಕ್ತಿಯದ್ದು. ನನ್ನ ಪ್ರತಿಪಾದನೆ ಏನು ಎಂದರೆ, ಒಂದು ಬುದ್ಧಿ ವಿಕಲ್ಪದ ಜಗತ್ತಿನಲ್ಲಿ ಸ್ವಸ್ಥನಾದ ವ್ಯಕ್ತಿಯೊಬ್ಬ, ವಿಕಲಗೊಂಡ ಜಗತ್ತೊಂದರಲ್ಲಿ ಸಂಪೂರ್ಣವಾಗಿ ಬೆಳವಣಿಗೆ ಹೊಂದಿದ ವ್ಯಕ್ತಿಯೊಬ್ಬ ಮತ್ತು ಅರೆನಿದ್ರೆಯ ಜಗತ್ತಿನಲ್ಲಿ ಸಂಪೂರ್ಣವಾಗಿ ಎಚ್ಚರ ಹೊಂದಿರುವ ವ್ಯಕ್ತಿಯೊಬ್ಬ, ನಿಖರವಾಗಿ ಕ್ರಾಂತಿಕಾರಿಯೊಬ್ಬನ ಗುಣಸ್ವಭಾವದ ವ್ಯಕ್ತಿಯಾಗಿರುತ್ತಾನೆ. ಒಮ್ಮೆ ಎಲ್ಲರೂ ಸಂಪೂರ್ಣವಾಗಿ ಎಚ್ಚರ ಹೊಂದಿದಾಗ, ಆ ನಂತರ ಯಾವುದೇ ಪ್ರವಾದಿಯಾಗಲೀ, ಕ್ರಾಂತಿಕಾರಿ ಗುಣಸ್ವಭಾವದ ವ್ಯಕ್ತಿಯಾಗಲೀ ಅಗತ್ಯವಿರುವುದಿಲ್ಲ- ಆಗಲ್ಲಿ ಪೂರ್ಣವಾಗಿ ಬೆಳೆದ ಮನುಷ್ಯರು ಮಾತ್ರವೇ ಇರುತ್ತಾರೆ.

ಇದನ್ನೂ ಓದಿ: ಕ್ರಾಂತಿಕಾರಿ ಗುಣಸ್ವಭಾವ: ಭಾಗ-3; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಖಂಡಿತವಾಗಿಯೂ ಬಹುಸಂಖ್ಯಾತ ಜನರು ಯಾವತ್ತೂ ಕ್ರಾಂತಿಕಾರಿ ಗುಣಸ್ವಭಾವದವರಾಗಿರಲಿಲ್ಲ. ಆದರೂ, ನಾವು ಈಗ ಗುಹೆಗಳಲ್ಲಿ ಬದುಕುತ್ತಿಲ್ಲ ಎಂಬುದು ನಿಜವಾಗಿರುವುದು ನಿಖರವಾಗಿ ಯಾಕೆಂದರೆ, ನಮ್ಮನ್ನು ಗುಹೆಗಳು ಮತ್ತು ಅಂತವುಗಳಿಂದ ಹೊರಗೆ ತರಲು ಮಾನವ ಇತಿಹಾಸದಲ್ಲಿ ಸಾಕಷ್ಟು ಕ್ರಾಂತಿಕಾರಿ ಗುಣಸ್ವಭಾವದವರು ಯಾವಾಗಲೂ ಇದ್ದರು. ಹೀಗಿದ್ದರೂ, ಬಹಳಷ್ಟು ಇತರರು ಕ್ರಾಂತಿಕಾರಿಗಳಾಗಿರುವಂತೆ ನಟಿಸಿದ್ದಾರಾದರೂ, ವಾಸ್ತವದಲ್ಲಿ ಅವರು ಬಂಡುಕೋರರು, ಸರ್ವಾಧಿಕಾರಿಗಳು ಅಥವಾ ರಾಜಕೀಯ ಅವಕಾಶವಾದಿಗಳು. ಈ ಬೇರೆಬೇರೆ ರೀತಿಯ ರಾಜಕೀಯ ಸಿದ್ಧಾಂತಿಗಳ ಹಿಂದಿರುವ ಗುಣಸ್ವಭಾವಗಳಿಗೆ ಸಂಬಂಧಿಸಿದ ವ್ಯತ್ಯಾಸಗಳನ್ನು ಅಧ್ಯಯನ ಮಾಡುವಲ್ಲಿ ಮನಃಶಾಸ್ತ್ರಜ್ಞರಿಗೆ ಬಹುಮುಖ್ಯವಾದ ಕೆಲಸ ಇದೆ ಎಂದು ನಾನು ನಂಬಿದ್ದೇನೆ. ಆದರೆ, ಇದನ್ನು ಸಮರ್ಪಕವಾಗಿ ಮಾಡಲು, ನಾನು ಈ ಪ್ರಬಂಧದಲ್ಲಿ ವಿವರಿಸಲು ಪ್ರಯತ್ನಿಸಿರುವ ಗುಣಗಳು ಅವರಲ್ಲಿ ಇರಬೇಕಾಗುತ್ತದೆ ಎಂಬುದು ನನ್ನ ಅಂಜಿಕೆ: ಅವರು ಸ್ವತಃ ಕ್ರಾಂತಿಕಾರಿ ಗುಣಸ್ವಭಾವ ಹೊಂದಿದವರಾಗಿರಬೇಕು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...