ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ “ನಮ್ಮ ನೀರು ನಮ್ಮ ಹಕ್ಕು” ಘೋಷಣೆಯೊಂದಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ನಾಯಕರ ಸಭೆಯ ಬಳಿಕ ಸುದ್ದಿಗೋಷ್ಟೀಯಲ್ಲಿ ಸಿದ್ದರಾಮಯ್ಯ ಪಕ್ಷದ ನಿರ್ಧಾರ ತಿಳಿಸಿದ್ದಾರೆ. ಕೊರೊನಾ ಆರ್ಭಟ ಕಡಿಮೆಯಾದ ಬಳಿಕ ರಾಮನಗರದಿಂದಲೇ ಪಾದಯಾತ್ರೆ ಆರಂಭಿಸುವ ಕುರಿತು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹೆಚ್ಚಳ, ಹೈಕೋರ್ಟ್ ತರಾಟೆ, ಪೊಲೀಸ್ ಕೇಸ್‌ಗಳು, ಕೆಲವು ಕಾಂಗ್ರೆಸ್ ನಾಯಕರಿಗೆ ಸೋಂಕು ತಗುಲಿದ್ದು, ಸೇರಿದಂತೆ ಪಕ್ಷದ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರ ಹಿತದೃಷ್ಟಿಯಿಂದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡ ದಿನಪತ್ರಿಕೆಗಳಿಗೆ ‘ಮೇಕೆದಾಟು’ ಜಾಹೀರಾತು ಕೊಟ್ಟವರ್‍ಯಾರು? ಪತ್ರಿಕೆಗಳು ಹೇಳಿದ್ದೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಲು ಬಿಜೆಪಿ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ. ಬಿಜೆಪಿ ನಾಯಕರು ಜಾತ್ರೆ, ಜನಾಶೀರ್ವಾದ ಯಾತ್ರೆ ಎಂದು ಮಾಡಿದ್ದು ಕಾರಣ ಎಂದಿದ್ದಾರೆ.
’ಕೇಸು ಹಾಕುತ್ತಾರೆ. ಇಲ್ಲವೇ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಪಾದಯಾತ್ರೆ ಸ್ಥಗಿತಗೊಳಿಸಿಲ್ಲ. ಜನರ ಅರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಈ ರೋಗ ಉಲ್ಬಣಕ್ಕೆ ಕಾಂಗ್ರೆಸ್ ಕಾರಣ ಎಂದು ಜನರ ಮನಸಲ್ಲಿ ಬರಬಾರದು. ಇನ್ನು ಎರಡು ದಿನದಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಕೊರೊನಾ ಕೇಸಸ್ ಜಾಸ್ತಿ ಇದೆ. ಹೀಗಾಗಿ ಜನರ ಮನಸಿನಲ್ಲಿ ಕಾಂಗ್ರೆಸ್ ಸೋಂಕು ಹೆಚ್ಚಳಕ್ಕೆ ಕಾರಣ ಎಂಬುದು ಬರಬಾರದು ಎಂದು ಪಾದಯಾತ್ರೆ ಸ್ಥಗಿತ ಮಾಡುತ್ತಿದ್ದೆವೆ’ ಎಂದಿದ್ದಾರೆ.
“ಬೆಂಗಳೂರಿನಲ್ಲಿಯೂ ಪಾದಯಾತ್ರೆ ಮಾಡುತ್ತಿದ್ದೇವು. ಇದೇ 19 ರಂದು ಸಮಾವೇಶ ನಡೆಸಲು ನಿರ್ಧರಿಸಿದ್ದೆವು. ಆಗ ಅಲ್ಲಿ ಲಕ್ಷಾಂತರ ಜನ ಸೇರುತ್ತಿದ್ದರು ಹಾಗಾಗಿ ಜನರ ಮನಸ್ಸಿನಲ್ಲಿ ಬೇರೆ ಅಭಿಪ್ರಾಯ ಬರಬಾರದು ಎಂದು, ಎಲ್ಲಾ ಹಿರಿಯ ನಾಯಕರ ಜೊತೆಗೆ ಚರ್ಚಿಸಿ ತಾತ್ಕಾಲಿಕವಾಗಿ ಪಾದಯಾತ್ರೆ ಸ್ಥಗಿತಗೊಳಿಸಿದ್ದೇವೆ” ಎಂದಿದ್ದಾರೆ.
’ಮತ್ತೆ ಮೂರನೇ ಅಲೆ ಕಡಿಮೆ ಆಗಿ, ಕೊರೊನಾ ನಿಯಮಾವಳಿ ಸಡಿಲ ಆದ ಮೇಲೆ ರಾಮನಗರದಿಂದ ಬೆಂಗಳೂರುವರೆಗೆ ಉಳಿದ ಏಳು ದಿನದ ಪಾದಯಾತ್ರೆ ಮುಂದುವರಿಯಲಿದೆ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳಬೇಡಿ. ಮತ್ತೆ ಪಾದಯಾತ್ರೆ ಮಾಡುತ್ತೇವೆ. ಆಗಲೂ ಎಂದಿನಂತೆ ನಿಮ್ಮ ಸಹಕಾರ, ಉತ್ಸಾಹ ಬೇಕು” ಎಂದು ಮನವಿ ಮಾಡಿದ್ದಾರೆ.
“ಕಾಂಗ್ರೆಸ್ ಯಾವಾಗಲೂ ಜನಪರವಾದದ್ದು, ಜನರ ಒಳಿತನ್ನು ಬಯಸುವುದು ಕಾಂಗ್ರೆಸ್, ಜನರ ಒಳಿತೇ ಕಾಂಗ್ರೆಸ್‌ನ ಮುಖ್ಯ ಧ್ಯೇಯ ಆ ಕಾರಣಕ್ಕಾಗಿಯೇ ಈ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಹೊಳಿಸಿದ್ದೇವೆ” ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ತರಾಟೆ
ಕಾಂಗ್ರೆಸ್ಸಿನ ಈ ಕ್ರಮ ಸ್ವಾಗತಾರ್ಹ.