Homeಮುಖಪುಟಕನ್ನಡಿಗರು ₹4 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದಾರೆ, ಕೇಂದ್ರ ಕೇವಲ ₹50 ಸಾವಿರ ಕೋಟಿ ವಾಪಸ್...

ಕನ್ನಡಿಗರು ₹4 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದಾರೆ, ಕೇಂದ್ರ ಕೇವಲ ₹50 ಸಾವಿರ ಕೋಟಿ ವಾಪಸ್ ಕೊಡ್ತಿದೆ: ಸಿದ್ದರಾಮಯ್ಯ

- Advertisement -
- Advertisement -

ಕರ್ನಾಟಕದ ಜನರು ಕೇಂದ್ರ ಸರ್ಕಾರಕ್ಕೆ ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದಾರೆ. ಆದರೆ, ಕೇಂದ್ರ ನಮಗೆ ಕೊಡುತ್ತಿರುವುದು ಕೇವಲ ಐವತ್ತು ಸಾವಿರ ಕೋಟಿ ರೂ. ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್‌ಡಿಆರ್‌ಎಫ್) ಕೇಂದ್ರ ಸರ್ಕಾರದ ಹಣವಲ್ಲ, ನಾವೇ ಕಟ್ಟಿದ ತೆರಿಗೆ ಎಂದರು.

“ನಮ್ಮ ರಾಜ್ಯದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗ್ತಿದೆ. ಅದರಲ್ಲಿ 37 ಸಾವಿರ ರೂ. ಕೋಟಿ ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗೆ 13 ಸಾವಿರ ಕೋಟಿ ರೂ. ಬರುತ್ತಿದೆ. ಇದು ನ್ಯಾಯವೇ? ಇದನ್ನು ಕೇಳಿದರೆ ಬಿಜೆಪಿಯವರು ಕೇಂದ್ರದ ಹಣ ಎಂದು ಜಗಳಕ್ಕೆ ಬರುತ್ತಾರೆ. ಇದು ಕನ್ನಡಿಗರು ಪಾವತಿಸಿದ ತೆರಿಗೆಯ ಹಣ” ಎಂದು ಸಿಎಂ ಹೇಳಿದರು.

ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರದ ನಂತರದಲ್ಲಿ ಸ್ಥಾನದಲ್ಲಿದೆ. ಆದರೆ ನಮಗೆ ಸಿಕ್ಕಿದ್ದೇನು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ಅವರು ಇನ್ನೂ ಅಪಾಯಿಂಟ್‌ಮೆಂಟ್ ನೀಡಿಲ್ಲ. ಮುಖ್ಯಮಂತ್ರಿಯ ಪರಿಸ್ಥಿತಿ ಇದು. ನಮ್ಮ ಸಚಿವರಿಗೂ ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದರು.

ಸೋಮವಾರ (ಡಿಸೆಂಬರ್ 18) ಕೇಂದ್ರ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇನೆ. 35,000 ಕೋಟಿಗೂ ಹೆಚ್ಚು ಬೆಳೆ ನಷ್ಟವಾಗಿದೆ. ನಾವು ನಿಯಮಾನುಸಾರ ಪರಿಹಾರ ಪಡೆಯಬೇಕಾಗಿದೆ ಎಂದು ಸಿಎಂ ಹೇಳಿದರು.

ವಿಧಾನಪರಿಷತ್ ಸದಸ್ಯ ಜಗದೀಶ್‌ ಶೆಟ್ಟರ್‌ ಅವರ 68ನೇ ಹುಟ್ಟುಹಬ್ಬದ ಅಂಗವಾಗಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ , ಶೆಟ್ಟರ್ ನಿವಾಸದಲ್ಲಿ ಉಪಹಾರ ಸೇವಿಸಿದರು.

ಲೋಕಸಭೆ ಚುನಾವಣೆಗೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಕೇಳಿದ್ದಕ್ಕೆ, ಶೆಟ್ಟರ್ ಕೂಡ ಆಕಾಂಕ್ಷಿ ಎಂದು ನಾವು ಭಾವಿಸುತ್ತೇವೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಶೆಟ್ಟರ್, ನಾನು ಆಕಾಂಕ್ಷಿ ಅಲ್ಲ ಎಂದು ಹೇಳಿದರು.

ಶಾಸಕರು, ಪರಾಜಿತ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಆಧರಿಸಿ ಟಿಕೆಟ್ ನೀಡಲಾಗುವುದು. ಪ್ರತಿ ಜಿಲ್ಲೆಗೆ ನಿಯೋಜಿಸಲಾದ ಸಚಿವರು ಮೂರು ಆಕಾಂಕ್ಷಿಗಳ ಹೆಸರನ್ನು ನೀಡಲಿದ್ದಾರೆ. ಹೆಚ್ಚು ಸೂಕ್ತವಾಗಿರುವವರನ್ನು ಆಯ್ಕೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಈ ಬಾರಿಯೂ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಬಿಜೆಪಿಯವರು ಮುಸ್ಲಿಮರ ಮತ ಬೇಡ ಎನ್ನುತ್ತಾರೆ. ಮುಸ್ಲಿಮರು ಭಾರತೀಯರಲ್ಲವೇ? ನಮ್ಮದು ಬಹುಸಂಸ್ಕೃತಿಯ ದೇಶವಾಗಿದ್ದು, ಎಲ್ಲ ನಾಗರಿಕರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಬೆಳಗಾವಿ: ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...